-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 89

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 89

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 89
ಲೇಖಕರು : ಶ್ರೀಮತಿ ಸುಪ್ರಿಯಾ 
ಸಹಶಿಕ್ಷಕಿ 
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ


ವಿದ್ಯಾರ್ಥಿಗಳ ಹೆತ್ತವರು ಶಿಕ್ಷಕರಿಗೆ ಈ ರೀತಿ ಹೇಳಿದರೆ ಶಿಕ್ಷಕರ ಪ್ರತಿಕ್ರಿಯೆ ಏನಿರಬಹುದು!!? 

ಬಹುಶಃ ನೀವು ನಿಮ್ಮದೇ ಆದ ಪ್ರತಿಕ್ರಿಯೆಗಳನ್ನು ಈಗಾಗಲೇ ನಿಮ್ಮ ಮನಸ್ಸಿನಲ್ಲಿ ಯೋಚಿಸುತ್ತಿರಬಹುದು.

ಆದರೆ ಇಂತಹದೊಂದು ಸಂದರ್ಭ ನನ್ನ ಸಹೋದ್ಯೋಗಿ ಒಬ್ಬರಿಗೆ ಎದುರಾದಾಗ ಅವರು ಅದನ್ನ ಯಾವ ರೀತಿ ನಿರ್ವಹಿಸಿದರು ಎಂಬುದರ ಬಗ್ಗೆ ನನ್ನ ಇಂದಿನ ಈ ಲೇಖನ.. 

ಅಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ನೋಡುವ ಸಲುವಾಗಿ ಮಕ್ಕಳ ಹೆತ್ತವರು ಶಾಲೆಗೆ ಬಂದಿದ್ದರು. 6ನೇ ತರಗತಿಯ ತರಗತಿ ಶಿಕ್ಷಕಿಯಾಗಿದ್ದ ನಾನು ನನ್ನ ವಿದ್ಯಾರ್ಥಿಗಳ ಎಲ್ಲಾ ಉತ್ತರ ಪತ್ರಿಕೆಗಳನ್ನು ನನ್ನ ಮೇಜಿನ ಮೇಲೆ ಇಟ್ಟು ಪೋಷಕರಿಗೆ ನೀಡುತ್ತಿದ್ದೆ. ಪೋಷಕರು ತಮ್ಮ ಮಕ್ಕಳ ಪ್ರಗತಿಯ ಬಗ್ಗೆ, ಸಮಸ್ಯೆಗಳ ಬಗ್ಗೆ ನನ್ನಲ್ಲಿ ಚರ್ಚಿಸಿ ಉತ್ತರಪತ್ರಿಕೆಗೆ ಸಹಿ ಮಾಡಿ ಹೋಗುತ್ತಿದ್ದರು.

ಸಂಜೆ ಸುಮಾರು 5:00 ರ ಹೊತ್ತಿಗೆ ಬಹುತೇಕ ಪೋಷಕರು ಸಹಿ ಮಾಡಿ ತೆರಳಿದ್ದರು. ಶಿಕ್ಷಕರು ಕೂಡ ಮನೆಗೆ ಹೊರಡುವ ತಯಾರಿಯಲ್ಲಿದ್ದೆವು. ಆಗ 6ನೇ ತರಗತಿಯ ವಿದ್ಯಾರ್ಥಿಯೊಬ್ಬನ ಅಮ್ಮ ಗಡಿಬಿಡಿ ಯಲ್ಲಿ ಒಳಗೆ ಬಂದರು. "ಟೀಚರ್, ಕ್ಷಮಿಸಿ ಬರುವುದು ಸ್ವಲ್ಪ ಲೇಟ್ ಆಯ್ತು, ದಯವಿಟ್ಟು ಪೇಪರ್ ತೋರಿಸ್ತೀರಾ?" ಕೇಳಿದರು. 'ಸರಿ ಕುಳಿತುಕೊಳ್ಳಿ' ಅಂತ ಹೇಳಿ ಅವರ ಮಗುವಿನ ಉತ್ತರ ಪತ್ರಿಕೆಗಳನ್ನು ಅವರ ಕೈಗೆ ನೀಡಿದೆ.

ಅವರ ಮಗ ಐದು ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಆದರೆ ಸಮಾಜ ವಿಜ್ಞಾನದಲ್ಲಿ ಮಾತ್ರ ಅತಿ ಕಡಿಮೆ ಅಂಕಗಳಿದ್ದವು. ಈ ಬಗ್ಗೆ ಆತನ ತಾಯಿ ತನ್ನ ಮಗನ ಬಗ್ಗೆ ನನ್ನಲ್ಲಿ ವಿಚಾರಿಸುತ್ತಿದ್ದರು. ಸ್ವಭಾವತಹ ಅತಿ ಚುರುಕು ಬುದ್ಧಿ ಹುಡುಗನಾಗಿದ್ದ ಆತ ತರಗತಿಯಲ್ಲಿ ತಂಟೆ ತಕರಾರುಗಳಲ್ಲಿಯೂ ಪ್ರಸಿದ್ಧನಾಗಿದ್ದ! ಅವನ ತುಂಟತನದ ಬಗ್ಗೆ ಆತನ ಅಮ್ಮನಿಗೂ ಅರಿವಿತ್ತು. ಆದರಲ್ಲೂ ಒಂದು ವಿಚಾರ ಅವರಿಗೆ ತುಂಬಾ ಸಮಸ್ಯೆಯಾಗಿ ಕಾಡುತ್ತಿತ್ತು . "ಮನೆಯಲ್ಲಿ ಯಾವುದೇ ವಿಷಯಗಳನ್ನು ಓದಲು ಹೇಳಿದರೆ ತಕರಾರಿಲ್ಲದೆ ಓದುತ್ತಾನೆ. ಆದರೆ ಸಮಾಜ ವಿಜ್ಞಾನ ಓದು ಅಂದ್ರೆ ಅವನು ಕೋಪಗೊಳ್ಳುತ್ತಿದ್ದ! ಅವನಿಗೆ ಆ ವಿಷಯವೇ ಇಷ್ಟವಿಲ್ಲ ಎನ್ನುವ ರೀತಿ ವರ್ತಿಸುತ್ತಾನೆ! ಏನು ಮಾಡಬೇಕೆಂದು ತಿಳಿಯುತ್ತಿಲ್ಲ!" ಎಂದರು. ಆಗ ನಮ್ಮ ಸ್ಟಾಫ್ ರೂಮ್ ನಲ್ಲಿದ್ದ 'ಸಮಾಜ ವಿಜ್ಞಾನ' ಶಿಕ್ಷಕರು ನಮ್ಮಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು!. 

"ನಿಮ್ಮ ಮಗ ಸೋಶಿಯಲ್ ನಲ್ಲಿ ತುಂಬಾ ಕಡಿಮೆ ಅಂಕಗಳನ್ನು ತೆಗೆದಿದ್ದಾನೆ! ಯಾಕೆ ಮನೆಯಲ್ಲಿ ಓದುವುದಿಲ್ಲವಾ?" ಎಂದು ಕೇಳಿದರು. ಆಗ ಆತನ ತಾಯಿ ಅವರ ಕಡೆಗೆ ತಿರುಗಿ "ಮೇಡಂ, ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು, ಯಾಕೋ ಗೊತ್ತಿಲ್ಲ ಅವನಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ! ನಿಮ್ಮ ಸಬ್ಜೆಕ್ಟ್ ಅನ್ನು ಕೂಡ ಅವನು ಇಷ್ಟಪಡುವುದಿಲ್ಲ! ಇದನ್ನು ಹೇಗೆ ಸರಿ ಮಾಡೋದು ಅಂತ ಗೊತ್ತಾಗುತ್ತಿಲ್ಲ"!! ಎಂದು ಅವರಿಗೆ ನೇರವಾಗಿ ಹೇಳಿದರು. 

ಅವರ ಮಾತುಗಳನ್ನು ಕೇಳಿ ನನಗೆ ಸ್ವಲ್ಪ ಕಸಿವಿಸಿಯಾಯಿತು. ಹೆತ್ತವರು ಶಿಕ್ಷಕರಲ್ಲಿ ತಮ್ಮ ಅಸಮಾಧಾನವನ್ನು ಈ ರೀತಿಯಾಗಿ ಹೇಳಿಕೊಂಡರೆ ಆ ಶಿಕ್ಷಕರಿಗೆ ಅವಮಾನವಾಗಿ ಅವರು ಕೋಪಗೊಳ್ಳುತ್ತಾರೆ. ಕೆಲವೊಮ್ಮೆ ಇಂತಹ ವಿಚಾರಗಳು ವಿಪರೀತ ಪರಿಸ್ಥಿತಿಗೆ ತಿರುಗುತ್ತದೆ. ಆಗ ಶಿಕ್ಷಕರು ಕೂಡ ವಿದ್ಯಾರ್ಥಿ ಮಾಡುವ ತೊಂದರೆಗಳನ್ನು, ಆತನಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಆತನ ಬಗ್ಗೆ ಎಲ್ಲಾ ರೀತಿಯ ದೂರುಗಳನ್ನು ಹೆತ್ತವರಿಗೆ ನೀಡುತ್ತಾರೆ. ಒಂದು ವೇಳೆ ನನಗೂ ಅಂತಹ ಸನ್ನಿವೇಶ ಬಂದಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆನೋ ಗೊತ್ತಿಲ್ಲ!. 

ಹಾಗಾಗಿ ಈ ಶಿಕ್ಷಕಿಯ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗೂ ಇತ್ತು. ಆದರೆ ಆಶ್ಚರ್ಯವೆಂಬಂತೆ ಆ ಶಿಕ್ಷಕಿಯು ಕೋಪಗೊಳ್ಳದೆ ಸಾವಧಾನವಾಗಿ ಆತನ ತಾಯಿಯೊಂದಿಗೆ ಮಾತಿಗಿಳಿದರು. 

"ನೀವು ಹೇಳಿದ್ದು ಸರಿ ಮೇಡಂ, ನಾನೂ ತರಗತಿಯಲ್ಲಿ ಅವನನ್ನು ಗಮನಿಸುತ್ತೇನೆ. ಅವನಿಗೆ ನಾನೆಂದರೆ ಇಷ್ಟವಿಲ್ಲ! ಅವನು ಐದನೇ ತರಗತಿಯಲ್ಲಿ ಇರುವಾಗ ಕೆಲವೊಮ್ಮೆ ಅವನ ಅತಿಯಾದ ತುಂಟತನದಿಂದಾಗಿ ಆತನಿಗೆ ನಾನು ತುಂಬಾ ಜೋರು ಮಾಡುತ್ತಿದ್ದೆ. ಆತನನ್ನು ಸುಮ್ಮನಿರಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದೆ. ಬಹುಶ: ನನ್ನ ಈ ವರ್ತನೆ ಅವನಿಗೆ ನನ್ನ ಮೇಲೆ ಬೇಸರ ಉಂಟು ಮಾಡಿರಬೇಕು. ಮುಂದಿನ ದಿನಗಳಲ್ಲಿ ನಿಧಾನವಾಗಿ ನನ್ನ ಬಗ್ಗೆ ಆತನಿಗಿರುವ ಅಭಿಪ್ರಾಯವನ್ನು ಸರಿ ಮಾಡಲು ಪ್ರಯತ್ನಿಸುತ್ತೇನೆ". ಎಂದರು. 

 "ಸರಿ ಟೀಚರ್, ನಾನು ಹೀಗೆಲ್ಲಾ ಹೇಳಿದೆ ಅಂತ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ." ತಾಯಿ ಹೇಳಿದಾಗ. ಆಗಲೂ ಯಾವುದೇ ಬೇಸರವನ್ನು ತೋರಿಸದೆ, "ಬೇಸರ ಏನಿಲ್ಲ ಮೇಡಂ ನನಗೂ ಸಮಸ್ಯೆಯ ಅರಿವಿದೆ ನಾನು ಮಾತನಾಡುತ್ತೇನೆ"! ಎಂದರು.

ನನಗಂತೂ ಇಂಥದ್ದೊಂದು ಪ್ರತಿಕ್ರಿಯೆ ಅತ್ಯಂತ ಅಪರೂಪ ಎಂದೆನಿಸಿತು. ಸಾಮಾನ್ಯವಾಗಿ ಶಿಕ್ಷಕರು ಪೋಷಕರಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳ ದೂರಿನ ಪಟ್ಟಿಯನ್ನೇ ಪೋಷಕರ ಮುಂದೆ ಇಡುತ್ತಾರೆ. ಆದರೆ ನನ್ನ ಸಹೋದ್ಯೋಗಿಯ ಪ್ರತಿಕ್ರಿಯೆ ನನಗೆ ಅಚ್ಚರಿ ಹಾಗೂ ಸಂತೋಷವನ್ನು ನೀಡಿತ್ತು. 

ಈ ಬಗ್ಗೆ ಅವರಲ್ಲಿಯೂ ಹೇಳಿದೆ. ಆಗ ಆಕೆ "ನನ್ನ ಮತ್ತು ಆ ವಿದ್ಯಾರ್ಥಿಯ ನಡುವಿನ ಸಂಬಂಧವನ್ನು ಯಾವ ರೀತಿ ಉತ್ತಮಗೊಳಿಸಬಹುದು ಎಂಬ ಬಗ್ಗೆ ಸಲಹೆ ಇದ್ದರೆ ತಿಳಿಸಿ" ಎಂದರು.

ತನ್ನನ್ನು ತಾನು ಬದಲಾಯಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಯಲ್ಲಿ ಬದಲಾವಣೆ ಕಂಡುಕೊಳ್ಳಬಹುದು ಎಂಬ ಸತ್ಯದ ಅರಿವು ಆ ಶಿಕ್ಷಕಿಗೆ ಆಗಿರುವುದನ್ನು ತಿಳಿದು ಅವರ ಮೇಲೆ ನನಗೆ ಅಭಿಮಾನ ಹೆಚ್ಚಾಯಿತು. ಮುಂದಿನ ದಿನಗಳಲ್ಲಿ ಕೆಲವೊಂದು ಮಕ್ಕಳ ಮನೋವಿಜ್ಞಾನದ ಪುಸ್ತಕಗಳನ್ನು ಓದುತ್ತಾ ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ನಾವಿಬ್ಬರು ಚರ್ಚೆ ಮಾಡುತ್ತಾ ಶಿಕ್ಷಕ - ವಿದ್ಯಾರ್ಥಿಯ ನಡುವೆ ಗೌರವದಿಂದ ಕೂಡಿದ ಪ್ರೀತಿ ಯನ್ನು ಹೇಗೆ ಬೆಳೆಸುವುದು ಹಾಗೂ ಆ ಪ್ರೀತಿ ಅತಿಯಾದ ಸಲುಗೆಯೂ ಆಗದಂತೆ ನಿಭಾಯಿಸುವುದರ ಮೂಲಕ ಸಂಬಂಧವನ್ನು ಯಾವ ರೀತಿ ಉತ್ತಮಗೊಳಿಸಬಹುದು ಎಂಬುದನ್ನು ಇವತ್ತಿಗೂ ಚರ್ಚೆ ಮಾಡುತ್ತಿರುತ್ತೇವೆ..

ಶಿಕ್ಷಕರ ಬಗ್ಗೆ ಅನೇಕ ಬಾರಿ ಋಣಾತ್ಮಕ ಅಭಿಪ್ರಾಯಗಳು, ಶಿಕ್ಷಕರ ವರ್ತನೆಗಳ ಬಗ್ಗೆ ದೂರುಗಳೇ ಹೆಚ್ಚಾಗಿ ಕೇಳುತ್ತಿರುವಂತಹ ಸಂದರ್ಭದಲ್ಲಿ ಇದಕ್ಕೆ ವಿರುದ್ಧವಾದಂತಹ, ಒಳ್ಳೆಯ ಮನಸ್ಸಿರುವ, ಬದಲಾವಣೆಗೆ ಸಿದ್ದರಿರುವ ಶಿಕ್ಷಕ ಮಿತ್ರರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಎಂಬುದರ ನೆನಪಾಗಿ ಈ ಅನುಭವ ಲೇಖನ ಸೃಷ್ಟಿಯಾಯಿತು.

"ಸಮಸ್ಯಾತ್ಮಕ ವಿದ್ಯಾರ್ಥಿಯನ್ನು ಯಾವ ರೀತಿ ಬದಲಾಯಿಸಬೇಕು ಎಂದು ಆಲೋಚಿಸುವುದರ ಜೊತೆಗೆ, ವಿದ್ಯಾರ್ಥಿಗಳೊಂದಿಗೆ ನಮ್ಮ ವರ್ತನೆಯನ್ನು ಬದಲಾಯಿಸಿ ಕೊಳ್ಳುವ ಮೂಲಕವೂ, ವಿದ್ಯಾರ್ಥಿಗಳಲ್ಲಿ ಪ್ರಗತಿಯನ್ನು ಕಾಣಬಹುದು." ಎಂಬ ಆರಿವಾದರೆ ಶಿಕ್ಷಣ ಹಾಗೂ ಶಾಲೆ ಎಂಬುದು ಮನಸ್ಸಿಗೆ ಹಿತ ನೀಡುವ ವಿಷಯವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
....................................... ಶ್ರೀಮತಿ ಸುಪ್ರಿಯಾ 
ಸಹಶಿಕ್ಷಕಿ 
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94820 45181
*******************************************



Ads on article

Advertise in articles 1

advertising articles 2

Advertise under the article