-->
ನನ್ನ ಬೆಸ್ಟ್ ಟೀಚರ್ : ಸಂಚಿಕೆ - 03 : ಶಿಕ್ಷಕರ ದಿನಾಚರಣೆ - 2026 - ಜಗಲಿಯ ಹಿರಿಯರ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 03 : ಶಿಕ್ಷಕರ ದಿನಾಚರಣೆ - 2026 - ಜಗಲಿಯ ಹಿರಿಯರ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 03
ಸೆಪ್ಟೆಂಬರ್ - 5 : ಶಿಕ್ಷಕರ ದಿನಾಚರಣೆ - 2026
ಜಗಲಿಯ ಹಿರಿಯರ ಬರಹಗಳು

ಬರಹಗಾರರು : 
◾ಕೆ. ವಾಣಿಶ್ರೀ ಅಶೋಕ್ ಐತಾಳ್ ಸಹ ಶಿಕ್ಷಕರು
◾ಸೀತಾ ಪಿ, ಮುಖ್ಯ ಶಿಕ್ಷಕಿ
◾ನವ್ಯದಾಮೋದರ್ ಶಾಂತಿಗೋಡು
◾ಮಾನ್ಯಶ್ರೀ ಕೆ. ಎಂ, ಎಡಮಂಗಲ
◾ಫಾತಿಮಾತ್ ಶಿಫಾನ, ನಾರ್ಶ           
◾ಪೂರ್ಣಿಮ ಕೋಟ್ಯಾನ್ ಮಾರ್ನಾಡು


            

"ಅವರಂದು ನನ್ನ ಕನಸಿನ ತೆಕ್ಕೆಗಳಿಗೆ ಸಿಕ್ಕಿಸಿದ ಆತ್ಮಬಲದ ರೆಕ್ಕೆಗಳು ಇಳಿಸಿಲ್ಲ ನನ್ನನ್ನು ನಭದಿಂದ ಇನ್ನೂ..!" ಸತತ ಪ್ರಯತ್ನದ ಸೋನೆ ಮಳೆಯಲ್ಲಿ ಮಿಂದಾಗಲಷ್ಟೇ, ಸಾಧನೆಯ ಕೊನರಿನತ್ತ ಕಣ್ಣಾಯಿಸಿದಾಗಲಷ್ಟೇ ಸಂತಸದ ಸುಗ್ಗಿಯಲಿ ಸಂಭ್ರಮಿಸಲು ಸಾಧ್ಯವೆಂದು ಕಲಿಸಿದವರು. ಯಾರು ಏನೇನಲಿ, ನೆನೆಯಲಿ, ಬಿಡಲಿ ಪ್ರಕೃತಿ ನಿನ್ನ ಪರಮಾಪ್ತ ಮಿತ್ರನೆಂದು ಬಗೆದು, ಮಧುರವಾದ ಮೊಳಕೆಯನ್ನು ಟಿಸಿಲೊಡೆಯುವಂತೆ ಮಾಡಿ, ಪ್ರಕೃತಿಯೇ ಬಂಧುವೆಂಬ ನಂಬಿಕೆಯ ಪ್ರಣತಿ ಹಚ್ಚಿಸಿದವರು, ಪಠ್ಯದ ಜೊತೆಜೊತೆಗೆ ಬದುಕುವ ಪಾಠವನ್ನು ತಳಕು ಹಾಕಿಸಿದವರು, ತರಗತಿಗೆ ಬಂದರೆಂದರೆ ಸಾಕು ಸಂಸ್ಕೃತದ ಬಾಣಭಟ್ಟನ ಕಾದಂಬರಿಯ ವೈಶಂಪಾಯನ ಶುಕವೃತ್ತಾಂತವನ್ನು ಕಣ್ಣಿನ ಪರದೆಯ ಮೇಲೆ ನಿರುಪಮವಾಗಿ ವರ್ಣಿಸಿ ಅಕ್ಷರ ಪ್ರೀತಿಯನು ಮೂಡಿಸಿ, ಸಾಹಿತ್ಯದ ಹುಚ್ಚನ್ನು ಹಿಡಿಸಿದವರು.! ಬರೆಯುವ ಕೆಚ್ಚನ್ನು ಹೊತ್ತಿಸಿದವರು..!   

ಗಜಾನನ ಶಾಸ್ತ್ರೀಗಳು, ಚಿಕ್ಕಬಳ್ಳಾಪುರದ ಸೆಂಟ್ ಜೋಸೆಫ್ಸ್ ಕಾನ್ವೆಂಟ್ ನಲ್ಲಿ, ಹೈಸ್ಕೂಲ್ ನಲ್ಲಿ ನನಗೆ ಕಲಿಸಿದ ಸಂಸ್ಕೃತ ಮೇಷ್ಟ್ರು...! ಐದಡಿ ಎತ್ತರ, ಹಿಂದೆ ಬಾಚಿದ ಕ್ರಾಪ್, ಹಾಲುಬಿಳುಪಿನ ಬಣ್ಣ , ಬಾಯ ತುಂಬಾ ಕೆಂಗವಳ ಜಗಿಯುತ್ತ, ಕಾಲು ಸರಿಯಾಗಿ ಎಟುಕದ ಸೈಕಲ್ಲಿನ ಪೆಡಲನ್ನು ಒತ್ತುತ್ತಾ ಬರುವ ಮೇಷ್ಟ್ರನ್ನು ಗೇಟಿನ ತುದಿಯಲ್ಲಿ ಕಂಡರೆ ಸಾಕು, ಆ ದಿನವಂತೂ ಹಿಗ್ಗಿನ ಹೋಳಿ. 

ಮೊಬೈಲು, ಫೋಟೋಗಳೆಲ್ಲ ಅಷ್ಟಾಗಿ ಇಲ್ಲದ ಕಾಲವದು. ಗುರುವಿನ ಮುಖ ಚಹರೆಯನ್ನು ಮನದಲ್ಲಿ ಕ್ಲಿಕ್ಕಿಸಿಕೊಂಡು ಊರು ಬಿಟ್ಟದ್ದು ಆಯಿತು, ಉನ್ನತ ವಿದ್ಯಾಭ್ಯಾಸ ಕಲಿತು, ವಿಜ್ಞಾನ ಶಿಕ್ಷಕಿ ಆದದ್ದು ಆಯಿತು. ಅದಾಗಲೇ ಸುಮಾರು ಮೂವತ್ತು ವರ್ಷ ಕಳೆದೇ ಹೋಯಿತು. ಆದರೆ ಗುರು ಬಿತ್ತಿದ್ದ ಸಾಹಿತ್ಯಾಸಕ್ತಿಯ ಬೀಜ ಮನದಿ ಹೆಮ್ಮರವಾಗಿ ಬೆಳೆಯುತ್ತ ನನ್ನನ್ನು ಆರು ಪುಸ್ತಕಗಳ ಯಜಮಾನಿಯಾಗಿಸಿದೆ. ಅವರನ್ನು ನೋಡಲೇಬೇಕೆಂಬ ಅದಮ್ಯ ಆಸೆ ಮಾತ್ರ ಹಸಿರಾಗಿತ್ತು. ಮೇಷ್ಟ್ರು ಕುಮಟಾಕ್ಕೆ ಬಂದಾಗ ನೋಡಲು ಹೊರಟೆ. ಹಾಸು ನೆಲದಲ್ಲಿ ಮೇಷ್ಟ್ರ ಜೊತೆಗೆ ಊಟ, ಅವರ ಬಟ್ಟಲು ತೊಳೆದಿಡುವ ಯೋಗ. ಮೇಷ್ಟ್ರನ್ನು ಗೌರವ ಮಂಟಪದಲ್ಲಿ ಕುಳ್ಳಿರಿಸಿ, ನನ್ನ ಪುಸ್ತಕಗಳನ್ನೆಲ್ಲ ಅವರ ಮಡಿಲಿಗರ್ಪಿಸಿದೆ. ಶಾಲು ಹಾರ ತುರಾಯಿ..! ಕಾಲಬುಡದಿ ಕೂತು ಕಥೆಯ ಓದಿದೆ. ಕವಿತೆ ಹೇಳಿದೆ. ತಲೆಯ ಗುರು ಪಾದದಲ್ಲಿ ಇಟ್ಟು ಹೃದಯ ಹಗುರಾಗುವವರೆಗೂ ಅತ್ತೆ. ಕಾಲುಗಳ ನೀವಿದೆ. ಆಶೀರ್ವಾದದ ಕರಗಳಿಂದ ತಲೆಯ ನೇವರಿಸಿಕೊಂಡೆ. ಗುರುವಿನ ಮೊಗದಿ ಸಾರ್ಥಕ ಭಾವ. ಮತ್ತು ನನಗೂ...
...................... ಕೆ. ವಾಣಿಶ್ರೀ ಅಶೋಕ್ ಐತಾಳ್ 
ವಿಜ್ಞಾನ ಸಹ ಶಿಕ್ಷಕರು
ಸ. ಪ. ಪೂ. ಕಾಲೇಜು, ತೆಕ್ಕಟ್ಟೆ 
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಮೊಬೈಲ್ : 95357 05355     
**************************************


            
             

ಪ್ರತಿಯೊಬ್ಬ ಸಾಧಕರು ಸಹ ಯಶಸ್ವಿಯಾಗಲು ಗುರುವಿನ ಮಹತ್ವ ಅರಿತು ಗುರುಗಳು ಹೇಳಿದ ಮಾತನ್ನು ಪಾಲಿಸಿ ಸಾಧಕರಾಗುತ್ತಾರೆ. ನನಗೆ ಹಲವಾರು ಶಿಕ್ಷಕರು ಕಲಿಸಿದ್ದಾರೆ. ಅದರಲ್ಲಿ ನನ್ನ ನೆಚ್ಚಿನ ಗುರು ವಿಶ್ವೇಶ್ವರಯ್ಯ ಅಡಿಗರು. 

ಅವರು ಗಣಿತಪಾಠವನ್ನು ಮಾಡುವ ರೀತಿ ಇದರ ಜೊತೆ ರಾಮಾಯಣ, ಗಮಕ, ಮಹಾಭಾರತ, ಭಗವದ್ಗೀತೆ ಇತ್ಯಾದಿ ಹೇಳಿಕೊಡುತ್ತಿದ್ದರು. ತಪ್ಪು ಮಾಡಿದರೆ ಶಾಂತವಾಗಿ ಸರಿ ಮಾಡುತ್ತಿದ್ದರು. ಶಿಸ್ತಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರು ನಮಗೆ ಒಳ್ಳೆಯ ಅಭ್ಯಾಸ, ಮಾನವೀಯ ಮೌಲ್ಯ ಮತ್ತು ಪರಿಶ್ರಮದ ಮಹತ್ವ ತಿಳಿಸಿಕೊಟ್ಟಿದ್ದರು. ಅವರ ಸರಳ ಸ್ವಭಾವ ವ್ಯಕ್ತಿತ್ವ ಪ್ರೇರಣಾದಾಯಕವಾಗಿದೆ. ಸೌಜನ್ಯ ಸೌಮ್ಯ ನಡವಳಿಕೆಯಿಂದ ತರಗತಿ ಯಾವಾಗಲೂ ಚೈತನ್ಯದಿಂದ ತುಂಬಿರುತ್ತದೆ. ಈಗ ನಾನು ಶಿಕ್ಷಕಿಯಾಗಲು ನನ್ನ ನೆಚ್ಚಿನ ಗುರುಗಳ ಪ್ರೇರಣೆ ಮತ್ತು ಆಶೀರ್ವಾದದ ಬಲ ಇದೆ ಎಂದು ನನಗೆ ವಿಶ್ವಾಸವಿದೆ. ಶಿಕ್ಷಣ ಯಾವ ದಿಕ್ಕಿಗೆ ಮನುಷ್ಯನನ್ನು ನಡೆಸುತ್ತದೋ ಅದೇ ದಿಕ್ಕಿನಲ್ಲಿ ಮನುಷ್ಯನ ಭವಿಷ್ಯ ನಿರ್ಧರಿಸುತ್ತದೆ ಎನ್ನುವ ನನ್ನ ಗುರುಗಳ ಮಾರ್ಗದರ್ಶನದಿಂದ ಇಂದು ಶಿಕ್ಷಕಿಯಾಗಲು ಸಾಧ್ಯವಾಯಿತು.

ಇರುವೆ ನೋಡಿ ಶ್ರಮ ಕಲಿ, ಭೂಮಿಯನ್ನು ನೋಡಿ ಸಹನೆ ಕಲಿ, ಮರ ನೋಡಿ ಬೆಳೆಯುವುದನ್ನು ಕಲಿ, ಶಿಕ್ಷಕರನ್ನು ನೋಡಿ ಸುಗುಣಕಲಿ... ಎನ್ನುವಂತೆ ಎಲ್ಲಾ ವೃತ್ತಿಯನ್ನು ಸೃಷ್ಟಿಸುವ ವ್ಯಕ್ತಿ ಗುರು ಮಾತ್ರ. 
"ನನ್ನ ನೆಚ್ಚಿನ ಗುರುವಿಗೆ" ಭಕ್ತಿ ಪೂರ್ವಕ ನಮನ. ಎಲ್ಲಾ ಗುರುಗಳಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು...
................................................... ಸೀತಾ ಪಿ 
ಮುಖ್ಯ ಶಿಕ್ಷಕಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕೋಟೆ ಬಾಗಿಲು ಪಡುವರಿ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ 
ಮೊಬೈಲ್ : 94817 51614
**************************************




ಹೌದು... ಒಂದು ಕ್ಷಣ ಯೋಚಿಸಿದಾಗ ನನ್ನ ಮೊದಲ ಗುರು ಅಮ್ಮನೇ ಅಲ್ಲವೇ ಎಂದೆನಿಸುತ್ತದೆ. ಖಂಡಿತವಾಗಿಯೂ ಅಮ್ಮನೇ ಮೊದಲ ಗುರು. ನಮ್ಮನ್ನು ಅವಳ ಉಸಿರಿರುವ ತನಕ ತಿದ್ದುವಳು. ಇವಳ ಹೊರತಾಗಿ ಅಮ್ಮನಂತಿಹ ನನಗೆ ಸಿಕ್ಕ ಮೊದಲ ಮತ್ತು ಅತ್ಯುತ್ತಮ ಗುರುವಿನ ಬಗ್ಗೆ ಬರೆಯಲು ಇದೊಂದೇ ಅವಕಾಶ. ಏಕೆಂದರೆ ಅಕ್ಷರದೇವಿಯ ಪಾದಾಪದ್ಮಕ್ಕೆ ಪ್ರಥಮ ಓಂಕಾರ ಹಾಕಿಸಿದವರೆ ಆ ನನ್ನ ಮೊದಲ ಗುರುಗಳು. ಹೆಸರು ಮನೋರಮಾ ಭಟ್. 

ಅಮ್ಮ ಎಂದು ಬರೆಯುವಲ್ಲಿ ಕೂಡ ಮೊದಲ ಅಕ್ಷರ "ಅ" ಎಂದು ತಿದ್ದಲು ಕಲಿಸಿದವರು. ಚಾಕ್ ಪೀಸ್ ನಲ್ಲಿ ಬರೆದು ಕೊಟ್ಟ "ಅ" ಎಂಬ ಅಕ್ಷರದ ಮೇಲೆಯೇ ದಿನವಿಡೀ ಬರೆದ ನೆನಪುಗಳನ್ನು ಇಂದಿಗೂ ಮನದಾಳದಿಂದ ಅಳಿಸಲಾಗಿಲ್ಲ. ಅಮ್ಮನಂತಿರುವ ಟೀಚರ್ ನಾವು ಮನೆಯಿಂದ ಶಾಲೆಗೆ ಬರುವಾಗ ಅತ್ತರೆ ಕೈಯಾರೆ ಕಣ್ಣೊರೆಸಿ ಸಮಾಧಾನಿಸುವ ಆ ಒಡಲಿನ ತುಂಬಾ ತನ್ನ ಕಂದನ ನೆನಪೇ ತುಂಬಿದೆ ಎಂಬ ಅರಿವು ನನಗಾಗ ಇರಲೇ ಇಲ್ಲ. ಅದಕ್ಕೆ ಕಾರಣ ತನ್ನ ಒಬ್ಬಳೇ ಕಂದಮ್ಮ ಜ್ಯೋತಿಯನ್ನು ತನ್ನ ತವರಿನಲ್ಲಿ ಬಿಟ್ಟು ಕರ್ತವ್ಯದ ನೆಪದಲ್ಲಿ ಏಕಾಂಗಿಯಾಗಿ ಬಿಟ್ಟಿದ್ದರು ನಮ್ಮ ಮನೋರಮಾ ಟೀಚರ್. ನಮ್ಮನ್ನೆಲ್ಲ ಎಲ್ಲಾ ಸ್ಪರ್ಧೆಗೂ ಅಣಿಗೊಳಿಸುತ್ತಿದ್ದರು, ಎಷ್ಟು ಮಕ್ಕಳು ಬೇಕಾದರೂ ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲಿ ತಾವೇ ಕೈಯಾರೆ ಮುದ್ದು ಮುದ್ದಾಗಿ ಬರೆದುಕೊಡುತ್ತಿದ್ದರು. ಆಟವಾಡಿ ಬಿದ್ದು ಗಾಯ ಮಾಡಿಕೊಂಡಾಗ ಟಿಂಚರ್ ಹಚ್ಚಿ ಬ್ಯಾಂಡೇಜ್ ಬಿಗಿದ್ದದ್ದು ಆ ಟೀಚರೇ ತಾನೇ. ಶಾಲೆಯಲ್ಲಿ ಇದ್ದಷ್ಟು ಸಮಯ ನಮ್ಮನ್ನು ಅಮ್ಮನಾಗಿ, ಗುರುಗಳಾಗಿ, ವೈದ್ಯರಾಗಿ ಎಲ್ಲರನ್ನೂ ಸರಿಸಮನಾಗಿ ಕಂಡವರು ಆ ಟೀಚರ್. 

ಇಂದು ನಾನು ಬದುಕಲ್ಲಿ ಸಾಹಿತ್ಯದತ್ತ ಮುಖ ಮಾಡಿದ್ದರೆ ಅದಕ್ಕೆ ಮುಖ್ಯ ಕಾರಣಕರ್ತರು ನನ್ನ ಮನೋರಮಾ ಟೀಚರ್. ಒಂದರಿಂದ ನಾಲ್ಕನೇ ತರಗತಿಯವರೆಗೆ ಇದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜೋಡುಪಾಲದ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ತನ್ನ ಸೇವೆಯಲ್ಲೇ ಈಶನನ್ನು ಕಂಡವರು. ಸಂಪ್ರದಾಯಸ್ಥ ಬ್ರಾಹ್ಮಣ ‌ಕುಟುಂಬದ ಹೆಣ್ಣುಮಗಳಾಗಿದ್ದರೂ ಸಹ ಆಗಿನ ಕಾಲದಲ್ಲೇ ಶಾಲೆಯಲ್ಲಿ ಮಡಿ ಮೈಲಿಗೆಗಳನ್ನು ಮರೆತಂತಿದ್ದವರು. ಆ ಶಾಲೆಯಲ್ಲಿ ಏಳನೇ ತರಗತಿ ಪಾಸು ಮಾಡಿದ ಪ್ರಥಮ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬಳು ಎನ್ನಲು ಹೆಮ್ಮೆ ಎನಿಸುತ್ತದೆ. ಆ ಗುರುಗಳ ಶಿಕ್ಷೆ ರಕ್ಷೆಯಲ್ಲಿ ಬೆಳೆದ ಹಲವು ವಿದ್ಯಾರ್ಥಿಗಳಲ್ಲಿ, ನನ್ನ ಸಹಪಾಠಿಗಳು ಅನೇಕರು ನಮ್ಮ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅರಣ್ಯಾಧಿಕಾರಿಯ ಮಡದಿಯಾಗಿದ್ದ ನಮ್ಮ ಟೀಚರ್ ಪತಿಯೊಂದಿಗೆ ನೆಲೆಸುವ ಸಲುವಾಗಿ ಬೇರೆ ಶಾಲೆಗೆ ವರ್ಗಾವಣೆ ಆಗುತ್ತಿದ್ದಾರೆ ಎಂಬ ವಾರ್ತೆ ನಮ್ಮ ಕಿವಿಗೆ ಬಿದ್ದಾಗ ನಾವು ರಾತ್ರಿ ಇಡೀ ಅತ್ತಿದ್ದು, ನಮ್ಮಳುವು ಕೇಳಿಸಿತು ಎಂಬಂತೆ ನಿವೃತ್ತಿಯ ತನಕವು ಆ ಶಾಲೆಯ ಉನ್ನತಿಗಾಗಿ ದಣಿವರಿಯದೆ ದುಡಿದ ಆ ಹಿರಿಯ ಜೀವಕ್ಕೆ ಇಂದು ತೊಂಭತ್ತರ ಸಮೀಪದ ವಯಸ್ಸು, ಯಾವುದೂ ನೆನಪಿಲ್ಲ, ಪಾದರಸದಷ್ಟು ಚುರುಕಾಗಿದ್ದ ದೇಹ ಇಂದು ಸಂಪೂರ್ಣವಾಗಿ ಸೋತು ಹೋಗಿದೆ. ಅಂದು ಪ್ರಜ್ವಲಿಸುವ ಜ್ಯೋತಿಯಂತಿದ ಕಣ್ಣುಗಳಲ್ಲಿ ಇಂದು ಕಾಂತಿಯೇ ಇಲ್ಲವಲ್ಲ! ಈಗ ಅವರಿಗೆ ನಮ್ಮನ್ನು ಗುರುತು ಕೂಡ ಹಿಡಿಯಲಾಗುತ್ತಿಲ್ಲ. ಆದರೆ ಅವರ ಶಿಷ್ಯರಾಗಿ ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸಿ, ಸಮಾಜದಲ್ಲಿ ಸಜ್ಜನರೆನಿಸಿಕೊಂಡ ನಾವು ಅವರನ್ನು ಮರೆಯಲು ಸಾಧ್ಯವೆ....?

ಒಮ್ಮೆ ಬದುಕಿನ ಪುಟ ಮಗುಚಿದಾಗ ಅತೀ ಎತ್ತರದಲ್ಲಿ ಬೆಳಗುವ ಜ್ಯೋತಿಯೇ ನಮ್ಮ ಮನೋರಮಾ ಟೀಚರ್. ನನ್ನ ಬದುಕಲ್ಲಿ ಪ್ರೇರಣೆಯ ಬೆಳಕಾದವರು ನನ್ನ ಮೊದಲ ಗುರುಗಳು. ನನಗಾಗಿ ಯಾರೂ ಕದಿಯಲಾಗದ ಅಮೂಲ್ಯ ಆಸ್ತಿಯನ್ನೇ ನೀಡಿದ ಆ ಮಹಾನ್ ಚೇತನಕ್ಕೆ ನಾನಿಂದು ಆಕೆ ನೀಡಿದ ಅಕ್ಷರಜ್ಞಾನದ ಅಕ್ಷರಗಳನ್ನೇ ಪೋಣಿಸಿ ಪದಮಾಲೆಯನ್ನಾಗಿಸಿ ಅರ್ಚಿಸಿ ಆಶೀರ್ವಾದ ಬೇಡಲಷ್ಟೇ ಶಕ್ತಳು. ನನ್ನ ಬದುಕಿನ ಚೈತನ್ಯಶಕ್ತಿ, ಪ್ರೇರಣದಾಯಕ ಸ್ಪೂರ್ತಿ ನೂರು ಕಾಲ ಆರೋಗ್ಯಪೂರ್ಣವಾಗಿರಲಿ ಎಂಬುದೊಂದೇ ಭಗವಂತನಲ್ಲಿ ಪ್ರಾರ್ಥನೆ.
....................ನವ್ಯದಾಮೋದರ್ ಶಾಂತಿಗೋಡು
W/0 ದಾಮೋದರ್ ಸುವರ್ಣ 
ಕರ್ಪುತಮೂಲೆ ಮನೆ ಶಾಂತಿಗೋಡು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : 9663973626
**************************************




“ಅದ್ಭುತಗಳು ತಾನಾಗಿಯೇ ನಡೆಯುವುದಿಲ್ಲ ; ಒಬ್ಬ ಉತ್ತಮ ಶಿಕ್ಷಕನು ಸಾಮಾನ್ಯ ವಿದ್ಯಾರ್ಥಿಯೊಳಗಿನ ಅಸಾಮಾನ್ಯ ಪ್ರತಿಭೆಯನ್ನು ಕಂಡು, ಅದನ್ನು ಸಾಧನೆಯಾಗಿ ರೂಪಿಸುತ್ತಾನೆ.”

ನಮ್ಮ ಜೀವನದಲ್ಲಿ ತಂದೆ-ತಾಯಿಯ ನಂತರ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿರುವವರು ಗುರುಗಳು. ನಮಗೆ ಕೇವಲ ಪುಸ್ತಕದ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ಜೀವನದಲ್ಲಿ ಹೇಗೆ ಬದುಕಬೇಕು, ಒಳ್ಳೆಯ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನೂ ಕಲಿಸುವವರು ಶಿಕ್ಷಕರು. ನನ್ನ ಜೀವನದಲ್ಲಿಯೂ ಅನೇಕ ಉತ್ತಮ ಶಿಕ್ಷಕರಿದ್ದಾರೆ. ಆದರೆ ನನಗೆ ಪಾಠ ಹೇಳಿದ ಪ್ರತಿಯೊಬ್ಬ ಶಿಕ್ಷಕರೂ ತಮ್ಮದೇ ಆದ ವಿಶೇಷತೆಯಿಂದ ಇವರು ನನ್ನ ಬೆಸ್ಟ್ ಟೀಚರ್ಸ್ ಆಗಿದ್ದಾರೆ.

ನನಗೆ ನನ್ನ ಶಿಕ್ಷಕರು ಬೆಸ್ಟ್ ಆಗಿರುವುದಕ್ಕೆ ಮುಖ್ಯ ಕಾರಣ, ಅವರು ಕೇವಲ ಪಾಠವನ್ನಷ್ಟೇ ಹೇಳುವುದಿಲ್ಲ. ಆತ್ಮವಿಶ್ವಾಸ, ಶಿಸ್ತು, ಸಮಯದ ಮಹತ್ವ, ಪ್ರಾಮಾಣಿಕತೆ ಮತ್ತು ಮಾನವೀಯತೆಯಂತಹ ಉತ್ತಮ ಗುಣಗಳನ್ನು ಕೂಡ ಕಲಿಸುತ್ತಾರೆ. ನಾನು ಯಾವುದಾದರೂ ವಿಷಯದಲ್ಲಿ ಹಿಂದೆ ಉಳಿದಾಗ ಧೈರ್ಯ ತುಂಬಿ, “ನೀನು ಪ್ರಯತ್ನ ಮಾಡಿದರೆ ಖಂಡಿತ ಯಶಸ್ವಿಯಾಗುತ್ತೀಯ” ಎಂದು ಪ್ರೋತ್ಸಾಹಿಸುತ್ತಾರೆ.

ಒಬ್ಬ ಉತ್ತಮ ಶಿಕ್ಷಕ ಸಾವಿರ ಪುಸ್ತಕಗಳಿಗಿಂತ ಮೌಲ್ಯಯುತರು ಎಂದು ನಾನು ನಂಬುತ್ತೇನೆ. ಏಕೆಂದರೆ ಪುಸ್ತಕ ಜ್ಞಾನವನ್ನು ನೀಡಬಹುದು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವ ಮಾರ್ಗವನ್ನು ಗುರುಗಳು ತೋರಿಸುತ್ತಾರೆ. ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವ ದೀಪದಂತಿರುವ ನನ್ನ ಶಿಕ್ಷಕರು ನನಗೆ ಸದಾ ಆದರ್ಶವಾಗಿದ್ದಾರೆ.

ಆದ್ದರಿಂದ ನನ್ನ ಜೀವನದಲ್ಲಿ ನನಗೆ ಪಾಠ ಹೇಳಿದ, ಪ್ರೀತಿಯಿಂದ ಮಾರ್ಗದರ್ಶನ ನೀಡಿದ ಮತ್ತು ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿದ ನನ್ನ ಎಲ್ಲ ಶಿಕ್ಷಕರೂ ನನಗೆ ಬೆಸ್ಟ್ ಟೀಚರ್ಸ್. ಅವರ ಪ್ರೀತಿ, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ನಾನು ಎಂದಿಗೂ ಮರೆಯುವುದಿಲ್ಲ.

ನನ್ನ ಶಿಕ್ಷಕರಿಂದ ಪಡೆದ ಜ್ಞಾನ ಮತ್ತು ಸಂಸ್ಕಾರವು ನನ್ನ ಜೀವನದಲ್ಲಿ ಬೆಳಕಾಗಿ, ನನ್ನ ಕನಸುಗಳಿಗೆ ರೆಕ್ಕೆಗಳಾಗಿ, ಪ್ರೀತಿ ಮತ್ತು ಮಾರ್ಗದರ್ಶನವನ್ನು ಜೀವನಪೂರ್ತಿ ಮರೆಯುವುದಿಲ್ಲ.

ನನ್ನ ಯಶಸ್ಸಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ನನ್ನ ಶಿಕ್ಷಕರ ಆಶೀರ್ವಾದ ಮತ್ತು ಪ್ರೇರಣೆ ಸದಾ ಇರಲಿ ಎಂದು ಹೇಳುತ್ತ ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
........................................ ಮಾನ್ಯಶ್ರೀ ಕೆ. ಎಂ
ಪುಳಿಕುಕ್ಕು, ಎಡಮಂಗಲ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : 97430 39017 
**************************************


      
                                      
"ಉತ್ತಮ ಶಿಕ್ಷಕರು ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ, ಅದನ್ನು ಅರಳಿಸುವ ತೋಟಗಾರರಂತೆ." ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಮತ್ತು ಪದವಿಯವರೆಗೂ ವಿದ್ಯಾಭ್ಯಾಸವನ್ನು ನೀಡಿದ ಎಲ್ಲಾ ಶಿಕ್ಷಕರು ನನಗೆ ಬೆಸ್ಟ್ ಟೀಚರ್ 

ಒಂದೇ ಹೆಸರು ಹೇಳಬೇಕಾದರೆ ನಾರ್ಶ ಮೈದಾನ ಹೈಸ್ಕೂಲ್ ಹಿಂದಿ ಟೀಚರ್‌ ಭಾರತಿ ಟೀಚರ್. ಅವರು ತುಂಬಾ ಪ್ರೀತಿಯ, ತಾಳ್ಮೆಯ ಮತ್ತು ಪ್ರೋತ್ಸಾಹ ನೀಡುವ ಶಿಕ್ಷಕಿ. ಅವರ ಬೋಧನಾ ವಿಧಾನ ಸರಳವಾಗಿದ್ದು, ಪ್ರತಿಯೊಂದು ವಿಷಯವನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತಾರೆ. ನನಗೆ ವಿಶೇಷವಾಗಿ ಕಥೆ ಮತ್ತು ಕವನ ಬರೆಯುವ ಆಸಕ್ತಿ ಇದೆ. ಆರಂಭದಲ್ಲಿ ಹೇಗೆ ಬರೆಯಬೇಕು ಎಂಬ ಗೊಂದಲ ಇತ್ತು. ಆಗ ಭಾರತಿ ಟೀಚರ್ ನನಗೆ ಸರಿಯಾದ ಮಾರ್ಗದರ್ಶನ ನೀಡಿದರು. ಕಥೆಯನ್ನು ಹೇಗೆ ಆರಂಭಿಸಬೇಕು, ಪಾತ್ರಗಳನ್ನು ಹೇಗೆ ರೂಪಿಸಬೇಕು, ಕವನದಲ್ಲಿ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ತುಂಬಾ ಸಹನೆಯಿಂದ ಕಲಿಸಿದರು. ನಾನು ಬರೆದ ಪ್ರತಿಯೊಂದು ಕಥೆ ಮತ್ತು ಕವನವನ್ನು ಓದಿ, ಅದರಲ್ಲಿರುವ ತಪ್ಪುಗಳನ್ನು ತಿದ್ದಿ, ಇನ್ನಷ್ಟು ಚೆನ್ನಾಗಿ ಬರೆಯಲು ಪ್ರೋತ್ಸಾಹಿಸಿದರು. ಅವರ ಪ್ರೋತ್ಸಾಹದಿಂದ ನನ್ನ ಬರವಣಿಗೆಯ ಮೇಲೆ ಆತ್ಮವಿಶ್ವಾಸ ಹೆಚ್ಚಾಯಿತು. ಇಂದು ನಾನು ಕಥೆ ಮತ್ತು ಕವನಗಳನ್ನು ಧೈರ್ಯವಾಗಿ ಬರೆಯಲು ಸಾಧ್ಯವಾಗಿರುವುದಕ್ಕೆ ಮುಖ್ಯ ಕಾರಣ ಭಾರತಿ ಟೀಚರ್ 

"ಒಬ್ಬ ಶಿಕ್ಷಕರು ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ರೆಕ್ಕೆಗಳನ್ನು ನೀಡಿದಾಗ, ಆ ವಿದ್ಯಾರ್ಥಿಯ ಕನಸುಗಳು ನಿಜವಾಗಲು ಆರಂಭವಾಗುತ್ತವೆ. ನನ್ನ ಜೀವನದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜಿನ ಎಲಾ ಶಿಕ್ಷಕರಿಗೂ ವಂದಿಸುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
................................... ಫಾತಿಮಾತ್ ಶಿಫಾನ 
ಪದವಿ ವಿದ್ಯಾರ್ಥಿನಿ
ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : 76192 19136
**************************************




ಜೀವನದಲ್ಲಿ ಅನೇಕ ಶಿಕ್ಷಕರು ನಮಗೆ ಪಾಠ ಕಲಿಸುತ್ತಾರೆ. ಆದರೆ ನಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿ, ನಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಗುರುಗಳು ಕೆಲವೇ ಕೆಲವರು. ನನ್ನ ಪಾಲಿಗೆ ಅಂತಹ ಅಪರೂಪದ ಗುರು ನನ್ನ ಪ್ರೌಢಶಾಲಾ ಕನ್ನಡ ಅಧ್ಯಾಪಕರಾದ ಡಾ. ರಾಮಕೃಷ್ಣ ಶಿರೂರು ಸರ್.

ಶಾಲಾ ದಿನಗಳಲ್ಲಿ ನನಗೆ ವೇದಿಕೆಯೆಂದರೆ ಭಯ. ಜನರ ಮುಂದೆ ಮಾತನಾಡಲು ಹಿಂಜರಿಯುತ್ತಿದ್ದ ನನ್ನನ್ನು ಒಂದು ದಿನ ಸರ್ ಏಕಪಾತ್ರಾಭಿನಯಕ್ಕೆ ಸಿದ್ಧಪಡಿಸಿದರು. ನನಗೆ ಅದರ ಬಗ್ಗೆ ತಿಳುವಳಿಕೆಯೇ ಇರಲಿಲ್ಲ, ಆದರೆ ಸರ್ ನನ್ನ ಮೇಲೆ ಇಟ್ಟ ನಂಬಿಕೆ ನನ್ನ ಭಯವನ್ನು ಮೀರಿಸಿತು. ಅವರ ಮಾರ್ಗದರ್ಶನದಲ್ಲಿ ವೇದಿಕೆ ಏರಿದ ಆ ಕ್ಷಣವೇ ನನ್ನೊಳಗಿನ ಆತ್ಮವಿಶ್ವಾಸಕ್ಕೆ ಮೊದಲ ಹೆಜ್ಜೆಯಾಯಿತು.

ಅಲ್ಲಿಗೆ ಅವರ ಪ್ರೇರಣೆ ನಿಲ್ಲಲಿಲ್ಲ. ನನ್ನಲ್ಲಿದ್ದ ಸಾಹಿತ್ಯದ ಆಸಕ್ತಿಯನ್ನು ಗುರುತಿಸಿ, “ನೀನು ಬರೆಯಬೇಕು” ಎಂದು ಪ್ರೋತ್ಸಾಹಿಸಿದರು. ಆ ಒಂದು ಮಾತು ನನ್ನ ಬರವಣಿಗೆಯ ಪಯಣಕ್ಕೆ ನಾಂದಿ ಹಾಡಿತು. ಇಂದು ನನ್ನ ಹಲವು ಲೇಖನಗಳು ಪುಸ್ತಕಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಒಮ್ಮೆ ವೇದಿಕೆಗೆ ಹೆದರುತ್ತಿದ್ದ ನಾನು, ಇಂದು ನಿರ್ಭಯವಾಗಿ ನಿರೂಪಣೆ ಮಾಡುತ್ತೇನೆ, ಭಾಷಣ ಮಾಡುತ್ತೇನೆ, ಬರೆಯುತ್ತೇನೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಂಘಟಕಿಯಾಗಿಯೂ ತೊಡಗಿಸಿಕೊಂಡಿದ್ದೇನೆ.

ನನ್ನೊಳಗಿನ ನಾನು ಕಾಣದ ಪ್ರತಿಭೆಯನ್ನು ನನ್ನ ಗುರು ಕಂಡರು, ನಾನು ಹೆದರಿದ ಹೆಜ್ಜೆಯನ್ನು ಅವರು ಧೈರ್ಯವಾಗಿ ಇರಿಸಿದರು. ನನ್ನ ಪ್ರತಿಯೊಂದು ಸಾಧನೆಯ ಹಿಂದೆ ಅವರ ಪ್ರೇರಣೆಯ ಒಂದು ಅಕ್ಷರವಿದೆ.

ನನ್ನೊಳಗಿನ ಪ್ರತಿಭೆಯನ್ನು ನನಗಿಂತ ಮೊದಲೇ ಗುರುತಿಸಿ, ಅದಕ್ಕೆ ರೆಕ್ಕೆ ನೀಡಿದವರು ನನ್ನ ಗುರು. ಇಂದು ನನ್ನ ಧೈರ್ಯದಲ್ಲಿ ಅವರ ಪ್ರೇರಣೆ, ನನ್ನ ಬರಹದಲ್ಲಿ ಅವರ ಸ್ಫೂರ್ತಿ ಇದೆ. ನನ್ನ ಬದುಕಿನ ಶಿಲ್ಪಿ ಡಾ. ರಾಮಕೃಷ್ಣ ಶಿರೂರು ಸರ್ ಅವರಿಗೆ ಹೃದಯಪೂರ್ವಕ ನಮನ.
................ ಪೂರ್ಣಿಮ ಕೋಟ್ಯಾನ್ ಮಾರ್ನಾಡು
ಮೂಡಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : 87920 28592
**************************************





Ads on article

Advertise in articles 1

advertising articles 2

Advertise under the article