-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 90 : ಲೇಖಕರು : ರಮ್ಯಾ ಆರ್ ಭಟ್ ಸಹಶಿಕ್ಷಕಿ.

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 90 : ಲೇಖಕರು : ರಮ್ಯಾ ಆರ್ ಭಟ್ ಸಹಶಿಕ್ಷಕಿ.

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 90
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ


ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನಮಸ್ಕಾರಗಳು.

ಶಾಲೆ ಶುರುವಿನ ಆಚರಣೆಯ ಸಂಭ್ರಮದಿಂದ ಮುಗಿಸುವಷ್ಟರಲ್ಲೇ ಪರೀಕ್ಷೆಗಳು ಸಾಲು ಸಾಲಾಗಿ ಬಂದು ಮಕ್ಕಳನ್ನು ತುಂಬಾ ಗಂಭೀರ ಮಾಡಿಬಿಟ್ಟಿದೆ.. ಅದರ ಜೊತೆ ಹಲವು ಆಚರಣೆಗಳು, ಸ್ಪರ್ಧೆಗಳು, ಹೀಗೆ ಈ ವರ್ಷದ ಅರ್ಧ ಕಳೆದೇ ಹೋಯಿತು... ಹೀಗೆ ಪರೀಕ್ಷೆಯ ತಯಾರಿಯ ಸಮಯದಲ್ಲಿ, ಮಕ್ಕಳಿಗೆಲ್ಲ ಪುನರಾವರ್ತನೆ ಮಾಡುವಾಗ ಎಲ್ಲಾ ಮಕ್ಕಳು ಬರೆದು ತೋರಿಸಿ, ಬಾರದೆ ಇರುವವರು ಮತ್ತೊಮ್ಮೆ ಮಗದೊಮ್ಮೆ ಬರೆಯುವ ತರಾತುರಿಯಲ್ಲಿರುವಾಗ ಒಂದು ಮಗು ನನ್ನ ಬಳಿ ಬಂದು ನಿಂತಿತು..!

ಆ ಮಗುವು ನನ್ನ ತರಗತಿಯಲ್ಲೇ ಅತೀ ಹೆಚ್ಚು ಮಾತನಾಡುವ ಮಗು. ಹಾಗು ತನ್ನ ವಯಸ್ಸಿಗೆ ಮೀರಿದ ಪ್ರೌಢತೆ. ಸಾಮಾನ್ಯ ಪ್ರಶ್ನೆಗಳ ಜೊತೆ, ಅತೀ ಸೂಕ್ಷ್ಮ ವಿಚಾರಗಳನ್ನು ಸಹ ಪ್ರಶ್ನೆ ಮಾಡಿ, ಕೆದಕಿ, ಉತ್ತರ ಸಿಗುವವರೆಗೂ ನಮ್ಮನ್ನು ಬೆಂಬಿಡದೆ ಕಾಡುವ ಸ್ವಭಾವ ಅವಳದ್ದು.. ಅವಳು ಬಂದ ಪರಿ ನೋಡಿಯೇ ಕೇಳಿದೆ. "ಇಂದು ಯಾವ ಪ್ರಶ್ನೆ ಜೊತೆಗೆ ಬಂದಿದ್ದೀ?" ಎಂದು. ಆಗ ಅವಳದ್ದೋಂದು ಹೆಮ್ಮೆಯ ನಗೆ. "ಮೇಡಂ ಈಗ ನೀವು ಹೇಳಿಕೊಡುತ್ತಿರುವ ಎಲ್ಲಾ ಪಾಠವನ್ನು ನಾನು ಈ ಹಿಂದೆ ಹಳೆಯ ಶಾಲೆಯಲ್ಲಿ ಕಲಿತಿದ್ದೇನೆ, ಈಗಲೂ ಮತ್ತೇಕೆ ಅದನ್ನೇ ಹೇಳಿಕೊಡುತ್ತಿದ್ದೀರಿ?" ಆಗ ನಾ ಹೇಳಿದೆ "ನೀನು ಕಲಿತಿರುವೆ ಸರಿ, ಆದರೆ ಕೆಲವರು ಅದನ್ನೆಲ್ಲ ಕಲಿಯದೇ ಬಂದವರು ಇರುತ್ತಾರೆ, ಅವರಿಗೂ ತಿಳಿಯಬೇಕಲ್ಲವೇ ಅದಕ್ಕೆ." ಎಂದೆ. ಆಗ ಅವಳು ಪಟ್ಟನೆ ಕೇಳಿದಳು, "ಅವರೆಲ್ಲರೂ ನನ್ನ ವಯಸ್ಸಿನವರೇ, ಈ ಮುಂಚೆ ಶಾಲೆಗೆ ಹೋಗಿ ಬಂದವರೇ, ಆದರೂ ಅಲ್ಲಿ ಯಾರೂ ಏಕೆ ಇದನ್ನೆಲ್ಲಾ ಹೇಳಿಕೊಟ್ಟಿಲ್ಲ?" ಪ್ರಶ್ನೆ ಸ್ವಲ್ಪ ಕಷ್ಟದ್ದು, ಅದಕ್ಕೆ ನಾನು ಸ್ವಲ್ಪ ಜಾಣತನದಿಂದಲೇ ಉತ್ತರ ಕೊಡಬೇಕಿತ್ತು, ಸ್ವಲ್ಪ ಯೋಚಿಸಿ ಹೇಳಿದೆ, "ಎಲ್ಲವನ್ನು ಅಲ್ಲಿಯೂ ಸಹ ಹೇಳಿಕೊಟ್ಟಿರುತ್ತಾರೆ, ಆದರೆ ಈಗ ನೀವೆಲ್ಲ ರಜೆಯನ್ನು ಮುಗಿಸಿ ಬಂದದ್ದಷ್ಟೇ ಅಲ್ಲವೆ? ಕೆಲವರು ಮರೆತಿರುತ್ತಾರೆ, ಹಾಗಾಗಿ ನಾವು ಹೇಳಿಕೊಡಲೇ ಬೇಕು" ಎಂದೆ.. ಆದರೂ ಅವಳಿಗೆ ಸಮಾಧಾನವಿಲ್ಲ "ಕಲಿತಿದ್ದನ್ನೇ ಕಲಿಯಲು ನನಗೆ ಬೇಜಾರು ನನಗೆ ಬೇರೆ ಏನಾದರೂ ಹೇಳಿಕೊಡಿ" ಎಂದಳು.. ಆಗ ನಾ ತಮಾಷೆಗೆಂದು "ಹಾಗಾದರೆ, ನೀನು ಮುಂದಿನ ತರಗತಿಗೆ ಹೋಗಬಹುದಿತ್ತು ಅಲ್ಲವೆ?" ಎಂದೆ. ಆಗ ಅವಳು ತಕ್ಷಣ ಹೇಳಿದಳು "ಅಯ್ಯೋ ಇಲ್ಲ ಮೇಡಂ ನನಗೆ ಇನ್ನು ಮುಂದಿನ ತರಗತಿಗೆ ಹೋಗುವ ವಯಸ್ಸು ಆಗಲಿಲ್ಲ, ನನಗೆ ಇನ್ನು ಇದೆ ತರಗತಿಯಲ್ಲಿಯೇ ಕಲಿಯುವ ವಯಸ್ಸು" ಎಂದು. ಇಷ್ಟು ನಿರ್ದಿಷ್ಟವಾಗಿ ಉತ್ತರ ಕೊಡುವ ಪ್ರೌಢತೆ ಇರುವ ಮಗುವಿಗೆ, ನಾನು ವಾಸ್ತವತೆಯನ್ನು ಬಿಡಿಸಿ ಹೇಳಬಹುದು ಎನ್ನುವ ಧೈರ್ಯ ನನಗೆ ಬಂದು ಎಲ್ಲವನ್ನು ಅವಳಿಗೆ ವಿಸ್ತರಿಸಿ ಹೇಳಿದೆ. "ನೋಡು ಪುಟ್ಟ, ಹಾಗಾದರೆ ನಿಮ್ಮ ಈ ವಯಸ್ಸಿಗೆ ಏನನ್ನು ಕಲಿಸಬೇಕೋ, ಅದನ್ನಷ್ಟೇ ನಾನು ಕಲಿಸಬೇಕು ಅದನ್ನೇ ಕಲಿಸುತ್ತಿದ್ದೇನೆ, ಮುಂದಿನ ದಿನಗಳಲ್ಲಿ ನೀನು ಹೆಚ್ಚಿನದಾಗಿ ಕಲಿಯಬಹುದು ಎಂದು." ನಂತರ ಅಸಮಾಧಾನದ ತೃಪ್ತಿಯೊಂದಿಗೆ ಹಿಂತಿರುಗಿ, ಕೆಲವು ನಿಮಿಷಗಳ ನಂತರ ಮತ್ತೆ ಬಂದಳು.. "ನಾನು ಮತ್ತು ಏನನ್ನೋ ಕೇಳಬೇಕು," ಎಂದಳು. "ಕೇಳು ಆದರೆ ಇಂದಿಗೆ ಇದು ನಿನ್ನ ಪ್ರಶ್ನೆಯ ಸರದಿ ಮುಗಿಯಿತು" ಎಂದು ತಾಕೀತು ಮಾಡಿದೆ. ಅದಕ್ಕೆ ಒಪ್ಪಿ ಅವಳು ಕೇಳಿದ ಮುಂದಿನ ಪ್ರಶ್ನೆ, ನನ್ನನ್ನು ಉತ್ತರ ನೀಡಲು ಅಶಕ್ತಳನ್ನಾಗಿಸಿತ್ತು. ಅವಳ ಪ್ರಶ್ನೆ ಏನೆಂದರೆ, "ಸರಿ ಮೇಡಂ ನೀವು ಹೇಳಿದಿರಲ್ಲ, ಈ ವಯಸ್ಸಿಗೆ ಇಷ್ಟೇ ಕಲಿಸಬೇಕು ಎಂದು, ಹಾಗಾದ್ರೆ ಕಳೆದ ವರ್ಷ ನಾನು ಇನ್ನು ಚಿಕ್ಕವಳಿದ್ದೇ, ಆದರೂ ಅವರು ಏಕೆ ನನಗೆ ಈ ವರ್ಷದ ಪಾಠವನ್ನೆಲ್ಲ ಹೇಳಿಕೊಟ್ಟರು? ಆ ಪ್ರಶ್ನೆಗೆ ಏನೆಂದು ಉತ್ತರಿಸಬೇಕೆಂದು ತಿಳಿಯದೆ ಕೆಲವು ನಿಮಿಷಗಳ ಕಾಲ ಸುಮ್ಮನಿದ್ದು, ನಂತರ ಹೇಳಿದೆ, "ಇಲ್ಲ ಪುಟ್ಟ ನೀನು ತುಂಬಾ ಜಾಣೆ ಅಲ್ಲವೇ? ಕಲಿಯುವುದರಲ್ಲಿ ಮುಂದೆ ಇದ್ದಿ ಹಾಗಾಗಿ ನಿನಗೆ ಹೇಳಿಕೊಟ್ಟಿದ್ದಾರೆ" ಎಂದೊಡನೆ ಅವಳಿಗೆ ಸಂತೋಷವಾಗಿ ಹಿಂದಿರುಗಿದಳು.. 

ಆದರೆ ಕೇಳಲು ಬಹಳ ಸರಳ ಎನಿಸಿದ ಆ ಮಗುವಿನ ಪ್ರಶ್ನೆಯ ಹಿಂದೆ ಎಷ್ಟು ಗಾಢವಾದ ಅರ್ಥವಿದೆ,, ನಮ್ಮ ಈ ವ್ಯವಸ್ಥೆಯ ಸಮರ್ಥನೆಯನ್ನು ಕೊಡಲು ನಾವು ತಯಾರಾಗಬೇಕಿದೆ. ಮೊದಲಿನ ಶಿಕ್ಷಣ ಪದ್ಧತಿಯಂತೆ ನಮ್ಮ ಪಾಲನೆ ಈಗ ಇಲ್ಲ. ಎಲ್ಲರೂ ಸಹ ಪಠ್ಯದ ಹಿಂದೆ, ಅಂಕಗಳ ಹಿಂದೆ ಓಡುವವರೇ..!! ಹಾಗೆಯೇ ಶಾಲೆಗೆ ಹೋದ ಮರುದಿನವೇ ನಮ್ಮ ಮಗು ಇಂಗ್ಲೀಷ್ ಮಾತನಾಡಬೇಕು ಎಂದು ಬಯಸುವ ನಮ್ಮ ಪೋಷಕರು, ವಯಸ್ಸಿಗೆ ಮೀರಿದ ಪಠ್ಯ ಕ್ರಮ,, ಕಲಿಸಬೇಕಾದ ಅನಿವಾರ್ಯತೆ ಶಿಕ್ಷಕರದ್ದು, ಹೀಗಿರುವಾಗ ಆ ಮಗುವಿನ ಅರ್ಥಪೂರ್ಣ ಪ್ರಶ್ನೆಗೆ ಉತ್ತರವನ್ನು ಯಾರ ಬಳಿ ಕೇಳುವುದು..? 

ಅನಾದಿ ಕಾಲದಿಂದಲೂ ನಮಗೆಲ್ಲ ತಿಳಿದಿರುವ ವಿಚಾರವೆಂದರೆ, ಶಿಕ್ಷಣ ಎಂದು ಬಂದಾಗ ಮಗು ಅನುಭವದ ಮೂಲಕ ಕಲಿಯಬೇಕು, ಮಗುವಿಗೆ ಒತ್ತಡ ರಹಿತ ಶಿಕ್ಷಣ ಬೇಕು, 6 ವರ್ಷದ ಒಳಗಿನ ಮಗುವಿಗೆ ಬರವಣಿಗೆಯ ಒತ್ತಡ ಇರಬಾರದು, ವಯೋಮಿತಿಗೆ ತಕ್ಕಂತೆ ಪಠ್ಯವಿರಬೇಕು ಎಂದು.. ಆದರೆ ನಮ್ಮ ಇಂದಿನ ವ್ಯವಸ್ಥೆ ಇದೆಲ್ಲದಕ್ಕೂ ವಿರುದ್ಧವಾಗಿರುವುದಲ್ಲದೆ, ಪೋಷಕರ ನಿರೀಕ್ಷೆಯೂ ಸಹ ಇಂದಿನ ಪಠ್ಯ ಕ್ರಮದ ನೀತಿಯ 2 ಹೆಜ್ಜೆ ಮುಂದೆ ಇದೆ ಎಂದರೆ ತಪ್ಪಾಗಲಾರದು..!! 

ಮಕ್ಕಳಿಗೆ ಕಲಿಕೆ ಎಂದಿಗೂ ಖುಷಿಯನ್ನು ತರಬೇಕೆ ಹೊರತು, ಮುಂದಿನ ವರ್ಷಗಳಲ್ಲಿ ಕಲಿಯಬೇಕಿದ್ದ ಎಲ್ಲವನ್ನು ನಾನು ಈಗಲೇ ಕಲಿತಿರುವೆ ಎನ್ನುವ ಭ್ರಮೆಯ ಹೆಮ್ಮೆಯನ್ನು ಮೂಡಿಸುವಂತಾಗಲಿ, ಅಥವಾ ಒತ್ತಡವಾಗಲಿ ಇರಬಾರದು... ಈ ಮಗುವಿನ ಪ್ರಶ್ನೆಯಿಂದ ನಾವು ಅದನ್ನು ತಿಳಿಯಬೇಕಿದೆ.. ನಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ಮಾತ್ರ ನಾವು ಹೇಳಿಕೊಡಬೇಕು.. ಅದಕ್ಕೂ ಮಿತಿಮೀರಿದರೆ ಅಮೃತವೂ ವಿಷವಾಗುತ್ತದೆ.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
****************************************



Ads on article

Advertise in articles 1

advertising articles 2

Advertise under the article