-->
ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01: ಜಗಲಿಯ ವಿದ್ಯಾರ್ಥಿಗಳ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01: ಜಗಲಿಯ ವಿದ್ಯಾರ್ಥಿಗಳ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01
ಸೆಪ್ಟೆಂಬರ್ - 5 : ಶಿಕ್ಷಕರ ದಿನಾಚರಣೆ - 2026
ಜಗಲಿಯ ವಿದ್ಯಾರ್ಥಿಗಳ ಬರಹಗಳು

ಬರಹಗಾರರು : 
◾ಹಿತಾಶ್ರೀ ಪಿ, ಪ್ರಥಮ ಪಿಯುಸಿ
◾ಸಾತ್ವಿಕ್ ಗಣೇಶ್ , ದ್ವಿತೀಯ ಪಿಯುಸಿ
◾ದಿಯಾ ಶೆಟ್ಟಿ ಮೂಲ್ಕಿ , 8ನೇ ತರಗತಿ
◾ಸಾನಿಧ್ಯ , 7ನೇ ತರಗತಿ
◾ಪ್ರಣಾವಿ, 8ನೇ ತರಗತಿ
◾ತೃಪ್ತಿ , 10 ನೇ ತರಗತಿ
◾ಶಾಹಿನ ಭಾನು, 9ನೇ ತರಗತಿ
◾ಇಶಿಕ. ಟಿ , 4ನೇ ತರಗತಿ
◾ಐಶ್ವರ್ಯ , ಜಿ ಪಿ ಯು ಸಿ ತೆಕ್ಕಟ್ಟೆ
◾ಸಿಂಚನಾ, 9ನೇ ತರಗತಿ



ನನ್ನ ಜೀವನದಲ್ಲಿ ಅನೇಕ ಶಿಕ್ಷಕರು ನನಗೆ ಪಾಠ ಹೇಳಿಕೊಟ್ಟಿದ್ದಾರೆ. ಆದರೆ ಅವರಲ್ಲಿ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವವರು ನನ್ನ ನೆಚ್ಚಿನ ಶಿಕ್ಷಕರಾದ ಮದನ್ ಮೋಹನ್ ಸರ್.

ಸರ್ ನಮಗೆ ಕೇವಲ ಪುಸ್ತಕದಲ್ಲಿರುವ ಪಾಠಗಳನ್ನು ಬೋಧಿಸುವುದಿಲ್ಲ, ಜೀವನದಲ್ಲಿ ಹೇಗೆ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂಬುದನ್ನೂ ಕಲಿಸುತ್ತಾರೆ. ಅವರ ಪ್ರತಿಯೊಂದು ಮಾತಿನಲ್ಲಿಯೂ ಒಂದು ಒಳ್ಳೆಯ ಸಂದೇಶ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಅಡಗಿರುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಕೇವಲ ತಪ್ಪನ್ನು ತೋರಿಸದೆ, ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗುವ ದಾರಿಯನ್ನು ತಿಳಿಸುತ್ತಾರೆ.

ಒಬ್ಬ ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸಬಲ್ಲರು ಎಂಬುದಕ್ಕೆ ನಮ್ಮ ಮದನ್ ಮೋಹನ್ ಸರ್ ಅವರೇ ಉತ್ತಮ ಉದಾಹರಣೆ. ಅವರು ನಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ, ನಮ್ಮ ಕನಸುಗಳಿಗೆ ಧೈರ್ಯ ಮತ್ತು ಪ್ರೇರಣೆಯನ್ನು ನೀಡುತ್ತಾರೆ. ನಾವು ಗೆದ್ದಾಗ ಸಂತೋಷಪಡುವುದಷ್ಟೇ ಅಲ್ಲ, ಸೋತಾಗಲೂ ಧೈರ್ಯ ತುಂಬಿ ಮತ್ತೆ ಪ್ರಯತ್ನಿಸಲು ಪ್ರೋತ್ಸಾಹಿಸುತ್ತಾರೆ.

ನಮ್ಮ ಯಶಸ್ಸಿನಲ್ಲಿ ನಮ್ಮ ಹೆಸರು ಕಾಣಿಸಿಕೊಳ್ಳಬಹುದು, ಆದರೆ ಆ ಯಶಸ್ಸಿನ ಹಿಂದೆ ಮೌನವಾಗಿ ನಿಂತಿರುವ ಶಿಕ್ಷಕರ ಪರಿಶ್ರಮ ಮತ್ತು ಮಾರ್ಗದರ್ಶನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ನನ್ನ ನೆಚ್ಚಿನ ಶಿಕ್ಷಕರಾದ ಮದನ್ ಮೋಹನ್ ಸರ್ ಅವರಿಂದ ಕಲಿತ ಪಾಠಗಳು ಕೇವಲ ಪರೀಕ್ಷೆಗೆ ಮಾತ್ರವಲ್ಲ, ಜೀವನ ಪೂರ್ತಿ ನನ್ನೊಂದಿಗೆ ಇರುತ್ತವೆ. ಶಿಕ್ಷಕರು ಎಂದರೆ ಜ್ಞಾನದ ಬೆಳಕನ್ನು ನೀಡುವ ದಾರಿದೀಪಗಳು ಎಂದು ಹೇಳುತ್ತಾರೆ. ನನ್ನ ಜೀವನದಲ್ಲಿ ಆ ದಾರಿಯನ್ನು ಬೆಳಗಿಸುವ ದಾರಿದೀಪಗಳಲ್ಲಿ ಮದನ್ ಮೋಹನ್ ಸರ್ ಅವರಿಗೆ ವಿಶೇಷ ಸ್ಥಾನವಿದೆ. ನನ್ನಂತಹ ಅನೇಕ ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನದ ಬೆಳಕು ಮೂಡಿಸುತ್ತಿರುವ ನನ್ನ ಪ್ರೀತಿಯ ಮದನ್ ಮೋಹನ್ ಸರ್ ಅವರಿಗೆ ನನ್ನ ಹೃದಯಪೂರ್ವಕ ಗೌರವ ಮತ್ತು ಧನ್ಯವಾದಗಳು.
............................................... ಹಿತಾಶ್ರೀ ಪಿ
ಪ್ರಥಮ ಪಿಯುಸಿ
ಪಕಳ ಕುಂಜ ಮಾಣಿಲ
ಬಂಟ್ವಾಳ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ
**************************************

      

"ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ" ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಹಾಗೂ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗೌರವಿಸಲು ಈ ದಿನವನ್ನು "ಶಿಕ್ಷಕರ ದಿನ"ವನ್ನಾಗಿ ಆಚರಿಸಲಾಗುತ್ತದೆ.  
 ಈ ದಿನದಂದು ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಿಕ್ಷಕರಿಗೆ ಶುಭಾಶಯ ಹೇಳುತ್ತಾರೆ ಮತ್ತು ಉಡುಗರೆ ನೀಡಿ ಗೌರವಿಸುತ್ತಾರೆ. ಅವರು ಕೇವಲ ಅಕ್ಷರ ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಬೆಳಗಿಸುವ ದಿವ್ಯಶಕ್ತಿಯಾಗಿದ್ದಾರೆ.
     ನಮಗೆ ಜ್ಞಾನದ ಹಾದಿ ತೋರಿಸಿದ ನಮ್ಮ ಎಲ್ಲಾ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮ ಕರ್ತವ್ಯವಾಗಿದೆ. 
     ನನಗೆ ವಿದ್ಯೆಯನ್ನು ಕಲಿಸಿದ ಎಲ್ಲಾ ಶಿಕ್ಷಕರು ನನಗೆ ಅಚ್ಚು ಮೆಚ್ಚಿನವರೇ ಆಗಿರುವರು. ನನ್ನ ಎಲ್ಲಾ ಪ್ರೀತಿಯ ಗುರುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು.
........................................... ಸಾತ್ವಿಕ್ ಗಣೇಶ್  ದ್ವಿತೀಯ ಪಿಯುಸಿ 
ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************

        

ನಾನು ಕಲಿಯುವಾಗ ಶಾಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಈಗ ಇರುವ ಪ್ರೌಢಶಾಲಾ ಹಂತದವರೆಗೆ ಹಲವಾರು ಶಿಕ್ಷಕರು ನನಗೆ ಪಾಠ ಮಾಡಿದ್ದಾರೆ. ಆಟ ಪಾಠಗಳ ಜೊತೆ ಜೊತೆಗೆ ಅವರು ನಮಗೆ ಬದುಕಿನ ವಿವಿಧ ಹಂತಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತಾ ಬಂದಿದ್ದಾರೆ. ಅದರ ಜೊತೆಯಲ್ಲಿ ಕಷ್ಟಗಳನ್ನು ಎದುರಿಸುವುದನ್ನು ಸಹ ತಿಳಿಸಿಕೊಡುತ್ತಿದ್ದಾರೆ. 

ಶಾಲಾ ಶಿಕ್ಷಕರಲ್ಲದೆ ನನಗೆ ಚಿತ್ರಕಲೆಯನ್ನು ಆನ್ಲೈನ್ ನಲ್ಲಿ ಕಲಿಸಿದ ಡ್ರಾಯಿಂಗ್ ಸರ್, ಉತ್ತಮವಾಗಿ ಯಕ್ಷಗಾನದ ನೃತ್ಯದ ಪಾಠ ಹೇಳಿಕೊಟ್ಟ ಮೇಡಂ, ಹಾಗೆಯೇ ಒಬ್ಬಳನ್ನೇ ಕುಳ್ಳಿರಿಸಿ ಸಂಗೀತದ ಪಾಠ ಹೇಳಿಕೊಟ್ಟ ಮೇಡಂ, ಅಬಾಕಸ್ ಕಲಿಸಿದ ಮೇಡಂ, ಹಾಗೂ ನನಗೆ ಈಗಲೂ ರ್ಯಾಂಪ್ ಮೇಲೆ ನಡೆಯುವ ವಿಧಾನವನ್ನು, ವೇದಿಕೆಯಲ್ಲಿ ಮಾತನಾಡುವ ಶೈಲಿಯನ್ನು ಮತ್ತು ಧೈರ್ಯವನ್ನು ತುಂಬಿಕೊಟ್ಟ ಪಾತ್‌ವೇ ಮಾಡಲಿಂಗ್ ಇನ್ಸ್ಟಿಟ್ಯೂಟ್‌ನ ಗುರುಗಳು ಎಲ್ಲರಿಂದಲೂ ನಾನು ಕಲಿತ ಜ್ಞಾನ ಅಪಾರ. ಇಷ್ಟು ಮಾತ್ರವಲ್ಲ ಬದುಕಿನಲ್ಲಿ ಕಲಿಯುವುದು ಇನ್ನೂ ಇದೆ. 

ಆದರೆ ಎಲ್ಲಾ ಶಿಕ್ಷಕರಿಗಿಂತಲೂ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದು ನನ್ನ ತಾಯಿ ಪ್ರೇಮಾ ಆರ್ ಶೆಟ್ಟಿ. ಇವರೇ ನನ್ನ ಮೊದಲ ಶಿಕ್ಷಕರು. ಶಾಲೆಗೆ ಹೋಗುವ ಮೊದಲೆ ಪ್ರಿಸ್ಕೂಲ್ ಎನ್ನುವ ಕಾನ್ಸೆಪ್ಟನ್ನು ಅದರ ಹೆಸರಿಲ್ಲದೆ ಮನೆಯಲ್ಲಿಯೇ ಮಾಡಿಕೊಟ್ಟು, ಅಲ್ಲಿ ಹಲವಾರು ಗೆಳೆಯರ ಜೊತೆ ನಾನು ಕಲಿತದ್ದು ಬಹಳ. ಮೇಲಿನ, ಕೆಳಗಿನ, ಆಚೆಯ, ಈಚೆಯ ಎಲ್ಲಾ ಪುಟ್ಟ ಪುಟ್ಟ ಮಕ್ಕಳನ್ನು ಕೂಡಿಕೊಂಡು ಸಮಯದ ಪರಿವೆಯೇ ಇಲ್ಲದೆ ಆಟ ಆಡಿ ಸುಳ್ಯದಲ್ಲಿ ಕಳೆದ ಸಮಯ ನನ್ನ ಬಾಲ್ಯದ ಮರೆಯಲಾರದ ಕ್ಷಣಗಳು. ಅಂಗನವಾಡಿ, ಶಾಲೆ ಎಂದರೇನು ಎಂದು ತೋರಿಸಿದ್ದು, ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದದ್ದು, ಯೂನಿಫಾರ್ಮ್ ಹೊಲಿಸಿ, ಬ್ಯಾಗ್ ಪುಸ್ತಕಗಳನ್ನು ಕೊಡಿಸಿ ಶಾಲೆಗೆ ಹೋಗುವ ಮೊದಲು ಅಲ್ಲಿ ಹೇಗಿರಬೇಕು ಎಂದೆಲ್ಲ ತಿಳಿಸಿದ್ದು ಮೊದಲ ಟೀಚರ್ ಅಮ್ಮ. ತಪ್ಪು ಮಾಡಿದಾಗ ತಿದ್ದಿ ಸರಿಪಡಿಸಿದ್ದು ಅವರೇ. ನನಗೆ ಬೇಸರವಾಗದ ಹಾಗೆ, ಬೋರ್ ಅನ್ನಿಸದ ಹಾಗೆ, ರಜೆಯಲ್ಲೂ ಸಮಯವನ್ನು ಖುಷಿಯಾಗಿ ಕಳೆಯುವ ಟ್ರಿಕ್ಸ್ ಹೇಳಿಕೊಟ್ಟವರು ಅವರೇ. ಬರವಣಿಗೆ, ನನ್ನಿಷ್ಟದ ಮಾಡೆಲಿಂಗ್, ಓದು, ನೃತ್ಯ ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತ ನನ್ನಮ್ಮ ನನ್ನ ಬೆಸ್ಟ್ ಟೀಚರ್. 
..................................... ದಿಯಾ ಶೆಟ್ಟಿ ಮೂಲ್ಕಿ 
8ನೇ ತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ 
ಮುಲ್ಕಿ, ದಕ್ಷಿಣ ಕನ್ನಡ ಜಿಲ್ಲೆ
**************************************




ನನ್ನ ನೆಚ್ಚಿನ ಶಿಕ್ಷಕಿ ಶಿಲ್ಪ ಟೀಚರ್. ಅವರು ನಮಗೆ ಗಣಿತ ಟೀಚರ್. ಅವರು ನಮ್ಮೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಅತ್ಯಂತ ಕಠಿಣವಾದ ಗಣಿತ ಪಾಠವನ್ನು ಅತ್ಯಂತ ಸರಳವಾಗಿ ಹೇಳಿ ಕೊಡುತ್ತಾರೆ. ಅವರು ಎಲ್ಲರನ್ನು ಸಮಾನವಾಗಿ ನೋಡುತ್ತಾರೆ. ಅವರು ಎಲ್ಲ ವಿಷಯದಲ್ಲೂ ಅತ್ಯಂತ ಜ್ಞಾನ ಹೊಂದಿದ್ದಾರೆ, ನಮಗೂ ಅದನ್ನು ಧಾರೆ ಎರೆಯುತ್ತಾರೆ. ಅವರ ಬಗ್ಗೆ ಹೇಳುವಾಗ ಅವರ ನಿಷ್ಮಲವಾದ ನಗು ನನ್ನ ಕಣ್ಣು ಮುಂದೆ ಬರುತ್ತದೆ.
................................................. ಸಾನಿಧ್ಯ 
7ನೇ ತರಗತಿ 
ಮರಿಯo ನಿಕೇತನ್ ಆಂಗ್ಲ ಮಾಧ್ಯಮ ಶಾಲೆ
ಬೆಳೆವಾಯಿ, ಕಾರ್ಕಳ ಉಡುಪಿ ಜಿಲ್ಲೆ
**************************************
      


       

      ನಮ್ಮ ಜೀವನವನ್ನು ರೂಪಿಸುವಲ್ಲಿ ತಂದೆ ತಾಯಿಯ ನಂತರದ ಸ್ಥಾನ ಶಿಕ್ಷಕರಿಗೆ ಸಲ್ಲುತ್ತದೆ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವ ಶಿಕ್ಷಕರು ಸಮಾಜದ ಕಣ್ಣುಗಳಿದ್ದಂತೆ. ನನ್ನ ಶಾಲೆಯಲ್ಲಿ ಅನೇಕ ಉತ್ತಮ ಶಿಕ್ಷಕರಿದ್ದಾರೆ. ಆದರೆ ಅವರಲ್ಲಿ ನನ್ನ ಇತಿಹಾಸ ಮತ್ತು ಪರಿಸರ ಪಾಠ ಮಾಡುವ ಕುದ್ಮಾರು ಶಾಲೆಯ ಶಿಕ್ಷಕಿಯಾದ ಶ್ರೀಮತಿ ವೀಣಾ ಟೀಚರ್ ಅವರು ನನ್ನ ಅತ್ಯಂತ ನೆಚ್ಚಿನ ಶಿಕ್ಷಕರಾಗಿದ್ದಾರೆ. 
        ವೀಣಾ ಟೀಚರ್ ಅವರು ಅತ್ಯಂತ ಸರಳ, ಶಿಸ್ತುಬದ್ಧ ದಯಾಮಯಿ ಸ್ವಭಾವದವರಾಗಿದ್ದಾರೆ. ಅವರು ಯಾವಾಗಲೂ ಮುಗುಳ್ನಗೆಯಿಂದ ತರಗತಿಯನ್ನು ಪ್ರವೇಶಿಸುತ್ತಾರೆ. ಅವರು ಕೇವಲ ಪಠ್ಯಪುಸ್ತಕದ ಪಾಠಗಳನ್ನಷ್ಟೇ ಮಾಡದೆ, ಜೀವನದಲ್ಲಿ ಶಿಸ್ತು ಸಮಯ ಪ್ರಜ್ಞೆ ಒಳ್ಳೆಯ ನಡತೆಯ ಮಹತ್ವವನ್ನು ನಮಗೆ ತಿಳಿಸಿಕೊಡುತ್ತಾರೆ. ಯಾವುದೇ ವಿದ್ಯಾರ್ಥಿ ತಪ್ಪು ಮಾಡಿದರೆ ಕೋಪಗೊಳ್ಳದೆ, ಪ್ರೀತಿಯಿಂದ ತಿದ್ದಿ ಬುದ್ದಿ ಹೇಳುತ್ತಾರೆ. ಅವರ ಬೋಧನಾ ಶೈಲಿ ಅತ್ಯಂತ ಆಕರ್ಷಕವಾಗಿದೆ. ಕಷ್ಟದ ವಿಷಯಗಳನ್ನು ಸಹಕಥೆಗಳು, ಉದಾಹರಣೆಗಳು ಮತ್ತು ಸುಲಭವಾದ ಮಾರ್ಗಗಳ ಮೂಲಕ ನಮಗೆ ಅರ್ಥವಾಗುವಂತೆ ವಿವರಿಸುತ್ತಾರೆ. ಇತಿಹಾಸದ ಪಾಠಗಳನ್ನು ಮಾಡುವಾಗ ನಾವು ಅದೇ ಕಾಲಕ್ಕೆ ಹೋಗಿದ್ದೇವೇನೋ ಎನ್ನುವಂತೆ ಜೀವಂತವಾಗಿ ವಿವರಿಸುತ್ತಾರೆ. ಅವರು ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡಿ ಪ್ರೋತ್ಸಾಹಿಸುತ್ತಾರೆ. ವೀಣಾ ಟೀಚರ್ ಕೇವಲ ಪಾಠಕ್ಕೆ ಮಾತ್ರ ಸೀಮಿತ ವಾಗಿರದೆ , ಕ್ರೀಡೆ, ಭಾಷಣ, ಹಾಡು ಕವನ, ಕವಿತೆ, ಕಥೆ, ಪ್ರಬಂಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾವು ಭಾಗವಹಿಸುವಂತೆ ಸದಾ ನಮ್ಮನ್ನು ಪ್ರೋತ್ಸಾಹ ನೀಡುತ್ತಾರೆ. ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರ ಈ ಎಲ್ಲಾ ಗುಣಗಳಿಂದಾಗಿ ಅವರು ಇಡೀ ಶಾಲೆಗೆ ಪ್ರೀತಿ ಪಾತ್ರರಾಗಿದ್ದಾರೆ. ಒಬ್ಬ ಉತ್ತಮ ಶಿಕ್ಷಕಿ ವಿದ್ಯಾರ್ಥಿಯ ಭವಿಷ್ಯದ ಶಿಲ್ಪಿ. ವೀಣಾ ಟೀಚರ್ ಅವರ ಆದರ್ಶ ಗುಣಗಳು, ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿ ನನ್ನ ಜೀವನದ ಮೇಲೂ ಅಪಾರ ಪ್ರಭಾವ ಬೀರಿದೆ. ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಇಂತಹ ಮಹಾನ್ ಶಿಕ್ಷಕರು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಿಗುವಂತಾಗಲಿ....
................................................. ಪ್ರಣಾವಿ
8 ನೇ ತರಗತಿ.
ಸ.ಪ.ಪೂ.ಕಾಲೇಜು (ಪ್ರೌಢ ವಿಭಾಗ) 
ಸವಣೂರು, ಪುತ್ತೂರು ತಾಲೂಕು, ದ.ಕ.ಜಿಲ್ಲೆ
**************************************



           

       ನನ್ನ ಎಲ್ಲಾ ಪ್ರೀತಿಯ ಮಾತಾಜಿಗಳಿಗೆ ಶ್ರೀಮಾನ್ ರವರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.....
   
"ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು!!" ನನ್ನ ಅಮ್ಮ ನೇ ನನಗೆ ಮೊದಲ ಪ್ರೀತಿಯ "TEACHER". ಹಾಗೆಯೇ ನನ್ನ ಪ್ರಾಥಮಿಕ ಶಾಲೆಯ ಪ್ರೀತಿಯ ಇಷ್ಟದ ಮಾತಾಜಿ ಗಳಾದ ರಾಜೇಶ್ವರೀ ಮಾತಾಜಿ ಅನ್ನಪೂರ್ಣ ಮಾತಾಜಿ ಹಾಗೂ ಪ್ರೌಢ ಶಾಲೆಯ ಚೈತ್ರ ಮಾತಾಜಿ, ಸೌಮ್ಯ ಮಾತಾಜಿ ಇವರಿಗೂ ಶಿಕ್ಷಕರ ದಿನಾಚರಣೆಯ ಮನದಾಳದ ಶುಭಾಶಯಗಳು...
     ಕೇವಲ ತರಗತಿಯಲ್ಲಿ ಪಾಠ ಮಾಡುವ ಬೋಧಕರಾಗದೆ ಪ್ರತಿಯೊಂದು ಹೆಜ್ಜೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ದಾರಿದೀಪವಾಗಿದ್ದೀರಿ. ವಿಷಯ ಎಷ್ಟು ಕಠಿಣವಾಗಿದ್ದರೂ ಅದನ್ನು ಅತ್ಯಂತ ಸರಳವಾಗಿ ಮತ್ತು ಸ್ವಾರಸ್ಯಕರವಾಗಿ ಅರ್ಥೈಸುವ ಕಲೆ ನಿಮ್ಮಲ್ಲಿದೆ. ನಿಮ್ಮ ತರಗತಿಯಲ್ಲಿ ಕುಳಿತುಕೊಳ್ಳುವುದೇ ಒಂದು ಸುಂದರ ಅನುಭವ.
         ತರಗತಿಯಲ್ಲಿ ನೀವು ಎಲ್ಲರ ನಡುವೆ ನನ್ನ ಹೆಸರು ಕರೆದಾಗ ನನ್ನ ಹೃದಯ ಬಡಿತ ನನಗೆ ಕೇಳಿಸುವಷ್ಟು ಜೋರಾಗಿತ್ತು. ನನ್ನ ತಪ್ಪುಗಳನ್ನು ತಿದ್ದುವಾಗ ನಿಮ್ಮ ಧ್ವನಿಯಲ್ಲಿದ್ದ ಆ ಪ್ರೀತಿ ಮತ್ತು ಕಾಳಜಿ ಅಮ್ಮನ ಮಮತೆಯಂತೇ. ಗುರುವಾಗಿ ನೀವು ನೀಡಿದ ಬೆಳಕು, ಪ್ರೀತಿಯಾಗಿ ನನ್ನ ಎದೆಯೊಳಗೆ ಸದಾ ಜೀವಂತ ವಾಗಿರುತ್ತದೆ. ನಾನು ಎಷ್ಟೇ ಬೆಳೆದರೂ ನಿಮ್ಮ ಪಾದಗಳಿಗೆ ನಮಿಸುವ ಆ ಕ್ಷಣವೇ ನನಗೆ ಅತ್ಯಂತ ಪವಿತ್ರವಾದದ್ದು.
        𝗕𝗘𝗦𝗧 𝗧𝗘𝗔𝗖𝗛𝗘𝗥 ಅವರಷ್ಟೇ ಅಲ್ಲ ಶಾಲೆಯ ಎಲ್ಲಾ ಅಧ್ಯಾಪಕರೂ "𝗯𝗲𝘀𝘁 𝘁𝗲𝗮𝗰𝗵𝗲𝗿"ಗಳೇ.. ನನ್ನ ಜೀವನವನ್ನು ಸುಂದರ ಗೊಳಿಸಿದ ನನ್ನ ಪ್ರೀತಿಯ ಎಲ್ಲ ಮಾತಾಜಿಗಳಿಗೆ ಶ್ರೀಮಾನ್ ರವರಿಗೆ ನನ್ನ ಹೃದಯಾಂತರಾಳದ ಪ್ರಣಾಮಗಳು..
...................................................... ತೃಪ್ತಿ 
10 ನೇ ತರಗತಿ 
ಶ್ರೀ ರಾಮ ಪ್ರೌಢ ಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************



 

ನಮ್ಮ ಜೀವನದಲ್ಲಿ ಅನೇಕ ಶಿಕ್ಷಕರನ್ನು ಕಾಣುತ್ತೇವೆ, ಆದರೆ ಜೀವನಕ್ಕೆ ಹೊಸ ದಿಕ್ಕನ್ನು ತೋರಿಸಿದವರು ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎನ್ನುವುದಕ್ಕೆ ಉದಾಹರಣೆ ನನಗೆ ಸೈನ್ಸ್ ಸರ್ ಶರತ್ ಸರ್ .
         ಶರತ್ ಸರ್ ಸೈನ್ಸ್ ಪಾಠವನ್ನು ಪುಸ್ತಕದಂತೆ ಅಲ್ಲ ಪ್ರಯೋಗದಂತೆ, ಕಥೆಯಂತೆ ಹೇಳಿಕೊಡುತ್ತಾರೆ ಅವರ ಕ್ಲಾಸ್ ಅಂದರೆ ಬೋರ್ ಆಗಲ್ಲ. ನಮಗೆ ಅರ್ಥವಾಗುವವರೆಗೂ ತಾಳ್ಮೆಯಿಂದ ಹೇಳಿಕೊಡುತ್ತಾರೆ. ಕೇವಲ ಸೈನ್ಸ್ ಅಲ್ಲ ಜೀವನದಲ್ಲಿ ಹೇಗೆ ಯೋಚಿಸಬೇಕು ಹೇಗೆ ಪ್ರಶ್ನಿಸಬೇಕು ಎಂದು ಕಳಿಸಿದ್ದಾರೆ. ಎಲ್ಲಾ ಶಿಕ್ಷಕರಿಗೆ ಪ್ರೀತಿಯ ಶುಭಾಶಯಗಳು.
............................................... ಶಾಹಿನ ಭಾನು
9ನೇ ತರಗತಿ
ಸರಕಾರಿ ಫ್ರೌಡ ಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************


   

ನನ್ನ ಪ್ರೀತಿಯ ಸುಜಯಶ್ರೀ ಮಿಸ್ ಅವರು ಕಳೆದ 4 ವರ್ಷಗಳಿಂದ ನಮಗೆ ಇಂಗ್ಲಿಷ್ ಪಾಠವನ್ನು ತುಂಬಾ ಚೆನ್ನಾಗಿ ಭೋದಿಸುತಿದ್ದಾರೆ. ನನಗೆ ಮೊದಲು ಇಂಗ್ಲಿಷ್ ಮಾತನಾಡಲು ಸರಿಯಾಗಿ ಬರುತ್ತಿರಲಿಲ್ಲ. ಆದರೆ ಮಿಸ್ ಅವರು ನನಗೆ ಇಂಗ್ಲಿಷ್ ಮಾತನಾಡಲು ಕಲಿಸಿ, ಧೈರ್ಯದಿಂದ ಮಾತನಾಡುವಂತೆ ಪ್ರೋತ್ಸಾಹಿಸಿದರು. ನನ್ನ ತಪ್ಪುಗಳನ್ನು ತಿದ್ದಿ, ಸರಿಯಾಗಿ ಮಾತನಾಡಲು ಮತ್ತು ಬರೆಯಲು ಸಹಾಯ ಮಾಡಿದರು. ಅವರು ಪ್ರತಿಯೊಂದು ಪಾಠವನ್ನು ಸರಳವಾಗಿ ಮತ್ತು ಅರ್ಥವಾಗುವಂತೆ ಕಲಿಸುತ್ತಾರೆ. ಅವರಿಂದ ನಾನು ಇಂಗ್ಲಿಷ್ ಮಾತ್ರವಲ್ಲದೆ ಆತ್ಮವಿಶ್ವಾಸದಿಂದ ಮಾತನಾಡುವುದನ್ನು ಕಲಿತಿದ್ದೇನೆ. ಸುಜಯಶ್ರೀ ಮಿಸ್ ನನ್ನ ನೆಚ್ಚಿನ ಶಿಕ್ಷಕಿ. ಅವರಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು 
ಹಾಗೂ ನನ್ನ ಜೀವನಕ್ಕೆ ಜ್ಞಾನ, ಸಂಸ್ಕಾರ ಮತ್ತು ಉತ್ತಮ ದಾರಿಯನ್ನು ತೋರಿಸುವ ಎಲ್ಲಾ ಗೌರವಾನ್ವಿತ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ನಮಗೆ ಪ್ರೀತಿಯಿಂದ ಕಲಿಸಿ, ತಪ್ಪುಗಳನ್ನು ತಿದ್ದಿ, ಮುಂದೆ ಸಾಗಲು ಪ್ರೋತ್ಸಾಹಿಸುವ ಪ್ರತಿಯೊಬ್ಬ ಗುರುಗಳಿಗೂ ಹೃತ್ಪೂರ್ವಕ ಧನ್ಯವಾದಗಳು. ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 
............................................... ಇಶಿಕ. ಟಿ 
4ನೇ ತರಗತಿ ಕೆ ಪಿ ಎಸ್ ಬೆಳ್ಳಾರೆ 
D/o ಮುರಳಿಕೃಷ್ಣ. ಟಿ
ತಡಗಜೆ, ಬೆಳ್ಳಾರೆ  
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
**************************************




         

ನನ್ನ ನೆಚ್ಚಿನ ಶಿಕ್ಷಕ ಸಂತೋಷ ಸರ್. ಅವರು ನನಗೆ ತುಂಬಾ ಇಷ್ಟವಾದ ಶಿಕ್ಷಕರು. ಅವರು ಪಾಠವನ್ನು ಸರಳವಾಗಿ ಮತ್ತು ಅರ್ಥವಾಗುವಂತೆ ಬೋಧಿಸುತ್ತಾರೆ. ಅವರು ನಮಗೆ ಸಮಾಜ ವಿಜ್ಞಾನವನ್ನು ಬೋಧಿಸುತ್ತಾರೆ. ಅವರು ವಿದ್ಯಾರ್ಥಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ ಮತ್ತು ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಅವರು ನಮಗೆ ಪಾಠದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ನಮಗೆ ಕೇವಲ ಪಾಠಗಳನ್ನು ಕಲಿಸುವುದಿಲ್ಲ. ಜೀವನದಲ್ಲಿ ಹೇಗೆ ಸಾಗಬೇಕು, ಒಳ್ಳೆಯ ವ್ಯಕ್ತಿಯಾಗಬೇಕು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತಾರೆ. ಅವರ ಪರಿಶ್ರಮ ಮತ್ತು ತ್ಯಾಗವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ನೆಚ್ಚಿನ ಸಂತೋಷ್ ಸರ್ ಅವರು ನನಗೆ ಸದಾ ಪ್ರೇರಣೆಯಾಗಿದ್ದಾರೆ.
............................................... ಐಶ್ವರ್ಯ 
ಜಿ ಪಿ ಯು ಸಿ ತೆಕ್ಕಟ್ಟೆ
ಪೂಜಾರಿ ಬೆಟ್ಟು ಕುಂಭಾಶಿ
ಉಡುಪಿ ಜಿಲ್ಲೆ 
**************************************




ಎಲ್ಲರಿಗೂ ಶುಭೋದಯ ನನ್ನ ಹೆಸರು ಸಿಂಚನಾ ನಾನು 9 ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ಜೀವನದ ಪ್ರತಿಘಟ್ಟದಲ್ಲೂ ಕೂಡ ನಾನು ಅನೇಕ ಶಿಕ್ಷಕರನ್ನು ಕಂಡಿದ್ದೇನೆ ಆದರೆ ಜೀವನಕ್ಕೆ ಹೊಸ ದಿಕ್ಕನ್ನು ತೋಚಿದವರು ಮತ್ತು ಸ್ಪೂರ್ತಿ ಯಾದವರು ನನ್ನ ಹೃದಯದಲ್ಲಿ ಉಳಿದಿದ್ದಾರೆ ಅವರು ಯಾರೆಂದರೆ ಶಾಂತಲಾ ಮಾಮ್. 

ಕಳೆದ ಎರಡು ವರ್ಷಗಳಿಂದ ನನ್ನ ತರಗತಿ ಶಿಕ್ಷಕರಾಗಿದ್ದಾರೆ. ಇವರು ನನಗೆ ಎಂಟನೇ ತರಗತಿಯಲ್ಲಿ ಗಣಿತ ಪಾಠವನ್ನು ಮಾಡುತ್ತಿದ್ದರು. ಈಗ ಒಂಬತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ಪಾಠವನ್ನು ಮಾಡುತ್ತಿದ್ದಾರೆ. ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ. ಇವರು ಹತ್ತನೇ ತರಗತಿಯಲ್ಲಿ ನಮಗೆ ತರಗತಿ ಶಿಕ್ಷಕರಾಗಿ ಬರಲಿ ಎಂದು ನಮ್ಮ ಆಸೆ. ಗೊತ್ತಿಲ್ಲದ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಸುತ್ತಾರೆ. ಇವರು ನನ್ನ ಬೆಸ್ಟ್ ಟೀಚರ್. ಅವರು ನಮಗೆ ಪಾಠ ಮಾಡುವುದಲ್ಲದೆ ಬದುಕು ಹೇಗಿರಬೇಕೆಂದು ಹೇಳಿಕೊಡುತ್ತಾರೆ. ಅವರ ಪಾಠ ನಮಗೆ ಹಬ್ಬವಿದ್ದಂತೆ. ಅವರು ನಗುನಗುತ್ತಾ ಅವರ ಪಾಠವನ್ನು ಮಾಡುತ್ತಾರೆ. ನಾನು ಕುಗ್ಗಿದಾಗ ನಿನ್ನಿಂದ ಸಾಧ್ಯ ಎಂದು ಆತ್ಮವಿಶ್ವಾಸ ತುಂಬಿದ್ದಾರೆ. 
................................................... ಸಿಂಚನಾ 
9 ನೇ ತರಗತಿ
ಫಿರುವಾಯಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************




Ads on article

Advertise in articles 1

advertising articles 2

Advertise under the article