-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 87

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 87

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 87
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
 

ಮಕ್ಕಳ ಜಗಲಿಯ ಓದುಗರೆಲ್ಲರಿಗೂ ನನ್ನ ನಮಸ್ಕಾರಗಳು. ಹಳೆಯ ಶೈಕ್ಷಣಿಕ ವರ್ಷಕ್ಕೆ ವಿದಾಯ ಹೇಳಿ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸುವ ತರಾತುರಿಯಲ್ಲಿ, ಎಷ್ಟೋ ಕೆಲಸಗಳು ಚಲಿಸುವ ಗತಿ ನಿಧಾನವಾಯಿತು. ಆದ ಕಾರಣ ಕಥೆಗಳನ್ನು ಹಚ್ಚಿಕೊಳ್ಳಲು ಸಮಯವೇ ಸಿಕ್ಕಲಿಲ್ಲ.

ಮಕ್ಕಳು ಪರೀಕ್ಷೆ, ನಂತರ ಫಲಿತಾಂಶ, ಮರುಪರೀಕ್ಷೆ, ಅದರ ಫಲಿತಾಂಶ, ಸಂಭ್ರಮ, ಮುಂದಿನ ವಿದ್ಯಾಭ್ಯಾಸದ ತಯಾರಿಗಳ ಬಗ್ಗೆ ಯೋಚನೆಯಲ್ಲೇ ಮುಳುಗಿರುವ ವಿದ್ಯಾರ್ಥಿಗಳು, ಶಾಲೆಯ ಮರು ದಾಖಲಾತಿ, ಅದರ ನಡುವೆ ಹಲವು ತರಬೇತಿಗಳು, ಬೇಸಿಗೆ ಶಿಬಿರಗಳು, ಅಬ್ಬಬ್ಬಾ ಇಷ್ಟೆಲ್ಲ ಕೆಲಸಗಳು.. ನಂತರ ಮಧ್ಯದಲ್ಲಿ 10 ದಿನದ ಬೇಸಿಗೆ ರಜೆಯ ವೇಳಾಪಟ್ಟಿಯ ದಿನಚರಿ.. ಎಲ್ಲವನ್ನು ಮುಗಿಸಿ ಮತ್ತೆ ಶಾಲೆ ಎಂದಿನಂತೆ ಶುರು.. 

ಪೋಷಕರಿಗೆಲ್ಲಾ ಕರೆ ಮಾಡುವುದು, ದಾಖಲಾತಿ ಬಗ್ಗೆ ಮಾಹಿತಿ, ಹೀಗಿರುವಾಗ ಮುಂದಿನ ತರಗತಿಯ ದಾಖಲಾತಿಗೆಂದು ಒಂದು ಮಗು ಶಾಲೆಗೆ ಬಂದಾಗ, ನರ್ಸರಿ ಟೀಚರ್ಸ್ ಕುಳಿತಿರುವ ಜಾಗಕ್ಕೆ ಓಡಿ ಬಂದಿತು... "ಮಿಸ್,,, ಮಿಸ್,,, ನಾನು ಇವತ್ತು ಬಂದೇ.... ನೀವೆಲ್ಲ ಹೇಗಿದೀರಿ?" ಎಂದು ಕ್ಷೇಮ ಸಮಾಚಾರ ವಿಚಾರಿಸಿ ರಜೆಯಲ್ಲಿ ನಡೆದ ಎಲ್ಲಾ ಕಥೆಗಳನ್ನು ನಮ್ಮ ಬಳಿ ಹಂಚಿಕೊಂಡಿತು.. ಅಪ್ಪ ಕೊಡಿಸಿದ ಆಟಿಕೆಯ ಕಥೆ, ಅಮ್ಮ ಮಾಡಿದ ಹೊಸ ತಿಂಡಿಯ ಕಥೆ, ಅಜ್ಜಿ ಮನೆಗೆ ಹೋದಾಗ ಅಜ್ಜಿ ಹೇಳಿದೆ ಕಥೆಯ ಕಥೆ, ಹೀಗೆ ಎಲ್ಲವನ್ನು ಒಮ್ಮೆಲೇ ಹೇಳಿ ಜೊತೆಗೆ ನಾನು ಕೇಳಿದ ಪ್ರಶ್ನೆಗಳಿಗೂ ಸಾರಾಗವಾಗಿ ಉತ್ತರಿಸಿ, ಪೋಷಕರ ಬಳಿ ಓಡಿತು.. ನಂತರ ಪೋಷಕರ ಬಳಿ ಮಾತನಾಡುವಾಗ ಅವರು ಹೇಳಿದರು, "ಮೇಡಂ ಇವನಿಗೆ ನೀವು ಎಂದರೆ ತುಂಬಾ ಇಷ್ಟ ಅಂತೇ.. ಮುಂದಿನ ತರಗತಿಯಲ್ಲೂ ನೀವೇ ಬೇಕಂತೆ, ಮನೆಯಲ್ಲಿ ಹೇಳುತಿದ್ದ" ಎಂದು ಹೇಳಿದರು.. "ಅಯ್ಯೋ ಹಾಗಾದ್ರೆ ಇರಿ ನಾನೇ ಅವನನ್ನ ಮಾತಾಡಿಸ್ತೇನೆ" ಎಂದು ಅವನನ್ನು ಕೂಗಿ ಕರೆದು ಹೇಳಿದೆ "ಏನೂ ಮಾರಾಯ ನಿನಗೆ ಮುಂದಿನ ವರ್ಷವೂ ನಾನೇ ಟೀಚರ್ ಆಗ್ಬೇಕಾ? ಹಾಗಾದ್ರೆ ಒಂದು ಕೆಲಸ ಮಾಡು ನಿನಗೆ ನಾ ಅಂದ್ರೆ ಇಷ್ಟ ಅಲ್ವಾ? ಇನ್ನೊಂದು ವರ್ಷ ಅದೇ ತರಗತಿಯಲ್ಲೇ ಇದ್ದು ಬಿಡು... ಏನಂತೀಯಾ???" ಎಂದು ಕೇಳಿದೆ. ಆಗ ಅವನು ನೀಡಿದ ಉತ್ತರ ತುಂಬಾ ಸರಳ, ಸುಂದರ, ಅರ್ಥಗರ್ಭಿತ, ಹಾಗು ಪ್ರೌಢತೆಯಿಂದ ಕೂಡಿತ್ತು.. ಅವನು ಹೇಳಿದ "ಮಿಸ್ ನೀವಂದ್ರೆ ನನಗೆ ಇಷ್ಟ ಹೌದು ಆದ್ರೆ ನಾನು ಮತ್ತೆ ಅದೇ ತರಗತಿಲಿ ಕೂರೋದಿಲ್ಲಪಾ, ನಾನು ಮುಂದೆ ಹೋಗ್ಬೇಕು, ಪಾಸ್ ಆಗ್ಬೇಕು, ದೊಡ್ಡೋನಾಗ್ಬೇಕು, ನೀವೇ ನನ್ನ ತರಗತಿಗೆ ಬನ್ನಿ" ಎಂದು..

ಕೇಳಲು ಬಹಳ ಸರಳ ಆದರೆ ಅದರಲ್ಲಿ ಎಷ್ಟು ಅರ್ಥ ತುಂಬಿದೆ. ಆಳವಾಗಿ ಯೋಚಿಸಿದರೆ ಎಷ್ಟು ಅರ್ಥ ಅಡಗಿದೆ.. ಆ 6 ವರ್ಷದ ಮಗುವು ತುಂಬಾ ವಿಶ್ಲೇಷಣೆ ಕೊಡಲು ಆಗದೇ ಹೋದರೂ ಸಹ ತನ್ನದೇ ಶೈಲಿಯಲ್ಲಿ, ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದ.. ಯಾವುದೇ ಆಗಲಿ ನಮಗೆ ಇಷ್ಟ ಎಂದು ಅತೀ ಮೋಹದಿಂದ ಇದ್ದರೆ ನಾವು ಮುಂದೆ ಹೋಗಲು ಸಾಧ್ಯವಿಲ್ಲ ಎಂಬುವ ನೀತಿ ಪಾಠವನ್ನು ಅವನು ತನ್ನ ಮಾತಿನಿಂದ ವ್ಯಕ್ತಪಡಿಸಿದ್ದ. ಮಕ್ಕಳ ಮಾತು ತಮಾಷೆಯಂತೆ ಕಂಡರೂ ಅದರಲ್ಲಿ ಕೆಲವೊಮ್ಮೆ ಗಂಭೀರತೆ ಅಡಗಿರುತ್ತದೆ.. ಆ ಮಗುವಿನ ಮಾತಿನಿಂದ ನಾವೇನು ತಿಳಿಯಬಹುದು ಎಂದರೆ... ತೀವ್ರವಾದ ಮೋಹ, ಆಸೆ, ಮನುಷ್ಯನ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ನಮ್ಮ ಬೆಳವಣಿಗೆಗಾಗಿ ಕೆಲವೊಮ್ಮೆ ನಾವು ಎಷ್ಟೋ ಆಸೆಗಳನ್ನು, ಇಷ್ಟಗಳನ್ನು, ಮೋಹಗಳನ್ನು, ಬಿಟ್ಟು ಅವುಗಳ ನೆನಪಿನೊಂದಿಗೆ ಮುಂದೆ ಸಾಗಬೇಕು ಎನ್ನುವುದು.
...................................... ರಮ್ಯಾ ಆರ್ ಭಟ್
ಸಹ ಶಿಕ್ಷಕಿ. 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
****************************************



Ads on article

Advertise in articles 1

advertising articles 2

Advertise under the article