-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 164

ನಿಷ್ಪಾಪಿ ಸಸ್ಯಗಳು : ಸಂಚಿಕೆ - 164

ನಿಷ್ಪಾಪಿ ಸಸ್ಯಗಳು : ಸಂಚಿಕೆ - 164
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ..... ಹೇಗಿದ್ದೀರಿ? ಈಗಂತೂ ನೀವು ಹಾರಾಡೋ ಪಕ್ಷಿಗಳು! ನಿಮ್ಮನ್ನು ತಡಿಯೋರೇ ಇಲ್ಲ. ರಜೆಯ ಕ್ಷಣಕ್ಷಣಗಳನ್ನು ಆಸ್ವಾದಿಸ ತೊಡಗಿರುತ್ತೀರಿ ಅಲ್ಲವೇ..? ಅದೇನೋ ಸರಿ, ಆದರೆ ನಿಮ್ಮ ತಿರುಗಾಟದಲ್ಲಿ ನಮ್ಮ ನಿಷ್ಪಾಪಿ ಸಸ್ಯಗಳ ಬಗ್ಗೆಯೂ ಒಂದು ಕಣ್ಣಿರಿಸಿರುತ್ತೀರಲ್ಲವೇ...?

ಹೌದು, ನೀವು ಸಸ್ಯಗಳನ್ನು ಗಮನಿಸುವ ರೂಢಿ ಮಾಡಿಕೊಳ್ಳಲೇ ಬೇಕೆಂದು ನನ್ನ ಒತ್ತಾಸೆ. ಇತ್ತೀಚೆಗೆ ಶಾಲೆಗಳಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಒಂದು ಕಾರ್ಯಕ್ರಮ ನಡೆಸಬೇಕಿತ್ತು. ಹಿಂದಿನ ದಿನವೇ ಹುಡುಕಾಟ ನಡೆಸಿ ಸಸ್ಯಗಳನ್ನು ಆರಿಸಿ ತರಲು ಸಾಧ್ಯವಾಗಿರಲಿಲ್ಲ. ನಮ್ಮ ಶಾಲೆ ಹಸಿರ ಹೊದ್ದ ಗುಡ್ಡದ ಬದಿಯಲ್ಲಿ ಇರುವ ಕಾರಣ ಮಳೆ ಬರುತ್ತಿದ್ದರೂ ಬೆಳಗ್ಗೆ ಬೇಗ ಬಂದು ಶಾಲೆಯ ಸುತ್ತ ಪರಿಚಯದ ಔಷಧೀಯ ಸಸ್ಯಗಳಿಗಾಗಿ ಒಂದು ಸುತ್ತು ಹಾಕಿದಾಗ ಹಲವಾರು ಗಿಡಗಳು, ಬಳ್ಳಿಗಳು ದೊರೆತವು.. ಕಳೆದ ವರ್ಷ ನೀರಿನ ಟ್ಯಾಂಕ್ ಹಿಂಬದಿ ಹಾಡೇ ಬಳ್ಳಿ ಹಬ್ಬಿದ್ದು ಕಂಡಿದ್ದೆ. ಅದೇ ನಂಬಿಕೆಯಲ್ಲಿ ಹೋದಾಗ ಬಳ್ಳಿ ಕಾಣಿಸಿತ್ತು. ಎಳೆದಾಗ ಹಬ್ಬಿದ್ದ ಬಳ್ಳಿ ಸರಾಗವಾಗಿ ಕಿತ್ತು ಬಂದಿತ್ತು. ಮಳೆಗೆ ಒದ್ದೆಯಾಗುವ ಭಯದಿಂದ ಓಡಿಬಂದು ಶಾಲೆಯ ಜಗಲಿಯೇರಿದಾಗ ಕೈಯಲ್ಲಿ ಇರುವುದು ಹಾಡೇ ಬಳ್ಳಿ ಅಲ್ಲವೆಂದು ತಿಳಿಯಿತು. ಅದು ನಾನು ಬಹಳ ಸಮಯದಿಂದ ಹುಡುಕುತ್ತಿದ್ದ ಕರ್ವೊಲು ಅಥವಾ ಕರಾವೊಲು ಎಂಬ ನಿಷ್ಪಾಪಿ ಸಸ್ಯವಾಗಿತ್ತು.

ಶಾಲೆಯ ಅಂಗಳದ ಸನಿಹವೇ ಅಡಗಿದ್ದ ಆ ಬಳ್ಳಿಯನ್ನು ವೃಥಾ ನಾನು ಕಿತ್ತು ತಂದಿದ್ದೆ. ತೊಂಡೆಕಾಯಿಯಂತಹ ಕಾಯಿಗಳೂ ಇದ್ದವು. ಸ್ವಲ್ಪ ಲೋಳೆ ಇದ್ದರೂ ತಿನ್ನುವಷ್ಟು ಬೆಳೆದಿದ್ದವು. ನಮ್ಮ ಬಾಲ್ಯದಲ್ಲಿ ಇದರ ಬಳ್ಳಿಗಳು ಎಲ್ಲೆಲ್ಲಿ ಇವೆಯೆಂದು ಗುರುತಿಸಿಕೊಳ್ಳುತ್ತಿದ್ದೆವು. ಏಕೆಂದರೆ ಇದು ಬಹುವಾರ್ಷಿಕ ಬಳ್ಳಿ. ಇದರ ಕಾಯಿ ಹಣ್ಣು ತಿನ್ನಲು ರುಚಿ. ಇದರ ಚಿಗುರು ಹಾಗೂ ಕಾಯಿಗಳು ತರಕಾರಿಯಾಗಿಯೂ ಬಳಸಲ್ಪಡುತ್ತದೆ. ಚಟ್ನಿ, ಗೊಜ್ಜು, ತಂಬಳಿ ಅಂತಲ್ಲದೆ ಚೇಳು ಕುಟುಕಿದರೆ, ಅಜೀರ್ಣವಾದರೆ, ಕುರುವಾದರೆ ಅಮ್ಮನಿಗೆ ನೆನಪಾಗುತ್ತಿದ್ದುದು ಕರ್ವೊಲು ಬಳ್ಳಿ. ಕಾಯಿಯಾಗುವ ಕಾಲದಲ್ಲಿ ಹುಲ್ಲು, ಪೊದರಿನ ನಡುವೆ ಹಬ್ಬಿರುತ್ತಿದ್ದ ಬಳ್ಳಿಯ ಸಂದುಸಂದು ಹುಡುಕಾಡುತ್ತಿದ್ದೆವು. ಏಕೆಂದರೆ ಕಳೆದ ವರ್ಷ ಇದ್ದಲ್ಲಿ ಈ ವರ್ಷವೂ ಬಳ್ಳಿ ಕಾಯಿ ತುಂಬಿ ನಮ್ಮನ್ನು ಕಾಯುತ್ತಿತ್ತು..!

ಸೊಲೆನಾ ಅಂಪ್ಲೆಕ್ಸಿಕಾಲಿಸ್ ( Solena amplexicaulis ) ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿರುವ ಕರ್ವೊಲು ಬಳ್ಳಿಯು ಕುರ್ಕುರ್ಬಿಟೇಸಿ (Cucurbitaceae) ಕುಟುಂಬದ ಸದಸ್ಯತನ ಪಡೆದಿದೆ. ತುಳುವಿನಲ್ಲಿ ಕರ್ವೊಲು, ಕರಾವೊಲು ಎಂದು ಕರೆಸಿಕೊಂಡರೆ ಕನ್ನಡದಲ್ಲಿ ಗಮಟೆ ಕಾಯಿ, ಗೌಟಿ ಕಾಯಿ, ಗ್ಯಾರಲೆ ಕಾಯಿ, ಕರಗಲ, ಕಾಡುತೊಂಡೆ, ವಿಷಮೆಕ್ಕಿಕಾಯಿ, ನೆಲಸೌತೆ, ಇಂಗಳಕಾಯಿ, ಕಂಚಿಕಾಯಿ ಎಂದೆಲ್ಲ ಗುರುತಿಸಿಕೊಂಡಿದೆ. ಆಂಗ್ಲ ಭಾಷೆಯಲ್ಲಿ ಕ್ರೀಪಿಂಗ್ ಕುಕುಂಬರ್.

ಬೇಲಿ, ತೋಟದ ಅಂಚು, ತೇವಾಂಶವಿರುವ ಕಾಡಿನ ಅಂಚಿನಲ್ಲಿರುವ ಪೊದೆಗಳ ಮೇಲೆ ಸ್ಪ್ರಿಂಗ್ ನಂತಹ ತಂತುಗಳ ಸಹಾಯದಿಂದ ಹಬ್ಬುವ ಕರ್ವೊಲು ಬಳ್ಳಿಯ ಎಲೆಗಳು ಹೃದಯದಾಕಾರವಿದ್ದು ಬಾಣದ ತುದಿಯಂತೆ ತುದಿ ಚೂಪಾಗಿರುತ್ತದೆ. ಅಂಚುಗಳು ಒರಟಾಗಿರುತ್ತವೆ. ಎಲೆಗಳು ತಿಳಿ ಹಸಿರಾಗಿದ್ದು ಅಡಿಭಾಗ ಬೂದು ಮಿಶ್ರಿತ ಬಿಳಿಯಾಗಿರುತ್ತದೆ. ಇದರ ಕಾಯಿಗಳು ತೊಂಡೆಕಾಯಿಯಂತೆ ಮೇಲ್ನೋಟಕ್ಕೆ ಕಂಡರೂ ಗಾತ್ರದಲ್ಲಿ ಸಣ್ಣದಾಗಿ ಮೊಟ್ಟೆಯಾಕಾರವಿದ್ದು ನಯವಾಗಿದೆ. ಮೈಮೇಲೆ ಗೆರೆಗಳಿರುತ್ತದೆ. ಪಕ್ವವಾದಾಗ ಹೊಳೆಯುವ ಆಕರ್ಷಕ ಕೆಂಪು ಬಣ್ಣ ಹೊಂದಿರುತ್ತದೆ. ಪಕ್ಷಿಗಳಿಗೆ ಹಾಗೂ ಸಣ್ಣ ಪುಟ್ಟ ಪ್ರಾಣಿಗಳಿಗೆ ಔತಣವಾಗುವ ಈ ಹಣ್ಣುಗಳು ಮಳೆಗಾಲದ ಆಹಾರವಾಗಿರುತ್ತದೆ.

ಉಷ್ಣವಲಯದ ದಕ್ಷಿಣ ಏಷ್ಯಾದ ಸ್ಥಳೀಯ ಸಸ್ಯವಾದ ಕರ್ವೊಲು ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರ ಎಲೆ, ಕಾಯಿ, ಬೇರುಗಳು ಪ್ರಮುಖ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸಂಶೋಧನಾ ವರದಿಗಳೂ ಹೇಳುತ್ತಿವೆ!

Antioxidant, Antibacterial, ಮಧುಮೇಹ ನಿರೋಧಕ ಗುಣ ಹೊಂದಿದೆ ಎಂದು ಸಂಶೋಧನೆ ಗಳಾಗಿವೆ. ಜಠರದ ಹುಳು, ರಕ್ತಶುದ್ಧಿ, ವಿಷಕಡಿತ, ಅಸ್ತಮಾ, ಕೆಮ್ಮು, ನೆಗಡಿ, ಕಫ, ಗಂಟಲು ನೋವು, ಮೂತ್ರವರ್ಧಕ, ಮೂತ್ರಪಿಂಡ ಸಮಸ್ಯೆಗೆ, ಉರಿಯೂತ, ಗಾಯ, ಶ್ವಾಸಕೋಶದ ಸಮಸ್ಯೆ, ಅಜೀರ್ಣೆಗೆ ಮಹತ್ವದ ಔಷಧಿಯಾಗಿದೆ. ಕೆಲ ಬುಡಕಟ್ಟು ಜನಾಂಗಗಳು ಕಾಡು ಪ್ರಾಣಿಗಳ ಮಾಂಸ ತಿಂದು ಕರಗಿಸಲು ಕರ್ವೊಲು ತಿನ್ನುವ ರೂಢಿಯೂ ಇದೆಯಂತೆ. ಆದ್ದರಿಂದಲೇ ಕರ್ವೊಲು ಸೇವಿಸಿದರೆ ಹೆಚ್ಚು ಹಸಿವು ಉಂಟಾಗುತ್ತದೆಯೆಂದು ತಿಂದವರ ಅನುಭವ. 

ಇಂದು ಜೆಸಿಬಿ ಎಂಬ ಯಂತ್ರ ಹೋಗದ ಸ್ಥಳವೇ ಇಲ್ಲವೇನೋ... ಪರಿಣಾಮವಾಗಿ ಕರ್ವೊಲು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಇಂದಿನ ತಲೆಮಾರಿಗೆ ಕಾಣದಾಗಿರುವುದು ದುರಂತವೇ ಸರಿ. ನೈಸರ್ಗಿಕವಾಗಿ ಬೆಳೆಯುತ್ತಿದ್ದ ಇಂತಹ ಮೂಲಿಕೆಗಳನ್ನು ಬೆಳೆಸುವುದೂ ಸುಲಭಸಾಧ್ಯವಲ್ಲ. ಗುಡ್ಡ ಬೆಟ್ಟಗಳನ್ನು ಸವರಿ ಅಭಿವೃದ್ಧಿಯ ಪಥ ಸೃಷ್ಟಿಸುವ ಮಾನವ ಜೀವಿ ಪ್ರಕೃತಿಯ ಬಗ್ಗೆ ಪ್ರೀತಿ, ಗೌರವ ಬೆಳೆಸಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಲ್ಲವೇ..?

ನೀವೂ ಕರಾವೊಲ್ ಬಳ್ಳಿ ಹುಡುಕಿರಿ... ಗುರುತಿಸಿ ಉಳಿಸಿಕೊಳ್ಳಲು ಪ್ರಯತ್ನಿಸುವಿರಲ್ಲವೇ? 

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************




Ads on article

Advertise in articles 1

advertising articles 2

Advertise under the article