ಪಯಣ : ಸಂಚಿಕೆ - 43 (ಬನ್ನಿ ಪ್ರವಾಸ ಹೋಗೋಣ)
Thursday, May 15, 2025
Edit
ಪಯಣ : ಸಂಚಿಕೆ - 43 (ಬನ್ನಿ ಪ್ರವಾಸ ಹೋಗೋಣ)
ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್‌ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ ಕೃಷ್ಣರಾಜ ಸಾಗರ ಗ್ರಾಮದ ಹಿಂಭಾಗದಲ್ಲಿ ಈ 'ಅರಮನೆ ಕಟ್ಟೆ' ಅಲಿಯಾಸ್ 'ಬ್ಲೂ ಲಗೂನ್' ಸಿಗುತ್ತದೆ.
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಇಂದಿನ ಪ್ರವಾಸದಲ್ಲಿ ಮೈಸೂರು ಜಿಲ್ಲೆಯ ಪ್ರಸಿದ್ಧ ಪಿಕ್ ನಿಕ್ ಸ್ಪಾಟ್ ಆದ ಬ್ಲೂ ಲಗೂನ್ (ಅರಮನೆ ಕಟ್ಟೆ) ಗೆ ಪಯಣ ಮಾಡೋಣ ಬನ್ನಿ....
ಮೈಸೂರಿಂದ ಕೆ ಆರ್ ಎಸ್ ರಸ್ತೆ ಮಾರ್ಗವಾಗಿ ಸುಮಾರು 15 ಕಿಲೋಮೀಟರ್ ಸಾಗಿದರೆ, ಕೃಷ್ಣರಾಜಸಾಗರ ಗ್ರಾಮ ಸಿಗುತ್ತದೆ. ಎಡಕ್ಕೆ ಸಾಗಿದರೆ ಮಲ್ಲೇಗೌಡನ ಕೊಪ್ಪಲು ಗ್ರಾಮ ಸಿಗುತ್ತದೆ. ಅಲ್ಲಿಂದ ಕೊಂಚವೇ ದೂರಕ್ಕೆ ರಸ್ತೆಯ ಬಲಭಾಗಕ್ಕೆ ಮಣ್ಣಿನ ರಸ್ತೆ ಒಳಕ್ಕೆ ಸಾಗುತ್ತದೆ. 4 ಕಿ.ಮೀ. ಸಾಗಿದ ನಂತರ ಬ್ಲೂ ಲಗೂನ್ ಸಿಗುತ್ತದೆ.
ಮೈಸೂರಿಂದ ಕೃಷ್ಣರಾಜ ಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ ಕೃಷ್ಣರಾಜ ಸಾಗರ ಗ್ರಾಮದ ಹಿಂಭಾಗದಲ್ಲಿ ಈ 'ಅರಮನೆ ಕಟ್ಟೆ' (ಬ್ಲೂ ಲಗೂನ್) ಸಿಗುತ್ತದೆ. ಕೆಆರ್‌ಎಸ್ ಅಣೆಕಟ್ಟಿನ ಹಿನ್ನೀರಿನಲ್ಲಿರುವ ಪುಟ್ಟ ದ್ವೀಪವಿದು. ಇಲ್ಲಿಗೆ ತಲುಪುವುದೇ ಒಂದು ಥ್ರಿಲ್ಲಿಂಗ್ ಅನುಭವ. ಕಟ್ಟೆಯಿಂದ ಹಿನ್ನೀರಿನಲ್ಲಿ ಸುಮಾರು 4 ಕಿ.ಮೀ ದೂರದಲ್ಲಿರುವ ಈ ದ್ವೀಪದ ಬಳಿಗೆ ಆಳವಾದ ಕೊರಕಲುಗಳುಳ್ಳ, ಮಣ್ಣಿನ ರಸ್ತೆಯಲ್ಲಿ ಸಾಗಿ ತಲುಪಬೇಕು. ಮಣ್ಣಿನ ರಸ್ತೆ ಪಕ್ಕದಲ್ಲಿ ಸುಮಾರು 50 - 60 ಅಡಿ ಆಳದ ಕಲ್ಲಿನ ಕ್ವಾರಿಗಳಿಗೆ ಎಲ್ಲಿ ಬಿದ್ದು ಬಿಡುತ್ತೇವೋ ಎಂಬ ಭಯದಲ್ಲೇ ಕೊಂಚ ದೂರ ಸಾಗಿದರೆ, ಒಮ್ಮೆಗೆ ಸುತ್ತಮುತ್ತಲಿನ ಪರಿಸರ. ನಾಟಕೀಯವಾಗಿ ಬದಲಾಗಿ, ದೂರದಲ್ಲಿ ಸಮುದ್ರದಂತೆ ಕಾಣುವ ವಿಶಾಲವಾದ ಹಿನ್ನೀರು ಎದುರಾಗುತ್ತದೆ. ಅದರ ಮಧ್ಯೆಯೇ ಅತಿ ಸುಂದರವಾಗಿ ಕಾಣುತ್ತದೆ ಬ್ಲೂ ಲಗೂನ್.
ಇಲ್ಲಿ ತೀರಕ್ಕೆ ಅಲೆಗಳು ಬಂದು ಅಪ್ಪಳಿಸುತ್ತಿರುತ್ತವೆ. ಸಮುದ್ರದಂತೆ ತೀರದಿಂದ ಕೆಲವೇ ನೂರು ಅಡಿಗಳ ದೂರದಲ್ಲಿ ದ್ವೀಪ ನಳನಳಿಸುತ್ತ ನಿಂತಿರುತ್ತದೆ. ಪಾರದರ್ಶಕವಾದ ಪಾಶ್ಚಿಮಾತ್ಯ ಸಮುದ್ರ ತೀರಗಳನ್ನು ನೆನಪಿಸುವ ಗಾಜಿನಂಥ ನೀರು ಇದರ ತೀರದಲ್ಲಿದೆ. ಮರಳ ರಾಶಿಯ ಈ ಬ್ಲೂ ಲಗೂನ್‌ಗೆ ಹಲವು ವಿಶೇಷತೆಗಳಿವೆ.ಇದೊಂದು ಪುಟ್ಟ ದ್ವೀಪ.ಕೆ.ಆರ್.ಎಸ್ ಅಣೆಕಟ್ಟೆಯ ಮೇಲೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಹಸಿರಿನಿಂದ ನಳನಳಿಸುತ್ತಿರುವ ದ್ವೀಪವೇನಾದರೂ ನಿಮ್ಮ ಕಣ್ಣಿಗೆ ಬಿದ್ದರೇ ಅದು ಈ ಬ್ಲೂ ಲಗೂನ್. 15 ಎಕರೆ ಅಗಲದ ಈ ದ್ವೀಪದಲ್ಲಿ ಸಮುದ್ರ ತೀರದಂತೆ ಹರಡಿರುವ ಮೇಲೆ ಬಂದಪ್ಪಳಿಸುವ ಕಾವೇರಿ ನೀರು, ಅಲ್ಲಿರುವ ಕಲ್ಲುಗಳ ಮೇಲೆ ಕುಳಿತು ಕಾಲಾಡಿಸುತ್ತ ಜೀವ ತಣ್ಣಗೆ ಮಾಡಿಕೊಂಡರೆ, ಆಹಾ ! ಎಂಥ ಸ್ವರ್ಗ ಸುಖ ! ಕಾಲೇಜು ಹುಡುಗರಾದರೆ, ಹೆಚ್ಚು ಆಳವೇನೂ ಇಲ್ಲದ, ಕೆಳಗೆ ನಯವಾದ ಮರಳ ರಾಶಿಯಿರುವ ನೀರಿನಲ್ಲಿ ಮುಳುಗಿ, ಈಜಾಡಿ, ಪೂರ್ತಿ ಕೂಳೆ ಮಾಡಿಯೇ ಹೋಗುವುದು.
ಸಾಮಾನ್ಯವಾಗಿ ಕೆಆರ್‌ಎಸ್‌ನಲ್ಲಿ 124 ಅಡಿಗಳಿಂದ 100 ಅಡಿಗಳ ಎತ್ತರದ ನೀರು ನಿಂತಿರುವಾಗ ದ್ವೀಪದ ಕುತ್ತಿಗೆಯವರೆಗೂ ನೀರು ಆವರಿಸಿರುತ್ತದೆ. 100 ಅಡಿಗಿಂತ ಕೆಳಗೆ ನೀರು ಇಳಿದಂತೆ ದ್ವೀಪದ ಸುತ್ತಲ ನೀರು ಇಳಿದು ದ್ವೀಪ ಆಗಲವಾಗುತ್ತಾ ಹೋಗುತ್ತದೆ. ಇಷ್ಟೆಲ್ಲಾ ವಿಶೇಷತೆಗಳಿದ್ದರೂ, ಇದು ಬಹುತೇಕರಿಗೆ ತಿಳಿಯದ ಸ್ಥಳ. ತೋಟಗಾರಿಕಾ ಇಲಾಖೆ ಅಧೀನದಲ್ಲಿರುವ ಈ ದ್ವೀಪದಲ್ಲಿ ಬಾಳೆ, ತೆಂಗು, ಮಾವು, ಸಪೋಟ, ಹಲಸಿನ ಮರಗಳ ತೋಟವನ್ನೇ ನಿರ್ಮಿಸಲಾಗಿದೆ. ಕೆ ಆರ್ ಎಸ್ ನಲ್ಲಿ ನೀರು ತುಂಬಿದ್ದಾಗ ದೋಣಿಯ ಮೂಲಕವೇ ದ್ವೀಪಕ್ಕೆ ಹೋಗಬೇಕು. ಸುತ್ತಲೂ ಸುಮಾರು 25 - 30 ಅಡಿ ಆಳದ ನೀರಿರುತ್ತದೆ. ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲಿನ ವ್ಯಾಪ್ತಿಗೆ ಈ ದ್ವೀಪ ಬರುತ್ತದೆ.
ಅತ್ಯಂತ ಕೂಲ್ ಲುಕ್ ಇರುವ ಈ ಸ್ಥಳವನ್ನು ಸುಂದರ ಪ್ರವಾಸಿ ತಾಣವಾಗಿ ಪರಿವರ್ತಿಸಬಹುದಾದ ಎಲ್ಲ ಅವಕಾಶಗಳೂ ಇವೆ. ಬೇಸಿಗೆ ಸಮಯದಲ್ಲಿ ನೀರು ಕಡಿಮೆ ಇರುವ ಕಾರಣ. ತೀರದಿಂದ ನಡೆದೇ ಈ ದ್ವೀಪಕ್ಕೆ ತಲುಪಬಹುದು. ಆದರೆ ಮಳೆಗಾಲದಲ್ಲಿ ದೂರ ನಿಂತು ನೋಡಿದರೆ ಒಳ್ಳೆಯದು.
ಮಾರ್ಗ ಹೀಗಿದೆ : ಮೈಸೂರಿನಿಂದ ಕೆ ಆರ್ ಎಸ್ ರಸ್ತೆ ಮಾರ್ಗವಾಗಿ ಸುಮಾರು 15 ಕಿಲೋ ಮೀಟರ್ ಸಾಗಿದರೆ, ಕೃಷ್ಣರಾಜಸಾಗರ ಗ್ರಾಮ ಸಿಗುತ್ತದೆ. ಎಡಕ್ಕೆ ಸಾಗಿದರೆ ಮಲ್ಲೇಗೌಡನ ಕೊಪ್ಪಲು ಗ್ರಾಮ ಸಿಗುತ್ತದೆ. ಅಲ್ಲಿಂದ ಕೊಂಚವೇ ದೂರಕ್ಕೆ ರಸ್ತೆಯ ಬಲಭಾಗಕ್ಕೆ ಮಣ್ಣಿನ ರಸ್ತೆ ಒಳಕ್ಕೆ ಸಾಗುತ್ತದೆ. 4 ಕಿ.ಮಿ ಸಾಗಿದ ನಂತರ ಬ್ಲೂ ಲಗೂನ್ ಸಿಗುತ್ತದೆ. ಪಕ್ಕದಲ್ಲೇ ಕೆ ಆರ್ ಎಸ್ ಅಣೆಕಟ್ಟು ಮತ್ತು ಬೃಂದಾವನವಿದೆ. ಮೈಸೂರು ಮಾರ್ಗದಲ್ಲಿ ಬಲಮುರಿ, ಎಡಮುರಿಗಳೂ ಹತ್ತಿರದಲ್ಲೇ ಇರುವುದರಿಂದ ಒಂದು ದಿನದ ಅದ್ಭುತ ಪಿಕ್‌ನಿಕ್ ಸವಿಯನ್ನು ಸವಿಯಬಹುದು.
"15 ಎಕರೆ ಆಗಲದ ಈ ದ್ವೀಪದಲ್ಲಿ ಸಮುದ್ರ ತೀರದಂತೆ ಹರಡಿರುವ ಮರಳ ರಾಶಿಯ ಮೇಲೆ ಬಂದಪ್ಪಳಿಸುವ ಕಾವೇರಿ ನೀರು, ಅಲ್ಲಿರುವ ಕಲ್ಲುಗಳ ಮೇಲೆ ಕುಳಿತು ಕಾಲಾಡಿಸುತ್ತ ಜೀವ ತಣ್ಣಗೆ ಮಾಡಿಕೊಂಡರೆ ಸ್ವರ್ಗಸುಖ" ಬನ್ನಿ ಒಮ್ಮೆ.....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************