-->
ಜೀವನ ಸಂಭ್ರಮ : ಸಂಚಿಕೆ - 116

ಜೀವನ ಸಂಭ್ರಮ : ಸಂಚಿಕೆ - 116

ಜೀವನ ಸಂಭ್ರಮ : ಸಂಚಿಕೆ - 116
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 


                      ನಿಶ್ಚಿಂತತೆ

     ಮಕ್ಕಳೇ, ಈ ಘಟನೆ ಓದಿ. ಇದು ಜಪಾನ್ ದೇಶದಲ್ಲಿ ನಡೆದ ಘಟನೆ. ಒಬ್ಬ ಮುದುಕ ಇದ್ದನು. ಆತನಿಗೆ ಹೆಂಡತಿ, ಮಕ್ಕಳು ಹಾಗೂ ಸಾಧಾರಣ ಮನೆ ಎಲ್ಲ ಇತ್ತು. ಬದುಕಲು ಕೊರತೆ ಏನೂ ಇರಲಿಲ್ಲ. ಆರಾಮಾಗಿ ಇದ್ದನು. ಒಮ್ಮೆ ಈತ ಕುದುರೆಯ ಮೇಲೆ ತಿರುಗಾಡಿ ಬರಲು ಬೆಟ್ಟಕ್ಕೆ ಹೋಗುತ್ತಾನೆ. ಆ ಬೆಟ್ಟಕ್ಕೆ ಹಿಂದೆ ಎಂದೂ ಹೋಗಿರಲಿಲ್ಲ. ಅದು ಬಹಳ ಸುಂದರವಾಗಿತ್ತು. ಹೀಗೆ ಕುದುರೆಯ ಮೇಲೆ ಹೋಗುವಾಗ ಒಂದು ಸುಂದರ ವಿಗ್ರಹ ಕಂಡಿತು. ಇಳಿದು ನೋಡುತ್ತಾನೆ. ಅದು ಬುದ್ಧನ ವಿಗ್ರಹವಾಗಿತ್ತು. ಅದು ಅಪ್ಪಟ ಚಿನ್ನದಿಂದ ಮಾಡಿತ್ತು. ಅದು ಸುಮಾರು 40 ಕೆಜಿಯಷ್ಟಿತ್ತು. ಆ ವಿಗ್ರಹವನ್ನು ತೆಗೆದುಕೊಂಡು ಮನೆಗೆ ಬರುತ್ತಾನೆ. ಆತನ ಸಂತೋಷಕ್ಕೆ ಪಾರವೇ ಇಲ್ಲ. ಮನೆಯವರಿಗೆಲ್ಲಾ ತುಂಬಾ ಸಂತೋಷ ಉಂಟಾಗಿತ್ತು. ಈ ಸುದ್ದಿ ಊರಿಗೆಲ್ಲ ಹರಡಿತು. ಎಲ್ಲರೂ ಬಂದು ನೋಡಿ ಸಂತೋಷ ಪಡುತ್ತಿದ್ದರು. ಇದನ್ನು ನೋಡಲು ಬೇರೆ ಬೇರೆ ಊರಿನಿಂದ ಜನ ಬರುತ್ತಿದ್ದರು. ಮನೆಯಲ್ಲಿ ಹಬ್ಬದ ವಾತಾವರಣ ಇತ್ತು. ಬಂದವರಿಗೆಲ್ಲ ಊಟ ತಿಂಡಿ ಎಲ್ಲಾ ವ್ಯವಸ್ಥೆಯಾಗುತ್ತಿತ್ತು. ಇದುವರೆಗೆ ಸಾಧಾರಣ ಮನುಷ್ಯನಾಗಿದ್ದ ಈ ಮುದುಕ ಈಗ ಗೌರವಾನ್ವಿತ ವ್ಯಕ್ತಿಯಾಗಿದ್ದನು.

     ಎಲ್ಲರೂ ಈತನನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಮೊದಲು ಈತ ನಮ್ಮವ ಎನ್ನುತ್ತಿದ್ದವರು ಈಗ ಎಲ್ಲರೂ ನಮ್ಮೂರ ಸಾಹುಕಾರ ಎನ್ನುತ್ತಿದ್ದರು. ಎರಡು ದಿನದ ನಂತರ ಆ ಮೂರ್ತಿ ತಂದಿದ್ದ ಮುದುಕ ದುಃಖಿತನಾಗಿ ಕುಳಿತಿದ್ದನು. ಬಂದವರೆಲ್ಲ ಮೂರ್ತಿ ನೋಡಿ ಸಂತೋಷ ಪಡುತ್ತಿದ್ದರು. ಈತ ಮಾತ್ರ ದುಖಿತನಾಗಿ ಮೂಲೆಯಲ್ಲಿ ಕುಳಿತಿದ್ದನು. ಆತನಿಗೆ ಯಾವ ಊಟ ಕೂಡಾ ರುಚಿಸುತ್ತಿರಲಿಲ್ಲ. ಕುಡಿಯಲು ಮನಸ್ಸಿಲ್ಲ. ಬಂದವರೊಡನೆ ಸಂತೋಷದಿಂದ ಮಾತನಾಡುತ್ತಿಲ್ಲ. ಕೆಟ್ಟ ಚಿಂತನೆಯಲ್ಲಿ ಕುಳಿತಿದ್ದನು. ಇದನ್ನು ಗಮನಿಸಿದ ಜನ ಕೇಳಿದರು "ಎಲ್ಲರೂ ಸಂತೋಷಪಡುತ್ತಿದ್ದಾರೆ. 40 ಕೆಜಿ ಬುದ್ಧನ ಪವಿತ್ರ ಮೂರ್ತಿ ಇದೆ. ನಿನ್ನ ಬಡತನ ಹೋಗಿದೆ. ನೀನು ಯಾಕೆ ದುಃಖಿತನಾಗಿದ್ದೀಯ" ಎಂದು ಕೇಳಿದರು. ಆ ಮುದುಕ, "ನಿಮಗೆ ಗೊತ್ತಿಲ್ಲ. ಆ ವಿಗ್ರಹದ ಕಡೆ ನೋಡಿದ್ದೀರ ಏನು..?" ಎಂದನು. ಇಲ್ಲ ಎಂದರು ಬಂದಿದ್ದವರು. "ನೋಡಿ ವಿಗ್ರಹದ ಕೆಳಗೆ ಏನು ಬರೆದಿದೆ" ಎಂದನು ಮುದುಕ. ಆ ಜನ ಹೇಳಿದರು "17 ಎಂದು ಬರೆದಿದೆ." ..... "ಹಾಗಾದರೆ 16 ಮೂರ್ತಿ ಎಲ್ಲಿ. ಇದು 17ನೇ ಮೂರ್ತಿ. 16 ಮೂರ್ತಿ ಸಿಗುವ ತನಕ ನನಗೆ ಸಮಾಧಾನವಿಲ್ಲ" ಎಂದು ಹೇಳಿದನು.

     ಆ ಒಂದು ವಿಗ್ರಹದಲ್ಲಿ ಸುಂದರ ಜೀವನ ಕಟ್ಟಿಕೊಳ್ಳಬಹುದಿತ್ತು. ಆಗ ಅಲ್ಲಿದ್ದವರು ಹೇಳಿದರು, "ನಿನ್ನ ಹತ್ತಿರ ವಿಗ್ರಹ ಇದೆ. ನಮ್ಮ ಹತ್ತಿರ ಇಲ್ಲ. ನಮ್ಮೂರಿಗೆ ವಿಗ್ರಹ ಬಂದಿದೆ, ಅದು ಬುದ್ಧನ ವಿಗ್ರಹ ಬಂದಿದೆ. ಅದು 40 ಕೆಜಿ ಅಂತ ಸಂತೋಷ ಪಡ್ತಿದ್ದೀವಿ... ನೀನು ಸಂಕಟಪಡುತ್ತಾ ಇದೀಯಲ್ಲ" ಎಂದರು. ಆಗ ಮುದುಕ ಹೇಳಿದ, "ನೀವು ಹುಚ್ಚರಿದ್ದೀರಿ. ಇರೋದರ ಕಡೆ ನೋಡಬೇಡಿ, ಕಳೆದು ಹೋದ ವಸ್ತುವಿನ ಕಡೆ ನೋಡಿ" ಎಂದನು ಮುದುಕ. "ನಿನ್ನ ಹತ್ತಿರ ಇರುವುದನ್ನು ನೋಡಿ ನಾವು ಸಂತೋಷಪಟ್ಟಿದ್ದೇವೆ. ಅಂದರೆ ಸಂತೋಷ ಪಡುವುದಕ್ಕೆ ವಸ್ತು ನಮ್ಮ ಹತ್ತಿರ ಇರಬೇಕೆಂದು ಇಲ್ಲ. ನಮ್ಮೂರಿನಲ್ಲಿ ಬಂದಿದೆ ಅನ್ನೋ ಸಂತೋಷ" ಎಂದರು.
   
     ನೋಡಿ ನಮ್ಮೆಲ್ಲರ ಬದುಕು ಹೀಗೆ ಆಗಿದೆ. ಇರುವುದನ್ನು ಅನುಭವಿಸುವ ಬದಲು, ಇಲ್ಲದ ಕಡೆ ಚಿಂತಿಸುತ್ತಿದ್ದೇವೆ. ಇದುವರೆಗೆ ಇರಲಿಲ್ಲ... ಈಗ ಸಿಕ್ಕಿದೆ ಎಂದು ಸಂತೋಷ ಪಡುವುದನ್ನು ಬಿಟ್ಟು. ಇಲ್ಲದ ಕಡೆ, ದೊರೆಯದೆ ಇರುವುದರ ಕಡೆ ಚಿಂತಿಸಿ ಇದ್ದ ಸಂತೋಷ ಕಳೆದುಕೊಂಡ ಮುದುಕನಂತಾಗಿದೆ. ನಾವು ಎಣಿಸುತ್ತೇವೆ, ಹೋಲಿಸುತ್ತೇವೆ. ಇದ್ದದ್ದು ದೊಡ್ಡದು.... ಇಲ್ಲದ್ದು ದೊಡ್ಡದಲ್ಲ.

      ಈ ಭೂಮಿ ಮೇಲೆ ಇರುವವರಿಗೆಲ್ಲ ಬದುಕಲಿಕ್ಕೆ ಬರುತ್ತದೆ ಅಂತ ಇಲ್ಲ. ಬದುಕಿರುವವರೆಲ್ಲಾ ಚೆನ್ನಾಗಿ ತಿಳಿದುಕೊಂಡಿದ್ದಾರೆ ಅಂತಾನೂ ಇಲ್ಲ. ಬದುಕುವುದು ಒಂದು ಕಲೆ. ಎಷ್ಟು ವಸ್ತುಗಳು ಸಿಕ್ಕಿವೆಯೋ ಅಷ್ಟನ್ನು ಸುಂದರವಾಗಿ ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು. ಸ್ವಲ್ಪ ಸಿಕ್ಕಿದರೆ ಸ್ವಲ್ಪದರಲ್ಲೇ, ಹೆಚ್ಚು ಸಿಕ್ಕಿದರೆ ಹೆಚ್ಚು ಬಳಸಿಕೊಂಡು, ಬದುಕನ್ನು ಕಟ್ಟಿಕೊಳ್ಳಬೇಕು. ಎಷ್ಟಿದೆ ಅಷ್ಟರಲ್ಲಿ, ನಮ್ಮ ಸಮೀಪದಲ್ಲಿ ಏನು ಸಿಗುತ್ತದೆಯೋ ಅದನ್ನು ಬಳಸಿಕೊಂಡು ಸುಂದರ ಜೀವನ ಕಟ್ಟಿಕೊಳ್ಳಬೇಕು. ಹಾಗೆ ಜೀವನ ಕಟ್ಟಿಕೊಳ್ಳಬೇಕಾದರೆ ಆ ರೀತಿ ಜೀವನವನ್ನು ಕಟ್ಟಿಕೊಂಡವರನ್ನು ನೋಡಿ ಕಲಿಯಬೇಕು. ನಿಶ್ಚಿಂತವಾಗಬೇಕು ಇಲ್ಲ ಅಂದರೆ ಚಿಂತೆ, ಇದೆ ಅಂದರೂ ಚಿಂತೆ. ಇದ್ದದ್ದು ಸಾಕು ಎಂದರೆ ನಿಶ್ಚಿಂತತೆ ಉಂಟಾಗುತ್ತದೆ. ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article