ಸ್ಫೂರ್ತಿಯ ಮಾತುಗಳು : ಸಂಚಿಕೆ - 226
Tuesday, August 4, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 226
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಪೆರ್ಲದ ಸವಿ ಹೃದಯದ ಕವಿ ಮಿತ್ರರ ವೇದಿಕೆಯು ಬೆದ್ರಂಪಳ್ಳ “ಪರಿಶ್ರಮ ಗಾರ್ಡನ್ಸ್” ನ ಗೌರವಾನ್ವಿತ ಶ್ರೀಯುತ ಸುಭಾಸ್ ಪೆರ್ಲರವರ ನಿವಾಸದಲ್ಲಿ ದಿನಾಂಕ 26.07.2026ರಂದು ಪೂರ್ವಾಹ್ನ ಘಂಟೆ 10.30ರಂದ ಅಪರಾಹ್ನ ಸಮಯ 4.30ರ ಆಷಾಢ ಸಂಭ್ರಮ 2026ರ ವಿವಿಧ ಕಾರ್ಯಕ್ರಮಗಳು ನಡೆದುವು. ಕಾರ್ಯಕ್ರಮಗಳ ಉದ್ಘಾಟಕನಾಗಿ ವೇದಿಕೆಯನ್ನು ಹಂಚಿಕೊಳ್ಳುವ ಸುವರ್ಣಾವಕಾಶ ನನಗೊದಗಿತು. ಒಂದು ತಿಂಗಳ ಹಿಂದೆಯೇ ಆಮಂತ್ರಣ ನೀಡಿದ್ದುದರಿಂದ ನನ್ನ ಅಧ್ಯಕ್ಷತೆಯ ಮಕ್ಕಳ ಕಲಾಲೋಕದ ಕಣ್ಮಣಿಗಳಿಂದ ಕುಮಾರಿ ಯಕ್ಷಿತಾ ಓಜಾಲ ಮತ್ತು ಶ್ರುತಿಕಾ ಬಾಕಿಮಾರು ಇವರನ್ನು ಕವಿಗೋಷ್ಠಿಯಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದೆ. ಅವರೂ ನನ್ನೊಡನಿದ್ದರು. ಮೇರು ವ್ಯಕ್ತಿಗಳಾದ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ಸುಂದರ ಕಾನ ಮತ್ತು ಕವಿಗೋಷ್ಠಿಯಲ್ಲಿ ಸ್ವರಚಿತ ಸಂಸ್ಕೃತ ಕವನ ವಾಚನ ಮಾಡಿದ್ದ ಶ್ರೀಯುತ ವಿಜಯ ಕಾನ ಕೂಡಾ ನನ್ನೊಂದಿಗಿದ್ದರು. ಬೆದ್ರಂಪಳ್ಳದ ಎತ್ತರದ ಜಮೀನಿನಲ್ಲಿ ಶ್ರೀಯುತ ಸುಭಾಸರ ಮನೆ ಪರಿಶ್ರಮ ಗಾರ್ಡನ್ಸ್ ಇದೆ. ಮಧ್ಯಮ ವಿಸ್ತಾರವಿರುವ ಸಕಲ ಸೌಲಭ್ಯವಿರುವ ಸುಂದರವಾದ ಮನೆ. ಶ್ರೀಯುತ ಸುಭಾಸ್ ಕುಟುಂಬಸ್ಥರು ನಮ್ಮನ್ನು ಆತ್ಮೀಯತೆಯ ನಗುಮೊಗದೊಂದಿಗೆ ಸಾದರಪೂರ್ವಕ ಸ್ವಾಗತಿಸಿ ಉಪಚರಿಸಿದರು. 2024ರ ನವಂಬರ್ ನಲ್ಲಿ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಜರುಗಿದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು ನನ್ನೊಂದಿಗೆ ವೇದಿಕೆಯಲ್ಲಿ ಅವಕಾಶ ಪಡೆದಿದ್ದ ನಾನು ಹಿಂದೆ ನೋಡಿದ್ದ, ಆದರೆ ಈಗ ಆಕೆಯೇ ನೆನಪಿಸಬೇಕಾಗಿ ಬಂದ, ಕುಮಾರಿ ಹರ್ಷಿತಾ ಪೆರ್ಲ ಮಾತ್ರ ಪರಿಚಿತ ಮುಖ. ಖ್ಯಾತ ವ್ಯಂಗ್ಯ ಚಿತ್ರ ಬರಹಗಾರ ವೆಂಕಟ ಭಟ್ ಎಡನೀರು ಬಂದು ಪರಿಚಯ ಮಾಡಿದರು. ಸುಂದರ ಸಜ್ಜನ ಮೃದು ಮಾತುಗಾರ. ನನಗೆ ಹೊಸ ಮುಖ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳು ಅಂದಾಜು ಐವತ್ತು. ಆದರೆ ಈ ವ್ಯಕ್ತಿಗಳು ಅತ್ಯಂತ ಗಣ್ಯರಾಗಿದ್ದರೆಂಬುದು ವಿಶೇಷ. ನನಗೆ ಇವರಲ್ಲಿ ಪೂರ್ವ ಪರಿಚಿತರು ಕೇವಲ ಶೇಕಡಾ ಹತ್ತು ಭಾಗ ಮಾತ್ರ. ಹೆಸರು ಕೇಳಿದ್ದೇವೆ, ಮುಖ ಇವತ್ತು ನೋಡುತ್ತಿದ್ದೇವೆ ಎಂದವರೇ ಅಧಿಕ.
ವ್ಯಂಗ್ಯ ಚಿತ್ರ ಬರಹಗಾರ ವೆಂಕಟ ಭಟ್ ಎಡನೀರು ಇವರ “ಭಟ್ಟಂಗೋಣಿ” ನಾಮಧೇಯದ ವ್ಯಂಗ್ಯ ಚಿತ್ರ ಬರಹ ಪ್ರದರ್ಶನ ನಮ್ಮೆಲ್ಲರ ಗಮನ ಸೆಳೆಯಿತು. ಅವರ ಅತ್ಯುತ್ತಮ ವ್ಯಂಗ್ಯ ಚಿತ್ರಗಳು ನಮ್ಮೊಡನೆ ಬಹಳಷ್ಟು ಮಾತನಾಡಿದುವು. 2020ರ ಕೊರೊನಾಕ್ಕೆ ತಲೆಬಾಗಿದ ವಿಶ್ವದ ಚಿತ್ರ ಬಹಳ ಅರ್ಥಪೂರ್ಣ ಎನಿಸಿತು. ಭಟ್ ರ ಜೊತೆ ನಿಂತು ನಾವು ಒಟ್ಟಿಗೆ ಹೋದವರು ಫೊಟೋ ಕ್ಲಿಕ್ಕಿಸಿದೆವು. ಅವರ ಕಲಾ ಪ್ರೌಢಿಮೆ ನಮ್ಮನ್ನು ಸೆಳೆದಿತ್ತು. ಕಲಾ ರಸಾಸ್ವಾದನೆಯು ನಡೆಯುತ್ತಿದ್ದಂತೆ ಭಟ್ ರು ಒಂದು ಖಾಲಿ ಹಾಳೆ ತಂದು ಕೈಗಿತ್ತರು. ಮಾರ್ಕರ್ ಪೆನ್ ಕೊಟ್ಟು ಆ ಕಾಗದದಲ್ಲಿ ಮನಸ್ಸಿಗೆ ತೋಚಿದಂತೆ ಗೆರೆ ಎಳೆಯಲು ಹೇಳಿದರು. ಯಾವ ಗೆರೆ ಎಳೆಯಲಿ ಎಂದು ಯೋಚಿಸಿದಂತೆ ನನ್ನ ಎದುರಿಗೆ ಯಕ್ಷಿತಾ ಮಗಳು ಬಂದಳು. ಅವಳ ಹೆಸರಿನ ಮೊದಲ ಅಕ್ಷರ “y’’ ಬರೆದೆ. ನಿಮಿಷಾರ್ಧದಲ್ಲಿ ಅದು ವ್ಯಂಗ್ಯಚಿತ್ರಕಾರರ ಕೈಚಳಕದಿಂದ ಕಿವಿ, ಕಣ್ಣು, ಮೂಗು, ಬಾಯಿ, ಕನ್ನಡಕಧಾರಿ ಮುಖವಾಗಿ ನವರೂಪ ಪಡೆಯಿತು. ಆ ಮುಖ ನನ್ನ ಮುಖದಂತೆ ಇತ್ತೆಂಬುದು ಎಲ್ಲರ ಮುಖದಲ್ಲೂ ಅನಂದದ ನಗುವನ್ನು ಚಿಮ್ಮಿಸಿತು.
ಬಂದ ಅತಿಥಿಗಳಿಗೆ ನವದಂಪತಿಗಳಾದ ಜಯಪ್ರಕಾಶ್ ಪವಿತ್ರಾ ಮಣಿಯಂಪಾರೆಯವರ ವೈವಾಹಿಕ ಜೀವನದ ಸವಿನೆನಪಿಗಾಗಿ ಮಸಾಲೆ ಮಿಶ್ರಿತ ಪತ್ರೊಡೆ ಮತ್ತು ಚಹ ವಿತರಣೆಯಾಯಿತು. ಪತ್ರೊಡೆಯ ರಸಾಸ್ವಾದನೆ ಮುಗಿಯುತ್ತಿದ್ದಂತೆ ಅಂದಿನ ಕಾರ್ಯಕ್ರಮ ನಿರೂಪಕ ಶ್ರೀಯುತ ಜಯ ಮಣಿಪಾರೆಯವರ ರಸಯುಕ್ತ ಕಂಠಧ್ವನಿ ಕಿವಿಗೆ ಮುದ ಕೊಡಲಾರಂಭಿಸಿತು. ವೇದಿಕೆಗೆ ಗಣ್ಯರನ್ನು ಕರೆದು ಆಸನ ನೀಡಿ ಕುಳ್ಳಿರಿಸಲಾಯಿತು.
ಪೆರ್ಲ ಶಾಲಾ ವಿದ್ಯಾರ್ಥಿ ಹರೀಶ ಖಂಡಿಗನಿಂದ ಆಟಿಕಳಂಜನ ನೃತ್ಯವು ನಯನ-ಮನಮೋಹಕವಾಗಿ ಪ್ರದರ್ಶನಗೊಂಡಿತು. ಕಳಂಜನಿಗೆ ಸಂಪ್ರಾಯಿಕ ಉಡುಗೊರೆ ಮತ್ತು ನಗದು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದೆನು.
ಕಳಂಜನ ಜೊತೆ ಹಲವು ಅಭಿಮಾನಿಗಳು ಫೊಟೋ ಕ್ಲಿಕ್ಕಿಸಿ ಖುಷಿಯನ್ನು ಆಸ್ವಾದಿಸಿದರು. ಆಟಿ ಜನ ಕುರಿತಾಗಿ ಸಣ್ಣ ಪರಿಚಯ ಹೇಳಿ ಯಾವುದೇ ವೇದಿಕೆಯ ಆಯುಷ್ಯ ಮತ್ತು ಕ್ರಮಗಳ ಯಶಸ್ಸು ಅದರ ಭಾರವಾಹಿಗಳ ಕ್ರಿಯಾ ಬದ್ಧತೆ, ಸಮುದಾಯದ ಜನರೊಡನೆ ಹೊಂದಿರುವ ಒಡನಾಟ, ಸಂವಹನ ವಿಧಾನ ಮತ್ತು ಧ್ಯೇಯ ಸಾಧನೆಯ ತುಮುಲವನ್ನು ಆಧರಿಸಿದೆ. ಸುಭಾಷ್ ಪೆರ್ಲರವರ ನಾಯಕತ್ವದಲ್ಲಿ ಸವಿಹೃದಯದ ಕವಿ ಮಿತ್ರರ ವೇದಿಕೆಯು ಹಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಕನ್ನಡ ಭಾಷೆಯ ಉಳಿವಿಗಾಗಿ ಗಡಿನಾಡಿನಲ್ಲಿ ಮಾಡುತ್ತಿರುವ ಅವರ ಎಲ್ಲ ಚಟುವಟಿಕೆಗಳು ಪ್ರಶಂಸನಾರ್ಹವಾಗಿವೆ.
ಯಥಾ ಚಿತ್ತಂ ತಥಾ ವಾಚಂ |
ಯಥಾ ವಾಚಂ ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹಾತಮೇಕರೂಪತಾ|
ಎನ್ನುವಂತೆ ಸುಭಾಸರ ತಂಡ ಮಾಡಿದ ನಿರ್ಧಾರ, ಹೇಳಿದ ಮಾತುಗಳಂತೆ ಕಾರ್ಯ ರೂಪಕ್ಕಿಳಿಸುತ್ತಿರುವುದು ಅಭಿನಂದನೀಯ ಎಂಬ ಪ್ರೇರಣೆಯ ಮಾತುಗಳನ್ನು ಹೇಳಿದ್ದೇನೆ.
ಮುಂದುವರಿಯುತ್ತದೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************