-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 81

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 81

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 81
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
      

ಪ್ರೀತಿಯ ಮಕ್ಕಳೇ... ಕಳೆದ ವಾರ ನಾನು ನೆಟ್ವರ್ಕ್ ಗೆ ಬರಲು ಸಾಧ್ಯವಾಗದೇ ಇದ್ದುದರಿಂದ ನಿಮ್ಮನ್ನು ಸಂಧಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳಬೇಕು ಅಂದುಕೊಂಡೆ. ಆದರೆ ಭಾಷಣ ಮತ್ತು ಲೇಖನಗಳನ್ನು ಕ್ಷಮಾಪಣೆಯೊಂದಿಗೆ ಆರಂಭಿಸಬಾರದು ಎಂಬ ಶಿಷ್ಟಾಚಾರವಿದೆ. ಆದ್ದರಿಂದ ನಾನು ಎಂದಿನಂತೆಯೇ ಮುಂದುವರುಸುತ್ತೇನೆ.

ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋರೊಫಿಲ್ ನಲ್ಲಿ ಎರಡು ಸಂಯುಕ್ತಗಳಿವೆ. ಮೊದಲನೆಯದ್ದು ಕ್ಲೋರೊಫಿಲ್ ಎ (chlorophyll a). ಇದು ಹೆಚ್ಚಿನ ಎಲ್ಲಾ ಹಸಿರು ಸಸ್ಯಗಳು, ಪಾಚಿಗಳು ಮತ್ತು ಸಯನೋಬ್ಯಾಕ್ಟೀರಿಯಾಗಳಲ್ಲಿ ಕಂಡು ಬರುತ್ತದೆ. ಇದು ನೀಲಿ ಮತ್ತು ಕೆಂಪು ಬೆಳಕನ್ನು ಹೀರಿಕೊಂಡು ಅಗತ್ಯ ಎಲೆಕ್ಟ್ರಾನ್ ಗಳನ್ನು ಹೀರಿಕೊಂಡು ನೇರವಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ನೇರವಾಗಿ ಭಾಗವಹಿಸುತ್ತವೆ. ಅಂದರೆ ಬೆಳಕಿನಲ್ಲಿರುವ ನೀಲಿ ಮತ್ತು ಕೆಂಪು ಬೆಳಕು ಹೀರಲ್ಪಡುವುದರಿಂದ ಎಲೆಗಳು ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಕಾಣಿಸಲು ಅವಕಾಶವಿಲ್ಲ ಎಂದಾಯಿತು. ಹಾಗಾದರೆ ಉಳಿದ 5 ಬಣ್ಣಗಳಲ್ಲಿಯಾದರೂ ಎಲೆ ಕಾಣಿಸಬಹುದಲ್ಲವೇ? ಎಂಬುದು ನಿಮ್ಮ ಮುಂದಿನ ಪ್ರಶ್ನೆ ಅಲ್ಲವೇ? ಆ ಸಾಧ್ಯತೆಯನ್ನು ನೋಡೋಣ.

ಎರಡು ರೀತಿಯ ಕ್ಲೋರೊಫಿಲ್ ಗಳಿವೆ ಎಂದಿದ್ದೆನಲ್ಲವೇ ಆ ಎರಡನೆಯ ವಿಧ ಕ್ಲೋರೊಫಿಲ್ ಬಿ. ಇದು ಕ್ಲೋರೊಫಿಲ್ ಎ ಗಿಂತ ಒಂದು ಹೆಚ್ಚುವರಿ ಮಗ್ಗುಲು ಸರಪಣಿಯನ್ನು ಹೊಂದಿದೆ. ಇವು ನೇರವಾಗಿ ದ್ಯುತಿ ಸಂಶ್ಲೇಷಣೆಯಲ್ಲಿ ಭಾಗವಹಿಸುವುದಿಲ್ಲ ಬದಲಾಗಿ ತಾವು ಶಕ್ತಿಯನ್ನು ಹೀರಿಕೊಂಡು ಕ್ಲೋರೊಫಿಲ್ ಎ ಗೆ ಒದಗಿಸುತ್ತವೆ. ಇವು ಬೆಳಕಿನ ವರ್ಣಪಟಲದ ನೇರಳೆಯಿಂದ ನೀಲಿ ಅಂದರೆ ನೇರಳೆ, ಊದಾ ಮತ್ತು ನೀಲಿ ಹಾಗೂ ಹಳದಿ ಮತ್ತು ಕಿತ್ತಳೆ ತರಂಗಾಂತರವನ್ನು ಹೀರಿಕೊಳ್ಳುತ್ತವೆ. ಈ ರೀತಿ ಇದು ದ್ಯುತಿ ಸಂಶ್ಲೇಷಣೆಗೆ ಬಳಸಲ್ಪಡುವ ಬೆಳಕಿನ ವರ್ಣಪಟಲದ ವಿಸ್ತಾರವನ್ನು ಹಿಗ್ಗಿಸುತ್ತದೆ. ಇದರಿಂದ ಗರಿಷ್ಠ ಶಕ್ತಿಯ ಕೊಯ್ಲು (energy harvesting) ಸಾಧ್ಯವಾಗುತ್ತದೆ. ಕ್ಲೋರೊಫಿಲ್ ಬಿ ಒಂದು ಸಹಾಯಕ ಅಥವಾ ಹೆಚ್ಚುವರಿ ವರ್ಣಕ (accessory pigment). ಕ್ಲೋರೊಫಿಲ್ ಬಿ ಎಲ್ಲಾ ನೆಲಸಸ್ಯಗಳು, ಹಸಿರು ಪಾಚಿಗಳು (green algae) ಹುಲ್ಲು, ಮರಗಳು ಮತ್ತು ಹೂವಿನಲ್ಲಿ ಕಂಡು ಬರುತ್ತವೆ. 

ಈಗ ನೋಡಿ ಬೆಳಕಿನಲ್ಲಿರುವ ನೇರಳೆ, ಊದಾ, ನೀಲಿ, ಹಳದಿ, ಕಿತ್ತಳೆ ಮತ್ತು ಕೆಂಪು ಎಲ್ಲಾ ಬಣ್ಣಗಳೂ ಹೀರಲ್ಪಡುವುದರಿಂದ ಎಲೆಗಳು ಈ ಎಲ್ಲಾ ಬಣ್ಣಗಳಲ್ಲಿ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಯಾರಿಗೂ ಬೇಡವಾದ ಹಸಿರು ಪ್ರತಿಫಲಿಸಲ್ಪಡುತ್ತದೆ. ಆದ್ದರಿಂದ ಎಲೆಗಳು ಹಸಿರಾಗಿರುತ್ತವೆ. 

ಕ್ರೋಟನ್ ಎಲೆಗಳು ವೈವಿಧ್ಯಮಯವಾಗಿವೆ ಏಕೆ? ಮತ್ತು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಹಸಿರು ತರಂಗಾಂತರ ಏಕೆ ಬೇಡ ಎನ್ನುವುದನ್ನು ನಿಮ್ಮ ಶಿಕ್ಷಕರನ್ನು ಕೇಳಿ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 




Ads on article

Advertise in articles 1

advertising articles 2

Advertise under the article