-->
ಜೀವನ ಸಂಭ್ರಮ : ಸಂಚಿಕೆ - 265

ಜೀವನ ಸಂಭ್ರಮ : ಸಂಚಿಕೆ - 265

ಜೀವನ ಸಂಭ್ರಮ : ಸಂಚಿಕೆ - 265
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
              
                  
ಮಕ್ಕಳೇ... ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಭಕ್ತಿ ಸೂತ್ರ ಪ್ರವಚನದಲ್ಲಿ ಭಕ್ತನಿಗೆ ಭಯವಿಲ್ಲ ಹಾಗೂ ಯಾವಾಗಲೂ ತೃಪ್ತಿಯಾಗಿರುತ್ತಾನೆ. ಹೇಗೆ ಅನ್ನುವುದನ್ನು ವರ್ಣಿಸಲು ಈ ಸಂತನ ಕಥೆ ಹೇಳಿದರು. 

ಭಕ್ತ ದೇವನ ಸಾಮೀಪ್ಯ ಇರುತ್ತಾನೆ. ಜಗತ್ತಿನ ವಸ್ತುಗಳು ನಾಶವಾಗುತ್ತವೆ ಮತ್ತು ಅಗಲುತ್ತವೆ. ನಾಶವಾಗುವ ವಸ್ತುಗಳನ್ನು ಪ್ರೀತಿಸುತ್ತಾ ಹೋದರೆ ಭಯ ಇದ್ದೇ ಇರುತ್ತದೆ. ನಾಶ ಮತ್ತು ಸಾವು ಇರುವಲ್ಲಿ ಭಯ ಇರುತ್ತದೆ. ಈಗ ಮಗು ಹೊಸದಾಗಿ ಸೈಕಲ್ ಕಲಿಯುತ್ತಿದೆ ಎಂದು ಭಾವಿಸಿ. ಆ ಮಗು ಬೈಸಿಕಲ್ ತೆಗೆದುಕೊಂಡು ಹೊರ ಹೋದರೆ ಮನೆಗೆ ವಾಪಸ್ಸು ಬರುವವರೆಗೆ ಭಯವಿರುತ್ತದೆ‌. ಭಕ್ತನಿಗೆ ಭಯವಿಲ್ಲ ಏಕೆಂದರೆ ಆತ ಪ್ರೀತಿಸಿದ್ದು ದೇವನನ್ನು. ದೇವ ನಾಶವಾಗುವುದಿಲ್ಲ. ದೇವ ಸಾಯುವುದಿಲ್ಲ ಹಾಗಾಗಿ ಭಯದ ಪ್ರಶ್ನೆ ಇಲ್ಲ. ಈಗ ನಾನು ಹೂವನ್ನು ಪ್ರೀತಿಸಿದರೆ ಭಯ ಯಾಕೆಂದರೆ ಸಂಜೆವರೆಗೆ ಬಾಡಿ ನಾಶವಾಗುತ್ತದೆ. ನಾನು ನನ್ನನ್ನು (ಆತ್ಮ) ಪ್ರೀತಿಸಿದರೆ, ಆಕಾಶ ಪ್ರೀತಿಸಿದರೆ, ಸಮಸ್ತ ವಿಶ್ವವನ್ನು ಪ್ರೀತಿಸಿದರೆ, ದೇವನನ್ನು ಪ್ರೀತಿಸಿದರೆ ಭಯವಿಲ್ಲ.

ಒಬ್ಬ ಸಂತ ಇದ್ದ. ಆತನ ಹೆಸರು ಕೈಯಾಸ್. ಆತನಿಗೆ ಒಬ್ಬ ಶಿಷ್ಯ ಇದ್ದನು. ಒಂದು ದಿನ ಸಂಜೆ ಅರಣ್ಯದ ಮಾರ್ಗದಲ್ಲಿ ಗುರು ಮತ್ತು ಶಿಷ್ಯ ಇಬ್ಬರು ಹೊರಟಿದ್ದರು. ಆಯಾಸ ಆಗಿತ್ತು. ಇಬ್ಬರೂ ಒಂದೊಂದು ಮರದಡಿ ಕುಳಿತರು. ಗುರು ಕೈಯಾಸ್ ಗೆ 70 ವರ್ಷ. ಶಿಷ್ಯ ತರುಣ ಬಲಾಡ್ಯನಾಗಿದ್ದನು. ಗುರು ಕುಳಿತಲ್ಲೇ ದೇವನಲ್ಲಿ ತನ್ಮಯನಾದನು. ಅದೇ ಸಮಯಕ್ಕೆ ಹುಲಿ ಗರ್ಜಿಸುತ್ತಾ ಅಲ್ಲಿಗೆ ಬಂದಿತು. ಶಿಷ್ಯ ನೋಡಿದ ಭಯಭೀತನಾದ. ತಕ್ಷಣ ಶಿಷ್ಯ ಮರ ಏರಿದನು. ಗುರು ಧ್ಯಾನಸ್ಥನಾಗಿದ್ದನು. ಹುಲಿ ಸಮೀಪಕ್ಕೆ ಬಂದಿತು. ಶಿಷ್ಯ ಮರದ ಮೇಲೆ ಕುಳಿತು ನಡುಗುತ್ತಿದ್ದನು. ಈ ಹುಲಿ ,ಗುರುವನ್ನು ಮುಗಿಸುತ್ತದೆ. ನನ್ನನ್ನು ಮುಗಿಸುತ್ತದೆ. ಅದಕ್ಕಾಗಿ ಭದ್ರವಾಗಿ ಕೊಂಬೆ ಹಿಡಿಯಬೇಕೆಂದು ಕೊಂಬೆ ಹಿಡಿದು ಮರದ ಮೇಲೆ ಕುಳಿತನು. ಹುಲಿ ಸಮೀಪ ಬಂದಿತು. ಗುರು ಅಷ್ಟೊಂದು ತನ್ನಯನಾಗಿದ್ದನು. ಹುಲಿ ಗುರುವಿನ ಸುತ್ತ ಬಂದಿತು. ಗುರುವಿಗೆ ಇದು ಯಾವುದರ ಬಾನ ಇರಲಿಲ್ಲ. ಹುಲಿ ಮೇಲೆ ನೋಡಿತು. ಶಿಷ್ಯ ನಡುಗುತ್ತಿದ್ದನು. ಹುಲಿ ಆ ಶಿಷ್ಯನನ್ನು ತಾತ್ಸಾರದಿಂದ ನೋಡಿ, ನಿನ್ನಂತ ಹೇಡಿಯನ್ನು ಏನು ಹಿಡಿಯುವುದು? ಅಂತ ಹೊರಟು ಹೋಯಿತು. ಗುರು ಎಚ್ಚರವಾದದ್ದನ್ನು ನೋಡಿ ಸಾವಕಾಶವಾಗಿ ಕೆಳಗಿಳಿದನು. ಶಿಷ್ಯನಿಗೆ ಹುಲಿ ಬಿಟ್ಟು ಬೇರೆ ಏನು ಕಾಣಲಿಲ್ಲ. ಮುಂದೆ ಗುರು ಹೊರಟಿದ್ದನು ಹಿಂದೆ ಶಿಷ್ಯ ಹಿಂಬಾಲಿಸುತ್ತಿದ್ದನು. ಶಿಷ್ಯನ ತಲೆಯಲ್ಲಿ ಮತ್ತೇನಾದರೂ ಹುಲಿ ಬಂದೀತು ಅನ್ನುವ ಚಿಂತೆ. ಅದಕ್ಕಾಗಿ ಗಿಡದ ಸಮೀಪನೆ ಹೋಗುತ್ತಿದ್ದನು. ಹತ್ತರಿಂದ ಹದಿನೈದು ನಿಮಿಷ ನಡೆದಿರಬೇಕು. ಆಗ ಒಂದು ಸೊಳ್ಳೆ ಗುರುವಿನ ಕೊರಳಿಗೆ ಕಚ್ಚಿತು. ಆಗ ಗುರು ನರಳಿದನು. ಆಗ ಶಿಷ್ಯ ಮುಂದೆ ಬಂದು ಕೇಳಿದ "ಗುರುಗಳೇ ಹೇಳಿ, ಆವಾಗಲೇ ಹುಲಿ ಬಂದಿತ್ತು ನಿಮಗೆ ಏನು ಆಗಲಿಲ್ಲ. ಅಷ್ಟು ಶಾಂತವಾಗಿ ಕುಳಿತಿದ್ದೀರಿ. ನಾನು ಗಿಡ ಏರಿ ನಡುಗುತ್ತಿದ್ದೆ. ಈಗ ಒಂದು ಸೊಳ್ಳೆ ಕಡಿದರೆ ನರಳುತ್ತಿರಲ್ಲ ಯಾಕೆ?" ಎಂದನು. ಆಗ ಗುರುಗಳು ಹೇಳಿದರು "ಯಾವಾಗ ಹುಲಿ ಬಂದಿತ್ತೋ ಆಗ ನಾನು ದೇವರ ಸಮೀಪ ಇದ್ದೆನು. ಯಾವಾಗ ಸೊಳ್ಳೆ ಕಚ್ಚಿತೋ ಆಗ ನಿನ್ನ ಸಮೀಪ ಇದ್ದೇನೆ ಅಂದರು. ನಿನ್ನಂತಹವನ ಸಮೀಪ ಇದ್ದರೆ ಸೊಳ್ಳೆ ಕೂಡ ಹೀಗೆ ಮಾಡುತ್ತದೆ. ಭಯ ಉಂಟಾಗುತ್ತದೆ. ದೇವನ ಸಮೀಪ ಇದ್ದರೆ ಹುಲಿ ಕೂಡ ಏನು ಮಾಡುವುದಿಲ್ಲ. ದೇವ ನಿರ್ಭಯ. ಭಕ್ತ ಸದಾ ದೇವ ಭಾವ ಇರುವುದರಿಂದ ನಿರ್ಭಯನಾಗಿರುತ್ತಾನೆ. ಈ ನಿರ್ಭಯ ಸ್ಥಿತಿಯೇ ಅಮೃತ. ಭಕ್ತ ಯಾವಾಗಲೂ ತೃಪ್ತನಾಗಿರುತ್ತಾನೆ. ತೃಪ್ತಿ ಭಾವ ಅಂದರೆ ತುಂಬಿದ ಭಾವ. 

ಈಗ ಹಸಿವಾಗಿತ್ತು. ಹೊಟ್ಟೆ ತುಂಬಾ ಅನ್ನ ಸಾಂಬಾರು ಊಟ ಮಾಡಿದ ಮೇಲೆ ಮೃಷ್ಟಾನ್ನ ನೀಡಿದರೂ ಬೇಡ ಅನಿಸುತ್ತದೆ. ಇದಕ್ಕೆ ತೃಪ್ತಿ ಎನ್ನುವರು. ಊಟ ಮಾಡಿದ್ದು ಅನ್ನ ಸಾಂಬಾರ್. ಮೃಷ್ಟಾನ್ನ ನೀಡಿದರೂ ಬೇಡ ಸಾಕು ಅನಿಸುತ್ತದೆಯಲ್ಲ ಅದಕ್ಕೆ ತೃಪ್ತಿ ಎನ್ನುವರು. ತುಂಬಿದೆ ಅನಿಸುತ್ತದಲ್ಲ ಅದು ತೃಪ್ತಿ. ಆದರೆ ಮನಸ್ಸು ಹಾಗಲ್ಲ. ಏನು ಹಾಕಿದರೂ ತುಂಬಿದೆ ಅನಿಸುವುದಿಲ್ಲ. ಯಾವಾಗ ಭಕ್ತನ ಮನಸ್ಸಿನಲ್ಲಿ ಪ್ರೇಮ ತುಂಬಿತೋ ಆ ಕ್ಷಣಕ್ಕೆ ತೃಪ್ತಿ ಶುರುವಾಗುತ್ತದೆ. ಕೊರತೆ ಭಾವ ಇರುವುದಿಲ್ಲ. ಏನದೆ ಅಷ್ಟರಲ್ಲಿ ಸಂತೃಪ್ತನಾಗಿರುತ್ತಾನೆ. ಮಕ್ಕಳೇ, ನಾವು ನಾಶವಾಗದ ದೇವನನ್ನು ಪ್ರೀತಿಸೋಣ ಅಲ್ಲವೇ...
........................................ ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************



Ads on article

Advertise in articles 1

advertising articles 2

Advertise under the article