-->
ಸ್ಪೂರ್ತಿಯ ಮಾತುಗಳು : ಸಂಚಿಕೆ - 237

ಸ್ಪೂರ್ತಿಯ ಮಾತುಗಳು : ಸಂಚಿಕೆ - 237

ಸ್ಪೂರ್ತಿಯ ಮಾತುಗಳು : ಸಂಚಿಕೆ - 237
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093


“ಮಕ್ಕಳೇ ರಾಷ್ಟ್ರದ ಭಾವಿ ಸಂಪನ್ಮೂಲ” ಎಂಬ ಮಾತಿಗೆ ಬಲವಾದ ಸಮರ್ಥನೆ ನೀಡಿದ ಅದ್ಭುತವಾದ ಕಾರ್ಯಕ್ರಮ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನದ ಒಂದು ಭಾಗವಾಗಲು ದೊರೆತ ಅವಕಾಶದಿಂದಾಗಿ ಮಕ್ಕಳ ಅಪ್ರತಿಮ ಪ್ರತಿಭೆಯನ್ನು ಬಹಳ ಹತ್ತಿರದಿಂದ ಗಮನಿಸುವ ಸೌಭಾಗ್ಯವನ್ನು ಭಗವಂತನೇ ನನಗೆ ಕರುಣಿಸಿದನು.

ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ನಾಲ್ಕು ಬಲವಾದ ಸ್ತಂಭಗಳೆಂದರೆ ಪ್ರಮುಖವಾಗಿ ಒಡಿಯೂರು ಸಂಸ್ತಾನದ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿಗಳವರು, ಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿಯವರು, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕರಾದ ಮಾನ್ಯ ಸೇರಾಜೆ ಗಣಪತಿ ಭಟ್ ಮತ್ತು ಶಾಲಾ ಮುಖ್ಯ ಶಿಕ್ಷಕಿ ಮಾತೃಹೃದಯಿ ರೇಣುಕಾ ಎಸ್ ರೈ. ಇವರೊಂದಿಗೆ ವಿದ್ಯಾ ಪೀಠದ ಶಿಕ್ಷಕ ಸಮೂಹ ಮತ್ತು ಬಾಲಕೇಂದ್ರಗಳ ಮಾತಾಜಿಗಳ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಶ್ರೀಯುತ ತಾರಾನಾಥ ಕೈರಂಗಳ, ಸಹ ಶಿಕ್ಷಕರಾದ ಶೇಖರ ಶೆಟ್ಟಿ ಬಾಯಾರು, ಶಿಕ್ಷಕರಾದ ಶಶಿಕಾಂತ ಚೆಂಬರ್ಪು ನಮ್ಮೊಂದಿಗೆ ಬೇರುಗಳಾಗಿ ಯಶಸ್ಸಿಗೆ ಭೂಮಿಕೆಯಾದರು. ಒಡಿಯೂರು ಶಾಲಾ ಮಕ್ಕಳು ಯಶಸ್ಸಿನ ಹೃದಯ ಭಾಗವಾದರು.

ಒಡಿಯೂರು ಸಾಹಿತ್ಯ ಸಮ್ಮೇಳನ ಜರಗಿದ್ದು ದಿನಾಂಕ 11.10.2026ರ ರಂದು, ಎಂದರೆ ಶರನ್ನವರಾತ್ರಿಯ ಪ್ರತಿಪದೆಯ ಶುಭದಿನ. ಏಳು ದಿನ ಪೂರ್ವದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಚಿತ್ರ, ಪ್ರಬಂಧ ಬರವಣಿಗೆ, ಭಾವಗೀತ ಗಾಯನ, ಭಾಷಣ ಸ್ಪರ್ಧೆಗಳು ನಡೆದುವು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳ ದೊಡ್ಡ ಸಂಖ್ಯೆಯೇ ಸಮ್ಮೇಳನದ ಯಶಸ್ಸಿನ ಮೊದಲ ಮೆಟ್ಟಿಲು. ಅದರ ನಂತರವೇ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಗಾಡಿ ತನ್ನ ನಡಿಗೆಗೆ ಓಟದ ವೇಗ ನೀಡಿತೆಂದರೆ ಅಸಮಂಜಸವಾಗದು. ಸಮ್ಮೇಳನದಲ್ಲಿ ಹಮ್ಮಿಕೊಳ್ಳಬೇಕಾದ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಅಂತಿಮಗೊಳಿಸಲಾಯಿತು.

◾ಸಮ್ಮೇಳನಾಧ್ಯಕ್ಷೆಯಾದ ಸಾನ್ವಿ ಚೆಂಬರ್ಪು ಅವರ ಸಾಧನೆಗಳ ಕಿರುನೋಟ : 2021 ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮೈಸೂರು ಇವರು ಆಯೋಜಿಸಿದ 18 ಅಧ್ಯಾಯಗಳ ಸಂಪೂರ್ಣ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ನದ ಪದಕ, ಅದೇ ವರ್ಷ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ನಡೆಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ 2022 ರಲ್ಲಿ ಶ್ರೀ ಗುರುದೇವ ದತ್ತ ಸಂಸ್ಥಾನಂ ಇಲ್ಲಿ ನಡೆದ ಗ್ರಾಮೋತ್ಸವದಲ್ಲಿ ಪೂಜ್ಯ ಶ್ರೀಗಳಿಂದ ಚಿನ್ನದ ಪದಕದೊಂದಿಗೆ ಬಾಲ ಪ್ರತಿಭಾ ಪುರಸ್ಕಾರ, 2022 ರಲ್ಲಿ ರೇಡಿಯೋ ಪಾಂಚಜನ್ಯ, ಮುಳಿಯ ಜ್ಯುವೆಲ್ಸ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. 2023 ರಲ್ಲಿ ಶೃಂಗೇರಿಯ ಶ್ರೀ ಶಾರದಾ ಪೀಠ ಆಯೋಜಿಸಿದ ಭಗವದ್ಗೀತೆ ಪರೀಕ್ಷೆಯಲ್ಲಿ ಪ್ರಥಮ ಬಹುಮಾನದೊಂದಿಗೆ ನಗದು ಪುರಸ್ಕಾರ. 2026 ರಲ್ಲಿ ಶೃಂಗೇರಿಯ ಶಾರದಾ ಪೀಠ ಶಂಕರ ವಿಜಯ ಎಂಬ ಶೀರ್ಷಿಕೆಯಡಿ ಆಯೋಜಿಸಿದ ಸ್ತೋತ್ರ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. 2021 ರಿಂದ 2026 ರವರೆಗೆ ಇಸ್ಕಾನ್ ಸೌತ್ ಬೆಂಗಳೂರು ಇವರು ಪ್ರತಿ ವರ್ಷ ಆಯೋಜಿಸುವ ರಾಮನವಮಿ ಹಾಗೂ ಶೀ ಕೃಷ್ಣ ಜನ್ಮಾಷ್ಟಮಿಯ ವಿವಿಧ ಸ್ಪರ್ಧೆಗಳಲ್ಲಿ ಪೌರಾಣಿಕ ರಸಪ್ರಶ್ನೆ, ಕಥೆ ಹೇಳುವುದು, ಸ್ತೋತ್ರ ಕಂಠಪಾಠ ಇತ್ಯಾದಿ ಸ್ಪರ್ಧೆಗಳಲ್ಲಿ ಪ್ರತಿ ವರ್ಷವೂ ಹಲವು ಬಹುಮಾನಗಳು. 2025 ರಲ್ಲಿ ಕರೋಪಾಡಿ ಗ್ರಾಮ ಪಂಚಾಯತ್ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಪ್ರಾಥಮಿಕ ಹಂತದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯ ಭಗವದ್ಗೀತೆ ಕಂಠಪಾಠ , ಕಥೆ ಹೇಳುವ ಸ್ಪರ್ಧೆಗಳಲ್ಲಿ ಹಲವು ಬಾರಿ ಬಹುಮಾನಗಳು. ಪ್ರೌಢ ಹಂತದಲ್ಲಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ರಾಜ್ಯ ಪುರಸ್ಕಾರ ಪಡೆದಿದ್ದು, ರಾಷ್ಟಪತಿ ಪುರಸ್ಕಾರ ಪರೀಕ್ಷೆಗೆ ಸಿದ್ಧತೆ. ಮಕ್ಕಳ ಜಗಲಿ ಡಿಜಿಟಲ್ ಪತ್ರಿಕೆಗೆ ಹಲವು ಲೇಖನಗಳು ಈ ಎಲ್ಲ ಸಾಧನೆಗಳ ಜೊತೆಗೆ ಗುಣ ಸಂಪನ್ನತೆ, ನಯ ವಿನಯ, ಸೌಶೀಲ್ಯತೆ ಸಜ್ಜನಿಕೆ, ಸುಂದರ ನಗುವಿನ ರಾಶಿ…..

ಶೋಭಾಯಾತ್ರೆ, ಧ್ವಜಾರೋಹಣ, ಉದ್ಗಾಟನೆ, ಕಾವ್ಯಗೋಷ್ಠಿ, ಕಥಾ ಗೋಷ್ಠಿ, ಸಂವಾದ ಕಾರ್ಯಕ್ರಮ, ಗಮಕ ವಾಚನ ಗಾಯನ, ಕಾವ್ಯ ನೃತ್ಯ ಕುಂಚ ಹೀಗೆ ಒಂದೊಂದೇ ಚಟುವಟಿಕೆಗಳ ಸ್ವರೂಪವನ್ನು ಐದಾರು ದಿನಗಳಲ್ಲಿ ವಿಮರ್ಶಿಸಿ ಅಂತಿಮಗೊಳಿಸಲಾಯಿತು. ಬೇರೆ ಬೇರೆ ಶಾಲೆಗಳ ಮಕ್ಕಳನ್ನು ಸಂಪರ್ಕಿಸಿ ಅವರು ನಮ್ಮ ಸಮ್ಮೇಳನದ ವೇದಿಕೆಯ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಹಕರಿಸುವಂತೆ ವಿನಂತಿಸಲಾಯಿತು. ಸಂಪರ್ಕದ ಕೆಲಸವನ್ನು ಒಂದು ದಿನವಿಡೀ ಮಾಡಲಾಯಿತು. ನಾವು ವಿನಂತಿಸಿದ ಮಕ್ಕಳೆಲ್ಲರೂ ಅತ್ಯುತ್ಸಾಹದಿಂದ ಸಮ್ಮೇಳನದ ಯಶಸ್ಸಿಗೆ ಬೆನ್ನೆಲುಬಾಗಲು ಸಿದ್ಧರಾದುದೂ ಸಮ್ಮೇಳನದ ಯಶಸ್ಸಿನ ಮುನ್ಸೂಚನೆಯಾಯಿತು. 

ಇನ್ನು ಪರಿಕರಗಳು, ಸ್ಪರ್ಧೆಗಳಲ್ಲಿ ಭಾಗವಹಿಸಿದ, ಗೆದ್ದ ಕಂದಮ್ಮಗಳಿಗೆ ಬಹುಮಾನ ಪ್ರಮಾಣ ಪತ್ರ, ಹೀಗೆ… ಹಲವಾರು ವಿಚಾರಗಳು : ನಮ್ಮೊಡನೆ ಇರುವ ಎಪ್ಪತ್ತನಾಲ್ಕರ ಯುವಕ ಸೇರಾಜೆ ಗಣಪಣ್ಣರಿದ್ದಾಗ ಈ ಬಗ್ಗೆ ಯೋಚಿಸುವುದುಂಟೇ..? ಇನ್ನುಳಿದಿರುವುದು ಮೂರುದಿನ. ಮಕ್ಕಳು ಇದನ್ನು ನಿಭಾಯಿಸಿಯಾರೇ? ಸಮ್ಮೇಳನವನ್ನು ಕೆಲದಿನಗಳಿಗೆ ಮುಂದೂಡಿದರೆ ಹೇಗೆ ಎಂಬ ಚಿಂತನೆಯೂ ಒಬ್ಬಿಬ್ಬರಲ್ಲಿ ಮೂಡಿದ್ದರೆ ಅದು ಭಯವಲ್ಲ, ಸಮ್ಮೇಳನ ಯಶಸ್ವಿಯಾಗಬೇಕೆಂಬ ತುಮುಲ ಮತ್ತು ಕಾಳಜಿ. ಆದರೆ ಪೂರ್ವ ನಿರ್ಧಾರಿತ ದಿನಕ್ಕೆ ಜೈ ಎನ್ನಲಾಯಿತು. ಸಮ್ಮೇಳನ ಅಪೇಕ್ಷಿತ ಮಟ್ಟದಲ್ಲಿ ಮೆರೆದು ಜನಮಾನಸವನ್ನು ಸ್ಪರ್ಶಿಸಿದೆ. ಸಂಘಟನೆಯ ಭಾಗವಾಗಿ ನಾನು ಪ್ರಶಂಸೆ ಮಾಡುವುದು ಒಪ್ಪವಲ್ಲ. ಆದರೂ “ತೃಪ್ತಿ” ತಂದಿದೆ ಎನ್ನುವುದರಲ್ಲಿ ಅರ್ಥವಿದೆ. 

ಮಕ್ಕಳು ಮಕ್ಕಳಾಗಿ ಕಾಣಿಸದೆ ಪ್ರೌಢರಿಗಿಂತ ಮಿಗಿಲಾಗಿ ತೋರಿದ ನಿರ್ವಹಣಾ ದಕ್ಷತೆ ಮತ್ತು ಸಾಮರ್ಥ್ಯ ನಮ್ಮನ್ನು ಮಂತ್ರಮುಗ್ಧಗೊಳಿಸಿತು. ಸಮ್ಮೇಳನದಲ್ಲಿ ಪಾಲ್ಗೊಂಡ ಕೆಲವರು ನೀಡಿದ ಅಭಿಪ್ರಾಯಗಳ ಹಾರ ಹೀಗಿದೆ...

ಸೇರಾಜೆ ಗಣಪತಿ ಭಟ್, ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ತಾರಾನಾಥ ಕೈರಂಗಳ ಬಹಳ ಚೆನ್ನಾಗಿ ಶ್ರಮಿಸಿರುತ್ತಾರೆ. ಓಡಿಯೂರು ಶ್ರೀಗಳು ಮತ್ತು ಮಾತೆಯವರ ಸಂಕಲ್ಪವು ಸಕಾರಾತ್ಮಕವಾಗಿದ್ದು ಸಮಾಜದ ಪರಿವರ್ತನೆಗೆ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ ವೇದಿಕೆಯಾಗಲಿದೆ. ಧನ್ಯವಾದಗಳು ಎಂದು ಅನೇಕ ಕರೆಗಳು ಬಂದಿವೆ.

ಅಧ್ಯಕ್ಷೆ ಸಾನ್ವಿ ಚೆಂಬರ್ಪು ಮೊದಲ್ಗೊಂಡು ಪ್ರತಿಯೊಬ್ಬರ ನಿರ್ವಹಣೆಗಳನ್ನು ಪ್ರಶಂಸಿಸಲು ನಮ್ಮಲ್ಲಿ ಪದಗಳೇ ಇಲ್ಲವೆಂದವರು ಹಲವರು.

ಕಾರ್ಯಕ್ರಮಗಳು ನಿಲುಗಡೆಯಿಲ್ಲದೆ, ವೇದಿಕೆ ಖಾಲಿಯಾಗದಂತೆ ವಹಿಸಿದ ಶ್ರದ್ಧೆಗೂ ಹೊಗಳಿಕೆ ಬಂದಿದೆ. ಇವೆಲ್ಲವೂ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಹೆಗ್ಗಳಿಕೆ. ಅಲ್ಲಿನ ಕ್ರಿಯಾಶೀಲ ಶಿಕ್ಷಕ ಶಿಕ್ಷಕಿಯರ ಶ್ರಮದ ಫಲ.

ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ಗೌರವಾಧ್ಯಕ್ಷರಾದ ಶ್ರೀ ಭಾಸ್ಕರ ಅಡ್ವಳರು ಏ-1 ಎಂದೂ ಶೇಕಡಾ 100 ಯಶಸ್ಸು ಎಂದಿರುವುದು ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೆಳನ ಯಶಸ್ಸಿಗೆ ಸಂದ ಶಿಖರ ನುಡಿ. 

ಸಮ್ಮೇಳನದಲ್ಲಿ ತಾಲೂಕಿನ ನೂರಕ್ಕೂ ಹೆಚ್ಚು ಮಕ್ಕಳಿಗೆ ವೇದಿಕೆಯ ನಿರ್ವಹಣೆ ಸಿಕ್ಕಿದೆ. ವೀಕ್ಷಕರಾಗಿ ನೂರಾರು ವಿದ್ಯಾರ್ಥಿಗಳು ಬಂದಿದ್ದಾರೆ. ಆದರೆ ತಮ್ಮ ಮಕ್ಕಳ ಮೇರು ಸಾಮರ್ಥ್ಯವನ್ನು ಕಣ್ತುಂಬಿಕೊಳ್ಳಲು ಬಹುತೇಕ ಶಿಕ್ಷಕರು ವಿಫಲರಾದರೋ ಎಂಬ ಶಂಕೆ ನನ್ನಲ್ಲಿ ಮನೆ ಮಾಡಿತು. ಅದ್ಭುತ ಪ್ರೌಢಿಮೆಯ ಮಕ್ಕಳು, ಇಡೀ ಸಭೆಯನ್ನೇ ತಲೆದೂಗುವಂತೆ ಮಾಡಿದ್ದಾರೆ. ಉತ್ಕೃಷ್ಟವಾದ ಸಾಹಿತ್ಯ ಸಮ್ಮೇಳನದಲ್ಲಿ ಕೆಲವರು ನಿವೃತ್ತ ಶಿಕ್ಷಕರನ್ನು ಹೊರತುಪಡಿಸಿದರೆ ಒಡಿಯೂರು ವಿದ್ಯಾಪೀಠ ಮತ್ತು ಸಂಘಟನೆಯಲ್ಲಿ ಜೋಡಿತರಾದ ಶಿಕ್ಷಕರ ಉಪಸ್ಥಿತಿ ಮಾತ್ರವೇ ಎದ್ದು ಕಾಣುವಂತಿತ್ತು. ಈ ಬೆಳವಣಿಗೆಯು ಸಾಹಿತ್ಯದ ಮೇಲಿನ ಶಿಕ್ಷಕರ ಕಾಳಜಿಯನ್ನು ಸಾರ್ವಜನಿಕರು ಸಂದೇಹದಂದ ನೋಡುವಂತಾಗಿದೆ.
ಅನಿಸಿಕೆಗಳನ್ನು ಮುಂದಿನ ಭಾಗದಲ್ಲಿ ಓದಿ..
.............................. ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************



Ads on article

Advertise in articles 1

advertising articles 2

Advertise under the article