-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 56

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 56

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 56
      
            
       "ಏಕೋ ನನ್ನ ಟೈಮೇ (ಸಮಯವೇ) ಸರಿಯಿಲ್ಲ. ಮುಟ್ಟಿದ್ದೆಲ್ಲ ಭಸ್ಮವಾಗುತಿದೆ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗುತ್ತಿಲ್ಲ . ಎಲ್ಲದರಲ್ಲೂ ಸೋಲು ಹಾಗೂ ನಿರಾಶೆ. ಏನ್ಮಾಡಲಿ" ಎಂದು ಹೇಳುವ ಮಂದಿ ಆಗಾಗ ನಮಗೆ ಸಿಗುತ್ತಾರೆ. ಆದರೆ ವಾಸ್ತವಾಗಿ ಟೈಮ್ (ಸಮಯ) ಸರಿಯಾಗಿಯೇ ಇರುತ್ತದೆ, ಆದರೆ ಸಮಯವನ್ನು ನಾವೇ ಸರಿಯಾಗಿ ಅಂದಾಜಿಸಿರುವುದಿಲ್ಲ ಎನ್ನುವುದು ಗೊತ್ತಿರುವುದಿಲ್ಲ. ಅದು ತಿಳಿದಾಗ ಎಲ್ಲವೂ ಮುಗಿದು ಹೋಗಿರುತ್ತದೆ. ಕೆಲವರು ತಾವು ಯಾವ ಕಾರಣಕ್ಕೆ ಸಫಲರಾಗುತ್ತಿಲ್ಲ ಎನ್ನುವುದನ್ನು ಹುಡುಕುವುದಿಲ್ಲ. ಕೆಲವರು ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಆದರೆ ಬಹುತೇಕರು ಕಾರಣಗಳ ವಾಸ್ತವ ಒಪ್ಪದೆ ತನ್ನ ಮೂಗಿನ ನೇರದಲ್ಲಿಯೇ ಆಲೋಚಿಸಿ ತಪ್ಪು ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ.
      ಕೆಲವೊಮ್ಮೆ ಬೆಲೆಬಾಳುವ ಬೃಹತ್ ಕಟ್ಟಡ ಕಟ್ಟುತ್ತೇವೆ. ಅದು ಕುಸಿದು ಬಿದ್ದಾಗ ಏನೇನೋ ಕಾರಣಗಳನ್ನು ಹೇಳುತ್ತೇವೆ. ಆದರೆ ಹೆಚ್ಚಿನವರು ಕಟ್ಟಡದ ಬುನಾದಿಯನ್ನು (ಫೌಂಡೆಶನ್ ) ಕಟ್ಟುವಾಗ ಉಂಟಾಗಿರುವ ದೋಷವನ್ನು ಗಮನಿಸಿರುವುದಿಲ್ಲ. ನಮಗೆ ಜ್ವರ ಬರುವಾಗ ಹೊಟ್ಟೆ ನೋವಿನ ಮದ್ದು ತಗೊಂಡರೆ ಜ್ವರ ಕಮ್ಮಿಯಾಗುವುದಿಲ್ಲ. ಜ್ವರಕ್ಕೆ ಮದ್ದು ಸ್ವೀಕರಿಸಬೇಕು. ಹಾಗಾಗಿ ವಿಫಲತೆಯ ಮೂಲಕ್ಕೆ ಮದ್ದು ಹುಡುಕಬೇಕೇ ಹೊರತು ಇನ್ಯಾವುದೇ ನಾವೇ ಕಲ್ಪಿಸಿರುವ ಕಲ್ಪಿತ ಕಾರಣಗಳಿಗಲ್ಲ. 
       ನಾವು ದೂರ ದಾರಿಯ ಪಯಣದಲ್ಲಿ ನಡೆಯುತ್ತಾ ನಡೆಯುತ್ತಾ ಮುಂದೆ ಸಾಗಿದಾಗ ಕಾಲಿನಡಿಗೆ ಮುಳ್ಳೊಂದು ಚುಚ್ಚಬಹುದು. ಆ ಮುಳ್ಳಿನಿಂದಾದ ಕಾಲು ನೋವನ್ನೇ ಗಂಭೀರವಾಗಿ ಪರಿಗಣಿಸಿ ಪಯಣವನ್ನು ನಿಲ್ಲಿಸಬಹುದು. ಏಕೆಂದರೆ ಅವರಲ್ಲಿ ಕಾಲಿನಲ್ಲಿರುವ ಮುಳ್ಳಿನ ನಿಜವಾದ ನೋವಿಗಿಂತ ತಲೆಯಲ್ಲಿರುವ ಕಲ್ಪಿಸಿರುವ ನೋವಿನ ಭಾವವು ಹೆಚ್ಚಾಗಿರುತ್ತದೆ. ಹಾಗಾಗಿ ಮುಂದೆ ಹೋಗುವುದಕ್ಕೆ ಸಾಧ್ಯನೇ ಆಗುವುದಿಲ್ಲ. ನಮ್ಮ ಬದುಕಿನ ಪಯಣದಲ್ಲಿ ಕೂಡಾ ಹೆಜ್ಜೆ - ಹೆಜ್ಜೆಗೂ ಬರುವ ಅಡ್ಡಿ ಆತಂಕಗಳ ವಾಸ್ತವ ಪರಿಣಾಮಕ್ಕಿಂತ ನಾವುಗಳು ಕಲ್ಪಿಸಿರುವ ಪರಿಣಾಮಗಳು ಪ್ರಬಲವಾದಾಗ ಬರುವ ಮಾತೇ... ನನ್ನ ಟೈಮೇ ಸರಿಯಿಲ್ಲ.
     ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು. ಹಾಗಾಗಿ ಕಲ್ಪಿತ ಕಾರಣಗಳಿಗಿಂತ ವಾಸ್ತವ ಕಾರಣಗಳನ್ನು ಗುರುತಿಸುವ ಕೌಶಲ ಕಲಿಯಬೇಕು. ಟೈಮ್ ಸರಿಯಾಗದಿರುವುದಕ್ಕೆ ದೇಹದ ಆಲಸ್ಯಕ್ಕಿಂತಲೂ ಮನಸ್ಸಿನ ಆಲಸ್ಯವೇ ಮುಖ್ಯ ಕಾರಣವಾಗಿರುತ್ತದೆ. ಮೊದಲು ನಮ್ಮ ಮನದ ಆಲಸ್ಯ ತೊರೆಯಬೇಕು. ವೈಫಲ್ಯಕ್ಕೆ ವಾಸ್ತವ ಕಾರಣಗಳನ್ನು ಹುಡುಕಬೇಕು. ಆಮೇಲೆ ಅದನ್ನು ಪರಿಹರಿಸುವತ್ತ ಚಿತ್ತ ಹರಿಸಿದರೆ ನಮ್ಮ ಟೈಮ್ ಸರಿಯಾಗುತ್ತದೆ. ಬದುಕು ಬಂಗಾರವಾಗುತ್ತದೆ.
       ನಮ್ಮ ಕಲ್ಪಿತ ಭಾವಗಳಿಂದ ಟೈಮ್ ನಮ್ಮನ್ನು (ಸಮಯ) ಒಮ್ಮೊಮ್ಮೆ ಉದ್ಧಾರ ಮಾಡುವಂತೆ ಕೆಲವೊಮ್ಮೆ ನಾಶವನ್ನೂ ಮಾಡಿದಂತೆ ಕಾಣುತ್ತದೆ. ಒಮ್ಮೊಮ್ಮೆ ಖುಷಿ ಕೊಟ್ಟಂತೆ ಮಗದೊಮ್ಮೆ ದುಃಖವನ್ನು ಕೊಟ್ಟಂತೆ ಭಾಸವಾಗುತ್ತದೆ. ಹಾಗಂತ ಸಮಯವನ್ನು ದೂರುವಂತಿಲ್ಲ. ಅದೆಲ್ಲ ನಮ್ಮ ಕಲ್ಪಿತ ಪರಿಣಾಮಗಳೇ ಹೊರತು ವಾಸ್ತವ ಪರಿಣಾಮಗಳಲ್ಲ. ಸಮಯ ಕೇವಲ ಕಳೆದು ಹೋಗುತ್ತದೆಯೇ ಹೊರತು ಮರಳಿ ಬರುವುದಿಲ್ಲ. ಹಾಗಾಗಿ ಒಳ್ಳೆಯ ಸಮಯಕ್ಕಾಗಿ ಕಾಯದೆ , ಇರುವ ಸಮಯವನ್ನೇ ಒಳ್ಳೆಯ ಸಮಯವನ್ನಾಗಿ ಪರಿವರ್ತಿಸುವ ಕೌಶಲ ಬೆಳೆಸಬೇಕು. ಆದುದರಿಂದ ಮರಳಿ ಬಾರದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದಿರಿ. ಸಮಯವನ್ನ ಇವತ್ತೇ.... ಈಗಲೇ... ಈ ಕ್ಷಣದಲ್ಲಿಯೇ ಸದುಪಯೋಗ ಮಾಡಲು ಶುರು ಮಾಡಿ. ಯಾರು ಸಮಯಕ್ಕೆ ಸರಿಯಾಗಿ ಗೌರವ ಕೊಡುತ್ತಾರೋ ಅವರಿಗೆ ಸಮಯವು ಕೂಡಾ ಸರಿಯಾದ ಗೌರವವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ಸಮಯಕ್ಕೆ ಗೌರವ ಕೊಡುತ್ತಾ ಬದುಕಲು ಕಲಿಯೋಣ. ನಮ್ಮ ಟೈಮ್ ಯಾವಾಗಲೂ ಸರಿಯಾಗಿದೆ ಎಂದು ಧೃಢವಾಗಿ ನಂಬೋಣ. ಸಮಯದ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article