-->
ಮಕ್ಕಳ ಕಥೆಗಳು - ಸಂಚಿಕೆ : 11

ಮಕ್ಕಳ ಕಥೆಗಳು - ಸಂಚಿಕೆ : 11

ಮಕ್ಕಳ ಕಥೆಗಳು - ಸಂಚಿಕೆ : 11
ಸ್ವರಚಿತ ಕಥೆ ಬರೆದಿರುವ ಮಕ್ಕಳ ಜಗಲಿಯ ವಿದ್ಯಾರ್ಥಿಗಳು :
◾ ಜಯಶ್ರೀ, 8ನೇ ತರಗತಿ 
◾ ಸಿಂಧು ಜಿ ಭಟ್, ಕಲ್ಕಾರ್, 7ನೇ ತರಗತಿ
◾ ದಿಶಾನ್ ರೈ, 9ನೇ ತರಗತಿ 
◾ ಪ್ರಾರ್ಥನಾ ಗೌಡ ಎಚ್ ಡಿ, 9ನೇ ತರಗತಿ 
◾ ವಚನ್ ಸಿ, 4ನೇ ತರಗತಿ 
◾ ರಶ್ಮಿ ಎಂ, 5ನೇ ತರಗತಿ    

             
    ಒಂದು ದೊಡ್ಡದಾದ ಪಟ್ಟಣ. ಆ ಪಟ್ಟಣದಲ್ಲಿ ಹಲವಾರು ದೊಡ್ಡ ದೊಡ್ಡ ಮನೆಗಳಿದ್ದವು. ಅದೇ ಪಟ್ಟಣದಲ್ಲಿ ಒಬ್ಬ ಹುಡುಗ ತನ್ನ ತಂದೆಯೊಂದಿಗೆ ವಾಸವಾಗಿದ್ದನು. ಅವರ ಜೀವನ ಬಹಳ ಸುಂದರವಾಗಿಯೇ ನಡೆಯುತ್ತಿತ್ತು. ತಂದೆ ಒಂದು ಒಳ್ಳೆಯ ಕೆಲಸದಲ್ಲಿದ್ದರು. ಕೈ ತುಂಬಾ ಹಣವಿತ್ತು. ಅವರು ಶ್ರೀಮಂತರೇ ಆಗಿದ್ದರು. ಆ ತಂದೆಗೆ ನಾವು ಶ್ರೀಮಂತರು ಎಂಬ ಅಹಂ ಇತ್ತು. ಆ ತಂದೆ ತನ್ನ ಮಗನಿಗೆ ಕಷ್ಟದಲ್ಲಿರುವವರನ್ನು ತೋರಿಸಿ ಕಷ್ಟ ಎಂದರೆ ಇದು ಎಂದು ಹಾಸ್ಯ ಮಾಡುತ್ತಿದ್ದರು. ಆದರೆ ಆ ಮಗನಿಗೆ ಕಷ್ಟದಲ್ಲಿ ಇರುವವರಿಗೆ ಮತ್ತು ಬಡವರಿಗೆ ಸಹಾಯ ಮಾಡುವುದೆಲ್ಲ ಇಷ್ಟವಿತ್ತು. ಆ ಹುಡುಗ ಆರನೇ ತರಗತಿಯಲ್ಲಿ ಕಲಿಯುತ್ತಿದ್ದ. ಅವನು ಕಲಿಯಲು ಜಾಣನಾಗಿದ್ದ. ಶಾಲೆಯಿಂದ ಬೇಸಿಗೆ ಕಾಲದಲ್ಲಿ ಎರಡು ವಾರ ರಜೆಯನ್ನು ನೀಡಲಾಗಿತ್ತು. ಆ ವಿಷಯವನ್ನು ಆ ಹುಡುಗ ತನ್ನ ತಂದೆಗೆ ಹೇಳಲೆಂದು ಬರುತ್ತಾನೆ. ಆ ವಿಷಯವನ್ನು ಕೇಳಿದ ತಂದೆ ಮಗನ ಬಳಿ ಹೀಗೆಂದು ಹೇಳುತ್ತಾರೆ. ನಾವು ಎರಡು ವಾರದ ರಜೆಯಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡೋಣ ಎಂದರು. ಮರುದಿನವೇ ತಂದೆ ಮತ್ತು ಮಗ ತಮ್ಮ ಗಾಡಿಯ ಮೂಲಕ ಒಂದು ಚಿಕ್ಕ ಹಳ್ಳಿಗೆ ಬರುತ್ತಾರೆ. ಆ ಹಳ್ಳಿಯ ನೋಟ ಬಹಳ ಚೆನ್ನಾಗಿತ್ತು. ದಟ್ಟವಾದ ಮರಗಳು, ಕಂಪನ್ನು ಬೀರುವ ಹೂಗಳು, ಮೈತುಂಬಿ ಹರಿಯುವ ನದಿಗಳು, ಎಲ್ಲರ ಮನೆಯ ಮುಂದಿನ ರಂಗೋಲಿಗಳು, ವಿಶಾಲವಾದ ಮೈದಾನಗಳು, ದೊಡ್ಡ ದೊಡ್ಡ ಕೆರೆಗಳು ಹೀಗೆ ಸುಂದರವಾದಂತಹ ವಾತಾವರಣವಿತ್ತು. ಅದನ್ನೆಲ್ಲ ನೋಡಿದ ಮಗ ತನ್ನ ತಂದೆಯ ಬಳಿ ಹೀಗೆಂದು ಕೇಳುತ್ತಾನೆ. ಅಪ್ಪ ನಾವು ಯಾಕಾಗಿ ಇಂತಹ ಸುಂದರವಾದ ಜಾಗಕ್ಕೆ ಬಂದಿದ್ದೀವಿ ಎಂದು. ಆಗ ತಂದೆ ಗರ್ವದಿಂದ ಉತ್ತರಿಸುತ್ತಾನೆ ಇದು ನಿನಗೆ ಹೇಗೆ ಸುಂದರವಾಗಿ ಕಂಡಿತು. ನಾನಿಲ್ಲಿಗೆ ಕರೆದುಕೊಂಡು ಬಂದ ಉದ್ದೇಶವೇ ಬೇರೆ. ಆಗ ಮಗನಿಗೆ ಕುತೂಹಲ ಉಂಟಾಯಿತು. ಆಗ ಅವನು ಪ್ರಶ್ನೆ ಮಾಡುತ್ತಾನೆ ಬೇರೆ ಯಾವ ಉದ್ದೇಶವೆಂದು. ತಂದೆ ನಗುತ್ತಾ ಹೇಳುತ್ತಾರೆ, "ನಾವು ಎಷ್ಟು ಶ್ರೀಮಂತರು ಎಂದು ನಿನಗೆ ಗೊತ್ತಾಯಿತು ಮತ್ತು ಬಡವರ ಕಷ್ಟಗಳು ಎಂತಹದು ಎಂದು ತಿಳಿಯುತ್ತದೆ" ಎಂದು ಹೇಳುತ್ತಾನೆ‌. ಮಗ ತನ್ನ ಪ್ರಶ್ನೆಗೆ ನಗುತ್ತಾ ಉತ್ತರ ನೀಡಿದ, "ಹೌದು ಅಪ್ಪ. ನನಗೆ ಇಂದು ತಿಳಿಯಿತು ನಾವು ಎಷ್ಟು ಬಡವರು ಎಂದು". ಆಗ ಆ ತಂದೆಗೆ ಸಿಟ್ಟು ಬರುತ್ತದೆ ಕೋಪದಿಂದ ಹೇಳುತ್ತಾನೆ, "ನೀನು ಏನು ಹೇಳುತ್ತಿದ್ದೀಯ ಎಂದು. ಆಗ ಮಗ ಹೇಳುತ್ತಾನೆ "ಇವರ ಊರಲ್ಲಿ ದಟ್ಟವಾದ ಮರಗಳಿವೆ. ಅದರಿಂದ ಇವರು ಗಾಳಿ ಪಡೆಯುತ್ತಾರೆ. ಆದರೆ ನಾವು ಅಷ್ಟು ದೊಡ್ಡ ಮನೆಯಲ್ಲಿ ಪಟ್ಟಣದಲ್ಲಿ ಇದ್ದು ಇದ್ದು ಗಾಳಿಗಾಗಿ ಹಲವು ಯಂತ್ರವನ್ನು ಉಪಯೋಗಿಸುತ್ತೇವೆ ಅದರಲ್ಲಿ ಯೂ ನಾವು ಬಡವರು. ಇವರು ಒಂದು ಚಿಕ್ಕ ಮನೆಯಲ್ಲಿ 10 ರಿಂದ ಹೆಚ್ಚು ಮಂದಿ ಹೆಚ್ಚಾಗಿ ವಾಸಿಸುತ್ತಾರೆ ಆದರೆ ನಾವು ಅಷ್ಟು ದೊಡ್ಡ ಮನೆಯಲ್ಲಿ ಇಬ್ಬರೇ. ಇಲ್ಲಿಯ ಮಕ್ಕಳಿಗೆ ಆಟವಾಡಲು ವಿಶಾಲವಾದ ಮೈದಾನ ಇದೆ. ಆದರೆ ನಮಗೆ ಒಂದಿಷ್ಟು ಜಾಗ ಇಲ್ಲಿಯ ಮಕ್ಕಳಿಗೆ ದೊಡ್ಡ ದೊಡ್ಡ ಕೆರೆಗಳು ಮತ್ತು ನದಿಗಳು ಇವೆ ಈಜಾಡಲು. ಆದರೆ ಪಟ್ಟಣದ ಹುಳುಗಳಾದ ನಮಗೆ ಒಂದಿಷ್ಟು ಜಾಗ. ಇವರು ಹಣದಲ್ಲಿ ಬಡವರಾಗಿರಬಹುದು ಗುಣದಲ್ಲಿ ಶ್ರೀಮಂತರು ಅಲ್ಲವೇ ಅಪ್ಪ. ಧನ್ಯವಾದಗಳು ಅಪ್ಪ. ನೀವು ನನಗೆ ಸತ್ಯದ ಪರಿಚಯ ಮಾಡಿಸಿದ್ದೀರಿ. ಇವರ ಮುಂದೆ ನಾವೆಷ್ಟು ಬಡವರು ಎಂದು." ಹೀಗೆ ಮಗ ಹೇಳಿದ ಕೂಡಲೇ ತಂದೆಯ ಕಣ್ಣಲ್ಲೇ ನೀರು ತುಂಬಿತು. ಮತ್ತು ತಂದೆ ಹೇಳಿದರು ಹೌದು ನಾವು ಇವರ ಸಂತೋಷದ ಮುಂದೆ ತುಂಬಾ ಬಡವರು. ಎಂದು ಮಾರನೇ ದಿನ ತಂದೆ ಮತ್ತು ಮಗ ತಮ್ಮ ಮನೆಗೆ ಹಿಂತಿರುಗಿದರು. ಅಂದಿನಿಂದ ತಂದೆ ಬಡವರಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು ಮತ್ತು ಎಂದೂ ಅಹಂ ಪಟ್ಟು ಕೊಳ್ಳುತ್ತಿರಲಿಲ್ಲ.
................................................... ಜಯಶ್ರೀ 
8ನೇ ತರಗತಿ
ಸರಕಾರಿ ಪ್ರೌಢಶಾಲೆ ಸರ್ವೆ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                    
ಸಂಪಿಗೆ ಎಂಬ ಒಂದೂರು. ಆ ಊರಿಗೊಬ್ಬ ಗೌಡ. ಇಡೀ ಊರಿನಲ್ಲಿ ಅವನ ಮಾತಿಗೆ ಎದುರಾಡುತ್ತಿರಲಿಲ್ಲ. ದವಸ ಧಾನ್ಯ ಹಣಕ್ಕಾಗಿ ಅವನ ಅಂಗಳದಲ್ಲಿ ಜನರಿರುತ್ತಿದ್ದರು. ಕೂಲಿ ಮಾಡಿ ಸಾಲ ತೀರಿಸಬೇಕಿತ್ತು. ಅವರ ಮನೆಯ ಅಡುಗೆ ಕೆಲಸದವಳು ಗಿರಿಜಾ. ಅವಳಿಗೆ ಒಬ್ಬಳು ಮಗಳಿದ್ದಳು ಮಲ್ಲಿ. ಗೌಡರಿಗೂ ಒಬ್ಬಳು ಮಗಳಿದ್ದಳು, ಅವಳೇ ಸರಸ್ವತಿ. ಮಲ್ಲಿ ಸರಸ್ವತಿ ಊರಿನ ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಒದುತ್ತಿದ್ದರು. ಸರಸ್ವತಿಗೆ ಪ್ರತೀ ದಿನ ತರತರವಾದ ಬಟ್ಟೆ, ಪೆನ್ನು, ಪುಸ್ತಕ ನೀರಿನ ಕ್ಯಾನು ಹೀಗೆ ವಿಧ ವಿಧವಾದ ವಸ್ತುಗಳನ್ನು ತರುತ್ತಿದ್ದಳು. ಆದರೆ ಮಲ್ಲಿ ಗೆ ಇದಾವುದೂ ಇರಲಿಲ್ಲ. ಸರಸ್ವತಿ ಉಪಯೊಗಿಸಿ ಬಿಸಾಡಿದ ಪೆನ್ನು ಪುಸ್ತಕಗಳೇ ಓದಲು ಆಧಾರವಾಗಿದ್ದವು. ಮಧ್ಯಾಹ್ನದ ಊಟಕ್ಕೆ ಒಂದು ಲೋಟ ನೀರು ಬಿಟ್ಟರೆ ಬೆರೇನು ಇರಲಿಲ್ಲ. ಆದರೆ ಸರಸ್ವತಿ ವಿಧವಿಧವಾದ ತಿನಿಸು ತಂದು ಗೆಳೆಯರಿಗೆಲ್ಲ ಕೊಟ್ಟು ತಿನ್ನುತಿದ್ದಳು. ಆದರೆ ಮಲ್ಲಿ ಅವಳಿಗೆ ಸರಿ ಹೋಗುತ್ತಾ ಇರಲಿಲ್ಲ. ಕೆಲಸದವಳ ಮಗಳೆಂದು ತಾತ್ಸಾರ ಮಾಡುತ್ತಿದ್ದಳು. ಮಲ್ಲಿ ತನ್ನ ಅಮ್ಮನ ಅನಾರೊಗ್ಯದ ಕಾರಣ ತನ್ನ ಮನೆಯಂಗಳದಲ್ಲಿ ಬೆಳೆದ ಕನಕಾಂಬರ ದುಂಡುಮಲ್ಲಿಗೆ ಹೂಗಳನ್ನು ಕಟ್ಟಿ ದಾರಿಬೀದಿಯಲ್ಲಿ ಹೂಮಾರಿ ಅದರಲ್ಲಿ ಬಂದ ಸ್ವಲ್ಪ ಹಣದಲ್ಲಿ ಅಮ್ಮನಿಗೆ ಔಷಧಿ ಹಾಗೂ ಇಬ್ಬರಿಗೂ ಒಂದೊತ್ತಿನ ಗಂಜಿ ಊಟಕ್ಕೆ ಸರಿಯಾಗುತ್ತಿತ್ತು. ಅಪ್ಪ ದೂರದ ಊರಿನಲ್ಲಿ ಕೂಲಿಮಾಡುತ್ತಿದ್ದ ಕಾರಣ ಅಮ್ಮ ಮಗಳು ಮಾತ್ರ ಮನೆಯಲ್ಲಿದ್ದರು. ಆದರೂ ಮಲ್ಲಿ ಓದುವುದರಲ್ಲಿ ಯಾವಾಗಲೂ ಮುಂದಿದ್ದಳು. ಈಗ ಮಲ್ಲಿ ಹತ್ತನೆ ತರಗತಿ ಓದುತ್ತಿದ್ದಳು. ಮನೆಯಲ್ಲಿ ಎಣ್ಣೆ ದೀಪದಲ್ಲಿ ಓದುವ ಮಲ್ಲಿ ಅಮ್ಮನಿಗೆ ತೊಂದರೆಯಾಗಬಾರದೆಂದು ದೀಪವಾರಿಸಿ ಬೀದಿ ದೀಪದಡಿ ಕುಳಿತು ಓದಲು ಪ್ರಾರಂಬಿಸಿದಳು. ಶಾಲೆಯ ಗುರುಗಳು ಓದಿನ ಮಹತ್ವದ ಬಗ್ಗೆ ಆಗಾಗ ತಿಳಿಸುತ್ತಿದ್ದರು. ತನ್ನ ಹಾಗೂ ಅಮ್ಮನ ಕಷ್ಟಗಳಿಗೆ ಪರಿಹಾರ ನನ್ನ ಓದು ಎಂದು ತಿಳಿದು ಮಲ್ಲಿ ಓದಿನಲ್ಲಿ ತುಂಬಾ ಶ್ರಮವಹಿಸುತ್ತಿದ್ದಳು. ಸರಸ್ವತಿ ಗುರುಗಳನ್ನು ಮನೆಗೆ ಕರೆಸಿ ವಿಶೇಷ ತರಗತಿಗಳನ್ನು ಮಾಡಿಸಿಕೊಂಡು ಓದುತ್ತಿದ್ದಳು. ಬೆಳಿಗ್ಗೆ ಆರು ಗಂಟೆಯ ನಂತರ ಏಳುತ್ತಿದ್ದಳು. ಮಲ್ಲಿ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಎದ್ದು ವಿದ್ಯಾಬ್ಯಾಸ ಪ್ರಾರಂಭಿಸುತ್ತಿದ್ದಳು. ಹೀಗೆ ಪರೀಕ್ಷೆ ಮುಗಿಯಿತು. ಪಲಿತಾಂಶ ದ ದಿನ, ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಗೌಡರ ಮನೆ ಎದುರು ದೊಡ್ಡ ಜನಸಾಗರವೇ ಕಾದಿತ್ತು. ಇದಾವುದರ ಅರಿವಿಲ್ಲದೆ ಮಲ್ಲಿ ಅಮ್ಮನ ಜೊತೆ ಹಿತ್ತಲಲ್ಲಿ ನೆಟ್ಟಿರುವ ಕಲ್ಲಂಗಡಿ ಹಣ್ಣಿನ ಗಿಡಕ್ಕೆ ನೀರು ಹಾಕುತ್ತಿದ್ದಳು. ಮನೆ ಚಿಕ್ಕದಾದರೂ ಅಂಗಳದಲ್ಲಿ ಹೂವಿನ ಗಿಡಗಳು ನಳನಳಿಸುತ್ತಿತ್ತು. ಪಕ್ಕದ ಮನೆ ವನಜಾಕ್ಷಿ ಕೇಳಿದಳು, "ಮಲ್ಲಿ ಯಾಕಮ್ಮ ನಿನ್ನ ಪಲಿತಾಂಶ ನೋಡುವುದಿಲ್ಲವೇ? ಶಾಲೆಗೆ ಹೊಗುವುದಿಲ್ಲವೇ? ಎಂದು ಕೇಳಿದರು. ಆಗ ಗಿರಿಜಾ ಮಗಳನ್ನು ಗಡಿಬಿಡಿಯಲ್ಲಿ ತಯಾರು ಮಾಡಿ ಕಳಿಸಿದಳು.
     ಈಗ ಶಾಲಾ ಗುರುಗಳು ಇವಳ ಮನೆಕಡೆ ದಾರಿ ನೋಡುತ್ತಿದ್ದರು, ಅಂತೂ ಮಲ್ಲಿ ಬಂದಳು, "ಮಲ್ಲಿ ನೀನು ಈ ಸಾರಿ ಉತ್ತಮ ಅಂಕಗಳನ್ನು ಪಡೆದು ಶಾಲೆಯ ಗೌರವ ಹೆಚ್ಚಿಸಿದ್ದೀಯ, ಹಾಗಾಗಿ ನಿನಗೆ ಅಭಿನಂದನೆಗಳು ಎಂದರು. ಈಗ ಗೌಡರಿಗೆ ಬೇರೆ ದಾರಿಯೇ ಇರಲಿಲ್ಲ. ಸೀದಾ ಮಲ್ಲಿ ಇರುವ ಶಾಲೆಗೆ ಬಂದರು. ಪೇಟ ತುರಾಯಿಯನ್ನು ಮಲ್ಲಿ ಗೆ ಹಾಕಿ ಸಂಭ್ರಮಿಸಿದರು. ಇಡೀ ಊರಿಗೆ ಊರೇ ಕೊಂಡಾಡಿತ್ತು ಮಲ್ಲಿಯನ್ನು. ಸರಸ್ವತಿ ಕೂಡ ಮಲ್ಲಿ ಗೆ ಶುಭಾಶಯಗಳನ್ನು ತಿಳಿಸಿದಳು. ಈಗ ಊರಿನವರಿಗೆಲ್ಲ ಅರ್ಥವಾದದ್ದೊಂದೆ, ವಿದ್ಯೆ ಯಾವುದೇ ಆಡಂಬರದಲ್ಲಿ ಇಲ್ಲ. ಯಾವುದೇ ವಿಶೇಷ ವಸ್ತುಗಳಲ್ಲಿಲ್ಲ. ನಮ್ಮ ಶ್ರಮದಲ್ಲಿದೆ. ನಮ್ಮ ಏಕಾಗ್ರತೆಯಲ್ಲಿದೆ. ನಮ್ಮ ಸಂಕಲ್ಪದಲ್ಲಿದೆ. ನಮ್ಮ ಗುರಿಯಲ್ಲಿದೆ ಎಂದು.
............................ ಸಿಂಧು ಜಿ ಭಟ್, ಕಲ್ಕಾರ್
7ನೇ ತರಗತಿ,
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                   

ಒಂದೂರಲ್ಲಿ ಒಂದು ಚಿಕ್ಕ ಬ್ರಾಹ್ಮಣ ಕುಟುಂಬವಿತ್ತು. ಆ ದಂಪತಿಗಳಿಗೆ ಮೂರು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳು, ಚಿಕ್ಕವಳು ಚಂದ್ರಮತಿ. ಅವಳು ಸ್ವಲ್ಪ ಕಪ್ಪಾಗಿದ್ದಳು. ದಪ್ಪವಿದ್ದಳು, ಯಾರೊಂದಿಗೂ ಸೇರುತ್ತಿರಲಿಲ್ಲ, ಒಬ್ಬಂಟಿಯಾಗಿರುತ್ತಿದ್ದಳು. ಅವಳಿಗೆ ಅಸಹನೆ ಇತ್ತು ಸಂತೋಷವಿರಲ್ಲಿಲ್ಲ. ಇದೇ ಸಂದರ್ಭದಲ್ಲಿ ಅವಳ ದೊಡ್ಡ ಅಣ್ಣನಿಗೆ ಸುಂದರವಾದ ಬಿಳಿಯ ಹೆಂಡತಿ ಮದುವೆಯಾಗಿ ಬಂದಳು. ತೆಳ್ಳಗೆ ಬೆಳ್ಳಗೆ ಇರುವ ಅತ್ತಿಗೆಯನ್ನು ಕಂಡರೆ ಚಂದ್ರಮತಿಗೆ ಆಗುತ್ತಿರಲಿಲ್ಲ. ಅತ್ತಿಗೆಗೆ ತುಂಬಾ ಗೋಳು ಕೊಡುತ್ತಿದ್ದಳು. ಆದರೂ ಅದನ್ನೆಲ್ಲಾ ಸಹಿಸಿದ ಅತ್ತಿಗೆ ಅತ್ತೆ ಮತ್ತು ನಾದಿನಿಯನ್ನು ತುಂಬಾ ಪ್ರೀತಿಯಿಂದ ನೋಡಿ ಕೊಳ್ಳುತ್ತಿದ್ದಳು. ಚಂದ್ರಮತಿ ತಾನು ತಪ್ಪು ಮಾಡಿ ಅತ್ತಿಗೆಯ ಮೆಲೆ ತಪ್ಪು ಹೊರಿಸಿ ಖುಷಿಪಡುತ್ತಿದ್ದಳು. ಚಂದ್ರಮತಿಗೆ ಯಾವ ಗಂಡೂ ಒಪ್ಪುತ್ತಿರಲಿಲ್ಲ. ಅಂದಾಜು ನಲವತ್ತೈದು ಗಂಡುಗಳು ನೋಡಿ ಬೇಡವೆಂದಿದ್ದರು. ಆಗ ಅತ್ತಿಗೆ ತನ್ನ ತವರೂರಲ್ಲಿ ತುಂಬಾ ವಿಚಾರಿಸಿ ಒಂದು ಗಂಡು ಆಯ್ಕೆಮಾಡಿ ತನ್ನ ಪತಿಯಲ್ಲಿ ತಿಳಿಸಿ ಮದುವೆ ಮಾಡಿಸಿದಳು. ಈಗ ಚಂದ್ರಮತಿ ತುಂಬಾ ಖುಷಿಯಿಂದ ಇದ್ದಳು. ಅಲ್ಲಿಯೂ ಅವಳಿಗೆ ಗಂಡನ ತಂಗಿಯರು ಕಿರುಕುಳ ಕೊಡಲಾರಂಬಿಸಿದರು. ಆಗ ಚಂದ್ರಮತಿಗೆ ಅರ್ಥವಾಯಿತು. ನಾನು ಎಷ್ಟೊಂದು ತಪ್ಪುಮಾಡಿದ್ದೇನೆ. ನಮ್ಮ ಮನೆಯನ್ನು ನಂಬಿ ಬಂದಿರುವ ಅತ್ತಿಗೆಗೆ ಎಷ್ಟು ನೋವಾಗಿರಬಹುದು? ಈಗ ನಾನು ಅದೇ ಸ್ಥಿತಿಯಲ್ಲಿದ್ದೇನೆ. ನನ್ನಲ್ಲಿ ಒಳ್ಳೆ ಗುಣವಿದ್ದಿದ್ದರೆ ಒಳ್ಳೆಯ ಗಂಡನ ಮನೆ ಸಿಗುತ್ತಿತ್ತು ಎಂದು ದುಃಖಿಸಿದಳು. 
     ನಾವು ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ದೇವರು ನಮಗೆ ಒಳ್ಳೆಯದನ್ನೆ ಮಾಡುತ್ತಾರೆ. (ಇದು ನನ್ನ ಅಮ್ಮ ಹೇಳುವ ಕಥೆಯನ್ನಾದರಿಸಿ ಬರೆದ ವ್ಯತೆ ಕಥೆ)
............................ ಸಿಂಧು ಜಿ ಭಟ್, ಕಲ್ಕಾರ್
7ನೇ ತರಗತಿ,
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
          


ದೇವಪುರ ಎಂಬ ಒಂದು ಪುಟ್ಟ ಊರು. ಅಲ್ಲಿ ಗೋಪಾಲ ಎಂಬ 13 ವರ್ಷದ ಹುಡುಗ ಇದ್ದ. ಅವನಿಗೆ ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯಲ್ಲಿ ಬಹಳ ಆಸಕ್ತಿ ಇತ್ತು. ಆದರೆ ಅವನ ಮನೆಯವರು ಹೆಚ್ಚು ಆಸಕ್ತಿ ತೋರುತ್ತಾ ಇರಲ್ಲಿಲ್ಲ. ಅವನ ಹತ್ತಿರದ ಒಂದು ಮಂದಿರದಲ್ಲಿ ಯಕ್ಷಗಾನವನ್ನು ಕಲಿಸುತ್ತಿದ್ದರು. ಆದರೆ ಕಲಿಯಲು ಹಣವಿಲ್ಲ. ಮನೆಯವರ ಹತ್ತಿರ ಕೇಳಿದರೆ ಕೊಡುವುದಿಲ್ಲ. ಆದರೆ ಗೋಪಾಲ ಸೋಲು ಒಪ್ಪಲಿಲ್ಲ. ತರಬೇತಿ ನೀಡುವಲ್ಲಿಗೆ ಹೋಗಿ ಹೊರಗಿನಿಂದ ಅದನ್ನು ಅಭ್ಯಾಸ ಮಾಡುತ್ತಿದ್ದ. ಹೀಗೆ 8 ವರ್ಷಗಳು ಕಳೆದವು. ಅವನು ಹೊರಗೆ ನಾಟ್ಯ ಮಾಡುವಾಗ ರಂಗಣ್ಣ ಎಂಬ ಹಿರಿಯರು ಅವನ್ನನು ನೋಡಿ ಅವನನ್ನು ಕರೆದುಕೊಂಡು ಹೋಗಿ ಎಲ್ಲ ವಿಚಾರಿಸಿದರು. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಇದ್ದ ಗೋಪಾಲನನ್ನು ವೇಷ ಪಾತ್ರಧಾರಿಯಾಗಿ ವೇದಿಕೆಯಲ್ಲಿ ಮಿಂಚಿಸಿದರು. ಈಗ ದೊಡ್ಡ ದೊಡ್ಡ ವೇಷ ಪಾತ್ರಧಾರಿಯಾಗಿ ದೇಶ ವಿದೇಶದಲ್ಲಿ ಮಿಂಚಿದ್ದಾರೆ. ಇವನ ಪರಿಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಂದರೆ ಮನಸಿದ್ದರೆ ಏನು ಬೇಕಾದರೂ ಸಾದಿಸಬಹುದೆಂದು ಇವನು ತೋರಿಸಿಕೊಟ್ಟಿದ್ದಾನೆ.
................................................... ದಿಶಾನ್ ರೈ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಇರ್ದೆ, ಉಪ್ಪಳಿಗೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
    

                 

ಒಂದು ಊರಿನಲ್ಲಿ ಯೋಗೀಶ್ ಎಂಬಾತ ಇದ್ದ. ಅವನು ಯಾವಾಗಲೂ ತನ್ನ ಶಾಲೆಗೆ ರಜೆ ಹಾಕದೆ ಹೋಗುತ್ತಿದ್ದ. ಆದರೆ ಅವನಿಗೆ ಓದಲು, ಬರೆಯಲು ಬರುತ್ತಿರಲಿಲ್ಲ. ಆದರೆ ಅವನ ಜೊತೆಗಿದ್ದ ಸ್ನೇಹಿತ ಶಾಲೆಗೆ ದ್ವಿತೀಯ ಸ್ಥಾನ ಬಂದಿದ್ದ. ಅವನ ಹೆಸರು ರಘು. ಅವನು ತುಂಬಾ ಒಳ್ಳೆಯವನು. ಯೋಗೀಶ್ ಗೆ ಸಹಾಯ ಮಾಡುತ್ತಿದ್ದ. ಆದರೆ ಇಲ್ಲಿ ಒಬ್ಬ ಅಹಂಕಾರಿ ಇದ್ದ. ಚೆನ್ನಾಗಿ ಓದುತ್ತಿದ್ದ. ಅತ್ಯಧಿಕ ಮಾರ್ಕು ಗಳಿಸುತ್ತಿದ್ದ. ಅವನು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದ. ಯೋಗೀಶನನ್ನು ನೋಡಿ ಹೀಯಾಳಿಸಿ, ಅವಮಾನ ಮಾಡುತ್ತಿದ್ದ. ಅವನಿಗಿಂತ ಚೆನ್ನಾಗಿ ಓದುವವರು ಯಾರು ಇಲ್ಲ ಎಂದು ಅಂದುಕೊಂಡಿರಬಹುದೇನೋ. ಪರೀಕ್ಷೆಯ ಸಮಯ ಬಂದೆ ಬಿಟ್ಟಿತು. ಪರೀಕ್ಷೆ ಆಯಿತು. ರಿಸಲ್ಟ್ ದಿನವೂ ಬಂತು. ಅಹಂಕಾರಿ ಎಲ್ಲರ ಹತ್ತಿರ ಕೊಚ್ಚುತ್ತಿದ್ದ. ಆದರೆ ಕೊನೆಗೆ ಟಾಪ್ ಬಂದದ್ದು ನಮ್ಮ ಯೋಗೀಶ್. ಅಹಂಕಾರಿ ಗೆ ತುಂಬಾ ದೊಡ್ಡ ಆಘಾತವಾಗುತ್ತದೆ. ಅವನು ಟಾಪ್ ಬರಲು ಕಾರಣವಾದವನೆ ಅವನ ಸ್ನೇಹಿತ ರಘುವಿನಿಂದಾಗಿ. ಅಹಂಕಾರಿ ಯ ಎಲ್ಲಾ ಸೊಕ್ಕು ಮುರಿದು ಹೋಯಿತು. ಹೀಗೆ ಯೋಗೀಶ್ ಚಂದ ಬರೆಯಲು, ಓದಲು ಕಲಿಯುತ್ತಾನೆ. ಹೀಗೆ ಖುಷಿಯಾಗಿ ಇರುತ್ತಾನೆ...
..................................................... ದಿಶಾನ್ ರೈ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಇರ್ದೆ, ಉಪ್ಪಳಿಗೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

      

ಜೋಗಿಪುರ ಎಂಬ ಒಂದು ಪುಟ್ಟ ಊರು. ಅಲ್ಲಿ ಎಲ್ಲಾ ಜನರು ಖುಷಿಯಿಂದ ಇರುತ್ತಾರೆ. ಅಲ್ಲಿ ಒಂದು ದೊಡ್ಡದಾದ ಆಲದ ಮರವಿರುತ್ತದೆ. ಅದರಲ್ಲಿ ಎರಡು ಗುಬ್ಬಚ್ಚಿಗಳಿರುತ್ತವೆ. ತುಂಬಾ ಮುದ್ದಾಗಿರುತ್ತವೆ. ಅದು ಒಂದು ಮುದ್ದಾದ ಮರಿಗೆ ಜನ್ಮ ನೀಡುತ್ತದೆ. ಒಂದು ದಿನ ಜೋರು ಗಾಳಿ, ಮಳೆ, ಗುಡುಗು, ಮಿಂಚು ಎಲ್ಲಾ ಒಂದೇ ಸಮ ಬರುತ್ತಾನೆ ಇತ್ತು. ಅದರಲ್ಲಿದ್ದ ಎಲ್ಲಾ ಹಕ್ಕಿಗಳು ಹಾರಲು ಸಿದ್ಧರಾಗಿರುತ್ತವೆ. ಆದರೆ ಮರಿ ಹಕ್ಕಿ ಮಾತ್ರ ಮರದ ಕೊಂಬೆಯ ಮೇಲೆ ನಿಂತಿತ್ತು. ಅದರ ತಂದೆ ಅದರ ಬಳಿ, "ನೀನು ಈ ಕೊಂಬೆಯನ್ನು ನಂಬಿ ಇಲ್ಲಿ ನಿಲ್ಲುವೆಯ ಎಂದು .." ಆಗ ಆ ಹಕ್ಕಿ ಹೇಳಿತು "ನಾನು ಈ ಕೊಂಬೆಯನ್ನು ನಂಬಿ ಇಲ್ಲಿ ಕೂರಲಿಲ್ಲ ನನ್ನ ಎರಡೂ ಬಲಶಾಲಿ ರೆಕ್ಕೆಗಳ ಮೇಲೆ ನಂಬಿಕೆ ಇಟ್ಟಿದೇನೆಂದು. ಕೊಂಬೆಗಳು ಮುರಿದರೆ ರೆಕ್ಕೆಗಳ ಸಹಾಯದಿಂದ ಹಾರಿ ಹೋಗುವೇನೆಂದು.." ಇದರಿಂದ ಗೊತ್ತಾಗುತ್ತದೆ ಬೇರೆಯವರ ಮೇಲೆ ಯಾವತ್ತೂ ನಂಬಿಕೆ ಇಡಬಾರದು. ನಮ್ಮ ಮೇಲೆ ನಾವು ನಂಬಿಕೆ ಇಡಬೇಕೆಂದು..
.................................................. ದಿಶಾನ್ ರೈ 
9ನೇ ತರಗತಿ
ಸರಕಾರಿ ಪ್ರೌಢಶಾಲೆ ಇರ್ದೆ, ಉಪ್ಪಳಿಗೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                
ಇದೊಂದು ನಮ್ಮ ಅಜ್ಜ ಹೇಳಿದ ಕಥೆ. ಈಗ ಅವರಿಲ್ಲ. ಅದು ನನ್ನೊಳಗೆ ಉಳಿಯ ಬಾರದೆಂದು, ನಿಮ್ಮ ಮುಂದೆ ಕಥೆಯಾಗಿ ಇಡುತ್ತಿದ್ದೇನೆ.  
      ನೀವೆಲ್ಲರೂ ಕೊಡಗಿನ ಸೋಮವಾರಪೇಟೆ ಸಾಕಮ್ಮನ ಬಗ್ಗೆ ಕೇಳಿರಬಹುದು. ಅವರ ಬಗ್ಗೆ ಕಥೆ ಹಾಗೂ ಅವರ ಜೀವನ ಚರಿತ್ರೆ ಕೇಳಿರಬಹುದು. ಆದರೆ ಅಲ್ಲಿ ಎಲ್ಲಿಯೂ ಇದೊಂದು ವಿಷಯ ಅಂದರೆ ನಾನು ಈಗ ಹೇಳುವ ಸಂಗತಿ ಉಲ್ಲೇಖ ಆಗಿಲ್ಲ. ಹಾಗಾಗಿ ಅವರ ಬಗೆಗಿನ ಈ ವಿಷಯ ಹೇಳುತಿರೋದು ನಾನೆ ಮೊದಲಿಗಳು ಅಂದುಕೊಂಡಿದ್ದೀನಿ. 
      ಸ್ವತಂತ್ರ ಪೂರ್ವ ದಲ್ಲಿ ಕೊಡಗಿನ ಸೋಮವಾರಪೇಟೆ ಯಲ್ಲಿ ಸಣ್ಣ ಪ್ರಾಂತ್ಯ ವನ್ನಾಗಿ ಆಳುತಿದ್ದವರೇ ಈ ಸಾಕಮ್ಮ. ನೀವು ಈಗಲೂ ಸೋಮವಾರ ಪೇಟೆಗೆ ಬಂದರೆ ಅವರ ಬಂಗಲೆ ಹಾಗೆಯೇ ಇದೆ ನೋಡಬಹುದು. ಇವರು ಆ ಕಾಲದಲ್ಲಿಯೇ ನೂರಾರು ಎಕರೆ ಕಾಫಿ ತೋಟ ಮಾಡಿ ಕಾಫಿ ಯನ್ನು ಮಂಗಳೂರು ಮುಖಾಂತರ ರಫ್ತು ಮಾಡುತ್ತಿದ್ದರಂತೆ. ನೋಡಿ ಈಗ ಈ ಕಥೆಯ ವಿಷಯ ಬರೋದು ಸಾಕಮ್ಮ ನವರು ಬೆಳೆದ ಕಾಫಿ ಮಂಗಳೂರಿಗೆ ಸಾಗಿಸಲು ಆಗೆಲ್ಲ ಯಾವುದೇ ವಾಹನ ಇರಲಿಲ್ಲ. ಬರೀ ಎತ್ತಿನ ಗಾಡಿ ಯಲ್ಲಿ ಮಂಗಳೂರು ತಲುಪ ಬೇಕಿತ್ತು. ಜೊತೆಗೆ ಮಣ್ಣಿನ ರಸ್ತೆ. ಯಾರನ್ನ ಕೇಳ್ತಾರೆ ಸಾಕಮ್ಮ ನವರು ಜೊತೆಗೆ ಬ್ರಿಟಿಷರ ಆಳ್ವಿಕೆ ಬೇರೆ. ಹೀಗಿರಲು ಒಮ್ಮೆ ಸಾಕಮ್ಮ ಬ್ರಿಟಿಷ್ ಅಧಿಕಾರಿ ಹತ್ತಿರ ಕೇಳ್ತಾರೆ ನಮಗೆ ಸೋಮವಾರಪೇಟೆ ಯಿಂದ ಮಂಗಳೂರು ತನಕ ಜೆಲ್ಲಿ ರಸ್ತೆ ಮಾಡಿಸಿ ಕೊಡಿ ನಾವು ನಿಮಗೆ ತೆರಿಗೆ ಕಟ್ಟುತಿಲ್ಲವೇ ಎಂದರು. ಆಗ ಬ್ರಿಟಿಷ್ ಅಧಿಕಾರಿಗಳು ಇವರನ್ನು ನೋಡಿ ಹಾಸ್ಯ ಮಾಡುತ್ತ ನಗುತ್ತಾರೆ. ರಸ್ತೆ ಅದುವೇ ಜೆಲ್ಲಿ ರಸ್ತೆ ಮಂಗಳೂರು ತನಕ ಸಾಧ್ಯ ವಿಲ್ಲ ಎಂದು ಬಿಡುತ್ತಾರೆ. ಆಗ ಸಾಕಮ್ಮ ನವರಿಗೆ ಎಲ್ಲಿಲ್ಲದ ಕೋಪ ಬಂದು ಬ್ರಿಟಿಷ್ ನವರಿಗೆ ಹೇಳ್ತಾರೆ, "ನನ್ನನ್ನು ಈ ರೀತಿ ಕೀಳಾಗಿ ನೋಡಬೇಡಿ ನಾನು ಮನಸ್ಸು ಮಾಡಿದ್ರೆ ಬೆಳ್ಳಿ ರೂಪಾಯಿ ಗಳನ್ನೇ ರಸ್ತೆಗೆ ಹಾಕಿ ಮಂಗಳೂರು ತನಕ ಬೆಳ್ಳಿ ರಸ್ತೆ ಮಾಡಬಲ್ಲೆ" ಎಂದರಂತೆ (ಅವರ ಕಾಲದಲ್ಲಿ ಇತಿಹಾಸದ ಪ್ರಕಾರ ಬೆಳ್ಳಿ ರೂಪಾಯಿ ಚಾಲ್ತಿಯಲ್ಲಿ ಇತ್ತು) ಈ ಕಥೆ ಸಾರಾಂಶ ನಮ್ಮ ದೇಶ ಸ್ವತಂತ್ರ ಪೂರ್ವದಲ್ಲಿಯೇ ಎಷ್ಟು ಶ್ರೀಮಂತ ಆಗಿತ್ತು. ಹಾಗೂ ಭಾರತೀಯರು ಎಷ್ಟೊಂದು ಸ್ವಾಭಿಮಾನಿ ಗಳಾಗಿದ್ದರು ಎಂದು.
............................... ಪ್ರಾರ್ಥನಾ ಗೌಡ ಎಚ್ ಡಿ       
9ನೇ ತರಗತಿ  
ಮುರಾರ್ಜಿ ವಸತಿ ಶಾಲೆ
ಬ್ಯಾಕರವಳ್ಳಿ ಸಕ್ಲೇಶಪುರ 
ಹಾಸನ ಜಿಲ್ಲೆ.
******************************************


                  
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿ ಇತ್ತು. ಆ ಹಳ್ಳಿಯ ಹೆಸರು ರಾಂಪುರ. ಅದೇ ಹಳ್ಳಿಯ ಪಕ್ಕ ಒಂದು ದಟ್ಟವಾದ ಕಾಡಿತ್ತು. ಆ ಕಾಡಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಜೀವ ಜಂತುಗಳು ವಾಸಿಸುತ್ತಿದ್ದವು. ಅಲ್ಲಿ ತುಂಬಾ ಮರಗಳಿದ್ದವು. ಆ ಮರಗಳ ಮೇಲೆ ಅಳಿಲುಗಳು ವಾಸಿಸುತ್ತಿದ್ದವು. ಅದು ಅವುಗಳ ರಾಜ್ಯವಾಗಿತ್ತು. ಆ ರಾಜ್ಯದಲ್ಲಿ ಚಕ್ರವರ್ತಿ ಹೆಸರಿನ ರಾಜನಿದ್ದನು. ಅವನಿಗೆ ವಯಸ್ಸಾಗುತ್ತಿದ್ದಂತೆ ಅವನು ಒಂದು ದಿನ ತನ್ನ ಮಂತ್ರಿಗಳನ್ನು ಸಭೆ ಕರೆದು, ಆ ಸಭೆಯಲ್ಲಿ ಅವನು ಈಗ ನನಗೆ ವಯಸ್ಸಾಗುತ್ತಿದೆ, ಹಾಗಾಗಿ ಮುಂದಿನ ರಾಜ ಯಾರಾಗಬೇಕು ಎಂದು ತೀರ್ಮಾನಿಸಲು ಸ್ಪರ್ಧೆ ಏರ್ಪಡಿಸೋಣ ಎಂದು ಚರ್ಚಿಸುತ್ತಾರೆ. ಆ ಚರ್ಚೆಯಂತೆ ಸ್ಪರ್ಧೆಯನ್ನು ಏರ್ಪಡಿಸಿದರು. ಆ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿದ್ದು, ಅವುಗಳು ಸಾಮಾನ್ಯ ಜ್ಞಾನ ಮತ್ತು ಶಕ್ತಿ ಪ್ರದರ್ಶನ. ಆ ಎರಡು ಸ್ಪರ್ಧೆಯನ್ನು ಗೆದ್ದಿರುವ ಸೋಮು ಮುಂದಿನ ರಾಜನಾಗಿ ಅಳಿಲುಗಳ ರಾಜ್ಯವನ್ನು ಆಳಿದನು. 
......................................................... ವಚನ್ ಸಿ
4ನೇ ತರಗತಿ 
ಪೋದಾರ್ ಇಂಟರ್ನ್ಯಾಷನಲ್ 
ಸ್ಕೂಲ್ ಮಂಡ್ಯ.
******************************************

             

ಒಂದು ಕಾಡಿನಲ್ಲಿ ಒಂದು ಹುಲಿ ಮತ್ತು ನವಿಲು ಇತ್ತು. ಎರಡೂ ಕೂಡಾ ಸುಂದರವಾದ ಸ್ನೇಹಿತರಾಗಿದ್ದವು. ಒಂದು ದಿನ ಹುಲಿಗೆ ಒಂದು ಕೆಟ್ಟ ಯೋಚನೆ ಬಂದಿತು. ಆ ನವಿಲನ್ನು ನಾನು. ಒಂದು ದಿನ ತಿಂದು ಬಿಡುತ್ತೇನೆ ಎಂದು ಯೋಚನೆ ಮಾಡಿತು. ಆ ಮಾಂಸವನ್ನು ತಿಂದರೆ ರುಚಿಯಾಗಿರುತ್ತದೆ ಎಂದು ಯೋಚನೆ ಮಾಡಿತು. ಒಂದು ದಿನ ಹುಲಿ ನವಿಲನ್ನು ದೂರ ಕರೆ ದುಕೊಂಡು ಹೋಯಿತು. ನವಿಲು ನಿಂತಿತು. ನವಿಲು ಹೇಳಿತು. ನಾವು ತುಂಬಾ ದೂರ ಬಂದು ಬಿಟ್ಟಿದ್ದೇವೆ. ಹೌದು ದೂರ ಬಂದು ಬಿಟ್ಟಿದ್ದೇವೆ. ಈಗ ತಿನ್ನುವ ಕ್ಷಣ ಬಂದಿತ್ತು. ಆಗ ಹುಲಿಯ ಕಾಲಿಗೆ ಮುಳ್ಳು ಚುಚ್ಚಿತು. ಆಗ ಹುಲಿಯ ಕಾಲಿಂದ ರಕ್ತ ಬರಲು ಪ್ರಾರಂಭವಾಯಿತು. ನವಿಲು ಹುಲಿಯ ಕಾಲಿಗೆ ಔಷಧಿ ಹಚ್ಚಿತು. ಆಗ ಹುಲಿಗೆ ತನ್ನ ತಪ್ಪಿನ ಅರಿವಾಯಿತು.
............................................... ರಶ್ಮಿ ಎಂ
5ನೇ ತರಗತಿ
******************************************


Ads on article

Advertise in articles 1

advertising articles 2

Advertise under the article