-->
ಒಳ್ಳೆಯ ಪರಿಚಯ ಸಾಧನೆಗೆ ದಾರಿ - ಕಥೆ

ಒಳ್ಳೆಯ ಪರಿಚಯ ಸಾಧನೆಗೆ ದಾರಿ - ಕಥೆ

    
            ಲವೀಕ್ಷಾ 10 ನೇ ತರಗತಿ, 
            ಸರಕಾರಿ ಪ್ರೌಢಶಾಲೆ ದರೆಗುಡ್ಡೆ, 
            ಮೂಡಬಿದ್ರೆ ತಾಲೂಕು 


       ಒಳ್ಳೆಯ ಪರಿಚಯ ಸಾಧನೆಗೆ ದಾರಿ - ಕಥೆ

                                          
           ಒಂದು ಊರಿನಲ್ಲಿ ಅತೀ ಸಣ್ಣ 
ಮನೆಯೊಂದಿತ್ತು. ಆ ಮನೆಯಲ್ಲಿ ಅಜ್ಜ ಅಜ್ಜಿ ಮತ್ತು ಅವರ ಮೊಮ್ಮಗಳು ಇದ್ದರು. ಮೊಮ್ಮಗಳ ಹೆಸರು ಸವಿತಾ. ಅವಳು ಬಾಲ್ಯದಲ್ಲೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದರಿಂದ ಅವಳಿಗೆ ಅನಾಥೆ ಎಂಬ ಭಾವನೆ ಬಾರದಂತೆ ಅವಳ ಅಜ್ಜ ಮತ್ತು ಅಜ್ಜಿ ನೋಡಿಕೊಳ್ಳುತ್ತಿದ್ದರು. ಅವರಲ್ಲಿನ ಬಡತನದ ಸಮಸ್ಯೆಯಿಂದಾಗಿ ಮೊಮ್ಮಗಳು ಸವಿತಾ ಸ್ವಲ್ಪ ಕೊರಗುತ್ತಿದಳು. ಹೀಗಾಗಿ ಅವಳು ಹೆಚ್ಚು ಪರಿಶ್ರಮ ಪಟ್ಟು ಕಲಿಯುತ್ತಿದ್ದಳು. ಕಲಿಯುವುದರ ಜೊತೆಗೆ ಪ್ರತಿದಿನ ಹೂವು ಕಟ್ಟಿ ಮಾರುತ್ತಿದ್ದಳು.                                                                      
             ಪ್ರತಿದಿನದ ಹಾಗೆ ಸವಿತಾಳು ಶಾಲೆಗೆ ಹೊರಟಳು. ದಾರಿಯಲ್ಲಿ ಹೋಗುವಾಗ ಒಬ್ಬ ಅಪರಿಚಿತ ವ್ಯಕ್ತಿಯು ಸಿಕ್ಕರು. ಅವರು ಒಬ್ಬ ನಿವೃತ್ತ ಶಿಕ್ಷಕರಾಗಿದ್ದರು. ಇವಳು ಹೋಗುವ ದಾರಿಯಲ್ಲಿಯೇ ಆ ಶಿಕ್ಷಕರೂ ಸಹ ಬರುತ್ತಿದ್ದರು. ಇವಳು ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಮಾತನಾಡುತ್ತಿರಲಿಲ್ಲ. ಹೀಗೆ ಒಂದೇ ದಾರಿಯಲ್ಲಿ ಇಬ್ಬರೂ ಸಾಗುತ್ತಿದ್ದರು. ಅವಳು ತನ್ನ ಮನೆಯ ಬಡತನದ ಬಗ್ಗೆ ಚಿಂತೆ ಮಾಡುತ್ತಾ ದಾರಿಯಲ್ಲಿ ಹೋಗುತ್ತಿದ್ದಳು. ಆ ನಿವೃತ್ತ ಶಿಕ್ಷಕರು ಅವಳನ್ನು ನೋಡಿ, ಅವಳು ಬಡತನದಲ್ಲಿದ್ದಾಳೆಂದು ಮನಸ್ಸಿನಲ್ಲಿ ಎಂದುಕೊಂಡರು‌.   

                      ಆ ನಿವೃತ್ತ ಶಿಕ್ಷಕರು , "ಏನಮ್ಮಾ ಹುಡುಗಿ, ನಿನ್ನ ಪರಿಚಯ ನಾನು ತಿಳಿದುಕೊಳ್ಳಬಹುದಾ!" ಎಂದು ಸವಿತಾಳಲ್ಲಿ ಕೇಳಿದರು. ಆಗ ಅವಳು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳು ತನ್ನ ಹೆಸರನ್ನು ಹೇಳಿದಳು. ಮತ್ತೆ ಯಾವ ವಿಷಯವನ್ನೂ ಅವಳು ಅವರೊಂದಿಗೆ ಹಂಚಿಕೊಳ್ಳುವುದಿಲ್ಲ. ಆಗ ಆ ನಿವೃತ್ತ ಶಿಕ್ಷಕರು ಮನಸ್ಸಿನಲ್ಲಿ‌ "ನಾನು ನನ್ನ ಪರಿಚಯ ಮಾಡದೇ ಹೋದರೆ ಅವಳೂ ತನ್ನ ಪರಿಚಯ ಹೇಳುವುದಿಲ್ಲ" ಎಂದುಕೊಂಡರು. ನಂತರ ಮತ್ತೆ ಅವರೇ ತಮ್ಮ ಪರಿಚಯವನ್ನು ಹೇಳಿದರು. ಆಗ ಅವಳಿಗೆ ಅವರೊಬ್ಬರು ಶಿಕ್ಷಕರೆಂದು ತಿಳಿದು ಅವಳ ಮುಖದಲ್ಲಿ ಒಂದು ಮುಗುಳ್ನಗೆಯು ಮೂಡಿತು. ಅನಂತರ ತಾನು ಅಜ್ಜ-ಅಜ್ಜಿಯೊಂದಿಗೆ ಇದ್ದೇನೆಂದು ಹೇಳಿದಳು. ಆಗ ಅವರು "ನಿನಗೆ ತಂದೆ- ತಾಯಿ ಇಲ್ಲವೇ" ಎಂದು ಪ್ರಶ್ನಿಸಿದಾಗ ಅವಳು "ಇಲ್ಲ, ಅವರು ನಾನು ಬಾಲ್ಯದಲ್ಲಿರುವಾಗಲೇ ತೀರಿಕೊಂಡರು" ಎಂದು ತನ್ನ ಮನದಲ್ಲಿ ನೊಂದು ಆ ಮಾತನ್ನು ಹೇಳಿದಳು. ಆಗ ಶಿಕ್ಷಕರು ಅವಳಿಗೆ "ನೀನು ತಂದೆ-ತಾಯಿ ಇಲ್ಲವೆಂದು ಮರುಗಬೇಡ ಮಗುವೇ" ಎಂದು ಸಮಾಧಾನಿಸಿದರು. ಹೀಗೆ ಅವರ ಸಂಭಾಷಣೆಯು ಮುಂದುವರಿಯಿತು. 

             ಶಿಕ್ಷಕರು ಪ್ರತಿದಿನ ವಾಯುವಿಹಾರಕ್ಕೆ ಹೋಗುತ್ತಿದ್ದರು. ಹೀಗೆ ಹೋಗುವಾಗ ಸವಿತಾಳನ್ನು ಭೇಟಿ ಮಾಡುತ್ತಿದ್ದರು. ಅವಳು ಪ್ರತಿದಿನ ಬೆಳಿಗ್ಗೆ ಹೂವು ಮಾರಿ ನಂತರ ಶಿಕ್ಷಕರೊಂದಿಗೆ ಸೇರಿ ಶಾಲೆಗೆ ಹೋಗುತ್ತಿದ್ದಳು. ಅವಳು ಎಲ್ಲ ವಿಷಯವನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದರೂ ತನ್ನ ಬಡತನದ ಬಗ್ಗೆ ಹೇಳುತ್ತಿರಲಿಲ್ಲ. ಆದರೆ ಅವರಿಗೆ ಅದು ತಿಳಿದಿತ್ತು ಮತ್ತು ಅಲ್ಲಿನ ಕೆಲವು ಜನರಿಂದ ತಿಳಿದುಕೊಂಡಿದ್ದರು. ಹೀಗೆ ಒಂದು ದಿನ ಅವಳ ಅಜ್ಜಿಯು ಅನಾರೋಗ್ಯದಿಂದ ಬಳಲುತ್ತಿದ್ದರು. ಅಜ್ಜ-ಅಜ್ಜಿ ಇಬ್ಬರು ದುಡಿದು ಅವರ ಜೀವನ ನಡೆಯುತ್ತಿತ್ತು.ಅವಳ ಅಜ್ಜಿಗೆ ಹೀಗಾದುದ್ದರಿಂದ ಅಜ್ಜನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಇದ್ದ ಹಣವೆಲ್ಲಾ ಅಜ್ಜಿಯ ಚಿಕಿತ್ಸೆಗೆ ಖರ್ಚಾಯಿತು. ‌ಹೀಗೆ ಅವರ ಮನೆಯಲ್ಲಿ ಊಟ ಮಾಡಲು ಅಕ್ಕಿಯು ಇರಲಿಲ್ಲ. ಆಗ ಸವಿತಾಳು ಒಂದು ನಿರ್ಧಾರಕ್ಕೆ ಬಂದಳು. ತಾನು ಶಾಲೆಗೆ ಹೋದರೆ ಮನೆಯಲ್ಲಿ ಇನ್ನೂ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಯೋಚಿಸಿ ದುಡಿಯುವ ನಿರ್ಧಾರ ತೆಗೆದುಕೊಂಡಳು. 

             ಪ್ರತಿದಿನದ ಹಾಗೆಯೇ ಶಿಕ್ಷಕರು ವಾಯುವಿಹಾರಕ್ಕೆ ಹೊರಟರು. ಆದರೆ ಸವಿತಾಳನ್ನು ಭೇಟಿ ಮಾಡದೇ 2 -- 3 ದಿನಗಳು ಆಗಿತ್ತು. ಇವರು ಏನು ಈ ಹುಡುಗಿ ಬರಲಿಲ್ಲವೆಂದು ಯೋಚಿಸಿದರು. ಹೀಗೆ ಯೋಚಿಸುತ್ತಾ ಹೋಗುವಾಗ ಸವಿತಾಳನ್ನು ಬೇರೆಯವರೊಬ್ಬರ ಮನೆಯಲ್ಲಿ ಕಂಡರು. ಸವಿತಾಳು ಅಲ್ಲಿ ಕೆಲಸ ಮಾಡುತ್ತಿದ್ದನ್ನು ಕಂಡು ಅಲ್ಲಿಗೆ ಹೋಗಿ ಆ ಮನೆಯವರಲ್ಲಿ ವಿಚಾರಿಸಿದರು. ಅವಳು ಅಲ್ಲಿಗೆ ಕೆಲಸದವಳಾಗಿ ಇದ್ದಾಳೆಂದು ತಿಳಿದು ಶಿಕ್ಷಕರಿಗೆ ಆಶ್ಚರ್ಯವಾಯಿತು!. ಅಲ್ಲಿಂದ ಅವಳನ್ನು ಕೆಲಸದಿಂದ ಬಿಡಿಸಿ, ಶಿಕ್ಷಕರು ಸವಿತಾಳ ಮನೆಯ ಕಡೆ ಹೊರಟರು. ಅಲ್ಲಿಯ ವಿಷಯ ತಿಳಿದು ಶಿಕ್ಷಕರೂ ಸಹ ಮನನೊಂದರು. ನಂತರ ಅವರಿಗೆ ತನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಿದರು.         

         ಸ್ವಲ್ಪ ದಿನಗಳ ಬಳಿಕ ಅಜ್ಜಿಯು ತನ್ನ ಆರೋಗ್ಯವನ್ನು ಸುಧಾರಿಸಿದರು. ಸವಿತಾಳು ಎಂದಿನಂತೆ ಶಿಕ್ಷಕರೊಂದಿಗೆ ಸೇರಿ ಶಾಲೆಗೆ ನಡೆದಳು. ಅವರಿಗೆ ತನ್ನ ಧನ್ಯವಾದವನ್ನು ತಿಳಿಸಿದಳು. ನಂತರ ಅವರು ಅವಳಿಗೆ ಪ್ರತಿದಿನ ಜೀವನದ ಮೌಲ್ಯಗಳನ್ನು ತಿಳಿಸುತ್ತಿದ್ದರು. ಅವರು ಸವಿತಾಳನ್ನು ತನ್ನ ಮಗಳಂತೆ ಕಾಣುತ್ತಿದ್ದರು. ಹೀಗೆ ಅವಳು ಹಲವು ವಿಷಯಗಳಿಂದ ಪ್ರಭಾವಿತಳಾದಳು. 

                  ನಿವೃತ್ತ ಶಿಕ್ಷಕರು ತುಂಬಾ ಅನುಭವಿಯಾದುದ್ದರಿಂದ ಪ್ರತಿದಿನವೂ ಹೊಸ ಹೊಸ ವಿಷಯಗಳನ್ನು ಅವಳಿಗೆ ತಿಳಿಸುತ್ತಿದ್ದರು. ಒಂದು ದಿನ ಅವಳು " ಸರ್, ನಾನು ತುಂಬಾ ಬಡತನದಲ್ಲಿರುವುದರಿಂದ ನಾನು ಈ ಒಂದು ವರ್ಷ ಶಾಲೆಗೆ ಹೋಗುತ್ತೇನೆ. ಮತ್ತೆ ನನ್ನ ವಿದ್ಯಾಭ್ಯಾಸವನ್ನು ನಿಲ್ಲಿಸುವೆನು. ನಾನು ಶಾಲೆಗೆ ಹೋದರೆ ಅಜ್ಜ-ಅಜ್ಜಿಯನ್ನು ಯಾರು ನೋಡಿಕೊಳ್ಳುತ್ತಾರೆ ? ಎಂದು ಶಿಕ್ಷಕರಲ್ಲಿ ಹೇಳಿದಳು. ಆಗ ಅದನ್ನು ತಿರಸ್ಕರಿಸಿ ಶಿಕ್ಷಕರು , "ವಿದ್ಯೆಗೆ ಯಾವುದೇ ಬಡತನ ಇಲ್ಲ, ಕಲಿತ ವಿದ್ಯೆಯು ಎಂದಿಗೂ ಶಾಶ್ವತ. ಯಾರು ನಿನ್ನನ್ನು ಬಿಟ್ಟು ಹೋದರೂ, ನೀನು ಕಲಿತ ವಿದ್ಯೆ ನಿನ್ನನ್ನು ಬಿಟ್ಟು ಹೋಗುವುದಿಲ್ಲ" ಎಂದು ಅವಳಿಗೆ ತಿಳಿಸಿದರು. 
       
           ಅವರ ಮಾತಿನಿಂದ ಪ್ರಭಾವಿತಳಾದ ಸವಿತಾಳು ಇನ್ನೂ ಉತ್ಸಾಹದಿಂದ ತನ್ನ ಎಲ್ಲಾ ಸಮಸ್ಯೆಗಳನ್ನು ಬದಿಗಿರಿಸಿ, ಕಲಿಯುವುದರಲ್ಲಿ ತೊಡಗಿಸಿಕೊಂಡಳು. ತಾನು ಹೂವು ಮಾರುವುದರ ಮೂಲಕ ಗಳಿಸಿಕೊಂಡ ಹಣವನ್ನು ಸಂಗ್ರಹಿಸಿಟ್ಟು ತನ್ನ ಮನೆಯ ಖರ್ಚಿಗೆ ಬಳಸಿದಳು. ಹೀಗೆ ಅವಳು ನಿವೃತ್ತ ಶಿಕ್ಷಕರ ಮಾರ್ಗದರ್ಶನದಂತೆ ನಡೆದುದ್ದರಿಂದ ಅವಳು ತನ್ನ 10 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದಳು. ಅವಳ ಈ ಸಾಧನೆಗೆ ನಿವೃತ್ತ ಶಿಕ್ಷಕರು ಪ್ರೋತ್ಸಾಹಿಸಿದರು.

             ಮುಂದೆ ಅವಳು ಒಳ್ಳೆಯದಾಗಿ ಕಲಿತು ಒಂದು ಕೆಲಸಕ್ಕೆ ಸೇರಿದಳು. ಅದರ ಜೊತೆ ಜೊತೆಗೆ ಆ ನಿವೃತ್ತ ಶಿಕ್ಷಕರಿಂದ ತಿಳಿದಂತಹ ವಿಷಯಗಳ ಬಗ್ಗೆ ಅಧ್ಯಯನ ಮಾಡಿ , ತನ್ನ ಕೆಲಸಗಳಲ್ಲಿ ಸೃಜನಾತ್ಮಕವಾಗಿ ತೊಡಗಿಕೊಂಡಳು. ಹೀಗೆ ಅವಳು ತನ್ನ ಅಜ್ಜ- ಅಜ್ಜಿಯೊಂದಿಗೆ ಖುಷಿಯಿಂದ ಕಾಲ ಕಳೆದಳು. ಹೀಗೆ ಒಬ್ಬ ವ್ಯಕ್ತಿಯ ಪರಿಚಯದೊಂದಿಗೆ ಸವಿತಾಳ ಜೀವನವೇ ಬದಲಾಯಿತು. ಒಳ್ಳೆಯ ವ್ಯಕ್ತಿಗಳ ಪರಿಚಯ ಅಥವಾ ಗೆಳೆತನ ಎಂದಿಗೂ ಒಳ್ಳೆಯ ದಾರಿಯಲ್ಲೇ ಸಾಗುವಂತೆ ಮಾಡುತ್ತದೆ.

  ಲವೀಕ್ಷಾ 10 ನೇ ತರಗತಿ, 
  ಸರಕಾರಿ ಪ್ರೌಢಶಾಲೆ ದರೆಗುಡ್ಡೆ, 
  ಮೂಡಬಿದ್ರೆ ತಾಲೂಕು 

Ads on article

Advertise in articles 1

advertising articles 2

Advertise under the article