-->
ಮತ್ತೆ ಕರೆಯಿತು ನನ್ನ ಶಾಲೆ

ಮತ್ತೆ ಕರೆಯಿತು ನನ್ನ ಶಾಲೆ

ಶೀತಲ್ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು


              ಮತ್ತೆ ಕರೆಯಿತು ನನ್ನ ಶಾಲೆ......

      ಸರ್ವ ಧರ್ಮದ ವಿದ್ಯಾರ್ಥಿಗಳು ನಾವೆಲ್ಲಾ ಒಂದೇ ಎಂದು ಭಾವಿಸಿ ಒಂದೆಡೆ ಸೇರಿ ಶಿಕ್ಷಣ ಪಡೆಯುವ ಕೇಂದ್ರ ಅದು ಶಾಲೆ. ಕಲಿಕೆಯ ವಾತಾವರಣ ನಿರ್ಮಿಸಿದ ದೇಗುಲ. ಶಾಲೆ ಎಂದರೆ ಗೌರವ, ಅದರಲ್ಲೂ ನಮಗೆ ಪಾಠ ಕಲಿಸಿದ ಗುರುಗಳಿಗೆ ಯಾವಾಗಲೂ ಗೌರವ ನೀಡುವುದು ಹಾಗೂ ಅವರಿಗೆ ವಿಧೇಯರಾಗಿ ನಡೆದುಕೊಳ್ಳುವುದು ನಮ್ಮ ಬಹುಮುಖ್ಯ ಪಾತ್ರ ವಾಗಿದೆ.

          ನಾವು ಶಾಲೆಯಲ್ಲಿ ಕಳೆಯುತ್ತಿದ್ದ ಪ್ರತಿಯೊಂದು ಸಮಯ ಅಮೂಲ್ಯವಾದದ್ದು. ಆ ಸಮಯದಲ್ಲಿ ನಾವು ಶಾಲೆಯ ಹಲವಾರು ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತೇವೆ. ಕೆಲವೊಂದು ಬಾರಿ ಆ ಜವಾಬ್ದಾರಿಗಳಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ತಪ್ಪುಗಳು ಆ ತಪ್ಪುಗಳನ್ನು ತಿದ್ದಿ ಅದನ್ನು ಸರಿಪಡಿಸಿ ನಮ್ಮನ್ನು ಸರಿದಾರಿಗೆ ತರಲು ಪ್ರಯತ್ನಿಸುವ ನಮ್ಮ ಶಿಕ್ಷಕರ ಪ್ರೀತಿ ಅನನ್ಯ. ಇದೆಲ್ಲದರ ಜೊತೆಗೆ ಏನೇ ಕಷ್ಟ ಬಂದರೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಗೆಳತಿಯರ ಬಾಂಧವ್ಯ ಹೇಳಲಸಾಧ್ಯ. ಅವರೊಡಗೂಡಿ ಮಾಡುತ್ತಿದ್ದ ತುಂಟಾಟ , ಪಾಠದ ಜೊತೆ ಜೊತೆಗೆ ಆಡುತ್ತಿದ್ದ ಆಟ , ಊಟದ ಸಮಯ ಬಂದಾಗ ಓಡುತ್ತಿದ್ದ ಓಟ , ಈ ಎಲ್ಲಾ ಅಮೂಲ್ಯವಾದ ಕ್ಷಣಗಳನ್ನು ನಾನು ನನ್ನ ಲಾಕ್ಡೌನ್ ದಿನಗಳ ರಜೆಯಲ್ಲಿ ಕಳೆದುಕೊಂಡೆ. 

          ನಾನು ಶಾಲೆಯಲ್ಲಿ ಕಳೆಯುತ್ತಿದ್ದ ಪ್ರತಿಯೊಂದು ಕ್ಷಣಗಳು ನನ್ನ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ಇವೆಲ್ಲವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಾಗ ನನ್ನ ಕಣ್ಣು ತುಂಬುತ್ತಿತ್ತು. ಆಗ ಯಾವಾಗ ಶಾಲೆ ಆರಂಭವಾಗುತ್ತದೆಯೋ ಎಂದೆನಿಸುತ್ತಿತ್ತು. ಆ ಕ್ಷಣದಲ್ಲಿ ನನಗೆ ಅನಿಸಿದ್ದು , ಶಾಲೆಯಲ್ಲಿ ಕಲಿಯುವ ದಿನಗಳು ಅತ್ಯಂತ ಮಹತ್ವವಾದದ್ದು; ಮತ್ತೊಮ್ಮೆ ಆ ಕ್ಷಣಗಳು ಸಿಗಲಾರದು, ಹಾಗಾಗಿ ಸಿಗುವ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂಬ ವಿಷಯವನ್ನು ತಿಳಿದುಕೊಂಡೆ. 

         ಕೊರೋನಾ ಎಂಬ ಮಾಹಾಮಾರಿಯು ವಿಶ್ವವ್ಯಾಪಿಯಾಗಿ ಹರಡಿದ್ದರಿಂದ ನಾವೆಲ್ಲರೂ ಮನೆಯಲ್ಲೇ ಸಾಕಷ್ಟು ತಿಂಗಳು ಇರಬೇಕಾದ ಪರಿಸ್ಥಿತಿ ಒದಗಿತು. ಆಗ ಸರಕಾರವು ಕಲಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಮಾಧ್ಯಮದ ಮುಖಾಂತರ ಮನೆಯಲ್ಲೇ ಕುಳಿತು ಕಲಿಯುವ ಅವಕಾಶ ಒದಗಿಸಿ ಕೊಟ್ಟಿತು. ಸರಕಾರದ ಈ ಕಾರ್ಯ ನಮಗೆ ಒಳ್ಳೆಯ ರೀತಿಯಲ್ಲಿ ನೆರವಾಗಿದೆ.  
       
         ಕೊರೊನ ಮಹಾಮಾರಿಯ ಅಟ್ಟಹಾಸ ಕಡಿಮೆಯಾಗುತ್ತಿದ್ದಂತೆ ಸರಕಾರವು ಕೆಲವು ನಿಯಮಗಳ ಮೇರೆಗೆ ನಮಗೆ ಶಾಲೆಯನ್ನು ಪುನರಾರಂಭಿಸಿದೆ. ಇಂದು ನಮಗೆ ನೇರವಾಗಿ ಶಾಲೆಯಲ್ಲಿ ಕಲಿಯುವ ಅವಕಾಶವನ್ನು ನೀಡಿದೆ. ಶಾಲೆ ಪುನರಾರಂಭದ ಬಗ್ಗೆ ನನಗೆ ಖುಷಿಯಾಗಿದೆ. ನಾನು ಬಹುದಿನಗಳಿಂದ ಹಂಬಲಿಸುತ್ತಿದ್ದ ಆ ಕ್ಷಣ ನನಗೆ ಈಗ ದೊರಕಿದೆ. ಆದರೆ ಕೊರೊನ ಬಗ್ಗೆ ಭಯವನ್ನು ತೊರೆದು ಎಚ್ಚರಿಕೆಯಿಂದ ಇರಬೇಕಾಗಿದೆ. ಮೊದಲಿನ ಶಾಲೆಯ ದಿನಗಳಿಗೂ ಈಗಿನ ದಿನಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದು ನಮಗೆ ತಿಳಿದಿರುವ ವಿಷಯ. ಈ ಎಲ್ಲ ವಿಷಯಗಳನ್ನು ಮನನ ಮಾಡಿಕೊಂಡು ನಾವು ಕಲಿಕೆಯ ಹಾದಿಯಲ್ಲಿ ಮುನ್ನುಗ್ಗುತ್ತೇವೆ. ನಮ್ಮ ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಕಷ್ಟಪಟ್ಟು ಶ್ರಮವಹಿಸಿ ಕಲಿಯುತ್ತೇವೋ ಅದಕ್ಕೆ ತಕ್ಕ ಪ್ರತಿಫಲ ನಮಗೆ ಖಂಡಿತಾ ದೊರಕುತ್ತದೆ. 

        ಕೊರೋನಾ ವೈರಸ್ ನನಗೆ ಜೀವನದ ಪಾಠ ಕಲಿಸಿಕೊಟ್ಟಿದೆ. ವಿದ್ಯಾರ್ಥಿ ಜೀವನವೆಂದರೆ ಅದೊಂದು ಸುವರ್ಣಮಯ ಕಾಲ. ನಮಗೆ ಈ ಶಾಲೆ ಪುನರಾರಂಭ ಸುಗ್ಗಿಯ ಕಾಲವಾಗಿದೆ. ನಮಗೆ ಸಿಗುವ ಪ್ರತಿಯೊಂದು ನಿಮಿಷ , ಗಂಟೆ , ದಿನಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು. ಶಾಲೆ ಪುನರಾರಂಭದ ಸರಕಾರದ ಕಾರ್ಯವನ್ನು ನಾವೆಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಸದುಪಯೋಗ ಮಾಡಿಕೊಳ್ಳೋಣ.

ಶೀತಲ್ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article