-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 142

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 142

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 142
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ (ವಜ್ರದಷ್ಟು ಕಠಿಣವಾಗಿದ್ದರೂ ಹೂವಿನಷ್ಟು ಮೃದು). ಈ ಒಂದು ಮಾತನ್ನು ಕೇಳದವರೇ ವಿರಳ. ಇದರ ಅರ್ಥ ವಿವರಣೆಗೆ ನಾನು ಹೋಗುವುದಿಲ್ಲ. ಆದರೆ ಹೋಲಿಕೆ ಎಂದರೆ ಅಲ್ಲಿ ಎರಡು ವಸ್ತುಗಳಿರಲೇ ಬೇಕು. ಅವುಗಳ ಒಂದು ಗುಣವನ್ನು ಪರಸ್ಪರ ಹೋಲಿಸಲಾಗುತ್ತದೆ. ಕಠಿಣತೆಗೆ ವಜ್ರ ಮೃದುತ್ವಕ್ಕೆ ಹೂ. ಹೀಗೆ ಹೇಳುತ್ತಾ ಹೋದರೆ ಬೆಟ್ಟದಷ್ಟು ಪ್ರೀತಿ, ಬೆಣ್ಣೆಯಷ್ಟು ಮೃದು, ಸಕ್ಕರೆಯಷ್ಟು ಸಿಹಿ, ರೇಷ್ಮೆಯಷ್ಟು ಮೃದು ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಂದರೆ ಹೋಲಿಕೆಗೆ ಒಂದು ಮಾನದಂಡ ಬೇಕಾಗುತ್ತದೆ. 

ಫುಟ್ಬಾಲ್ ಎಂದರೆ ಪೀಲೆ, ಕ್ರಿಕೆಟ್ ಅಂದರೆ ತೆಂಡುಲ್ಕರ್, ಹಾಕಿ ಎಂದರೆ ದ್ಯಾನ್ ಚಂದ್ ಹೀಗೆ. ಇಲ್ಲಿ ಹೋಲಿಕೆ ಇಲ್ಲದೇ ನಮ್ಮ ಬದುಕೇ ಇಲ್ಲ. ಇವತ್ತು ಈ ವಿಷಯ ಯಾಕೆ ಎಂದು ನೀವು ಕೇಳಬಹುದು. ನಾವು ಹಸಿರುಮನೆ ಅನಿಲಗಳ ಬಗ್ಗೆ ಮಾತನಾಡುತ್ತಿದ್ದೇವಲ್ಲ. ಕಳೆದವಾರ ಈ ಅನಿಲಗಳ ಜೀವಿತಾವಧಿಯ (lifespan) ಮಾತನಾಡುತ್ತಿದ್ದೆವು. ಇಲ್ಲಿ ಹೋಲಿಕೆಯಿಲ್ಲ ಬದಲಾಗಿ ವರ್ಷಗಳಿವೆ. ಆದರೆ ಅವುಗಳ ಸಾಮರ್ಥ್ಯ ಬಗ್ಗೆ ಹೇಳುವಾಗ ಯಾವುದೇ ಮಾನದಂಡವಿಲ್ಲ ಬದಲಾಗಿ ಒಂದು ಅನಿಲವನ್ನು ಮಾನದಂಡ ಎಂದು ಭಾವಿಸಿ ಉಳಿದವನ್ನು ಅದಕ್ಕೆ ಹೋಲಿಸುತ್ತೇವೆ. 

ಈ ಅನಿಲಗಳು ಶಾಖವನ್ನು ಯಾವ ಪ್ರಮಾಣದಲ್ಲಿ ಹಿಡಿದಿಡಬಲ್ಲವು ಎನ್ನುವುದೇ ಈ ಹೋಲಿಕೆ. ಇದನ್ನು ನಾವು ಭೂಗೋಳ ಕಾಯಿಸಬಲ್ಲ ಸಾಮರ್ಥ್ಯ (Global Warming Potential GWP) ಎನ್ನುವುದು. ಈ ಅನಿಲಗಳು ಶಾಖ ತಪ್ಪಿಸಿಕೊಂಡು ಹೋಗದಂತೆ ಭೂಮಿಯನ್ನು ಬೆಚ್ಚಗಿಡುವ ಹೊದಿಕೆಯಂತೆ ಕೆಲಸ ಮಾಡುತ್ತವೆ ಎನ್ನುವುದು ನಮಗೆ ಗೊತ್ತು. ಹೊದಿಕೆ ದಪ್ಪಗಾದಷ್ಟೂ ಹೆಚ್ಚು ಬೆಚ್ಚಗಿರುತ್ತೇವೆ. ಹಸಿರುಮನೆ ಅನಿಲಗಳಲ್ಲಿ ಅತೀ ತೆಳುವಾದ ಹೊದಿಕೆಯೆಂದರೆ ಅದು ಇಂಗಾಲದ ಡೈಆಕ್ಸೈಡ್. ಆದ್ದರಿಂದ ಇದರ ಸಾಮರ್ಥ್ಯವನ್ನು 1 ಎಂದು ಪರಿಗಣಿಸಲಾಗಿದೆ. ಅಂದರೆ ಇದು ಮೂಲ ಹೋಲಿಕೆ (baseline reference). ಇದನ್ನು ನೂರು ವರ್ಷಗಳ ಹೋಲಿಕೆಯಲ್ಲಿ ಸಿದ್ಧಪಡಿಸಲಾಗಿದೆ. ಮತ್ತೊಂದು ಅನಿಲ ಮಿಥೇನ್. ಇದರ GWP 27 ರಿಂದ 30. ಸರಳವಾಗಿ ಹೇಳಬೇಕೆಂದರೆ ಇಂಗಾಲದ ಡೈಆಕ್ಸೈಡ್ ಎಂಬ ಹೊದಿಕೆಯನ್ನು 27 ಮಡಿಕೆಗಳಾಗಿ ಮಾಡಿ ಹೊದ್ದುಕೊಂಡರೆ ಎಷ್ಟು ಬೆಚ್ಚಗಾಗುತ್ತದೋ ಅಷ್ಟು. ಅದೇ ಕೃಷಿ ಚಟುವಟಿಕೆಯಲ್ಲಿ ನೈಟ್ರಸ್ ಆಕ್ಸೈಡ್ ನ GWP 273. ಅಂದರೆ ಇಂಗಾಲದ ಡೈಆಕ್ಸೈಡ್ ನ ಹೊದಿಕೆಯನ್ನು 273 ಬಾರಿ ಮಡಚಿದಷ್ಡು. ಇನ್ನು ನಿಮ್ಮ ಎಸಿಯಲ್ಲಿ ಬಳಸುವ ಅನಿಲಗಳಾದ CFCs, PFCs ಮತ್ತು SF6 ಗೆ ಬಂದರೆ ಇದು 4700 ರಿಂದ 14000. ಅಂದರೆ ಕೈಗಾರಿಕಾ ಉತ್ಪಾದನೆಯಿಂದ ನಮ್ಮ ವಾತಾವರಣ ಕಾಯುತ್ತಲೇ ಹೋಗುತ್ತದೆ. ಹಿಮಗಡ್ಡೆಗಳು ಕರಗಿ ಸಮುದ್ರ ಮಟ್ಟ ಏರುತ್ತಲೇ ಇರುತ್ತದೆ.

ಈ ಜಾಗತಿಕ ತಾಪಮಾನ ಇಳಿಕೆಗೆ ನನ್ನ ಹಿತ್ತಲಿನಲ್ಲಿ ನಾನು ಪ್ರಯತ್ನಿಸಬಹುದೇ? ಖಂಡಿತ. ನೀವು ದನಗಳನ್ನು ಸಾಕಿದ್ದರೆ, ಕೃಷಿ ತ್ಯಾಜ್ಯಗಳು ಬೇಕಾದಷ್ಟಿದ್ದರೆ ಅಡುಗೆ ಮನೆಯ ಹಸಿ ಕಸ ನಿಮ್ಮ ಅಪಾರ್ಟ್‌ಮೆಂಟ್ ನಲ್ಲಿ ಸಂಗ್ರಹಿಸುತ್ತಿದ್ದರೆ ಒಂದು ಗೋಬರ್ ಗ್ಯಾಸ್ ಅಥವಾ ಬಯೋ ಗ್ಯಾಸ್ ಪರಿವರ್ತಕ ಸ್ಥಾಪಿಸಿದರಾಯಿತು. ಆಮ್ಲಜನಕದ ಸಂಪರ್ಕವಿಲ್ಲದೇ ಇದು ಕೊಳೆಯುವಾಗ ಮಿಥೇನ್ ಉತ್ಪತ್ತಿಯಾಗುತ್ತದೆ. ಇದು ಒಂದು ಇಂಧನ. ಇದನ್ನು ಬಳಸಿ ಅಡುಗೆ ಮಾಡುವಾಗ ಕಡಿಮೆ GWP ಯ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದರಿಂದ SF6 ನ ಬಿಡುಗಡೆ ಕಡಿವೆಯಾಗುತ್ತದೆ. ಇಲ್ಲಿ ನಮಗೆ ದೊರೆಯುವ ಸ್ಲರಿ ಕೃಷಿಗೆ ಉತ್ತಮ ಗೊಬ್ಬರ. ಇದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿ ನೈಟ್ರಸ್ ಆಕ್ಸೈಡ್ ನ ಬಿಡುಗಡೆ ಕಡಿಮೆಯಾಗುತ್ತದೆ.    

ನಿಮ್ಮ ಒಂದು ಪುಟ್ಟ ಹೆಜ್ಜೆ ಜಾಗತಿಕ ತಾಪಮಾನ ಏರಿಕೆಗೆ ಹೇಗೆ ಸಹಾಯ ಮಾಡಬಲ್ಲುದು ನೋಡಿದಿರಾ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article