-->
ಅಕ್ಕನ ಪತ್ರ - 34

ಅಕ್ಕನ ಪತ್ರ - 34

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 34


ನಮಸ್ತೆ ಮಕ್ಕಳೇ..... ಹೇಗಿದ್ದೀರಿ? 
        ರಜೆಯಲ್ಲಿ ಎಷ್ಟೊಂದು ಸಂಭ್ರಮ ಅಲ್ವಾ? ಎಲ್ಲದರೊಳಗೂ ಕಲಿಕೆ ಇದೆ... ಎಲ್ಲ ಅನುಭವಗಳಲ್ಲಿಯೂ ಬದುಕಿನ ಪಾಠ ಇದೆ.... ಅಲ್ವಾ?
        ದಕ್ಷಿಣ ಕನ್ನಡ ಜಿಲ್ಲೆಯ ತುಂಬಾ ಕಾಂತಾರ ಸಿನೆಮಾ ಹವಾ...! ಜಿಲ್ಲೆ, ರಾಜ್ಯ, ರಾಷ್ಟ್ರದ ಗಡಿಯನ್ನು ದಾಟಿ ಸದ್ದು ಮಾಡುತ್ತಿರುವ ಈ ಚಲನಚಿತ್ರವನ್ನು ಬಹುಪಾಲು ಎಲ್ಲರೂ ವೀಕ್ಷಿಸಿರಬೇಕಲ್ಲಾ...?
       ಕರಾವಳಿಯ ಜನರ ಬದುಕಿನ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ.... ಹೀಗೆ ಎಲ್ಲವನ್ನೂ ಒಂದರೊಳಗೆ ಹೆಣೆದ ಚಿತ್ರ....
       ಅಂದ ಹಾಗೆ ಚಲನಚಿತ್ರವನ್ನು ವೀಕ್ಷಿಸಿ ಎನ್ನುವ ಜಾಹೀರಾತಿಗಾಗಿ ಈ ಪತ್ರ ಖಂಡಿತಾ ಅಲ್ಲ...! ಆ ಕಾಲದ ಆಚರಣೆ, ನಂಬಿಕೆಗಳಲ್ಲಿನ ಜೀವಂತಿಕೆಯ ಬಗ್ಗೆ ಬೆರಗಾದೆ. ಹಳ್ಳಿಯ ಜನಸಾಮಾನ್ಯರು ಪ್ರಾಮಾಣಿಕತೆ, ಸತ್ಯ, ನ್ಯಾಯ, ಕರ್ತವ್ಯ ನಿಷ್ಠೆಯೊಂದಿಗಿನ ಸಹಬಾಳ್ವೆಯ ಮೂಲಕ ಬದುಕನ್ನು ಸಾಗಿಸುವ (ಸಂಭ್ರಮಿಸುವ)
ಚಿತ್ರಣ ಅದೆಷ್ಟು ಆಪ್ತ! 
     ನಂಬಿಕೆಯ ಮೂಲಕ ಉಳಿದುಕೊಂಡ ಮುಗ್ಧತೆಗೆ ಸಿಕ್ಕ ಗೆಲುವಿನ ಕ್ಷಣಗಳು ಅಮೂಲ್ಯ ಪಾಠವಾಗಿ ಉಳಿದು ಹೋಗುತ್ತದೆ.
    ನಾವೇನು ಅರ್ಥಮಾಡಿಕೊಳ್ಳಬಹುದು...? ಈ ಚಲನಚಿತ್ರ ವೀಕ್ಷಣೆಯಿಂದ ನಮಗೆ ಅದ್ಯಾವ ವೈಯಕ್ತಿವಾದ ಲಾಭವೂ ಮೇಲ್ನೋಟಕ್ಕೆ ಗೋಚರಿಸಲಿಕ್ಕಿಲ್ಲ. ಆದರೆ ಪರಸ್ಪರರ ನಂಬಿಕೆ, ಆಚರಣೆಗಳನ್ನು ಜಾತಿ, ಧರ್ಮದ ಗಡಿಯನ್ನು ಮೀರಿ ಗೌರವಿಸಬೇಕೆನ್ನುವ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದಂತೂ ಸತ್ಯ...!ವಿಮರ್ಶೆಗಳನ್ನು ದಾಟಿ ತೆರೆದ ಹೃದಯದೊಂದಿಗೆ ಸಿನೆಮಾದ ಒಳ ಹೊಕ್ಕಾಗ, ನಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆಯುಂಟಾಗುತ್ತದೆ. ಕೇವಲ ಚಲನಚಿತ್ರವಾಗಿ ಮುಗಿದು ಹೋಗದೆ ಭಾವನಾತ್ಮವಾಗಿ ನಮ್ಮನ್ನು ಬೆಸೆಯುವ ಈ ಅವಕಾಶದ ಮೂಲಕ ಮರೆತು ಹೋದ ಆಚರಣೆಗಳು, ಮೌಲ್ಯ ಕಳೆದುಕೊಂಡ ಸಂಬಂಧಗಳನ್ನು ಮರುಜೋಡಿಸುವ ಸಾಧ್ಯತೆಯನ್ನು ಸಾರುವ ಈ ಚಲನಚಿತ್ರ ದೂರದೂರಿನಲ್ಲಿರುವ ನಮ್ಮವರ ದೂರವಾಣಿ ಕರೆಗೆ ಕಾರಣವಾಗುತ್ತದೆ!. ಕಂಬಳ, ಭೂತಕೋಲದ ಪಾವಿತ್ರ್ಯತೆಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾಯುವಂತೆ ಮಾಡುತ್ತದೆ.
       ಮಕ್ಕಳೇ, ಹಿರಿಯರ ಕೆಲವೊಂದು ನಂಬಿಕೆ, ಆಚರಣೆಗಳೆದುರು ನಮ್ಮ ಪಾಂಡಿತ್ಯವನ್ನು ಅತಿಯಾಗಿ ಪ್ರದರ್ಶಿಸಿ ನೆಮ್ಮದಿಯನ್ನು ದೂರ ಮಾಡಬಾರದೆನ್ನುವ ಪಾಠವನ್ನು ಸ್ವತಃ ಅರಿಯಬೇಕಿದೆ.
       ಜಗಲಿಯಲ್ಲೂ ಸಿನೇಮಾದ್ದೇ ಚರ್ಚೆ ಅಂತೀರಾ...? ಬದುಕನ್ನು ಸಂಭ್ರಮಿಸುವಂತೆ ಮಾಡುವ ಹಬ್ಬ ಹಾಗೂ ಇತರ ಸಾಂಪ್ರದಾಯಿಕ ಆಚರಣೆಗಳು ಖಂಡಿತಾ ಬೇಕಲ್ವಾ...? ಆಧುನಿಕ ಜಗತ್ತಿನ ತಂತ್ರಜ್ಞಾನ ಯುಗದಲ್ಲಿ ಇವೆಲ್ಲವೂ ಕಳೆದುಕೊಂಡ ಮಹತ್ವವನ್ನು ಮತ್ತೆ ಗಳಿಸುತ್ತಿರುವುದರ ಅನಿವಾರ್ಯತೆ ನಮಗೆಲ್ಲ ಅರಿವಾಗಿರಬಹುದು. ನಿಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರಿದ ಇಂತಹದ್ದೇ ಅನುಭವ, ಆಚರಣೆಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ತೀರಲ್ಲಾ?
    ಕಳೆದ ಬಾರಿಯ ಪತ್ರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾ, ಶ್ರಾವ್ಯ, ಸಾತ್ವಿಕ್ ಗಣೇಶ್, ಧೃತಿ, ಸ್ರಾನ್ವಿ ಶೆಟ್ಟಿ, ಶಿಶಿರ್ ಎಸ್, ಲಹರಿ ಜಿ.ಕೆ... ನಿಮ್ಮೆಲ್ಲರ ಆಸಕ್ತಿ ಖುಷಿ ನೀಡಿತು.
    ಆರೋಗ್ಯ ಜೋಪಾನ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article