ಸಂಚಾರಿಯ ಡೈರಿ : ಸಂಚಿಕೆ - 18
Friday, November 11, 2022
Edit
ಸಂಚಾರಿಯ ಡೈರಿ : ಸಂಚಿಕೆ - 18
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಲೋಕಸಭಾ ಚುನಾವಣೆಯ ಹೊತ್ತಿಗೆ ಭಾರೀ ಸದ್ದು ಮಾಡಿದ್ದ ಕೇರಳದ ವಯನಾಡ್ ಗೆ ನಮ್ಮ ವಿಭಾಗದ ಪ್ರವಾಸ ನಿರ್ಧರಿತವಾಗಿತ್ತು. ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್. ಪದೇ ಪದೇ ಬಂಡೀಪುರ ವಿಚಾರ ವಯನಾಡ್ ರಾತ್ರಿ ಸಂಚಾರಾಗ್ರಹದಿಂದಲೇ ಮುನ್ನೆಲೆಗೆ ಬರುತ್ತಿರುತ್ತದೆ.. ಆದರೂ ಈ ಸ್ಥಳ ತನ್ನ ಹಸಿರ ಸೌಂದರ್ಯದ ಉಪಾಸನೆಯಲ್ಲಿ ಸ್ವಲ್ಪವೂ ಕುಂದುಗಟ್ಟಿಲ್ಲ.. ತಿರುವು ಮುರುವಿನ ಘಾಟಿಯ ರಸ್ತೆಗಳು, ಸುತ್ತ ಮುತ್ತಲ ಕಾಫಿ-ಚಹಾದ ಬೆಳೆಗಳು, ತಂಗಾಳಿ ಎಲ್ಲವೂ ಸಹ ಪ್ರಯಾಣದ ಉತ್ಸುಕತೆ ವೃದ್ಧಿಸುವಂತಹದಾಗಿತ್ತು..
ನಮ್ಮ ಪ್ರಯಾಣ ಮಂಗಳೂರಿನಿಂದ ಹೊರಟು ಕಾಸರಗೋಡು ಕಣ್ಣೂರ್ ಮಾರ್ಗವಾಗಿ ಸಾಗಿತ್ತು.. ಬೆಳಗಿನ ಜಾವ ಹೋಟೆಲ್ ಒಂದರಲ್ಲಿ ತಂಗಿ, ಅಲ್ಲಿ ತಿಂಡಿ ಮುಗಿಸಿಕೊಂಡು ನಮ್ಮ ಪ್ರಯಾಣ ಹೊರಟಿದ್ದು, ತುಷಾರ್‌ಗಿರಿ ಜಲಪಾತ ನೋಡಲು; ವೈನಾಡಿನ ಪ್ರಮುಖ ಜಲಪಾತಗಳಲ್ಲಿ ಒಂದಾದ ಇದು ಚಾಲಪ್ಪುಳ ನದಿಯನ್ನ ಹುಟ್ಟುಹಾಕುತ್ತದೆ.... (ಆದರೆ ಇದು ಕೋಝಿಕ್ಕೋಡ್ ಜಿಲ್ಲೆಗೆ ಸೇರಿದೆ) ಒಟ್ಟು ಮೂರು ಜಲಪಾತಗಳಿದ್ದು , ಸದ್ಯ ಒಂದಕ್ಕೆ ಮಾತ್ರ ಪ್ರವಾಸಿಗರಿಗೆ ಅನುಮತಿ ಇದೆ. ಅಲ್ಲಿ ಸುಮಾರು ಹೊತ್ತಿನವರೆಗೂ ನೀರಾಟ ಆಡಿದ ನಮಗೆ ಹತ್ತಾರು ರುದ್ರಾಕ್ಷಿ ಮಣಿ ಹೋಲುವ ಬೀಜಗಳು ಸಿಕ್ಕಿತ್ತು. ಸ್ಮರಣಿಕೆಯ ರೂಪವಾಗಲಿ ಎಂದು ಜೇಬಿನಲ್ಲಿ ಇಟ್ಟುಕೊಂಡೆವು. ಅಲ್ಲಿಂದ ಹಿಂದಿರುಗುವ ಹೊತ್ತು ಮಧ್ಯಾಹ್ನದ ಸಮಯ ಆಗಿತ್ತು. ಜಿಟಿ ಜಿಟಿ ಮಳೆಯೂ ಬರುತ್ತಾ, ನಮ್ಮ ಪ್ರವಾಸಕ್ಕೆ ಪುಳಕ ನೀಡಿತ್ತು. ನಡು ಹೊತ್ತಿನ ಬುತ್ತಿ ಬಿಚ್ಚಿ, ಹೊಟ್ಟೆ ತುಂಬಿಸದೆ ವಿಧಿ ಇರಲಿಲ್ಲ. ಭರ್ಜರಿ ಭೋಜನದ ನಂತರ ನಮ್ಮ ಯಾತ್ರೆ ಹೊರಟಿದ್ದು ಮಾತ್ರ ಎಡಕಲ್ ಗುಹೆಗಳನ್ನ ನೋಡಲು. ಸಮುದ್ರ ಮಟ್ಟದಿಂದ ಸುಮಾರು 1200 ಮೀಟರ್ ಎತ್ತರದಲ್ಲಿರುವ ಈ ಗುಹೆ ಅಂಬುಕುತ್ತಿ ಬೆಟ್ಟದ ಮೇಲಿದೆ. ನಾವು ಮೆಟ್ಟಿಲೇರುತ್ತಾ, ಏದುಸಿರು ಬಿಡುತ್ತಾ ತಲುಪೋ ಹೊತ್ತಿಗೆ ಗಂಟೆ ನಾಲ್ಕರತ್ತ ಬಂದಿತ್ತು. ಅಷ್ಟೊತ್ತಿಗಾಗಲೇ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಗುಹೆಯೊಳಗೆ ಹೋಗೋರು ಆದಷ್ಟು ಬೇಗ ಹೋಗಿ ಎಂದು ಆಜ್ಞಾಪಿಸತೊಡಗಿದ. ಅಷ್ಟಕ್ಕೂ ಎಡಕ್ಕಲ್ ಗುಹೆಗಳು ಆದಿಮಾನವ ನವಶಿಲಾಯುಗಕ್ಕೆ ಕಾಲಿಟ್ಟ ಕುರುಹುಗಳನ್ನ, ಕಲ್ಲಚ್ಚು ಬರಹಗಳನ್ನ ತೋರಿಸುತ್ತದೆ. ಸದ್ಯದಲ್ಲೇ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಲಿರೋ ಈ ಜಾಗವನ್ನ ಮೊಟ್ಟ ಮೊದಲ ಬಾರಿಗೆ ಅನ್ವೇಷಿಸಿದ್ದು ೧೮೯೫ ರಲ್ಲಿ ಮಲಬಾರ್ ಸುಪರಿಂಟೆಂಡ್ ಆಫ್ ಪೋಲೀಸ್ ಫಾಸೆಟ್ ಫ್ರೆಡ್ ಎನ್ನುತ್ತಾರೆ. ಇಲ್ಲಿ ಮಾನವರ, ಪ್ರಾಣಿಗಳ ಜೀರ್ಣ ಚಿತ್ರಗಳು ಮಾನವರ ಪ್ರಗತಿಯ ಸಾಕ್ಷಿಯಾಗಿದೆ. ಅಲ್ಲಿಂದ ಹೊರಗಡೆ ಬಂದಾಗ ನಾವು ಕಂಡಿದ್ದು ದಾರಿಯುದ್ದಕ್ಕೂ ಸ್ಥಳೀಯ ಉತ್ಪನ್ನಗಳ ವ್ಯಾಪಾರಸ್ಥರು. ವಯನಾಡಿನ ಕಾಫಿ, ಚಹಾ, ಮೂಲಿಕೆಗಳನ್ನ ಮಾರಾಟ ಮಾಡುತ್ತಿದ್ದರು.. ಮತ್ತೆ ಅಲ್ಲಿಂದ ಹೋಟೇಲ್‌ಗೆ ಹಿಂದಿರುಗಿದ ನಾವು ರಾತ್ರಿ ಕ್ಯಾಂಪ್ ಫೈರ್ ಮೂಲಕ ಪ್ರವಾಸಕ್ಕೆ ಇನ್ನಷ್ಟು ಮೆರಗು ಕೊಟ್ಟಿದ್ದೆವು..
ಮರುದಿನ ಬೆಳಗ್ಗೆ ಎದ್ದು , ನಮಗಾಗಿ ತಯಾರಿಸಿದ್ದ ಕೇರಳ ಶೈಲಿಯ ಮರಗೆಣಸಿನ ಖಾದ್ಯ ಮತ್ತು ಆಪಂ ಸೇವಿಸಿ ಮತ್ತೊಂದು ಪ್ರವಾಸಿ ತಾಣದತ್ತ ಹೆಜ್ಜೆ ಹಾಕಿದ್ದೆವು. ವಯನಾಡಿನ ಆಕರ್ಷಣೆಗಳಲ್ಲೊಂದಾದ ಬಾನಾಸುರ ಅಣೆಕಟ್ಟನ್ನು ನೋಡಲು ಹೊರಟಿದ್ದೆವು. ಸುದೀರ್ಘ ಒಂದು ಗಂಟೆಯ ಅವಧಿ! ಬಾನಾಸುರ ಅನ್ನೋದು ಮಹಾಬಲಿ ಚಕ್ರವರ್ತಿಯ ಮಗನ ಹೆಸರಂತೆ. ಕಬಿನಿ ನದಿಯ ಮೇಲೆ ಕಟ್ಟಿದ ಈ ಅಣೆಕಟ್ಟು ಭಾರತದ ಅತೀ ದೊಡ್ಡ ಹಾಗೂ ಏಷ್ಯಾದ ಎರಡನೇ ಅತಿದೊಡ್ಡ ಮಣ್ಣಿನ ಅಣೆಕಟ್ಟು ಎಂದು ಕರೆಯಲಾಗುತ್ತದೆ.
ಕಕ್ಕಾಯಂ ಜಲ ವಿದ್ಯುತ್ ಗಾಗಿ ಕಟ್ಟಿದ್ದ ಅಣೆಕಟ್ಟಿನಿಂದ ನದಿ -ದ್ವೀಪಗಳ ನೋಟ ಮಾತ್ರ ವಿಹಂಗಮ. ನಾವಂತೂ ದೋಣಿ ಏರಿ, ನದಿಯ ನೀರಿನ ಹರಿವಿನ ಪರಿಯ ಆದರಿಸಿದ್ದೆವು. ಆಗಾಗ್ಗೆ ಸ್ವಂತಿ(selfy), ತಕ್ಷಣ ಅಂಬಿಗನ ವಿನಂತಿ ಅಡ್ಡ ನಿಲ್ಲದಿರಿ ಎಂದು. ಬರೀ ಡ್ಯಾಂ ಮಾತ್ರವಲ್ಲ ಇನ್ನೊಂದು ವೈಶಿಷ್ಟ್ಯಕ್ಕೂ ಹೆಸರಾಗಿದೆ. ನೂರಾರು ಪ್ರವಾಸಿಗರು ಆಳೆತ್ತರದ ಆಗಸದಲ್ಲಿ ವೇಗವಾಗಿ ವಿಹರಿಸುತ್ತಿದ್ದರು. ರೊಂಯ್ಯನೆ ಸದ್ದು ಮಾಡುವ 'ಝಿಪ್ ಲೈನ್' ಗಳ ಮೂಲಕ ನದಿಯ ಜತೆಗೆ ಸುತ್ತಮುತ್ತಲಿನ ನಿಸರ್ಗದ ಚೆಲುವನ್ನೂ ಬಳಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು. ಅಂದ ಹಾಗೆ ಈ ಆಟದ ಬೆಲೆ ೨೪೦ರೂ. ಹತ್ತಿರದಲ್ಲಿ ಚಿಕ್ಕ ಪಾರ್ಕ್ ಕೂಡಾ ಇದೆ. ಬಾನಾಸುರ ಅಣೆಕಟ್ಟಿನ ಪಕ್ಕದಲ್ಲೇ ಇದ್ದ ಒಂದು ಮಳಿಗೆಯಲ್ಲಿ ವಯನಾಡಿನ ಪರಿಕರಗಳನ್ನ ಈ ನಾಡಿಗೆ ತರುವ ವಾಂಛೆ ಮೂಡಿ, ಶಾಪಿಂಗ್ ಕೂಡಾ ಮುಗಿಸಿದೆವು. ಮಧ್ಯಾಹ್ನದ ಊಟ ಮುಗಿಸಿ ನಂತರ ನಾವು ತೆರಳಿದ್ದು ಪ್ರಖ್ಯಾತ ದೇವಾಲಯವಾದ ತಿರುನೆಲ್ಲಿ ನಾರಾಯಣ ಮಂದಿರಕ್ಕೆ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಕ್ಷೇತ್ರ ಜನನ ಮತ್ತು ಮರಣ ಎರಡರ ಸಂಪ್ರದಾಯಕ್ಕೂ ಪ್ರಸಿದ್ಧಿ ಪಡೆದಿದೆ ಎನ್ನುತ್ತಾರೆ. ಬ್ರಹ್ಮನಿಂದ ಸ್ಥಾಪಿತವಾದ ಈ ಆಲಯ ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿದೆ. ದೇವಳದ ಪಕ್ಕದಲ್ಲೇ ಪಾಪನಾಶಿನಿ ನದಿಯು ಹರಿಯುತ್ತದೆ. ನಾವಂತೂ ತಲುಪೋ ಹೊತ್ತಿಗೆ ದೇಗುಲ ಮುಚ್ಚಿತ್ತು. ಬಹುತೇಕರು ಕೇರಳಿಗರೆ ನಮ್ಮ ಜತೆ ಇದ್ದ ತಂಡದವರು, ಗುನ್ನಿಕಾ ಎಂಬ ಗುಹೆಯ ಕಡೆ ತೆರಳುವ ಸಲಹೆ ನೀಡಿದ್ದರು. ಕಡಿದಾದ ಬಂಡೆಕಲ್ಲುಗಳ ಮಧ್ಯೆ, ನಡಿಗೆಯ ಅಡಿಯಿಡುತ್ತಾ, ಒಡನೆ ಎಡವದಂತೆ ಎಚ್ಚರಿಕೆಯಿಂದ ಮೇಲೇರಿ ಕಲಕಲ ಹರಿಯುವ ಸಲಿಲದ ಅಂದ ಕಂಡೆವು. ಅಲ್ಲಿಂದ ಗುಹೆಯೊಳಗಿದ್ದ ಶಿವನ ದರ್ಶನ ಮಾಡಿ ಹಿಂದಿರುಗಿದ್ದೆವು..
ಒಟ್ಟಾರೆ ಎರಡು ದಿನದ ವಯನಾಡ್ ಪ್ರವಾಸ ಮರೆಯಲಾಗದ ಅನುಭವ ಕೊಟ್ಟಿದ್ದಂತೂ ಸತ್ಯ.. ತಂಪಾದ ವಾತಾವರಣ, ಗೆಳೆಯರ ಗಣ, ಹೊಸಹೊಸ ತಾಣ, ಭರ್ಜರಿ ಔತಣ, ನೂತನ ಕಥನ ಬರೆಸಿತ್ತು. ಸ್ವರ್ಗಕ್ಕೆ ಕಿಚ್ಚು ಹಚ್ಚಿತ್ತು..
▪️ವಯನಾಡ್ ಮೂಲಿಕೆಗಳು
▪️ಕೋಝಿಕ್ಕೋಡ್ ಹಲ್ವಾ
▪️ಕೇರಳ ಶೈಲಿ ಉಪ್ಪಿನಕಾಯಿ ಇತ್ಯಾದಿ
▪️ಕುರುವ ದ್ವೀಪಗಳು
▪️ತಿರುನೆಲ್ಲಿ ದೇವಳ
▪️ಎಡಕ್ಕಲ್ ಗುಹೆ
▪️ಬಾನಸುರ ಅಣೆಕಟ್ಟು
▪️ಪಳಸೀ ಉದ್ಯಾನ ಇತ್ಯಾದಿ..
▪️ಮೈಸೂರಿನಿಂದ 130 ಕಿ.ಮೀ
▪️ಬೆಂಗಳೂರಿನಿಂದ 279 ಕಿ.ಮೀ
▪️ಪುತ್ತೂರಿನಿಂದ 214ಕಿ.ಮೀ
▪️ಕಾಸರಗೋಡಿನಿಂದ 209 ಕಿ.ಮೀ ಇದೆ.
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************