-->
ಜೀವನ ಸಂಭ್ರಮ : ಸಂಚಿಕೆ - 254

ಜೀವನ ಸಂಭ್ರಮ : ಸಂಚಿಕೆ - 254

ಜೀವನ ಸಂಭ್ರಮ : ಸಂಚಿಕೆ - 254
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                       

ಮಕ್ಕಳೇ... ಇಂದು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದನ್ನು ತಮ್ಮ ಮುಂದೆ ಹೇಳುತ್ತಿದ್ದೇನೆ. ಈ ಘಟನೆಯನ್ನು ಹಿಂದೆ ಓದಿದ್ದೀರಿ.

ಲೂಯಿ ಪಾಶ್ಚರ್ ಒಬ್ಬ ವಿಜ್ಞಾನಿ, ಸಂಶೋಧಕ. ಅಷ್ಟು ತನ್ಮಯ ಎಲ್ಲದರಲಿ. ಆತನ ಲಗ್ನ ನಿಗದಿಯಾಗಿತ್ತು. ಲೂಯಿ ಪಾಶ್ಚರ್ ಸೇರಿದಂತೆ ವಧು, ವಧುವಿನ ಮನೆಯವರು, ವರನ ಮನೆಯವರು, ಬಂಧು ಬಳಗ ಎಲ್ಲಾ ಬಂದು ಚರ್ಚಿನಲ್ಲಿ ಸೇರಿದ್ದಾರೆ. ಅಲ್ಲಿಗೆ ಪಾದ್ರಿ ಕೂಡ ಬಂದಿದ್ದಾರೆ. ಪಾದ್ರಿ ಸ್ಟೇಜ್ ಮೇಲೆ ನಿಂತು ವರ ವಧುವಿನ ಹೆಸರು ಕರೆದರು. ವಧು ಕರೆದರು ವದು ಸ್ಟೇಜ್ ಮೇಲೆ ಹೋದಳು. ವರನನ್ನು ಕರೆದರೂ ವರ ಇರಲಿಲ್ಲ. ಲಗ್ನದ ಸಮಯದಲ್ಲಿ ವರ ಸಿಗೋದಿಲ್ಲ ಅಂದರೆ ಏನು. ಒಂದು ತಿಂಗಳಿರುವಾಗಲೇ ವರ ಲಗ್ನ ಮಂಟಪಕ್ಕೆ ಹೋಗಿ ನೋಡಿ ಬರುತ್ತಾನೆ. ಅಂತಹುದರಲ್ಲಿ ವರ ಸಿಗಲಿಲ್ಲ ಎಂದರೆ ಎಷ್ಟು ಆಶ್ಚರ್ಯ. ಒಂದು ಸಲ, ಎರಡು ಸಲ, ಮೂರು ಸಲ ಕರೆದರು. ವರ ಇಲ್ಲ. ಹುಡುಕಾಡಲು ಶುರು ಮಾಡಿದರು. ಎಲ್ಲೂ ಇಲ್ಲ. ಬಂದು ಕುಳಿತಿದ್ದ. ಎದ್ದು ಹೋದದ್ದು ಯಾರಿಗೂ ಗೊತ್ತಿಲ್ಲ. ಲೂಯಿ ಪಾಸ್ಚರ್ ಗೆಳೆಯ ಹುಡುಕುತ್ತಾ ಪ್ರಯೋಗ ಶಾಲೆಗೆ ಬಂದನು. ಲೂಯಿ ಪಾಸ್ಚರ್ ಪ್ರಯೋಗ ಶಾಲೆಯಲ್ಲಿ ಪ್ರಯೋಗದಲ್ಲಿ ಮಗ್ನನಾಗಿದ್ದನು. ಲಗ್ನ ಮಂಟಪದಲ್ಲಿ ಇದ್ದಾಗ ಸಮಸ್ಯೆಗೆ ಏನೊ ಉತ್ತರ ಹೊಳೆದಿತ್ತು. ಓಡಿ ಬಂದು ಪ್ರಯೋಗದಲ್ಲಿ ತಲ್ಲೀನನಾಗಿದ್ದನು. ವಧು ಮರೆತಿದ್ದನು. ಚರ್ಚ್ ಮರೆತಿದ್ದನು. ಲಗ್ನ ಮರೆತಿದ್ದನು. ಎಲ್ಲರೂ ಲಗ್ನ ಮಂಟಪದಲ್ಲಿ ಕಾಯುತ್ತಿದ್ದಾರೆ. ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಮಿತ್ರ ಕೇಳಿದ. ಆಗ ಈ ಪಾಶ್ಚರ್ ಹೇಳಿದ. ಲಗ್ನ ಮತ್ತೆ ಮಾಡೋದಕ್ಕೆ ಬರುತ್ತದೆ. ಆದರೆ ಸಂಶೋಧನೆ ಹೊಳೆಯುತ್ತಲ್ಲ ತಲೆಗೆ ಮತ್ತೆ ಅದನ್ನು ತರೋದಿಕ್ಕೆ ಬರುತ್ತದೆ ಏನು?. ಸತ್ಯ ಹೊಳೆದಿದೆ. ಎಲ್ಲಿ ? ಲಗ್ನ ಮಂಟಪದಲ್ಲಿ. ತಲೆಯಲ್ಲಿ ವಧು ಇಲ್ಲ. ಲಗ್ನ ಇಲ್ಲ. ಸಮಾರಂಭ ಇಲ್ಲ. ತಲೆಯೊಳಗೆಲ್ಲ ಶೋದ. ಇಂತಹ ಮನಸ್ಸಿಗೆ ಮಾತ್ರ ಜಗತ್ತಿನ ಸತ್ಯ ಮೈ ಬಿಚ್ಚಿಕೊಳ್ಳುತ್ತದೆ. ಪಾಶ್ಚರ್ ಸಂಶೋಧನೆಗಾಗಿ ಬದುಕಿದ್ದ ಅದಕ್ಕೆ ತತ್ಪರತೆ ಎನ್ನುವರು. 

ನಮಗೆ ಲಗ್ನ ಮಂಟಪದಲ್ಲಿ ಇದ್ದರೆ ಬೇರೆ ಏನಾದರೂ ಹೊಳೆಯುತ್ತದೆಯೇ?. ಇಲ್ಲ. ಏಕೆ?. ನಮಗೆ ಲಗ್ನ ಮಹತ್ವದ್ದು. ಪಾಶ್ಚರ್ ಗೆ ಸಂಶೋಧನೆ ಮಹತ್ವದ್ದು. ಹೀಗಿದ್ದಿದ್ದರಿಂದ ಹುಚ್ಚುನಾಯಿ ಕಡಿತದ ಲಸಿಕೆ. ಪ್ಲೇಗ್ ಔಷದ ಕಂಡುಹಿಡಿದನು. ಹಾಲು ಹುಳಿಯಾಗಲು ಬ್ಯಾಕ್ಟೀರಿಯಾ ಕಾರಣ ಎಂದು ಕಂಡುಹಿಡಿದನು. ಜಗತ್ತನ್ನು ಇಂತಹ ರೋಗದಿಂದ ಮುಕ್ತಿ ಮಾಡಿದನು. ಹಾಗೆ ನಾವು ನಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು? ಅನ್ನುವುದನ್ನು ಯೋಚಿಸಬೇಕು.

ಯಾವುದು ನಮ್ಮ ಜೀವನವನ್ನು ಸುಂದರ ಮಾಡುತ್ತದೆಯೋ. ಶ್ರೀಮಂತ ಗೊಳಿಸುತ್ತದೆಯೋ ಅದಕ್ಕೆ ಮಹತ್ವ ಕೊಡಬೇಕು. ಯಾವುದರಿಂದ ನಮ್ಮ ಜೀವನದ ಬೆಲೆ ಹೆಚ್ಚುತ್ತದೆ ಅದಕ್ಕೆ ಬೆಲೆ ಕೊಡಬೇಕು. ಅದನ್ನು ನಾವು ಯೋಚಿಸಬೇಕು. ಆ ರೀತಿ ಬುದ್ಧಿ ಬಳಸಬೇಕು. ಉದಾಹರಣೆಗೆ, ಇಲ್ಲೊಂದು ಭೃಂಗ ಬಂದಿದೆ. ಇಲ್ಲಿ ಎಲ್ಲ ಇದೆ. ಇಲ್ಲೊಂದು ರತ್ನ ಇದೆ. ಇಲ್ಲೊಂದು ಮುತ್ತಿನ ಹಾರ ಇದೆ. ಒಂದು ಹೂವು ಅರಳಿದೆ. ಆ ಭೃಂಗ ಬಂದಿದ್ದು ರತ್ನದ ಕಡೆ ಹೋಗುವುದಿಲ್ಲ. ಮುತ್ತಿನ ಹಾರದ ಕಡೆ ಹೋಗುವುದಿಲ್ಲ‌. ಮುತ್ತಿನ ಬೆಲೆ ಲಕ್ಷ. ರತ್ನದ ಬೆಲೆ ಲಕ್ಷ. ಆದರೂ ಆ ಕಡೆ ಹೋಗುವುದಿಲ್ಲ. ಅದು ಹೂವಿನ ಕಡೆ ಹೋಗುತ್ತದೆ. ಯಾಕೆ ಅದಕ್ಕೆ ಗೊತ್ತದೆ ರತ್ನಕ್ಕೆ ಬೆಲೆನೇ ಇಲ್ಲ. ಇದು ಯಾವುದಕ್ಕೆ ಬರ್ತದೆ. ಮಕರಂದ ಕುಡಿದು ಆನಂದ ಪಡುತ್ತದೆ. ಬದುಕು ರಸದ ಮೇಲೆ ನಿಂತಿದೆ. ರತ್ನ, ಮುತ್ತಿನ ಮೇಲೆ ನಿಂತಿಲ್ಲ. ಹಾಗಂತ ದುಂಬಿಗೆ ಗೊತ್ತಿದೆ. ಹಾಗೆ ನಮಗೂ ಗೊತ್ತಾಗಬೇಕು .ಯಾವುದು ಮಹತ್ವದ್ದು?.

ಒಬ್ಬಾತ ಮನೆಯ ಎಲ್ಲಾ ಧಾನ್ಯ ಮಾರಾಟ ಮಾಡಿ ಸುಂದರ ಬಟ್ಟೆ ಬೂಟು ತೆಗೆದುಕೊಂಡನು. ಮನೆಯಲ್ಲಿ ಊಟ ಮಾಡಲು ತಿನ್ನಲು ಏನೂ ಇಲ್ಲ. ಸೂಟು ಬೂಟು ಹಾಕಿಕೊಂಡ ಮಾತ್ರಕ್ಕೆ ಸಂತೋಷ ಅರಳುತ್ತದೆ ಏನು?. ಮೈ ಮೇಲೆ ಬಟ್ಟೆ ಇಲ್ಲ. ಚೆನ್ನಾಗಿ ಊಟ ಮಾಡಿದ ಮನುಷ್ಯನ ಮುಖನೆ ಬೇರೆ. ಎಲ್ಲಾ ಹಾಕಿಕೊಂಡು ಹಸಿದಿರುವ ಮನುಷ್ಯನ ಮುಖನೆ ಬೇರೆ. ಯಾವುದಕ್ಕೆ ಮಹತ್ವ ?. ಊಟಕ್ಕೋ ?. ಬಟ್ಟೆಗೋ?. ಶೂಗೋ?. ಹತ್ತು ಬೆರಳಿಗೂ 10 ಉಂಗುರ ಹಾಕಿಕೊಂಡಿದ್ದೇವೆ, ಬೆರಳ ಚಲಿಸಲಾಗುತ್ತಿಲ್ಲ. ಉಂಗುರಕ್ಕೆ ಮಹತ್ವವೋ?. ಬೆರಳಿಗೆ ಮಹತ್ವ ವೋ?. ನಾವು ಉಂಗುರಕ್ಕೆ ಮಹತ್ವ ಕೊಡುತ್ತೇವೆ. ಬಲ್ಲವರು ಬೆರಳಿಗೆ ಮಹತ್ವ ಕೊಡುತ್ತಾರೆ. ಈ ಬೆರಳ ಬಳಸಿ ಅಂತಹ ಸಾವಿರಾರು ಉಂಗುರ ತಯಾರಿಸಬಹುದು. ಬೇಲೂರು ಹಳೇಬೀಡಿನ ಸುಂದರ ಕೆತ್ತನೆ ಮಾಡಿ ಜಗತ್ತನ್ನು ಶ್ರೀಮಂತ ಮಾಡಿದ್ದು ಇದೇ ಕೈ ಬೆರಳುಗಳು. ಇದೇ ಕೈ ಬಳಸಿ ಗಿಡ ಬೆಳೆಸಿ, ಸುಂದರ ವನ ಮಾಡಬಹುದು.

ಹಾರ ಮಹತ್ವದ್ದೋ?. ಕತ್ತು ಮಹತ್ವದ್ದೋ?. ತಲೆ ಮಹತ್ವದ್ದೋ?. ಕಿರೀಟ ಮಹತ್ವದ್ದೋ?. ಕಾಲು ಮಹತ್ವದ್ದೋ?, ಗೆಜ್ಜೆ ಮಹತ್ವದ್ದೋ?. ನಡೆಯುವ ಕಾಲು, ಕಾರ್ಯ ಮಾಡುವ ಕೈಗಳು, ವಿಚಾರ ಮಾಡುವ ತಲೆ ಇವುಗಳಿಗೆ ಮಹತ್ವ ಕೊಡಬೇಕು. ಅಲಂಕಾರಕ್ಕೆ ಮಹತ್ವ ಕೊಡಬೇಕೊ?. ದೇಹಕ್ಕೆ ಮಹತ್ವ ಕೊಡಬೇಕೋ? ಹೇಳಿ. ಮಗು ಬಹಳ ಸುಂದರವಾಗಿದೆ. ತಾಯಿ, ಮಗುವಿನ ಮೇಲೆ ಸುಂದರ ಆಭರಣ ಹಾಕಿದ್ದಾಳೆ. ಮೈಮೇಲೆ ರೇಷ್ಮೆ ಬಟ್ಟೆ ಹಾಕಿ ಕುಳ್ಳಿರಿಸಿದ್ದಾಳೆ. ಆನಂದ ಪಟ್ಟಿದ್ದಾಳೆ. ಹುಡುಗನನ್ನು ನೋಡಿ ಅಲ್ಲ. ಆಭರಣ ಬಟ್ಟೆ ನೋಡಿ, ಆನಂದ ಪಟ್ಟಿದ್ದಾಳೆ. ಮಗುವಿಗೂ ಹೇಳಿದ್ದಾಳೆ "ಆಡುವುದಕ್ಕೆ ಹೋಗಬೇಡ". ಆಕೆಯ ಚಿಂತೆ ಆಭರಣ ಯಾರಾದರೂ ಕಸಿದುಕೊಂಡಾರೆಂದು ವಿನಃ ಮಗುವಿನದಲ್ಲ. ಅದೇ ಸಮಯಕ್ಕೆ ಹೊರಗಡೆ ತುಂತುರು ಮಳೆ ಶುರುವಾಯಿತು. ನೆರೆಮನೆ ಹುಡುಗರು ಬಂದಿದ್ದಾರೆ. ಅಲ್ಲಿ ಹಾಡುತ್ತಾ ಆಟ ಆಡುತ್ತಿದ್ದಾರೆ. ಈ ಹುಡುಗನನ್ನ ಕರೆಯುತ್ತಿದ್ದಾರೆ. ಆಗ ಹುಡುಗ ಬಟ್ಟೆ ಮರೆತ. ಆಭರಣ ಮರೆತ. ಆಟ ಆಡೋದಿಕ್ಕೆ ಓಡಿದ. ಇದನ್ನು ತಾಯಿ ನೋಡಿ, ಓಡಿ ಬಂದು ಹಿಡಿದುಕೊಂಡು ಹೋದಳು. ಮಗು ಕೇಳಿತು. ನನ್ನನ್ಯಾಕೆ ಒಳಗೆ ಕರೆದುಕೊಂಡು ಬರುತ್ತೀ ಅಂತ. ಅಲ್ಲಿ ಆಟ ಆಡಿ ಆನಂದ ಪಡುತ್ತೇನೆ ಬಿಡು ನನ್ನನ್ನು ಅಂದನು. ತಾಯಿ ಬಟ್ಟೆ ಹೊಲಸಾಗುತ್ತದೆ ಅಂದಳು. ಮಗು ಹೇಳಿತು 'ಈ ಬಟ್ಟೆ ತೆಗೆದುಕೋ ಬಿಡು, ನಿನ್ನ ಬಟ್ಟೆ ಯಾರಿಗೆ ಬೇಕು?. ನಿನ್ನ ಆಭರಣ ಯಾರಿಗೆ ಬೇಕು?. ನಾನು ಆಟ ಆಡೋದಕ್ಕೆ, ಸಂತೋಷ ಪಡುವುದಕ್ಕೆ ಅಡೆತಡೆಯಾದರೆ ಇವನ್ನೆಲ್ಲ ತೆಗೆದುಕೊ ಎಂದನು". ಅಷ್ಟೇ ಅಲ್ಲ ಅವೆಲ್ಲ ತೆಗೆದು ಹೊಗೆದು ಹೊರಗೆ ಓಡಿದನು. ಯಾವುದು ಮಹತ್ವ ?.ಸಂತೋಷ ಮಹತ್ವದ್ದೋ? ಆಭರಣ ಬಟ್ಟೆ ಮಹತ್ವದ್ದೋ?. ಹುಡುಗನಿಗೆ ಗೊತ್ತಿದೆ ಆಟ ಮಹತ್ವದ್ದು. ಸಂತೋಷ ಮಹತ್ವದ್ದು. ತಾಯಿಗೆ ಬಟ್ಟೆ , ಆಭರಣ ಮಹತ್ವದ್ದು. ಅಲಂಕಾರ ಮಹತ್ವದ್ದು. ಯಾವುದಕ್ಕೆ ಮಹತ್ವ ಕೊಡಬೇಕು ಮಗುವಿಗೆ ಗೊತ್ತಿದೆ. ತಾಯಿಗೆ ಗೊತ್ತಿಲ್ಲ.

ಮಕ್ಕಳಿಗೆ ಬಂಗಾರದ ಬಟ್ಟಲಿನಲ್ಲಿ ಹಾಲು ನೀಡಿದರೆ, ಮಕ್ಕಳು ಹಾಲಿಗೆ ಮಹತ್ವ ನೀಡುತ್ತವೆ. ಬಂಗಾರಕ್ಕೆ ಮಹತ್ವ ನೀಡುವುದಿಲ್ಲ. ದೊಡ್ಡವರು ಹಾಲು ಚೆಲ್ಲಿ ಬಟ್ಟಲು ಇಟ್ಟುಕೊಂಡಿರುತ್ತಾರೆ. ಯಾವುದು ಮಹತ್ವದ್ದು?. ಹಾಲು ದೇಹ ಕಾಪಾಡುತ್ತದೆ ತಿಳಿದಿರಬೇಕು. ಹಾಗೆ ಯಾವುದಕ್ಕೆ ಮಹತ್ವ ಕೊಡಬೇಕು ಅದನ್ನು ತಿಳಿದು ಅದರಲ್ಲಿ ತತ್ಪರ ಆಗಬೇಕು. ಅದರಲ್ಲಿ ಮಗ್ನ ಆಗಬೇಕು. ಯಾವುದಕ್ಕೆ ಜಗತ್ತು ಬಹಳ ಮಹತ್ವ ಕೊಡುತ್ತದೆ?. ಯಾವುದಕ್ಕೆ ಯುದ್ದ ಆಗುತ್ತದೆ?. ಯಾವುದಕ್ಕೆ ಲಕ್ಷ ಜನ ಸಾಯುತ್ತಾರೆ?. ಕೋಟ್ಯಾಂತರ ಆಸ್ತಿ ನಾಶವಾಗುತ್ತದೆ. ನಗರ ನಾಶವಾಗುತ್ತದೆ. ಯಾವುದಕ್ಕಾಗಿ?. ಮಹಾಭಾರತ ಯುದ್ಧ ಆಯ್ತು ಏಕೆ?. ಏನು ಸಂತೋಷ ಪಡಲಿಕ್ಕೆ ಏನು?. ಅಲ್ಲ ಒಂದು ಅಂಗೈಯಗಲ ಭೂಮಿ, ಅಧಿಕಾರದ ಕುರ್ಚಿಗಾಗಿ, ಲತ್ತೆ ಆಡೋದಿಕ್ಕೆ. ನಮ್ಮ ಕಡೆ ನಾವು ನೋಡಿದರೆ ನಾವು ಶ್ರೀಮಂತರೇ. ವಸ್ತು ಕಡೆ ನೋಡಿದರೆ ಶ್ರೀಮಂತರು ಆಗುತ್ತೇವೆ. ಬಡವರು ಆಗುತ್ತೇವೆ. ನಾವು ದೇಹಕ್ಕೆ ಮಹತ್ವ ಕೊಡುತ್ತಿಲ್ಲ. ಮನಸ್ಸಿಗೆ ಮಹತ್ವ ಕೊಡುತ್ತಿಲ್ಲ. ಬುದ್ಧಿಗೆ ಮಹತ್ವ ಕೊಡುತ್ತಿಲ್ಲ. ಇವುಗಳನ್ನೆಲ್ಲ ಅರಳಿಸುವ ಆನಂದಕ್ಕೆ ಮಹತ್ವ ಕೊಡುತ್ತಿಲ್ಲ. ವಸ್ತುಗಳಿಗೆ ಮಹತ್ವ ಕೊಡುತ್ತೇವೆ. ಇದರಿಂದ ನಮ್ಮ ಜೀವನ ಹೊಲಸು. ನಮ್ಮ ಜೀವನ ಕಷ್ಟಕ್ಕೆ ಒಳಗಾಗುತ್ತದೆ. ಸಂತೋಷ ಮರೆಯಾಗುತ್ತದೆ. ಮನುಷ್ಯ ಬುದ್ಧಿವಂತ ಅನ್ನುತ್ತೇವೆ. ಯಾರು ಬುದ್ಧಿವಂತರು. ಯಾವುದು ಸರಿ ಯಾವುದು ತಪ್ಪು, ಸರಿಯಾಗಿ ತಿಳಿದವರು. ಯಾವುದು ಹಿತ ಯಾವುದು ಅಹಿತ ಗೊತ್ತಿರಬೇಕು.
ಇದು ಬುದ್ಧಿವಂತಿಕೆ. ಯಾವುದು ಒಳ್ಳೆಯದು?. ಯಾವುದು ಕೆಟ್ಟದ್ದು?. ಅಂತ ನೋಡುವ ವಿವೇಕ ಇರಬೇಕು. 

ಒಬ್ಬ ಸಿರಿವಂತನ ಮನೆಗೆ ಸಿರಿವಂತ ಅತಿಥಿಗಳು ಬಂದಿದ್ದಾರೆ. ಟೇಬಲ್ ಮೇಲೆ ಅಮೆರಿಕಾದ ಸಿಗರೇಟು, ಚಾಕಲೇಟ್ ಇಟ್ಟಿದ್ದಾರೆ. ಮಕ್ಕಳು ಚಾಕಲೇಟ್ ತೆಗೆದುಕೊಳ್ಳುತ್ತವೆ. ದೊಡ್ಡವರು ಕಲ್ಲು ಸಕ್ಕರೆ ತೆಗೆದುಕೊಳ್ಳುವುದಿಲ್ಲ. ಅವರು ಅಮೆರಿಕಾದ ಸಿಗರೇಟ್ ತೆಗೆದು ಕೊಂಡರು. ಯಾರು ಬುದ್ಧಿವಂತರು?. ಲೋಕದ ದೃಷ್ಟಿಯಲ್ಲಿ. ತಂದೆ ಜಾಣ. ಯಾಕೆ ?. ಅದು ಅಮೆರಿಕ ಸಿಗರೇಟ್, ಬೆಲೆ ಜಾಸ್ತಿ. ಚಾಕಲೇಟ್ ಗೆ ಐದು ರೂಪಾಯಿ. ಹುಡುಗ ಶಾಲೆಗೆ ಹೋಗಿಲ್ಲ ದಡ್ಡ ಚಾಕ್ಲೆಟ್ ತೆಗೆದುಕೊಂಡ. ತಂದೆ ವಿದ್ಯಾವಂತ ಬುದ್ಧಿವಂತ ಆದರೆ ಮಗನಷ್ಟು ಬುದ್ಧಿವಂತನಲ್ಲ. ಹುಡುಗ ತಿಳಿದಿದ್ದಾನೆ ತಂದೆಗೆ ಬುದ್ಧಿ ಇಲ್ಲ ಅಂತ. ತಂದೆ ತಿಳಿದುಕೊಂಡಿದ್ದಾನೆ ಮಗ ದಡ್ಡ ಅಂತ. ಯಾರು ಬುದ್ಧಿವಂತರು?. ಹಿತ ಪಡೆಯುವವನು ಬುದ್ಧಿವಂತನೋ?. ಅಹಿತವನ್ನೇ ಆರಿಸಿಕೊಳ್ಳುವ ಜಾಣನೋ?. ಬೆಲೆ ಮುಖ್ಯವಲ್ಲ. ಯಾವುದು ನಮ್ಮ ಜೀವನಕ್ಕೆ ಬೆಲೆ ತಂದುಕೊಡುತ್ತದೆ?. ನಮ್ಮ ಬಂಧನ ನಾಶ ಮಾಡುತ್ತದೆ?. ನಮ್ಮನ್ನು ಮುಕ್ತಿಗೊಳಿಸುತ್ತದೆ. ನಮ್ಮ ಮನಸ್ಸಿನಲ್ಲಿ ಬೆಳಕು ಚೆಲ್ಲುತ್ತದೆ. ಅದು ದೊಡ್ಡದು.

ಶಾಂತಿ ದೊಡ್ಡದೋ?. ಗಳಿಕೆ ದೊಡ್ಡದೋ?. ಅನುಭವಿ ಹೇಳುತ್ತಾರೆ ಅತಿ ಮಹತ್ವದ್ದು ಆನಂದ. ಅದಕ್ಕೆ ಬೆಲೆ ಹೆಚ್ಚು. ಆನಂದಕ್ಕಾಗಿ ಎಲ್ಲ. ವಸ್ತು ಎಲ್ಲಾ ಇರೋದು ಆನಂದಕ್ಕೆ. ತಾಪ ಮಾಡಿಕೊಳ್ಳಲು ಅಲ್ಲ. ಮನೆಯಲ್ಲಿ ಎಷ್ಟು ಸಾಮಾಗ್ರಿದೆ ಮಹತ್ವದಲ್ಲ. ಮನೆಯಲ್ಲಿ ಇರುವವರು ಎಷ್ಟು ಪ್ರಸನ್ನ ಇದ್ದಾರೆ ಅನ್ನೋದು ಬಹಳ ಮಹತ್ವದ್ದು. ದೊಡ್ಡ ಮನೆ ಕಟ್ಟಿದ್ದಾರೆ ದಿನವಿಡೀ ಜಗಳ ಇದ್ದರೆ ಅದು ಎಂತಹ ಮನೆ ಇದ್ದರೆ ಏನು ಉಪಯೋಗ?. ಮನೆಗೆ ಮಹತ್ವ ಅಲ್ಲ. ಮನೆಯೊಳಗೆ ಇರುವವರು ಮಹತ್ವ. ಗುಡಿಸಲಿನಲ್ಲಿ ಇರಬಹುದು ನಗುನಗುತ್ತಾ, ಹಾಡುತ್ತಾ ಇದ್ದರೆ ಆನಂದವಾಗಿದ್ದರೆ ಅದು ಮನೆ. ಅರಮನೆಯ ಜಗಳಕ್ಕೆ ಮಹತ್ವವೊ?. ಗುಡಿಸಲಿನ ಆನಂದಕ್ಕೆ ಮಹತ್ವವೊ?. ವ್ಯತ್ಯಾಸ ಗೊತ್ತಿರಬೇಕು. ಮನೆ ನಮ್ಮನ್ನು ಶ್ರೀಮಂತ ಮಾಡುವುದಿಲ್ಲ. ಮನೆಯೊಳಗೆ ಬದುಕುವ ರೀತಿ ನಮ್ಮನ್ನು ಶ್ರೀಮಂತ ಮಾಡುತ್ತದೆ. ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************



Ads on article

Advertise in articles 1

advertising articles 2

Advertise under the article