-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 165

ಸ್ಫೂರ್ತಿಯ ಮಾತುಗಳು : ಸಂಚಿಕೆ - 165

ಸ್ಫೂರ್ತಿಯ ಮಾತುಗಳು : ಸಂಚಿಕೆ - 165
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
                
“ಆಸೆಯೇ ದುಃಖಕ್ಕೆ ಮೂಲ”, “ಆಸೆಯು ಕ್ರೋಧಕ್ಕೂ ಹೇತುವಾಗುತ್ತದೆ” ಇಂತಹ ಮಾತುಗಳನ್ನು ಪ್ರಪಂಚದ ಎಲ್ಲ ಧರ್ಮಗಳೂ ಸಾರುತ್ತಾ ಬಂದಿವೆ. ಆಸೆಗೆ ಕೊನೆಯಿಲ್ಲ. ಒಂದು ಆಸೆ ಈಡೇರಿದರೆ ಮತ್ತೊಂದು ಆಸೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ. ಆಸೆಯು ನೆರವೇರಿದರೆ ಸಂತಸವಾಗುತ್ತದೆ; ನೇರವೇರದೇ ಇದ್ದರೆ ಅದೇ ದುಃಖದಲ್ಲಿ ಬದುಕು ಬಡವಾಗುತ್ತದೆ. ಒಂದು ಆಸೆ ಈಡೇರಿದೊಡನೆ ಮಗದೊಂದು ಆಸೆಯು ಚಿಗುರೊಡೆಯುವುದರಿಂದ ನಮ್ಮ ಆಸೆಗಳನ್ನು ಈಡೇರಿಸುವ ಹಪಾ ಹಪಿಯಲ್ಲೇ ಮುಳುಗುತ್ತೇವೆ.
ಆಸೆಯು ವಯಸ್ಸಿಗನುಗುಣವಾಗಿ ಬದಲಾಗುತ್ತದೆ. ಪರಿಸರವೂ ಅಸೆಗಳನ್ನು ಹುಟ್ಟು ಹಾಕುವಲ್ಲಿ ದೊಡ್ಡ ಭೂಮಿಕೆಯನ್ನು ನಿರ್ವಹಿಸುತ್ತದೆ. ತಿಂಡಿಗಳು, ಆಟಿಕೆಗಳು, ಆಟಗಳು, ಸೈಕಲು, ಬೊಂಬೆ… ಹೀಗೆ ಮಕ್ಕಳಲ್ಲಿ ಆಸೆಗಳ ಪಟ್ಟಿಯಿದೆ. ಮಕ್ಕಳ ಆಸೆಗಳ ಪಟ್ಟಿಯಲ್ಲಿ ದೂರದರ್ಶನ, ಮೊಬೈಲು ಸೇರುತ್ತಿರುವುದು ಇತ್ತೀಚೆಗಿನ ಬೆಳವಣಿಗೆ. ಸ್ಪರ್ಷ ಪರದೆಗಳ ಮೊಬೈಲಿದ್ದರೆ ಆಟ ತಿಂಡಿ ಯಾವುದೂ ಬೇಡ ಎನ್ನುವ ಮತ್ತು ಹೊಸ ಹೊಸ ಆಸೆ ಹೇಳದ ಮಕ್ಕಳೂ ಕಾಣಸಿಗುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಪುಸ್ತಕ, ಉಡುಪು, ಸ್ವಚ್ಚತೆ, ಪರಿಸರ ವೀಕ್ಷಣೆ, ಪ್ರವಾಸ, ಧ್ಯಾನ, ಯೋಗ, ಸತ್ಸಂಗ, ಅಧ್ಯಯನ ಮುಂತಾದ ಆಸೆಗಳು ಮಕ್ಕಳಲ್ಲಿ ಮೊಳೆಯುತ್ತಿದ್ದರೆ ಹೆತ್ತವರು ಅಭಿಮಾನ ಪಡಬೇಕು. ಮನೆಯಲ್ಲಿ ತಯಾರಾದ ತಿಂಡಿಗಳನ್ನೇ ಆಸೆ ಪಟ್ಟರೆ ಉತ್ತಮ ಬೆಳವಣಿಗೆ. ಇದರಿಂದ ಬದುಕು ಸುಗಮ ಮತ್ತು ಆರೋಗ್ಯ ಪೂರ್ಣವಾಗುತ್ತದೆ.

ಯುವಕರ ಆಸೆಗಳು ಅನಂತ. ತಮ್ಮ ಉಡುಗೆ ತೊಡುಗೆ, ವಾಹನ, ಆಹಾರ, ವಿಹಾರ ಎಲ್ಲವುಗಳ ಬಗ್ಗೆಯೂ ಅವರ ಆಸೆ ವಿಭಿನ್ನ. ಅತ್ಯಂತ ನವೀನ ಮಾದರಿಯದಾಗಿರಬೇಕು, ಬೆಲೆ ಬಾಳುವುದಾಗಿರಬೇಕು, ತನ್ನಲ್ಲಿರುವಂತಹದ್ದು ಇತರರಲ್ಲಿ ಇರಬಾರದು. ನೋಡುಗರ ಕಣ್ಣು ಕುಕ್ಕುವಂತಿರಬೇಕು, ಅವರ ಕುತೂಹಲ ಹೆಚ್ಚಿಸುವಂತಿರಬೇಕು…. ಹೀಗೆ ತಾವು ಹೊಂದಿರಬೇಕಾದುವುಗಳ ಬಗ್ಗೆ ಅವರ ಆಸೆ ನೂರಾರು. ಹೊಸತಾದುದೆಲ್ಲವೂ ತನಗೆ ಮೊದಲು ದಕ್ಕಲೆಂಬ ಆಸೆ, ನಮಗೆ ಅತ್ಯಾಸೆ ಎಂದು ಕಾಣಿಸಬಹುದಾದರೂ ಆಸೆ ಪಡುವುದು ತಪ್ಪಲ್ಲವಲ್ಲ.

ಕೆಲವರಿಗೆ ಸುಲಭದಲ್ಲಿ ಗಳಿಸುವ ಆಸೆ. ಗಳಿಸಬೇಕೆನ್ನುವುದು ಹಣವನ್ನು ಮಾತ್ರವಲ್ಲ. ತಮ್ಮ ಎಲ್ಲ ಕಾಮನೆಗಳನ್ನೂ ಅತ್ಯಂತ ಸುಲಭದಲ್ಲಿ ಶ್ರಮ ಪಡದೇ ಗಳಿಸಬೇಕೆನ್ನುವ ಅವರ ಆಸೆ ದುರಂತಕರ. ಇದರಿಂದ ಸಮಾಜದೊಳಗೆ ಸೋಮಾರಿಗಳು, ಮೋಸಗಾರರು, ಕಳ್ಳರು, ಲಂಚಕೋರರು, ಕೊಲೆಗಡುಕರ ದಂಡೇ ಬೆಳೆಯಬಹುದು. ಶ್ರಮದ ಮೂಲಕ ಪಡೆಯುವ ಆಸೆಯಿರುವವರಿಂದ ಸಮಷ್ಠಿಗೆ ಹಿತವಾಗುತ್ತದೆ. ಪರಿಶ್ರಮದ ಬದುಕು ಸಮಾಜದ ಪ್ರಗತಿಗೆ ತಾರಕ ಮಂತ್ರ. ತಾನು ಆಸೆ ಪಟ್ಟುದನ್ನು ಕೈಗೆಟಕಿಸುವ ಸ್ಪೃಹತೆ ಕೆಲವೊಮ್ಮೆ ಕ್ರೋಧ, ವೈರತ್ವಗಳಿಗೂ ಕಾರಣವಾಗುತ್ತದೆ. ತನಗೆ ಸಿಗಬೇಕೆಂಬ ಕಾಮನೆ ಈಡೇರದೇ ಹೋದಾಗ ತನಗೇ ತನ್ನಲ್ಲಿ ಸಿಟ್ಟು ಮಾಡಿಕೊಳ್ಳುವವರಿದ್ದಾರೆ. ತನ್ನ ಬಯಕೆಯನ್ನು ಈಡೇರಿಸಲು ನಿರಾಕರಿಸಿದವರ ಮೇಲೂ ಕ್ರೋಧವು ಉಕ್ಕುವುದಿದೆ. ಕ್ರೋಧದ ಪರಿಣಾಮ ಅತ್ಯಂತ ಹೇಯವೂ ನೀಚವೂ ಆಗುವುದಿದೆ. ಹಾಗಾಗಿ ಅಸೆಯನ್ನು ವೈರಿಯೆಂದು ಅರಿಷಡ್ವರ್ಗದ ಪಟ್ಟಿಗೆ ಹಿರಿಯರು ಸೇರಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲ ವೈರಿಯಾಗಿ ಕಾಣಿಸುವುದೇ ಕಾಮ.

ಕಾಮವೆಂದರೆ ಆಸೆ ಅಥವಾ ಬಯಕೆ. ಆಸೆಯನ್ನು ನಿಯಂತ್ರಿಸದ ಮನಸ್ಸು ಬಹಳ ಅಪಾಯಕಾರಿ. ಇನ್ನೂ ಬೇಕು ಎಂಬುದು ಕೊನೆಯಾಗ ಬೇಕು. ನಮಗೆ ಅಸೆಗಳಿರಬಾರದೆಂಬುದೂ ಒಂದು ಆಸೆಯೇ ಅಲ್ಲವೇ?. ಈ ಆಸೆಯು ನೆರವೇರಲು ಮನಸ್ಸನ್ನು ನಿಯಂತ್ರಿಸಬೇಕು. ಮನಸನ್ನು ಹತೋಟಿಯಲ್ಲಿಡುವುದು ಸುಲಭವಲ್ಲ. ಅದೊಂದು ಯಜ್ಞವೇ ಸರಿ. ಯಜ್ಞವು ಹೇಗೆ ಲೋಕ ಕಲ್ಯಾಣಕರವೋ ಮನಸನ್ನು ನಿಯಂತ್ರಣವೆಂಬ ಗೂಟಕ್ಕೆ ಕಟ್ಟಿ ಹಾಕುವುದೂ ಲೋಕ ಕಲ್ಯಾಣಕರ.

ಆಸೆಯನ್ನು ಈಡೇರಿಸಿಕೊಳ್ಳುವ ನೆಪದಲ್ಲಿ ಇತಿಹಾಸದಲ್ಲಿ ಆದ ಯುದ್ಧಗಳಿವೆ. ವರ್ತಮಾನದಲ್ಲಿ ಕೊಲೆಗಳಾಗುತ್ತಿವೆ. ಸರಕಾರಿ ಕಚೇರಿಗಳಲ್ಲಿ ಆಗುತ್ತಿರುವ ಭ್ರಷ್ಟ ವ್ಯವಸ್ಥೆಗಳಿಗೂ ಅತ್ಯಾಸೆಯೇ ಮೂಲ. ಆಸೆಯಿರಲಿ, ಆಸೆಗೆ ಕಡಿವಾಣವಿರಲಿ. ಆಸೆಗೆ ಮೊದಲಿರುವಂತೆ ಕೊನೆಯೂ ಇರ ಬೇಕಲ್ಲ! ಎಲ್ಲ ಅಸೆಗಳನ್ನು ನಿಯಂತ್ರಿಸುವ ಆಸೆ ನಮಗಿರಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article