-->
ಜೀವನ ಸಂಭ್ರಮ : ಸಂಚಿಕೆ - 190

ಜೀವನ ಸಂಭ್ರಮ : ಸಂಚಿಕೆ - 190

ಜೀವನ ಸಂಭ್ರಮ : ಸಂಚಿಕೆ - 190
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                  
                            
ಮಕ್ಕಳೇ, ಭಗವದ್ಗೀತೆಯಲ್ಲಿ ಗುಣಗಳ ವರ್ಣನೆ ಬರುತ್ತದೆ. ಆ ಗುಣಗಳಲ್ಲಿ ಎರಡು ವಿಧ.
1. ದೈವಿ ಗುಣ. 
2. ಅಸುರಿ ಗುಣ

ದೈವಿಗುಣ ಅಂದರೆ ಸಂತೋಷ ಕೊಡುವ, ಸಂತೋಷ ಉಂಟುಮಾಡುವ, ಸಂತೋಷ ಪಡುವ ಗುಣ. ಈ ಗುಣದವನು ತಾವು ಸಂತೋಷ ಪಡುತ್ತಾರೆ, ಬೇರೆಯವರಿಗೂ ಸಂತೋಷ ಕೊಡುತ್ತಾರೆ. ಇವರಿಗೆ ದೈವಿ ಸ್ವರೂಪರು, ದೈವೀ ಮಾನವರು ಎನ್ನುತ್ತೇವೆ.

ಅಸುರಿ ಗುಣ ಎಂದರೆ ತಾವು ದುಃಖ, ಸಂಕಟ, ನೋವು ಅನುಭವಿಸುವುದು. ಅಲ್ಲದೆ ಬೇರೆಯವರಿಗೂ ದುಃಖ, ಸಂಕಟ, ನೋವು ಕೊಡುತ್ತಾರೆ. ಇವರಿಗೆ ಅಸುರ ಸ್ವರೂಪದವರು ಎನ್ನುತ್ತೇವೆ. 

ಹಿಂದೆ ಪೌರಾಣಿಕಗಳ ಕಥೆಗಳಲ್ಲಿ ರಾಕ್ಷಸ ಪಾತ್ರ ನೋಡಿದ್ದೇವೆ. ಅಂದರೆ ಕೋರೆ ಹಲ್ಲು, ತಲೆಯ ಮೇಲೆ ಕೋಡು, ವಿಕಾರ ರೂಪ. ಇದು ಸಾಂಕೇತಿಕವಾಗಿ ಅಸುರಿ ಗುಣಗಳನ್ನು ತೋರಿಸಿರುವುದು. ಅಂದರೆ ಆ ರೂಪದ ರಾಕ್ಷಸರು ಇದ್ದರು ಅಂತ ಅಲ್ಲ. ಅದು ಸಾಂಕೇತಿಕ. ಈ ದಿನ ದೈವಿ ಗುಣಗಳ ಬಗ್ಗೆ ತಿಳಿದುಕೊಳ್ಳೋಣ. ಈಗಾಗಲೇ ಹೇಳಿದಂತೆ ಸಂತೋಷ ಪಡುವವರ ಒಟ್ಟು 26 ಗುಣಗಳನ್ನು ಭಗವದ್ಗೀತೆಯಲ್ಲಿ ವಿವರಿಸಿದೆ. ಸಂತೋಷ ಪಡಲು ಬೇಕಾದ ಪ್ರಧಾನ ಗುಣ ಪ್ರೇಮ. ದೈವೀಗುಣದವರ ಬದುಕು ಆಂತರಿಕ ಸ್ವಾತಂತ್ರ್ಯ ಹೊಂದಿರುತ್ತಾರೆ. ಭಯ ಮುಕ್ತರಾಗಿರುತ್ತಾರೆ, ಬಂಧನ ಇರುವುದಿಲ್ಲ. ಮುಕ್ತ ಬದುಕನ್ನು, ಸಮಾಧಾನದ ಬದುಕನ್ನು ಸಾಗಿಸುತ್ತಾರೆ. ದೈವಿ ಗುಣಕ್ಕೆ ಒಂದು ನಡೆದ ಘಟನೆಯನ್ನು ಉದಾಹರಣೆಯಾಗಿ ನೋಡೋಣ. 

ಬಂಗಾಳ ದೇಶದಲ್ಲಿ ಇದು ನಡೆದಂತಹ ಘಟನೆ. ಈಗ ಪೂರ್ವ ಬಂಗಾಳ (ಬಾಂಗ್ಲಾದೇಶ) ಮತ್ತು ಪಶ್ಚಿಮ ಬಂಗಾಳ ಎಂದು ಕರೆಯುತ್ತೇವೆ. ಆಗ ಒಟ್ಟಿಗೆ ಬಂಗಾಳ ದೇಶವಾಗಿತ್ತು. ಆಗ ಬ್ರಿಟಿಷರು ದೇಶ ಆಳುತ್ತಿದ್ದರು. ಆ ದೇಶದಲ್ಲಿ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಅದು ಕಲ್ಕತ್ತಾ ನಗರಕ್ಕೆ ಹೋಗುವ ಹಲವು ಮಾರ್ಗಗಳಲ್ಲಿ ಇದು ಒಂದು. ಆ ರೈಲು ಮಾರ್ಗದಲ್ಲಿ ಒಂದು ದೊಡ್ಡ ಹಳ್ಳ, ಆ ಹಳ್ಳಕ್ಕೆ ಸೇತುವೆ ನಿರ್ಮಿಸಿದ್ದರು. ಆ ಸೇತುವೆಯಿಂದ ಎರಡು ಪರ್ಲಾಂಗ್ ದೂರದಲ್ಲಿ, ಮಾರ್ಗದ ಪಕ್ಕದಲ್ಲಿ, ಒಂದು ಬಡವರ ಗುಡಿಸಲು ಇತ್ತು. ಆ ಗುಡಿಸಲಿನ ಸಮೀಪದಲ್ಲಿ ಊರು ಇಲ್ಲ. ಆ ಗುಡಿಸಲಿನಲ್ಲಿ ತಾಯಿ ಮತ್ತು 8 ವರ್ಷದ ಮಗಳು ವಾಸವಾಗಿದ್ದರು. ಈ ಇಬ್ಬರು ದುಡಿಯುತ್ತಾ ಆನಂದವಾಗಿ ಗುಡಿಸಲಿನಲ್ಲಿ ವಾಸವಾಗಿದ್ದರು. ಒಂದು ದಿನ ರಾತ್ರಿ ವೇಳೆ ಮಳೆ ಶುರುವಾಯಿತು. ಧಾರಾಕಾರವಾಗಿ ಗಂಟೆಗಟ್ಟಲೆ ಮಳೆ ಬಿತ್ತು. ಈ ಮಳೆಗೆ ಗುಡಿಸಲು ಸೋರಿ, ಗುಡಿಸಲಿನಲ್ಲಿ ಇದ್ದ ಹಾಸಿಗೆ, ಬಟ್ಟೆ ಎಲ್ಲ ನೆನೆದು ಹೋಗಿತ್ತು. ತಾಯಿ ಮಗಳು ಮಳೆಯ ಹನಿ ಚಳಿಗೆ ನಡುಗುತ್ತಾ ಕುಳಿತಿದ್ದರು. ಅವರ ಮೈ ಮೇಲಿನ ಬಟ್ಟೆ ಬಿಟ್ಟರೆ ಉಳಿದುದ್ದೆಲ್ಲ ನೆನೆದು ಹೋಗಿತ್ತು. ಆ ಗೂಡಿಸಲಿನಲ್ಲಿ ಎಲ್ಲಿ ಹನಿ ಬೀಳುವುದಿಲ್ಲವೋ ಅಲ್ಲಿ ಇಬ್ಬರು ಕುಳಿತಿದ್ದರು. ಒಂದು ಸಣ್ಣ ಒಲೆ, ಅದರಲ್ಲಿ ಒಂದಿಷ್ಟು ಬೆಂಕಿ ಹಾಕಿದ್ದರು. ಅದರ ಸುತ್ತ ಇಬ್ಬರೂ ಕುಳಿತಿದ್ದರು. ಕರಾಳ ರಾತ್ರಿ. ಹೊರಗೆ ಗುಡುಗು, ಸಿಡಿಲು, ಮಳೆ ಜೋರಾಗಿತ್ತು. ರಾತ್ರಿ 10:00 ಸಮಯ ಇಬ್ಬರು ಕುಳಿತಲ್ಲಿಯೇ ತೂಕಡಿಸುತ್ತಿದ್ದರು. 

ಆಗ ಒಂದು ಮಿಂಚು ಹೊಳೆಯಿತು. ದೊಡ್ಡ ಸಪ್ಪಳವಾಯಿತು. ಮಗಳು ಗಾಬರಿಯಾಗಿ ಹೊರಗಡೆ ಬಂದು ನೋಡಿದಳು. ಮತ್ತೊಂದು ಸಲ ಮಿಂಚು ಬಂದಿತು. ಆ ಮಿಂಚಿನ ಬೆಳಕಿನಲ್ಲಿ ಕಂಡಿತು. ಏನಂದರೆ ರೈಲ್ವೆ ಸೇತುವೆ ಮುರಿದು ಬಿದ್ದಿತ್ತು. ಮಗಳು ತಾಯಿಗೆ ಹೇಳಿದಳು ರೈಲ್ವೆಯ ಸೇತುವೆ ಮುರಿದು ಬಿದ್ದಿದೆ. 11: 00 ಗಂಟೆಗೆ ರೈಲು ಬರುತ್ತದೆ. ಅದು ಸಾವಿರಾರು ಜನರನ್ನು ತುಂಬಿಕೊಂಡು ಬರುತ್ತದೆ. ಅದು ಇದೇ ಮಾರ್ಗವಾಗಿ ಹೋಗಬೇಕು. ಈ ಭಯಂಕರ ಕತ್ತಲೆಯಲ್ಲಿ, ರೈಲು ಚಾಲಕನಿಗೆ ಸೇತುವೆ ಮುರಿದಿದ್ದು ಗೊತ್ತಾಗಲಿಕ್ಕಿಲ್ಲ. ಎಂತಹ ಭಯಂಕರ ಅಪಘಾತ ಆಗುತ್ತದೆ ?.ಅಂದಳು ಮಗಳು. ಸೇತುವೆ ಒಡೆದು ಲೂಟಿ ಮಾಡುವ ಜನರಿಲ್ಲವೇನು?. ಆದರೆ ಈ ಎಂಟು ವರ್ಷದ ಮಗಳಿಗೆ, ಅಪಘಾತದಿಂದ, ಎಷ್ಟು ಜನರ ಪ್ರಾಣ ಹಾನಿಯಾಗುತ್ತದೆ ?.ಎನ್ನುವ ಚಿಂತೆ. ಯಾವ ಶಾಲೆಗೂ ಹೋಗಿಲ್ಲ. ಓದಿಲ್ಲ, ಬರೆದಿಲ್ಲ, ಬಡಮಗಳು. ಇವರಿಗೆ ದೇವರೇ ಗತಿ. ಆ ಮಗಳಿಗೆ ಅಷ್ಟು ಕಳವಳ. ತಾಯಿಗೆ, ಮಗಳು ಹೇಳುತ್ತಾಳೆ, "ನೋಡು ನಾವು ಏನಾದರೂ ಮಾಡಬೇಕು, ಇಲ್ಲದಿದ್ದರೆ ಸಾವಿರಾರು ಜನ ಸಾಯುತ್ತಾರೆ" ಎಂದಳು. ಆವಾಗ ತಾಯಿ ಹೇಳಿದಳು, "ನೋಡು, ನಾವು ಏನು ಮಾಡಲಿಕ್ಕೆ ಆಗುತ್ತದೆ ?. ನಮಗೆ ಆಗದನ್ನೆಲ್ಲ ತಲೆಗೆ ಹಾಕಿಕೊಳ್ಳುವುದಕ್ಕೆ ಹೇಗಾಗುತ್ತದೆ"?. ಆಗ ಮಗಳು ತಾಯಿಗೆ ಹೇಳಿದಳು, "ಇಲ್ಲ, ಏನಾದರೂ ಮಾಡಬೇಕು, ಉಳಿಸಬೇಕು". 

ಎಂತಹ ಭಾವನೆ?. ದೈವಿ ಸಂಪತ್ತು ಅಂದರೆ ಹೀಗೆ. ಎಂತಹ ಅದ್ಭುತ ಕೆಲಸ ಮಾಡುತ್ತದೆ?. ಆಗ ತಾಯಿ ಹೇಳಿದಳು, "ಏನು ಮಾಡೋಣ, ನಮ್ಮಲ್ಲಿ ಏನಿದೆ ?. ಮಾಡೋದಕ್ಕೆ ಈಗ ಕತ್ತಲೆ. ಆಕಾಶದ ತುಂಬಾ ಮೇಘಗಳು. ಬೆಳಕಿನ ಆಸರೆ ಇಲ್ಲ. ಎಲ್ಲಾ ಕಡೆ ಗಂಭೀರ ವಾತಾವರಣ. ರೈಲು ಶಬ್ದ ಮಾಡುತ್ತಾ ಬರುತ್ತದೆ. ಇಂತಹದರಲ್ಲಿ ನಮ್ಮ ಧ್ವನಿ ಹೇಗೆ ರೈಲು ಚಾಲಕನಿಗೆ ಕೇಳಿಸುತ್ತದೆ?." ಅಂದಳು ತಾಯಿ. 11:00 ಗಂಟೆ ರೈಲಿನಲ್ಲಿ ಸಾವಿರಾರು ಜನ ಮಲಗಿರುತ್ತಾರೆ. ಅವರಿಗೆ ನಮ್ಮ ಧ್ವನಿ ಹೇಗೆ ಕೇಳಿಸುತ್ತದೆ?. ಅಂದಳು ತಾಯಿ. ಆಗ ಮಗಳು ಹೇಳಿದಳು, "ಧ್ವನಿ ಕೇಳಿಸಲೇಬೇಕು ಅಂತ ಎಲ್ಲಿದೆ?. ಕಾಣಿಸುವಂತೆ ಏನಾದರೂ ಮಾಡೋಣ" ಎಂದಳು. ಇದಕ್ಕೆ ಬುದ್ಧಿವಂತಿಕೆ ಎನ್ನುತ್ತೇವೆ. ಏನಾದರೂ ಮಾಡಿ ಗಳಿಸುವುದು ಬುದ್ದಿವಂತಿಕೆಯಲ್ಲ. ಏನಾದರೂ ಮಾಡಿ ಉಳಿಸುವುದಕ್ಕೆ ಬುದ್ಧಿವಂತಿಕೆ ಎನ್ನುತ್ತೇವೆ. ಆಗ ತಾಯಿ ಹೇಳಿದಳು, ಏನು ಮಾಡೋಣ? ಅಂದಳು. ಆಗ ಮಗಳು ಹೇಳಿದಳು, "ಒಂದು ಕಟ್ಟಿಗೆ ತೆಗೆದುಕೊಂಡು, ಒಂದು ಬಟ್ಟೆ ಕಟ್ಟಿ, ಅದಕ್ಕೆ ಬೆಂಕಿ ಹಚ್ಚಿ, ಹಿಡಿದು ರೈಲಿನ ಎದುರು ಹೋಗೋಣ, ಕಂಡಿತು ಅವರಿಗೆ" ಎಂದಳು. 

ಈಗ ಹೇಗೂ ಹನಿ ಹನಿ ಮಳೆ ನಿಂತಿದೆ .11:00 ಗಂಟೆ ಆಗುತ್ತಾ ಬಂದಿದೆ. ಸಮಯ ಕಳೆಯುವುದಲ್ಲ. ಈಗ ಬೇಗ ಧ್ವನಿ ಕೇಳುತ್ತಾ ಇದೆ ಎಂದಳು. ಸಮೀಪದಲ್ಲೇ ಇದೆ. ಇನ್ನು ಐದು ,ಹತ್ತು ನಿಮಿಷಗಳಲ್ಲಿ ಬಂದೇ ಬಿಡುತ್ತದೆ ಎಂದಳು. ಆಗ ತಾಯಿ ಹೇಳುತ್ತಾಳೆ, ಬಟ್ಟೆಗಳೆಲ್ಲ ತೋಯ್ದವೇ. ಹಾಸಿಗೆ ಹೊದಿಕೆ ಎಲ್ಲಾ ತೋಯ್ದದೆ. ಈಗ ಏನು ಮಾಡೋದು ಅಂದಳು. ಆಗ ಮಗಳು ಹೇಳಿದಳು. "ನನ್ನ ಮೈ ಮೇಲೆ ಬಟ್ಟೆ ಇದೆ, ಅದು ಒಣಗಿದೆ, ಅದನ್ನೇ ಕಟ್ಟೋಣ" ಅಂದಳು. ಏನು ಭಾವ?. ತನ್ನ ಮಾನದ ಕಲ್ಪನೆ ಇಲ್ಲ. ಸಾವಿರ ಜನರ ಜೀವದ ಕಲ್ಪನೆ. ಆಯ್ತು ಹೋಗೋಣ ಅಂದಳು ತಾಯಿ. ಒಲೆ ಊದಿ, ಬೆಂಕಿ ಮಾಡಿದರು. ಕಟ್ಟಿಗೆಗೆ ಮಗಳು, ತನ್ನ ಮಾನದ ಬಟ್ಟೆ ಕಟ್ಟಿದಳು. ಅದಕ್ಕೆ ಬೆಂಕಿ ಹಚ್ಚಿ, ಓಡುತ್ತಾ ಓಡುತ್ತಾ ಬಂದರು. ಬಡವರ ಬಟ್ಟೆ ಎಷ್ಟಿರುತ್ತದೆ ?. ಸ್ವಲ್ಪ ಬಟ್ಟೆ, ಇನ್ನೇನು ಮುಗಿಯುವುದರಲ್ಲಿ ಇತ್ತು, ತಾಯಿ ತನ್ನ ಮಾನದ ಬಟ್ಟೆ ತೆಗೆದು ಕಟ್ಟಿದಳು. ಎದುರಿಗೆ ಓಡುತ್ತಾ ಇದ್ದಾರೆ. ಎದುರಿಗೆ ರೈಲು ಬರುತ್ತಾ ಇದೆ. ಮಾರ್ಗ ಬಿಟ್ಟು ಸರಿಯಲಿಲ್ಲ. ರೈಲು ಚಾಲಕ ನಿಲ್ಲಿಸಿದ. ಚಾಲಕ ನೋಡುತ್ತಾನೆ. ಇಬ್ಬರು ಹೆಣ್ಣು ಮಕ್ಕಳು, ಮೈಮೇಲೆ ಏನಿಲ್ಲ. ಕೈಯಲ್ಲಿ ಹಿಡಿದಿರುವ ಕೋಲಿನಲ್ಲಿ ಬೆಂಕಿ ಉರಿಯುತ್ತಾ ಇದೆ. ಚಾಲಕ ಏನು ? ಎಂದು ಕೇಳಿದ. ಏಕೆ ? ಅಂದ. ಆಗ ಮಗಳು ಹೇಳಿದಳು, ನಿಲ್ಲಿಸಿ, ಮುಂದೆ ಸೇತುವೆ ಮುರಿದು ಬಿದ್ದಿದೆ. ಆ ಚಾಲಕನಿಗೆ ಎಷ್ಟು ಆನಂದ ?. ಏನು ಆನಂದ ?. ಅವರಿಗೆ ಮೈ ಮುಚ್ಚಲು ತನ್ನ ಬಟ್ಟೆ ಕೊಟ್ಟ. 

ಆ ತಾಯಿ ಮಗಳನ್ನು ಕೊಂಡಾಡಿದ. ತನ್ನ ಇಲಾಖೆಗೆ ತಿಳಿಸಿದ. ಸಾವಿರ ಜನರನ್ನು ಉಳಿಸಿದ್ದರು ಈ ಹೆಣ್ಣು ಮಕ್ಕಳು, ಬಡವರು. ಮಗಳ ಮುಖದಲ್ಲಿ ಏನು ಪ್ರಸನ್ನತೆ?. ಏನು ಸಂತೋಷ ಚಿಮ್ಮುತ್ತಿದೆ?. ಮಾನ ಮುಚ್ಚುವುದಕ್ಕೆ ಕಡಿಮೆಯಾದ ಬಟ್ಟೆ. ಮನೆಯಲ್ಲಿ ಏನಿಲ್ಲ. ತಾಯಿ ಮಗಳ ಹೃದಯ ಎಂತಹದು?. ಬ್ರಿಟಿಷ್ ಗೌರ್ನರ್, ಕಲ್ಕತ್ತಾದ ಅಧಿಕಾರಿ ಇವರನ್ನು ಗೌರವಿಸುತ್ತಾರೆ. ಆ ಬ್ರಿಟಿಷ್ ಅಧಿಕಾರಿ ಹೇಳಿದ್ದು, "ಏನು ಭಾರತ, ಎಂತಹ ಜನ ಬದುಕಿದ್ದಾರೆ ಇಲ್ಲಿ" ಎಂದನು. ಬೇರೆಯವರಾದರೆ ಹೋದರೆ ಹೋಗಲಿ, ಬಿದ್ದರೆ ಬೀಳಲಿ, ಸತ್ತರೆ ಸಾಯಲಿ ಎನ್ನುತ್ತಿದ್ದರು. ಏನಾದರೂ ಸಿಗುತ್ತದೆ ಅಂದರೆ ಸೇತುವೆಯನ್ನು ತಾವೇ ತಮ್ಮ ಕೈಯಾರೆ ಕೆಡುವುತ್ತಿದ್ದರು. ಆದರೆ ತಾಯಿ ಮಗಳು ಹೃದಯ ದೈವ ಗುಣ ಸಂಪನ್ನ ರಾಗಿದ್ದರು. ಇವರಲ್ಲಿ ಹೊರಗಿನ ಸಂಪತ್ತು ಕಡಿಮೆ ಇದ್ದರೆ, ಹೃದಯದಲ್ಲಿ ಪ್ರೇಮ ಸಂಪತ್ತು ತುಂಬಿತ್ತು. ಅವರಲ್ಲಿ ಸಂತೋಷ ಕೊಟ್ಟಿದ್ದು, ಮುಖದಲ್ಲಿ ಪ್ರಸನ್ನತೆ ಕೊಟ್ಟಿದ್ದು, ಪ್ರೇಮವೇ ಹೊರತು, ಹೊರಗಿನ ಸಂಪತ್ತಲ್ಲ. ಮಕ್ಕಳೇ, ನಾವು ದೈವೀ ಸಂಪತ್ತು ಗಳಿಸೋಣ ಅಲ್ಲವೇ?.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article