-->
ಹಕ್ಕಿ ಕಥೆ : ಸಂಚಿಕೆ - 57

ಹಕ್ಕಿ ಕಥೆ : ಸಂಚಿಕೆ - 57

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
              
          
      ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ...... ಮಳೆಗಾಲ ಮುಗಿಯಿತು ಎಂದರೆ ಈ ಹಕ್ಕಿ ಪ್ರತಿದಿನ ನಮಗೆ ನೋಡಲು ಸಿಗುತ್ತದೆ. ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಮುಗಿದು ಮಕ್ಕಳೆಲ್ಲ ತರಗತಿಗಳಿಗೆ ತೆರಳಿದ ನಂತರ ಸ್ವಲ್ಪ ಹೊತ್ತು ನಿಶ್ಶಬ್ದ ವಾತಾವರಣ. ಅಷ್ಟರಲ್ಲಿ ಶಾಲೆಯ ಮೈದಾನದ ಮೇಲೆ ಆಕಾಶದಿಂದ ಈ ಹಕ್ಕಿಯ ಕೂಗು ಕೇಳಿಸುತ್ತದೆ. ಕೇಂ.. ಕೆ..ಕೆ..ಕೆ.. ಎಂದು ಶಬ್ದ ಕೇಳಿದರೆ ಹೋ ಹಕ್ಕಿ ಬಂತು ಎಂದು ಖಚಿತವಾಗುತ್ತದೆ. ಬಿಡುವಿದ್ದರೆ ಒಂದು ನಿಮಿಷ ಹೊರಬಂದು ಇವತ್ತು ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂದು ನೋಡುವುದು ಖುಷಿ ಕೊಡುತ್ತದೆ.
         ಕೆಲವೊಮ್ಮೆ ಒಂಟಿಯಾಗಿ, ಕೆಲವೊಮ್ಮೆ ಜೋಡಿಯಾಗಿ ಹಾರಾಡುವ ಈ ಹಕ್ಕಿಯು ಬೇಟೆಗಾರ ಹಕ್ಕಿಗಳ (RAPTORS) ಜಾತಿಗೆ ಸೇರಿದ ಹಕ್ಕಿ. ಹಾಗಾಗಿಯೇ ಬೆಳಗ್ಗೆ ಆರುಗಂಟೆಯ ಸುಮಾರಿಗೇ ಇತರ ಹಕ್ಕಿಗಳು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿದರೆ, ಹದ್ದಿನ ಜಾತಿಗೆ ಸೇರಿದ ಈ ಹಕ್ಕಿಗಳು ಒಂದಿಷ್ಟು ಬಿಸಿಲು ಬಿದ್ದು ವಾತಾವರಣ ಬಿಸಿಯಾದ ನಂತರ ಮೇಲೇರುವ ಗಾಳಿಯ ಪದರಗಳ ಮೇಲೆ ತೇಲುತ್ತಾ ಹಾರಾಡುತ್ತಾ ತಮ್ಮ ಬೇಟೆಯನ್ನು ಅರಸುತ್ತವೆ.
         ಒಂದು ದಿನ ಶಾಲೆಗೆ ಹೋಗುತ್ತಿರುವಾಗ ದಾರಿಯ ಬದಿಯ ಮರದಮೇಲೆ ಯಾವುದೋ ಗಿಡುಗದ ಗಾತ್ರದ ಹಕ್ಕಿ ಬಂದು ಕುಳಿತದ್ದು ಕಾಣಿಸಿತು. ನಿಧಾನವಾಗಿ ವಾಹನವನ್ನು ನಿಲ್ಲಿಸಿ ನೋಡಿದಾಗ CRESTED SERPENT EAGLE ಎಂದು ಕರೆಯಲ್ಪಡುವ, ಪ್ರತಿದಿನ ನಾವು ಆಕಾಶದೆತ್ತರದಲ್ಲಿ ಹಾರಾಡುವುದನ್ನು ನೋಡುವ ತುರಾಯಿ ಪನ್ನಗಾರಿ ಮರದ ಕೊಂಬೆಯ ಮೇಲೆ ಕುಳಿತಿತ್ತು. ಕುಳಿತಾಗ ಅದರ ತಲೆಯ ಹಿಂದುಗಡೆಯಿಂದ ಹಾವಿನ ಹೆಡೆಯಂತೆ ಗರಿಗಳು ಸ್ವಲ್ಪ ಮೇಲಕ್ಕೆ ಬರುತ್ತವೆ.
         ಗಿಡುಗಗಳ ಜಾತಿಗೆ ಸೇರಿದ ಈ ಹಕ್ಕಿಯ ಆಹಾರ ಕಪ್ಪೆ, ಇಲಿಗಳು ಮತ್ತು ಓತಿಕ್ಯಾತದಂತಹ ಜೀವಿಗಳು. ಜೊತೆಗೆ ಹಾವುಗಳನ್ನೂ ಹಿಡಿದು ತಿನ್ನುವುದರಿಂದಲೇ ಇವುಗಳಿಗೆ ಹಾವುಗಿಡುಗ ಅಥವಾ ಪನ್ನಗಾರಿ ಎಂಬ ಹೆಸರು ಬಂದಿದೆ. ಬೆಟ್ಟ ಗುಡ್ಡಗಳು ಮತ್ತು ದಟ್ಟ ಕಾಡುಗಳಿರುವ ಪ್ರದೇಶದಲ್ಲಿ ಈ ಹಕ್ಕಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಆಕಾಶದಲ್ಲಿ ಹಾರಾಡುವಾಗ ರೆಕ್ಕೆಯ ಕೆಳಭಾಗದಲ್ಲಿ ಮತ್ತು ಬಾಲದಲ್ಲಿ ಬಿಳೀ ಬಣ್ಣದ ಪಟ್ಟಿಯೊಂದು ಎದ್ದು ಕಾಣುತ್ತದೆ. ಇದರಿಂದಲೇ ಹಕ್ಕಿಯನ್ನು ಗುರುತಿಸಬಹುದು. 
ಎತ್ತರವಾದ ಮರದಮೇಲೆ ತೆರೆದ ಜಾಗದಲ್ಲಿ ಡಿಸೆಂಬರ್ ನಿಂದ ಮಾರ್ಚ್ ತಿಂಗಳ ನಡುವೆ ಕಟ್ಟಿಗೆ, ಮರದ ಕಡ್ಡಿಗಳು ಮತ್ತು ಎಲೆಗಳನ್ನು ಪೇರಿಸಿ ಅಟ್ಟಳಿಗೆಯಂತಹ ಗೂಡನ್ನು ಮಾಡಿ ಒಂದು ಮೊಟ್ಟೆ ಇಟ್ಟು ಮರಿ ಮಾಡಿ ಬೆಳೆಸುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ನಿಮ್ಮ ಮನೆಯ ಆಸುಪಾಸಿನಲ್ಲಿ ಗುಡ್ಡ ಬೆಟ್ಟಗಳು ಅಥವಾ ಸ್ವಲ್ಪಮಟ್ಟಿನ ಕಾಡು ಇದ್ದರೆ ನೀವೂ ಈ ಹಕ್ಕಿಯನ್ನು ನೋಡಬಹುದು..
ಕನ್ನಡ ಹೆಸರು: ತುರಾಯಿ ಪನ್ನಗಾರಿ 
ಇಂಗ್ಲೀಷ್ ಹೆಸರು: Crested Serpent-Eagle
ವೈಜ್ಞಾನಿಕ ಹೆಸರು: Spilornis cheela
ಚಿತ್ರ ಕೃಪೆ : ಹರೀಶ್ ಕೂಳೂರು
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದೊಂದಿಗೆ ಸಿಗೋಣ ..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article