ಮಕ್ಕಳಿಗೆ ರಜೆಯ ಓದು : ಸಂಚಿಕೆ - 31
Tuesday, September 29, 2026
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 31
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಖ್ಯಾತ ಕಾದಂಬರಿಗಾರ ರಸ್ಕಿನ್ ಬಾಂಡ್ ಕೇವಲ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗಾಗಿಯೂ ಅನೇಕ ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಬರವಣಿಗೆಯಲ್ಲಿ ಮಸ್ಸೂರಿಯ ಸೌಂದರ್ಯ, ಹಿಮಾಲಯದ ಪ್ರಕೃತಿ, ಬಾಲ್ಯದ ನಿಷ್ಕಲ್ಮಶ ನೆನಪುಗಳು ಮತ್ತು ಸರಳ ಜೀವಭಾವಗಳು ಎದ್ದು ಕಾಣುತ್ತವೆ. ಇದನ್ನೇ ಬಳಸಿಕೊಂಡು ಅವರು ವಿಶೇಷವಾಗಿ ಮಕ್ಕಳಿಗಾಗಿ ಅತ್ಯುತ್ತಮ ಕಥೆ ಹಾಗೂ ಕಾದಂಬರಿಗಳನ್ನು ರಚಿಸಿದ್ದಾರೆ.
ಅವರು ಬರೆದ ಕೆಲವು ಪ್ರಮುಖ ಹಾಗೂ ಜನಪ್ರಿಯ ಮಕ್ಕಳ ಪುಸ್ತಕಗಳ ವಿವರ ಇಲ್ಲಿದೆ :
◾ದ ಬ್ಲೂ ಅಂಬ್ರೆಲ್ಲಾ (The Blue Umbrella) :
ಇದು ರಸ್ಕಿನ್ ಬಾಂಡ್ ಅವರ ಅತ್ಯಂತ ಪ್ರಸಿದ್ಧ ಕಿರು ಕಾದಂಬರಿ. ಇದರ ಕಥೆ ಹೀಗಿದೆ… ಹಿಮಾಲಯದ ಸಣ್ಣ ಹಳ್ಳಿಯ 'ಬಿನಿಯಾ' ಎಂಬ ಬಾಲಕಿಗೆ ಸುಂದರವಾದ ನೀಲಿ ಕೊಡೆಯೊಂದು ಸಿಗುತ್ತದೆ. ಆ ಕೊಡೆ ಇಡೀ ಊರಿನ ಗಮನ ಸೆಳೆಯುತ್ತದೆ. ಹಳ್ಳಿಯ ಅಂಗಡಿಕಾರ ರಾಮಭರೋಸೆ ಆ ಕೊಡೆಯನ್ನು ಪಡೆಯಲು ಏನೆಲ್ಲಾ ಮಾಡುತ್ತಾನೆ ಹಾಗೂ ಕೊನೆಗೆ ಆಕೆಯ ಉದಾರ ಗುಣ ಮತ್ತು ತ್ಯಾಗದ ಪ್ರಾಮುಖ್ಯತೆ ಹೇಗೆ ವ್ಯಕ್ತವಾಗುತ್ತದೆ ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಈ ಕಥೆಯ ಆಧಾರದ ಮೇಲೆ ಅದೇ ಹೆಸರಿನಲ್ಲಿ ಒಂದು ಯಶಸ್ವಿ ಹಿಂದಿ ಚಿತ್ರವೂ ನಿರ್ಮಾಣವಾಗಿದೆ.
◾ದ ನೈಟ್ ಟ್ರೈನ್ ಅಟ್ ದೇವೋಲಿ (The Night Train at Deoli and Other Stories) :
ಮಕ್ಕಳ ಮತ್ತು ಹದಿಹರೆಯದ ಮನಸ್ಸಿನ ಭಾವನೆಗಳನ್ನು ಕುರಿತ ಸಣ್ಣ ಕಥೆಗಳ ಅದ್ಭುತ ಸಂಕಲನ. ಈ ಕೃತಿಯಲ್ಲಿ ಲೇಖಕರ ಬಾಲ್ಯದ ಪ್ರಯಾಣಗಳು, ದಾರಿಯಲ್ಲಿ ಸಿಗುವ ಅಪರಿಚಿತ ವ್ಯಕ್ತಿಗಳು ಮತ್ತು ಸಣ್ಣ ಸಣ್ಣ ನಿಲ್ದಾಣಗಳಲ್ಲಿ ಕಂಡ ಘಟನೆಗಳ ಸುತ್ತ ಈ ಕಥೆಗಳು ಹೆಣೆಯಲ್ಪಟ್ಟಿವೆ.
◾ಗ್ರಾಂಡ್ ಫಾದರ್ಸ್ ಪ್ರೈವೇಟ್ ಝೂ (Grandfather's Private Zoo): ನೀವು ಪ್ರಾಣಿ ಪಕ್ಷಿಗಳ ಪ್ರೇಮಿಗಳಾಗಿದ್ದರೆ ಈ ಪುಸ್ತಕ ನಿಮಗೆ ಖಂಡಿತಕ್ಕೂ ಇಷ್ಟವಾಗುತ್ತದೆ. ಲೇಖಕರ ತಾತನಿಗೆ ವಿಚಿತ್ರ ಹಾಗೂ ವಿವಿಧ ರೀತಿಯ ಪ್ರಾಣಿ-ಪಕ್ಷಿಗಳನ್ನು ಸಾಕುವ ಹವ್ಯಾಸವಿರುತ್ತದೆ. ಅವರ ಮನೆಯಲ್ಲಿದ್ದ ಟೋಟೊ ಎಂಬ ತಂಟೆಕೋರ ಕೋತಿ, ಮೈನಾ ಹಕ್ಕಿ, ಆಮೆ, ಪೈಥಾನ್ (ಹೆಬ್ಬಾವು) ಮುಂತಾದ ಪ್ರಾಣಿಗಳು ತಂದೊಡ್ಡುವ ತಮಾಷೆಯ ಪ್ರಸಂಗಗಳನ್ನು ಇಲ್ಲಿ ಹಾಸ್ಯಾಸ್ಪದವಾಗಿ ವಿವರಿಸಲಾಗಿದೆ. ಈ ಕಥೆ ಪುಸ್ತಕವನ್ನು ಓದುತ್ತಾ ಓದುತ್ತಾ ನೀವು ಬೇರೆಯೇ ಆದ ಲೋಕಕ್ಕೆ ತೆರಳುವುದರಲ್ಲಿ ಸಂದೇಹವಿಲ್ಲ.
◾ದ ರೂಮ್ ಆನ್ ದ ರೂಫ್ (The Room on the Roof):
ಇದು ರಸ್ಕಿನ್ ಬಾಂಡ್ ಅವರು ೧೭ನೇ ವಯಸ್ಸಿನಲ್ಲಿ ಬರೆದ ಚೊಚ್ಚಲ ಕಾದಂಬರಿ. 'ರಸ್ಟಿ' ಎಂಬ ಅನಾಥ ಇಂಗ್ಲಿಷ್ ಬಾಲಕ ತನ್ನ ಕಟ್ಟುನಿಟ್ಟಿನ ಪೋಷಕರಿಂದ ತಪ್ಪಿಸಿಕೊಂಡು, ಭಾರತೀಯ ಗೆಳೆಯರೊಂದಿಗೆ ಸೇರಿ ಹೇಗೆ ಸ್ವತಂತ್ರ ಬದುಕು ಕಟ್ಟಿಕೊಳ್ಳುತ್ತಾನೆ ಎಂಬುದರ ಕಥೆ. ಇದನ್ನು ಓದುವ ಮಕ್ಕಳಿಗೂ ಈ ಕಥೆ ಪ್ರೋತ್ಸಾಹದಾಯಕವಾದೀತು. ಈ ಪುಸ್ತಕಕ್ಕೆ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ 'ಜಾನ್ ಲೀವ್ಲಿನ್ ರೈಸ್ ಪ್ರಶಸ್ತಿ' (John Llewellyn Rhys Prize) ಲಭಿಸಿದೆ.
ರಸ್ಟಿ ಸರಣಿ ಪುಸ್ತಕಗಳು (The Rusty Series): 'ರಸ್ಟಿ' ಎಂಬ ಪಾತ್ರವನ್ನು ಆಧರಿಸಿ ಅವರು ಮಕ್ಕಳಿಗಾಗಿ ಸರಣಿ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಪ್ರಮುಖವಾದವು:
◾ರಸ್ಟಿ, ದ ಬಾಯ್ ಫ್ರಮ್ ದ ಹಿಲ್ಸ್ (Rusty, the Boy from the Hills): ರಸ್ಟಿಯ ಬಾಲ್ಯ ಮತ್ತು ಪ್ರಕೃತಿಯೊಂದಿಗಿನ ಅವನ ಒಡನಾಟ.
◾ರಸ್ಟಿ ರನ್ಸ್ ಅವೇ (Rusty Runs Away): ಅವನ ಸಾಹಸಮಯ ಪಯಣಗಳು.
◾ರಸ್ಟಿ ಅಂಡ್ ದ ಮ್ಯಾಜಿಕ್ ಮೌಂಟೇನ್ (Rusty and the Magic Mountain)
◾ಆಲ್ ರೋಡ್ಸ್ ಲೀಡ್ ಟು ಗಂಗೋತ್ರಿ (All Roads Lead to Gangotri): ಹಿಮಾಲಯದ ಕಾಲುದಾರಿಗಳಲ್ಲಿ ನಡೆಯುವ ಪ್ರಕೃತಿ ಸೌಂದರ್ಯ ಮತ್ತು ಸಾಹಸದ ಕಥೆಗಳು.
◾ಅಡ್ವೆಂಚರ್ಸ್ ಆಫ್ ಶೇರ್ ಬಹಾದ್ದೂರ್ :
ಮೊದಲಾದ ಕೃತಿಗಳು ಮಕ್ಕಳಲ್ಲಿ ಕೌತುಕ ಮೂಡಿಸುವ ಸಾಹಸಮಯ ಘಟನಾವಳಿಗಳನ್ನು ಹೊಂದಿವೆ.
ಸೂರ್ಯನೊಡನೆ ಜಗಳ ಮತ್ತು ಇತರ ಕಥೆಗಳು ಪುಸ್ತಕದಲ್ಲಿ 'ಮಣಿ' ಎಂಬ ಬಾಲಕ ತನ್ನ ಅಜ್ಜಿಗೆ ಹೊಸ ಕನ್ನಡಕ ಕೊಡಿಸಲು ಪಟ್ಟಣಕ್ಕೆ ಕರೆದುಕೊಂಡು ಹೋಗುವ ಪಯಣದ ಕಥೆ. ಸರಳ ಬದುಕಿನಲ್ಲಿ ಅಜ್ಜಿ ಮತ್ತು ಮೊಮ್ಮಗನ ನಡುವಿನ ಪ್ರೀತಿ-ಬಂಧವನ್ನು ಈ ಪುಸ್ತಕ ಮನಮುಟ್ಟುವಂತೆ ತಿಳಿಸುತ್ತದೆ.
ರಸ್ಕಿನ್ ಬಾಂಡ್ ಅವರ ಮಕ್ಕಳ ಸಾಹಿತ್ಯದ ವೈಶಿಷ್ಟ್ಯವೆಂದರೆ ಇದರ ಸರಳ ಭಾಷೆಯಿಂದಾಗಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಮಕ್ಕಳಲ್ಲಿ ಪ್ರಕೃತಿ ಪ್ರೇಮ ಮೂಡಿಸುವ ಮರ-ಗಿಡಗಳು, ಕಾಡು, ನದಿ ಹಾಗೂ ಬೆಟ್ಟಗುಡ್ಡಗಳ ಸುಂದರ ವರ್ಣನೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ತುಂಬುತ್ತವೆ. ಕರುಣೆ, ಸ್ನೇಹ, ಪ್ರಾಣಿ ದಯೆ ಮತ್ತು ಸರಳ ಜೀವನದ ಪ್ರಾಮುಖ್ಯತೆಯನ್ನು ಈ ಕಥೆಗಳು ಬೋಧಿಸುತ್ತವೆ. ರಸ್ಕಿನ್ ಬಾಂಡ್ ಅವರ ಬಹುತೇಕ ಮಕ್ಕಳ ಕಥೆಗಳು ಕನ್ನಡಕ್ಕೆ ಅನುವಾದಗೊಂಡಿವೆ.
(ಆಧಾರ)
ಚಿತ್ರ ಕೃಪೆ ವಿವಿಧ ಅಂತರ್ಜಾಲ ತಾಣಗಳು
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************