ನಿಷ್ಪಾಪಿ ಸಸ್ಯಗಳು : ಸಂಚಿಕೆ - 103
Wednesday, May 21, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 103
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ? ಅಲ್ಲಲ್ಲಿ ಬೀಳುತ್ತಿದ್ದ ಹನಿ ಮಳೆ ಇದೀಗ ಮಳೆಗಾಲಕ್ಕಿಂತ ಮೊದಲೇ ಎಲ್ಲೆಡೆಯೂ ರಭಸದಿಂದ ಸುರಿಯುತ್ತಿದೆ. ನನ್ನ ಮೈಯಲ್ಲಿರುವ ಎಲ್ಲಾ ಶಾಖೆಗಳಲ್ಲೂ ಬಿಳಿ ಮುತ್ತುಗಳನ್ನು ಪೋಣಿಸಿದಂತೆ ಹಣ್ಣುಗಳು ತುಂಬಿಕೊಂಡಿವೆ ನೋಡಿದಿರಾ? ನನ್ನ ಬದಿಯಲ್ಲಿ ಸರಿದು ಹೋಗುವವರು "ಇದು ಯಾವ ಗಿಡ?" ಎಂದೊಮ್ಮೆ ಕತ್ತು ತಿರುಗಿಸಿ ನೋಡುತ್ತಾರೆ !. ಆಡು ಮೇಕೆಗಳಿಗೆ ನನ್ನಲ್ಲಿರುವ ಸೊಪ್ಪೆಂದರೆ ಬಲು ಇಷ್ಟ. ಪಕ್ಷಿಗಳಂತೂ ಪಕ್ವವಾದ ಹಣ್ಣುಗಳಿವೆಯೇ..? ಎಂದು ದಿನವೂ ಹುಡುಕಾಡಿ ಸಿಕ್ಕಷ್ಟನ್ನು ತಿಂದು ಸಂತಸದಿಂದ ಹರಸಿ ಹಾರುತ್ತಿವೆ. ಕೆಲವು ಸಮಯದ ಹಿಂದೆ ನನ್ನ ಮೈಮೇಲೆಲ್ಲಾ ಬಿಳಿ ಹಾಗೂ ಹಸಿರುಬಣ್ಣದ ಸಂಯೋಜನೆಯ ಪುಷ್ಪರಾಶಿಯೇ ಇತ್ತು! ಆವಾಗೆಲ್ಲಾ ಬಣ್ಣ ಬಣ್ಣದ ಚಿಟ್ಟೆಗಳು, ಜೇನುನೊಣಗಳು, ಸಣ್ಣ ಪಕ್ಷಿಗಳು, ತರಹಾವರಿ ಇರುವೆಗಳು ಔತಣಕೆಂಬಂತೆ ಬಂದು ಮಧು ಹೀರಿ ಖುಷಿ ಪಡುತ್ತಿದ್ದವು. ಅವುಗಳ ಗೆಳೆತನ ನನಗೂ ಹಿತವಾಗಿತ್ತು.
ನನ್ನ ಪರಿಚಯ ನಿಮಗಿಲ್ಲವಾದರೆ ಈ ಸಮಯದಲ್ಲಿ ನೀವು ಮಾರ್ಗದ ಬದಿ, ಗುಡ್ಡಗಳ ಇಳಿಜಾರು, ಗದ್ದೆ ತೋಟಗಳ ಬೇಲಿಗಳಲ್ಲಿ ಸಾಧ್ಯವಿದ್ದರೆ ಪಶ್ಚಿಮಘಟ್ಟದ ಕಾಡಿನಲ್ಲಿ ತಿರುಗಾಡಿ. ಹಣ್ಣುಗಳಿಂದ ತುಂಬಿಕೊಂಡ ಗಿಡಗಳನ್ನು ಅಂದರೆ ನನ್ನನ್ನು ಕಂಡುಹಿಡಿಯಲು ತುಂಬಾ ಸುಲಭ. ನನ್ನನ್ನು ನೋಡಲು ಇವೆಲ್ಲಕ್ಕಿಂತಲೂ ಸುಲಭದ ಜಾಗವೊಂದಿದೆ ಗೊತ್ತಾ? ನೇರವಾಗಿ ನಿಮ್ಮ ಮನೆಯ ಹಿತ್ತಲಿಗೆ ಹೋಗಿ, ಅಲ್ಲಿ ನೆಟ್ಟಿರುವ ತೊಂಡೆಕಾಯಿ ಬಳ್ಳಿಯನ್ನು ಗಮನಿಸಿ. ತೊಂಡೆ ಕಾಯಿಬಳ್ಳಿಯು ನೆಲದಿಂದ ಚಪ್ಪರಕ್ಕೆ ಏರಲು ಆಧಾರವಾಗಿ ಏನಿದೆ ನೋಡಿ. ಹ್ಹಾಂ.. ತೆಳ್ಳಗಿನ ಗಟ್ಟಿ ಕೋಲುಗಳಿವೆಯಲ್ಲವೇ? ಆ ಕೋಲುಗಳಿಗೆ ಅಲ್ಲಲ್ಲಿ ಮುಳ್ಳಿನಂತೆ ರಚನೆಗಳಿವೆ. ಆ ಮುಳ್ಳುಗಳನ್ನೇ ಬಳಸಿ ಬಳ್ಳಿಯ ತುದಿ ಹಂದರ ತಲುಪುತ್ತದೆ. ಬಳ್ಳಿಗೆ ಆಧಾರವಾಗಿ ಊರಿದ ಈ ಗೆಲ್ಲುಗಳಿಗೆ ವರ್ಷ ಕಳೆದರೂ ಏನೂ ಆಗದು. ನಾನು ಪೊದೆಸಸ್ಯವೇ ಆಗಿದ್ದರೂ ಕೆಲವೊಮ್ಮೆ ಗಟ್ಟಿಮರವೆಂದು ಕರೆಸಿಕೊಳ್ಳುತ್ತೇನೆ.
ಇಷ್ಟೆಲ್ಲಾ ಹೇಳಿದರೂ ನಿಮಗೆ ನಾನ್ಯಾರೆಂದು ತಿಳಿಯದಿದ್ದರೆ ನಾನೇ ಹೇಳುತ್ತೇನೆ ಕೇಳಿ. ನನ್ನನ್ನು ತುಳು ಭಾಷೆಯಲ್ಲಿ ಕೂರಂಬಿಲ್ ದೈ ಎನ್ನುತ್ತಾರೆ. ಕನ್ನಡದಲ್ಲಿ ಹೂಲಿ, ಬಿಳಿಹೂಲಿ, ಸೂಲಿ ಅಂತೆಲ್ಲಾ ಹೆಸರಿದೆ. ಸಾಮಾನ್ಯವಾಗಿ ಬಿಳಿ ಬೆರ್ರಿ ಬುಷ್ ಎಂದು ಕರೆಯುವರು. ಫ್ಲೂಜಿಯಾ ಲ್ಯುಕೋಪೈರಸ್ (Flueggea leucopyrus) ನನ್ನ ಸಸ್ಯ ಶಾಸ್ತ್ರೀಯ ಹೆಸರಾಗಿದ್ದು ಫಿಲಾಂಥೇಸಿ (Phyllanthaceae) ನನ್ನ ಕುಟುಂಬವಾಗಿದೆ. ಆರ್ದ್ರ ಉಷ್ಣವಲಯದ ಪೊದೆಸಸ್ಯವಾದ ನಾನು ಭಾರತೀಯ ಸ್ನೋಬೆರಿ, ಬಿಳಿ ಜೇನು ಪೊದೆ, ಬುಷ್ ನೀಡ್, ತಂಪು ಮಡಕೆ, ಮೀನಾಕ್ಷಿ ಹಣ್ಣು, ಸಿಬ್ಲ ಹಣ್ಣು, ಮಂಡಕ್ಕಿ ಹಣ್ಣು ಎಂದೆಲ್ಲ ಕರೆಸಿಕೊಳ್ಳುತ್ತೇನೆ.
5ಮೀ ಎತ್ತರವಾಗಬಹುದಾದ ನನಗೆ ಕೋನೀಯ ರೆಂಬೆಗಳಿರುತ್ತವೆ. ಅಂಡಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿದ್ದು 2.5 cm ಉದ್ದ , 1.5 cm ಅಗಲವಾಗಿರುತ್ತವೆ. ಗಂಡು ಹೂಗಳು ಗುಚ್ಛವಾಗಿ, ಹೆಣ್ಣು ಹೂಗಳು ಒಂಟಿಯಾಗಿದ್ದು ಪರಾಗಸ್ಪರ್ಶ ಕ್ರಿಯೆಗೆ ಗಾಳಿ ಹಾಗೂ ಕೀಟಗಳು ಸಹಾಯಕವಾಗಿವೆ. ಬಿಳಿ ಮುತ್ತಿನಂತಹ ಒಂದೊಂದು ಹಣ್ಣಲ್ಲೂ ತ್ರಿಕೋನಾಕಾರದಲ್ಲಿ ನಯವಾಗಿರುವ ಮೂರು ಬೀಜಗಳಿರುತ್ತವೆ. ಪೂರ್ವ ಆಫ್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾದ ಕೆಲವು ಭಾಗಗಳ ಕುರುಚಲು ಕಾಡು ಹಾಗೂ ಒಣ ಪತನಶೀಲ ಕಾಡು ನನ್ನ ಆವಾಸವಾಗಿದೆ. ಬೀಜದ ಮೂಲಕವೇ ಪ್ರಸರಣ ಕಾರ್ಯವೂ ನಡೆಯುತ್ತದೆ.
ಮಕ್ಕಳೇ , ನಾನು ಇತರ ಸಸ್ಯಗಳ ಹಾಗಲ್ಲ. ನನಗೆ ನನ್ನ ಬಗ್ಗೆ ತುಂಬಾ ಹೆಮ್ಮೆಯಿದೆ. ನಾನೊಂದು ನಿಷ್ಪಾಪಿ ಸಸ್ಯವಾಗಿದ್ದು ಭವಿಷ್ಯದಲ್ಲಿ ಮಾನವನಿಗೆ ಬಂಗಾರವಾಗಬಲ್ಲೆನೆಂಬ ಭರವಸೆಯಿದೆ. ನಿಮಗೀಗ ನನ್ನ ಮಾತು ಸತ್ಯವೆಂದೆನಿಸದು. ಸ್ವಲ್ಪ ಯೋಚನೆ ಮಾಡಿ ಸತ್ಯವೆಂದಾದರೆ ಮಾತ್ರ ಒಪ್ಪಿಕೊಳ್ಳಿ. ಇಂದು ಜಗತ್ತಿನಲ್ಲಿ ಮಧುಮೇಹ ಅನ್ನುವ ಕಾಯಿಲೆ ಹೇಗೆ ಮಾನವನ ನಿದ್ದೆಗೆಡಿಸುತ್ತಿದೆ ಎಂದು ನಾನು ಬಲ್ಲೆ. ಈ ಕಾಯಿಲೆಯಿಂದ ಅದೆಷ್ಟೋ ಜನ ಕಾಲ ಬೆರಳು, ಪಾದ ಕೊನೆಗೆ ಕಾಲನ್ನೇ ಕಳೆದು ಕೊಳ್ಳುವುದನ್ನು ಕಾಣುತ್ತೇವೆ. ಆದರೆ ನಾನು ಹುಳವಾಗಿರುವ ಗಾಯಗಳನ್ನೂ ಗುಣಪಡಿಸಬಲ್ಲೆ. ಯಾವುದೇ ದೀರ್ಘಕಾಲದ ಗಾಯಗಳ ನಿರ್ವಹಣೆಯನ್ನಾದರೂ ಗುಣ ಪಡಿಸುವ ಸಾಮರ್ಥ್ಯ ನನಗಿದ್ದು ಮಧುಮೇಹಿಗಳಿಗೆ ಆಧಾರವಾಗಬಲ್ಲೆ. ಈ ಬಗ್ಗೆ ಸಂಶೋಧನೆಗಳಾಗಿವೆ. ಮುಂದೊಂದು ದಿನ ನೀವು ನನ್ನ ಕೃಷಿ ನಡೆಸಲೂ ಬಹುದು! ಅಷ್ಟು ಮಾತ್ರವಲ್ಲ, ಮೂತ್ರವರ್ಧಕ, ಸೂಕ್ಷ್ಮ ಜೀವಿ ನಿವಾರಕ, ನಂಜು ನಿರೋದಕ, ಹಾವು ಕಡಿತ, ಜ್ವರ, ನೋವು, ಶೀತ, ಹೊಟ್ಟೆಯ ಸಮಸ್ಯೆ, ಕುಷ್ಠರೋಗ, ಗೊನೊರಿಯ, ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮಕಾರಿ, ಕ್ಯಾನ್ಸರ್ ವಿರೋಧೀ ಗುಣಗಳಿಂದಾಗಿ ಆಯುರ್ವೇದದಲ್ಲಿ ವ್ಯಾಪಕ ಬಳಕೆ ಇದೆ. ನೀಲಗಿರಿಯ ಮೂಲನಿವಾಸಿಗಳು ನನ್ನ ಎಳೆಯ ಕೊಂಬೆಗಳನ್ನು ಪೊರಕೆಯಾಗಿಯೂ ಬಳಸುತ್ತಾರೆ.
ಪರಿಸರ ಸ್ನೇಹಿಯಾಗಿ ಬೆಳೆಯುತ್ತಿದ್ದ ನನ್ನನ್ನೀಗ ಮನುಷ್ಯ ನಾಶ ಮಾಡುತ್ತಿರುವ ಪರಿಣಾಮದಿಂದ ನನಗೆ ಅಸ್ಥಿತ್ವವೇ ಇಲ್ಲವಾಗಿದೆ. ನನ್ನ ಪರಿಚಯವೇ ಇಲ್ಲದ ಜನಾಂಗ ಕಣ್ಣೆದುರಿಗಿದೆ. ನನ್ನ ದು:ಖವನ್ನು ಯಾರಲ್ಲಿ ಹೇಳಿಕೊಳ್ಳಲಿ... ನನ್ನ ರಕ್ಷಣೆಗೆ ನೀವಾದರೂ ಸಹಕರಿಸಬಲ್ಲಿರಾ?
ಸರಿ ಮಕ್ಕಳೇ, ಮುಂದಿನವಾರ ಇನ್ನೊಂದು ನಿಷ್ಪಾಪಿ ಸಸ್ಯದ ಮಾತುಗಳನ್ನು ಕೇಳೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************