ಸ್ಪೂರ್ತಿಯ ಮಾತುಗಳು : ಸಂಚಿಕೆ - 233
Tuesday, September 22, 2026
Edit
ಸ್ಪೂರ್ತಿಯ ಮಾತುಗಳು : ಸಂಚಿಕೆ - 233
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
“ಪೊಸಡಿಗುಂಪೆ ಬೆಟ್ಟ ನೋಡು, ಹೊಸತು ಕಣ್ಗೆ ಹಬ್ಬ ಮಾಡು” ಎಂಬ ಕಯ್ಯಾರ ಕಿಞ್ಞಣ್ಣ ರೈಯವರ ಕವನದ ಸಾಲುಗಳನ್ನು ನೆನಪಿಸುವ ಪೊಸಡಿಗುಂಪೆ ಬೆಟ್ಟದ ಸೆರಗಿನಲ್ಲಿ, ಅದೆಷ್ಟೋ ಬಂಡೆಕಲ್ಲುಗಳನ್ನು ಪುಡಿ ಮಾಡಿ, ಪರಿಶ್ರಮದ ಬೆವರಿನಿಂದ ತಲೆಯೆತ್ತಿ ನಿಂತಿದೆ ಮಾಧವ ಕುಂಜತ್ತೂರು ಹಾಗೂ ಡಾ. ಪ್ರಮೀಳಾ ಮಾಧವ್ ಅವರ ನಿಸರ್ಗಧಾಮ.
ಮಕ್ಕಳಿಗಾಗಿ ಒಂದು ಕಾರ್ಯಕ್ರಮವನ್ನು ರೂಪಿಸಬೇಕು ಎಂಬ ಆಲೋಚನೆ ಬಹಳ ದಿನಗಳಿಂದಲೇ ಪೆರ್ಲ ಕವಿಹೃದಯದ ಕವಿ ಮಿತ್ರರಿಗಿತ್ತು. ಮನಸ್ಸಿನಲ್ಲಿ ಮೊಳಕೆಯೊಡೆದ ಕನಸು ಚಿಗುರುವ ದಿನಗಳಿಗಾಗಿ ಕಾಯಲಾಗುತ್ತಲಿದ್ದಂತೆ ಆ ದಿನ ಕೂಡಿ ಬಂತು. ಅಂದು 2026ರ ಸೆಪ್ಟೆಂಬರ್ ಹನ್ನೆರಡು. ಪೊಸಡಿಗುಂಪೆಯ ತಪ್ಪಲಿನ ನಿಸರ್ಗಧಾಮದಲ್ಲಿ ಚಿಣ್ಣರ ನಗುವಿನ ಬುತ್ತಿ ತೆರೆದ ದಿನ.
ಆ ಕಲ್ಲಿನ ಲೋಕಕ್ಕೆ ಚಿಣ್ಣರ ನಗುವಿನ ಬಣ್ಣ ಹಚ್ಚಲು ಮುಂದಾದವರು ಸವಿ ಹೃದಯದ ಕವಿ ಮಿತ್ರರು ವೇದಿಕೆ, ಪೆರ್ಲ ಹಾಗೂ ಶಂಪಾ ಪ್ರತಿಷ್ಠಾನ (ರಿ.) ಬೆಂಗಳೂರು. ಕಾರ್ಯಕ್ರಮದ ಸಿದ್ಧತೆಯೂ ಒಂದು ಕಥೆಯಂತೆಯೇ ಸಾಗಿತು. ಅಡುಗೆಯವರ ಸಹಾಯದಿಂದ ತಿಂಡಿಗಳನ್ನು ಸಿದ್ಧಪಡಿಸಿ, ಸಾಹಿತ್ಯದ ಈ ರಥಕ್ಕೆ ಸಾರಥಿಯಾಗಿ ಹೊರಟವರು, ಚಿಣ್ಣರಿಗಾಗಿ ಒಂದಷ್ಟು ತಿಂಡಿಗಳನ್ನು ಜೋಡಿಸಿಕೊಳ್ಳ ಬೇಕಾಯಿತು. ಮೊದಲೇ ಯೋಚಿಸಿದಂತೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಾರ್ಯದರ್ಶಿ ಬಾಲಕೃಷ್ಣನವರು ಸಂಘಟಕರ ಜೊತೆಯಾದರು. ರಕ್ಷಾ ಮತ್ತು ದೀಕ್ಷಾ ಅವರ ಮಾತೃಶ್ರೀ ಸುಜಾತ ಸಂಘಟಕ ಸುಭಾಷ್ ಪೆರ್ಲರ ಪ್ರಯಾಣದ ಮತ್ತೊಂದು ಬಲವಾದ ಕೊಂಡಿಯಾದರು.
ಪರಿಶ್ರಮಕ್ಕೆ ರಥವೇನು? ರಥಕ್ಕೆ ಸಾರಥಿಯೇನು?—ಇವೆಲ್ಲವನ್ನೂ ಮೀರಿ ಎಲ್ಲರನ್ನು ಚಿಣ್ಣರ ಲೋಕದ ಸಾಹಿತ್ಯ ವೇದಿಕೆಯತ್ತ ಕರೆದೊಯ್ಯುತ್ತಿದ್ದದ್ದು ಮುಂಜಾವಿನ ಆ ಚಿಲಿಪಿಲಿ ಕಲರವವೇ! ಮುಂಜಾವಿನ ತೆಳು ಬಿಸಿಲು ನಿಧಾನವಾಗಿ ನಿಸರ್ಗಧಾಮವನ್ನು ಆವರಿಸುತ್ತಿದ್ದಂತೆ, ಚಿಣ್ಣರೆಲ್ಲರೂ ಒಟ್ಟಾಗಿ ಕಾರ್ಯಕ್ರಮದ ವೇದಿಕೆಯತ್ತ ಹೆಜ್ಜೆ ಹಾಕಿದರು. ಅಲ್ಲಿ ಒಂದಷ್ಟು ಹಿರಿಯರು ಮತ್ತು ಕಿರಿಯರು - ಹಿರಿಯರೆಂದರೆ ಶತಕದ ಗಡಿಯತ್ತ ಸಾಗುತ್ತಿರುವವರು ; ಕಿರಿಯರೆಂದರೆ ಇನ್ನೂ ಅಂಬೆಗಾಲಿಡುವ ಹಂತದವರು! ವಯಸ್ಸಿನ ಅಂತರವನ್ನೇ ಮರೆಸಿದಂತೆ ಎಲ್ಲರೂ ಒಂದೇ ವೇದಿಕೆಯಲ್ಲಿ ಬೆರೆತರು.
ಎಂಡೋಸಲ್ಫಾನ್ ಶಾಪವನ್ನು ಮೆಟ್ಟಿನಿಂತ ಕುಮಾರಿ ರಕ್ಷಾ ಕೆಜಕ್ಕಾರು ಅವರ ನೃತ್ಯದೊಂದಿಗೆ ಶ್ರಾವಣ ಚಿಣ್ಣರ ಲೋಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ ಅವರ ಆತ್ಮೀಯ ಮಾತುಗಳ ಬಳಿಕ, ಡಾ. ಪ್ರಮೀಳಾ ಮಾಧವ್ ಅವರೊಂದಿಗೆ ನಡೆದ ಮಕ್ಕಳ ಸಾಹಿತ್ಯ ಸಂವಹನ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಯಿತು.
ಸಾಹಿತ್ಯದ ಅಪಾರ ಅನುಭವವನ್ನು ತಮ್ಮೊಳಗೆ ತುಂಬಿಕೊಂಡಿರುವ ಡಾ. ಪ್ರಮೀಳಾ ಮಾಧವ್ ಅವರು ಚಿಣ್ಣರ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲದೆ, ಅವರ ಕುತೂಹಲದೊಳಗೆ ಇಳಿದು ಸಾಹಿತ್ಯದ ಸೊಗಡನ್ನು ಸರಳವಾಗಿ ಪರಿಚಯಿಸಿದರು. ಮಕ್ಕಳು ಪ್ರಶ್ನೆಗಳ ಬಾಣಗಳನ್ನು ಒಂದರ ಹಿಂದೆ ಒಂದರಂತೆ ಪ್ರಯೋಗಿಸಿದರೆ, ಡಾ. ಪ್ರಮೀಳಾ ಮಾಧವ್ ಅವರು ತಮ್ಮ ಅನುಭವದ ಬತ್ತಳಿಕೆಯಿಂದ ಉತ್ತರಗಳ ಮುತ್ತುಗಳನ್ನು ಹೊರತೆಗೆದು ಹಂಚಿದರು. ಹಿರಿಯ ಸಾಹಿತಿಯೊಬ್ಬರು ಚಿಣ್ಣರ ಮನಸ್ಸಿನೊಳಗೆ ಇಳಿದು ಅವರ ಭಾಷೆಯಲ್ಲೇ ಮಾತನಾಡಿದ ಆ ಕ್ಷಣಗಳು, ಶ್ರಾವಣ ಚಿಣ್ಣರ ಲೋಕದ ನಿಜವಾದ ಸಾಹಿತ್ಯ ಸಂವಹನಕ್ಕೆ ಅರ್ಥ ತುಂಬಿದವು.
ಅದಾದ ಮೇಲೆ ಆರಂಭವಾಯಿತು ಚಿತ್ರಗಳ ಅಬ್ಬರ! ವ್ಯಂಗ್ಯಚಿತ್ರಗಳು, ಕಾರ್ಟೂನ್ಗಳು, ರೇಖಾಚಿತ್ರಗಳು, ಬಣ್ಣದ ಚಿತ್ರಗಳು - ಒಂದಕ್ಕೊಂದು ಮೀರಿಸುವಂತೆ ವೇದಿಕೆಯಲ್ಲಿ ಅರಳತೊಡಗಿದವು. ಬಾಲ ಮಧುರಕಾನನ ಅವರ ಕಾರ್ಟೂನ್ಗಳು, ಪ್ರೊ. ಪಿ.ಎನ್. ಮೂಡಿತ್ತಾಯ ಅವರ ನಗೆಬರಹದ ಚಿತ್ರಗಳು ಹಾಗೂ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಅವರ ಬಣ್ಣದ ಚಿತ್ರಗಳು ಚಿಣ್ಣರನ್ನು ಅಚ್ಚರಿಯ ಲೋಕಕ್ಕೆ ಕರೆದೊಯ್ದವು. ಕಣ್ಣುಗಳು ಚಿತ್ರಗಳ ಮೇಲೆ, ಮನಸ್ಸು ಕಲ್ಪನೆಯ ಮೇಲೆ - ಮಕ್ಕಳು ಕೆಲಕಾಲ ಮೌನವಾಗಿ, ಒಳಗೊಳಗೆ ಮತ್ತೊಂದು ಲೋಕವನ್ನು ಕಟ್ಟಿಕೊಳ್ಳುತ್ತಿದ್ದರು.
ನಿವೃತ್ತ ಶಿಕ್ಷಕ ರಾಜೇಂದ್ರ ಬಜಕೂಡ್ಲು ಅವರ ಹಿತನುಡಿಗಳು ಮಕ್ಕಳ ಉತ್ಸಾಹಕ್ಕೆ ಮತ್ತಷ್ಟು ಚೈತನ್ಯ ತುಂಬಿದವು. ಕ.ಸಾ.ಪ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಹಿರಿಯ ಸಾಹಿತಿಗಳಾದ ಹರೀಶ್ ಪೆರ್ಲ, ಶಿವ ಪಡ್ರೆ, ವಿ.ಬಿ. ಕುಳವರ್ಮ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ ಹಾಗೂ ಶಿವರೆಡ್ಡಿ ಮೊದಲಾದವರು ಕಾರ್ಯಕ್ರಮಕ್ಕೆ ಶುಭನುಡಿಗಳನ್ನು ನೀಡಿದರು.
ತನ್ನ ಕ್ಯಾಮೆರಾದ ಕಣ್ಣಲ್ಲಿ ಇಡೀ ಸಭೆಯನ್ನು ಸೆರೆಹಿಡಿಯುತ್ತಾ, ವೈವಿಧ್ಯಮಯ ಶೈಲಿಯ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಜಯ ಮಣಿಯಂಪಾರೆ ಅವರ ನಿರೂಪಣೆಯೂ ಗಮನ ಸೆಳೆಯಿತು. ಚಿತ್ರಗಳ ಲೋಕದಿಂದ ಹೊರಬಂದಾಗ ಮಧ್ಯಾಹ್ನದ ಒಂದೂವರೆ ಗಂಟೆ. ಹೊಟ್ಟೆ ಮಾತ್ರ, “ಸಾಕು ನಿಮ್ಮ ಸಾಹಿತ್ಯ, ಈಗ ನಮ್ಮ ಸಾಹಿತ್ಯ ಕೇಳಿ!” ಎಂದು ಚುರ್ರೆಂದು ಕೂಗತೊಡಗಿತ್ತು. ಅಷ್ಟರಲ್ಲಿ ಅಡುಗೆ ಮನೆಯ ಕಡೆಯಿಂದ ಬರುತ್ತಿದ್ದ ಊಟದ ಪರಿಮಳ ಮೂಗಿಗೆ ಸ್ಪರ್ಶಗೊಂಡು ಹಸಿವಿನ ಗಂಟೆಯನ್ನು ಇನ್ನಷ್ಟು ಜೋರಾಗಿ ಬಾರಿಸಿತು!
ಚಿತ್ರಗಳ ಲೋಕದಲ್ಲಿ ಕಣ್ಣುಗಳಿಗೆ ಹಬ್ಬ ಕಂಡಿದ್ದ ನಮಗೆ ಈಗ ನಾಲಿಗೆಗೂ ಹಬ್ಬ ಕಾದಿತ್ತು. ಎಲ್ಲರೂ ಫ್ರೆಶ್ಅಪ್ ಮಾಡಿಕೊಂಡು ಊಟದ ತಟ್ಟೆಯ ಮುಂದೆ ಬಂದು ಕುಳಿತೆವು. ಆಹಾ! ಕುಚ್ಚಲಕ್ಕಿಯ ಸವಿಯೂಟ ತಟ್ಟೆಯ ಮೇಲೆ ಬಿಸಿ ಬಿಸಿ ಕುಚ್ಚಲಕ್ಕಿ ಅನ್ನ ಬಂದು ಕುಳಿತೊಡನೆ ಅದರ ಪಕ್ಕದಲ್ಲಿ ಕ್ಯಾಬೇಜ್ ಪಲ್ಯ, ಬೆಂಡೆಕಾಯಿ, ಕ್ಯಾರೆಟ್ - ನುಗ್ಗೆಕಾಯಿ ಹಾಕಿದ ಸಾಂಬಾರ್, ಟೊಮೆಟೊ ಸಾರು, ಮಜ್ಜಿಗೆಹುಳಿ - ಹೀಗೆ ಒಂದೊಂದು ಪದಾರ್ಥವೂ “ಮೊದಲು ನನ್ನನ್ನು ಸವಿಯಿರಿ” ಎಂದು ಕಣ್ಣಿಗೆ ಕನ್ನ ಹಾಕಿದಂತಿತ್ತು. ಜೊತೆಗೆ ಪಪ್ಪಡದ ಕರುಕುರು, ನೀರುಮಾವಿನ ಉಪ್ಪಿನಕಾಯಿಯ ಹುಳಿ-ಖಾರ, ಹಪ್ಪಳದ ಸದ್ದು, ಕೊನೆಯಲ್ಲಿ ಬಂದ ಅಡೆ ಪಾಯಸದ ಸಿಹಿ.. ಒಟ್ಟಿನಲ್ಲಿ ಊಟದ ತಟ್ಟೆಯೇ ಒಂದು ಪುಟ್ಟ ರುಚಿಯ ಸಾಹಿತ್ಯ ಸಂಕಲನ!
ಪ್ರೊ. ಪಿ.ಎನ್. ಮೂಡಿತ್ತಾಯ ಅವರ ಧರ್ಮಪತ್ನಿಯವರು ಹನ್ನೆರಡು ಬಗೆಯ ಮಸಾಲೆಗಳನ್ನು ಪ್ರೀತಿಯಿಂದ ಬೆರೆಸಿ ತಯಾರಿಸಿದ್ದ ಮಜ್ಜಿಗೆ, ಊಟದ ರುಚಿಗೆ ಮತ್ತೊಂದು ಆಯಾಮವನ್ನೇ ಸೇರಿಸಿತು. ಹೊಟ್ಟೆ ತುಂಬಿದ ಮೇಲೆ ಕಣ್ಣುಗಳು ನಿದ್ದೆಯ ಕಡೆಗೆ ಜಾರಲು ಸಿದ್ಧವಾಗುತ್ತಿದ್ದವು. ಆದರೆ ಕವಿಯ ಮನಸ್ಸಿಗೆ ನಿದ್ದೆ ಎಲ್ಲಿಂದ? ಕವಿಸಮಯದ ಕರೆಯೊಂದು ಮತ್ತೆ ವೇದಿಕೆಯತ್ತ ಸೆಳೆಯುತ್ತಿತ್ತು. ಒಂದಷ್ಟು ಹಿರಿಯರು, ಒಂದಷ್ಟು ಕಿರಿಯರು ಸೇರಿ ಸಭಾಂಗಣವನ್ನು ತುಂಬಿದರು. ವಿಶೇಷವೆಂದರೆ, ಕಾರ್ಯಕ್ರಮವನ್ನು ನಡೆಸುತ್ತಿದ್ದವರೂ ಚಿಣ್ಣರೇ! ಕುಮಾರಿ ಹರ್ಷಿತಾ ಪೆರ್ಲ ಅವರ ಸುಂದರ ನಿರೂಪಣೆಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು. ಕುಮಾರಿ ದೀಕ್ಷಾ ಅವರ ಸ್ವಾಗತ, ಶಿಕ್ಷಕಿ ಜ್ಯೋತ್ಸ್ನಾ ಕಡಂದೇಲು ಅವರ ಅಧ್ಯಕ್ಷತೆ ಹಾಗೂ ವಿಮರ್ಶಕಿ ಗ್ರೀಷ್ಮಾ ಅವರ ನೇತೃತ್ವದಲ್ಲಿ ‘ಕವಿ ಸಮಯʼ ದ ಕವಿಗೋಷ್ಠಿಗೆ ಚಾಲನೆ ದೊರೆಯಿತು.
ಕಿರಿಯರಿಗೆ ಹಿರಿಯರಿಂದ ಕನ್ನಡ ಶಾಲು, ಹಿರಿಯರಿಗೆ ಕಿರಿಯರಿಂದ ಕನ್ನಡ ಶಾಲು - ಇದು ಬರೀ ಸನ್ಮಾನವಲ್ಲ; ಕನ್ನಡದ ಎರಡು ತಲೆಮಾರುಗಳು ಪರಸ್ಪರ ಕೈಹಿಡಿದ ಕ್ಷಣ. ಪುಟ್ಟ ಕನ್ನಡದ ಕಂದಮ್ಮಗಳು ತಮ್ಮ ಪುಟ್ಟ ಕೈಗಳಿಂದ ಹಿರಿಯರ ಹೆಗಲಿಗೆ ಕನ್ನಡದ ಶಾಲು ಹೊದಿಸಿದಾಗ, ಹಿರಿಯರೂ ಬಾಗಿ ನಿಂತು ಆ ಕಂದಮ್ಮಗಳ ಕೈಯಿಂದ ಶಾಲು ಸ್ವೀಕರಿಸಿದ ದೃಶ್ಯ ಮನಸ್ಸನ್ನು ಮುದಗೊಳಿಸಿತು. ಅದೇ ರೀತಿ ಹಿರಿಯರು ಪುಟ್ಟ ಮಕ್ಕಳಿಗೆ ಕನ್ನಡದ ಶಾಲು ಹೊದಿಸಿ ಗೌರವಿಸಿದಾಗ, ಅದು ಮಕ್ಕಳಿಗೆ ಸಂದ ಗೌರವ ಮಾತ್ರವಲ್ಲ; ಕನ್ನಡ ಮಾತೆಗೆ ಸಲ್ಲಿಸಿದ ಗೌರವವೂ ಹೌದು. ಅಲ್ಲಿ ವಯಸ್ಸಿನ ಅಂತರ ಕರಗಿತ್ತು, ಉಳಿದದ್ದು ಕನ್ನಡದ ಬಂಧವೊಂದೇ!
ಒಂದು ಬೆಟ್ಟ ದಾಟಿದರೆ ಮತ್ತೊಂದು ಇಳಿಜಾರು; ಮತ್ತೆ ಬೆಟ್ಟ ಹತ್ತಿದರೆ ಮತ್ತೊಂದು ಇಳಿಜಾರು. ನಮ್ಮ ಕವಿಗೋಷ್ಠಿಯೂ ಹಾಗೆಯೇ - ಹಿರಿಯ ಕವಿಯ ಕಾವ್ಯಧಾರೆ ಮುಗಿದೊಡನೆ ಕಿರಿಯ ಕವಿಯ ಕಂಠದಲ್ಲಿ ಮತ್ತೊಂದು ಕಾವ್ಯಧಾರೆ ಹರಿಯತೊಡಗಿತು. ಕವಿತೆಗಳ ನಡುವೆ ರಾಷ್ಟ್ರಭಕ್ತಿಯ ಗೀತೆಗಳು ಅವುಗಳ ನಡುವೆ ಹಿರಿಯರ ಹಿತ ನುಡಿಗಳು - ಕಾರ್ಯಕ್ರಮದ ವೇದಿಕೆ ಕ್ಷಣಕ್ಷಣಕ್ಕೂ ಹೊಸ ಬಣ್ಣ ಪಡೆಯುತ್ತಿತ್ತು. ಹಿರಿಯ ಸಾಹಿತಿ ಹಾಗೂ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಉಳಿಯತ್ತಡ್ಕ ಅವರ ಶುಭನುಡಿಗಳು ಚಿಣ್ಣರ ಉತ್ಸಾಹಕ್ಕೆ ಮತ್ತಷ್ಟು ಬಲ ತುಂಬಿದವು. ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಪುಟ್ಟ ಮಕ್ಕಳಿಗೆ ಚುಟುಕುಗಳ ಮೂಲಕ ನೀಡಿದ ಸಂದೇಶಗಳು ನಗುವಿನೊಂದಿಗೆ ಚಿಂತನೆಯನ್ನೂ ಮೂಡಿಸಿದವು.
ಡಾ. ಮಹೇಶ್ವರಿ ಅವರ ಹಿತನುಡಿಗಳು ಕಾರ್ಯಕ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿದವು. ಇನ್ನೊಂದು ಕಡೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಿದ್ಧಪಡಿಸಿದ್ದ ಅಂದವಾದ, ಬಣ್ಣಬಣ್ಣದ ಪ್ರಮಾಣಪತ್ರಗಳು ಎಲ್ಲರ ಗಮನ ಸೆಳೆದವು. ಅವು ಕೇವಲ ಕಾಗದದ ತುಂಡುಗಳಾಗಿರಲಿಲ್ಲ; ಒಬ್ಬೊಬ್ಬರ ಪ್ರತಿಭೆಗೆ ದೊರೆತ ಪ್ರೋತ್ಸಾಹದ ಪುಟ್ಟ ನೆನಪಿನ ಫಲಕಗಳಾಗಿದ್ದವು.
ಗಾಯನ, ಕವನ, ಕಾವ್ಯವಾಚನ - ಪ್ರತಿಭೆಯ ಹೊನಲು ಒಂದರ ಹಿಂದೆ ಒಂದರಂತೆ ಹರಿಯಿತು. ಧನ್ಯಶ್ರೀ, ಸಮೃದ್ಧಿ ಅವರ ಕವನಗಳು ಹಾಗೂ ಮನ್ವಿತ ಗೋಳಿತಡ್ಕ ಅವರ ಗಾಯನ ಚಿಣ್ಣರ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟವು. ಕುಮಾರಿ ದೀಕ್ಷಾ, ರಕ್ಷಾ, ನಿಶ್ಚಿತ್, ಆಯುಷ್, ಕೃಪೇಶ್, ಹರಿಪ್ರಿಯಾ ಖಂಡಿಗೆ, ಧನ್ಯಶ್ರೀ ಖಂಡಿಗೆ, ಅಂಜನಾ, ಶಿವತೇಜಸ್, ದೀಕ್ಷಾ ಕೆಜಕ್ಕಾರು, ಪ್ರತ್ಯುಷಾ, ನೀತಿಕಾ, ಪ್ರೀತಿಕಾ ಸೇರಿದಂತೆ ಪುಟ್ಟ ಪ್ರತಿಭೆಗಳು ತಮ್ಮ ತಮ್ಮ ಸಾಮರ್ಥ್ಯವನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದರು. ವೇದಿಕೆಯಲ್ಲಿ ತಾನು ಏನೂ ಕಡಿಮೆ ಇಲ್ಲ ಎಂಬಂತೆ ಕೊನೆಯಲ್ಲಿ ಸಾನ್ವಿಯವರು ನೀಡಿದ ನೃತ್ಯ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು. ಅವರನ್ನು ಪ್ರೋತ್ಸಾಹಿಸಲು ಹಿರಿಯರಾದ ರವೀಂದ್ರನ್ ಪಾಡಿ, ಪ್ರಮೀಳಾ ಚುಳ್ಳಿಕಾನ, ನಾರಾಯಣ ನಾಯ್ಕ ಕುದುಕೋಳಿ, ಧನ್ಯಶ್ರೀ ಸರಳಿ, ಸುಮಿತ್ರಾ ಎರ್ಪಕಟ್ಟೆ, ತೇಜಸ್ವಿನಿ, ಮನೀಶ್, ಸವಿತಾ ಈಶ್ವರ್, ಜನಾರ್ದನ ಬೊಟ್ಟಾರಿ, ಮೀನಾಕ್ಷಿ ಬೊಡ್ಡೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಚಿಣ್ಣರ ಪ್ರತಿಭೆಗೆ ಬೆನ್ನೆಲುಬಾಗಿ ನಿಂತರು.
ಎಲ್ಲರ ಕವನವಾಚನ ಮತ್ತು ಗಾಯನ ಮುಗಿದ ಬಳಿಕವೂ, “ಇನ್ನೂ ಯಾರಾದರೂ ವಾಚಿಸಲು ಬಯಸಿದರೆ ಅವಕಾಶವಿದೆ” ಎಂಬ ಹರ್ಷಿತಾ ಅವರ ನಿರೂಪಣೆಯ ಧ್ವನಿ ಆಗಾಗ ಕೇಳಿಸುತ್ತಲೇ ಇತ್ತು. ಅಂದವಾದ ವಾಕ್ಚಾತುರ್ಯದಿಂದ ಇಡೀ ಸಭೆಯನ್ನು ಹಿಡಿದಿಟ್ಟ ಅವರ ನಿರೂಪಣೆ ಮೆಚ್ಚುವಂತಿತ್ತು. ಕವನಗಳಿಗೆ ವಿಮರ್ಶೆಯೂ ಚಿಣ್ಣರಿಂದಲೇ ಇರಲಿ ಎಂಬ ಆಶಯಕ್ಕೆ ಕುಮಾರಿ ಗ್ರೀಷ್ಮಾ ಸುಂದರವಾಗಿ ಸ್ಪಂದಿಸಿದರು. ಕವಿತೆಗಳ ಸಾಲುಗಳನ್ನು ಅರಗಿಸಿಕೊಂಡು, ಅವುಗಳ ಒಳಾರ್ಥವನ್ನು ವಿಮರ್ಶಿಸಿ ಸಭೆಯ ಮುಂದಿಟ್ಟರು. ನಂತರ ಜ್ಯೋತ್ಸ್ನಾ ಟೀಚರ್ ಅವರ ಅಧ್ಯಕ್ಷೀಯ ನುಡಿಗಳು ಕಾರ್ಯಕ್ರಮದ ವಿವಿಧ ಘಟ್ಟಗಳನ್ನು ಮತ್ತೊಮ್ಮೆ ನೆನಪಿಸಿದವು.
ಕವನ, ಗಾಯನ, ಸಾಹಿತ್ಯ ಸಂವಹನ ಮತ್ತು ಚಿಣ್ಣರ ಪ್ರತಿಭೆ—ಎಲ್ಲವೂ ಅವರ ಮಾತುಗಳಲ್ಲಿ ಮತ್ತೊಮ್ಮೆ ಜೀವ ಪಡೆದವು. ಅಂದವಾಗಿ ಮುದ್ರಿಸಲಾದ ಪ್ರಮಾಣಪತ್ರಗಳು ಹಾಗೂ ಸ್ಮರಣೆಯ ಕಾಣಿಕೆಯಾಗಿ ಪುಸ್ತಕಗಳನ್ನು ಸುಭಾಷ್ ಪೆರ್ಲ ಅವರ ಹಸ್ತದಿಂದ ಎಲ್ಲರಿಗೂ ನೀಡಲಾಯಿತು. ಮಕ್ಕಳ ಕೈಗೆ ಪ್ರಮಾಣಪತ್ರ, ಮನಸ್ಸಿಗೆ ಪುಸ್ತಕ—ಅವರ ಸಾಹಿತ್ಯ ಪಯಣಕ್ಕೆ ಅದಕ್ಕಿಂತ ಸುಂದರ ಕಾಣಿಕೆ ಮತ್ತೇನು?
ಕಾರ್ಯಕ್ರಮದ ಹಿಂದೆ ನಿಂತು ಶ್ರಮಿಸಿದ ಬಾಲಕೃಷ್ಣ ಏಳ್ಕಾನ, ಶಶಿಕಲಾ ಪಟೇಲ್ ಬಾಳೆಗುಳಿ, ಪೊಸಡಿಗುಂಪೆ ಪತ್ರಿಕೆಯ ಸಂಪಾದಕರಾದ ಜೋನ್ ಡಿ ಸೋಜ ಕಯ್ಯಾರ, ನಳಿನಿ ಪಳ್ಳಕ್ಕಾನ, ಸುಜಾತ ಕೆಜಕ್ಕಾರು, ಕೃಷ್ಣ, ಚಂದ್ರಹಾಸ ಅರೆಕಾಡಿ ಸೇರಿದಂತೆ ಎಲ್ಲ ಸಹೃದಯರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತ ಮಾಧವ ಕುಂಜತ್ತೂರು ಅವರ ಸಹಕಾರವನ್ನೂ ಗೌರವಪೂರ್ವಕವಾಗಿ ಸ್ಮರಿಸಲಾಯಿತು. ಅನೇಕ ಹೃದಯಗಳ ಪರಿಶ್ರಮ ಒಂದಾಗಿ ಚಿಣ್ಣರ ನಗು, ಕವಿತೆ, ಗಾಯನ ಮತ್ತು ನೆನಪಾಗಿ ಆ ದಿನ ನಿಸರ್ಗಧಾಮದಲ್ಲಿ ಅರಳಿತು.
ಬಂಡೆಕಲ್ಲುಗಳ ನಡುವೆ ಬೆಳೆದು ನಿಂತ ನಿಸರ್ಗಧಾಮಕ್ಕೆ ಚಿಣ್ಣರ ನಗು ಹೊಸ ಬಣ್ಣವಾಯಿತು. ನಿಜಕ್ಕೂ - ಪಾರೆಗೂ ಬಣ್ಣ ಹಚ್ಚಬಹುದು ಎಂಬುದಕ್ಕೆ ಸಾಕ್ಷಿಯಾದ ದಿನವದು !
ಕೃಪೆ - ಸುಭಾಷ್ ಪೆರ್ಲ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************