-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 163

ನಿಷ್ಪಾಪಿ ಸಸ್ಯಗಳು : ಸಂಚಿಕೆ - 163

ನಿಷ್ಪಾಪಿ ಸಸ್ಯಗಳು : ಸಂಚಿಕೆ - 163
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ..? ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಹೊತ್ತಲ್ಲಿ ಒಂದು ಪುಟಾಣಿ ಸಸ್ಯದ ಬಗ್ಗೆ ತಿಳಿಯೋಣವೇ..?

ಮಳೆರಾಯನ ರಂಗಸ್ಥಳದಲ್ಲಿ ಈ ನಿಷ್ಪಾಪಿ ಸಸ್ಯವೊಂದು ಪಾತ್ರವಾಗಿ ಕಾಣಿಸಿಕೊಂಡು ಮಳೆ ಕಡಿಮೆಯಾಗುತ್ತಿದ್ದಂತೆ ಬದುಕಿಗೆ ಇತಿಶ್ರೀ ಹಾಡಿಕೊಳ್ಳುತ್ತದೆ!

ಅಂದರೆ ನಿಮಗೀಗ ತಿಳಿದಿರಬಹುದು. ಇದು ಕೇವಲ ನೀರನ್ನು ಅವಲಂಬಿಸಿ ತಾತ್ಕಾಲಿಕವಾಗಿ ಬಂದು ಹೋಗುವ ಸಸ್ಯವೆಂದು. ಹೌದು.. ಇದೊಂದು ಪುಟಾಣಿ ಎಲೆಗಳ ಸಮೂಹ ಹೊಂದಿರುವ ಪುಟ್ಟ ದುರ್ಬಲ ಸಸ್ಯ. ತಿಳಿ ಹಸಿರ ಸುಂದರ ಬಣ್ಣ. ತೋರಣದಂತೆ ಎಲೆಗಳ ರಚನೆ, ರಸಭರಿತ ಶಾಖೆಗಳ ಸಮೂಹ ನೋಡುವುದೇ ಚಂದ. ಇದರ ಎಲೆಗಳು ಅತಿ ಸಣ್ಣದಾಗಿರುವುದರಿಂದ ಗಾಜಿನ ಬಾಟಲಿಗಳಲ್ಲಿ ಕೃತಕ ಪರಿಸರ ನಿರ್ಮಿಸುವ 'ಟೆರೇರಿಯಂ' ತೋಟಗಾರಿಕೆಗೆ ಹಾಗೂ ಬೋನ್ಸಾಯ್ ಗೆ ಇದು ಜನಪ್ರಿಯ ಸಸ್ಯವಾಗಿದೆ. ದೊಡ್ಡ ಬೋನ್ಸಾಯ್ ಮರಗಳ ಕೆಳಗೆ ಕಾಡಿನ ದೃಷ್ಠಿ ರೂಪಿಸಲು ಈ ಸಸ್ಯಗಳನ್ನು ಸಹ ಸಸ್ಯವಾಗಿ ಬಳಸುತ್ತಾರೆ. ಈ ಸಸ್ಯವನ್ನು ಕತ್ತಲಲ್ಲಿ ಬೆಳೆಸಿದರೆ ಎಲೆಗಳು ದೂರ ದೂರವಾಗಿ ಶಾಖೆಗಳು ಉದ್ದವಾಗಿ ಬೆಳೆಯುತ್ತವೆ.

ಇದು ಬೆಟ್ಟ ಗುಡ್ಡಗಳಲ್ಲಿ ದೊಡ್ಡ ದೊಡ್ಡ ಬಂಡೆಗಳಿಗೆ ತಾಗಿಕೊಂಡು, ಕಲ್ಲಿನ ಗೋಡೆ, ಬಾವಿ ದಂಡೆ, ಮಣ್ಣಿನ ಆವರಣ ದಂಡೆಗಳು, ತೇವ ಇರುವ ನೆಲದ ಮೇಲೆ, ಹೊಲ, ರಸ್ತೆಬದಿ ಒಂಟಿಯಾಗಿ ಅಥವಾ ಸಾಮೂಹಿಕವಾಗಿ ಬೆಳೆಯುವ ಈ ಸಸ್ಯವನ್ನು Pilea microphylla ಎನ್ನುವರು. Urticacea ಕುಟುಂಬಕ್ಕೆ ಸೇರಿದೆ. ಕನ್ನಡದಲ್ಲಿ ಗಂಟು ಕಳೆ, ಮದನಗಂಟಿಯೆಂದೂ ಕರೆಯುತ್ತಾರೆ.

ಗಂಟುಕಳೆ ಸಸ್ಯದ ನೀಲಿ ನೀಲಿ ಹೂವು ಕಣ್ಣಿಗೆ ಕಾಣಿಸದಷ್ಟು ಸಣ್ಣದೇ ಆಗಿದ್ದರೂ ತುಂಬಾ ವಿಶೇಷವಾದುದಾಗಿದೆ. ಫಿರಂಗಿ ಸಸ್ಯ, Rock weed, Gun powder plant ಎಂಬ ಹೆಸರುಗಳಿರುವ ಗಂಟುಕಳೆ ಸಸ್ಯದ ಗಂಡು ಹೂವುಗಳು ಪರಾಗವನ್ನು ಫಿರಂಗಿಯಿಂದ ಗುಂಡುಹಾರಿಸಿದಂತೆ ಒಮ್ಮೆಗೆ ಸಿಡಿಸುವುದರಿಂದ ಇದಕ್ಕೆ ಆರ್ಟಿಲರಿ ಪ್ಲಾಂಟ್, ಫಿರಂಗಿ ಸಸ್ಯವೆಂಬ ಹೆಸರುಗಳು ಅನ್ವರ್ಥ ನಾಮಗಳಾಗಿವೆ. ಹೂವುಗಳು ಪಕ್ವಗೊಂಡಾಗ ಗಂಡುಹೂವುಗಳ ಕೇಸರಗಳು ಒಮ್ಮೆಗೆ ತೀವ್ರ ಒತ್ತಡದೊಂದಿಗೆ ತೆರೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಪರಾಗದ ಕಣಗಳು ಗಾಳಿಯಲ್ಲಿ ಸಣ್ಣ ಫಿರಂಗಿ ಗುಂಡುಗಳನ್ನು ಹಾರಿಸಿದಂತೆ ಸಿಡಿಯುತ್ತದೆ. ಹೂವುಗಳ ಮೇಲೆ ನೀರು ಬಿದ್ದಾಗ ಅಥವಾ ತೇವಾಂಶ ಹೆಚ್ಚಿದ್ದಾಗ ಈ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಸೂಕ್ಷ್ಮವಾಗಿ ನಡೆಯುವ ಈ ಪ್ರಕ್ರಿಯೆಯನ್ನು ಆಸಕ್ತರು ಗಮನಿಸಬಹುದು. ಇದು ನೆಲನೆಲ್ಲಿಯನ್ನು ಹೋಲುವುದರಿಂದ ಕಿರುನೆಲ್ಲಿಯೆಂದೂ ಪ್ರಾದೇಶಿಕವಾಗಿ ಕರೆಯುವರು. ಇದು ಬೀಜಗಳ ಮೂಲಕ ಸ್ವಯಂ ಬೀಜಪ್ರಸಾರ ಮಾಡಿಕೊಂಡು ಸಂತಾನವನ್ನು ಮುಂದುವರಿಸುತ್ತವೆ.

ಮನೆಯ ಒಳ ಅಲಂಕಾರ, ಗಾರ್ಡನ್ ನಲ್ಲಿ ನೆಲ ಮುಚ್ಚುವ ಸಸ್ಯವಾಗಿ ಇದು ಜನಪ್ರಿಯತೆ ಪಡೆದಿದ್ದು ಭಾಗಶ: ನೆರಳು, ಮಣ್ಣು ತೇವವಾಗಿರುವಷ್ಟೇ ನೀರು ಸಿಕ್ಕರೆ ಅಷ್ಟೇ ಸಾಕು. ಇದು ಮೂಲತ: ದಕ್ಷಿಣ ಅಮೆರಿಕ ಖಂಡದ ಸಸ್ಯವಾಗಿದ್ದು ಭಾರತದಾದ್ಯಂತ ಹರಡಿದೆ. ಇದನ್ನು ಕಳೆಸಸ್ಯವಾಗಿಯೆ ಗುರುತಿಸಲಾಗಿದೆ.

ಜಾಗತಿಕ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಈ ಪುಟ್ಟ ಸಸ್ಯದ ಬಗ್ಗೆ‌ ಸಾಕಷ್ಟು ಲೇಖನಗಳು ಬಂದಿವೆ. ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ಸಂಶೋಧನೆಗಳಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ರಾಸಾಯನಿಕ ಅಂಶಗಳಿದ್ದು ಖಿನ್ನತೆ ವಿರೋಧಿ, ಮಧುಮೇಹವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಮನೆಯ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲದೆ ಒಳಾಂಗಣದ ಗಾಳಿಯ ಶುದ್ಧೀಕರಣದಲ್ಲೂ ಸಹಾಯಕವಾಗಿದೆ.

ನೋಡಿದರೆ ಆಕರ್ಷಕವಾಗಿರುವ ಈ ಪುಟಾಣಿ ಸಸ್ಯವೀಗ ಖಂಡಿತ ನಿಮ್ಮ ಮನೆಯಂಗಳದಲ್ಲಿರಬಹುದು, ನೋಡುವಿರಾ? ಮಳೆ ಕಡಿಮೆಯಾಗಿರುವುದರಿಂದ ಎಲೆಗಳು ಒಣಗುತ್ತಿರಬಹುದು ಗಮನಿಸಿ.

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article