-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 102

ನಿಷ್ಪಾಪಿ ಸಸ್ಯಗಳು : ಸಂಚಿಕೆ - 102

ನಿಷ್ಪಾಪಿ ಸಸ್ಯಗಳು : ಸಂಚಿಕೆ - 102
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ..? ಬಿಸಿಲ ಧಗೆಗೆ ಬಾನಿಂದ ಸುರಿದ ಒಂದಿಷ್ಟು ನೀರ ಹನಿಗಳು ತಂಪೆರಚಿವೆಯಲ್ಲವೇ?

ಮಕ್ಕಳೇ.. ನನಗೆ ಈ ತುಂತುರು ಹನಿಗಳೆಂದರೆ ಬಹಳ ಇಷ್ಟ. ಯಾಕೆ ಬಲ್ಲಿರಾ? ಮಳೆಗಾಲದ ಬಿರು ಮಳೆ ನನ್ನ ಆರೋಗ್ಯಕ್ಕೆ ಹಿಡಿಸುವುದೇ ಇಲ್ಲ. ನೀರು ಜಾಸ್ತಿಯಾಯಿತೆಂದರೆ ಸಾಕು.. ನನ್ನ ಬೇರುಗಳು ಕೊಳೆಯತೊಡಗುತ್ತವೆ! ಜೀವವೇ ಹೋದಷ್ಟು ನಿತ್ರಾಣಿಯಾಗಿಬಿಡುತ್ತೇನೆ. ಹಾಗಂತ ನನಗೆ ಬಿಸಿಲೂ ಅಷ್ಟೇನು ಇಷ್ಟವಿಲ್ಲ. ಹದವಾದ ಮೆಲು ಉಸಿರಿನ ಸೂರ್ಯರಶ್ಮಿ ಯ ಜೊತೆ ಎರಡೋ ನಾಲ್ಕೋ ದಿನಗಳಿಗೊಮ್ಮೆ ನಾಲ್ಕು ಹನಿ ನೀರು ಹಾಕಿದರೆ ಸಾಕು, ನಾನು ಹಾಯಾಗಿರಬಲ್ಲೆ!.

ನಿಮಗೀಗ ಅಚ್ಚರಿಯಾಗಿರಬೇಕಲ್ವೆ? ಇಷ್ಟು ಕಡಿಮೆ ನೀರಲ್ಲಿ ಯಾವ ಸಸ್ಯ ಬದುಕಲು ಸಾದ್ಯ! ಇದು ನಿಮ್ಮ ಪ್ರಶ್ನೆಯಲ್ವೆ? ನನಗೊತ್ತು ನಿಮಗೆ ನನ್ನ ಪರಿಚಯ ಅಷ್ಟಾಗಿ ಇಲ್ಲವೆಂದು. snake plant ಎಂದು ನಾನು ಹೇಳಿಕೊಂಡರೆ ನೀವು ಸುಲಭದಲ್ಲಿ ಗುರುತಿಸುವಿರಿ !. ನಾನು ನೋಡಲು ಸ್ವಲ್ಪ ಹಾಗೇ ಇದ್ದೇನೆ ಅಂತಲ್ಲ!. ನಾನಿದ್ದೆಡೆ ಹಾವುಗಳು ಬರೋದಿಲ್ಲ ಅಂತ ಕೆಲವರ ನಂಬಿಕೆಯಿಂದಾಗಿ ಆ ಹೆಸರು. ಆದರೆ ಮಾನವರ ಈ ನಂಬಿಕೆಯನ್ನು ನಾನು ನಿಜವೆನ್ನಲಾರೆ. ಹೀಗಲ್ಲವಾದರೂ ಮನುಷ್ಯರು ನನಗೆ ತುಂಬಾ ಗೌರವ ಕೊಡ್ತಾರೆ ಅನ್ನೋದೇ ನನಗೊಂದು ಹೆಮ್ಮೆ. ಎಲ್ಲ ಗಿಡಗಳ ಹಾಗೇ ನನ್ನನ್ನು ಅಂಗಳದ ಯಾವ್ದೋ ಒಂದು ಮೂಲೆಯಲ್ಲಿ ನೆಡೋದಿಲ್ಲ ಗೊತ್ತಾ? ನಾನವರ ಮನೆಯೊಳಗೆ, ಕಚೇರಿಯೊಳಗೇ ಜಾಗ ಪಡ್ದಿದ್ದೇನೆ. ಯಾಕಂದ್ರೆ ನಾನ್ ಸ್ವಲ್ಪ ವಿಶೇಷ ಸಸ್ಯ. ಮನುಷ್ಯನ ಆಯುಷ್ಯವನ್ನು ಆರೋಗ್ಯವನ್ನು, ಮಾನಸಿಕ ಸ್ಥಿಮಿತವನ್ನು ನಾನು ಕಾಯ್ದುಕೊಳ್ಳಬಲ್ಲೆ!. ಅದ್ ಹೇಗಂತೀರಾ? ಈಗಿನ ನಗರದ ಮನೆಗಳನ್ನು ನೋಡಿದ್ದೀರಾ? ಬರೇ ಬೆಂಕಿಪೆಟ್ಟಿಗೆಗಳ ತರಹ ಜಾಗ ಇದ್ದಲ್ಲೆಲ್ಲ ಗೋಡೆ ಎಬ್ಬಿಸಿದ್ದೇ ಎಬ್ಬಿಸಿದ್ದು! ಅಲ್ಲಿ ಸಾಕಷ್ಟ್ ಗಾಳಿ ಸುಳಿದಾಡ್ತದಾ? ಸೂರ್ಯನ್ ಬಿಸ್ಲು ಬೀಳ್ತದಾ? ಮೊಬೈಲೋ ಕಂಪ್ಯೂಟರೋ ನೋಡಿ ಕಣ್ಣುಗಳು ಸುಸ್ತಾದ್ರೆ ಎದುರಿಗೆ ಒಂದೆರಡಾದರೂ ಹಸಿರು ಮರಗಿಡಗಳಿವೆಯೋ ಇವುಗಳ ಪರಿವೆಯೇ ಇಲ್ಲದೆ ಮನೆಗಳನ್ನು ಕಚೇರಿಗಳನ್ನು ಕಟ್ಟಿರ್ತಾರೆ. ಇದ್ರೊಳಗೆ ವಾಸ ಮಾಡುವವರಿಗೆ ಸಿಕ್ ಬಿಲ್ಡಿಂಗ್ ಸಿಂಡ್ರೋಮ್ ಕಾಡಲಾರಂಭಿಸ್ತದೆ. ಇದೊಂದೇನು ಹೊಸ ಹೆಸರು ಅಂದ್ಕೊಂಡ್ರಾ? ಇದು ಮಾನವನೇ ಕೈಚಾಚಿ ಪಡಕೊಂಡ ಅನಾರೋಗ್ಯ ವಿಚಾರಗಳು!. ಇಂತಹ ಸ್ಥಳಗಳಲ್ಲಿ ವಾಸಿಸುವವರಿಗೆ ತಲೆನೋವು, ಸ್ರವಿಸುವ ಮೂಗು, ಒಣ ತುರಿಕೆ ಚರ್ಮ, ನೋಯುವ ಕಣ್ಣು, ಗಂಟಲು, ಕೆಮ್ಮುಉಬ್ಬಸ, ಚರ್ಮದ ದದ್ದು, ಆಯಾಸಗಳು ಸಾಮಾನ್ಯವಾಗಿ ಕಾಡುತ್ತವೆ. ಗಾಳಿಯಲ್ಲಿ ಧೂಳು, ಹೊಗೆ, ಕಳಪೆ ನಿರ್ವಹಣೆಯ ಹವಾನಿಯಂತ್ರಿತ ವ್ಯವಸ್ಥೆ, ಕಳಪೆ ವಾತಾಯನ, ಪ್ರಕಾಶಮಾನ ದೀಪಗಳಿಂದ ಪಾರಾಗುವ ಬಗೆಯನ್ನರಿಯದ ಜನರು ವೈದ್ಯರ ಬಳಿ ಹೋಗಿಯೂ ಸಮಾಧಾನ ಕಾಣದೆ ಸ್ನೇಕ್ ಪ್ಲಾಂಟ್ ಅಂದರೆ ನನ್ನನ್ನ ಅರಸಿಕೊಂಡು ನರ್ಸರಿಗೆ ಬರ್ತಾರೆ ಗೊತ್ತಾ? ವಿಚಿತ್ರ ಅಂತನಿಸ್ತದೆಯೇ? 

ಹೌದು ಮಕ್ಕಳೇ, ನಾನಾಗಲೇ ಹೇಳಿದೆನಲ್ಲ.. ನಾನೊಂದು ವಿಶೇಷ ಸಸ್ಯವೆಂದು. ನಾನು ರಾತ್ರಿಯಲ್ಲೂ ಆಮ್ಲಜನಕ ಕೊಡಬಲ್ಲೆ ಗೊತ್ತಾ? ಅಷ್ಟು ಮಾತ್ರವಲ್ಲ ನಿಮ್ಮ ಸುತ್ತಲಿನ ಒಳಾಂಗಣದ ಗಾಳಿಯಲ್ಲಿರುವ ಮಾಲಿನ್ಯಕಾರಕ ಅಂಶಗಳನ್ನು ಕಳೆದು ಶುದ್ಧಗಾಳಿ ಸುಳಿದಾಡುವಂತೆ ಮಾಡಬಲ್ಲೆ. ಮಾನಸಿಕ ಆರೋಗ್ಯ ಹೆಚ್ಚಿಸಬಲ್ಲೆ. ತೇವಾಂಶ ಹೆಚ್ಚಿಸಿ ಒಳಾಂಗಣದ ಪರಿಸರ ಸಮತೋಲನ ಮಾಡಬಲ್ಲೆ. ಆಮ್ಲಜನಕದ ಪ್ರಮಾಣ ಹೆಚ್ಚಾದಂತೆ ಅನಾರೋಗ್ಯ ತನ್ನಿಂತಾನಾಗಿ ದೂರವಾಗುವುದಲ್ಲವೇ? ಉತ್ತಮ ನಿದ್ದೆ, ಸರಿಯಾದ ಉಸಿರಾಟಕ್ಕೆ ಸಹಾಯಮಾಡುತ್ತೇನೆ. 1989 ರಲ್ಲೇ 'ನಾಸಾ' ಏನು ಹೇಳಿದೆ ಗೊತ್ತಾ? "ಗಾಳಿಯ ಹರಿವು ಇಲ್ಲದ ಕೋಣೆಯಲ್ಲಿ 6-8 ಹಾವಿನ ಗಿಡಗಳು ಮಾನವನ ಉಳಿವಿಗೆ ಸಾಕು" ಎಂದು ಹೇಳಿದೆ! ಈಗ ನಿಮಗೆ ಅರ್ಥವಾಗಿರಬೇಕಲ್ಲ... 

ಮಕ್ಕಳೇ, ಸೂರ್ಯನ ಬಿಸಿಲಿಗೆ ತೀವ್ರವಾಗಿ ಒಡ್ಡಿಕೊಳ್ಳಬೇಕೆಂಬ ಧಾವಂತ ನನಗಿಲ್ಲ. ಅಲ್ಪ ಸ್ವಲ್ಪ ಸೂರ್ಯನ ಪ್ರಕಾಶ ಸಿಕ್ಕರೆ ಸಾಕು, ನಾಲ್ಕಾರು ದಿನಗಳಿಗೊಮ್ಮೆ ಸ್ವಲ್ಪ ನೀರು ಸಿಕ್ಕರೆ ನನ್ನ ಬೆಳವಣಿಗೆ ಸರಾಗವಾಗುವುದು. ಹೆಚ್ಚು ನೀರು ನನ್ನ ಆರೋಗ್ಯಕ್ಕೂ ಉತ್ತಮವೇನಲ್ಲ. ಸಾಧಾರಣವಾಗಿ 10 ವರ್ಷದ ಬದುಕು ನನ್ನದು. ಆದರೆ ನಿಮ್ಮ ಕಾಳಜಿಯಿದ್ದರೆ 25 ವರ್ಷದವರೆಗೂ ದುಡಿಬಲ್ಲೆ. ಟೆರಾಕೋಟ ಮಡಿಕೆಯಲ್ಲಿ ನೆಟ್ಟಿರಾದರೆ ನಿಮಗೆ ಸಾಕಲೂ ಸುಲಭ. ಸಕಾತ್ಮಕ ಶಕ್ತಿ, ಅದೃಷ್ಟದ ಮುನ್ಸೂಚನೆ ನೀಡಬಲ್ಲೆನೆಂಬ ನಂಬಿಕೆಯಿಂದಲೂ, ಸುಲಭವಾಗಿ ಬೆಳಸಬಹುದೆಂಬ ಕಾರಣಕ್ಕಾಗಿಯೂ ನನ್ನನ್ನು ಜನ ಇಷ್ಟಪಟ್ಟು ಬೆಳೆಸುತ್ತಾರೆ. ನನ್ನ ನೇರವಾದ ಎಲೆಗಳು, ಅದರಲ್ಲಿರುವ ವಿವಿಧ ರೀತಿಯ ವಿನ್ಯಾಸಗಳು ತುಂಬಾ ಆಕರ್ಷಕ. ಸೀಮಿತ ಸ್ಥಳಾವಕಾಶದಲ್ಲೇ ಮನೆ, ಕಚೇರಿಗಳಿಗೆ ಸೊಗಸಿನ ಸ್ಪರ್ಶ ನೀಡತ್ತೇನೆ.

ಇಷ್ಟೆಲ್ಲಾ ತಿಳಿದ ಮೇಲೆ ನನ್ನ ಬಗ್ಗೆ ತಿಳಿದುಕೊಳ್ಳುವ ಹಂಬಲ ಹುಟ್ಟಿತೇ? ಹಾವಿನ ಗಿಡ, ಸಾನ್ಸೇವಾರಿಯಾ, ಸೇಂಟ್ ಜಾರ್ಜ್ ಕತ್ತಿ, ಅತ್ತೆಯ ನಾಲಿಗೆ, ಈಟಿ ಸಸ್ಯ, ವೈಪರ್ ನ ಬೋಸ್ಟ್ರಿಂಗ್ ಎಂದೆಲ್ಲ ಕರೆಯಲ್ಪಡುವ ನನ್ನ ಸಸ್ಯಶಾಸ್ತ್ರೀಯ ಹೆಸರು ಡ್ರಾಕೇನಾ ಟ್ರೈಫಾಸಿಯಾಟಾ (Dracaena trifesciata). ಡ್ರಾಕೇನಾ ಕುಲದ ಅಸ್ಫ್ಯಾರೇಸಿ ಕುಟುಂಬದ ಹೂಬಿಡುವ ಸಸ್ಯಜಾತಿಯಾದ ನಾನೊಂದು ನಿಷ್ಪಾಪಿ ಸಸ್ಯ. ನಿತ್ಯಹರಿದ್ವರ್ಣ ದ ದೀರ್ಘಕಾಲಿಕ ಸಸ್ಯವಾಗಿದ್ದು ದಕ್ಷಿಣ ಆಫ್ರಿಕಾಕ್ಕೆ ಸ್ಥಳೀಯವಾಗಿದ್ದೇನೆ. ಆಕಾರ, ಗಾತ್ರವಿನ್ಯಾಸಗಳ ವ್ಯತ್ಯಾಸದಿಂದಾಗಿ ನನ್ನಲ್ಲಿ ಹಲವಾರು ಪ್ರಭೇದಗಳಿವೆ. ತೆವಳುವ ಬೇರುಕಾಂಡಗಳ ಮೂಲಕ ಹರಡುವ ನಾನು ಬೀಜಗಳಿಂದಲೂ ಹೊಸತನ ಪಡೆಯಬಲ್ಲೆ. ಬ್ರೆಜಿಲ್, ನೈಜೀರಿಯಾಗಳಲ್ಲಿ ದೃಷ್ಟಿ ನಿವಾರಣೆಗೆ, ದುಷ್ಟತನ ನಿವಾರಣೆಗೆ ಬಳಸಲ್ಪಟ್ಟರೆ ಆಸ್ಟ್ರೇಲಿಯಾದಲ್ಲಿ ಕಳೆಸಸ್ಯವೆಂದು ದೂರುತ್ತಾರೆ. ನನ್ನ ಎಲೆಗಳಲ್ಲಿ ದಟ್ಟವಾದ ಎಳೆಗಳಿರುವುದರಿಂದ ಬಿಲ್ಲು ತಂತಿ ತಯಾರಿಸಲು ಬಳಸುವ ಸಸ್ಯನಾರಿಗಾಗಿ ನನ್ನನ್ನೇ ಬಳಸುತ್ತಿದ್ದರು. ನನಗೆ ನಾಯಿ ಬೆಕ್ಕುಗಳ ಸಹವಾಸ ಇಷ್ಟವೇ ಆಗುವುದಿಲ್ಲ. ನನ್ನ ತಂಟೆಗೆ ಬಂದರೆ ಅವುಗಳಿಗೆ ವಾಕರಿಕೆ, ವಾಂತಿ, ಅತಿಸಾರ ಉಂಟುಮಾಡುತ್ತೇನೆ. ಕೆಲವು ಸೌಮ್ಯ ಲಕ್ಷಣಗಳನ್ನು ಮಾನವರಲ್ಲೂ ಕಾಣಬಹುದು. ಆದರೆ ಕೆಡುಕುಂಟುಮಾಡಲಾರೆ. ಹೀಗಿರುವಾಗ ನೀವೂ ನನ್ನ ಒಂದು ಸಸಿಯನ್ನಾದರೂ ಏಕೆ ನೆಡಬಾರದು? ಆನ್ಲೈನ್ ನಲ್ಲಿ ನೋಡಿದರೆ ನನ್ನ ಒಂದು ಸಸಿಗೇ 100 ರುಪಾಯಿ ಕ್ರಯವಿದೆ ಗೊತ್ತಾ? ತಡವೇಕೆ.. ನಿಮ್ಮಲ್ಲೂ ಒಂದು ಹಾವಿನ ಗಿಡವಿರಲಿ.

ಸರಿ ಮಕ್ಕಳೇ, ಮುಂದಿನವಾರ ಇನ್ನೊಂದು ನಿಷ್ಪಾಪಿ ಸಸ್ಯದ ಮಾತುಗಳನ್ನು ಕೇಳೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article