-->
ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01, ಶಿಕ್ಷಕರ ದಿನಾಚರಣೆ- ಜಗಲಿಯ ಹಿರಿಯರ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01, ಶಿಕ್ಷಕರ ದಿನಾಚರಣೆ- ಜಗಲಿಯ ಹಿರಿಯರ ಬರಹಗಳು

ನನ್ನ ಬೆಸ್ಟ್ ಟೀಚರ್ : ಸಂಚಿಕೆ - 01
ಸೆಪ್ಟೆಂಬರ್ - 5 : ಶಿಕ್ಷಕರ ದಿನಾಚರಣೆ - 2026
ಜಗಲಿಯ ಹಿರಿಯರ ಬರಹಗಳು

ಬರಹಗಾರರು : 
◾ ಚಿತ್ರಾಶ್ರೀ ಕೆ ಎಸ್, ಸಹಶಿಕ್ಷಕರು, ಬಡಗಎಕ್ಕಾರು
◾ ರವಿ ಎಸ್ ಎಂ ಕುಕ್ಕಾಜೆ , ಮಾಣಿಲ
◾ ಸುಶೀಲಾ ಕೆಂಚನೂರು, ಶಿಕ್ಷಕಿ, ಅಂಪಾರು,
◾ ದಿವ್ಯಾನಂದ, ಸಜೀಪ ಮೂಡ 
◾ ಆರ್ ಪ್ರಸನ್ನ ಕುಮಾರ ಅವಿನಹಳ್ಳಿ, ಸಾಗರ 
◾ ವಿನೀತ್ ಶೆಟ್ಟಿ, ಹೊಸಬೆಟ್ಟು, ಮಂಗಳೂರು 
◾ ಕೀರ್ತಿ ಪುಂಚಪ್ಪಾಡಿ, ಸವಣೂರು,

              

ನನಗೆ ಅಪ್ಪಾಜಿಯೊಳಗೇ ಒಬ್ಬ ಗುರುವಿದ್ದಿದ್ದು ಅರಿವಿಗೆ ಬಂದಿದ್ದು ನಾನು ಹತ್ತನೇ ತರಗತಿಯಲ್ಲಿ ಅನಾರೋಗ್ಯದಿಂದ ಶಾಲೆಗೆ ಮೂರು ತಿಂಗಳ ರಜೆ ಹಾಕುವ ಪರಿಸ್ಥಿತಿ ಬಂದಾಗ. ಅಂತಿಮ ಪರೀಕ್ಷೆ ಕೈಯ್ಯಳತೆಯ ದೂರದಲ್ಲಿತ್ತು. ಶಾಲೆಗೆ ಹೋಗಿ ಶಿಕ್ಷಕರಿಂದ, ಸಹಪಾಠಿಗಳ ಸಹಾಯದಿಂದ ಕಲಿಯುವ ಮನಸಿದ್ದರೂ ಅಲ್ಲಿದ್ದು ಕಲಿಯುವ ಅವಕಾಶ ನನಗೆ ದೂರವೇ ಉಳಿದಿತ್ತು. ನನ್ನ ತಂದೆ ತರೀಕೆರೆಯಲ್ಲಿ ದೂರ ಸಂಪರ್ಕ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದವರು ಶೃಂಗೇರಿ ಸಮೀಪದ ಹಳ್ಳಿಯಲ್ಲಿದ್ದ ಮನೆಗೆ ವಾರಕ್ಕೊಮ್ಮೆ ಬರುತ್ತಿದ್ದರು. ಅವರು ನನ್ನ ಪರಿಸ್ಥಿತಿ ಅರಿತು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಸರಳವಾಗಿ ಕಲಿಯಲು ಹಲವು ಆಕರ್ಷಕ ಚಾರ್ಟ್ಗಳನ್ನು ತಯಾರಿಸಿ ಕೊಟ್ಟರು. ಸುಲಭವಾಗಿ ನಾನೇ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಓದಿಕೊಳ್ಳುವಂತೆ ಅವುಗಳಲ್ಲಿ ಆಸಕ್ತಿ ಬಾಲ್ಯದಿಂದಲೇ ಬೆಳೆಸಿದ್ದ ಕಾರಣ ಅವುಗಳ ಬಗ್ಗೆ ಚಿಂತೆ ಇರಲಿಲ್ಲ. ನನಗಾಗಿ ಅವರು ಅಂದು ಪಟ್ಟ ಶ್ರಮ ನನ್ನೊಳಗೆ ಕಲಿಕೆಯನ್ನು ಸುಲಭ ಮತ್ತು ಸರಳ ತಂತ್ರಗಳ ಮೂಲಕ ಬೋಧಿಸುವ ಆಸೆ ತುಂಬಿ ಶಿಕ್ಷಕಿಯ ಹುದ್ದೆಯನ್ನೇ ಆರಿಸಿಕೊಳ್ಳಲು ಪ್ರೇರಣೆಯಾಯ್ತು.

ಬಾಲ್ಯದಿಂದ ಎಂದಿಗೂ ‘ಓದು’ ಎಂಬುದನ್ನು ಕಿವಿಗೆ ಹಾಕದೇ ಹೃದಯಕ್ಕೆ ಬಸಿದು ಕೊಟ್ಟಿದ್ದರಿಂದಲೇ ಪಠ್ಯ ಮತ್ತು ಪಠ್ಯೇತರ ಓದು ಒತ್ತಡವಾಗದೇ ಆಪ್ತ ಹವ್ಯಾಸವಾಗಿ ಬೆಳೆದುಬಿಟ್ಟಿತು. ಅದಕ್ಕಾಗಿ ಅಪ್ಪಾಜಿ ವಿಶೇಷ ಪ್ರಯತ್ನಪಡಲಿಲ್ಲ. ಅವರು ನನ್ನೊಂದಿಗೆ ಇದ್ದಾಗ ಮನೆಯಲ್ಲಿ ಅವರು ಸಂಗ್ರಹಿಸಿ ಇಟ್ಟಿದ್ದ ಸಾವಿರಾರು ಪುಸ್ತಕಗಳಲ್ಲಿ ಯಾವುದಾದರೂ ಒಂದನ್ನು ಹಿಡಿದು ಅದರ ಓದಿನಲ್ಲಿ ಮುಳುಗಿರುತ್ತಿದ್ದ ಅವರನ್ನು ನೋಡುವಾಗ ‘ಓದುವುದು ಇಷ್ಟೆಲ್ಲಾ ಖುಷಿ ಕೊಡುತ್ತದೆಯೇ?’ ಎಂಬ ಕುತೂಹಲದಿಂದ ಓದಲು ಆರಂಭಿಸಿದ ನನಗೆ ಕುಳಿತಲ್ಲಿಯೇ ಪ್ರಪಂಚ ಸುತ್ತಿದ ಅನುಭವ ಕೊಡುವ ಪುಸ್ತಕಗಳು ಆಪ್ತ ಸ್ನೇಹಿತರ ಸ್ಥಾನ ತುಂಬಿದವು. ರಾತ್ರಿ ನನಗೆ ಕಣ್ಣೆಳೆಯುವಾಗ ಹಾಸಿಗೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತು ಕನ್ನಡ ಮಾಧ್ಯಮದಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ನನಗೆ ಓದಲು ಕಷ್ಟವಾಗುತ್ತಿದ್ದ ಆದರೆ ಸ್ವಾರಸ್ಯಕರವಾಗಿದ್ದ ಇಂಗ್ಲಿಷ್ ಕಥೆಗಳನ್ನು ಅವರು ಓದಿ ಹೇಳುತ್ತಿದ್ದರು. ಅರೆ ನಿದ್ರೆಯಲ್ಲಿ ಕೇಳಿದರೊ ಅವರ ಉಚ್ಚಾರಣೆ, ವೇಗ ಮತ್ತು ನಿರೂಪಣೆಯ ಶೈಲಿಯಿಂದ ನನ್ನ ನಿದ್ರೆ ಹಾರಿಹೋಗಿ ಎದ್ದು ಕುಳಿತು ಕಥೆ ಕೇಳುತ್ತಿದ್ದೆ.

ಬೆಳಿಗ್ಗೆ ನಮ್ಮ ಮನೆಯಲ್ಲಿ ನಿದ್ರೆಯಿಂದ ಎಬ್ಬಿಸುವ ಕ್ರಮವೂ ವಿಶೇಷದ್ದೇ. ರೇಡಿಯೋ ಕೇಳುವ ಹವ್ಯಾಸವಿದ್ದ ಅಪ್ಪಾಜಿ ಅದನ್ನು ಸ್ವಲ್ಪ ಜೋರಾಗಿಯೇ ಕೇಳುವಂತೆ ಇರಿಸುತ್ತಿದ್ದರು.. ಎಷ್ಟೋ ಉಪಯುಕ್ತ ವಿಚಾರಗಳು ಮತ್ತು ಹೊಸ ಶಬ್ದಗಳಿಂದ ನಮ್ಮ ದಿನ ಆರಂಭವಾಗುತ್ತಿತ್ತು. ರೇಡಿಯೋ ಕೇಳುತ್ತಲೇ ಮಾತಿನ ಲಯ, ಓಘ, ಹೊಸ ಶಬ್ದಗಳ ಬಳಕೆ ಮತ್ತು ಏಕತಾನತೆ ಮೀರಿ ನಿಲ್ಲುವ ಮಾತುಗಳು ನನಗೆ ಗೊತ್ತಿಲ್ಲದೇ ಅಂತರ್ಗತವಾಗಿಬಿಟ್ಟವು. ಕನ್ನಡ ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳನ್ನು ಕೇಳುತ್ತಾ ಜಗತ್ತಿನ ವಿಷಯಗಳ ಬಗ್ಗೆ ಚರ್ಚೆ, ಈ ನಾಲ್ಕು ಭಾಷೆಗಳ ಸಮಾನಾರ್ಥಕ ಪದಗಳ ಬಳಕೆ, ಓದಿನ ವೇಗ, ಪ್ರತಿಯೊಂದಕ್ಕೂ ಇರುವ ವಿಶೇಷತೆಗಳ ಬಗ್ಗೆ ಸಣ್ಣದೊಂದು ಚರ್ಚೆಯೂ ಸೇರಿ ಬೆಳಗು ಅಪೂರ್ವ ಅವಕಾಶವಾಗುತ್ತಿತ್ತು. 

ಮುಂದೆ ವೇದಗಳಿಂದ ಆರಂಭಿಸಿ ಆಧುನಿಕ ವಿಜ್ಞಾನದವರೆಗೆ, ಹಳೆಗನ್ನಡದಿಂದ ಅಂತರಿಕ್ಷದವರೆಗೆ ಯಾವ ವಿಷಯದ ಬಗ್ಗೆ ಬೇಕಿದ್ದರೂ ಅಪಾರ ಜ್ಞಾನ ಧಾರೆ ಎರೆಯುವ ಸಾಮರ್ಥ್ಯದ ಈ ತಂದೆ ನನಗೆ ದೇವರೇ ನೀಡಿದ ವರ ಎಂದು ಅರ್ಥವಾಗಲು ಆರಂಭಿಸಿದ ನಂತರ ನಾನು ಅವರೊಂದಿಗೆ ಚರ್ಚಿಸಿದ ವಿಷಯಗಳಿಗೆ ಲೆಕ್ಕವೇ ಇಲ್ಲ! ನಕ್ಷತ್ರದ ಹೆಸರನ್ನು ನನಗಿಟ್ಟ ಅಪ್ಪಾಜಿ ಅವುಗಳನ್ನು ಆಕಾಶದಲ್ಲಿ ಗುರುತಿಸುವುದನ್ನೂ ಬಾಲ್ಯದಲ್ಲೇ ಕಲಿಸಿದ್ದರು. ಇಂದಿಗೂ ನನ್ನ ಮೊದಲ ಮತ್ತು ಪ್ರಧಾನ ಗುರು ಅಪ್ಪಾಜಿಯೇ. 

ನಾನು ಪದವಿಯಲ್ಲಿ ಗಳಿಸಿದ ಟಿ. ಎಂ. ಎ. ಪೈ ಚಿನ್ನದ ಪದಕ ಅವರ ಕೊರಳಿಗೇರಿದ ದಿನ ನನಗಾದ ಸಂತೋಷ ಬೆಲೆ ಕಟ್ಟಲಾಗದ್ದು. ಕಾರಣವಿಷ್ಟೇ - ಅವರಿಗಿರುವ ಜ್ಞಾನಕ್ಕೆ ನೂರಾರು ಪದವಿ ಗಳಿಸಿ , ಸಂಶೋಧನಾ ಪ್ರಬಂಧ ಮಂಡಿಸಿ ಸೈ ಅನ್ನಿಸಿಕೊಳ್ಳುವ ಸಾಮರ್ಥ್ಯವಿದ್ದರೂ ಬಹಳ ಸಣ್ಣ ವಯಸಿನಲ್ಲೇ ಅವರ ತಂದೆಯವರ ದೇಹಾಂತ್ಯವಾದ ಕಾರಣ ಉದ್ಯೋಗ ಗಳಿಸಿ ಮನೆಯನ್ನು ಮುನ್ನಡೆಸುವ ಕಾರ್ಯಕ್ಕೆ ಹೆಗಲು ಕೊಡಬೇಕಾದ ಅನಿವಾರ್ಯತೆಯಿಂದ ಅವರು ಪದವಿಯನ್ನು ಎರಡನೇ ವರ್ಷದಲ್ಲಿ ತೊರೆದಿದ್ದರು. ಮುಂದೆ ನನ್ನ ತಂಗಿ ಅವರನ್ನು ಕಾಡುತ್ತಿದ್ದ ಸಂಶೋಧನಾ ಪ್ರಬಂಧ ರಚನೆಯ ಕೊರತೆಯನ್ನು ಮೀರಿ ಡಾ. ಚಂದನಾ ಕೆ. ಎಸ್. ಎನಿಸಿಕೊಂಡ ದಿನ ನನಗೆ ಅಪ್ಪಾಜಿಗೆ ನಾವು ಮಕ್ಕಳಿಬ್ಬರು ಕೊಡಬಹುದಾದ ಗುರುದಕ್ಷಿಣೆಯಲ್ಲಿ ತಿಲಮಾತ್ರವಾದರೂ ಸಂದಾಯ ಮಾಡಿದ ಸಣ್ಣ ತೃಪ್ತಿ ಸಿಕ್ಕಿದ್ದು. ಅವರ ಆಶಯದಂತೆ ನಾವಿಬ್ಬರೂ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುತ್ತಿದ್ದೇವೆ. ಅವರೂ ( ಶ್ರೀ ಕೃಷ್ಣ ಕೆ. ವಿ., ನಿವೃತ್ತ BSNL ಸೂಪರ್ವೈಸರ್) ನಿವೃತ್ತಿಯ ನಂತರ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ - ಪ್ರಾಥಮಿಕ ಶಾಲೆಗಳಲ್ಲಿ ಪಠ್ಯಾಧಾರಿತ ಕಾವ್ಯ ವಾಚನ ಮತ್ತು ಬೋಧನೆ ಮಾಡುತ್ತಾ ನಿರಂತರ ಜ್ಞಾನದ ಆನಂದವನ್ನು ಹಂಚುತ್ತಿದ್ದಾರೆ.
...................................... ಚಿತ್ರಾಶ್ರೀ ಕೆ ಎಸ್
ಸಹಶಿಕ್ಷಕರು (ಕಲಾ)
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94499 46810
**************************************



“ಗುರು ಎಂದರೆ ಕೇವಲ ಪಾಠ ಕಲಿಸುವವರಲ್ಲ;
ಕತ್ತಲೆಯ ದಾರಿಯಲ್ಲಿ ಬೆಳಕಾಗಿ,
ನಮ್ಮೊಳಗಿನ ಬೆಳಕನ್ನು ನಮಗೇ ಪರಿಚಯಿಸುವವರು.”

ಸುಮಾರು 25 ವರ್ಷಗಳ ಹಿಂದಿನ ನನ್ನ ಶಾಲಾ ಜೀವನದ ನೆನಪುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಆ ನೆನಪುಗಳ ನಡುವೆ ಪ್ರೀತಿಯಿಂದ ನೆನಪಾಗುವ ಒಂದು ಮಹಾನ್ ಮಾತೃತ್ವದ ವ್ಯಕ್ತಿತ್ವವೆಂದರೆ ದೇವಕಿ ಟೀಚರ್.

ಆ ದಿನಗಳಲ್ಲಿ ನನ್ನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಸರಿಯಾದ ಡ್ರೆಸ್ ಇರಲಿಲ್ಲ, ಬರೆಯಲು ಪುಸ್ತಕ–ಪೆನ್ನುಗಳೂ ಇರಲಿಲ್ಲ. ಶಾಲೆಯಲ್ಲಿರುವ ಮಕ್ಕಳೆಲ್ಲರೂ ಮಧ್ಯಾಹ್ನದ ಊಟ ಮಾಡುತ್ತಿದ್ದಾಗ, ಕೆಲವೊಮ್ಮೆ ನಾನು ಮಾತ್ರ ಊಟವಿಲ್ಲದೆ ಕುಳಿತುಕೊಳ್ಳುತ್ತಿದ್ದೆ. ನನ್ನ ಪರಿಸ್ಥಿತಿಯನ್ನು ನೋಡಿ ಕೆಲವರು ಕೀಳಾಗಿ ನೋಡುತ್ತಿದ್ದರು. ಪ್ರತಿದಿನವೂ ಒಂದಲ್ಲ ಒಂದು ರೀತಿಯ ನೋವು, ಅವಮಾನ ಮತ್ತು ಕೊರತೆಯನ್ನು ಅನುಭವಿಸುತ್ತಿದ್ದ ದಿನಗಳು ಹೆಚ್ಚು. ಆದರೆ ಆ ಕಷ್ಟಗಳ ನಡುವೆ ದೇವಕಿ ಟೀಚರ್ ನನ್ನನ್ನು ಒಂದು ಉತ್ತಮ ವಿದ್ಯಾರ್ಥಿಯಾಗಿ ಕಂಡರು. ನನ್ನ ಪರಿಸ್ಥಿತಿಯನ್ನು ಅಲ್ಲ. ನನ್ನನ್ನು ಕರುಣೆಯಿಂದಲ್ಲ, ಪ್ರೀತಿಯಿಂದ ಮತ್ತು ಪ್ರೋತ್ಸಾಹದಿಂದ ನೋಡಿದರು. ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. “ನೀನು ಕೂಡ ಉತ್ತಮ ವಿದ್ಯಾರ್ಥಿ ನಿನ್ನಿಂದ ಸಾಧಿಸಬಹುದಾದದ್ದು ಅನೇಕ” ಎಂಬ ನಂಬಿಕೆಯನ್ನು ನನ್ನೊಳಗೆ ಬೆಳೆಸಿದರು.

ಅವರ ಮಾರ್ಗದರ್ಶನ, ಪ್ರೀತಿ ಮತ್ತು ಪ್ರೋತ್ಸಾಹವೇ ನನ್ನನ್ನು ಒಬ್ಬ ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಿತು. ನಾನು ಕಲಿತು ದೊಡ್ಡ ವಿದ್ಯಾವಂತನಾಗದಿದ್ದರೂ ಸಮಾಜದಲ್ಲಿ ಒಂದು ವ್ಯಕ್ತಿಯಾಗಿರುವುದಕ್ಕೆ ಗುರುಗಳ ಸಾಲಿನಲ್ಲಿ ನೀವು ಹೇಳಿಕೊಟ್ಟ ಸ್ಪೂರ್ತಿಯ ಮಾತಿನ ಒಂದು ಹೆಜ್ಜೆ ಕಾರಣ.

ಜೀವನದಲ್ಲಿ ಒಬ್ಬ ಶಿಕ್ಷಕ ಕೇವಲ ಪಾಠವನ್ನು ಕಲಿಸುವುದಿಲ್ಲ ಕೆಲವೊಮ್ಮೆ ಒಬ್ಬ ವಿದ್ಯಾರ್ಥಿಯ ಇಡೀ ಜೀವನದ ದಿಕ್ಕನ್ನೇ ಬದಲಿಸುತ್ತಾನೆ. ನನ್ನ ಪಾಲಿಗೆ ಅಂತಹ ಶಿಕ್ಷಕಿ ದೇವಕಿ ಟೀಚರ್.

ದೇವಕಿ ಟೀಚರ್, ತಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಮತ್ತು ಹೃದಯಪೂರ್ವಕ ಧನ್ಯವಾದಗಳು.
........................................... ರವಿ ಎಸ್ ಎಂ 
ಕುಕ್ಕಾಜೆ , ಮಾಣಿಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : 9946573285
**************************************




ನನ್ನ ಮೊದಲ ಗುರು ಶ್ರೀ ಸೌಕೂರು ಮಹಾಬಲ ಅಡಿಗರು. ಗುರುವೆಂಬ ಪದಕ್ಕೆ ಅನ್ವರ್ಥನಾಮ, ಶಿಕ್ಷಕಿಯಾಗಬೇಕೆಂಬ ನನ್ನ ಕನಸಿಗೆ ಸ್ಪೂರ್ತಿ, ನನ್ನ ಶೈಕ್ಷಣಿಕ ಬದುಕಿನ ತಳಹದಿ. ಪಾಠದ ಜೊತೆ ಭಜನೆ, ಕಥೆ, ಗ್ರಂಥಾಲಯದ ಪುಸ್ತಕಗಳ ಓದು ಇತ್ಯಾದಿಗಳ ಮೂಲಕ ಕಲಿಯಲು ಕಲಿಸುವುದೇ ಶಿಕ್ಷಕನ ಆದ್ಯ ಕರ್ತವ್ಯ ಎಂದು ತೋರಿಸಿದವರು. ಶೈಕ್ಷಣಿಕ ಮಾರ್ಗದರ್ಶನದ ಜೊತೆ ಆರ್ಥಿಕ ಸಹಾಯವನ್ನು ಮಾಡುತ್ತಾ ತೀರಿಸಲಾಗದ ಋಣವನ್ನು ಹೊರಿಸಿದವರು. ಅವತ್ತಿನ ಕಾಲದಲ್ಲಿ ಶಾಲಾ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿಸಿದವರು, ಓದಿನ ಹವ್ಯಾಸವನ್ನು ಬೆಳೆಸಿದವರು, ಓದನ್ನೇ ಬೆಳಕಾಗಿಸಿದವರು. 

ಈಗಲೂ ಮಕ್ಕಳಿಗೆ ಪುಸ್ತಕದ ಉಡುಗೊರೆ ನೀಡಲು ನನಗೆ ಅವರೇ ಆದರ್ಶ. ತಮ್ಮ ಬದುಕಿನ ಕೊನೆಯ ದಿನಗಳ ತನಕ ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ನನಗೆ ಓದಲು ಕೊಟ್ಟು ಸಂತೋಷಪಡುತ್ತಿದ್ದ ಅವರ ಆ ಪ್ರೀತಿಗೆ ಮಿತಿ ಇಲ್ಲ. ನನ್ನ ಬದುಕಿಗೆ ಬಲ ನೀಡಿದ ಮಹಾ ಗುರುವೇ ಶ್ರೀಯುತರು. ಎಂದೆಂದಿಗೂ ನನ್ನ ಶೈಕ್ಷಣಿಕ ಬದುಕಿನಲ್ಲಿ ಅವರ ಆದರ್ಶಗಳನ್ನು ಪಾಲಿಸುತ್ತಾ ಬಂದಿದ್ದೇನೆ. ಇಂದು ಅವರಿಲ್ಲದಿದ್ದರೂ ಅವರ ಪ್ರೀತಿಪೂರ್ವಕ ಹಾರೈಕೆ, ಅವರು ರೂಢಿಸಿದ ಆದರ್ಶಗಳು ನನ್ನನ್ನು ಸದಾ ಕಾಪಾಡುತ್ತಿವೆ.
................................... ಸುಶೀಲಾ ಕೆಂಚನೂರು
ಶಿಕ್ಷಕಿ, ಅಂಪಾರು, ಕುಂದಾಪುರ.
ಉಡುಪಿ ಜಿಲ್ಲೆ
ಮೊ : 90088 90917
**************************************


         

ನನ್ನ ಜೀವನದಲ್ಲಿ ಅನೇಕ ಶಿಕ್ಷಕರು ಬಂದಿದ್ದಾರೆ. ಆದರೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದವರು ಕ್ಲಾರಾ ಟೀಚರ್ ಮಾತ್ರ.

ಇನ್ ಫ್ಯಾಂಟ್ ಜೀಸಸ್ ಸ್ಕೂಲ್ ಮೊಡಂಕಾಪು ಇಲ್ಲಿ 1996-1997 ನೇ ಸಾಲಿನಲ್ಲಿ ಕಲಿಯುತ್ತಿದ್ದೆ. ಆಗ ನೀವು ನನಗೆ ಕೇವಲ ಪುಸ್ತಕದ ಪಾಠಗಳನ್ನು ಕಲಿಸಲಿಲ್ಲ. ಜೀವನವನ್ನು ಹೇಗೆ ಎದುರಿಸಬೇಕು, ತಪ್ಪುಗಳಿಂದ ಹೇಗೆ ಕಲಿಯಬೇಕು, ಮತ್ತು ಎಂದಿಗೂ ಸೋಲಬಾರದು ಎಂಬುದನ್ನೂ ಕಲಿಸಿದ್ದೀರಿ. ನಾನು ಕುಗ್ಗಿದಾಗ ಧೈರ್ಯ ತುಂಬಿದ್ದೀರಿ. ನಾನು ತಪ್ಪು ಮಾಡಿದಾಗ ಸರಿದಾರಿಗೆ ತಂದಿದ್ದೀರಿ. ನನ್ನ ಮೇಲೆ ನನಗೆ ನಂಬಿಕೆ ಇಲ್ಲದಾಗಲೂ ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ನನ್ನ ಜೀವನದಲ್ಲಿ ನಿಮ್ಮಂತಹ ಒಬ್ಬ ಶಿಕ್ಷಕರು ಸಿಕ್ಕಿದ್ದು ನನ್ನ ಅದೃಷ್ಟ. ನಿಮ್ಮ ಮಾತುಗಳು, ನಿಮ್ಮ ಪ್ರೀತಿ, ನಿಮ್ಮ ಕಾಳಜಿ ಮತ್ತು ನೀವು ಕಲಿಸಿದ ಪ್ರತಿಯೊಂದು ಪಾಠವೂ ನನ್ನ ಹೃದಯದಲ್ಲಿ ಸದಾ ಉಳಿಯುತ್ತದೆ. 

ಕಾಲ ಬದಲಾಗಬಹುದು, ಶಾಲೆ ಮುಗಿಯಬಹುದು,
ಆದರೆ ನೀವು ನನ್ನ ಜೀವನದಲ್ಲಿ ಬೀರಿದ ಪ್ರಭಾವ ಎಂದಿಗೂ ಮುಗಿಯುವುದಿಲ್ಲ. 
You are not just my teacher…
You are one of the most 
beautiful chapters of my life. 
Thank you for believing in me, 
inspiring me, and making me a better person. 
Forever grateful to you, my Best Teacher.
................................................ ದಿವ್ಯಾನಂದ 
ಅನ್ನಪ್ಪಾಡಿ ಮನೆ, 
ಸಜೀಪ ಮೂಡ ಗ್ರಾಮ ಮತ್ತು ಅಂಚೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : 9743112674
**************************************



ಬೆಸ್ಟ್ ಟೀಚರ್ ಬಗ್ಗೆ ಬರೆಯಲು ಹೊರಟಾಗ ಮೊದಲಿಗೆ ನನ್ನ ಪ್ರಾಥಮಿಕ ಶಾಲೆಯಿಂದ ಪದವಿ ಹಂತದವರೆಗಿನ ಎಲ್ಲಾ ಶಿಕ್ಷಕರನ್ನ ಒಮ್ಮೆ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ಬಹುತೇಕ ಶಿಕ್ಷಕರು, ಹೆಸರುಗಳೇ ನೆನಪಿಲ್ಲದಂತೆ ಮನ ಪಟಲದಿಂದ ಅಳಿಸಿ ಹೋಗಿದ್ದಾರೆ.

ಬದುಕನ್ನು ಪ್ರಭಾವಿಸಿದ ಕೆಲವೇ ಕೆಲವರು ಕಣ್ಣುಮುಂದೆ ಬಂದು ಹೋದರು. ಅವರಲ್ಲಿ ನನಗೆ ಮೂಲಾಕ್ಷರಗಳನ್ನು ಕಲಿಸಿದ ಕಮಲಮ್ಮ ಟೀಚರ್, ಶಿಸ್ತು , ಸರಳತೆ ಹಾಗೂ ಮಿತವ್ಯಯದ ಪಾಠಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಸಿ ಅಚ್ಚಳಿಯದೆ ಉಳಿದ ರಮೇಶ್ ರಾವ್ ಸರ್, ಇವರಿಬ್ಬರು ನನ್ನ ಪ್ರಾಥಮಿಕ ಶಾಲಾ ಹಂತದಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದ ನನ್ನ ಪ್ರೀತಿಯ ಗುರುಗಳು.

ನಾನು ಆವಿನ ಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಶ್ರೀ ಶಂಕರ್ ಮೂರ್ತಿ ಸರ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನಲ್ಲಿ ಓದುವ ಅಭಿರುಚಿ ಬೆಳೆಸಿದವರು. ನನಗೆ ಮ್ಯಾಕ್ಸಿಂಗ್ ಗಾರ್ಕಿ ಯವರ ತಾಯಿ ನಿರಂಜನರ ಚಿರಸ್ಮರಣೆ ಮುಂತಾದ ಅದ್ಭುತ ಸಾಹಿತ್ಯ ಕೃತಿಗಳನ್ನು ಕೊಟ್ಟು ಓದಿಸಿದ್ದರು. ಈ ಸಮಾಜದ ಬಗ್ಗೆ ಬದುಕಿನ ಕಠೋರ ಸತ್ಯಗಳ ಬಗ್ಗೆ ಆ ದಿನಗಳಲ್ಲಿ ನನಗೆ ತುಂಬಾ ಚೆನ್ನಾಗಿ ವಿವರಿಸಿದ್ದರು. ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ. ಜಿ ಎಸ್ ಭಟ್ ಅವರನ್ನು ಮರೆಯಲು ಸಾಧ್ಯವಿಲ್ಲ. ಅದ್ಬುತ ಕನ್ನಡ ಟೀಚರ್ ಅವರು. ಸ್ಥಳೀಯ ಪತ್ರಿಕೆಯಲ್ಲಿ ನಾನು ಬರೆದ ಒಂದು ಪುಟ್ಟ ಲೇಖನವನ್ನು ಓದಿ, ನಿನ್ನ ಲೇಖನವನ್ನು ಓದಿದೆ ಚೆನ್ನಾಗಿ ಬರೆದಿದ್ದೀಯ. ಬರವಣಿಗೆ ಮುಂದುವರೆಸು ಎಂದು ಹುರಿದುಂಬಿಸಿದ್ದರು. ನನ್ನ ಓದು ಮತ್ತು ಬರವಣಿಗೆ ಕೃಷಿಗೆ ನೀರೆರೆದು ಬೆಳೆಸಿದ ಮಹಾನುಭಾವರು ಅವರು. 

ಇನ್ನು ಪದವಿ ನಂತರ ಪತ್ರಿಕೋದ್ಯಮ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದಾಗ "ಯಾರಿಗಾಗಿ ಬರೆಯುತ್ತಿದ್ದೇನೆ ಏನನ್ನು ಬರೆಯುತ್ತಿದ್ದೇನೆ ಹೇಗೆ ಬರೆಯುತ್ತಿದ್ದೇನೆ ಎಂಬ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರೆಯದೆ ಏನನ್ನೂ ಬರೆಯಬೇಡಿ" ಎಂದು ಪತ್ರಿಕೋದ್ಯಮದ ಆಶಯಗಳನ್ನು ಕಲಿಸಿಕೊಟ್ಟ ಅದ್ಭುತ ಟೀಚರ್ ಡಾಕ್ಟರ್ ಶಿವರಾಂ ಪೈಲೂರು. ನನ್ನ ವ್ಯಕ್ತಿತ್ವವನ್ನು ರೂಪಿಸಿದ ಈ ಎಲ್ಲಾ ಶಿಕ್ಷಕರುಗಳಿಗೆ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಪ್ರೀತಿಪೂರ್ವಕ ನಮನಗಳು.
.................................... ಆರ್ ಪ್ರಸನ್ನ ಕುಮಾರ
ಅವಿನಹಳ್ಳಿ ಅಂಚೆ
ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮೊ : 96325 24866
**************************************




ತೊಂಬತ್ತರ ದಶಕದಲ್ಲಿ ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಹೊರಜಗತ್ತಿನಿಂದ ಬಹುತೇಕ ದೂರವಾಗಿದ್ದ ಪುಟ್ಟ ಗ್ರಾಮೀಣ ಪಟ್ಟಣವಾದ ಕುದುರೆಮುಖದಲ್ಲಿ ನಾನು ಬೆಳೆದೆ. ಆಗಿನ ಕಾಲ ಇಂದಿನಂತಿರಲಿಲ್ಲ; ಅಂತರ್ಜಾಲವಿರಲಿಲ್ಲ, ತರಬೇತಿ ತರಗತಿಗಳೂ ಇರಲಿಲ್ಲ. ಜ್ಞಾನವನ್ನು ಪಡೆಯಲು ನಮಗಿದ್ದ ಮುಖ್ಯ ಆಧಾರ ನಮ್ಮ ಶಿಕ್ಷಕರೇ. ಅವರೇ ನಮಗೆ ಜ್ಞಾನದ ಮೂಲ, ಅವರೇ ನಮ್ಮ ನಿಜವಾದ ಮಾರ್ಗದರ್ಶಕರು.

ನಾನು ಓದಿದ್ದು ಕುದುರೆಮುಖದ ಕೇಂದ್ರೀಯ ವಿದ್ಯಾಲಯದಲ್ಲಿ (CBSE). ಹಿಂದಿ ನಮಗೆ ಎರಡನೇ ಭಾಷೆಯಾಗಿತ್ತು. ಆ ಕಾಲದಲ್ಲಿ ಹಿಂದಿಯಲ್ಲಿ ಉತ್ತಮ ಅಂಕ ಗಳಿಸುವುದು ಎಷ್ಟು ಸವಾಲಾಗಿತ್ತು ಎಂಬುದು ಅಂದಿನ ಕಾಲದಲ್ಲಿ ಓದಿದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ನಮಗೆ ಅದೃಷ್ಟವಶಾತ್ ಬಹಳ ಒಳ್ಳೆಯ ಶಿಕ್ಷಕರಿದ್ದರು. ಆದರೆ ಅವರೆಲ್ಲರ ನಡುವೆ ಇಂದಿಗೂ ನನ್ನ ನೆನಪಿನಲ್ಲಿ ವಿಶೇಷವಾಗಿ ಉಳಿದಿರುವವರು ಇಂದ್ರ ಸಿಂಗ್ ರಾಣಾ ಸರ್.

ಹಿಂದಿ ಅವರ ಮಾತೃಭಾಷೆಯಾಗಿದ್ದರಿಂದ ಆ ಭಾಷೆಯ ಮೇಲಿನ ಅವರ ಹಿಡಿತವೇ ಅಸಾಧಾರಣವಾಗಿತ್ತು. ವಿಷಯದ ಬಗ್ಗೆ ಅವರ ಜ್ಞಾನಕ್ಕೆ ಸರಿಸಾಟಿಯೇ ಇರಲಿಲ್ಲ. ತಮ್ಮ ವಿದ್ಯಾರ್ಥಿಗಳಿಂದಲೂ ಅವರು ಅದೇ ಮಟ್ಟದ ಪರಿಪೂರ್ಣತೆಯನ್ನು ನಿರೀಕ್ಷಿಸುತ್ತಿದ್ದರು. ಅಂಕಗಳನ್ನು ನೀಡುವ ವಿಷಯದಲ್ಲಿ ಅವರು ಬಹಳ ಕಟ್ಟುನಿಟ್ಟಿನವರು. ನಮ್ಮ ಉತ್ತರ ಸಂಪೂರ್ಣ ಸರಿಯಾಗಿದ್ದರೂ ಪೂರ್ಣ ಅಂಕಗಳನ್ನು ಮಾತ್ರ ಅವರು ಎಂದಿಗೂ ನೀಡುತ್ತಿರಲಿಲ್ಲ! ಆಗ ನಮಗೆ ಅವರ ಮೇಲೆ ಬಹಳ ಬೇಸರವಾಗುತ್ತಿತ್ತು. "ಇದಕ್ಕಿಂತ ಇನ್ನೇನು ಬರೆಯಬೇಕು?" ಎಂದು ಅನಿಸುತ್ತಿತ್ತು. ಆದರೆ ನಾವು ಬೆಳೆದಂತೆ ಅದರ ಹಿಂದಿದ್ದ ಅವರ ಉದ್ದೇಶ ಅರ್ಥವಾಯಿತು. ಸಿಕ್ಕಿದ ಅಂಕಗಳಲ್ಲೇ ತೃಪ್ತಿಪಟ್ಟುಕೊಳ್ಳದೆ, ಇನ್ನೂ ಉತ್ತಮವಾಗಿ ಮಾಡಲು, ನಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟವನ್ನು ತಲುಪಲು ಸದಾ ಪ್ರಯತ್ನಿಸಬೇಕು ಎಂಬುದನ್ನು ಅವರು ನಮಗೆ ಕಲಿಸುತ್ತಿದ್ದರು.

ಶಿಸ್ತಿನ ವಿಚಾರದಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ನಿಯಮ ಎಂದರೆ ನಿಯಮವೇ. ಆದರೆ ಆ ಕಟ್ಟುನಿಟ್ಟಿನ ಹಿಂದೆ ತಮ್ಮ ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ ಮತ್ತು ಜವಾಬ್ದಾರಿ ಇತ್ತು. ನಂತರದ ದಿನಗಳಲ್ಲಿ ಉಪಪ್ರಾಂಶುಪಾಲರಾಗಿ ಹಾಗೂ ಪ್ರಾಂಶುಪಾಲರಾಗಿ ಅವರು ನಮ್ಮನ್ನು ಕೇವಲ ವಿದ್ಯಾಭ್ಯಾಸಕ್ಕಷ್ಟೇ ಸೀಮಿತಗೊಳಿಸಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ರಸಪ್ರಶ್ನೆಗಳು, ಅಂತರ್ ಶಾಲಾ ಮತ್ತು ವಲಯ ಮಟ್ಟದ ಸ್ಪರ್ಧೆಗಳಲ್ಲಿ ನಾವು ಭಾಗವಹಿಸುವಂತೆ ಸದಾ ಪ್ರೋತ್ಸಾಹಿಸುತ್ತಿದ್ದರು.

ಅವರ ವ್ಯಕ್ತಿತ್ವದಲ್ಲಿ ಒಂದು ವಿಶಿಷ್ಟವಾದ ಗಂಭೀರತೆ ಇತ್ತು. ದೈಹಿಕ ಮಿತಿಗಳು ಅವರ ಬದುಕಿನ ಭಾಗವಾಗಿದ್ದರೂ, ಅವು ಅವರ ವ್ಯಕ್ತಿತ್ವದ ಎತ್ತರಕ್ಕೆ ಎಂದಿಗೂ ಅಡ್ಡಿಯಾಗಲಿಲ್ಲ. ಅವರ ಶಿಸ್ತು, ಆತ್ಮವಿಶ್ವಾಸ, ವಿಷಯದ ಮೇಲಿನ ಅಪಾರ ಹಿಡಿತ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಅವರನ್ನು ನಮ್ಮ ಪಾಲಿಗೆ ಇನ್ನಷ್ಟು ವಿಶೇಷವಾಗಿಸುತ್ತಿತ್ತು. ನಮಗೆ ಅವರು ಕೇವಲ ಶಿಕ್ಷಕರಾಗಿರಲಿಲ್ಲ; ತಂದೆಯಂತಹ ಮಾರ್ಗದರ್ಶಕರಾಗಿದ್ದರು. ತಪ್ಪು ಮಾಡಿದಾಗ ಗದರಿಸುತ್ತಿದ್ದರು, ದಾರಿ ತಪ್ಪಿದಾಗ ತಿದ್ದುತ್ತಿದ್ದರು, ಮತ್ತು ನಮ್ಮ ರಕ್ಷಣೆಯ ವಿಷಯ ಬಂದಾಗ ಸದಾ ನಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿದ್ದರು.

ಇಂದು ನನ್ನ ಜೊತೆಯಲ್ಲಿ ಓದಿದ ಸಹಪಾಠಿಗಳು ಹಾಗೂ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಬೆಳೆದಿರುವುದನ್ನು ನೋಡಿದಾಗ, ನಮ್ಮನ್ನು ಗಟ್ಟಿಯಾಗಿ ರೂಪಿಸಿದ ಇಂದ್ರ ಸಿಂಗ್ ರಾಣಾ ಸರ್ ಅವರಂತಹ ಗುರುಗಳ ನೆನಪು ಸಹಜವಾಗಿಯೇ ಬರುತ್ತದೆ.

ಈ ಶಿಕ್ಷಕರ ದಿನಾಚರಣೆಯಂದು, ನನ್ನ ಬದುಕನ್ನು ರೂಪಿಸಿದ ಪ್ರೀತಿಯ ರಾಣಾ ಸರ್ ಅವರಿಗೆ ಹೃತ್ಪೂರ್ವಕ ಪ್ರಣಾಮಗಳು! 
............................................ ವಿನೀತ್ ಶೆಟ್ಟಿ
ಹೊಸಬೆಟ್ಟು, ಮಂಗಳೂರು ತಾಲೂಕು, 
ದಕ್ಷಿಣ ಕನ್ನಡ ಜಿಲ್ಲೆ 
ಮೊ : ೮೯೭೧೨೦೧೩೮೧
**************************************




"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ"
      ನನ್ನ ಜೀವನದಲ್ಲಿ ಅನೇಕ ಶಿಕ್ಷಕರನ್ನು ಕಂಡಿದ್ದೇನೆ, ಆದರೆ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿದಿರುವವರು ನನ್ನ ಪ್ರೈಮರಿ ಸ್ಕೂಲ್ ಶಿಕ್ಷಕರಾದ ಶ್ರೀ ನಾಗರಾಜ್ ಸರ್.
       ಪ್ರೈಮರಿ ಶಾಲೆ ಎಂದರೆ ನಮ್ಮ ಬದುಕಿನ ಅಡಿಪಾಯ. ಆ ಅಡಿಪಾಯವನ್ನು ಗಟ್ಟಿಯಾಗಿ ಕಟ್ಟಿಕೊಟ್ಟವರು ನಾಗರಾಜ್ ಸರ್. ಅವರು ಕೇವಲ ಅಕ್ಷರ ಕಲಿಸಿದವರಲ್ಲ, ಸಂಸ್ಕಾರ ಕಲಿಸಿದ ಗುರುಗಳು.
      ಸರ್ ಪಾಠ ಮಾಡುವಾಗ ಎಂದೂ ಬೇಸರವಾಗುತ್ತಿರಲಿಲ್ಲ. ಕಥೆಗಳ ಮೂಲಕ, ನಗುನಗುತ್ತಾ ಎಲ್ಲ ವಿಷಯಗಳನ್ನು ಅರ್ಥ ಮಾಡಿಸುತ್ತಿದ್ದರು. ನಾನು ತಪ್ಪು ಮಾಡಿದಾಗ ಬೈಯದೆ, ತಾಳ್ಮೆಯಿಂದ ತಿದ್ದಿ "ಪ್ರಯತ್ನ ಮಾಡು, ನಿನ್ನಿಂದ ಸಾಧ್ಯ" ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. 
     ಅವರ ಸರಳ ಜೀವನ, ಶಿಸ್ತು, ಮಕ್ಕಳ ಮೇಲಿನ ಪ್ರೀತಿ ನಿಜಕ್ಕೂ ನನಗೆ ಸ್ಫೂರ್ತಿ. "ಅಂಕಗಳು ಇಂದು ಬರುತ್ತವೆ ನಾಳೆ ಹೋಗುತ್ತವೆ, ಆದರೆ ಒಳ್ಳೆಯ ನಡತೆ ಶಾಶ್ವತವಾಗಿ ಉಳಿಯುತ್ತದೆ" ಎಂಬ ಅವರ ಮಾತು ಇನ್ನೂ ನೆನಪಿದೆ.
     ಸರ್, ನಾನು ಚಿಕ್ಕವಳಿದ್ದಾಗ ನಿಮ್ಮಿಂದ ಕಲಿತ ಅಕ್ಷರವೇ ಇಂದು ನನ್ನ ಭವಿಷ್ಯವಾಗಿದೆ.
ನೀವು ಹಚ್ಚಿದ ಜ್ಞಾನದ ದೀಪ ಎಂದೂ ಆರುವುದಿಲ್ಲ.
     ಇಂತಹ ಶ್ರೇಷ್ಠ ಗುರುಗಳು ಸಿಗುವುದು ನನ್ನ ಪುಣ್ಯ. ನನ್ನ ಬೆಸ್ಟ್ ಟೀಚರ್ ನಾಗರಾಜ್ ಸರ್ ಅವರಿಗೆ ಶಿಕ್ಷಕರ ದಿನದ ಶುಭಾಶಯಗಳು. 
............................................ ಕೀರ್ತಿ 
ಚೆಂಬುತ್ತೊಡಿ ಮನೆ, ಪುಂಚಪ್ಪಾಡಿ, ಸವಣೂರು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ : 97403 99422
**************************************





Ads on article

Advertise in articles 1

advertising articles 2

Advertise under the article