-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 71

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 71

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 71
             
           ಗುರುಗಳ ಜತೆ ಕಲಿಯುತ್ತಿದ್ದ ಶಿಷ್ಯನೋರ್ವ
"ಪ್ರಪಂಚದಲ್ಲಿ ಪರಮ ಸುಖಿ ಯಾರು ?" ಎಂದು ಕೇಳಿದ. ಆಗ - ಗುರುಗಳು, "ಈ ಪ್ರಪಂಚದಲ್ಲಿ ಪರಮ ಸುಖಿಗಳು ಎಂದರೆ ಮೂರ್ಖ ಮತ್ತು ಬುದ್ದಿವಂತ. ಏಕೆಂದರೆ ಮೂರ್ಖನಿಗೆ ಯಾವುದೇ ವಿಚಾರದ ಸತ್ಯ ಗೊತ್ತಿರುವುದಿಲ್ಲ. ಹಾಗಾಗಿ ಕತ್ತಲ ಕೂಪದಲ್ಲಿರುವ ಆತ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನಷ್ಟಕ್ಕೆ ಆರಾಮವಾಗಿ ಇರುತ್ತಾನೆ. ಆತನಿಗೆ ಯಾವುದೇ ಗೊತ್ತುಗುರಿಗಳಿಲ್ಲ. ನಿನ್ನೆಯ ಬಂಧನವಿಲ್ಲ. ಮುಂದೆ ಆಗಬೇಕಾಗುವುದರ ಬಗ್ಗೆ ಚಿಂತೆಯಿಲ್ಲ. ಆ ಕ್ಷಣದಲ್ಲಿ ಮಾತ್ರ ತನ್ನಿಷ್ಟದಂತೆ ಬದುಕುತ್ತಿರುತ್ತಾನೆ. ಬುದ್ಧಿವಂತನಿಗೆ ಎಲ್ಲದರ ಸತ್ಯ ತಿಳಿದಿರುತ್ತದೆ. ಆತನಿಗೆ ನಿನ್ನೆಯ ಪೂರ್ಣ ಅರಿವಿರುತ್ತದೆ. ಭವಿಷ್ಯದಲ್ಲಿ ಆಗಬೇಕಾಗುವುದರ ಬಗೆ ಸ್ಪಷ್ಟತೆಯಿರುತ್ತದೆ. ಹಾಗಾಗಿ ಈ ಇಬ್ಬರೂ ಸುಖ - ದುಃಖಗಳಿಗೆ ಬಲಿಯಾಗದೆ ನೆಮ್ಮದಿಯಿಂದ ಬದುಕುತ್ತಿರುತ್ತಾರೆ. ಆದರೆ ಇವರಿಬ್ಬರ ನಡುವಿರುವ ಮಧ್ಯಮರು ಮಾತ್ರ ಸದಾ ನೆಮ್ಮದಿ ರಹಿತ - ಗೊಂದಲ ಸಹಿತ ಜೀವನವನ್ನು ಸಾಗಿಸುತ್ತಾ ಕಷ್ಟ ಪಡುತ್ತಿದ್ದಾರೆ. ಏಕೆಂದರೆ ಇವರಿಗೆ ಭೂತ-ವರ್ತಮಾನ - ಭವಿಷ್ಯತ್ ಈ ಎಲ್ಲಾ ವಿಚಾರದಲ್ಲೂ ಅಪೂರ್ಣ ಅಥವಾ ಅರೆ ಸತ್ಯ ಮಾತ್ರ ಗೊತ್ತಿರುತ್ತದೆ. ಅವರಿಗೆ ಬದುಕಿನ ಪೂರ್ಣ ಸತ್ಯ ಗೊತ್ತಾಗುವವರೆಗೆ ಈ ಗೊಂದಲ ಮುಂದುವರಿಯುತ್ತದೆ. ಒಮ್ಮೆ ಜೀವನ ಸತ್ಯ ಗೊತ್ತಾಗುತ್ತದೋ ಅಲ್ಲಿಂದ ಪರಮ ಸುಖಿಯಾಗಿ ಜೀವಿಸುತ್ತಾನೆ. " ಎಂದು ಸಾವಧಾನದಿಂದ ಉತ್ತರಿಸಿದರು.
         ಹೌದಲ್ಲವೇ ?.... ಗುರುಗಳ ಉತ್ತರವನ್ನು ಸರಿಯಾಗಿ ಅರ್ಥೈಸಿಕೊಂಡರೆ ಸುಖೀ ಬದುಕಿನ ಸೂತ್ರ ತಿಳಿಯಬಹುದು. ಖಾಲಿ ಕೊಡ ಹಾಗೂ ತುಂಬಿದ ಕೊಡ ತುಳುಕುವುದಿಲ್ಲ ಹಾಗೂ ಶಬ್ದರಹಿತವಾಗಿರುತ್ತದೆ. ಆದರೆ ಅರ್ಧತುಂಬಿದ ಕೊಡ ಸದಾ ತುಳುಕುತ್ತಿರುತ್ತದೆ. ನಮಗೆ ಕತ್ತಲೆ ಹಾಗೂ ಸ್ಪಷ್ಟ ಬೆಳಕಿನಲ್ಲಿ ಪಯಣದ ಬಗ್ಗೆ ಹಾಗೂ ಎಡವುದರ ಬಗ್ಗೆ ಗೊಂದಲವಿರುವುದಿಲ್ಲ. ಏಕೆಂದರೆ ಕತ್ತಲ ದಾರಿಯಲ್ಲಿ ಪ್ರಯಾಣ ಮಾರ್ಗದ ಬಗ್ಗೆ ಆಲೋಚಿಸುವುದಿಲ್ಲ. ಸ್ಪಷ್ಟ ಬೆಳಕಿನಲ್ಲಿ ಮಾರ್ಗದ ಬಗ್ಗೆ ಗೊಂದಲವಿರುವುದಿಲ್ಲ. ಆದರೆ ಅಸ್ಪಷ್ಟ ಮಂದ ಬೆಳಕಿನಲ್ಲಿ ಮಾತ್ರ ಈ ಬಗ್ಗೆ ಗೊಂದಲವಿರುತ್ತದೆ.
          ಯಾವುದೇ ವಿಚಾರದ ಬಗ್ಗೆ ತಿಳಿಯದಿರುವುದು ಹಾಗೂ ಸಂಪೂರ್ಣವಾಗಿ ತಿಳಿದಿರುವುದರಿಂದ ಗೊಂದಲಗಳಿರುವುದಿಲ್ಲ. ಅಪೂರ್ಣ ತಿಳುವಳಿಕೆಯಿಂದ ಮಾತ್ರ ಸಮಸ್ಯೆಗಳು ಉಂಟಾಗುತ್ತದೆ. ಮೂರ್ಖನಾಗಿರುವವ ಸುಖಿಯಾದರೂ ಅದು ಮನುಜ ಸಾಮರ್ಥ್ಯಕ್ಕೆ ಸಾಟಿಯಾದುದ್ದಲ್ಲ ಮತ್ತು ಸಮಾಜದಲ್ಲಿ ಅದಕ್ಕೆ ಗೌರವ ಅಥವಾ ಸ್ಥಾನಮಾನಗಳು ಇರುವುದಿಲ್ಲ. ಬುದ್ದಿವಂತನಾದರೆ ಸುಖದ ಅನುಭವದ ಜತೆಗೆ ಗೌರವ ಸ್ಥಾನಮಾನಗಳು ಸಿಗುತ್ತದೆ. ಮಧ್ಯಮ ಸ್ಥಿತಿಯಲ್ಲಿರುವವರು ಸತ್ಯದ ಪೂರ್ಣ ದರ್ಶನವಾಗುವರೆಗೆ ನಿರಂತರ ಪ್ರಯತ್ನದಲ್ಲಿ ಮುಂದುವರೆದರೆ ಸುಖಿ ಜೀವನ ನಡೆಸಬಹುದು.
         ವಿದ್ಯಾರ್ಥಿಗಳಾದ ನಾವು ಎಲ್ಲಾ ವಿಷಯಗಳಲ್ಲೂ ಅಪೂರ್ಣ ಅಥವಾ ಅರೆಜ್ಞಾನ ಹೊಂದಿರುವುದಕ್ಕಿಂತ ಪೂರ್ಣ ಸತ್ಯಜ್ಞಾನ ಪಡೆಯುವವರೆಗೆ ಪ್ರಯತ್ನ ಪಡಬೇಕು. ಆಗ ಹೊಸತರ ಸೃಷ್ಟಿಯಾಗುತ್ತದೆ. ಈ ಪ್ರಪಂಚದ ಜೀವರಾಶಿಗಳಲ್ಲಿ ಒಬ್ಬನಾಗಿ, ಇಡೀ ಪ್ರಪಂಚಕ್ಕೆ ನನ್ನ ಬದುಕಿನ ಅಗತ್ಯತೆ ಹಾಗೂ ಅನಿವಾರ್ಯತೆಯ ಸತ್ಯವನ್ನು ಅರಿತು ತನ್ನನ್ನು ತಾನು ಅರಿತು, ತನ್ನ ಸಾಮರ್ಥ್ಯ ಅರಿತು ಬದುಕಿದರೆ ನಾವೆಲ್ಲರೂ ಸದಾ ಸುಖಿಯಾಗಿ ಬದುಕಬಹುದು. ಪೂರ್ಣ ಸತ್ಯ ದರ್ಶನದ ಮಾರ್ಗದಲ್ಲಿ ಮುನ್ನೆಡೆಯುವ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article