-->
ಸಂಚಾರಿಯ ಡೈರಿ : ಸಂಚಿಕೆ - 3

ಸಂಚಾರಿಯ ಡೈರಿ : ಸಂಚಿಕೆ - 3

ಸಂಚಾರಿಯ ಡೈರಿ : ಸಂಚಿಕೆ - 3
       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

              ಕಯ್ಯಾರ ಕಿಂಞಣ್ಣ ರೈ ಅವರ ಹಾಡೊಂದರಲ್ಲಿ 'ಬೆಂಕಿ ಬಿದ್ದಿದೆ ನಮ್ಮ ಮನೆಗೆ , ಓ ಬೇಗ ಬನ್ನಿ , ಕನ್ನಡದ ಗಡಿ ಕಾಯೋಣ ಬನ್ನಿ , ಕನ್ನಡದ ನುಡಿ ಕಾಯೋಣ ಬನ್ನಿ' ಅನ್ನುವ ಸಾಲುಗಳು ಕಾಸರಗೋಡು ಜಿಲ್ಲೆಯ ದುರಂತ ಕಥೆಯನ್ನ ತಿಳಿಸುತ್ತದೆ. ಒಂದು‌‌ ಕಾಲದಲ್ಲಿ ಟಿಪ್ಪು , ಬ್ರಿಟಿಷ್ ಆಡಳಿತಕ್ಕೊಳಪಟ್ಟ ಈ ಭೂಮಿ ೧೯೫೬ ರಲ್ಲಿ ಕೇರಳಕ್ಕೆ ಸೇರಿಸಲಾಯಿತು. ಇಂತಹ ಕಾಸರಗೋಡು ಜಿಲ್ಲೆ ಪ್ರಾಕೃತಿಕವಾಗಿ , ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶ.. 'ಸಪ್ತ ಭಾಷಾ ಸಂಗಮ' ಜಿಲ್ಲೆ ಎಂಬ ಹೆಸರು ಈ ಭಾಗಕ್ಕಿದೆ.
        ಕಾಸರಗೋಡು ಧಾರ್ಮಿಕ ನೆಲೆಗಟ್ಟಿನಲ್ಲೂ ಪ್ರಮುಖ ಸ್ಥಾನ ಪಡೆದುಕೊಂಡಿದೆ. ನೂರಾರು ದೇವಾಲಯ , ಮಸೀದಿ , ಚರ್ಚ್ , ಬಸದಿಗಳ ಬೃಹತ್ ನೆಲೆವೀಡು ಈ ನಾಡು. ಉತ್ತರ ಕೇರಳ , ತುಳುನಾಡಿನ ಈ ಮಣ್ಣಿನ ಪ್ರಸಿದ್ಧ ದೇವಾಲಯಗಳ ಪರಿಚಯ ಮಾಡಿಕೊಳ್ಳೋಣ:
     ೧. ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ : ಭಾರತದ ಪಶ್ಚಿಮ ಕರಾವಳಿ ಭಾಗವೇ ಹಾಗೆ,ಹಲವಾರು ಗಣಪನ ಆಲಯಗಳು ಇಲ್ಲಿವೆ. ಇಡಗುಂಜಿ , ಹಟ್ಟಿಯಂಗಡಿ , ಕುಂಭಾಶಿ , ಶರವು , ಸೌತಡ್ಕ ಇತ್ಯಾದಿ. ಅವುಗಳ‌ ಸಾಲಿನಲ್ಲಿ ಮಧುವಾಹಿನಿ ನದಿಯ ತಟದಲ್ಲಿ ನೆಲೆಸಿರುವ 'ಬೊಡ್ಡಜ್ಜ' ಎನ್ನುವ ಅಡ್ಡನಾಮ ಹೊಂದಿದ ದೇವರು 'ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ'. ಕಾಸರಗೋಡಿನ ಮುಕುಟಮಣಿ ಈ ಗಜಪೃಷ್ಠಾಕಾರದ ದೇವಾಲಯ. ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದ ಈ ದೇವಾಲಯದ ಹಿನ್ನೆಲೆ ಅಮೋಘ ಐತಿಹ್ಯಗಳನ್ನು ಹೊಂದಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಇದು 'ಮದರು' ಎಂಬ ಮುಗೇರ ಮಹಿಳೆ ಸೊಪ್ಪು ಕಡಿಯುವಾಗ ಆಕೆಯ ಕೈಯಲ್ಲಿದ್ದ ಕುಡುಗೋಲು ಒಂದು ಕಲ್ಲಿಗೆ ತಾಗಿಬಿಟ್ಟಿತ್ತು. ಆಗ ಒಂದೇ ಸಮನೆ ಕಲ್ಲಿನಿಂದ ರಕ್ತ ಸುರಿಯತೊಡಗಲು ಅದು ಪವಿತ್ರ ಲಿಂಗ ಎಂಬುದು ಅರಿವಿಗೆ ಬಂತು. ಆ ಮದರು ಎಂಬ ಶಬ್ದ ಮುಂದೆ 'ಮಧೂರು' ಆಯಿತು ಅನ್ನುವುದು ನಂಬಿಕೆ.
      ಇತಿಹಾಸದ ಪುಟಗಳಲ್ಲಿ ಟಿಪ್ಪು ಸುಲ್ತಾನ್ ಈ ಕ್ಷೇತ್ರದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದನಂತೆ ಆದರೆ ಮಧುವಾಹಿನಿ ನದಿಯ ನೀರು ಸೇವಿಸಿ ಆತನ ಮನಸ್ಸು ಬದಲಾಯಿತು ಅನ್ನುವ ಕಥೆಯು ಪ್ರಚಲಿತದಲ್ಲಿದೆ. ಕ್ಷೇತ್ರದ ಮತ್ತೊಂದು ವಿಶಿಷ್ಟ ಸೇವೆ 'ಉದಯಾಸ್ತಮಾನ ಪೂಜೆ ಮತ್ತು ಮೂಡಪ್ಪ ಸೇವೆ'. ಇಷ್ಟಾರ್ಥ ಸಿದ್ಧಿಗೆ ಭಕ್ತಗಣ ಈ ಹರಕೆ ಹೊರುತ್ತಾರೆ. ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆಯ ವ್ಯವಸ್ಥೆಯು ಇಲ್ಲಿದೆ. ಕಾಸರಗೋಡಿನಿಂದ ಎಂಟು ಕಿ.ಮೀ ದೂರ ಇದ್ದು, ಸಾಕಷ್ಟು ಬಸ್ ಸೌಲಭ್ಯ ಕೂಡಾ ಇದೆ.
       ೨. ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನ : ಶತಮಾನಗಳ ಇತಿಹಾಸವುಳ್ಳ ಈ ದೇವಾಲಯ ಕಾಸರಗೋಡು ನಗರದಿಂದ ೧೫ ಕಿ.ಮೀ ದೂರದಲ್ಲಿದೆ. ಕರಾಡ ಬ್ರಾಹ್ಮಣರಿಂದ ಸ್ಥಾಪಿಸಲ್ಪಟ್ಟ ದೇವಾಲಯದ ಪಕ್ಕದಲ್ಲಿ ನದಿಯೊಂದು ಹರಿಯತ್ತಿದ್ದು , ಪ್ರೇತಭಾದೆ ಉಳ್ಳವರು ಈ ನದಿಯಲ್ಲಿ ಮಿಂದರೆ ಶುಭಫಲ ದೊರೆಯುವುದು ಎಂಬ ಪ್ರತೀತಿ ಇದೆ. ಪುರಾಣಗಳ ಪ್ರಕಾರ ಮಹಿಷಾಸುರ , ಚಂಡಮುಂಡರಂತಹ ದುರುಳರನ್ನು ತರಿದ ನಂತರ ದೇವಿಯು ದಾರುಕನೆಂಬ ಅಸುರನನ್ನು ಸಂಹರಿಸಿ , ಇಲ್ಲಿ‌ ನೆಲೆಯಾದಳಂತೆ. ಇಲ್ಲಿ ಶುಕ್ರವಾರ ಮತ್ತು ಮಂಗಳವಾರದ ದಿನದಂದು ಭಕ್ತರ ದೊಡ್ಡ ದಂಡೇ ಇರುತ್ತದೆ. ನಿತ್ಯ ಅನ್ನಸಂತರ್ಪಣೆ ಇಲ್ಲಿಯ ವೈಶಿಷ್ಟ್ಯ.
      ೩.ಅನಂತಪುರ ಅನಂತಪದ್ಮನಾಭ ದೇವಾಲಯ : ಕಾಸರಗೋಡಿನಿಂದ ೧೧ ಕಿಮೀ ದೂರದ ಕುಂಬಳೆಯಿಂದ ಸುಮಾರು ೫ ಕಿಮೀ ದೂರದಲ್ಲಿದೆ. ಸುತ್ತಲೂ ಹಸಿರ ಸಿರಿಯ ವೈಭೋಗ, ಪುರಾತನ ಕಾಲದ 'ಸರ್ಪಕಟ್ಟು' ಎನಿಸಿಕೊಂಡ ಆವರಣ ಗೋಡೆ ಎಲ್ಲವೂ ಇಲ್ಲಿಯ ಸೊಬಗನ್ನ ವರ್ಣಿಸುತ್ತದೆ.. ವಿಶಾಲವಾದ ಕೆರೆಯ ಮಧ್ಯದಲ್ಲಿ ಅನಂತಶಯನನ ನೆಲೆ! ಆಹಾ! ಭಕ್ತರಿಗೆ ಬೇರೇನು ಬೇಕು ?
       ಸಸ್ಯಾಹಾರಿ ಮೊಸಳೆ : ಅಂದಹಾಗೆ ಇಲ್ಲಿಯ ಮತ್ತೊಂದು ಆಕರ್ಷಣೆ ಇಲ್ಲಿಯ ಸಸ್ಯಾಹಾರಿ ಮೊಸಳೆ. 'ಬಬಿಯಾ' ಹೆಸರಿನ ಮೊಸಳೆಗೆ ಮಾಂಸಾಹಾರ ವ್ಯರ್ಜ್ಯ..... ನಂಬಿಕೆಯ ಪ್ರಕಾರ ಈ ಮೊಸಳೆಯೇ ವೈಕುಂಠದ ಕಾವಲುಗಾರ.
     ೪. ಕಣಿಪುರ ಗೋಪಾಲಕೃಷ್ಣ ದೇವಾಲಯ : ಕಣ್ವಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟ ಕೃಷ್ಣನ ಮೂರ್ತಿ, ಕುಂಬಳೆ ಸೀಮೆಯ ರಾಜರಿಗೆ ಆರಾಧ್ಯ ದೈವವಾಗಿತ್ತು. ಉಡುಪಿ ಮತ್ತು ಗುರುವಾಯೂರು ಕ್ಷೇತ್ರಗಳ ಮಧ್ಯೆ ಈ ದೇವಾಲಯ ಇದ್ದು , ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ.
        ಕುಂಬಳೆ ಬೆಡಿ : ಈ ಭಾಗದ ಅತ್ಯಂತ ಪ್ರಖ್ಯಾತ ಆಚರಣೆ ಕುಂಬಳೆ ಬೆಡಿ. ಇದೇ ದೇವಳದ ಜಾತ್ರೆಯ ಸಮಯದಲ್ಲಿ ನಡೆಯುವ ವಿಶೇಷ ಸುಡುಮದ್ದು ಪ್ರದರ್ಶನ. ಈ ಆಚರಣೆ ಬಹಳಷ್ಟು ವರ್ಷಗಳಿಂದ ನಡೆದು ಬಂದಿದೆ.
       ೫. ಮುಜುಂಗಾವು ಪಾರ್ಥಸಾರಥಿ ದೇವಾಲಯ : ಕುಂಬಳೆಯಿಂದ ಮೂರು ಕಿ.ಮೀ ದೂರದಲ್ಲಿರುವ ಈ ದೇವಾಲಯ ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದು. ದೇವಳದ ಕೆರೆಯಲ್ಲಿ ಔಷಧೀಯ ಗುಣಗಳಿದ್ದು , ಪ್ರತಿವರ್ಷ ಕಾವೇರಿ ತೀರ್ಥ ಸ್ನಾನದ ಸಂದರ್ಭದಲ್ಲಿ ಇಲ್ಲಿ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡುತ್ತಾರೆ. ಮುಷ್ಠಿ ತುಂಬಾ ಅಕ್ಕಿ ಮತ್ತು ಹುರುಳೀ ಕಾಳುಗಳನ್ನು ಕೆರೆಗೆ ಹಾಕಿ , ಬೇಡಿಕೊಳ್ಳುವ ಪ್ರತೀತಿ ಇದೆ. 
    ಸ್ಥಳ ಪುರಾಣ : ಹಿಂದೆ ಮುಚುಕುಂದ ಎಂಬ ಪರಾಕ್ರಮಿ ರಾಜನಿದ್ದ. ಆತನ ಶಕ್ತಿ ಸಾಮರ್ಥ್ಯ ಎಷ್ಟಿತ್ತೆಂದರೆ ಆತನ ಸಹಾಯವನ್ನು ದೇವಾನು ದೇವತೆಗಳೂ ಸಹ ಪಡೆಯುತ್ತಿದ್ದರಂತೆ. ಸ್ವಲ್ಪ ಸಮಯದ ಬಳಿಕ ಮುಚುಕುಂದ ಇವುಗಳ ಮೇಲಿನ ಆಸೆ ತೊರೆದು ಕಾವೇರಿ ತೀರ್ಥದ ಬಳಿ ತಪಸ್ಸು ಮಾಡತೊಡಗಿದ. ಆತನ‌ ತಪಸ್ಸಿಗೆ ಕಾಲಯವ ಎಂಬಾತ ವಿಘ್ನ ಉಂಟು ಮಾಡಿದಾಗ ಆತನನ್ನು ಭಸ್ಮ ಮಾಡಿಬಿಡುತ್ತಾನೆ. ಮುಚುಕುಂದನ ಈ ಕಾವು/ ಬಿಸಿ/ಕೋಪ ಮುಂದೆ ಮುಜುಂಗಾವು ಎಂದಾಯಿತಂತೆ.
      ೬. ಕಾಸರಗೋಡು ಮಲ್ಲಿಕಾರ್ಜುನ ದೇವಾಲಯ : ಕಾಸರಗೋಡು ನಗರದ ಹೃದಯ ಭಾಗದಲ್ಲಿದೆ ಈ ದೇವಾಲಯ. ದಕ್ಷಿಣಕ್ಕೆ ಕುಂಬಳಾ ನದಿ ಇದೆ. ಅರ್ಜುನನ ಕೈಯಿಂದ ಈ ಲಿಂಗ ಪ್ರತಿಷ್ಠಾಪನೆ ಆಯಿತು ಎನ್ನುವ ನಂಬಿಕೆ ಇದೆ.
ಈ ದೇವಾಲಯ ಅಂದಾಜು ೧೭ ನೇ ಶತಮಾನದ್ದು ಎಂಬ ಪ್ರತೀತಿ ಇದೆ.
     ೭. ಅಡೂರು ಮಹಾಲಿಂಗೇಶ್ವರ ದೇವಾಲಯ : ಪಯಸ್ವಿನಿ ನದಿಯ ದಡದಲ್ಲಿರುವ ಈ ದೇವಾಲಯವನ್ನು ಕಟ್ಟಿಸಿದ್ದು ಅರ್ಜುನನಂತೆ. ಶಿವ ಮತ್ತು ಅರ್ಜುನರ ಮಧ್ಯೆ ನಡೆದ 'ಕಿರಾತ ಯುದ್ಧ' ನಡೆದ ಸ್ಥಳ ಇದುವೆ ಎಂಬ ನಂಬಿಕೆ ಇದೆ.
ಕಾಸರಗೋಡು ನಗರದಿಂದ ೪೦ ಕಿ.ಮೀ ದೂರದಲ್ಲಿನ ಈ ದೇವಾಲಯದಲ್ಲಿ ಪ್ರತೀ ವರ್ಷ ಫೆಬ್ರವರಿ/ಮಾರ್ಚ್ ತಿಂಗಳಿನಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
     ೮. ಇತರ ದೇವಾಲಯಗಳು : 
◾ಕಿದೂರು ಮಹಾದೇವ ದೇವಸ್ಥಾನ
◾ಆನಂದಾಶ್ರಮ ಕಾಂಞಗಾಡ್
◾ಪೆರಡಾಲ ಉದನೇಶ್ವರ 
◾ಆರಿಕ್ಕಾಡಿ ಹನುಮಾನ್ ಮಂದಿರ
◾ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೇವಸ್ಥಾನ ಇತ್ಯಾದಿ.
      ಒಟ್ಟಾರೆ ಕಾಸರಗೋಡು ಸರ್ವ ಧರ್ಮ ಸಮನ್ವಯದ ನಾಡು ಕೂಡಾ ಹೌದು. ನೂರಾರು ದೇವಾಲಯಗಳ , ನೂರಾರು ಶಾಸನಗಳು , ಸಾವಿರಾರು ಕಥೆಗಳನ್ನು ಪೋಣಿಸಿವೆ. ಲಕ್ಷಾಂತರ ಭಕ್ತರನ್ನೂ ಆಕರ್ಷಿಸಿವೆ ಎಂದರೆ ತಪ್ಪಾಗಲಾರದು.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************


Ads on article

Advertise in articles 1

advertising articles 2

Advertise under the article