ಜಗಲಿ ಕಟ್ಟೆ : ಸಂಚಿಕೆ - 30
Sunday, December 17, 2023
Edit
ಜಗಲಿ ಕಟ್ಟೆ : ಸಂಚಿಕೆ - 30
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಸಾಮಾನ್ಯವಾಗಿ ಪ್ರಾಥಮಿಕ ತರಗತಿಗಳಲ್ಲಿ ಕಲಿಯುವ ಸನ್ನಿವೇಶಗಳಿಗೂ ಆನಂತರದ ಪ್ರೌಢ ತರಗತಿಗಳಲ್ಲಿ ಕಲಿಯುವ ವಾತಾವರಣಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳು ಹೆಚ್ಚು ಸ್ವತಂತ್ರವಾಗಿ ಮನೆಯ ವಾತಾವರಣದಲ್ಲಿ ಬೆಳೆದ ಹಾಗೆ ಶಿಕ್ಷಕರಲ್ಲಿ ತನ್ನ ತಂದೆ ತಾಯಿಯ ಪ್ರೀತಿಯನ್ನು ಕಾಣುವುದು ಮಾಮೂಲು. ಹೀಗೆ ಬೆಳೆದ ಮಕ್ಕಳು ತನ್ನ ನೇರ ನಡೆ-ನುಡಿಗಳ ಮೂಲಕ ಯಾವುದೇ ಮುಖವಾಡಗಳಿಲ್ಲದೆ ವ್ಯವಹರಿಸುವುದು ಎಲ್ಲರಿಗೂ ತಿಳಿದ ವಿಷಯ. ನಿರಂತರ ಸಲಹೆ ಮಾರ್ಗದರ್ಶನಗಳನ್ನು ಪಡೆದು ತನ್ನ ತನ್ನ ಪ್ರತಿಭಾ ಶಕ್ತಿಯನ್ನು ವಿಸ್ತರಿಸುವ ಮೂಲಕ ಸುಂದರ ಪಥವನ್ನು ಕಂಡುಕೊಂಡಿರುತ್ತಾರೆ. ಬೇರೆ ಬೇರೆ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲರಾಗಿ ಕಂಗೊಳಿಸುತ್ತಾರೆ.
ತನ್ನ 7ನೇ ತರಗತಿ ಅಥವಾ ಎಂಟನೇ ತರಗತಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣಕ್ಕೆ ಕಾಲಿಟ್ಟಾಗ ಹೊಸ ವಾತಾವರಣದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಕಷ್ಟಪಡುವುದನ್ನು ಪೋಷಕರಾದ ನಾವು ಗಮನಿಸಿರಬಹುದು. ಸ್ವತಂತ್ರವಾಗಿ ಬೆಳೆದ ಮಗು ಏಕಾಏಕಿ ಕಟ್ಟುಪಾಡು, ಶಿಸ್ತಿನ ಚೌಕಟ್ಟಿನೊಳಗಡೆ ಬೆರೆಯಬೇಕಾದ ಅವಶ್ಯಕತೆ ಎದುರಾಗುತ್ತದೆ. ಹೀಗಾದಾಗ ಹೆಚ್ಚಿನ ಕೆಲವು ಮಕ್ಕಳು ಮಂಕಾಗುವುದು ಸಹಜ. ತಾನು ಗಳಿಸಿಕೊಂಡ ಪ್ರೀತಿ ಮೊದಲಿನ ವಿಶ್ವಾಸಗಳು ಇಲ್ಲಿ ಯಾವುದೇ ಫಲ ಕೊಡದೆ ಇದ್ದಾಗ ಹೆಚ್ಚಿನ ಮಕ್ಕಳು ತುಂಬಾ ನೊಂದುಕೊಳ್ಳುವುದು ತಿಳಿದಿರಬಹುದು.
ಮಕ್ಕಳ ಜಗಲಿ ಆರಂಭವಾದಾಗ ತುಂಬಾ ಸುಂದರವಾಗಿ ಚಿತ್ರ ಮಾಡುತ್ತಿದ್ದ ಬಾಲಕಿಯೊಬ್ಬಳ ವರ್ತನೆಯೂ ತುಂಬಾ ಬದಲಾಗಿದ್ದನ್ನು ಗಮನಿಸಿದ್ದೇನೆ. ಆಕೆಯ ಪೋಷಕರು ಫೋನಾಯಿಸಿ "ಮೊದಲಿನ ಶಾಲೆಯಲ್ಲಿ ಆಕೆಯ ಶಿಕ್ಷಕರು ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು. ಈಗ ಹೋಗುತ್ತಿರುವ ಹೊಸ ಶಾಲೆಯಲ್ಲಿ ಆ ತರಹದ ಯಾವುದೇ ಪ್ರೋತ್ಸಾಹಗಳಿಲ್ಲ" ಎಂದಾಗ ತುಂಬಾ ನೋವೆನಿಸಿತು. ಹೀಗೆ ಅದೆಷ್ಟೋ ಪ್ರತಿಭೆಗಳು ಯಾವುದೋ ಕಾರಣಕ್ಕೆ ಕಮರಿ ಹೋಗುತ್ತವೆ.
ಹೀಗೆ ಇತ್ತೀಚೆಗೆ ತುಂಬಾ ಸಾಧನೆ ಮಾಡಿರುವ ಬಾಲಕಿ ಒಬ್ಬಳ ಮಾತು ಕೂಡಾ ಕೇಳಿ ಒಮ್ಮೆ ಆತಂಕಗೊಂಡೆ. ತನ್ನ ಆರನೇ ತರಗತಿಯಿಂದ ಮಕ್ಕಳ ಜಗಲಿಯಲ್ಲಿ ನಿರಂತರ ತೊಡಗಿಸಿಕೊಂಡ ಆಕೆ ಸ್ವತಂತ್ರವಾಗಿ ಅದೆಷ್ಟೋ ಸಾಧನೆಗಳನ್ನು ಮಾಡಿಬಿಟ್ಟವಳಾಗಿದ್ದಳು. ತನ್ನ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹೋದ ಅವಳನ್ನು ಹೊಸ ಶಾಲೆ ಹೇಗಾಗುತ್ತೆ ಎಂದಾಗ, "ಸರ್... ಆ ಶಾಲೆಯಲ್ಲಿ ಯಾರಿಗೂ ಯಾವುದರಲ್ಲೂ ಆಸಕ್ತಿ ಇಲ್ಲ ಸರ್... ನಾವು ಕಷ್ಟಪಟ್ಟು ಬಹುಮಾನ ಗಳಿಸಿ ಬಂದರೂ ಯಾವುದೇ ಪ್ರೋತ್ಸಾಹದ ಮಾತುಗಳನ್ನಡುವುದಿಲ್ಲ" ಎಂದಾಗ ಯಾರನ್ನೂ ನೋಯಿಸದಿರದು. ಪ್ರತಿಭಾವಂತ ಮಕ್ಕಳ ಭವಿಷ್ಯ ಒಮ್ಮೆ ಕಣ್ಣ ಮುಂದೆ ಪ್ರಶ್ನಾರ್ಥಕವಾಗಿ ಹಾದು ಹೋಗುತ್ತದೆ...!!
ಹಾಗಂದ ಮಾತ್ರಕ್ಕೆ ಇದು ಎಲ್ಲಾ ಕಡೆಗೂ ಹೋಲಿಕೆ ಮಾಡಲಾಗದು. ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಹಿರಿಯರು ಅನೇಕ ಕಡೆ ಇದ್ದಾರೆ. ಮಕ್ಕಳನ್ನು ಉನ್ನತ ಮಟ್ಟಕ್ಕೆ ಏರಿಸುವ ಗುರಿ ಹೊಂದಿರುವ ಅನೇಕರನ್ನು ನಾವು ಕಾಣುತ್ತೇವೆ. ಹೀಗೆ ಬದಲಾಗುವ ಮಕ್ಕಳ ಮನಸ್ಥಿತಿಯನ್ನು ಗಮನಿಸಿ ಸರಿಯಾದ ಪ್ರೋತ್ಸಾಹ ಬೆಂಬಲ ಅವಕಾಶಗಳನ್ನು ನೀಡಿದಾಗ ಪ್ರತಿಯೊಬ್ಬ ಮಕ್ಕಳು ಈ ಜಗತ್ತಿಗೆ ಶ್ರೇಷ್ಠರಾಗಬಹುದು. ನಮಸ್ಕಾರ
ಕಳೆದ ಸಂಚಿಕೆಯ ಜಗಲಿಕಟ್ಟೆ - 29 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ .... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು .....
ದೇವರನ್ನು ಕಣ್ಣಾರೆ ಕಂಡವರು ಬಹುಶಃ ಯಾರೂ ಇಲ್ಲ. ಆದರೂ ದೇವರಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ದೇವರ ಇರುವಿಕೆ ನೈಜವಾದದ್ದು ಎಂಬ ಅಚಲವಾದ ನಂಬಿಕೆಯೊಂದಿಗೆ ಬಾಳುವವರು ನಾವೆಲ್ಲ. ಯಾಕೆಂದರೆ ಯಾವುದೋ ಅಗೋಚರ ಶಕ್ತಿ ನಮ್ಮ ಮನಸಿಗೆ ಸ್ಪಂದಿಸುತ್ತಿದೆ ಎಂಬ ಆಶಾದಾಯಕ ಸಮಾಚಾರ ನಮಗೆ ಉತ್ಸಾಹದಿಂದ ಜೀವಿಸಲು ಪ್ರೇರಣೆಯಾಗಿದೆ. ದೇವರೊಬ್ಬ ಅದ್ಭುತ ಕಲಾವಿದ. ಭಗವಂತ ಪ್ರತೀಯೋರ್ವರ ಹಣೆಯಲ್ಲಿ ಗೀಚಿದ - ಗೀಚುವ ಬರಹಗಳು ತರ್ಕಕ್ಕೆ ನಿಲುಕದವುಗಳು. ಕೆಲವೊಂದು ಬುದ್ಧಿವಂತ ರೇಖೆಗಳಾದರೆ, ಕೆಲವು ಪೆದ್ದುತನವುಳ್ಳದ್ದು. ಕೆಲವು ಚಂಚಲದಿಂದ ಕೂಡಿದರೆ ಕೆಲವೊಂದು ದೃಢವಾದದ್ದು, ಕೆಲವು ಕಠೋರ,ಇನ್ನು ಕೆಲವು ಕನಿಕರ ತೋರುವಂತಹದ್ದು. ಹೀಗೆ ವರ್ಣಿಸುತ್ತಾ ಹೋದಷ್ಟೂ ಸಾಲುಗಳೇ ಹೆಚ್ಚುತ್ತವೆಯೋ ಹೊರತು ಭಗವಂತನ ಲೀಲೆಯ ಅವತಾರಗಳನ್ನು ಬಣ್ಣಿಸಲಾಗದು.
ಏನಿದು? ಇಂದು ನಾನು ದೇವರ ಗುಣಗಾನವನ್ನಷ್ಟೇ ಮಾಡುತಿರುವೆ ಎಂದೆನಿಸುತ್ತಿದೆಯೇ? ಅದಕ್ಕೂ ಕಾರಣವಿದೆ. ಈ ವಾರದ ಜಗಲಿಯಲ್ಲಿ ಮೂಡಿ ಬಂದ ಕೆಲವೊಂದು ಲೇಖನಗಳನ್ನು ಓದಿದಾಗ ನನ್ನ ಮನಸಿಗೆ ಗೋಚರವಾದ ವಿಚಾರವೆಂದರೆ, ಬದುಕು ಎಂಬುವುದು ಮಾಯಾಲೋಕ. "ಜೀವ "ಎಂಬುವುದು ಕ್ಷಣಿಕ. ಆದರೆ " ಜೀವನ" ಎಂಬುವುದು ನಮ್ಮ-ನಮ್ಮ ಯೋಚನೆ, ಯೋಜನೆ, ಪ್ರೇರಣೆಗಳಿಂದ ರೂಪಿತಗೊಳ್ಳುವಂತಹ ಅತ್ಯದ್ಭುತವಾದ ಅವಕಾಶ ಎಂಬುವುದು. ಜೀವ ಹೋದರೆ ಹೋದೀತು. ಆದರೆ ನಾವು ಕೈಗೊಳ್ಳುವಂತಹ ಕರ್ತವ್ಯಗಳು, ಇಡುವಂತಹ ಸಾಧನೆಯ ಹೆಜ್ಜೆಗಳು ನಾವು ನಡೆಸಿದ ಜೀವನವನ್ನು ಇತರರಿಗೆ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂತಿರಬೇಕು.
ಜ್ಞಾನೇಶ್ ಸರ್ ರವರು ಬರೆದ ಜೀವನವನ್ನು ರೂಪಿಸುವುದು ಹೇಗೆ? ಎಂಬ ಲೇಖನವು, ನಾವು ವಸ್ತುಗಳನ್ನು ಪ್ರೀತಿಸುವ ಮೊದಲು ನಮ್ಮನ್ನೆ ನಾವು ಪ್ರೀತಿಸುವ, ಕಾಪಾಡಿಕೊಳ್ಳುವ ಹೃದಯವಂತರಾಗಬೇಕೆನ್ನುವ ಸಂದೇಶವನ್ನು ಸಾರಿತು.
ರಮೇಶ್ ಬಾಯಾರ್ ಸರ್ ರವರ ಲೇಖನವು, ಜಡತ್ವದಿಂದ ನಾವು ನಮಗೆ ದೊರೆತ ಅಮೂಲ್ಯವಾದ ಜೀವನವನ್ನು ಹಾಳುಗೆಡವದೆ, ಕ್ರಿಯಾಶೀಲರಾಗಿ ಉತ್ತಮ ಸಾಧಕರಾಗಬೇಕೆನ್ನುವ ನೀತಿಪಾಠವನ್ನು ಬೋಧಿಸುವಂತಿತ್ತು.
ಯಾಕೂಬ್ ಸರ್ ರವರ ಲೇಖನವಂತೂ, ಬಿಗ್ ಬಾಸ್ ಹಾಗೂ ಅಲ್ಲಿರುವ ಸ್ಪರ್ಧಿಗಳು ಒಂದೆಡೆಯಾದರೆ ದೇವರು ಹಾಗೂ ನಮ್ಮೆಲ್ಲರ ನಡುವೆ ನಿತ್ಯ ನಡೆಯುವ ನೈಜ ಸನ್ನಿವೇಶಗಳನ್ನು ವ್ಯಕ್ತಪಡಿಸುವಂತಹ ಚಿತ್ರಣಗಳ ಹೋಲಿಕೆ ನಿಜಕ್ಕೂ ಮನ ಮುಟ್ಟುವಂತಿತ್ತು.
ದಿವಾಕರ್ ಸರ್ ರವರ ಲೇಖನ ಭೂಮಿಯ ಚಲನೆ ಹಾಗೂ ಭೂಮಿಯ ಮೇಲಿರುವ ನಮ್ಮೆಲ್ಲರ ಸ್ಥಿತಿಗತಿಗಳ ಬಗ್ಗೆ ನೀಡಿದ ಮಾಹಿತಿ ಚೆನ್ನಾಗಿತ್ತು.
ತಾರನಾಥ ಕೈರಂಗಳ ಸರ್ ತಾವು ಬರೆದ ಈ ವಾರದ ಲೇಖನ ಬಾಲ ಪ್ರತಿಭೆ ಶೌರ್ಯಳ ಸಾಧನೆಯನ್ನು ಕಂಡು ನಿಜಕ್ಕೂ ಹೆಮ್ಮೆಯಾಯಿತು. ಇನ್ನಷ್ಟು ಯಶಸ್ಸು ಶೌರ್ಯಳ ಪಾಲಿಗೆ ಒಲಿದು ಬರುವಂತಾಗಲಿ. ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂದು ತೋರಿಸಿದ ಶೌರ್ಯಳಿಗೆ ಅಭಿನಂದನೆಗಳು.
ಮೇಡಂ ವಾಣಿ ಪೆರಿಯೋಡಿ ಯವರ ಪುಸ್ತಕ ಪರಿಚಯ, ಅರವಿಂದ ಸರ್ ರವರ ಹಕ್ಕಿ ಕಥೆ ಹಾಗೂ ಮೇಡಂ ವಿಜಯಾ ರವರ ನಿಷ್ಪಾಪಿ ಸಸ್ಯಗಳಂತಹ ಲೇಖನಗಳು ಮಾಹಿತಿಗಳನ್ನು ಅನಾವರಣಗೊಳಿಸುತ್ತ ಉತ್ತಮ ಸಂದೇಶಗಳನ್ನು ಹಂಚುತ್ತಿರುವ ಕೆಲಸ ಮಾಡುತ್ತಿದೆ. ಈ ಎಲ್ಲಾ ಲೇಖಕರ ಶ್ರಮಕ್ಕೆ ತಲೆದೂಗಲೇಬೇಕು.
ದೇವರು ನಮಗೂ ಕರುಣಿಸಿದ ಬದುಕನ್ನು ಸವೆಯಲು ಬಿಡದೆ, ಸುಂದರವಾಗಿ ಸವಿಯುವ ಭಾಗ್ಯವಂತರಗೋಣ ಎಂಬ ಸವಿನಯ ಆಶಯದೊಂದಿಗೆ
ಚಾಮೆತ್ತಮೂಲೆ ಮನೆ
ಕೊಣಾಲು ಗ್ರಾಮ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99453 11853
******************************************
ವಾಣಿ ಪೆರಿಯೋಡಿಯವರಿಗೆ.... ಚಿಕ್ಕ ಮಕ್ಕಳಲ್ಲಿ ಕನ್ನಡ ಪ್ರೀತಿ ಬೆಳೆಸುವ ಸೊಗಸಾದ ಪುಸ್ತಕ ಪರಿಚಯಿಸಿದ್ದೀರಿ.. ಥ್ಯಾಂಕ್ಯೂ ವಾಣಿಯಕ್ಕ. ಇಂಥಹ ಪುಸ್ತಕಗಳು ಮಕ್ಕಳ ಕೈಗೆ ಸಿಕ್ಕರೆ ಖಂಡಿತಕ್ಕೂ ಮಕ್ಕಳು ಕನ್ನಡ ಕಾಗುಣಿತವನ್ನು ಸಲೀಸಾಗಿ ಗಟ್ಟಿ ಮಾಡಿಕೊಳ್ಳುವರು.
ಸಹಶಿಕ್ಷಕಿ
ಸ ಹಿ ಪ್ರಾ ಶಾಲೆ ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ,
ನಾವು ಮಾಡುವ ಯೋಚನೆಗಳು ಚಿಂತನೆಗಳು, ವಿಚಾರಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಉದಾಹರಣೆಯೊಂದಿಗೆ ಜೀವನ ಸಂಭ್ರಮ ಸಂಚಿಕೆಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು.
ನಿದ್ದೆ ವಿಶ್ರಾಂತಿಗೆ ಅಗತ್ಯ. ಆದರೆ ಅತಿ ನಿದ್ದೆ ಜಡತ್ವಕ್ಕೆ ಕಾರಣವಾಗಬಹುದು. ಆದುದರಿಂದ ಮಿತವಾದ ನಿದ್ದೆಯೊಂದಿಗೆ ಸಮಾಜಮುಖಿ ಕಾಯಕದಲ್ಲಿ ತೊಡಗಿಸಿಕೊಂಡು ರಾಷ್ಟ್ರದ ಹಿತಕ್ಕಾಗಿ ದುಡಿಯೋಣ ಎನ್ನುವ ರಮೇಶ್ ಬಾಯಾರ್ ರವರ ಸ್ಪೂರ್ತಿಯ ನುಡಿಗಳು ಇಷ್ಟವಾದವು.
ಸ್ಥಿರದಂತೆ ಕಂಡರೂ ಯಾವುದೂ ಸ್ಥಿರವಲ್ಲ ಎಲ್ಲವೂ ನಿರಂತರ ಚಲನೆಯಲ್ಲಿರುತ್ತದೆ ಎಂಬುದನ್ನು ಭೂಮಿಯು ತನ್ನಅಕ್ಷದಲ್ಲಿ ಸುತ್ತುವ ಚಲನೆ, ಸೂರ್ಯನ ಸುತ್ತ ಸುತ್ತುವ ಚಲನೆ, ಚೊತೆಗೆ ಸೂರ್ಯನ ಚಲನೆಯನ್ನು ತಿಳಿಸಿದ ಪರಿ ದಿವಾಕರ ಸರ್ ರವರ ವೈಜ್ಞಾನಿಕ ಲೇಖನದಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಒಗಟಿನ ಮೂಲಕ ಅರವಿಂದ ಸರ್ ರವರು ಹೊಸ ಹಕ್ಕಿ ಚಿಟ್ಟು ಮಡಿವಾಳದ ಪರಿಚಯ ಕುತೂಹಲ ಮೂಡಿಸಿತು.
ಈ ಸಲದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ವಿಜಯ ಮೇಡಂ ರವರಿಂದ ಮಧುಮಾಲತಿ ಎನ್ನುವ ಸುಂದರ ಸಸ್ಯದ ಪರಿಚಯ ವಿವರವಾಗಿ ಸೊಗಸಾಗಿತ್ತು.
ಬಿಗ್ ಬಾಸ್ ರಿಯಾಲಿಟಿ ಶೋ ಹಾಗೂ ಮನೆಯ ಸುತ್ತಮುತ್ತಲಿನ ವಾತಾವರಣಕ್ಕಿರುವ ತುಲನೆಯನ್ನು ಯಾಕುಬ್ ಸರ್ ತಮ್ಮ ಸಂಚಿಕೆಯಲ್ಲಿ ಸುಂದರವಾಗಿ ತಿಳಿಸಿದ್ದಾರೆ.
ಚಿಕ್ಕ ಮಕ್ಕಳಿಗಾಗಿ, ಕನ್ನಡ ಕಲಿಯುವವರಿಗಾಗಿ ಇರುವ ಸುಂದರ ಪುಸ್ತಕದ ಪರಿಚಯವಾಣಿಯಕ್ಕ ನವರಿಂದ.
ಬಹಳ ದಿನಗಳ ನಂತರ ಪ್ರತಿಭಾ ಪರಿಚಯದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಶೌರ್ಯರವರ ಪರಿಚಯ ಉತ್ತಮವಾಗಿತ್ತು. ರಮೇಶ್ ನಾಯ್ಕ ಉಪ್ಪುಂದ ರವರ ಪದದಂಗಳ ಚೆನ್ನಾಗಿ ಮೂಡಿ ಬಂದಿತ್ತು.
ಈ ವಾರದ ಸಂಚಿಕೆ ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ನನ್ನ ನಮನಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಗಣೇಶ್ ಚಾಮೆತ್ತಮೂಲೆ, ವಿದ್ಯಾ ಕಾರ್ಕಳ ಸಹಶಿಕ್ಷಕಿ .... ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************