ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 137
Wednesday, August 26, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 137
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ವಿಜ್ಞಾನ ಸತ್ಯವನ್ನು ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ ಎಂದು ನೀವು ತಿಳಿದುಕೊಂಡಿರಬಹುದು. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಪೂರ್ವಾಗ್ರಹಪೀಡಿತ ಮನೋಭಾವಗಳನ್ನೂ ಬೆಳೆಸುತ್ತದೆ. ಅಂತಹದ್ದರಲ್ಲಿ ಈ ಹಸಿರುಮನೆಯ ಪರಿಣಾಮವೂ ಒಂದು. ಈ ಹೆಸರು ಕೇಳಿದ ಕೂಡಲೇ ಅದೇ ನಮ್ಮ ಎಲ್ಲಾ ದುಃಖಗಳಿಗೂ ಮೂಲ ಎಂದು ಭಾವಿಸಲಾಗುತ್ತದೆ.
ಈ ವರ್ಷದ ಅನಾವೃಷ್ಟಿಗೆ ಕಾರಣವಾದ ಎಲ್ ನಿನೋ ಭೂ ಮಂಡಲ ಬಿಸಿ ಏರುವಿಕೆಯಿಂದ ಉಂಟಾಗಿದೆ ಎಂದು ಒಬ್ಬರು ಭಾಷಣ ಮಾಡುತ್ತಿದ್ದುದನ್ನು ಕೇಳಿದೆ. ಎಲ್ ನಿನೋ 2 ರಿಂದ 7 ವರ್ಷಗಳಿಗೊಮ್ಮೆ ಮರುಕಳಿಸುವ ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಇದು ಶಾಂತ ಸಾಗರ ಬಿಸಿಯಾಗುವುದರಿಂದ ಉಂಟಾಗುವ ವಿದ್ಯಮಾನವಿದು. ಹಿಂದೂ ಮಹಾಸಾಗರ ತಣ್ಣಗಿದ್ದು ಶಾಂತಸಾಗರದ ಉಷ್ಣತೆ ಕೊಂಚ ಹೆಚ್ಚಾಗುವುದರಿಂದ ಮಾನ್ಸೂನ್ ಮಾರುತಗಳು ಏಶಿಯಾ ಖಂಡದ ಬದಲಾಗಿ ಅಮೇರಿಕಾ ಖಂಡಗಳ ಕಡೆಗೆ ಬೀಸುತ್ತದೆ. ಇಲ್ಲಿ ಶಾಂತಸಾಗರ ಬಿಸಿಯಾಗುವುದು ಹಸಿರು ಮನೆಯ ಪರಿಣಾಮದಿಂದ ಎಂದು ಪ್ರತಿಪಾದಿಸುತ್ತಿದ್ದರು.
ಶಾಂತಸಾಗರ ಮತ್ತು ಹಿಂದೂ ಮಹಾಸಾಗರಗಳು ಒಂದೇ ಅಕ್ಷಾಂಶದ ಮೇಲಿರುವುದರಿಂದ ಅವು ಒಂದೇ ಪ್ರಮಾಣದಲ್ಲಿ ಕಾಯಬೇಕೇ ಹೊರತು ಉಷ್ಣತೆಯಲ್ಲಿ ವ್ಯತ್ಯಾಸ ಹಸಿರುಮನೆಯ ಪರಿಣಾಮದಿಂದ ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಕುಂದಾಪುರದ ಕಡೆ ಒಂದು ಗಾದೆ ಇದೆ "ಯಾರು ಕದ್ದರೂ ಸೂರ್ಗೋಳಿ ಅಂತು ಕದ್ದ" ಎಂದು. ವಾತಾವರಣ ಬಿಸಿಯಾದರೆ ಅದಕ್ಕೆ ಗಾಜಿನ ಮನೆಯ ಪರಿಣಾಮವೇ ಕಾರಣ ಎಂದು. ಎಲ್ ನಿನೋ ಹಸಿರುಮನೆಯ ಪರಿಣಾಮದ ಫಲಿತ ಅಲ್ಲ. ಅದೊಂದು ಪುನರಾವರ್ತಿತ ನೈಸರ್ಗಿಕ ವಿದ್ಯಮಾನ ಅಷ್ಟೇ. ಇದಕ್ಕೆ ಪ್ರಮುಖ ಕಾರಣ ಸಾಗರದೊಳಗಿನ ಜ್ವಾಲಾಮುಖಿ ಚಟುವಟಿಕೆಗಳು (volcanic activities). ಭೂಮಿಯ ಮೇಲ್ಗಡೆ ನಡೆಯುವ ಜ್ವಾಲಾಮುಖಿ ಚಟುವಟಿಕೆಗಳಿಗಿಂತ ಸಾಗರದ ಒಳಗಡೆ ಜಾಸ್ತಿ. ಅದರಲ್ಲಿಯೂ ಶಾಂತಸಾಗರವೆಂದರೆ ಅಮೇರಿಕಾದ ಕ್ಯಾಲಿಫೋರ್ನಿಯಾ ತೀರದಿಂದ ಇಂಡೋನೇಷ್ಯಾ ತೀರದ ವರೆಗೆ ಅಗಾಧವಾದ ವಿಸ್ತೀರ್ಣ. ಉಳಿದೆಲ್ಲ ಸಾಗರಗಳು ಸೀಮಿತವಾದವುಗಳಾದರೆ ಶಾಂತಸಾಗರ ಅಗಾಧ ವಿಸ್ತೀರ್ಣದ್ದು. ಆದ್ದರಿಂದ ಶಾಂತಸಾಗರ ಕಾವೇರುವ ಸಾಧ್ಯತೆ ಜಾಸ್ತಿ ಮತ್ತು ಇದು ಪದೇ ಪದೇ ಘಟಿಸುತ್ತಲೇ ಹೋಗುತ್ತದೆ. ಸಾಗರ ಉಕ್ಕುವುದು (upwelling of seas) ಮತ್ತು ಎಲ್ ನಿನೋ ಹಸಿರುಮನೆಯ ಪರಿಣಾಮದಿಂದ ಆಗುವಂತಹುವುಗಳಲ್ಲ.
ಹಾಗೆಯೇ ಇನ್ನೊಂದು ಪೂರ್ವಾಗ್ರಹ ಪೀಡಿತ ಯೋಚನೆ ಎಂದರೆ ಕೈ ತೊಳೆಯುವುದು. ಕೈಯಲ್ಲಿರುವ ಹಾನಿಕಾರಕ ಸೂಕ್ಮಾಣುಜೀವಿಗಳನ್ನು ನಾಶಪಡಿಸಲು ಕೈ ತೊಳೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಶಿಕ್ಷಕರು ನಿಮಗೆ ಐದು ರೀತಿಯ ಕೈ ತೊಳೆಯುವ ವಿಧಾನಗಳನ್ನು ಮನದಟ್ಟು ಮಾಡಿದ್ದಾರಲ್ಲವೇ? ಪ್ರತಿಯೊಂದು ಕೋಶವು ಫಾಸ್ಫೋಲಿಪಿಡ್ ಅಂದರೆ ಕೊಬ್ಬಿನಿಂದ ಮಾಡಲ್ಪಟ್ಟ ಕೋಶಪೊರೆಯನ್ನು ಹೊಂದಿರುತ್ತದೆ. ಸಾಬೂನು ಈ ಕೊಬ್ಬಿನ ಪದರವನ್ನು ಛಿದ್ರಗೊಳಿಸುವುದರಿಂದ ಕೋಶ ನಾಶವಾಗುತ್ತದೆ ಅಂದರೆ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಆದ್ದರಿಂದ ಶಿಕ್ಷಕರು ಸಾಬೂನು ಅಥವಾ ದ್ರವ ಸಾನೂನುಗಳನ್ನು ಬಳಸುವಂತೆ ತಿಳಿಸುತ್ತಾರೆ. ಆದರೆ ನಾವು ನಾಶಪಡಿಸುತ್ತಿರುವುದು ಏನನ್ನು ಎನ್ನುವುದು ನಮಗೆ ತಿಳಿದಿಲ್ಲ. ಕೆಲವೊಂದು ಬ್ಯಾಕ್ಟೀರಿಯಾಗಳು ರೋಗವನ್ನುಂಟು ಮಾಡುತ್ತವೆ, ಇನ್ನು ಕೆಲವು ಆಹಾರವನ್ನು ಹಳಸುವಂತೆ ಮಾಡುತ್ತವೆ, ಕೆಲವು ಆಹಾರವನ್ನು ವಿಷವಾಗಿಸುತ್ತವೆ. ಇವುಗಳು ಹಾನಿಕಾರಕ ಬ್ಯಾಕ್ಟೀರಿಯಾಗಳು. ಅದೇ ಹಾಲನ್ನು ಮೊಸರಾಗಿಸುವ, ಚರ್ಮ ಹದ ಮಾಡುವ, ಮೃತ ಸಸ್ಯ ಪ್ರಾಣಿಗಳನ್ನು ಕೊಳೆತು ಭೂಮಿಗೆ ಸೇರಿಸುವ, ಸಾರಜನಕವನ್ನು ಭೂಮಿಗೆ ನೀಡುವ, ಕೊಕೋದಿಂದ ಚಾಕಲೇಟು ನೀಡುವ, ಚೀಸ್ ತಯಾರಿಸುವ ಬ್ರೆಡ್ ದೋಸೆಯ ಹಿಟ್ಟು ಹುದುಗಿಸುವ, ಅಲ್ಕೋಹಾಲ್ ಸಿದ್ದಪಡಿಸುವ ಕೆಲಸ ಮಾಡುವವು ಉಪಕಾರಿಗಳು. ಇನ್ನು ಒಂದು ಡೊಡ್ಡ ವರ್ಗವಿದೆ. ನಿಮ್ಮ ಚರ್ಮದ ಮೇಲೆ, ಬಾಯಿಯ ಒಳಗೆ, ಕರುಳಿನಲ್ಲಿ, ಕರುಳಿನಿಂದ ಹೊರಬರುವ ಮಲದಲ್ಲಿ, ಮಣ್ಣಿನಲ್ಲಿ, ನೀರಿನಲ್ಲಿ, ಗಾಳಿಯಲ್ಲಿ ಎಲ್ಲೆಂದರಲ್ಲಿ ಇವೆ. ಅವು ಹಾನಿಕಾರಕವೂ ಅಲ್ಲ ಉಪಕಾರಿಗಳೂ ಅಲ್ಲ. ಅಂದರೆ ಅವು ಏಕೆ ಇವೆ, ಏನು ಮಾಡುತ್ತವೆ ಎನ್ನುವುದು ವಿಜ್ಞಾನಿಗಳ, ವಿಜ್ಞಾನದ ಮಿತಿಗೆ ನಿಲುಕಿಲ್ಲ. ಅಂದರೆ ಅವು ಅನುಪಯಕ್ತವೇ ಅಲ್ಲ ಮತ್ತೆ? ಅವು ಏಕೆ ಇವೆ ಎಂಬುದೇ ಯಾರಿಗೂ ತಿಳಿದಿಲ್ಲ. ಈ ಭೂ ಮಂಡಲದಲ್ಲಿ ಇರುವ ಒಟ್ಟು ಬ್ಯಾಕ್ಟೀರಿಯಾಗಳಲ್ಲಿ 1% ಕ್ಕಿಂತ ಕಡಿಮೆ ಬ್ಯಾಕ್ಟೀರಿಯಾಗಳು ಹಾನಿಕಾರಕ ಮತ್ತು ಉಳಿದ 99% ಕ್ಕಿಂತ ಅಧಿಕ ಉಪಯುಕ್ತ ಅಥವಾ ಉಪಯಕ್ತತೆಯ ಬಗ್ಗೆ ನಮಗೆ ತಿಳಿದಿರದ ಬ್ಯಾಕ್ಟೀರಿಯಾಗಳು. 1% ಕ್ಕಿಂತ ಕಡಿಮೆ ಇರುವ ವೈರಿಗಳ ನಾಶ ಮಾಡಲು ಇಡಿಯ ಬ್ಯಾಕ್ಟೀರಿಯಾಗಳ ಸಂಕುಲವನ್ನೇ ನಾಶ ಮಾಡಲು ಹೊರಟಿದ್ದೇವೆ ಏಕೆಂದರೆ ಇದು ವಿಜ್ಞಾನದಿಂದ ಲಭ್ಯವಾದ ಮೌಢ್ಯ. ಇದರ ಹಿಂದಿರುವುದು ಸಾಬೂನು ಉತ್ಪಾದಕರ ಲಾಬಿ.
ಹೀಗೆ ಜ್ಞಾನ ಒದಗಿಸಬೇಕಾದ ವಿಜ್ಞಾನ ನಮ್ಮಲ್ಲಿ ಪೂರ್ವಾಗ್ರಹಪೀಡೆಯನ್ನೂ ಬೆಳೆಸುತ್ತದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************