-->
ಭಾರತದ ಸಂವಿಧಾನದ ಪ್ರಸ್ತಾವನೆಯ ಮಹತ್ವ

ಭಾರತದ ಸಂವಿಧಾನದ ಪ್ರಸ್ತಾವನೆಯ ಮಹತ್ವ


                  ಭಾರತದ ಸಂವಿಧಾನದ 
                  ಪ್ರಸ್ತಾವನೆಯ ಮಹತ್ವ  
        ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ಬೃಹತ್ ಲಿಖಿತ ಸಂವಿಧಾನ. ಇದು ಡಿಸೆಂಬರ್ 1947 ರಿಂದ 1949 ರ ಮಧ್ಯದಲ್ಲಿ ಭಾರತ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು. 26ನೇ ಜನವರಿ 1950 ರಂದು ಜಾರಿಗೆ ಬಂದಿತ್ತು. ಅಂದಿನಿಂದ ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ.
     ಭಾರತ ಸಂವಿಧಾನದಲ್ಲಿ ಅತಿ ಮುಖ್ಯವಾದ ಭಾಗ ಎಂದರೆ, ಅದು "ಪ್ರಸ್ತಾವನೆ". ಪ್ರಸ್ತಾವನೆಯು ಇಡೀ ಸಂವಿಧಾನದ ಸಾರವನ್ನು ಒಳಗೊಂಡಿದೆ. ಆದ್ದರಿಂದ ಇದನ್ನು "ಸಂವಿಧಾನದ ಹೃದಯ ಭಾಗ" ಎಂದು ಕರೆಯುತ್ತಾರೆ. ಸಂವಿಧಾನದ ಪ್ರಸ್ತಾವನೆಯ ಮೊದಲ ಸಾಲು ಭಾರತದ "ಪ್ರಜೆಗಳಾದ ನಾವು" ಎಂಬ ಪದದ ಅರ್ಥವನ್ನು ಭಾವಿ ಪ್ರಜೆಗಳನ್ನು ತಯಾರುಮಾಡುವ ಶಿಕ್ಷಕರಾದ ನಾವು, ಸಮಸ್ತರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಸಮಾನ ಸ್ಥಾನಮಾನವನ್ನು ಯಾವುದೇ ತಾರತಮ್ಯವಿಲ್ಲದೆ ಒದಗಿಸುವ ಕಾರ್ಯ ಮಾಡಬೇಕು. ಶಾಲೆಯಲ್ಲಿ ಮಕ್ಕಳು ಪ್ರತಿಯೊಬ್ಬರನ್ನು ಗೌರವಿಸಿ ಅನ್ಯೋನ್ಯತೆಯಿಂದ ವರ್ತಿಸುವ ಕಾರ್ಯಾಚರಣೆಗಳ ಮೂಲಕ ಸಹೋದರ ಮನೋಭಾವನೆ ಮೂಡಿಸಿ ಸಮಾಜದ ಉಳಿವಿಗಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಅರ್ಥ ಮಾಡಿಕೊಳ್ಳುವ ಕೆಲಸ ಶಾಲೆಗಳಿಂದ ಪ್ರಾರಂಭವಾಗಬೇಕಾಗಿದೆ. 
      ಸಾರ್ವಭೌಮ: ಸಾರ್ವಭೌಮ ಎಂದರೆ ಪರಮಾಧಿಕಾರ ಸ್ವತಂತ್ರ ಎಂದರ್ಥ. ಇಲ್ಲಿ ಮಕ್ಕಳು ಯಾವುದೇ ಒತ್ತಡ ಭಯವಿಲ್ಲದೆ ಸ್ವತಂತ್ರವಾಗಿ ಶಾಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಮತ್ತು ಮುಕ್ತವಾಗಿ ಚಟುವಟಿಕೆಗಳಲ್ಲಿ ತನಗಿಷ್ಟ ಬಂದ ಹಾಗೆ ಕಲಿಯುವ ರೀತಿಯನ್ನು ಶಿಕ್ಷಕರು ಮಕ್ಕಳಿಗೆ ಕಲಿಸುವುದೇ ಆಗಿದೆ. 
         ಸಮಾಜವಾದಿ: ಈ ಪದವು ಪ್ರಸ್ತಾವನೆಗೆ 1976 ರಲ್ಲಿ ನಾಲ್ಕನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿದೆ. ಸಾಮಾಜಿಕ, ಆರ್ಥಿಕ, ಸಮಾನತೆ ಸಂವಿಧಾನದ ಮಹತ್ವದ ಆಶಯವಾಗಿದ್ದು. ಇದರ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಕ್ಕಳಲ್ಲಿ ಲಿಂಗ ಸಮಾನತೆ, ಜಾತಿ, ಧರ್ಮ, ಭಾಷೆ ಇತ್ಯಾದಿಗಳಿಂದ ಭೇದಭಾವ ಮಾಡದೆ, ಸಾಮಾಜಿಕ ಸಮಾನತೆಯ ಮನೋಭಾವ ಸಮಾನ ಸ್ಥಾನಮಾನಗಳ ಅವಕಾಶ ನೀಡುವುದು. ಉದಾಹರಣೆಗೆ ಶಾಲೆ ಅಥವಾ ತರಗತಿಯಲ್ಲಿ ಗಂಡು-ಹೆಣ್ಣು ಎಂಬ ಮೇಲು-ಕೀಳು ಪ್ರಬಲ ದುರ್ಬಲ ಬಡವ-ಶ್ರೀಮಂತ ಎನ್ನದೆ ಸಮಾನವಾಗಿ ಕಾಣುವ ಹಾಗೆ ಮಾಡುವುದು. 
        ಭ್ರಾತೃ ಭಾವನೆ: ಶಾಲೆಯಲ್ಲಿರುವ ಎಲ್ಲ ಮಕ್ಕಳಲ್ಲಿ ಸೋದರ-ಸೋದರಿ ಎಂಬ ಭಾವನೆಯನ್ನು ಮೂಡಿಸುವುದು ಉದಾಹರಣೆಗೆ ಹಬ್ಬಗಳನ್ನು ಆಚರಿಸುವುದು, ನಾಟಕ, ಏಕಪಾತ್ರಭಿನಯ, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದರ ಮೂಲಕ ಭ್ರಾತೃತ್ವ ಭಾವನೆಯನ್ನು ಬೆಳೆಸುವುದು. ಧರ್ಮ ಭಾಷೆಯೆನ್ನದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಕರೆತರುವುದು. ಉದಾಹರಣೆಗೆ ಪ್ರಾರ್ಥನೆ , ಬಿಸಿ-ಊಟ , ಸಾಂಸ್ಕೃತಿಕ ಕಾರ್ಯಕ್ರಮ ಶಾಲಾ ಕ್ರೀಡಾ ಚಟುವಟಿಕೆಗಳಲ್ಲಿ ಎಲ್ಲರೂ ತಾರತಮ್ಯವಿಲ್ಲದೆ ಸಮಾನ ಅವಕಾಶ ಕಲ್ಪಿಸುವುದು. ಶಾಲೆಯಲ್ಲಿ ಮಕ್ಕಳು ಒಂದೇ ಎಂಬ ಭಾವನೆಯನ್ನು ಮೂಡಿಸುವ ಕೆಲಸ ಶಿಕ್ಷಕರೆಲ್ಲರ ಆದ್ಯ ಕರ್ತವ್ಯವಾಗಿದೆ. 
     ಜಾತ್ಯಾತೀತ: ಈ ಪದವು 1976 ರ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ ಎಂದರ್ಥ. ಉದಾಹರಣೆಗೆ ಶಾಲೆಗಳಲ್ಲಿ ಎಲ್ಲಾ ಧರ್ಮದ ಮಕ್ಕಳು ಕಲಿಯುತ್ತಾರೆ. ಇಲ್ಲಿ ಯಾರು ಯಾವ ಧರ್ಮದ ಮಕ್ಕಳಾಗಿದ್ದರೂ ಸಹ ಬೆರೆತು ಕಲಿಯುವ ಮತ್ತು ಸರ್ವಧರ್ಮ ಸಹಿಷ್ಣುತೆಯ ಮನೋಭಾವನೆಯನ್ನು ಬೆಳೆಸುವುದು. ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ವಿವಿಧ ಧರ್ಮಗಳ ವೇಷಭೂಷಣಗಳ ಮೂಲಕ ಧಾರ್ಮಿಕ ಸಮಾನತೆ ಎಲ್ಲಾ ಧರ್ಮದ ಜನರು ಕಾನೂನಿನಡಿಯಲ್ಲಿ ಸಮಾನರು ಹಾಗೂ ಸರ್ಕಾರಿ ಅನುದಾನಿತ ಅನುದಾನರಹಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ ಪ್ರಚಾರ ನಡೆಸುವಂತಿಲ್ಲ ಎಂಬುದಾಗಿ ಜಾಗೃತಿ ಮೂಡಿಸುವುದು.
      ಪ್ರಜಾಪ್ರಭುತ್ವ: ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳಾದ ನಾವು ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತದಾನ ಪದ್ಧತಿಯ ಮೂಲಕ ಆರಿಸುವುದು 18 ವರ್ಷ ವಯೋಮಿತಿ ಯವರು ಕಾನೂನುಬದ್ಧ ಮತದಾನ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ ಜಾತಿ ಮತ ಲಿಂಗ ಮತ್ತು ಶಿಕ್ಷಣ ಮಟ್ಟದ ಭೇದವಿಲ್ಲದೆ, ಮತಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಇದರ ಅರಿವು ಮೂಡಿಸುವುದು ಶಾಲೆಯಲ್ಲಿ ತಮ್ಮ ನಾಯಕನನ್ನು ಆರಿಸಲು ಮತದಾನ ಮಾಡುವ ಮೂಲಕ ಶಾಲಾ ವಿವಿಧ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಶಾಲೆಯಲ್ಲಿ ಶಾಲಾ ಸಂಸತ್ತು ರಚಿಸಿ, ಮಂತ್ರಿಮಂಡಲ ರಚಿಸುವ ಮೂಲಕ ಭವಿಷ್ಯದಲ್ಲಿ ತಮ್ಮ ನಾಯಕನನ್ನು ಆರಿಸುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವುದು.
         ಗಣತಂತ್ರ : ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ಧವಾಗಿದ್ದು ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ಥರು ವಂಶಪರಂಪರೆಯ ಆಧಾರದ ಮೇಲೆ ಜೀವಮಾನದ ವರೆಗೂ ಅಥವಾ ಸಿಂಹಾಸನ ತ್ಯಜಿಸುವವರೆಗೂ ನೇಮಿಸಿಕೊಳ್ಳುತ್ತಾರೆ. ಆದರೆ ಗಣತಂತ್ರ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ , ರಾಜ್ಯದ ಮುಖ್ಯಸ್ಥರು ಪ್ರತ್ಯಕ್ಷ-ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದಾಗಿದೆ. ಶಾಲೆಗಳಲ್ಲಿ ವಿವಿಧ ಧರ್ಮ ಜಾತಿ ಮತ ಭಾಷೆ ಮಕ್ಕಳು ಕಲಿತಿರುವುದರಿಂದ ಯಾರು ಬೇಕಾದರೂ ತಮ್ಮ ಯೋಗ್ಯತೆಗೆ ಅನುಸಾರವಾಗಿ ಮತದಾನದ ಮೂಲಕ ನಾಯಕರಾಗಿ ಆಯ್ಕೆಯಾಗುವ ಅವಕಾಶಗಳಿರುತ್ತವೆ.
        ಅಭಿವ್ಯಕ್ತಿ: ಇದು ತನ್ನಲ್ಲಿರುವ ಭಾವನೆ ಮತ್ತು ಪ್ರತಿಭೆಯನ್ನು ಹೊರಹಾಕುವ ಅವಕಾಶವನ್ನು ನೀಡುತ್ತದೆ. ಅಂದರೆ ಶಾಲೆಗಳಲ್ಲಿ ಮಕ್ಕಳು ಪ್ರತಿಭಾಕಾರಂಜಿ, ಕ್ರೀಡೆ, ವಸ್ತುಪ್ರದರ್ಶನ, ವಿಜ್ಞಾನ ಮೇಳ, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಭಾವನೆಗಳನ್ನು ಅಥವಾ ತನ್ನಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಪಡಿಸುವುದು.
       ನಂಬಿಕೆ: ಶಾಲೆಗಳಲ್ಲಿ ಕಲಿಯುವ ಮಕ್ಕಳೆಲ್ಲರೂ ನಾವೆಲ್ಲ ಭಾರತೀಯರು ಒಂದೇ ತಾಯಿಯ ಮಕ್ಕಳು ಶಾಲೆಯಲ್ಲಿರುವ ಎಲ್ಲರೂ ಒಂದೇ ಎಂಬ ನಂಬಿಕೆಯನ್ನು ವ್ಯಕ್ತಪಡಿಸುವುದು.
       ವ್ಯಕ್ತಿಗೌರವ: ಯಾವುದೇ ಧರ್ಮ ಜಾತಿ ಲಿಂಗ ಭಾಷೆ ಇವುಗಳ ಆಧಾರದ ಮೇಲಾಗಲಿ ಅಥವಾ ಆರ್ಥಿಕ ಸ್ಥಿತಿಗತಿಯ ಮೇಲಾಗಲಿ ಯಾವುದೇ ಮಕ್ಕಳ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ಹಾಗೆ ಒಬ್ಬರಿಗೊಬ್ಬರನ್ನು ಗೌರವಿಸುವ ಮತ್ತು ಗೌರವವನ್ನು ಕಾಪಾಡುವ ಬಗ್ಗೆ ನೋಡಿಕೊಳ್ಳುವುದು.
          ರಾಷ್ಟ್ರದ ಏಕತೆ: ಭಾರತ ದೇಶದ ಶಾಲೆಯೆಂಬ ಸಮಾಜದಲ್ಲಿ ವಿವಿಧ ಧರ್ಮ, ಜಾತಿ, ಜನಾಂಗದ ಭಾಷೆಯ ಮಕ್ಕಳು ಬರುವುದರಿಂದ ಅವರಲ್ಲಿ ನಾವೆಲ್ಲ ಭಾರತೀಯರೆಂಬ ಭಾವನೆ ಮೂಡಿಸುವ ಮೂಲಕ ರಾಷ್ಟ್ರದ ಏಕತೆಗೆ ಪ್ರೇರೇಪಿಸುವ ಕೆಲಸ ಆಗಬೇಕು.
       ನಮ್ಮ ದೇಶದ ಸಂವಿಧಾನ ಮತ್ತು ಅದರ ಅರ್ಥ ಪ್ರತಿಯೊಬ್ಬ ನಾಗರಿಕನಿಗೂ ತಿಳಿಯುವಂತಾಗ ಬೇಕಾದರೆ ಇದರ ಜಾಗೃತಿ ಅಭಿಯಾನ ಶಾಲೆಗಳಿಂದಲೇ ಪ್ರಾರಂಭವಾಗಬೇಕು. ಈ ಉದ್ದೇಶದಿಂದ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ತೂಗು ಹಾಕುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ವಿಭಾಗ ಆದೇಶ ಹೊರಡಿಸಿದೆ. ಶಾಲೆಗಳಿಂದ ಪ್ರಾರಂಭವಾಗುವ ಸಂವಿಧಾನ ಪೀಠಿಕೆಯ ಅರ್ಥೈಸುವ ಜಾಗೃತಿ ಅಭಿಯಾನ ಮನೆಮನೆಗೂ ತಲುಪುವಂತಾಗಬೇಕು ಭಾರತೀಯ ನಾಗರಿಕರರುದಯ ಮುಟ್ಟುವಂತಹ ನಮ್ಮ ಭಾರತದ ಸಂವಿಧಾನ ಶಾಶ್ವತವಾಗಿ ಜನಗಳ ಮನದಲ್ಲಿ ಉಳಿಯುವಂತಾಗಲಿ ಎಂಬುದೇ ಡಾl| ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿದೆ.     
          ಭಾರತ ರತ್ನ ಸಂವಿಧಾನ ಶಿಲ್ಪಿ ಡಾll ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ "ದೇವಾಲಯಗಳ ನಿರ್ಮಿಸಿದಂತೆ ಭಿಕ್ಷುಕರು ಹುಟ್ಟುತ್ತಾರೆ ಗ್ರಂಥಾಲಯಗಳನ್ನು ಕಟ್ಟಿದಂತೆ ವಿದ್ವಾಂಸರು ಹುಟ್ಟುತ್ತಾರೆ." ಎಂಬ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಪ್ರಸ್ತುತ ಸಮಾಜದಲ್ಲಿ ಜಾತೀಯತೆ , ಮೇಲು-ಕೀಳು , ಬಡವ-ಶ್ರೀಮಂತ , ಧಾರ್ಮಿಕ ಸಮಾನತೆ , ಮೂಢನಂಬಿಕೆ , ಲಿಂಗತಾರತಮ್ಯ , ಭ್ರಷ್ಟಾಚಾರ ಇವೆಲ್ಲವೂ ತಾಂಡವಾಡುತ್ತಿದ್ದು ಇವೆಲ್ಲವುಗಳ ನಿರ್ಮೂಲನೆಗೆ ಶಿಕ್ಷಣ ಒಂದೇ ಅಸ್ತ್ರವಾಗಿದ್ದು ಪ್ರತಿಯೊಬ್ಬ ಪ್ರಜೆಯನ್ನು ಶಿಕ್ಷಿತರನ್ನಾಗಿಸಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಸಿದ್ಧಪಡಿಸಿ ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಮೂಡಿಸಿ ಸಂವಿಧಾನದ ಆಶಯವನ್ನು ಈಡೇರಿಸುವ.
.................................ಮಲ್ಲೇಶಯ್ಯ ಹೆಚ್.ಎಂ. 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article