ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 70
Sunday, April 13, 2025
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 70
ಲೇಖಕರು : ಸುಪ್ರಿಯಾ
ಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
"ಮೇಡಂ ನಿಮ್ಮ ಶಾಲೆಯಲ್ಲಿ ಪಾಠವೇನೋ ಚೆನ್ನಾಗಿದೆ, ಆದರೆ ಇಲ್ಲಿನ ಮಕ್ಕಳಲ್ಲಿ ಶಿಸ್ತು ಮಾತ್ರ ತುಂಬಾ ಕಡಿಮೆ, ಈ ವಿಚಾರದಲ್ಲಿ ನನಗೆ ಬಹಳ ಬೇಜಾರು", ಎಂದು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಮಾತುಕತೆ ಗೆ ಸಿಕ್ಕ ನನ್ನ ವಿದ್ಯಾರ್ಥಿಯ ತಂದೆಯು ನಮ್ಮ ಶಾಲೆಯ ಬಗ್ಗೆ ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು!!
ನಮ್ಮ ಶಾಲೆಯಲ್ಲಿ ಶಿಸ್ತು ಇಲ್ಲವೆಂದು ನಿಮಗೆ ಯಾಕೆ ಅನ್ನಿಸಿತು ಅಂತ ಅವರನ್ನೇ ಕೇಳಿದೆ,
ಇನ್ನೇನು ಮೇಡಂ ಮಕ್ಕಳು ಶಾಲೆ ಬಿಡುವಾಗ ಸರತಿ ಸಾಲಿನಲ್ಲಿ ಬರಲ್ಲ, ಇಡೀ ಮೈದಾನದಲ್ಲಿ ಓಡಿಕೊಂಡು ನಾವಿದ್ದಲ್ಲಿಗೆ ಬರುತ್ತಾರೆ, ಒಮ್ಮೆ ನನ್ನ ಮಗ ಹಾಗೆ ಓಡಿ ಬರುವಾಗ ಬಿದ್ದು ಗಾಯ ಮಾಡ್ಕೊಂಡು ಅವನ ಬ್ಯಾಗ್, ಬಟ್ಟೆ ಎಲ್ಲಾ ಮಣ್ಣು ಮೆತ್ತಿಕೊಂಡಿತ್ತು. ಮತ್ತೆ ಅವರ ಶೂ ಗಳೋ! ಅಯ್ಯೋ! ಇಡೀ ಮೈದಾನದ ಧೂಳಿನಿಂದ ಕಪ್ಪು ಬಣ್ಣ ಹೋಗಿ ಕೆಂಪಾಗಿರುತ್ತದೆ, ಮಾರನೇ ದಿನ ಶೂ ಪಾಲಿಶ್ ಮಾಡಿ ನನಗೆ ಸುಸ್ತಾಗಿ ಹೋಗುತ್ತೆ. ಯೂನಿಫಾರ್ಮ್ ಅಂತೂ ಪ್ರತೀದಿನ ವಾಷ್ ಮಾಡಲೇಬೇಕು ಅಷ್ಟು ಗಲೀಜಾಗಿರುತ್ತೆ. ಅಷ್ಟೆ ಅಲ್ಲ, ಮೆಟ್ಟಿಲು ಇಳಿವಾಗಲು ಕೆಲವು ಮಕ್ಕಳು ಒಂದು ಮೆಟ್ಟಿಲು ಬಿಟ್ಟು ಇನ್ನೊಂದು ಮೆಟ್ಟಿಲಿಗೆ ಹಾರಿಕೊಂಡು ಹೋಗುತ್ತಾರೆ, ಬ್ರೇಕ್ ಟೈಮ್ ನಲ್ಲೂ ಸರತಿ ಸಾಲಿನಲ್ಲಿ ವಾಶ್ರೂಂ ಗೆ ಹೋಗಲ್ಲ, ಊಟದ ಟೈಮ್ ನಲ್ಲೂ ಗಲಾಟೆ ಇರುತ್ತೆ. ಶಿಕ್ಷಕರೆಂದರೆ ಸ್ವಲ್ಪನೂ ಭಯಾನೇ ಇಲ್ಲಾ, ಶಿಕ್ಷಕರೊಂದಿಗೆ ತುಂಬಾ ಸಲುಗೆಯಿಂದ ಇರುತ್ತಾರೆ.
ಅದೇ ನನ್ನ ತಂಗಿಯ ಮಗು ಹೋಗುವ ಶಾಲೆಯನ್ನು ನೋಡಿ. ಅಲ್ಲಿ ಶಾಲೆ ಬಿಟ್ಟ ಮೇಲೆ ಎಲ್ಲಾ ಮಕ್ಕಳೂ ಕೈ ಹಿಂದೆ ಕಟ್ಟಿಕೊಂಡು ನಿಧಾನಕ್ಕೆ ತಮ್ಮ ತಮ್ಮ ವಾಹನದ ಬಳಿ ಬರುತ್ತಾರೆ, ಅವರ ಶೂ, ಯೂನಿಫಾರ್ಮ್ ಬೆಳಿಗ್ಗೆ ಎಷ್ಟು ಕ್ಲೀನ್ ಆಗಿದ್ದವೋ ಸಂಜೆಯೂ ಹಾಗೇ ಇರುತ್ತೆ. ಯಾರು ಓಡಲ್ಲ, ಗಾಯ ಅಂತೂ ಇಲ್ಲವೇ ಇಲ್ಲ. ಶಿಕ್ಷಕರು ಮಕ್ಕಳೊಂದಿಗೆ ಸಲುಗೆ ತೋರಿಸಲ್ಲ, ಮಕ್ಕಳು ತುಟಿಕ್ ಪಿಟಿಕ್ ಎನ್ನದೆ ಎಲ್ಲಾ ಕೆಲಸವನ್ನು ಶಿಸ್ತಿನಿಂದ ಮಾಡುತ್ತಾರೆ. ಹಾಗಾಗಿ ನಿಮ್ಮಲ್ಲೂ ಸ್ವಲ್ಪ ಶಿಸ್ತಿನ ಬಗ್ಗೆ ಗಮನ ಹರಿಸಿ. ನೀವೂ ಸ್ವಲ್ಪ ಜೋರು ಮಾಡ್ಬೇಕು ಮೇಡಂ, ಪೆಟ್ಟು ಕೊಡುವುದಕ್ಕೂ ನನ್ನ ಯಾವುದೇ ಅಭ್ಯಂತರ ಇಲ್ಲ!. ಎಂದು ತಮ್ಮ ಎಲ್ಲ ಸಲಹೆಗಳನ್ನು ನನ್ನ ಮುಂದಿಟ್ಟರು. ಅವರ ಮಾತುಗಳನ್ನು ಕೇಳಿ ನಿಮ್ಮ ಮಗು ಯಾವ ಕ್ಲಾಸ್ ನಲ್ಲಿ ಓದುತ್ತಿದೆ? ಎಂದೆ. ಆಗ ಆತ, ಅವ ಈಗ ಒಂದನೇ ತರಗತಿ ಮೇಡಂ, ಹಾಗಾಗಿ ಸಣ್ಣ ವಯಸ್ಸಿನಲ್ಲೇ ಶಿಸ್ತು ಕಲಿಯದಿದ್ದರೆ ಮುಂದೆ ಸಮಸ್ಯೆ ಆದೀತು ಅಲ್ಲವೇ? ಅಂದರು. ಓಹ್ ಸರಿ ಹಾಗಾದ್ರೆ ನಿಮ್ಮ ಸಲಹೆಗಳಿಗೆ ತುಂಬಾ ಥ್ಯಾಂಕ್ಸ್, ಆದರೆ ಶಿಸ್ತಿನ ಬಗ್ಗೆ ನನಗೂ ಹಲವಾರು ಸಂದೇಹಗಳಿವೆ, ಅವುಗಳಿಗೆ ನಿಮ್ಮ ಅಭಿಪ್ರಾಯ ಬೇಕು ಎಂದು ಅವರಲ್ಲಿ ಕೇಳಿಕೊಂಡಾಗ, ಬಹಳ ಖುಷಿಯಿಂದ ಕೇಳಿ ಮೇಡಂ ನಾನು ಉತ್ತರಿಸುತ್ತೇನೆ ಅಂದರು. ಸರಿ ಹಾಗಾದರೆ, ನೀವು ನಿಮ್ಮ ಬಾಲ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ನೀವು ಆರು ವರ್ಷ ದ ಹುಡುಗನಿದ್ದಾಗ ನೀವು ತುಂಬಾ ಪ್ರೀತಿಸುವ ಅಪ್ಪ ಅಮ್ಮನನ್ನು ಬಿಟ್ಟು ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು ಎಂಟು ಗಂಟೆಗಳವರೆ ಶಾಲೆಯಲ್ಲಿರುತ್ತೀರಿ, ಆದಷ್ಟು ಬೇಗ ಶಾಲೆಬಿಟ್ಟು ಮನೆಗೆ ಹೋಗಲು ತವಕಿಸುತ್ತಿರುವಾಗಲೇ ಶಾಲೆಯ ಘಂಟೆ ಬಾರಿಸುತ್ತದೆ. ನೀವು ಬ್ಯಾಗ್ ಹೇಗಲಿಗೇರಿಸಿ ಕ್ಲಾಸ್ ನಿಂದ ಹೊರಬರುತ್ತೀರಿ. ಆಗ ಶಾಲೆಯ ಹೊರಗೆ ನಿಮ್ಮ ಪ್ರೀತಿಯ ಅಪ್ಪ ನಿಂತಿರುವುದು ನಿಮಗೆ ಕಾಣಿಸುತ್ತೆ. ನೀವು ಅವರ ಬಳಿ ಹೇಗೆ ಹೋಗುತ್ತೀರಿ? ನಿಧಾನ ವಾಗಿಯೋ ಅಥವಾ ಓಡಿ ಹೋಗಿ ತಬ್ಬಿಕೊಳ್ಳುತ್ತೀರ? ಎಂದಾಗ ಅವರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಸರಿ ಬಿಡಿ, ನಾಳೆಯಿಂದ ಪ್ರತೀದಿನ ಸಂಜೆ ನೀವು ಶಾಲೆಯ ಬಳಿ ಬಂದಾಗ ಬೇರೆ ಮಕ್ಕಳನ್ನು ಸ್ವಲ್ಪ ಗಮನಿಸಿ, ಸುಮಾರು ಎಷ್ಟು ವಯಸ್ಸಿನ ಮಕ್ಕಳು ತಮ್ಮ ಹೆತ್ತವರ ಬಳಿ ಓಡಿಕೊಂಡು ಬರುತ್ತಾರೆ ನೋಡಿ. ಹೆಚ್ಚೆಂದರೆ ನಾಲ್ಕನೇ ತರಗತಿಯವರೆಗಿನ ಕೆಲವು ಮಕ್ಕಳು ಓಡಿಕೊಂಡಿ ಬರುವರು. ಉಳಿದವರು ನಿಧಾನಕ್ಕೆ ತಮ್ಮ ಗೆಳೆಯರೊಂದಿಗೆ ಮಾತನಾಡುತ್ತಾ ಬರುತ್ತಾರೆ. ಅದರಲ್ಲೂ ಬಹುತೇಕ ಪ್ರೌಢಶಾಲೆಯ ಮಕ್ಕಳಂತೂ ತಮ್ಮ ತಂದೆ ತಾಯಿ ಶಾಲೆಗೆ ಬರುವುದನ್ನೇ ಸಹಿಸುವುದಿಲ್ಲ! ಹಾಗಾಗಿ ನಿಮ್ಮ ಮಗ ಎಷ್ಟು ವರ್ಷ ನಿಮ್ಮ ಬಳಿ ಓಡಿ ಬರುತ್ತಾನೋ ಅಷ್ಟು ಅದೃಷ್ಟವಂತರು ನೀವು!. ಇನ್ನು ಬಟ್ಟೆ ಮತ್ತು ಶೂ ವಿಚಾರಕ್ಕೆ ಬರುವುದಾದರೆ, ನಿಮ್ಮ ಮಗು ಒಂದನೇ ತರಗತಿ ಗೆ ಹೋಗುತ್ತಿದೆಯೇ ಹೊರತು, ಯಾವ ನೌಕರಿಗಾಗಲಿ, ಆಫೀಸ್ ಗಾಗಲಿ ಹೋಗುತ್ತಿಲ್ಲ, ಒಂದನೇ ತರಗತಿಯ ಮಗುವಿನ ಶೂ ಮತ್ತು ಬಟ್ಟೆ ಸಂಜೆ ಗಲೀಜಾಗಿದೆ ಅಂದರೆ ಅದು ಆರು ವರ್ಷ ವಯಸ್ಸಿನ ಮಗುವಿನ ಸಹಜ ಬೆಳವಣಿಗೆಯೇ ಹೊರತು, ಅಶಿಸ್ತು ಅಲ್ಲ. ನಾವು ಆರು ವರ್ಷದ ಮಗುವನ್ನ ಇಪ್ಪತ್ತಾರು ವರ್ಷದ ಯುವಕನಂತೆ ಬೆಳೆಸುವುದು ಅಪಾಯಕಾರಿ ಅಲ್ಲವೆ? ಕೆಲವು ಶಾಲೆಗಳಲ್ಲಿ ವಿಶಾಲವಾದ ಆಟದ ಮೈದಾನ, ಜಾರುಬಂಡಿ, ಉಯ್ಯಾಲೆ ಇವೆಲ್ಲಾ ಇದ್ದರೂ ಮಗುವಿಗೆ ಅವುಗಳಲ್ಲಿ ಆಟ ಆಡಲು ವಾರಕ್ಕೆ ಎಷ್ಟು ಗಂಟೆ ಅವಕಾಶ ಸಿಗಬಹುದು? ಬಹುತೇಕ ಶಾಲೆಗಳಲ್ಲಿ ಅತೀ ಸಣ್ಣ ತರಗತಿಗೂ ಪ್ರತೀದಿನ ಆಟದ ಅವಧಿ ಇರುವುದಿಲ್ಲ! ಇನ್ನು ಕೈ ಹಿಂದೆ ಕಟ್ಟಿ ಹೋಗುವುದು, ಪ್ರತೀ ಬಾರಿ ಲೈನ್ ನಲ್ಲೇ ಸಾಗುವುದು, ಇಡೀ ಶಾಲೆ ಯಾವುದೇ ಸದ್ದು ಗದ್ದಲ ವಿಲ್ಲದೇ ನಡೆಯುವುದು ಇದೆಲ್ಲಾ ಶಿಸ್ತಿನ ಸಂಕೇತ ಅಲ್ಲವೇ ಅಲ್ಲ, ಇದೆಲ್ಲವೂ ಶಿಸ್ತಿನ ಹೆಸರಿನಲ್ಲಿ ಮಕ್ಕಳ ವಯೋಸಹಜ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.
ನಮ್ಮ ಶಾಲೆಯಲ್ಲಿ ಮಗುವು ಮಗುವಿನಂತೆ ಬೆಳೆಯಲು ಅವಕಾಶಗಳಿವೆ. ಮಗು ಯಾವ ಪ್ರಶ್ನೆ ಯನ್ನು ಕೇಳಬಹುದು, ಖುಷಿಯಾದಾಗ ಜೋರಾಗಿ ನಗುವುದು, ಆಟದ ಅವಧಿಯಲ್ಲಿ ಮೈದಾನಕ್ಕೆ ಓಡುವುದು, ಸಣ್ಣ ಪುಟ್ಟ ತಪ್ಪುಗಳು, ತಂಟೆ, ಗಲಾಟೆ, ಕೋಪ, ಜಗಳ, ಸಣ್ಣ ಪುಟ್ಟ ಗಾಯಗಳು ಇವೆಲ್ಲವನ್ನೂ ಮಕ್ಕಳು ಅನುಭವಿಸಬೇಕು. ಅದರ ಮೂಲಕವೂ ಮಕ್ಕಳ ಕಲಿಕೆ ಸಾಗುತ್ತದೆ. ದೊಡ್ಡವರಾದ ನಾವು ಖುಷಿಯಾಗಿದ್ದ ಸಮಯದಲ್ಲಿ ಹೆಚ್ಚು ಕೆಲಸ ಮಾಡುತ್ತೇವೆಯೇ ಹೊರತು ಬೇಸರ, ಅವಮಾನವಾದಗ ನಮ್ಮ ಕೆಲಸಗಳೂ ಪರಿಣಾಮಕಾರಿಯಾಗಿರುವುದಿಲ್ಲ ಅಲ್ಲವೇ?, ಅದೇ ರೀತಿ ಮಕ್ಕಳು ಕೂಡಾ ದಿನದ ಅತೀ ಪ್ರಮುಖ ಘಂಟೆಗಳನ್ನು ಶಾಲೆಯಲ್ಲಿ ಕಳೆಯುವ ಮಕ್ಕಳಿಗೆ ಶಾಲೆಯೆಂದು ಖುಷಿಯ ತಾಣವಾದರೆ ಮಾತ್ರ ಮಕ್ಕಳು ಖುಷಿಯಾಗಿದ್ದಾಗ , ಶಿಕ್ಷಕರು ನಮ್ಮನ್ನು ಪ್ರೀತಿಸುತ್ತಾರೆ ಎಂದು ಅನ್ನಿಸಿದಾಗ ಅವರ ಕಲಿಕೆ ಚುರುಕಾಗುತ್ತದೆ.
ಇನ್ನು ಶಿಕ್ಷೆ ಹಾಗು ಬೈಗುಳದ ವಿಷಯಕ್ಕೆ ಬರುವುದಾದರೆ, ನಾನು ಗಮನಿಸಿದಂತೆ ಸಾಮಾನ್ಯವಾಗಿ ಯಾವ ಮಕ್ಕಳು ಮನೆಯಲ್ಲಿ ಹೆಚ್ಚು ಪೆಟ್ಟು ತಿನ್ನುತ್ತಾರೋ ಅದೇ ಮಕ್ಕಳು ಶಾಲೆಯಲ್ಲೂ ಹೆಚ್ಚು ತಂಟೆಕೋರ ರಾಗಿರುತ್ತಾರೆ. ನಾನು ಗಮನಿಸಿದ ಹಾಗೆ ಒಂದನೇ ತರಗತಿಯಲ್ಲಿ ಪೆಟ್ಟು ತಿನ್ನುತ್ತಿದ್ದ ಹುಡುಗನೇ ಹತ್ತನೇ ತರಗತಿಯಲ್ಲೂ ಪೆಟ್ಟು ತಿನ್ನುತ್ತಿರುತ್ತಾನೆ!, ಹಾಗಾದರೆ ಪೆಟ್ಟಿನಿಂದ ಆತನ ಸ್ವಭಾವ ಸರಿಯಾಗಲಿಲ್ಲ ಅಲ್ಲವೇ? ಪೆಟ್ಟು ಆ ಕ್ಷಣಕ್ಕೆ ನಮಗೆ ಪರಿಹಾರ ಎನಿಸಿದರೂ ಕೂಡಾ ಅದರಿಂದ ಮಕ್ಕಳು ತಮ್ಮ ತಪ್ಪನ್ನು ಮರೆ ಮಾಚಲು ಸುಳ್ಳು ಹೇಳುವುದು, ಅವರ ಸಮಸ್ಯೆಗಳ ಬಗ್ಗೆ ಯಾರಲ್ಲೂ ಹೇಳಿಕೊಳ್ಳದೆ ಇರುವುದು ಹೀಗೆ ಅನೇಕ ಅಡ್ಡದಾರಿ ಕಂಡುಕೊಳ್ಳಲು ನಾವೇ ಅವಕಾಶ ಮಾಡಿದಂತಾಗುತ್ತದೆ. ಇನ್ನು ಮಕ್ಕಳು ಬೆಳೆಯುತ್ತಿರುವ ಪರಿಸರ, ತಂದೆ ತಾಯಿ ಹಾಗು ತನ್ನ ಸುತ್ತ ಮುತ್ತಲಿನ ಜನರ ಸ್ವಭಾವ ಇವೆಲ್ಲವುಗಳು ಮಗುವಿನ ವರ್ತನೆಗೆ ನೇರ ಕಾರಣವಾಗಿರುತ್ತದೆ. ಯಾವ ತಂದೆ ತಾಯಿ ತಮ್ಮ ಮಗುವಿನೊಂದಿಗೆ ಪ್ರೀತಿ, ಗೌರವದಿಂದ ಮಾತನಾಡುತ್ತರೋ ಆ ಮಗುವಿನಲ್ಲಿ ಅಶಿಸ್ತು ತುಂಬಾ ಕಡಿಮೆ. ಹಾಗಾದರೆ ನಾವು ಮಕ್ಕಳಿಗೆ ಏನೂ ಹೇಳ್ಬಾರದೇ? ಅವರನ್ನು ಬೇಕಾಬಿಟ್ಟಿ ಬೆಳೆಯಲು ಬಿಡುವುದೇ? ಖಂಡಿತಾ ಅಲ್ಲ, ಮಕ್ಕಳು ತಮ್ಮ ವಯೋಸಹಜವಲ್ಲದ ಚಟುವಟಿಕೆಯಲ್ಲಿ ಇದ್ದಾಗ ಹಾಗೂ ಅವರ ವರ್ತನೆಯಿಂದ ಪ್ರಾಣಕ್ಕೆ ಅಪಾಯ ಅಥವಾ ಇತರ ಮಕ್ಕಳಿಗೆ ತೊಂದರೆಯಾಗುವಂತಿದ್ದರೆ, ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತಪ್ಪಿನ ಅರಿವು ಮೂಡಿಸುತ್ತೇವೆ. ಶಿಸ್ತು ಎಂದರೆ ಶಿಕ್ಷೆಯಲ್ಲ ಅವರ ತಪ್ಪನ್ನು ಅರ್ಥಮಾಡಿಸುವುದು. ಶಿಸ್ತಿನ ಹೆಸರಲ್ಲಿ ಅತಿರೇಕದ ಶಿಕ್ಷೆಗಳನ್ನು ನೀಡುವ ಕೆಲವು ಶಿಕ್ಷಣ ಸಂಸ್ಥೆ ಗಳ ಹೈಸ್ಕೂಲ್ ವಿದ್ಯಾರ್ಥಿ ಗಳು ವರ್ಷದ ಕೊನೆ ಯಲ್ಲಿ ಅಲ್ಲಿನ ಶಾಲೆ ಯ ವಸ್ತು ಗಳನ್ನು ಹಾಳುಗೆಡವುದು, ಶಿಕ್ಷಕರ ಬಗ್ಗೆ ಕೆಟ್ಟದಾಗಿ ಗೋಡೆಬರಹ ಗಳನ್ನು ಬರೆಯುವುದು, ಸಿಗರೇಟು, ಮಧ್ಯ ಪಾನ ದಲ್ಲಿ ತೊಡಗುವುದು, ಇಂತಹ ಯಾವುದೇ ಕೆಟ್ಟ ವರ್ತನೆ ಗಳು ನಮ್ಮ ಶಾಲೆಯ ಮಕ್ಕಳಲ್ಲಿ ಇದುವರೆಗೂ ಕಂಡುಬಂದಿಲ್ಲ. ಅಷ್ಟರವರೆಗಿನ ಶಿಸ್ತು ಸಾಕಲ್ಲವೇ?ಎಂದೆ.
ನಾನು ಸ್ವಲ್ಪ ಹೆಚ್ಚೇ ಮಾತಾಡಿದೆ ಅನ್ನಿಸಿತು. ಆ ವ್ಯಕ್ತಿಯೂ ಏನನ್ನೂ ಹೇಳದೆ, ನಾನಿನ್ನು ಬರುತ್ತೇನೆ ಮೇಡಮ್ ಎಂದು ಹೊರಟೇ ಬಿಟ್ಟರು. ನಾನು ಯೋಚಿಸಿದೆ, ಆ ವ್ಯಕ್ತಿ ಏನು ಯೋಚಿಸುತ್ತಿರಬಹುದು? ನನ್ನ ಮಗನನ್ನು ತಂಗಿ ಮಗುವಿನ ಶಾಲೆಗೇ ಸೇರಿಸುವುದೋ?! ಅಥವಾ ತಂಗಿ ಮಗನನ್ನು ನಮ್ಮ ಶಾಲೆಗೇ ಸೇರಿಸಲು ಸೂಚಿಸುವುದೋ?!! ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನನ್ನ ಪ್ರಶ್ನೆ ಗೆ ಉತ್ತರ ಸಿಗಬಹುದು ಅಲ್ಲವೇ..?
ಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
*******************************************