-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 139

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 139

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 139
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203



ಪ್ರೀತಿಯ ಮಕ್ಕಳೇ... ಹಸಿರುಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೇವೆ. ಒಂದು ಮೇಲ್ಮೈ ಮೇಲೆ ಬೀಳುವ ಬೆಳಕಿನ ಶಕ್ತಿಯ ಒಂದು ಭಾಗವನ್ನು ಆ ವಸ್ತುವಿನಲ್ಲಿರುವ ಎಲೆಕ್ಟ್ರಾನ್ಗಳು ಹೀರಿಕೊಂಡು ಉದ್ದೀಪನಗೊಳ್ಳುತ್ತವೆ ಮತ್ತು ಅದನ್ನು ದೀರ್ಘಕಾಲ ಉಳಿಸಿಕೊಳ್ಳಲಾಗದೇ ಇರುವುದರಿಂದ ಹೊರ ಹಾಕುತ್ತವೆ. ಈ ಹೊರ ಹಾಕುವ ಶಕ್ತಿ ಬೆಳಕಿನ ರೂಪದಲ್ಲಿರುವುದಿಲ್ಲ ಬದಲಾಗಿ ಶಾಖದ ರೂಪದಲ್ಲಿರುತ್ತವೆ. ಈ ವಸ್ತು ತನ್ನಲ್ಲಿರುವ ಶಾಖವನ್ನು ಸುತ್ತಲೂ ಹರಡುತ್ತದೆ. ಆದ್ದರಿಂದ ಅದು ತಂಪಾಗುತ್ತದೆ. ಅದಕ್ಕೆ ಒಂದು ಹೊದಿಕೆ ಹಾಕಿದರೆ ಅದರ ಉಷ್ಣತೆ ತಪ್ಪಿಸಿಕೊಂಡು ಹೋಗಲಾಗದೇ ಏರುತ್ತಾ ಹೋಗುತ್ತದೆ. ಇದನ್ನು ನಾವು ಹಸಿರುಮನೆ ಪರಿಣಾಮ ಎನ್ನುವುದು. 

ಕಾರಿನ ಕಿಟಕಿಯ ಗಾಜು ಇಂತಹ ಒಂದು ಹೊದಿಕೆ. ಹಾಗಾದರೆ ಭೂಮಿಗೆ ಇಂತಹ ಹೊದಿಕೆ ಯಾವುದು? ಇದು ಬೆಳಕನ್ನು ಧಾರಾಳವಾಗಿ ಭೂಮಿಯ ವರೆಗೆ ತಲುಪಿಸಬೇಕು. ಒತ್ತಡದ ವ್ಯತ್ಯಾಸಕ್ಕೆ ಕುಸಿಯಬಾರದು. ಏನಾದರೂ ಹಾನಿಯಾದಲ್ಲಿ ಅದು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳಬೇಕು ಅದೂ ಸ್ವಂತ ವೆಚ್ಚದಲ್ಲಿ. ಈ ಕಾರಿನ ಗಾತ್ರ ಊಹಿಸಿಕೊಳ್ಳಿ. ಇದರ ಸುತ್ತಳತೆ ಬರೀ 40,075 ಕಿಮೀ ಗಳು. ಇದರ ಸುತ್ತ ಇರುವ ಹೊದಿಕೆಯೇ ವಾತಾವರಣ. 

ಈ ವಾತಾವರಣ ನಮ್ಮ ಕಣ್ಣಿಗೆ ನಿಚ್ಚಳವಾಗಿ ಕಾಣಿಸಿದರೂ ಭೂಮಿಗೆ ಹತ್ತಿರ ಬರುತ್ತಿರುವ ಹಾಗೆ ನಿಧಾನವಾಗಿ ಬೆಳಕಿನ ಕಿರಣಗಳನ್ನು ಬಾಗಿಸುವಷ್ಟು ದಟ್ಟವಾಗುತ್ತದೆ. ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಸಾರಜನಕ, ಆಮ್ಲಜನಕ ಮತ್ತು ಆರ್ಗಾನ್ ಗಳು ಉಷ್ಣ ವಿಕಿರಣಗಳನ್ನು ತಡೆಯಲಾರವು. ಅಂದರೆ ಅವು ಹಸಿರು ಮನೆಯ ಅನಿಲಗಳಲ್ಲ. ಇನ್ನು 1% ದಷ್ಟಿರುವ ನೀರಾವಿ ಇದು ಕಾಲದೊಂದಿಗೆ ಎತ್ತರದೊಂದಿಗೆ ಇದು ಬದಲಾಗುತ್ತದಾದರೂ ಇದು ಉಷ್ಣ ವಿಕಿರಣಗಳನ್ನು ತಡೆಯುತ್ತದೆ. ಹಾಗೆಯೇ 0.03% ದಷ್ಟಿರುವ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್ ಗಳಂತಹವು ಕೂಡಾ ಉಷ್ಣ ವಿಕಿರಣ ತಪ್ಪಿಸಿಕೊಂಡು ಹೋಗದಂತೆ ಹೊದಿಕೆ ಹಾಕಬಲ್ಲ ಅನಿಲಗಳು. ಆದ್ದರಿಂದ ಮೋಡ ಮುಸುಕಿರುವ ದಿನಗಳಲ್ಲಿ ವಿಪರೀತ ಸೆಖೆ ಎನಿಸುತ್ತದಲ್ಲ ಅದು ಹಸಿರುಮನೆ ಪರಿಣಾಮ. ಈ ಅನಿಲಗಳನ್ನು ಹಸಿರು ಮನೆಯ ಅನಿಲಗಳು ಎಂದು ಕರೆಯುವುದು. 

ನೀವು ಗೂಗಲ್ ನಲ್ಲಿ ಹಸಿರುಮನೆ ಅನಿಲಗಳು ಎಂದರೇನು ಎಂದು ಟಂಕಿಸಿ ನೋಡಿ. ಅದು ಭೂಮಿಯನ್ನು ಬೆಚ್ಚಗಿಡುವ ಅನಿಲಗಳು ಎನ್ನುತ್ತದೆಯೇ ಹೊರತು ಅವುಗಳ ಬಗ್ಗೆ ವಿಪರೀತ ದ್ವೇಷ ಬೆಳೆಸುವ ವಿವರಣೆ ನೀಡುವುದಿಲ್ಲ. ಹಸಿರುಮನೆ ಅನಿಲಗಳು ಭೂಮಿಯ ಮೇಲೆ ಜೀವ ಸಾಧ್ಯ ಮಾಡಿವೆ. ಇಲ್ಲವಾದರೆ ನಾವೆಲ್ಲ ಹೆಪ್ಪುಗಟ್ಟಿ ಸಾಯಬೇಕಾಗಿತ್ತು. 20,000 ವರ್ಷಗಳ ಹಿಂದೆ ಘಟಿಸಿದ ಹಿಮಯುಗದಲ್ಲಿ ವಾತಾವರಣದ ಉಷ್ಣತೆ ಭೂಮಿಯ ಸರಾಸರಿ ಉಷ್ಣತೆಯಾದ 15°C ಯಿಂದ ಕೇವಲ 6 ರಿಂದ 8°C ಗಳಷ್ಟು ಕುಸಿಯಿತು. ಅಂದರೆ ಭೂಮಿಯ ಸರಾಸರಿ ಉಷ್ಣತೆ 7.8°C ಗಳಷ್ಟಿತ್ತು. ಅದು ಬೃಹತ್ ಗಾತ್ರದ (mega fauna) ಮ್ಯಾಮತ್, ತುಪ್ಪಳದ ಎಲ್ಕ್ ಗಳನ್ನು ಭೂಮಿಯಿಂದ ಅಳಿಸಿ ಹಾಕಿತು. ಅಂದರೆ ಭೂಮಿಯಲ್ಲಿ ಜೀವ ಸಂಕುಲ ಜೀವ ಹಿಡಿದುಕೊಂಡಿರುವುದೇ ಈ ಹಸಿರುಮನೆ ಅನಿಲಗಳ ಕಾರಣದಿಂದ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article