-->
ಏಳು-ಬೀಳು ಬದುಕಿನ ಪಾಠ

ಏಳು-ಬೀಳು ಬದುಕಿನ ಪಾಠ

     ಶ್ರಾವ್ಯ  10 ನೇ ತರಗತಿ
     ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
     ಬಂಟ್ವಾಳ ತಾಲೂಕು                ಏಳು-ಬೀಳು ಬದುಕಿನ ಪಾಠ

             ಬದುಕೆಂದ ಮೇಲೆ ಏಳು-ಬೀಳು ಏರು-ಪೇರು ಸುಖ-ದುಃಖ ನೋವು-ನಲಿವು ಸರ್ವೇಸಾಮಾನ್ಯ. ಸದಾ ಸುಖ, ನಗು, ನೆಮ್ಮದಿಯ ಬದುಕು ನಮ್ಮದಾಗಬೇಕು ಎಂಬ ಹಂಬಲ ಆಸೆ ಎಲ್ಲರದ್ದೂ ಆಗಿರುತ್ತದೆ. ಆ ನೆಮ್ಮದಿಯ ಹುಡುಕಾಟದ ಹಿಂದೆ ನೂರಾರು ಏಳು-ಬೀಳುಗಳು ಇದ್ದೇ ಇರುತ್ತದೆ. ಏಳು ಬೀಳುಗಳಿಗೆ ಕುಗ್ಗದೆ ಒಂದು ಧೃಡ ನಿಲುವಿನಿಂದ ಮುನ್ನುಗ್ಗಿದರೆ ಯಶಸ್ಸಿನ ಕಿರೀಟ ನಮ್ಮ ಮುಡಿಗೇರಬಹುದು. ಬದುಕು ; ಬಂಡಿಯ ಚಕ್ರದಂತೆ, ಸದಾ ಉರುಳುತ್ತಿರುತ್ತದೆ. ಏನೇನೋ ಅಡಚಣೆಯನ್ನು ದಾಟಿ ಮುನ್ನುಗ್ಗುತ್ತದೆ. ಅದೇ ರೀತಿ ಮಾನವರಾದ ನಮಗೆ ಎದುರಾಗುವ ತೊಂದರೆಗಳನ್ನು ಎದುರಿಸುವ ಪ್ರಯತ್ನ ಮಾಡಬೇಕು. ಕಷ್ಟಗಳು ಎದುರಾದಾಗ, ಯಾಕಪ್ಪ? ನಮ್ಮನ್ನೇ ಕಷ್ಟಗಳು ಪದೇ ಪದೇ ಕಾಡುತ್ತದೆ, ಎಂದು ಚಿಂತೆಗೆ ಒಳಗಾಗದೆ ನಮಗಿಂತಲೂ ಕಷ್ಟದಲ್ಲಿರುವವರನ್ನು ನೋಡಿ ಅವರಿಗೆ ಹೋಲಿಸಿದರೆ ನಮ್ಮ ಕಷ್ಟ ಏನೇನೂ ಅಲ್ಲ. ಅವರೇ ಛಲದಿಂದ ಇರುವಾಗ ನಾವೇಕೆ ಧೈರ್ಯಗೆಡಬೇಕು ಎಂಬ ಒಂದು ಬಗೆಯ ಸಕಾರಾತ್ಮಕ ಭಾವನೆ ನಮ್ಮಲ್ಲಿ ಮೂಡಬೇಕು. ಸದಾ ಗೆಲುವು, ಸುಖಪ್ರಾಪ್ತಿಯಾದರೆ ಬದುಕು ಸುಂದರವಾಗುವುದಿಲ್ಲ. ಸೋಲಿನಿಂದ ಪಾಠ ಕಲಿತು ಗೆಲುವಿನ ಹೆಜ್ಜೆ-ಹೆಜ್ಜೆಗೂ ಪರಿಶ್ರಮಪಟ್ಟು ಸಾಧನೆಗೈದಾಗ ಆ ಹಿಂದಿನ ನೆನಪುಗಳು ನಮ್ಮ ಬದುಕನ್ನು ಸುಂದರವಾಗಿಸುತ್ತದೆ.

              ಜಗತ್ತನ್ನೇ ಬೆಳಗುವ ಸೂರ್ಯ, ರಾತ್ರಿ ಗ್ರಹಣ ಎಂಬ ಆಪತ್ತಿಗೆ ಒಳಗಾಗಿ ಚಂದ್ರನು ಅಮಾವಾಸ್ಯೆ ಕತ್ತಲೆಯಲ್ಲಿ ಮರೆಯಾಗುತ್ತಾನೆ. ಕಷ್ಟದ ದಿನಗಳು ಸೂರ್ಯ ಚಂದ್ರರನ್ನೂ ಕಾಡುತ್ತದೆ. ಸೂರ್ಯ ಹೇಗೆ ಬೆಳಗಿನ ಜಾವ ತನ್ನ ಪ್ರಕಾಶವನ್ನು ಹೊರಚೆಲ್ಲುತ್ತಾ ವಿಶ್ವವನ್ನು ಬೆಳಗುವನೊ ಹಾಗೆಯೇ ಚಂದ್ರನು ಅಮವಾಸ್ಯೆಯ ದಿನವನ್ನು ಕಳೆದು ಹುಣ್ಣಿಮೆ ದಿನಕ್ಕೆ ಬೆಳ್ಳಿಯ ತಟ್ಟೆಯಂತೆ ಹೊಳೆಯುತ್ತಾನೆ. ಕಷ್ಟಗಳು ಎಲ್ಲರನ್ನೂ ಕಾಡುತ್ತದೆ ಪರೀಕ್ಷಿಸುತ್ತದೆ. ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಾವು ಸೂರ್ಯ ಚಂದ್ರರ ಹಾಗೆ ಹೊಳಪಿನಿಂದ ಮಿಂಚಲು ಹೊಳೆಯಲು ಸಾಧ್ಯ !.

        "ಏಳುಬೀಳು " ಎಂಬ ಪದವೇ ನಮಗೆ ಎಷ್ಟೊಂದು ವಿಚಾರ ತಿಳಿಸುತ್ತದೆ. "ಏಳು-ಬೀಳುಗಳು" ಅಂತ ಬರೆದಾಗ ಬದುಕಲ್ಲಿ ಅನೇಕ ನೋವು-ನಲಿವುಗಳು ಇರುತ್ತವೆ ಎಂದು ಹೇಳುವಂತೆ ಅನಿಸುತ್ತದೆ. ಅದೇ ರೀತಿ ಆ ಪದವನ್ನು ತಿರುಗಿಸಿ "ಬೀಳು ಏಳು" ಎಂದು ಬರೆದಾಗ ಏನನ್ನಿಸುತ್ತದೆ ಎಂದರೆ ಸೋತು- ಗೆದ್ದಾಗ, ಬಿದ್ದು-ಎದ್ದಾಗ ಮಾತ್ರ ಅದರ ಮಹತ್ವ ತಿಳಿಯುತ್ತದೆ. ಏಳು ಬೀಳು ಎಂಬ ಪದವೇ ಉತ್ತಮ ಅರ್ಥ ಸಾರುತ್ತದೆ. ಏಳು-ಬೀಳುಗಳು ನಮ್ಮ ಬದುಕಿನ ಒಂದು ಮಹಾನ್ ಘಟಕಗಳಾಗಿವೆ. ಏಳು-ಬೀಳುಗಳು ನಮ್ಮ ಬದುಕಿನ ಮಾರ್ಗದರ್ಶಕ. ಒಂದು ಸುಂದರ ಪಾಠ. ನೂರಾರು ಹೆಜ್ಜೆಗಳೊಂದಿಗೆ ಸಾಗುವ ಬದುಕಿಗೆ ಒಂದೊಳ್ಳೆಯ ಅಡಿಪಾಯ.  
  
                                          ಶ್ರಾವ್ಯ
                                       10 ನೇ ತರಗತಿ
                                     ಸರಕಾರಿ ಪ್ರೌಢ ಶಾಲೆ
                                       ಮಂಚಿ ಕೊಳ್ನಾಡು
                                      ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article