-->
ಮಳೆಯ ವಿಶೇಷ ಅನುಭವ : ಸಂಚಿಕೆ - 02

ಮಳೆಯ ವಿಶೇಷ ಅನುಭವ : ಸಂಚಿಕೆ - 02

ಮಳೆಯ ವಿಶೇಷ ಅನುಭವ : ಸಂಚಿಕೆ - 02
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ.. 

ಜಗಲಿಯ ಮಕ್ಕಳ ಅನುಭವ ಬರಹಗಳು

◾ ಹರ್ಷಿತ ಎಸ್ ವೈ, 5ನೇ ತರಗತಿ
◾ ಅಮೋಘ ಎಸ್, 6ನೇ ತರಗತಿ
◾ ನಿಧಿ ಕೈರಂಗಳ, 3ನೇ ತರಗತಿ
◾ ಶಾಹಿನ ಭಾನು, 9ನೇತರಗತಿ
◾ ಶ್ರೀನಿಧಿ, 9ನೇ ತರಗತಿ
◾ ಭವಿತ್ ನಾಯ್ಕ್ , 10ನೇ ತರಗತಿ
◾ ಕೆ. ವೈಷ್ಣವಿ ಶೆಟ್ಟಿ, 3ನೇ ತರಗತಿ
◾ ಶೈಫ, 5ನೇ ತರಗತಿ



ಮಳೆಯಿಂದಾಗಿ ಮನೆಯಂಗಳ ಮಿನಿ ಸ್ವಿಮ್ಮಿಂಗ್ ಪೂಲ್ ಆಗಿತ್ತು. ನಾನು ಮತ್ತು ನನ್ನ ಗೆಳತಿಯರು ಸೇರಿ ಹಳೆಯ ನ್ಯೂಸ್ ಪೇಪರ್ ನಲ್ಲಿ ದೊಡ್ಡದೊಂದು ಕಾಗದದ ದೋಣಿಯನ್ನು ಮಾಡಿ, ಅದಕ್ಕೆ ಟೈಟಾನಿಕ್ 2026 ಎಂದು ಹೆಸರಿಟ್ಟು ನೀರಿಗೆ ಬಿಟ್ಟೆವು. ಅದು ತುಂಬಾ ಸ್ಟೈಲ್ ಆಗಿ ತೇಲುತ್ತಾ ಹೋಗುತ್ತಿತ್ತು. ಈ ಪ್ರಯತ್ನದಲ್ಲಿ ಯಶಸ್ವಿಯಾದೆವು ಎಂದುಕೊಳ್ಳುವ ಹೊತ್ತಿಗೆ, ನಮ್ಮ ಮನೆಯ ನಾಯಿ ಬೆಕ್ಕನ್ನು ಓಡಿಸುವ ರಭಸದಲ್ಲಿ ನೀರಿನೊಳಗೆ ದಫ್ ಎಂದು ಜಿಗಿಯಿತು ಅಷ್ಟೇ! ನಾಯಿ ಎಬ್ಬಿಸಿದ ಅಲೆಯಲ್ಲಿ ನಮ್ಮ ಟೈಟಾನಿಕ್ ಒಂದೇ ಸೆಕೆಂಡ್ ನಲ್ಲಿ ಮುಳುಗಿ ಜಲ ಸಮಾಧಿಯಾಯಿತು. ನಾಯಿ ಮಾತ್ರ ಅದನ್ನು ನೋಡಿ ತಾನು ಏನು ಮಾಡಿಲ್ಲವೆಂಬಂತೆ ತನಗೇನು ಗೊತ್ತಿಲ್ಲವೆಂಬಂತೆ ಬಾಲ ಅಲ್ಲಾಡಿಸುತ್ತಾ ನನ್ನ ಕಾಲ ಬಳಿಯ ಬಂದು, ಇದು ತಾನು ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಕೇಳುವ ರೀತಿಯಲ್ಲಿ ನಿಂತುಕೊಂಡಿತು ಎಂಬಂತೆ ನನಗೆ ಅನ್ನಿಸಿತು!
........................................... ಹರ್ಷಿತ ಎಸ್ ವೈ 
5ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮೇಶ್ವರ
ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ
******************************************



ಜೋರಾದ ಮಳೆಯ ಮುನ್ಸೂಚನೆಯಿದ್ದ ಕಾರಣ ಶಾಲೆಗೆ ರಜೆ ಸಿಕ್ಕಿತ್ತು. ಜೋರಾದ ಗಾಳಿಗೆ ನಮ್ಮ ಮನೆಯ ಪಕ್ಕದಲ್ಲಿ ಇದ್ದ ಮರದ ಒಂದು ಕೊಂಬೆ ನೆಲಕ್ಕೆ ಬಿತ್ತು. ಆ ಕೊಂಬೆಯಲ್ಲಿ ಒಂದು ಸಣ್ಣ ಪಕ್ಷಿ ತನ್ನ ಮರಿಗಳೊಂದಿಗೆ ಗೂಡು ಕಟ್ಟಿತ್ತು. ಕೊಂಬೆ ಕೆಳಗೆ ಬಿದ್ದಿದ್ದರಿಂದ ಆ ಪಕ್ಷಿ ಕೂಡ ಮರಿಗಳೊಂದಿಗೆ ನೆಲಕ್ಕೆ ಬಿತ್ತು. ಸ್ವಲ್ಪ ಸಮಯದ ನಂತರ ನೋಡಿದರೆ ಆ ಪಕ್ಷಿ ಮರಿಗಳೊಂದಿಗೆ ನಮ್ಮ ಮನೆಯ ಮೇಲಕ್ಕೆ ಹೋಗುವ ಮೆಟ್ಟಿಲುಗಳ ಕೆಳಗೆ ಕುಳಿತಿದ್ದವು. ನಾನು ಅವುಗಳಿಗೆ ಸ್ವಲ್ಪ ಕಾಳುಗಳನ್ನು ತಂದು ಹಾಕಿದೆ. ಅವುಗಳು ಸ್ವಲ್ಪ ಅನುಮಾನಿಸುತ್ತ ನಿಧಾನವಾಗಿ ಒಂದೊಂದು ಕಾಳುಗಳನ್ನು ಹೆಕ್ಕಿ ತಿಂದವು. ಮರುದಿನ ನಾನು ಏಳುವ ಮೊದಲೇ ಪಕ್ಷಿ ಮತ್ತು ಮರಿಗಳು ಬಾಗಿಲಿನ ಬಳಿ ಕಾಯುತ್ತಿದ್ದವು. ಈ ಬಾರಿ ನಾನು ಹಾಕಿದ ಕಾಳುಗಳನ್ನು ಧೈರ್ಯದಿಂದ ತಿಂದದ್ದು ನೋಡಿ ನನಗೆ ಸಂತೋಷವಾಯಿತು. ಹೀಗೆ 2-3 ದಿನ ಕಳೆದಾಗ ಮಳೆ ಕಡಿಮೆಯಾಯಿತು. ಪಕ್ಷಿ ತನ್ನ ಮರಿಗಳೊಂದಿಗೆ ಬೇರೆ ಮರಕ್ಕೆ ಹಾರಿ ಹೋಯಿತು. ಇದರಿಂದ ನನಗೆ ಬೇಸರವಾದರೂ ಏನೋ ಒಂದು ಖುಷಿಯಿತ್ತು.
........................................... ಅಮೋಘ ಎಸ್ 
6ನೇ ತರಗತಿ
ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************





ಮಳೆ ಎಂದರೆ ನನಗೆ ತುಂಬಾ ಇಷ್ಟ.
ನನ್ನ ಮನೆಯ ಪಕ್ಕ ನನ್ನ ಅಪ್ಪನ ಶಾಲೆ ಇದೆ.
ದಿನಾಲು ಆಟ ಆಡಲು ಹೋಗುತ್ತೇನೆ. ಮೊನ್ನೆ ಅಪ್ಪನ ಶಾಲೆಯಿಂದ ಬರುವಾಗ ನಾನು ದಾರಿಯಲ್ಲಿ ಜಾರಿ ಬಿದ್ದೆ. ನನ್ನ ಕಾಲಿಗೆ ತುಂಬಾ ನೋವಾಯಿತು. ನನ್ನ ಅಮ್ಮ ಮದ್ದು ಹಚ್ಚಿದರು. ನಾನುಮಳೆಯಲ್ಲಿ ಆಟ ಆಡುತ್ತೇನೆ. ನಾನು ಮತ್ತು ಅಣ್ಣ ಕಳೆದ ವರ್ಷ ಕಾಗದದ ದೋಣಿ ಮಾಡಿ ಮನೆಯ ಅಂಗಳದಲ್ಲಿ ಮಳೆಯ ನೀರಲ್ಲಿ ಬಿಟ್ಟಿದ್ದೆವು. ತುಂಬಾ ಖುಷಿಯಾಗುತ್ತಿತ್ತು. ಈ ವರ್ಷ ಕಾಗದ ದೋಣಿ ಬಿಡಲಿಲ್ಲ. ಜೋರು ಮಳೆ ಬಂದಾಗ ಇನ್ನೊಮ್ಮೆ ಕಾಗದ ದೋಣಿ ಬಿಡುತ್ತೇನೆ. ಈಗ ಶಾಲೆಗೆ ತುಂಬಾ ಮಳೆರಜೆ ಸಿಕ್ಕಿದೆ. ರಜೆಯಲ್ಲಿ ನಾನು ಕನ್ನಡ, ಇಂಗ್ಲಿಷ್, ಪರಿಸರ ಪಾಠದ ಚಿತ್ರ ಬಿಡಿಸಿದ್ದೇನೆ. ಮನೆ ಕೆಲಸ ಮಾಡಿದ್ದೇನೆ. ನಮ್ಮ ಮನೆಯ ರೂಬಿ ಜೋರು ಮಳೆಗೆ ಒದ್ದೆಯಾಗಿ ಬಂದಿದ್ದ. ನಾನು ಅದರ ಬೆನ್ನನ್ನು ಒರೆಸುವಾಗ ಅಪ್ಪಬಿಡಲಿಲ್ಲ. ಮತ್ತೆ ಅವನೇ ನೆಕ್ಕಿ ನೆಕ್ಕಿ ಮೈಯನ್ನು ಒಣಗಿಸಿದ. ಈ ವರ್ಷ ಮಳೆ ನನಗೆ ತುಂಬಾ ಖುಷಿ ತಂದಿದೆ. 
........................................... ನಿಧಿ ಕೈರಂಗಳ         
3ನೇ ತರಗತಿ ಮಾಧವ 
ಶ್ರೀರಾಮ ವಿದ್ಯಾ ಕೇಂದ್ರ, ಹನುಮಾನ್ ನಗರ
ಕಲ್ಲಡ್ಕ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
*****************************************



ಈ ವರ್ಷ ಜೂನ್ ತಿಂಗಳ ಮೊದಲ ವಾರದಲ್ಲಿ ನಮ್ಮ ಊರಿಗೆ ಮೊದಲ ಮಳೆ ಬಂತು. ಆ ದಿನ ನಾನು ಶಾಲೆಯಿಂದ ಮನೆಗೆ ಬರುವಾಗ ಇದ್ದಕಿದ್ದಂತೆ ಜೋರಾಗಿ ಮಳೆ ಸುರಿಯಿತು. ನಾನು ಮತ್ತು ನನ್ನ ಸ್ನೇಹಿತರು ಮಳೆಯಲ್ಲಿ ನೆನೆದೆವು. ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿತ್ತು. ನಾವು ಚಪ್ಪಲಿಯನ್ನು ನೀರಿನಲ್ಲಿ ತೇಲಾಡಿಸಿ ಸಂತಸ ಪಟ್ಟೆವು. ಒಬ್ಬರ ಮೇಲೆ ಒಬ್ಬರು ನೀರು ಚಿಮ್ಮಿ ತುಂಬಾ ನಕ್ಕಿದೆವು.
       ಆದರೆ ಈ ಸಲದ ಮಳೆಯಿಂದ ಕೆಲವು ಕಷ್ಟಗಳು ಆದವು. ನಮ್ಮ ಊರಿನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ರೈತರ ಹೊಲದ ಬೆಳೆಗಳು ನೀರಿನಲ್ಲಿ ಮುಳುಗಿ ಹಾಳಾದವು. ಎರಡು ಮೂರು ದಿನ ವಿದ್ಯುತ್ ಸಮಸ್ಯೆ ಕೂಡ ಇದ್ದವು. ಆದರೂ ಮಳೆಯಿಂದ ಒಳ್ಳೆಯದು ಆಯ್ತು. ಮಳೆಯಿಂದಾಗಿ ಒಣಗಿದ ಕೆರೆ, ಕೊಳಗಳು ತುಂಬಿದವು. ಗಿಡಮರಗಳು ಹಸಿರಾದವು, ರೈತರು ಸಂತೋಷದಿಂದ ಬಿತ್ತನೆ ಕೆಲಸ ಪ್ರಾರಂಭಿಸಿದರು. ಹಕ್ಕಿಗಳು ಮರದ ಕೊಂಬೆ ಮೇಲೆ ಕೂತು "ಚಿಲಿಪಿಲಿ" ಎಂದು ಹಾಡಿದವು. ಮಳೆ ಇಲ್ಲದೆ ಮನುಷ್ಯ ಪ್ರಾಣಿ ಗಿಡ ಮರ ಹೀಗೆ ಜೀವನವೇ ಇಲ್ಲ ಎಂದು ನನಗೆ ಅರ್ಥವಾಯಿತು.
........................................... ಶಾಹಿನ ಭಾನು
9ನೇ ತರಗತಿ
ಸರಕಾರಿ ಫ್ರೌಡ ಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************




ಜೋರು ಮಳೆ ಬಂದ ದಿನ ಬೆಳಿಗ್ಗೆ ಎದ್ದೇಳಲು ಮನಸ್ಸಿಲ್ಲದಿದ್ದರೂ ಬೇಗ ಎದ್ದು ನೋಡುವುದೇ ಮೊಬೈಲ್. ಅದರಲ್ಲಿ ರಜೆ ಎಂದು ಬಂದಿದ್ದರೆ ಖುಷಿಯೊ ಖುಷಿ. ರಜೆ ಇಲ್ಲದಿದ್ದರೆ ಶಾಲೆಗೆ ಹೋಗಬೇಕೆಂಬ ಬೇಜಾರು. ಆದರೂ ಶಾಲೆಗೆ ಹೋದ ನಂತರ ಖುಷಿ ಆಗುತ್ತದೆ. ಒಂದು ಕಡೆ ದುಃಖ ಕೂಡ ಇರುತ್ತದೆ. ಅದು ಕೂಡ ತುಂಬಾ ಹೋಮ್ ವರ್ಕ್ ಕೊಟ್ಟಿದ್ದರೆ ನೆಕ್ಸ್ಟ್ ಡೇ ಪರೀಕ್ಷೆ ಇದ್ದರೆ ರಜೆ ಸಿಗಲಿ ಎಂದು ಆಗುತ್ತದೆ. 
      
ಶಾಲೆಗೆ ಬಸ್ಸಲ್ಲಿ ಹೋಗುವಾಗ ಮಳೆಯೊ ಮಳೆ. ಬಸ್ಸಿನಿಂದ ಇಳಿದು ಛತ್ರಿ ಹಿಡಿದುಕೊಂಡು ಹೋಗುವುದು ದೊಡ್ಡ ಕಿರಿಕಿರಿ. ನನಗಂತೂ ಛತ್ರಿ ಹಿಡಿದುಕೊಂಡು ಹೋಗುವುದೇ ಇಷ್ಟ ಇಲ್ಲ. ಶಾಲೆಯೊಳಗೆ ಹೋದಮೇಲೆ ಮಳೆ ನಿಲ್ಲುತ್ತದೆ. ಮಧ್ಯಾಹ್ನದ ನಂತರ ಆಟದ ಸಮಯದಲ್ಲಿ ನಾವು ಆಟಕ್ಕೆ ಹೋಗುವಾಗ ಜೋರು ಮಳೆ ಬರುತ್ತದೆ. ಆಗ ಟೀಚರ್ ಮತ್ತೆ ಕ್ಲಾಸಿಗೆ ಕಳಿಸುತ್ತಾರೆ. ನಾವು ಕ್ಲಾಸಿಗೆ ಹೋದ ನಂತರ ಮಳೆ ನಿಲ್ಲುತ್ತದೆ. ಆಗ ತುಂಬಾ ಕೋಪ ಬರುತ್ತದೆ. 
..................................................... ಶ್ರೀನಿಧಿ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************




ಒಂದು ಮಧುರ ಅನುಭವ ಮಳೆ ಎಂದರೆ ಪ್ರಕೃತಿಯ ಸೌಂದರ್ಯದ ಸಂಕೇತ. ಆಕಾಶದಿಂದ ಬೀಳುವ ಮಳೆಯ ಪ್ರತಿಯೊಂದು ಹನಿಯೂ ಕಾದ ಭೂಮಿಗೆ ತಂಪೆರೆದರೆ, ನನ್ನ ಮನಸ್ಸಿಗೆ ಹೊಸದೊಂದು ಅಧ್ಯಯನದ ಉತ್ಸಾಹವನ್ನು ತರುತ್ತದೆ. ನಾನು ಪ್ರಸ್ತುತ ಹತ್ತನೇ ತರಗತಿಯಲ್ಲಿ ಓದುತ್ತಿರುವುದರಿಂದ ಪ್ರತಿಯೊಂದು ದಿನವೂ ನನಗೆ ಅತ್ಯಂತ ಅಮೂಲ್ಯವಾಗಿದೆ. ಹಾಗಾಗಿ, ಬೇರೆ ಮಕ್ಕಳಿಗೆ ಮಳೆ ಬಂದರೆ ಶಾಲೆಗೆ ರಜೆ ಸಿಗಲಿ ಎಂಬ ಆಸೆ ಇರುತ್ತದೆ, ಆದರೆ ನನಗೆ ಮಾತ್ರ ರಜೆ ಎಂದರೆ ಅಷ್ಟಾಗಿ ಇಷ್ಟವಿಲ್ಲ. ಶಾಲೆಗೆ ಹೋಗುವುದು, ಹೊಸ ವಿಷಯಗಳನ್ನು ಕಲಿಯುವುದು ಹಾಗೂ ಓದು-ಬರಹದಲ್ಲಿ ಮುಳುಗಿರಲು ನಾನು ಹೆಚ್ಚು ಇಷ್ಟಪಡುತ್ತೇನೆ. ಈ ಬಾರಿಯ ಮಳೆಗಾಲವು ನನ್ನ ಓದಿನ ಹವ್ಯಾಸಕ್ಕೆ ಅಪಾರ ಖುಷಿ, ಒಂದು ಮಜಾವಾದ ಹಾಸ್ಯದ ಪ್ರಸಂಗ ಹಾಗೂ ಕೊಂಚ ಬೇಸರ ತಂದ ಸಣ್ಣದೊಂದು ದುಃಖದ ನೆನಪನ್ನು ಒಟ್ಟಿಗೆ ನೀಡಿದೆ.

ಮಳೆಗಾಲದಲ್ಲಿ ನನಗೆ ಸಿಗುವ ಅತ್ಯಂತ ದೊಡ್ಡ ಖುಷಿ ಎಂದರೆ ನನ್ನ ಓದಿನ ಕೋಣೆಯ ವಾತಾವರಣ. ಜೋರಾಗಿ ಮಳೆ ಸುರಿಯುತ್ತಿರುವಾಗ, ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ತಂಪಾದ ಗಾಳಿಯ ನಡುವೆ ಗಣಿತದ ಲೆಕ್ಕಗಳನ್ನು ಬಿಡಿಸುವುದು ಅಥವಾ ಕನ್ನಡದ ಸುಂದರ ಕವಿತೆಗಳನ್ನು ಓದುವುದು ನನಗೆ ಎಲ್ಲಿಲ್ಲದ ಆನಂದವನ್ನು ನೀಡುತ್ತದೆ. ಹೊರಗೆ ಮಳೆಯ ಹನಿಗಳು ತಟ್ಟುವ ಶಬ್ದವು ನನ್ನ ಏಕಾಗ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಳೆಯ ದಿನಗಳಲ್ಲಿ ಬೇರೆ ಮಕ್ಕಳು ಆಟವಾಡಲು ಹೊರಗೆ ಓಡಿದರೆ, ನಾನು ಮಾತ್ರ ಹೊಸ ಪುಸ್ತಕಗಳನ್ನು ಕೈಗೆತ್ತಿಕೊಂಡು ಜ್ಞಾನಾರ್ಜನೆ ಮಾಡುವುದರಲ್ಲಿ ಅಪಾರ ಖುಷಿ ಕಾಣುತ್ತೇನೆ. ಪುಸ್ತಕದ ಪುಟಗಳನ್ನು ಮಗುಚುತ್ತಾ, ಮಳೆಯ ಸೌಂದರ್ಯವನ್ನು ಆಸ್ವಾದಿಸುತ್ತಾ ಕಲಿಯುವ ಆ ಕ್ಷಣಗಳು ನನ್ನ ಅಧ್ಯಯನ ಜೀವನದ ಅತ್ಯಂತ ಸುಂದರ ದಿನಗಳಾಗಿವೆ. 

ಇದೇ ಮಳೆಯ ನಡುವೆ ಒಂದು ದಿನ ನನ್ನ ಓದಿನ ಕೋಣೆಯಲ್ಲೇ ಒಂದು ಮಜಾವಾದ ಹಾಸ್ಯ ಪ್ರಸಂಗ ನಡೆಯಿತು. ಅಂದು ಸಾಯಂಕಾಲ ನಾನು ಹತ್ತನೇ ತರಗತಿಯ ಪರೀಕ್ಷೆಯ ಸಿದ್ಧತೆಗಾಗಿ ವಿಜ್ಞಾನ ವಿಷಯದ ಪ್ರಮುಖ ನೋಟ್ಸ್ ಬರೆಯುತ್ತಾ ಸಂಪೂರ್ಣವಾಗಿ ತಲ್ಲೀನನಾಗಿದ್ದೆ. ಹೊರಗೆ ಜೋರು ಮಳೆಯ ಜೊತೆಗೆ ಗುಡುಗು-ಮಿಂಚು ಆರಂಭವಾಗಿತ್ತು. ಇದ್ದಕ್ಕಿದ್ದಂತೆ ಜೋರಾದ ಶಬ್ದದೊಂದಿಗೆ ಸಿಡಿಲು ಬಡಿದಂತಾಗಿ ನಮ್ಮ ಮನೆಯ ವಿದ್ಯುತ್ ಸಂಪರ್ಕ (Power) ಕಡಿತಗೊಂಡು ಕತ್ತಲಾಯಿತು. ನಾನು ನನ್ನ ಓದಿನ ಮೂಡ್ ಕೆಡಬಾರದೆಂದು ತಕ್ಷಣವೇ ಮೇಜಿನ ಮೇಲಿದ್ದ ಮೇಣದಬತ್ತಿಯನ್ನು ಹಚ್ಚಿ, ಅದರ ಸಣ್ಣ ಬೆಳಕಿನಲ್ಲೇ ಅತ್ಯಂತ ಗಂಭೀರವಾಗಿ ಬರೆಯಲು ಮುಂದುವರಿದೆ. ಅಷ್ಟರಲ್ಲಿ ನಮ್ಮ ಮನೆಯ ಮುದ್ದಿನ ನಾಯಿ ‘ಟಾಮಿ’ ಗುಡುಗಿನ ಶಬ್ದಕ್ಕೆ ಹೆದರಿ ಓಡೋಡಿ ಬಂದು ನೇರವಾಗಿ ನನ್ನ ಮೇಜಿನ ಕೆಳಗೆ ನುಗ್ಗಿತು. ಕತ್ತಲಲ್ಲಿ ಅದರ ಬಾಲ ನನ್ನ ಕಾಲಿಗೆ ತಗುಲಿದಾಗ, ನಾನು ಯಾವುದೋ ಹಾವು ಬಂದಿದೆ ಎಂದುಕೊಂಡು ಹೆದರಿ, ಕೈಯಲ್ಲಿದ್ದ ಪೆನ್ನನ್ನು ಗಾಳಿಯಲ್ಲಿ ತೂರಿ ಜೋರಾಗಿ ಕಿರುಚುತ್ತಾ ಕುರ್ಚಿಯಿಂದ ಹಿಂದೆ ಬಿದ್ದೆ! ನನ್ನ ಕೂಗನ್ನು ಕೇಳಿ ಅಮ್ಮ ಬ್ಯಾಟರಿ ಬೆಳಕು ಹಿಡಿದುಕೊಂಡು ಓಡಿ ಬಂದರು. ಅಲ್ಲಿ ನಾನು ಕೆಳಗೆ ಬಿದ್ದಿರುವುದನ್ನು ಮತ್ತು ಟಾಮಿ ಹೆದರಿ ನನ್ನನ್ನೇ ನೋಡುತ್ತಿರುವುದನ್ನು ಕಂಡು ಅಮ್ಮ ಹೊಟ್ಟೆ ಹಿಡಿದು ನಗಲಾರಂಭಿಸಿದರು. ನನ್ನ ಗಂಭೀರವಾದ ಓದಿನ ನಡುವೆ ನಡೆದ ಈ ಹಾಸ್ಯ ಪ್ರಸಂಗವನ್ನು ನೆನೆದರೆ ಈಗಲೂ ನನಗೆ ನಗು ಬರುತ್ತದೆ.

ಆದರೆ, ಈ ಖುಷಿ ಮತ್ತು ಹಾಸ್ಯದ ನಡುವೆ ಒಂದು ಸಣ್ಣ ಬೇಸರದ ಸಂಗತಿಯೂ ನಡೆಯಿತು. ಮಳೆಯ ತಂಪಾದ ಹವಾಮಾನ ಮತ್ತು ಕತ್ತಲಲ್ಲಿ ಮೇಣದಬತ್ತಿಯ ಬೆಳಕಿನಲ್ಲಿ ತಡರಾತ್ರಿಯವರೆಗೆ ಓದಿದ್ದರಿಂದ ನನಗೆ ಮರುದಿನ ಜೋರಾಗಿ ಜ್ವರ ಹಾಗೂ ತಲೆನೋವು ಬಂದುಬಿಟ್ಟಿತು. ಬೆಳಗ್ಗೆ ಎದ್ದಾಗ ಮೈಯೆಲ್ಲಾ ಸುಡುತ್ತಿತ್ತು, ಕಣ್ಣು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಮರುದಿನ ಶಾಲೆಗೆ ಹೋಗಲು ಸಿದ್ಧನಾಗುತ್ತಿದ್ದ ನನ್ನನ್ನು ನೋಡಿ ಅಮ್ಮ ಬಲವಂತವಾಗಿ ಹಾಸಿಗೆಯಲ್ಲೇ ಮಲಗಿಸಿದರು. ಅಂದು ಶಾಲೆಯಲ್ಲಿ ಅತ್ಯಂತ ಪ್ರಮುಖವಾದ ಗಣಿತ ತರಗತಿ ಇತ್ತು. ಜ್ವರದ ಕಾರಣ ನಾನು ಶಾಲೆಗೆ ಹೋಗಲಾಗದೆ, ಓದು-ಬರಹದಿಂದ ದೂರ ಉಳಿಯಬೇಕಾಗಿ ಬಂದದ್ದನ್ನು ನೆನೆದು ನನಗೆ ತುಂಬಾ ದುಃಖವಾಯಿತು. ಅಮ್ಮ ಮಾಡಿಕೊಟ್ಟ ಕಹಿ ಕಷಾಯವನ್ನು ಕುಡಿಯುತ್ತಾ, ನನ್ನ ಇಷ್ಟದ ಪುಸ್ತಕಗಳನ್ನು ಮುಟ್ಟಲಾಗದ ಆ ಸ್ಥಿತಿಯನ್ನು ನೆನೆದು ಕಣ್ಣಲ್ಲಿ ನೀರು ಬಂದಿತು. ಮಳೆರಾಯ ತಂದ ತಂಪು, ನನ್ನ ಓದಿಗೆ ಜ್ವರದ ರೂಪದಲ್ಲಿ ಅಡ್ಡಿಪಡಿಸಿತಲ್ಲಾ ಎಂಬ ಸಣ್ಣ ಬೇಸರ ನನ್ನನ್ನು ಕಾಡಿತು. ಏನೇ ಆಗಲಿ, ಮಳೆ ತರುವ ಆ ಖುಷಿ ಮತ್ತು ನೆನಪುಗಳು ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಹಸಿರು. 

ಜ್ವರ ಬಂದಾಗ ಓದಲು ಸಾಧ್ಯವಾಗದೆ ಸ್ವಲ್ಪ ಬೇಸರವಾದರೂ, ಮಳೆಯ ದಿನದ ತಂಪಾದ ಓದಿನ ಅನುಭವ ಮತ್ತು ಕತ್ತಲಲ್ಲಿ ನಾಯಿಯ ಕಾರಣಕ್ಕೆ ನಾನು ಹೆದರಿ ಬಿದ್ದ ಆ ಹಾಸ್ಯದ ಕ್ಷಣಗಳನ್ನು ನೆನೆದರೆ ಈಗಲೂ ನನ್ನ ಮುಖದಲ್ಲಿ ನಗು ಮೂಡುತ್ತದೆ. ಮಳೆ ಎನ್ನುವುದು ಕೇವಲ ನೀರ ಹನಿಗಳಲ್ಲ, ಅದು ನನ್ನಂತಹ ವಿದ್ಯಾರ್ಥಿಯ ಜ್ಞಾನದ ಹಸಿವನ್ನು ಹೆಚ್ಚಿಸುವ ಪ್ರಕೃತಿಯ ಒಂದು ಸುಂದರ ಕೊಡುಗೆ.
........................................... ಭವಿತ್ ನಾಯ್ಕ್
10ನೇ ತರಗತಿ
ಸರಕಾರಿ ಪ್ರೌಢ ಶಾಲೆ ಸರಪಾಡಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


        

ಹಲವು ವರ್ಷಗಳ ಮೊದಲು ಜೂನ್ 1ನೇ ತಾರೀಕಿಗೆ ಶಾಲಾ ಪ್ರಾರಂಭೋತ್ಸವವೆಂದರೆ ಅದೇ ದಿವಸಕ್ಕೆ ಮಳೆ ಆಗುತ್ತಿತ್ತಂತೆ. ಈ ವರ್ಷ ಮಳೆ ತಡವಾಗಿ ಆರಂಭವಾದರೂ ಜೋರು ಮಳೆ ಬಂದಾಗ ನಮ್ಮ ಶಾಲೆಗೆ ರಜೆಯನ್ನು ನೀಡಿದರು. ಆದರೆ ಕೆಲವು ಸಲ ಮಳೆ ಬಾರದೆ ಇದ್ದಾಗ ಮನೆ ಹತ್ತಿರದ ಗೆಳೆಯರೊಂದಿಗೆ ಆಟವಾಡಿದ್ದೇನೆ. ಆದರೆ ಈ ರಜೆ ಸರಿದೂಗಿಸಲು ಶನಿವಾರದ ದಿನ ನಡೆಸುವ ತರಗತಿಯನ್ನು ನೆನೆದು ದುಃಖವೂ ಆಯಿತು.                
........................................... ಕೆ. ವೈಷ್ಣವಿ ಶೆಟ್ಟಿ
3ನೇ ತರಗತಿ
ಆರ್ ಎಂ ಎಸ್ ಎ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                         

'ಮಳೆ' ಪ್ರಕೃತಿಯು ನಮಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಉಳಿವಿಗೆ ಮಳೆ ಅತ್ಯಗತ್ಯ. ಮಳೆಯ ನೀರು ಕೆರೆ, ನದಿ ಮತ್ತು ಬಾವಿಗಳನ್ನು ತುಂಬಿಸಿ ನಮಗೆ ಕುಡಿಯುವ ನೀರನ್ನು ಒದಗಿಸುತ್ತದೆ. ನಮ್ಮ ದೇಶದ ಬೆನ್ನೆಲುಬಾದ ರೈತರಿಗೆ ಮಳೆ ತುಂಬಾ ಮುಖ್ಯ. ಉತ್ತಮ ಮಳೆಯಾದರೆ ಮಾತ್ರ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಮಳೆಯು ವಾತಾವರಣದ ಶಾಖವನ್ನು ಕಡಿಮೆ ಮಾಡಿ, ಪರಿಸರವನ್ನು ತಂಪಾಗಿಸುತ್ತದೆ ಮತ್ತು ಪ್ರಕೃತಿಯನ್ನು ಹಸಿರಾಗಿಡುತ್ತದೆ. ಮಳೆ ಬರುವಾಗ ಮಕ್ಕಳು ಕಾಗದದ ದೋಣಿಗಳನ್ನು ಮಾಡಿ ನೀರಿನಲ್ಲಿ ತೇಲಿ ಬಿಡುತ್ತಾ ತುಂಬಾ ಆನಂದದಿಂದ ಆಟವಾಡುತ್ತಾರೆ. ಪ್ರಕೃತಿಯ ಸಮತೋಲನವನ್ನು ಕಾಪಾಡಲು ಮಳೆ ಬಹಳ ಮುಖ್ಯವಾಗಿದೆ.
................................................... ಶೈಫ
5ನೇ ತರಗತಿ
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ನರಿಕೊಂಬು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



    

Ads on article

Advertise in articles 1

advertising articles 2

Advertise under the article