ಹೇಳಿ…..ಶಿಕ್ಷಕ ಗೆಲ್ಲುವುದು ಹೇಗೆ….??? ಲೇಖಕರು : ರಮೇಶ್ ಉಳಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರು
Monday, September 7, 2026
Edit
ಲೇಖಕರು : ರಮೇಶ್ ಉಳಯ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಜಗತ್ತು ಝೆನ್ -ಜಿ ಯ ಮುಖ ಹೊತ್ತು ನಿಂತಿದೆ. ಇದರ ನಡುವೆ ಸಣ್ಣದೊಂದು ಸಂಗತಿ ಇದು. ಸರಿ ಸುಮಾರು 30 ದಶಕಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರೊಬ್ಬರ ನಿವೃತ್ತಿ ಸಂದರ್ಭದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಅಭಿನಂದನಾಕಾರರು ತಮ್ಮ ಅಭಿನಂದನಾ ಭಾಷಣದಲ್ಲಿ ಆ ಶಿಕ್ಷಕರನ್ನು ಹೊಗಳಿದ್ದೇ ಹೊಗಳಿದ್ದು. ಅವರ ಗಣಿತ ಪಾಠ ಹಾಗೆ.. ಅವರ ಕನ್ನಡ ಪಾಠ ಹೀಗೆ.. ಈ ಶಿಕ್ಷಕರಿಂದ ಪಾಠ ಬೋಧನೆ ಮಾಡಿಸಿಕೊಂಡ ಮಕ್ಕಳೇ ಧನ್ಯರು, ಪುಣ್ಯವಂತರು ಎಂದು. ಅಭಿನಂದನೆ ಸ್ವೀಕರಿಸಿದ ಬಳಿಕ ಆ ಬಡಪಾಯಿ ಶಿಕ್ಷಕರು ಕಣ್ಣೀರಿಡುತ್ತಾ ಮಾತಾಡಿದರು.
“ಕ್ಷಮಿಸಿ ನನಗೆ ಎಂದೂ ನನ್ನ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲಾಗಲಿಲ್ಲ. ನನ್ನ ಕೈ ಕೆಳಗಿನ ಮಕ್ಕಳನ್ನು ಸರಿಯಾದ ದಾರಿಗೆ ತಲುಪಿಸಲು ನನ್ನಿಂದ ಸಾಧ್ಯವಾಗಲಿಲ್ಲವಲ್ಲಾ ಎಂಬ ಪಶ್ಚಾತಾಪದಿಂದ ನಾನು ಈಗಲೂ ಕೊರಗುತ್ತಿದ್ದೇನೆ. ನನಗೆ ಅವರ ಅಕ್ಷರಗಳನ್ನು ತಿದ್ದಲಾಗಲಿಲ್ಲ. ಅವರ ಮನವನ್ನು ಪಕ್ವಗೊಳಿಸಲಾಗಲಿಲ್ಲ. ಅವರ ಬುದ್ಧಿಯ ಚುರುಕುತನವನ್ನು ಹೆಚ್ಚಿಸಲಾಗಲಿಲ್ಲ. ಅವರಲ್ಲಿ ಮಾನವತೆಯ ಸಂಸ್ಕಾರವನ್ನು ಮೂಡಿಸಲಾಗಲಿಲ್ಲ. ಅವರಲ್ಲಿ ತಂದೆ ತಾಯಿ ಬಂಧು ಬಳಗದ ಮೇಲಿನ ಪ್ರೀತಿಯನ್ನು ಹುಟ್ಟಿಸಲಾಗಲಿಲ್ಲ. ದೇಶಪ್ರೇಮ ಭ್ರಾತೃತ್ವದ ಮೌಲ್ಯಗಳನ್ನು ಮೂಡಿಸಲಾಗಲಿಲ್ಲ. ಅವರು ತಮ್ಮ ಮಣ್ಣಿನ ಸತ್ವವನ್ನು ಗುರುತಿಸಿ ಕೊಳ್ಳುವಂತೆ ಮಾಡಲಾಗಲಿಲ್ಲ. ತಿನ್ನುವ ಅನ್ನದ ರುಚಿಯ ಆಳ ಅಂತಸತ್ವವನ್ನು ಪರಿಚಯ ಮಾಡಿಕೊಳ್ಳುವಂತೆ ಮಾಡಲಾಗಲಿಲ್ಲ. ಅವರನ್ನು ಬರಿಯ ಅಂಕತೆಗೆಯುವ ಯಂತ್ರಗಳನ್ನಾಗಿ ಮಾಡಿದೆ ಅಷ್ಟೇ.. ಶಿಕ್ಷಕನಾಗಿ ನಾನು ಸಂಪೂರ್ಣವಾಗಿ ಸೋತೆ…!! ಮಕ್ಕಳ ಅಂಕಿ ಅಂಶದ ಜೊತೆ ವ್ಯವಹರಿಸುವ ಖಾರಕೂನನಾಗಿ ಹೋದೆ….“ ಅವರ ಕಣ್ಣೀರಿಗೆ ತಡೆಯಿರಲಿಲ್ಲ ಕೊನೆಗೊಂದೆ ಮಾತು “ನಾನು ಈ ಅಭಿನಂದನೆಗೆ ಅರ್ಹನಲ್ಲ.”
ಅವರ ಮಾತುಗಳನ್ನು ಕೇಳಿ ನನ್ನ ಕಣ್ಣಾಲಿಗಳು ಒದ್ದೆಯಾದವು. ಇದು ಅವರೊಬ್ಬರ ಕಣ್ಣೀರಲ್ಲ ಶಿಕ್ಷಣ ವ್ಯವಸ್ಥೆ ಯ ಒಳಗಿನ ಪ್ರತಿಯೊಬ್ಬ ಶಿಕ್ಷಕನ ಕಣ್ಣೀರು. ಮಗುವಿನ ಕಲಿಕೆ ಮತ್ತು ಶಿಕ್ಷಕರ ಬೋಧನೆಯ ಮೇಲಿನ ವ್ಯವಸ್ಥೆಯ ನಿರ್ದೇಶನದ ಪರಿಣಾಮದಿಂದಾಗಿರುವ ಗೊಂದಲದ ಕಣ್ಣೀರು..
ಮೂರ್ನಾಲ್ಕು ದಶಕಗಳ ಹಿಂದೆ ಶಾಲೆಗಳಿಗೆ ಸುಸಜ್ಜಿತ ವಾದ ಕಟ್ಟಡಗಳು ಇಲ್ಲ, ಮೂಲಭೂತ ಸೌಲಭ್ಯಗಳಿಲ್ಲ, ಹತ್ತಿರದಲ್ಲಿ ಶಾಲೆಯೇ ಇಲ್ಲ ಎಂಬ ಕೊರಗು ಆಪಾದನೆಗಳು ಇತ್ತು. ಆದರೆ ಇಂದು ಹಾಗಿಲ್ಲ. ಪ್ರತಿಯೊಂದು ಊರಿನಲ್ಲಿಯೂ ಸುಸಜ್ಜಿತವಾದ ಶಾಲೆಗಳಿವೆ. ಆ ಶಾಲೆಗಳಲ್ಲಿ ಶ್ರಮವಹಿಸಿ ಕೆಲಸ ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಕಲಿಕೆಯ ಸಮರ್ಪಕತೆ ಚೆನ್ನಾಗಿಲ್ಲ ಎಂಬ ದೊಡ್ಡ ಕೂಗು ಶಿಕ್ಷಕನ ಅಸ್ಮಿತೆಯ ಬುಡವನ್ನು ಅಲ್ಲಾಡಿಸುತ್ತಿದೆ. ಎಲ್ಲರ ಕಣ್ಣುಗಳು ಶಿಕ್ಷಕನ ಕಡೆಗೆ ಎಲ್ಲರ ಮಾತಿನ ಬಾಣಗಳು ಶಿಕ್ಷಕನೆಡೆಗೆ. ಎಲ್ಲ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರುವ ಶಿಕ್ಷಕನೊಬ್ಬನ ಅಂತ ಸಾಕ್ಷಿಯ ಸಂವಾದವಿದು.
ಯಾಕೋ ಕಲಿಕಾ ವ್ಯವಸ್ಥೆಯಲ್ಲಿ ಶಿಕ್ಷಕ ತನ್ನ ಸ್ವಾತಂತ್ರವನ್ನು ಕಳೆದುಕೊಳ್ಳುವಂತಾಗಿದೆ ಎಂದೆಣಿಸುತ್ತದೆ ನನಗೆ. ಬಹಳಷ್ಟು ಉದಾಹರಣೆಗಳನ್ನು ನೀಡಬಹುದು ಈ ಮಾತಿಗೆ. ಒಂದು ಕಾಲದಲ್ಲಿ ಪಠ್ಯಪುಸ್ತಕ ಬರಿಯ ಒಂದು ಕಲಿಕೆಯ ಟೂಲ್ ಅಷ್ಟೇ ಆಗಿತ್ತು. ಆ ಪಠ್ಯಪುಸ್ತಕದಾಚೆ ಶಿಕ್ಷಕ ಸುತ್ತಾಡಬಹುದಿತ್ತು. ತನ್ನ ವಿಫುಲವಾದ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯುವುದಕ್ಕೆ ಅವಕಾಶವಿತ್ತು ಆ ಶಿಕ್ಷಕನಿಗೆ. ಆ ಕಾರಣಕ್ಕಾಗಿಯೇ ವಿದ್ವಾಂಸ ಶಿಕ್ಷಕರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ವಿದ್ವಾಂಸರಾಗುತ್ತಿದ್ದರು. ವಿಜ್ಞಾನ ಆಸಕ್ತಿಯ ಶಿಕ್ಷಕನೊಂದಿಗೆ ಬೆರೆತ ವಿದ್ಯಾರ್ಥಿಗಳು ವಿಜ್ಞಾನಿಗಳಾಗುತ್ತಿದ್ದರು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವೀಗ ಈ ಯೋಚನೆಯನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ..? ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿದೆ. ಇಂದು ಖಂಡಿತಾ ಹಾಗಿಲ್ಲ. ಪಠ್ಯಪುಸ್ತಕದ ಸುತ್ತಣದ ಶಿಕ್ಷಣವನ್ನಷ್ಟೇ ನಾವು ಕಾಣುತ್ತಿದ್ದೇವೆ. ಭಾರತದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿರುವ JEE ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಶಾಲಾ ಪಠ್ಯಪುಸ್ತಕವನ್ನು ಸಿದ್ಧಪಡಿಸಲಾಗುತ್ತಿದೆ ಎಂಬ ಮಾತನ್ನು ನಾವು ಈ ದೃಷ್ಟಿಯಿಂದ ಚರ್ಚಿಸಿದ್ದೆ ಆದಲ್ಲಿ ನಮಗೆ ಪ್ರಸ್ತುತ ಶಿಕ್ಷಣದ ವಾಸ್ತವ ಅರ್ಥವಾಗುತ್ತದೆ. ಅಷ್ಟಕ್ಕೂ ಈ ಮಾತನ್ನು ಮಗುವಿನ ಕಲಿಕಾ ದೃಷ್ಟಿಯಿಂದ ನಾವು ಎಷ್ಟು ಒಪ್ಪಬಹುದು ಮತ್ತು ಎಷ್ಟು ಒಪ್ಪಬೇಕು ಎಂಬುದೇ ಶಿಕ್ಷಕನಿಗಿರುವ ಬಹುಮುಖ್ಯ ಗೊಂದಲ. ವಿದ್ಯಾರ್ಥಿಗಳ ಮನಸ್ಸಿಗೆ ನಿಲುಕದ. ಶಿಕ್ಷಕನಿಗೆ ವಿದ್ಯಾರ್ಥಿಗಳಿಗೆ ದಾಟಿಸಲಾಗದ. ಸಮಾಜ ಒಪ್ಪಿಕೊಳ್ಳಲಾದ ಪಠ್ಯದ ವ್ಯವಸ್ಥೆ ಒಳಗಿದ್ದಾನೆ ಶಿಕ್ಷಕ. ಇದನ್ನೆಲ್ಲ ಕಂಡಾಗ ತಲೆಯಲ್ಲಿ ಸುಳಿಯುವ ಒಂದೇ ಪ್ರಶ್ನೆ… ಬರಿಯ ಬೋರ್ಡ್ ಎಕ್ಸಾಮ್ ಗಳನ್ನು ಪಾಸಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಗೆಲ್ಲುವುದು ಮಾತ್ರ ಕಲಿಕೆಯೇ ಎಂಬುದು..??
ಈ ಕಥೆ ಕೇಳಿದರೆ ತುಂಬಾ ಹಾಸ್ಯಾಸ್ಪದ ಅನಿಸಬಹುದು. ವಿದ್ಯಾರ್ಥಿ ಸಮೂಹದ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಯ ಚರ್ಚೆಯ ಮಹಾ ಸಂಗತಿ ಇದು. ಅಷ್ಟಕ್ಕೂ ಆ ಪರೀಕ್ಷೆಯಲ್ಲಿ ಬಂದ ಒಂದು ಪ್ರಶ್ನೆ ಇಷ್ಟೇ.. ದನಕ್ಕೆ ಕಾಲುಗಳೆಷ್ಟು..?? ಎಂಬುದು. ಮಕ್ಕಳ ಉತ್ತರ ಮತ್ತು ಅಂಕದ ವಿನ್ಯಾಸ ಬಹಳ ಚಂದ ಇತ್ತು. ಒಬ್ಬ ಹುಡುಗ ದನಕ್ಕೆ ನಾಲ್ಕು ಕಾಲುಗಳು ಎಂದು ಬರೆದಿದ್ದ. ಅವನಿಗೆ ನಾಲ್ಕರಲ್ಲಿ ನಾಲ್ಕು ಅಂಕ. ಇನ್ನೊಬ್ಬ ಮೂರು ಅಂತ ಬರೆದಿದ್ದ. ಅವನಿಗೆ ನಾಲ್ಕರಲ್ಲಿ ಮೂರು ಅಂಕ. ಇನ್ನೊಬ್ಬ ಬರೆದದ್ದು ಎರಡು ಕಾಲು ಎಂದು. ಅವನಿಗೆ ಎರಡು ಅಂಕ ಮತ್ತೊಬ್ಬನ ಉತ್ತರ ಒಂದು ಎಂದು ಅವನಿಗೂ ಒಂದು ಅಂಕ. ನಗಬೇಕೋ ಅಳಬೇಕೋ ಗೊತ್ತಿಲ್ಲ. ಆದರೂ ಶಿಕ್ಷಕ ಇದನ್ನು ಒಪ್ಪಿಕೊಳ್ಳಬೇಕು ಹಾಗೆಯೇ ಅಂಕ ನೀಡಬೇಕು ಎಂತಹ ವಿಪರ್ಯಾಸ ಅಲ್ವಾ..??
ಈ ಕಥೆ ಇನ್ನಷ್ಟು ವಿಶೇಷ ಅನಿಸಬಹುದು. ಇದೊಂದು ಕನ್ನಡ ಉತ್ತರ ಪತ್ರಿಕೆಯ ಕಥೆ. ಉತ್ತರ ಪತ್ರಿಕೆಯಲ್ಲಿ ಕನ್ನಡದ ಯಾವುದೇ ವ್ಯಾಕರಣ ತಪ್ಪುಗಳಿರಲಿಲ್ಲ., ವಾಕ್ಯ ರಚನೆ, ಸಂಧಿ ಸಮಾಸ ಒತ್ತು ದೀರ್ಘ, ಚಿಹ್ನೆ ಕೊಂಬು ಎಲ್ಲವೂ ಸರಿಯಾಗಿ ಇತ್ತು. ಆದರೂ ಆ ಉತ್ತರ ಪತ್ರಿಕೆಗೆ ಬಂದ ಅಂಕಗಳು ಸೊನ್ನೆ, ಕಾರಣವೊಂದೇ ಆ ಪತ್ರಿಕೆಯಲ್ಲಿ ವಿಷಯದ ತಪ್ಪುಗಳಿತ್ತು. ಮತ್ತೆ ನೆನಪಿಡಬೇಕಾದ ಸಂಗತಿ ಅದು ಕನ್ನಡ ಭಾಷೆ ಉತ್ತರ ಪತ್ರಿಕೆ. ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆಯ ಗೊಂದಲಗಳಿವು. ಹೇಳಿ ಇಲ್ಲಿ ಶಿಕ್ಷಕನ ಆಯ್ಕೆ ಏನು. ಇಲ್ಲಿ ಶಿಕ್ಷಕ ಮಕ್ಕಳನ್ನು ಬೆಳೆಸಬೇಕಾದದ್ದು ಹೇಗೆ ? ಸಾಮರ್ಥ್ಯಮುಖಿಯಾಗಿಯೋ ಅಲ್ಲಾ ಅಂಕಮುಖಿಯಾಗಿಯೋ...? ದುರಂತ ಅಂದ್ರೆ ವ್ಯವಸ್ಥೆ ಮತ್ತು ಸಮಾಜ ಅಂಕವನ್ನು ಬಯಸುತ್ತಿದೆ..!ವ್ಯವಸ್ಥೆ ಶಿಕ್ಷಕನನ್ನು ಶಿಕ್ಷಕನನ್ನಾಗಿರಲು ಬಿಡುತ್ತಿಲ್ಲ ಎಂಬ ವಾದ ಅಪವಾದಗಳು ಕಾಲಾಂತರದಿಂದ ಕೇಳುತ್ತಲೇ ಬರುತ್ತಿದೆ. ಒಂದರ್ಥದಲ್ಲಿ ಇದು ವಾಸ್ತವೂ ಹೌದು.
ಶಾಲೆಗಳು ಕಲಿಕೆಯ ಕೇಂದ್ರಗಳಾಗಬೇಕಿತ್ತು , ದುರದಷ್ಟವಶಾತ್ ಇಂದು ಶಾಲೆಗಳು ಹಾಗಿಲ್ಲ. ಅಂಕದ ಮುಖವಾಣಿ ಹೊತ್ತ ಬರಿಯ ಕಟ್ಟಡಗಳಾಗಿ ಗೋಚರಿಸುತ್ತಿವೆ. ಅರ್ಲಿ ಚೈಲ್ಡ್ ವುಡ್ ಕೇರ್ ಎಜುಕೇಶನ್ ಸೆಂಟರ್ (ECCE) ಗಳಾಗಬೇಕಾಗಿದ್ದ ಶಾಲೆಗಳು ಬರಿಯ ಕೇರ್ ಕೇಂದ್ರಗಳಾಗಿ ಬದಲಾಗುತ್ತಿರುವುದು ಖೇದಕರ ಸಂಗತಿ. ದೇಶದ ಪ್ರತಿಯೊಬ್ಬ ಮಗುವಿಗೂ ಸುರಕ್ಷಿತವಾದ ಬದುಕು ಕಟ್ಟಿಕೊಡುವಂತೆ ಮಾಡುವ ಕನಸೇನೋ ಸರಿ. ಆದರೆ ಅದು ಕಲಿಕೆಯ ಭಾಗವಾಗಬೇಕೇ ಹೊರತು ಕಲಿಕೆ ಅದರ ಭಾಗವಾಗಿ ಹೋದರೆ ಅದರಿಂದ ಒಳ್ಳೆಯ ಪರಿಣಾಮವನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸತ್ಯದ ಸತ್ವವನ್ನು ನಾವು ತಿಳಿದುಕೊಳ್ಳಬೇಕು. ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ನೇಮಕಗೊಂಡ ಶಿಕ್ಷಕನಿಗೆ ಬೇರೆ ಕೆಲಸಗಳ ಹೊರೆ ಸರಿಯೇ ಎಂಬ ಮಾತನ್ನು ಸಮಾಜ ಕೇಳುತ್ತಿದೆ. ಸಮಾಜದ ಈ ಪ್ರಶ್ನೆ ಖಂಡಿತ ಸರಿ.. ಆದರೆ ವ್ಯವಸ್ಥೆಯ ಲೋಪಕ್ಕೆ ಶಿಕ್ಷಕನನ್ನು ಬಲಿಪಶುವನ್ನಾಗಿಸುವುದು ಎಷ್ಟು ಸರಿ..?
ಶಿಕ್ಷಕನ ಓದು ಶಿಕ್ಷಕನ ಜ್ಞಾನ ಶಿಕ್ಷಕರ ಸಂಸ್ಕಾರದ ಬಗ್ಗೆ ಎಲ್ಲರೂ ಮಾತನಾಡುವವರು… ಮತ್ತೆ ಎಲ್ಲರೂ ಪ್ರಶ್ನಿಸುವವರೇ…! ಈ ಹೆಬ್ಬಯಕೆಯೇನೋ ಸರಿ.. ಆದರೆ ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಎಲ್ಲರಿಗೂ ಸರಿ ಸಮಾನವಾದ ಪಾತ್ರವಿದೆ ಎಂಬುದನ್ನು ಗಟ್ಟಿ ಮಾಡಿಕೊಂಡವರು ಎಷ್ಟು ಜನ…? ಹಾಗೆ ಮಾಡಿದ್ದೆ ಆದಲ್ಲಿ ಪ್ರತಿಷ್ಠಿತ ಶಾಲೆ, ಖಾಸಗಿ ಶಾಲೆ, ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ, ಎಂಬಿತ್ಯಾದಿ ಫಲಕಗಳು ಕಾಣ ಸಿಗಲು ಸಾಧ್ಯವಿರಲಿಲ್ಲ. ನಮ್ಮ ಆಸೆಗಳೇ ವಿಭಿನ್ನ. ಅಲ್ಲಿದ್ದದ್ದು ಶ್ರೇಷ್ಠ. ಇಲ್ಲಿ ನಿಕೃಷ್ಠ. ಈ ಭಾವನೆಯಿಂದಲೇ ಶಾಲೆಗಳ ನಿಜವಾದ ಅಂತಸತ್ವ ಕಳೆದು ಹೋಗಿದೆ. ಹೇಳಿ ಶಿಕ್ಷಕ ಒಬ್ಬನೇ ಅದನ್ನು ಹುಡುಕ ಹೊರಟರೆ ಆ ಅಂತಸತ್ವ ಸಿಗುವುದಾದರೂ ಹೇಗೆ…?
ಯಾಕೋ ಈಗ ಒಂದು ಮಗುವಿನ ಶಿಕ್ಷಣದ ಮೇಲಿರುವ ಕನಸು ಕಲ್ಪನೆಗಳನ್ನು ಕಂಡಾಗ ಅದು ವಿಭಿನ್ನ ಸ್ವರೂಪದಲ್ಲಿ ಗೋಚರವಾಗುತ್ತಿದೆ. ತನ್ನ ಮಗುವಿನ ಶಿಕ್ಷಣದ ಬಗೆಗೆ ತಂದೆ ತಾಯಿಯ ಕನಸು ಒಂದಾದರೆ… ಸಮಾಜದ ಕನಸು ಇನ್ನೊಂದು… ವ್ಯವಸ್ಥೆಯ ಕನಸು ಬೇರೆಯೇ ಆಗಿದೆ. ಇದು ಯಾವುದೂ ಒಗ್ಗಲಾರದ ಸ್ಥಿತಿಯಲ್ಲಿ ಮಗುವಿದೆ. ಒಗ್ಗಿಸಲೇಬೇಕಾದ ಸ್ಥಿತಿಯಲ್ಲಿ ಶಿಕ್ಷಕನಿದ್ದಾನೆ. ಹೇಳಿ ಶಿಕ್ಷಕ ಈ ಮೂರು ಕನಸುಗಳನ್ನು ಸಮಾಂತರಗೊಳಿಸುವುದು ಹೇಗೆ..??
ಶಿಕ್ಷಣದ ಪ್ರಧಾನ ಪಾತ್ರವಾದ ಶಿಕ್ಷಕನ ಮುಂದಿರುವ ಸವಾಲುಗಳು ಒಂದಲ್ಲ ಎರಡಲ್ಲ..! ವಾಸ್ತವ ಶಿಕ್ಷಣದ ಕನಸುಗಳು ಸಮಾಂತರಗೊಳ್ಳುವುದು ಯಾವಾಗ..? ಶಿಕ್ಷಣದ ಮಾಧ್ಯಮ ಬೇಧವನ್ನು ಶಿಕ್ಷಕ ಮೀರಿ ನಿಲ್ಲುವುದು ಹೇಗೆ…? ಶೈಕ್ಷಣಿಕೇತರ ಕೆಲಸಗಳಿಂದ ಶಿಕ್ಷಕ ಹೊರ ಬರುವುದು ಯಾವಾಗ..? ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿ ತೂಕ ಮಾಡಿ ಶೇಕಡ 100 ಫಲಿತಾಂಶದ ಹತ್ತಿರಕ್ಕೆ ಹೋಗುವುದು ಏಕೆ .?? ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧಗೊಂಡಿರುವ ಪಠ್ಯಪುಸ್ತಕವನ್ನು ಇಟ್ಟುಕೊಂಡು ಸಂಸ್ಕಾರದ ಶಿಕ್ಷಣವನ್ನು ರೂಪಿಸಿಕೊಳ್ಳುವುದು ಹೇಗೆ..? ಒಬ್ಬ ಶಿಕ್ಷಕ ಮೂರು ತರಗತಿ 13 ವಿಷಯಗಳನ್ನು ಇಟ್ಟುಕೊಂಡು ಅನುಭವಾತ್ಮಕ ಶಿಕ್ಷಣವನ್ನು ನೀಡುವುದು ಯಾವಾಗ..?
ಈ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಇದೆ…?
ಶಿಕ್ಷಕ ದಿನಾಚರಣೆ, ಶಿಕ್ಷಕರ ಸಂಭ್ರಮದ ದಿನ, ಶಿಕ್ಷಕರನ್ನು ಗೌರವಿಸೋ ದಿನ, ಹಾರ ತುರಾಯಿಗಳಿಂದ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸುವ ದಿನ, ಕಳೆದಾಯಿತು...
ಈಗಲಾದರೂ ಹೇಳಿ…!
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94824 88070
***************************************