ನನ್ನ ಬೆಸ್ಟ್ ಟೀಚರ್ : ಸಂಚಿಕೆ - 02 : ಜಗಲಿಯ ವಿದ್ಯಾರ್ಥಿಗಳ ಬರಹಗಳು
Monday, September 7, 2026
Edit
ನನ್ನ ಬೆಸ್ಟ್ ಟೀಚರ್ : ಸಂಚಿಕೆ - 02
ನನ್ನ ಶಾಲಾ ಜೀವನದಲ್ಲಿ ಅನೇಕ ಶಿಕ್ಷಕರು ನನಗೆ ಪಾಠ ಕಲಿಸಿದ್ದಾರೆ. ಆದರೆ ಅವರಲ್ಲಿ ನನ್ನ ಮನಸ್ಸಿಗೆ ತುಂಬಾ ಇಷ್ಟವಾದವರು ನನ್ನ ನೆಚ್ಚಿನ ಸ್ವಾತಿ ಟೀಚರ್. ಸ್ವಾತಿ ಟೀಚರ್ ಎಂದರೆ ನನಗೆ ಬಹಳ ಇಷ್ಟ. ಅವರು ನನ್ನ ಬಳಿ ಸ್ನೇಹಿತರಂತೆ ಇದ್ದು, ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ನನ್ನೊಂದಿಗೆ ತಮಾಷೆಯಾಗಿ ಮಾತನಾಡುತ್ತಿದ್ದರು. ಅವರು ತುಂಬಾ ಒಳ್ಳೆಯ ಶಿಕ್ಷಕಿಯಾಗಿದ್ದರು.
ಸೆಪ್ಟೆಂಬರ್ - 5 : ಶಿಕ್ಷಕರ ದಿನಾಚರಣೆ - 2026
ಜಗಲಿಯ ವಿದ್ಯಾರ್ಥಿಗಳ ಬರಹಗಳು
ಬರಹಗಾರರು :
◾ಮೋಕ್ಷ , 6ನೇ ತರಗತಿ
◾ಕವಿತಾ, 10ನೇ ತರಗತಿ
◾ಭಾನುಶ್ರೀ 8ನೇ ತರಗತಿ
◾ಅಮೂಲ್ಯ, 10ನೇ ತರಗತಿ
◾ಚಿನ್ಮಯಿ, ದ್ವಿತೀಯ ಪಿಯುಸಿ
◾ತ್ರಿಷಾ ವಿ ಜಿ, 9ನೇ ತರಗತಿ
◾ಆಯಿಷತ್ ಮಂಝಿಯಾ, 9ನೇ ತರಗತಿ
◾ಅನುಷ್ಕಾ , 10ನೇ ತರಗತಿ
◾ಮಣಿಕಂಠ ಎಸ್ ಎಂ ಕುಲಾಲ್ ಮಳಲಿ, 10ನೇ ತರಗತಿ
ನನ್ನ ಶಾಲಾ ಜೀವನದಲ್ಲಿ ಅನೇಕ ಶಿಕ್ಷಕರು ನನಗೆ ಪಾಠ ಕಲಿಸಿದ್ದಾರೆ. ಆದರೆ ಅವರಲ್ಲಿ ನನ್ನ ಮನಸ್ಸಿಗೆ ತುಂಬಾ ಇಷ್ಟವಾದವರು ನನ್ನ ನೆಚ್ಚಿನ ಸ್ವಾತಿ ಟೀಚರ್. ಸ್ವಾತಿ ಟೀಚರ್ ಎಂದರೆ ನನಗೆ ಬಹಳ ಇಷ್ಟ. ಅವರು ನನ್ನ ಬಳಿ ಸ್ನೇಹಿತರಂತೆ ಇದ್ದು, ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ನನ್ನೊಂದಿಗೆ ತಮಾಷೆಯಾಗಿ ಮಾತನಾಡುತ್ತಿದ್ದರು. ಅವರು ತುಂಬಾ ಒಳ್ಳೆಯ ಶಿಕ್ಷಕಿಯಾಗಿದ್ದರು.
ಸ್ವಾತಿ ಟೀಚರ್ ನನಗೆ ಅನೇಕ ಅವಕಾಶಗಳನ್ನು ನೀಡಿದ್ದರು. ಇದರಿಂದ ನನಗೆ ತುಂಬಾ ಸಂತೋಷವಾಗುತ್ತಿತ್ತು. ಅವರಿಂದ ನಾನು ಜೀವನದಲ್ಲಿ ಒಳ್ಳೆಯ ಗುಣಗಳನ್ನು ಕಲಿತಿದ್ದೇನೆ.
ಒಮ್ಮೆ ಸ್ವಾತಿ ಮೇಡಂ ನನಗೆ ಭಾಷಣ ಮಾಡಲು ಅವಕಾಶ ನೀಡಿದರು. ಆಗ ನನಗೆ ಸ್ವಲ್ಪ ಭಯವಾಯಿತು. ನಾನು ಅವರ ಬಳಿ, “ನನಗೆ ಭಾಷಣ ಮಾಡಲು ಭಯವಾಗುತ್ತದೆ” ಎಂದು ಹೇಳಿದೆ. ಆಗ ಅವರು ನನಗೆ “ಧೈರ್ಯ ಮಾಡಿಕೋ” ಎಂದು ಹೇಳಿ ಪ್ರೋತ್ಸಾಹಿಸಿದರು. ಅವರ ಮಾತಿನಿಂದ ಧೈರ್ಯ ಪಡೆದು ನಾನು ಭಾಷಣ ಮಾಡಲು ಹೋದೆ. ಭಾಷಣವನ್ನು ಚೆನ್ನಾಗಿ ಹೇಳಿದ ನಂತರ ಅವರು ನನಗೆ ಒಂದು ಪೆನ್ನು ಕೊಟ್ಟರು. ಅದು ನನಗೆ ತುಂಬಾ ಸಂತೋಷವನ್ನು ನೀಡಿತು. ಆ ದಿನದ ನಂತರ ಮೈಕ್ನಲ್ಲಿ ಮಾತನಾಡಲು ನನಗೆ ಭಯವೇ ಆಗಲಿಲ್ಲ. ಬದಲಾಗಿ ಮೈಕ್ನಲ್ಲಿ ಮಾತನಾಡಲು ನನಗೆ ತುಂಬಾ ಸಂತೋಷವಾಗತೊಡಗಿತು.
ಸ್ವಾತಿ ಟೀಚರ್ ಅವರು ನಮಗೆ ಕೇವಲ ಪಾಠಗಳನ್ನು ಕಲಿಸುವ ಶಿಕ್ಷಕಿಯಲ್ಲ. ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು, ನಮ್ಮ ಗುರಿಯನ್ನು ಸಾಧಿಸಲು ಸದಾ ಪ್ರೇರೇಪಿಸುವ ಮಾರ್ಗದರ್ಶಕರಾಗಿದ್ದಾರೆ. ಅವರ ಮಾತುಗಳು ಮತ್ತು ಸಲಹೆಗಳು ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತವೆ.
ಅವರು ನಮಗೆ ಸ್ಪೋಕನ್ ಇಂಗ್ಲಿಷ್ ಪಾಠವನ್ನು ಕಲಿಸುತ್ತಿದ್ದರು. ಈ ತರಗತಿ ವಾರದಲ್ಲಿ ಎರಡು ದಿನ ಮಾತ್ರ ಇರುತ್ತಿತ್ತು. ಆದ್ದರಿಂದ ನನಗೆ ಸ್ವಲ್ಪ ಬೇಸರವಾಗುತ್ತಿತ್ತು. ಏಕೆಂದರೆ ನನಗೆ ವಾರದ ಎಲ್ಲಾ ದಿನಗಳೂ ಸ್ಪೋಕನ್ ಇಂಗ್ಲಿಷ್ ಕಲಿಯಬೇಕು ಎಂಬ ಆಸೆ ಇತ್ತು. ಸ್ವಾತಿ ಮೇಡಂ ಪಾಠಗಳನ್ನು ತುಂಬಾ ಸರಳವಾಗಿ ಮತ್ತು ಆಸಕ್ತಿಯಿಂದ ಕಲಿಸುತ್ತಿದ್ದರು. ನನಗೆ ಅರ್ಥವಾಗದ ವಿಷಯಗಳನ್ನು ಮತ್ತೆ ಮತ್ತೆ ವಿವರಿಸಿ ಹೇಳುತ್ತಿದ್ದರು.
ನನ್ನನ್ನು ಚೆನ್ನಾಗಿ ಕಲಿಸಿ, ಸದಾ ಪ್ರೋತ್ಸಾಹಿಸುವ ನನ್ನ ನೆಚ್ಚಿನ ಸ್ವಾತಿ ಟೀಚರ್ ಅವರಿಗೂ ಹಾಗೂ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
6ನೇ ತರಗತಿ
ಪಿ. ಎಂ. ಶ್ರೀ. ಕೆ. ಪಿ ಯಸ್ ಬಜಿರೆ ಶಾಲೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************
ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಎಂದರೆ ನನ್ನ ನೆಚ್ಚಿನ ಶಿಕ್ಷಕರಾದ ಪ್ರಕಾಶ್ ವಾರದ್ ಸರ್ ಅವರು. ಇವರು ನಮಗೆ ಪಠ್ಯ ಪುಸ್ತಕದ ಪಾಠಗಳನ್ನು ಮಾತ್ರವಲ್ಲದೆ ಜೀವನಮೌಲ್ಯಗಳನ್ನು ಸಹ ಕಲಿಸಿಕೊಡುತ್ತಾರೆ. ಅವರ ಬೋಧನಾ ಶೈಲಿ ಅತ್ಯಂತ ಸರಳವಾಗಿರುತ್ತದೆ. ಕಷ್ಟವಾದ ವಿಷಯಗಳನ್ನು ಆಟ ಮತ್ತು ಕಥೆಯ ಮೂಲಕ ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ. ಕಲಿಯುವಾಗ ಗೊಂದಲವಾದರೆ ಅವರ ಬಳಿ ಎಷ್ಟು ಬಾರಿ ಕೇಳಿದರೂ ತಾಳ್ಮೆಯಿಂದ ಹೇಳಿಕೊಡುತ್ತಾರೆ. ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸದಾ ಪ್ರೋತ್ಸಾಹಿಸುತ್ತಾರೆ. ತಪ್ಪು ಮಾಡಿದಾಗ ಕೋಪ ಮಾಡಿಕೊಳ್ಳದೆ ಅದನ್ನು ತಿದ್ದಿ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ನಮ್ಮ ಜೀವನಕ್ಕೆ
ಅವರ ಶಿಸ್ತು, ಸಮಯಪ್ರಜ್ಞೆ, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ದಾರಿದೀಪವಾಗಿದೆ. ಉತ್ತಮ ಶಿಕ್ಷಕರಾಗಿರುವುದರ ಜೊತೆಗೆ ನಮಗೆ ಬದುಕಿನ ದಾರಿ ತೋರುವ ಪ್ರಕಾಶ್ ಸರ್ ಅವರಿಗೆ ನನ್ನ ನಮನಗಳು.
ಹತ್ತನೇ ತರಗತಿ
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ ಜಿಲ್ಲೆ
**************************************
ನನ್ನ ಶಾಲಾ ದಿನಗಳಲ್ಲಿ ಹಲವು ಶಿಕ್ಷಕರು ನನಗೆ ಪಾಠ ಮಾಡಿದ್ದಾರೆ. ಆದರೆ ನನಗೆ ಅತ್ಯಂತ ಪ್ರಿಯರಾದವರು ಮತ್ತು ನನ್ನ ಮೆಚ್ಚಿನ ಶಿಕ್ಷಕರು ರಮೇಶ್ ಸರ್. ಅವರು ನಮಗೆ ಕನ್ನಡ ಪಾಠ ಮಾಡುತ್ತಾರೆ. ಅವರು ಯಾವಾಗಲೂ ಸರಳವಾದ ಬಿಳಿ ಬಟ್ಟೆ ಧರಿಸಿ, ಮುಖದಲ್ಲಿ ಸದಾ ನಗುಮೊಗದಿಂದ ಇರುತ್ತಾರೆ. ಅವರು ಎಷ್ಟೇ ಕಷ್ಟದ ಪಾಠವಾದರೂ ಕಥೆ ಮತ್ತು ಉದಾಹರಣೆಗಳ ಮೂಲಕ ನಮಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತಾರೆ. ಅವರು ಪಾಠ ಮಾಡುವಾಗ ನಮಗೆ ಎಂದೂ ಬೇಸರವಾಗುವುದಿಲ್ಲ. ರಮೇಶ್ ಸರ್ ಅವರಿಗೆ ತಾಳ್ಮೆ ಹೆಚ್ಚು. ನಮಗೆ ಯಾವುದೇ ವಿಷಯ ಅರ್ಥವಾಗದಿದ್ದರೆ, ಬೇಸರ ಮಾಡಿಕೊಳ್ಳದೆ ಎಷ್ಟು ಬಾರಿಯಾದರೂ ಪ್ರೀತಿಯಿಂದ ವಿವರಿಸುತ್ತಾರೆ. ಅವರು ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಹೆಚ್ಚಿನ ಗಮನ ನೀಡಿ ಪ್ರೋತ್ಸಾಹಿಸುತ್ತಾರೆ. ಅವರು ನಮಗೆ ಶಿಸ್ತಿನಿಂದ ಇರಲು ಕಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಸ್ನೇಹಿತರಂತೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಅವರು ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿರದೆ ಭಾಷಣ, ಪ್ರಬಂಧ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾವು ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ. ಅಷ್ಟೇ ಅಲ್ಲದೆ, ಜೀವನದಲ್ಲಿ ಉತ್ತಮ ವ್ಯಕ್ತಿಯಾಗುವುದು ಹೇಗೆ ಎಂಬುದನ್ನೂ ತಿಳಿಸಿಕೊಡುತ್ತಾರೆ.
8ನೇ ತರಗತಿ
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ - ಮರವಂತೆ.
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
**************************************
ನಮ್ಮ ಜೀವನದ ಪ್ರತಿಘಟ್ಟದಲ್ಲೂ ಕೂಡ ನಾವು ಅನೇಕ ಶಿಕ್ಷಕರನ್ನು ಕಾಣುತ್ತೇವೆ. ಆದರೆ ಜೀವನಕ್ಕೆ ಹೊಸದಿಕ್ಕನ್ನು ತೋರಿದವರು, ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ನನ್ನ ನೆಚ್ಚಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶೋಭಾ ಟೀಚರ್ ಅವರು.
ಶಿಕ್ಷಕರು ಎಂದರೆ ಬರೀ ಗುರುಗಳಲ್ಲ. ಅವರು ನಮ್ಮ ಪಾಲಿನ ಎರಡನೇ ಪೋಷಕರಾಗಿರುತ್ತಾರೆ. ನಮ್ಮ ಪೋಷಕರು ನಾವು ತಪ್ಪು ಮಾಡಿದಾಗ ಹೇಗೆ ತಿದ್ದುತ್ತಾರೋ ಹಾಗೇ ಇವರು ನಮ್ಮನ್ನು ತಿದ್ದಿ ಬುದ್ಧಿ ಹೇಳುತ್ತಿದ್ದರು. ಒಂದನೇ ತರಗತಿಯಿಂದ ಇಲ್ಲಿಯವರೆಗೂ ಇವರೆಂದರೆ ಗೌರವ, ಆತ್ಮವಿಶ್ವಾಸ ಹಾಗೂ ಮೆಚ್ಚುಗೆ. ಇವರು ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಇಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ನಾನು ಕಲಿತು ಬಂದಿದ್ದೇನೆ ಎಂಬುದು ನನಗೆ ಹೆಮ್ಮೆಯ ವಿಚಾರವಾಗಿದೆ. ಇವರು ಎಲ್ಲಾ ವಿಷಯಗಳನ್ನು ಆಸಕ್ತಿದಾಯಕವಾಗಿ ಬೋಧಿಸುತ್ತಿದ್ದರು. ನಾನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಶಿಕ್ಷಣ ಎಲ್ಲದರಲ್ಲೂ ಸಾಧನೆ ಮಾಡೆಂದು ಪ್ರೋತ್ಸಾಹ ನೀಡುತ್ತಿದ್ದರು. ಪಾಠದ ಜೊತೆಗೆ ಜೀವನದ ಮೌಲ್ಯಗಳನ್ನು ಹೇಳಿಕೊಟ್ಟಿದ್ದರು. ಹಾಗೆಯೇ ಯಾವಾಗಲೂ ನನ್ನ ಗೆಲುವನ್ನೇ ಬಯಸುವವರು. ಇವರು ನನ್ನ ಜೀವನದ ಅತ್ಯಮೂಲ್ಯ, ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಶೋಭಾ ಟೀಚರ್ ನಿಮಗೆ ನನಗೆ ಗೌರವಪೂರ್ವಕ ನಮನಗಳು.
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
**************************************
ನನ್ನ ಪ್ರೀತಿಯ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು. ಶಿಕ್ಷಕರೆಂದು ನನಗೆ ಬಹಳ ಭಯ ಅವರಲ್ಲಿ ಹೇಗೆ ಮಾತನಾಡುವುದು ಎನ್ನುವುದು. ಯಾವುದೇ ವಿಷಯಗಳು ತಿಳಿಯದಿದ್ದಾಗ ಹೇಗೆ ಕೇಳುವುದು ಎಂದು.
ನಮಗೆ ಹೊಸದಾಗಿ ಬಂದ ಹಿಂದಿ ಶಿಕ್ಷಕರನ್ನು ಕಂಡಾಗ ಏನು ಒಂದು ರೀತಿಯ ಭಯ. ಶಿಕ್ಷಕರು ಹೇಗೆ ಇರುವರೋ ಎಂದು ಶಿಕ್ಷಕರು ತರಗತಿಗೆ ಬಂದವರೆ ತನ್ನ ಹೆಸರನ್ನು ಹೇಳಿ ನಿಮ್ಮ ನಿಮ್ಮ ಹೆಸರು ಹೇಳಿ ಎಂದರು. ನಾವೆಲ್ಲ ಹೆಸರು ಹೇಳಿದ ನಂತರ ಪಾಠ ಶುರು ಮಾಡೋಣವೆ ಎಂದಾಗ ನಮಗೆಲ್ಲ ಖುಷಿ ಆಯ್ತು . ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಪಾಠದ ಜೊತೆ ಆಧ್ಯಾತ್ಮಿಕ ವಿಷಯಗಳನ್ನು ಹೇಳಿ ಕೊಡುತ್ತಿದ್ದರು. ಪರೀಕ್ಷೆಗಳು ಮುಗಿದವು ತರಗತಿಗೆ ಬಂದ ಶಿಕ್ಷಕರು ಮುಂದಿನ ವರ್ಷದಿಂದ ನಾನು ಬೇರೆ ಶಾಲೆಗೆ ಹೋಗುತ್ತೇನೆ ಎಂದಾಗ ನಮಗೆಲ್ಲ ತುಂಬಾ ಬೇಸರವಾಗಿತ್ತು. ಅವರು ಕೇವಲ ಶಿಕ್ಷಕರು ಮಾತ್ರವಾಗಿರಲಿಲ್ಲ ಅವರು ಪ್ರೀತಿಯ ಅಣ್ಣ ನಂತೆ ಇದ್ದರು. ಯಾಕೆ ನೀವು ಬರಲ್ಲ ಅಂದಾಗ ನನ್ನ ಮನೆಯ ಹತ್ತಿರವೇ ನನಗೆ ಕೆಲಸ ಸಿಕ್ಕಿದೆ ಅಂದಾಗ ನಾವೆಲ್ಲ ಅತ್ತು ಬಿಟ್ಟೆವು. ಇಂತಹ ಒಳ್ಳೆಯ ಶಿಕ್ಷಕರನ್ನು ಪಡೆಯಲು ನಾವು ಪುಣ್ಯ ಮಾಡಿರಬೇಕು . ಅವರು ಎಲ್ಲಿಯೇ ಇರಲಿ. ಸಂತೋಷವಾಗಿರಲಿ ಎಂಬುದೇ ನನ್ನ ಆಶಯ.
ದ್ವಿತೀಯ ಪಿಯುಸಿ
ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************
ತಾಯಿಯಿಂದ ನಮಗೆ ಉಸಿರು ಬರುತ್ತದೆ, ತಂದೆಯಿಂದ ಹೆಸರು ಬರುತ್ತದೆ, ಆದರೆ ಒಬ್ಬ ಶಿಕ್ಷಕನಿಂದ ಉಸಿರು ಇರೋ ವರೆಗೂ ಹೆಸರು ಬರೊ ವಿದ್ಯೆ ಬರುತ್ತದೆ. ನನ್ನ ಜೀವನದಲ್ಲಿ ಬಂದ ಎಲ್ಲಾ ಶಿಕ್ಷಕರಿಗೂ ನಾನು ಸದಾ ಚಿರಋಣಿ..
ನಮ್ಮ ಜೀವನದಲ್ಲಿ ನಾವು ಅನೇಕ ಶಿಕ್ಷಕರನ್ನು ಕಾಣುತ್ತೇವೆ. ಅದರಲ್ಲೂ ನನ್ನ ನೆಚ್ಚಿನ ಶಿಕ್ಷಕರು ಸದಾ ನನ್ನ ಮನದಲ್ಲಿ ನೆಲೆಸಿರುತ್ತಾರೆ. ಅಂತಹ ಶಿಕ್ಷಕರಲ್ಲಿ ಬಿಜು ಸರ್ ಕೂಡ ಒಬ್ಬರು. ಇವರು ಇಂಗ್ಲಿಷ್ ಶಿಕ್ಷಕರು. ಇವರು ಮಾಡುವ ಪಾಠಗಳು ತುಂಬಾ ಸೊಗಸಾಗಿದೆ. ಇವರ ಬೋಧನಾ ಶೈಲಿಯು ನನ್ನ ಮನವನ್ನು ಅವರತ್ತ ಸೆಳೆಯುತ್ತದೆ. ಇವರು ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಅವರು ನನ್ನ ಗುರಿಯತ್ತ ಸಾಗುವ ರಥದ ಸಾರಥಿಯಾದರು. ಅರ್ಜುನನನ್ನು ಶ್ರೀ ಕೃಷ್ಣನು ಅಧರ್ಮದ ದಾರಿಯಿಂದ ಧರ್ಮ ದಾರಿಗೆ ಹೇಗೆ ಕೊಂಡೊಯ್ದನೋ ಹಾಗೆಯೇ ಅವರು ಕೂಡ ನನ್ನನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ದರು.. ಅವರು ನನ್ನ ಒಳಗಿನ ಕವಿಯನ್ನು ಹೊರತಂದರು.. ನನ್ನ ಕವನಗಳನ್ನು ಪ್ರಶಂಸೆ ಮಾಡಿ ಮಕ್ಕಳ ಜಗಲಿ ಎಂಬ ಅದ್ಭುತ ವೇದಿಕೆಯನ್ನು ಕಲ್ಪಿಸಿದರು.. ಅವರು ನನ್ನ ಜೀವನದಲ್ಲಿ ಬಂದ ಉತ್ತಮ ಶಿಕ್ಷಕರು. "ಸದಾ ನಗುತ್ತಲೇ ಇರಿ ಮಕ್ಕಳೆ" ಎಂಬ ಅವರ ಮಾತನ್ನು ಸದಾ ನಾನು ನೆನಪಿಸಿಕೊಳ್ಳುತ್ತೇನೆ. ಬೆಳಗ್ಗೆ ಶಾಲೆಗೆ ಬರುವಾಗ, ನಾನು ಅವರಿಗೆ ಶುಭಾಶಯ ಹೇಳುವಾಗ, ಅವರ ಆ ನಗುಮೊಗವನ್ನು ಕಂಡಾಗ ನನಗೆ ಸೂರ್ಯಕಾಂತಿ ಹೂವನ್ನು ನೋಡಿದಂತೆ ಅನಿಸುತ್ತದೆ. ಅವರ ಮಧುರವಾದ ಧ್ವನಿ, ಅವರ ಮುಗುಳ್ನಗೆ, ಅವರೊಂದಿಗೆ ಕಳೆದ ಸುಂದರವಾದ ಕ್ಷಣಗಳು ಅವಿಸ್ಮರಣೀಯ. ಇನ್ನೂ ಅವರ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಗುರಿಯ ಮಾರ್ಗವ ತೋರುವ ಮಾರ್ಗದರ್ಶಕರಾಗಿ, ಉತ್ತಮ ಶಿಕ್ಷಕರಾಗಿ, ಬೆನ್ನು ತಟ್ಟುವ ಪ್ರೋತ್ಸಾಹಕನಾಗಿ ಇರುವ ಬಿಜು ಸರ್ ಗೆ ಆ ದೇವರು ಸುಖ ಶಾಂತಿ ನೆಮ್ಮದಿ ಆಯುಷ್ಯವನ್ನು ನೀಡಿ ಕರುಣಿಸಲಿ ಎಂದು ಬೇಡುವೆ ನಾನು.
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್.....
9ನೇ ತರಗತಿ
ಬೆಥನಿ ಪ್ರೌಢಶಾಲೆ ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************
ನಮಸ್ತೆ... ನನಗೆ ಬೆಸ್ಟ್ ಶಿಕ್ಷಕರಾದ ಗೋಪಾಲ ಕೃಷ್ಣ ಸರ್. ಇವರನ್ನು GK ಸರ್ ಎಂದು ಕರೆಯುತ್ತಾರೆ. ಇವರು ನನಗೆ ಕನ್ನಡ ಪಾಠವನ್ನು ಮಾಡುತ್ತಾರೆ. ಶಿಕ್ಷಕರು ಅಂದ್ರೆ ತಂದೆ-ತಾಯಿ ತರ. ನಮ್ಮ ತಪ್ಪನ್ನು ತಿದ್ದುಕೊಡ್ತಾರೆ, ಒಳ್ಳೇದಾರಿ ತೋರಿಸುತ್ತಾರೆ. ಇವರು ಒಳ್ಳೆಯ ಹಾಡುಗಾರ, ಮಿಮಿಕ್ರಿ, ಚಿತ್ರಕಲೆ, ಡ್ರಾಮಾ ಮುಂತಾದವುಗಳಲ್ಲಿ ಇದ್ದಾರೆ. ಅವರು ತರಗತಿಗೆ ಬಂದ್ರೆ ಬೋರ್ ಅನ್ನೋದು ಇಲ್ಲ. ತಮಾಷೆ, ಕಥೆ, ಡ್ರಾಮಾ, ಹಾಡು ಎಲ್ಲದರಲ್ಲೂ ಪಾಠ ಮಾಡ್ತಾರೆ. ಇವರು ತರಗತಿಯಲ್ಲಿ ಕುಳಿತುಕೊಂಡೇ ಪಾಠ ಮಾಡ್ತಾರೆ. ನಿಜ ಹೇಳಬೇಕು ಅಂದ್ರೆ ಅವರ ತರ ಶಿಕ್ಷಕರು ಸಿಕ್ಕಿರೋದು ನಮ್ಮ ಅದೃಷ್ಟ...
9ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************
ನನ್ನ ನೆಚ್ಚಿನ ಶಿಕ್ಷಕರು ರಮೇಶ ಸರ್. ನಮ್ಮ ಶಾಲೆಯ ಅತ್ಯುತ್ತಮ ಶಿಕ್ಷಕರಲ್ಲಿ ಒಬ್ಬರು. ನನಗೆ ತುಂಬಾ ಇಷ್ಟವಾದ ಶಿಕ್ಷಕರು. ಅವರು ಪಾಠ ಬೋಧಿಸುವ ರೀತಿಯು ತುಂಬಾ ಸುಂದರವಾಗಿದೆ. ಅವರು ಪಾಠವನ್ನು ತುಂಬಾ ಸರಳವಾಗಿ ಅರ್ಥವಾಗುವಂತೆ ಕಲಿಸುತ್ತಾರೆ. ಅವರ ಮಾತುಗಳಲ್ಲಿಯೂ ಸಹ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಅವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರು ಯಾವತ್ತೂ ಕೋಪಗೊಳ್ಳುವುದಿಲ್ಲ. ರಮೇಶ ಸರ್ ಅವರ ನಗು ತುಂಬಾ ಸುಂದರವಾಗಿದೆ. ಅವರ ನಗು ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಅವರು ತರಗತಿಯಲ್ಲಿ ಕಲಿಸುವ ರೀತಿಯು ನನಗೆ ತುಂಬಾ ತುಂಬಾ ಸಂತೋಷ. ಅವರು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸಮಾನವಾಗಿ ನೋಡುತ್ತಾರೆ. ಯಾರಿಗೆ ಆದರೂ ಪಾಠ ಅರ್ಥವಾಗದಿದ್ದರೆ ಮತ್ತೆ ವಿವರಿಸುತ್ತಾರೆ. ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ. ಅವರು ಯಾವಾಗಲೂ ಸಮಯವನ್ನು ಗೌರವಿಸುತ್ತಾರೆ. ಸಮಯಕ್ಕೆ ಮಹತ್ವ ನೀಡುತ್ತಾರೆ. ಅವರು ನಮ್ಮಲ್ಲಿ ಒಳ್ಳೆಯ ಪ್ರತಿಭೆ ಕಲಿಸುತ್ತಾರೆ. ನಾನು ಕಷ್ಟಪಟ್ಟಾಗ ಅವರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಅವರು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ನಾವು ಒಳ್ಳೆಯ ಅಂಕ ಪಡೆದಾಗ ಅವರು ಹೆಮ್ಮೆ ಪಡುತ್ತಾರೆ. ಅವರ ಶ್ರಮ ನನಗೆ ಪ್ರೇರಣೆಯಾಗಿದೆ. ಅವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಅವರ ತತ್ವ-ಕರ್ತವ್ಯ ಮೆಚ್ಚುಗೆ ಉಂಟುಮಾಡಿದೆ. ನನಗೆ ಪರೀಕ್ಷೆ ಸಮಯದಲ್ಲಿ ಉತ್ತಮ ಸಲಹೆಗಳನ್ನು ಕೊಡುತ್ತಾರೆ. ಅವರು ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸುತ್ತಾರೆ. ಅವರ ಹೃದಯ ಮೃದುವಾಗಿದೆ. ಅವರು ಪ್ರಾಮಾಣಿಕತೆಯ ಮಹತ್ವವನ್ನು ತಿಳಿಸಿದ್ದಾರೆ. ಇಂತಹ ಶಿಕ್ಷಕರು ಸಿಕ್ಕಿರುವುದು ನನಗೆ ಅದೃಷ್ಟ. ಅವರು ಕೇವಲ ಶಿಕ್ಷಕರಷ್ಟೇ ಅಲ್ಲ, ಅವರು ಒಬ್ಬ ಸ್ಪೂರ್ತಿದಾಯಕ ಮಾರ್ಗದರ್ಶಕ. ಅವರ ವ್ಯಕ್ತಿತ್ವ ನನಗೆ ತುಂಬಾ ಇಷ್ಟ. ನಾವು ಕಷ್ಟದಲ್ಲಿದ್ದಾಗ ಧೈರ್ಯ ನೀಡುತ್ತಾರೆ. ರಮೇಶ ಸರ್ ಅವರಿಗೆ ಸದಾ ಋಣಿಯಾಗಿರುತ್ತೇನೆ. ನನ್ನ ನೆಚ್ಚಿನ ಶಿಕ್ಷಕರಾದ ರಮೇಶ ಸರ್ ಅವರನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ.
10ನೇ ತರಗತಿ
ನೇತಾಜಿ ಸುಭಾಷ್ ಚಂದ್ರ ಬೋಸ್
ಸರ್ಕಾರಿ ಪ್ರೌಢಶಾಲೆ ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
**************************************
ನಾನು ತುಂಬಾ ಚಿಕ್ಕವನಿದ್ದಾಗ ಅಕ್ಕನ ಶಾಲೆ ನ್ಯೂ ಮಳಲಿಯಲ್ಲಿ ಶಿಕ್ಷಕರಾಗಿ ಲೋಲಾ ಕುಮಾರ್ ಸರ್ ಅಂತ ಇದ್ರು. ಅವರನ್ನು ಕಂಡರೆ ನನಗೆ ತುಂಬಾ ಇಷ್ಟ. ಅವರು ಮಕ್ಕಳಲ್ಲಿ ತೋರುವ ಪ್ರೀತಿ ಶಿಕ್ಷಕರು ಎಂದರೆ ಹೀಗೆ ಇರಬೇಕು ಎಂಬ ಮನ್ನಣೆ ಪಡೆದವರು. ನಂಗೆ ಶಾಲೆಗೆ ಹೋಗುವ ವಯಸ್ಸು ಆಗದಿದ್ದರೂ ಶಾಲೆಗೆ ಹೋಗುವ ಹುಮ್ಮಸ್ಸು ಯಾಕೋ ಏನೋ ಅವರನ್ನು ಕಂಡಾಗ ಅಭಿಮಾನ. ಎಲ್ಲವನ್ನು ತಿಳಿದಿರುವ ಪರಿಪೂರ್ಣ ವ್ಯಕ್ತಿ ಅನ್ನುಸ್ತಾ ಇತ್ತು. ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಅವರೊಂದಿಗೆ ಆಟನು ಆಡ್ತಾ ಇದ್ದರು. ಡಾನ್ಸು ಹಾಡು ಕಥೆ ಎಲ್ಲಾನು ಹೇಳಿ ಕೊಡ್ತಾ ಇದ್ರು. ಹಾಗೆ ಪೆಟ್ಟು ಕೂಡ ಕೊಡ್ತಾ ಇದ್ರು. ಜೊತೆಯಲ್ಲಿ ಕುಳಿತು ಪಾಠ ಮಾಡ್ತಾ ಇದ್ರು. ಹಾಗೆ ತಾವೇ ಶಾಲೆ ಹಿಂದುಗಡೆ ತರಕಾರಿ ಬೆಳೆಸಿ, ಮಕ್ಕಳಿಗೆ ದಿನ ಸಾಂಬಾರಿಗೆ ಬಳಸುತ್ತಿದ್ದರು. ಮಕ್ಕಳ ಜೊತೆಯಲ್ಲೇ ಕುಳಿತು ಊಟ ಮಾಡುವ ಪರಿ , ಯಾರಿಗಾದರೂ ಹೊಡೆದರೆ ಮತ್ತೆ ಮುದ್ದು ಮಾಡಿ ಕಳಿಸುವ ರೀತಿ ಒಂತರಾ ಖುಷಿಯ ಸಂಗತಿಯಾಗಿತ್ತು. ಒಬ್ಬರೇ ಶಿಕ್ಷಕರಾದರು ಎಲ್ಲವನ್ನು ಸಂಭಾಳಿಸುತ್ತಿದ್ದರು. ನ್ಯೂ ಮಳಲಿ ಶಾಲೆ , ಪರಿಸರ ಸ್ನೇಹಿ ಶಾಲೆಯಾಗಿ ಗುರುತಿಸಿಕೊಂಡಿತ್ತು. ಅದಕ್ಕೂ ಅವರ ಪರಿಶ್ರಮವೇ ಕಾರಣ. ಆವಾಗ ನನಗೆ ಅನಿಸಿದ್ದು ನಾನು ಅವರ ಹತ್ತಿರಾನೆ ಕಲಿಬೇಕು. ಅವರ ಹಾಗೆ ಮೇಧಾವಿ ಆಗ್ಬೇಕು ಆದರೆ ಅವರತ್ರ ಕಲಿಯುವ ಪುಣ್ಯ ನನಗೆ ಸಿಗಲೇ ಇಲ್ಲ. ಆದರೆ ಅಕ್ಕ ಅವರ ವಿದ್ಯಾರ್ಥಿಯಾಗಿ ಪುಣ್ಯ ಮಾಡಿದ್ಲು. ಅವರು ಈ ಊರಿನಿಂದ ವರ್ಗಾವಣೆಯಾಗಿ ಬೇರೆ ಊರಿಗೆ ಹೋಗುವಾಗ ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಅಕ್ಕನ ಗುರುಗಳಾದರು ನನ್ನ ಪ್ರತಿಭೆ ಗುರುತಿಸಿ ಭಾಷಣ ಮಾಡೋಕೆ ವೇದಿಕೆ ಕಲ್ಪಿಸಿ ಕೊಟ್ಟಿದ್ದರು. ನನಗೆ ಯಾವುದೇ ಡೌಟ್ ಬಂದು ಫೋನ್ ಮಾಡಿ ಕೇಳಿದರೆ ಬೇಸರ ಮಾಡಿಕೊಳ್ಳದೆ ಉತ್ತರಿಸ್ತಾ ಇದ್ರು. ಚೆನ್ನಾಗಿ ಓದು ಹೆಸರು ಗಳಿಸು ಅಂತ ಹೇಳ್ತಾ ಇದ್ದರು. ಅವರು ನಂಗೆ ಸ್ಫೂರ್ತಿಯ ಸೆಲೆ. ನನ್ನಲ್ಲಿ ದೇಶಭಕ್ತಿ ತುಂಬಿ ಸ್ವಾಭಿಮಾನದ ಕಿಚ್ಚು ಹಚ್ಚಿ ಛಲ ತುಂಬಿದ ಲೋಲ್ ಕುಮಾರ್ ಸರ್ ಅವರಿಗೆ ಅಭಿವಂದನೆ.
10ನೇ ತರಗತಿ
ಹೊಲಿ ರೆಡೀಮೆರ್ ಸ್ಕೂಲ್ ಹೊಸನಗರ
ಶಿವಮೊಗ್ಗ ಜಿಲ್ಲೆ
**************************************