-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 141

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 141

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 141
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203



ಪ್ರೀತಿಯ ಮಕ್ಕಳೇ.... ಕಳೆದ ವಾರ ಹಸಿರುಮನೆ ಅನಿಲಗಳ ಬಗ್ಗೆ ಮಾತನಾಡುತ್ತಿದ್ದೆವು. ಆಗ ನೀರಾವಿಯಿಂದ ಉಂಟಾದ ಉಷ್ಣತೆಯ ಏರಿಕೆ ಕೇವಲ ಕೆಲವೇ ಗಂಟೆಗಳಿಂದ ಕೆಲವೇ ದಿನಗಳು ಎಂದಿದ್ದೆ. ಆಮೇಲೆ ಮಳೆ, ಇಬ್ಬನಿ ಅಥವಾ ಮಂಜಿನ ರೂಪದಲ್ಲಿ ವಾತಾವರಣದಿಂದ ಹೊರ ಬೀಳುತ್ತದೆ ಎಂದಿದ್ದೆ. ಇದನ್ನು ಹಸಿರುಮನೆ ಅನಿಲದ ಜೀವಿತಾವಧಿ (life span of a greenhouse gas) ಎನ್ನುವುದು. 

ಇಲ್ಲಿ ನೀರಾವಿಯ ಜೀವಿತಾವಧಿ ಕೆಲವೇ ಗಂಟೆಗಳಿಂದ ಕೆಲವೇ ದಿನಗಳು. ಹಾಗೆಯೇ ಪಳೆಯುಳಿಕೆ ಇಂದನಗಳ ಉರಿಯುವಿಕೆ ಮತ್ತು ಅಗ್ನಿ ಪರ್ವತಗಳ ಸ್ಪೋಟದಿಂದ ಬಿಡುಗಡೆಯಾಗುವ ಗಂಧಕದ ಡೈಆಕ್ಸೈಡ್ (sulphur dioxide) ಒಂದು ಹಸಿರುಮನೆ ಅನಿಲವಾಗಿದ್ದರೂ ಕೂಡಾ ಅದನ್ನು ಒಂದು ಮಾಲಿನ್ಯಕಾರಕ (pollutant) ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರ ಜೀವಿತಾವಧಿ ಬಹಳ ಕಡಿಮೆ. ಇದು ವಾತಾವರಣದ ತೇವ ಅಥವಾ ಮಳೆಯಲ್ಲಿ ಕರಗಿ ಗಂಧಕಾಮ್ಲವಾಗಿ ಬಿಡುತ್ತದೆ ಮತ್ತು ಆಮ್ಲ ಮಳೆಗೆ ಕಾರಣವಾಗುತ್ತದೆ. ಹಾಗೆಯೇ ಮಿಥೇನ್ ಇದು ಒಂದು ಸ್ಥಿರ ಅನಿಲ ಅಲ್ಲ ಇದು ಅವಕಾಶ ಸಿಕ್ಕಾಗ ಉರಿದು ಇಂಗಾಲದ ಡೈಆಕ್ಸೈಡ್ ಆಗಿ ಬದಲಾಗುತ್ತದೆ. ಆದ್ದರಿಂದ ಇದರ ಜೀವಿತಾವಧಿ ಕಡಿಮೆ ಅಂದರೆ ಕೇವಲ 12 ವರ್ಷಗಳು.

ಆದರೆ ಉಳಿದ ಹಸಿರುಮನೆ ಅನಿಲಗಳು ದೀರ್ಘಾಯುಗಳು. ಈ ಇಂಗಾಲದ ಡೈಆಕ್ಸೈಡ್ ಇಂಗಾಲದ ಚಕ್ರಕ್ಕೆ ಸಿಲುಕಿ ಸಸ್ಯಗಳು ಆಹಾರ ತಯಾರಿಸುವಾಗ ಗ್ಲುಕೋಸ್ ಆಗಿ ಬದಲಾಗುತ್ತದೆ. ಸಸ್ಯ ಮತ್ತು ಪ್ರಾಣಿಗಳ ಉಸಿರಾಟದ ವೇಳೆ ಪುನಃ ಇಂಗಾಲದ ಡೈಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದಲ್ಲ ಇದನ್ನು ನಾವು ಇಂಗಾಲದ ಚಕ್ರ ಎನ್ನುವುದು. ಅಂದರೆ ಒಮ್ಮೆ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಪ್ರವೇಶಿಸಿತೆಂದರೆ ಇದು ಸಾಯುವ ಮಾತೇ ಇಲ್ಲ. ಇನ್ನು ಪಳೆಯುಳಿಕೆ ಇಂಧನಗಳ ಉರಿಯುವಿಕೆ, ಸೌದೆಗಳ ಉರಿಸುವಿಕೆ, ಕೈಗಾರಿಕೆಗಳಿಂದ ನಿರಂತರವಾಗಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣವನ್ನು ಏರಿಸುತ್ತಲೇ ಇದ್ದೇವೆ. ಈ ಇಂಗಾಲದ ಡೈಆಕ್ಸೈಡ್ ನ ಜೀವಿತಾವಧಿ 50 ರಿಂದ 200 ವರ್ಷಗಳು ಎಂದು ಹೇಳಿದರೂ ಶತಮಾನಗಳಲ್ಲ ಸಹಸ್ರಮಾನಗಳ ಕಾಲ ಅವುಗಳು ಮುಂದುವರಿಯುತ್ತಲೇ ಹೋಗುತ್ತದೆ.

ಇನ್ನು ಕೃಷಿ ಚಟುವಟಿಕೆಯಲ್ಲಿ ಬಿಡುಗಡೆಯಾಗುವ ನೈಟ್ರಸ್ ಆಕ್ಸೈಡ್ 109 ರಿಂದ 112 ವರ್ಷಗಳ ಕಾಲ ಬದುಕುತ್ತದೆ. ಅದೇ ನಿಮ್ಮ ಎಸಿಯಲ್ಲಿರುವ ಫೋರಿನ್ ಯುಕ್ತ ಅನಿಲಗಳ (CFCs, PFCs, SF6 ಜೀವಿತಾವಧಿ ಕೆಲವು ಸಾವಿರದಿಂದ 50 ಸಾವಿರ ವರ್ಷಗಳು. ಒಮ್ಮೆ ಉತ್ಪಾದಿಸಿದರೆ ಮುಗಿಯಿತು. ನಿಮ್ಮ ಕೈಯಿಂದ ತಪ್ಪಿಸಿಕೊಂಡು ವಾತಾವರಣ ಸೇರಿದರೆ ಭಸ್ಮಾಸುರನ ಹಾಗೆ ಇಡಿಯ ಭೂಖಂಡವನ್ನು ಸುಡುತ್ತಲೇ ಸಾಗುತ್ತದೆ. ಯಾವ ಮೋಹಿನಿಯ ಅವತಾರವೂ ಈ ಭೂಮಂಡಲವನ್ನು ರಕ್ಷಿಸಲಾರದು.

ಅಂದರೆ ಹಸಿರುಮನೆಯ ವಿಷಯ ಬಂದಾಗ ದೀರ್ಘಾಯಗಳಾದಷ್ಡೂ ಅಪಾಯವೇ...!!
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************


Ads on article

Advertise in articles 1

advertising articles 2

Advertise under the article