ನನ್ನ ಪ್ರವಾಸದ ಅನುಭವ
Tuesday, December 13, 2022
Edit
ಅಭಿನವ್ ಪಿ ಎನ್
4 ನೇ ತರಗತಿ
ಸ.ಉ.ಹಿ.ಪ್ರಾ.ಶಾಲೆ ಮುಂಡೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನನ್ನ ಶಾಲೆಯಾದ ಸ.ಉ.ಹಿ.ಪ್ರಾ. ಶಾಲೆ ಮುಂಡೂರು ಇಲ್ಲಿಂದ 2022 ಡಿಸೆಂಬರ್ 3 ಶನಿವಾರದಂದು ಮೈಸೂರಿಗೆ ಪ್ರವಾಸ ಇದೆಯೆಂದು ತಿಳಿಸಿದರು. ನನಗೂ ಪ್ರವಾಸ ಹೋಗಬೇಕೆಂಬ ಆಸೆಯಾಯಿತು. ಹಾಗಾಗಿ ಮನೆಯಲ್ಲಿ ತಂದೆ ತಾಯಿಯನ್ನು ಒಪ್ಪಿಸಿ ಪ್ರವಾಸಕ್ಕೆ ಹೊರಟೆನು. ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ನಮ್ಮ ಮುಖ್ಯ ಗುರುಗಳಾದ ವಿಜಯ ಮಿಸ್ ರವರು ನೀಡಿದರು. ಅವರು ಹೇಳಿದಂತೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡೆನು. ಪ್ರವಾಸದ ದಿನ ಬಂದೇ ಬಿಟ್ಟಿತು. ನನ್ನ ಖುಷಿಗೆ ಎಣೆಯೇ ಇಲ್ಲ. ಬೆಳಗ್ಗೆ 3.30 ಕ್ಕೆ ಸರಿಯಾಗಿ ಶಾಲೆಗೆ ತಲುಪಲು ತಿಳಿಸಿದರು. ಹಾಗಾಗಿ ರಾತ್ರಿ ಬೇಗ ಮಲಗುವಂತೆ ಶಿಕ್ಷಕರು ಸೂಚನೆ ನೀಡಿದ್ದರು. ಆದರ ಎಷ್ಟೇ ಹೊರಳಾಡಿದರೂ ನಿದ್ದೆಯೇ ಬರಲಿಲ್ಲ. ಕೊನೆಗೆ 2.45.ಕ್ಕೆ ಅಲರಾಮ್ ಇಟ್ಟು ಮಲಗಿದೆನು. ಆದರೂ ರಾತ್ರಿ ಆಗಾಗ ಎಚ್ಚರವಾಗಿತ್ತು. ಅಲರಾಮ್ ಆದ ತಕ್ಷಣ ಎದ್ದು ತಯಾರಾದೆನು. ನನ್ನ ತಂದೆ ನನ್ನನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಿಸಿದರು. ನನ್ನ ನೆಚ್ಚಿನ ಶಿಕ್ಷಕರೆನ್ನೆಲ್ಲಾ ಹಾಗೂ ಸ್ನೇಹಿತರನ್ನೆಲ್ಲಾ ನೋಡಿ ಬಹಳ ಸಂತೋಷವಾಯಿತು. 3.45 ಕ್ಕೆ ಸರಿಯಾಗಿ ನಮ್ಮ ಕೆ.ಎಸ್.ಆರ್.ಟಿ.ಸಿ.ಬಸ್ಸು ಹೊರಟೇ ಬಿಟ್ಟಿತು. ದೇವರಿಗೆ ಪ್ರಾರ್ಥಿಸಿ ಹೊರಟೆವು. ಮೈಸೂರು ತಲುಪಿದ ಕೂಡಲೆ ಒಂದು ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಂಡು ನಮ್ಮ ಶಿಕ್ಷಕರೇ ತಯಾರಿಸಿದ ರುಚಿ ರುಚಿಯಾದ ಪಲಾವ್, ಸಲಾಡನ್ನು ಸವಿದು ಚಹಾವನ್ನು ಕುಡಿದೆವು.
ಚಾಮುಂಡಿ ಬೆಟ್ಟಕ್ಕೆ ಹೋದೆವು. ನಮ್ಮನ್ನು ಸ್ವಾಗತಿಸಿದ ಮಹಿಷಾಸುರನನ್ನು ನೋಡಿ ಆಶ್ಚರ್ಯಗೊಂಡೆವು. ದೇವಿಯ ದರ್ಶನ ಪಡೆದು ಹೊರಟೆವು. ಅಲ್ಲಿರುವ ಕಪಿಗಳ ಕುಚೇಷ್ಟೆಯನ್ನು ನೋಡಿ ಖುಷಿಪಟ್ಟೆವು.
ಮುಂದೆ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಡೆಗೆ ಹೊರಟೆವು. ಅಲ್ಲಿ ನಾವು ಹುಲಿ, ಸಿಂಹ, ಕರಡಿ, ಆನೆ, ಜಿಂಕೆ, ಪುನುಗು ಬೆಕ್ಕು, ಚಿರತೆ, ಘೇಂಡಮೃಗ, ಅಳಿಲು, ವಿವಿಧ ರೀತಿಯ ಪಕ್ಷಿ, ಹಲವು ತರಹದ ಹಾವು ಇತ್ಯಾದಿ ಈತನಕ ನೋಡದ ಹಲವಾರು ಪ್ರಾಣಿಗಳನ್ನು ನೋಡಿ ಸಂತೋಷ ಪಟ್ಟೆವು.
ಅಲ್ಲಿಂದ ಹೊರಡುವಾಗ ಒಬ್ಬ ಕೊಳಲು ಮಾರುವವ ಕೊಳಲು ಮಾರಿಕೊಂಡು ಬಂದ. ಅದನ್ನು ನೋಡಿ ನನಗೆ ಆಸೆಯಾಯಿತು. ಆಗ ನನ್ನ ರಾಮಚಂದ್ರ ಸರ್, "ನೀನು ಚೆನ್ನಾಗಿ ಹಾಡ್ತೀಯಲ್ವಾ ನೀನೊಂದು ಕೊಳಲು ತಗೋ" ಅಂದರು. ಆಗ ನನ್ನ ಆಸೆ ಇಮ್ಮಡಿ ಯಾಯಿತು. ಒಂದು ಕೊಳಲನ್ನು ಖರೀದಿಸಿಯೇ ಬಿಟ್ಟೆ.
ನಂತರ ನಮ್ಮನ್ನು ಊಟಕ್ಕೆ ವನಿತಾ ಮಿಸ್ ಮತ್ತು ಸಂಧ್ಯಾ ಮಿಸ್ ರಸ್ತೆಯ ನ್ನು ದಾಟಿಸಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು. ನಮ್ಮ ಶಿಕ್ಷಕರಾದ ರವೀಂದ್ರ ಶಾಸ್ತ್ರೀ ಸರ್, ಬಶೀರ್ ಸರ್, ಶಶಿಕಲಾ ಮಿಸ್, ನಾಗವೇಣಿ ಮಿಸ್ ನಮಗೆಲ್ಲಾ ಊಟವನ್ನು ಬಡಿಸಿದರು. ಈಗಾಗಲೇ ಹಸಿವಾಗಿದ್ದ ನಾವು ಬಹಳ ಸಂತೋಷ ದಿಂದ ರುಚಿರುಚಿಯಾದ ಊಟವನ್ನು ಮಾಡಿದೆವು.
ಇದಾದ ಬಳಿಕ ನಾವು ಮೈಸೂರು ಅರಮನೆಯತ್ತ ಹೊರಟೆವು. ಇಲ್ಲಿ ನಾವು ಈವರೆಗೆ ನೋಡದ ಹಲವು ಹಳೆಯ ಕಾಲದ ವಸ್ತುಗಳನ್ನು ನೋಡಿದೆವು. ಚಿನ್ನದ ಬಾಗಿಲು, ಚಿನ್ನದ ಅಂಬಾರಿ, ಆನೆಯ ದಂತವನ್ನು ನೋಡಿ ಸಂತೋಷ ಷಟ್ಟೆವು.
ನಂತರ ನಮ್ಮೆಲ್ಲರ ನೆಚ್ಚಿನ ಸ್ಥಳವಾದ ಕೆ.ಆರ್.ಎಸ್. ಅಣೆಕಟ್ಟಿನತ್ತ ಹೊರಟೆವು. ಇಲ್ಲಿನ ಸೌಂದರ್ಯ ಅದ್ಭುತ. ನಮ್ಮ ಶಿಕ್ಷಕರೆಲ್ಲ ನಮಗೆ ಇಲ್ಲಿನ ಮಾಹಿತಿಯನ್ನು ತಿಳಿಸಿದರು. ನಂತರ ಕೊನೆಯದಾಗಿ ಸಂಗೀತ ಕಾರಂಜಿಯನ್ನು ನೋಡಲು ಹೋದೆವು. ಅದು ಮುಗಿದ ಬಳಿಕ ಅಲ್ಲಿಂದ ಹೊರಡಲು ಮನಸ್ಸೇ ಬರಲಿಲ್ಲ. ಅಲ್ಲಿ ನಮ್ಮ ಫೋಟೋಗಳನ್ನೆಲ್ಲ ತೆಗೆದೆವು.
ನಂತರ ಲಘು ಉಪಹಾರವನ್ನು ಮುಗಿಸಿ 9ಗಂಟೆಯಷ್ಟು ಹೊತ್ತಿಗೆ ಬಸ್ಸು ಹತ್ತಿ ಅಲ್ಲಿಂದ ವಾಪಸ್ಸು ಹೊರಟೆವು. ಸುಮಾರು 2 ಗಂಟೆಯಷ್ಷು ಹೊತ್ತಿಗೆ ನನ್ನ ಮನೆಗೆ ತಲುಪಿದೆನು.
ಇದು ನನ್ನ ಮರೆಯಲಾಗದ ಪ್ರವಾಸದ ಅನುಭವ. ಈ ಪ್ರವಾಸದಲ್ಲಿ ನಾನು ಬಹಳಷ್ಟು ವಿಷಯ ಗಳನ್ನು ತಿಳಿದುಕೊಂಡೆನು. ಹಾಗೆಯೇ ತುಂಬಾ ಸಂತೋಷ ಪಟ್ಟೆನು. ಈ ಪ್ರವಾಸದ ವ್ಯವಸ್ಥೆಯನ್ನು ಮಾಡಿದ ನನ್ನ ಮುಂಡೂರು ಶಾಲೆಯ ಶಿಕ್ಷಕ ವೃಂದಕ್ಕೂ, ನನಗೆ ಪ್ರವಾಸ ಹೋಗಲು ಅನುಮತಿ ನೀಡಿದ ನನ್ನ ಹೆತ್ತವರಿಗೂ ಮನದಾಳದ ವಂದನೆಗಳು.
4 ನೇ ತರಗತಿ
ಸ.ಉ.ಹಿ.ಪ್ರಾ.ಶಾಲೆ ಮುಂಡೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************