-->
ಸ್ಪೂರ್ತಿಯ ಮಾತುಗಳು : ಸಂಚಿಕೆ - 234

ಸ್ಪೂರ್ತಿಯ ಮಾತುಗಳು : ಸಂಚಿಕೆ - 234

ಸ್ಪೂರ್ತಿಯ ಮಾತುಗಳು : ಸಂಚಿಕೆ - 234
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093

  
ಹೊಸ ಆಲೋಚನೆಗಳನ್ನು ಹುಟ್ಟುಹಾಕುವುದು, ಸಮಸ್ಯೆಗಳಿಗೆ ವಿಭಿನ್ನ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವುದು ಮತ್ತು ಸಾಮಾನ್ಯ ವಿಷಯಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಮನೋಭಾವವನ್ನು ರಚನಾತ್ಮಕ ಚಿಂತನೆ ಎಂದು ವ್ಯಾಖ್ಯಾನಿಸುತ್ತೇವೆ.

ರಚನಾತ್ಮಕ ಚಿಂತನೆಯ ಮುಖ್ಯ ಲಕ್ಷಣಗಳನ್ನು ಹೀಗೆ ವಿಮರ್ಶಿಸಬಹುದು.
1. ಹೊಸತನ : ಹೊಸ ಮತ್ತು ವಿಭಿನ್ನ ಆಲೋಚನೆಗಳನ್ನು ರೂಪಿಸುವುದು. 

2. ಕಲ್ಪನಾಶಕ್ತಿ : ಸಾಧ್ಯತೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು. 

3. ವಿಶ್ಲೇಷಣೆ : ಸಮಸ್ಯೆಯ ವಿವಿಧ ಅಂಶಗಳನ್ನು ಪರಿಶೀಲಿಸುವುದು. 

4. ಪರ್ಯಾಯ ಚಿಂತನೆ : ಒಂದೇ ಸಮಸ್ಯೆಗೆ ಹಲವು ಪರಿಹಾರಗಳನ್ನು ಹುಡುಕುವುದು. 

5. ಪ್ರಶ್ನಿಸುವ ಮನೋಭಾವ : “ಹೀಗೆ ಏಕೆ ಮಾಡಬಾರದು?”, “ಹೇಗೆ ಮಾಡಿದರೆ ಇನ್ನೂ ಚಂದ?”, “ಈ ಕ್ರಮಗಳನ್ನು ಇನ್ನೊಂದು ರೀತಿಯಲ್ಲಿ ಮಾಡುವುದು ಸಾಧ್ಯವೇ?”, “ಇದಕ್ಕಿಂತ ಶ್ರೇಷ್ಠವಾದ ಪರ್ಯಾಯಗಳಿವೆಯೇ?" ಎಂದು ಯೋಚಿಸುವುದು. 

ಉದಾಹರಣೆಗೆ ಒಂದು ವಸ್ತುವನ್ನು ಅದರ ಸಾಮಾನ್ಯ ಬಳಕೆಯ ಬದಲು ಬೇರೆ ರೀತಿಯಲ್ಲಿ ಬಳಸುವ ಹೊಸ ವಿಧಾನವನ್ನು ಕಂಡು ಹಿಡಿಯುವುದು ರಚನಾತ್ಮಕ ಚಿಂತನೆಯಾಗುತ್ತದೆ. ಇಂತಹ ನವೀನ ಚಿಂತನೆಗಳು ವಿದ್ಯಾಭ್ಯಾಸ, ವಿಜ್ಞಾನ, ಕಲೆ, ಉದ್ಯೋಗ ಮತ್ತು ದೈನಂದಿನ ಜೀವನದಲ್ಲಿ ಕಾಣುವ ಸಮಸ್ಯೆಗಳಿಗೂ ಪರಿಣಾಮಕಾರಿಯಾದ ಪರಿಹಾರ ಮತ್ತು ನೆರವು ನೀಡಲು ಸಹಾಯ ಮಾಡುತ್ತದೆ.

ಇತ್ತೀಚಗೆ ಧಾರಾವಾಡ ಜಿಲ್ಲಾಧಿಕಾರಿಗಳು ತನ್ನ ಕಚೇರಿಯ ಪತ್ರ ಸಂಖ್ಯೆ : ಆಡಳಿತ-2/ಸಿಆರ್-25/2026-27 ದಿನಾಂಕ 21.08.2026ರಲ್ಲಿ ಹೀಗೊಂದು ಮನವಿ ಪ್ರಕಟಿಸಿದ್ದಾರೆ. ತನ್ನನ್ನು ಸೌಜನ್ಯವಾಗಿ ಭೇಟಿ ಮಾಡುವ ನಾಗರಿಕರು ಹೂಗುಚ್ಛ ತರುವುದಿದೆ. ಹೂಗುಚ್ಛಗಳು ತಾತ್ಕಾಲಿಕವಾದುವುಗಳು. ಸಂಜೆಗೆ ಎಸೆಯಲೇ ಬೇಕಾದ ವಸ್ತುಗಳು. ನಾಗರಿಕರು ಹೂಗುಚ್ಛದ ಬದಲಿಗೆ ನೋಟ್ ಪುಸ್ತಕ ಅಥವಾ ಪೆನ್ನುಗಳನ್ನು ಕೊಡುವಂತೆ ಮನವಿ ಮಾಡಿದ್ದಾರೆ. ಇದು ಬಹಳ ರಚನಾತ್ಮಕ ವಿಚಾರವಾಗಿದೆ. ಈ ರೀತಿ ಸಂಗ್ರಹವಾಗುವ ವಸ್ತುಗಳನ್ನು ಸರಕಾರಿ ಶಾಲೆಗಳ ಮಕ್ಕಳಿಗೆ ಅಥವಾ ಬಡ ಮಕ್ಕಳಿಗೆ ಕಲಿಕಾ ಚಟುವಟಿಕೆಗಳಿಗೆ ಮರು ಬಳಕೆ ಮಾಡುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಉದಾತ್ತವಾದ ಚಿಂತನೆ. ಭೇಟಿ ಮಾಡುವವರು ಬರಿಗೈಯಲ್ಲಿ ಹೋಗುವುದಿಲ್ಲ. ಆದರೆ ಅವರು ಹೂಗುಚ್ಛಕ್ಕೆ ವ್ಯಯಿಸುವ ಹಣವು ಪರೋಕ್ಷವಾಗಿ ವಿದ್ಯಾರ್ಥಿಗಳನ್ನು ತಲುಪಿದರೆ ಅದು ಭಗವಂತನಿಗೆ ಪ್ರಿಯವಾದ ಸತ್ಕರ್ಮವಾಗುತ್ತದೆ. ಈ ರೀತಿಯ ರಚನಾತ್ಮಕ ಕ್ರಮಗಳನ್ನು ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಮಂತ್ರಿಗಳು ಅನುಸರಿಸುವಂತಾಗಬೇಕು.

ಇತ್ತೀಚೆಗೆ ನಾನೂ ಓರ್ವ ಅಧಿಕಾರಿಯನ್ನು ಶಾಲು ಹೊದೆಸಿ ಸ್ವಾಗತಿಸಿದ್ದೆ. ಮುಂದಿನ ದಿನಗಳಲ್ಲಿ ಶಾಲಿನ ಬದಲು ಪುಸ್ತಕ ಅಥವಾ ಪೆನ್ನು ನೀಡಿ ಗೌರವಾರ್ಪಣೆ ಮಾಡುವ ಸಂಪ್ರದಾಯ ಅನುಸರಣೆ ಮಾಡುವ ಪ್ರೇರಣೆ ಧಾರವಾಡ ಜಿಲ್ಲಾಧಿಕಾರಿಗಳಿಂದ ಸಿಕ್ಕಿದೆ. ಎಲ್ಲ ಉಡುಗೊರೆಗಳಿಗೂ ಈ ನೀತಿ ಸ್ವೀಕಾರಾರ್ಹ ಆಗಬಹುದೆನಿಸುತ್ತದೆ.

ಕರ್ನಾಟಕ ರಾಜ್ಯಸರಕಾರವು ಬಹುಮಾನಗಳಿಗೆ, ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಭಾಗವಹಿಸುವವರಿಗೆ ಹಾರ- ತುರಾಯಿ ಬದಲು ಓದುವ ಪುಸ್ತಕ ನೀಡಲು ವಿನಂತಿ ಮಾಡಿತ್ತು. ಆ ವಿನಂತಿ ಶೇಕಡಾ ಹತ್ತರಷ್ಟೂ ಅನುಷ್ಠಾನಕ್ಕೆ ಬಂದಿಲ್ಲ. ಕೆಲವರು ನೀಡಿದ ಪುಸ್ತಕಗಳನ್ನು ವೇದಿಕೆಯಲ್ಲೇ ಬಿಟ್ಟು ಹೋಗುವುದೂ ಇದೆ. ಹೀಗೆ ಒಟ್ಟಾದ ಪುಸ್ತಗಳನ್ನು ಒಂದು ಗ್ರಂಥಾಲಯಕ್ಕೋ ವಿದ್ಯಾರ್ಥಿ ನಿಲಯಕ್ಕೋ ಅಥವಾ ಆಸ್ಪತ್ರೆಗೋ ದಾನ ನೀಡಿದರೆ ಈ ರಚನಾತ್ಮಕ ಚಿಂತನೆಯು ಬಳಕೆದಾರರಿಗೆ ಪ್ರಯೋಜನ ಆಗಬಹುದಲ್ಲವೆ.

ರಚನಾತ್ಮಕ ಚಿಂತನೆಯು ಕೇವಲ ಭೇಟಿ - ಉಡುಗೊರೆ - ಸನ್ಮಾನಗಳಿಗೆ ಬಳಸುವ ವಸ್ತುಗಳಿಗೆ ಸೀಮಿತವಾಗುವುದಲ್ಲ. ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸಲು ಕೂಡಾ ಯೋಜಿಸಬಹುದಾಗಿದೆ. ನಾವು “ಗುಜಿರಿ” ಎಂದು ನಿರ್ಬಳಕೆಯ ವಸ್ತುಗಳನ್ನು ಮಾರುವುದಿದೆ. ಆದರೆ ಆ ವಸ್ತುಗಳಲ್ಲಿ ಅನೇಕ ವಸ್ತುಗಳು ಬೇರೆ ರೀತಿಯ ಬಳಕೆಗೆ ಒದಗ ಬಹುದಾದವುಗಳೂ ಇವೆ. ಹೇಗೆ ಬಳಸಬಹುದೆಂಬ ಚಿಂತನೆ ನಮ್ಮದಾಗಿರಬೇಕು. 
ಗೊಬ್ಬರ ತಂದ ಚೀಲಗಳಿರುತ್ತವೆ. ಆ ಚೀಲಗಳನ್ನು ಗುಜಿರಿಗೆ, ಗ್ರೋ ಬ್ಯಾಗ್ ಆಗಿ ಬಳಸಿ ಮಾರ ಬಹುದು. ಕೆಲವು ವಸ್ತುಗಳು ಕಾಗದಗಳು ಅಲಂಕಾರಿಕ ವಸ್ತುಗಳಾಗಿ ರೂಪ ಪಡೆಯಬಹುದು. ತೂತಾದ ಮಡಿಕೆಯನ್ನು ಹಾಗೆಯೇ ಎಸೆಯದೆ ಅದನ್ನು ಕಲಾತ್ಮಕವಾಗಿ ಸುಂದರಗೊಳಿಸಿ ಶೋಕೇಸ್ ಸೇರಿಸಬಹುದು. 

ಎರಡು ಹಣ್ಣುಗಳಿವೆ, ನಮಗೆ ಈ ದಿನೊಂದು ಮಾತ್ರ ಬಳಕೆಯಾಗುತ್ತದೆ. ಒಂದನ್ನು ಕೊಳೆಯಿಸಿ ನಾಳೆ ಎಸೆಯುವ ಬದಲು ಮನೆ ಕೂಲಿಯಾಳಿಗೆ, ಪಕ್ಕದ ಮನೆಯವರಿಗೆ ನೀಡಿದರೆ ಅವರಿಗೂ ಸಂತಸವಾಗುತ್ತದೆ. ನಮ್ಮ ರಚನಾತ್ಮಕ ಚಿಂತನೆಗಳು ಇತರರಿಗೂ ಸಂತಸ ನೀಡುವಂತಾದರೆ ನಾವು ಕೃತಾರ್ಥರೆನಿಸುತ್ತೇವೆ.
.............................. ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************


Ads on article

Advertise in articles 1

advertising articles 2

Advertise under the article