ನಿಷ್ಪಾಪಿ ಸಸ್ಯಗಳು : ಸಂಚಿಕೆ - 159
Thursday, August 27, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 159
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ಸರಾಗವಾಗಿ ಸರಿಯುತ್ತಿರುವ ಶಾಲಾ ದಿನಗಳ ನಡುವೆ ಸಂತಸ ನೀಡುತ್ತಾ ಮಳೆಗಾಲವು ಕರಗುತ್ತಿದೆ. ಜಾಗತಿಕ ತಾಪಮಾನದ ಪರಿಣಾಮವೆಂಬಂತೆ ನೇಪಾಳದಲ್ಲಿ ಒಂದು ಹನಿ ಮಳೆ ಬಾರದೆ ಜರುಗಿದ ಪ್ರಾಕೃತಿಕ ವಿಕೋಪ ನಮ್ಮ ಕಣ್ಣೆದುರಿಗೆ ಹಸಿಯಾಗಿದೆ. ಪ್ರಕೃತಿಯನ್ನು ಇದಿರು ಹಾಕಿಕೊಳ್ಳುವುದು ಜೀವಜಗತ್ತಿಗೆ ಶುಭಲಕ್ಷಣವಲ್ಲ, ಅಲ್ಲವೇ..?
ಪ್ರಕೃತಿಯಲ್ಲಿ ಸಮತೋಲನ ಕಾಪಾಡಲೆಂದೇ ಬಹಳಷ್ಟು ಜೀವ ವೈವಿಧ್ಯವಿದೆ. ಮಳೆಗಾಲದಲ್ಲಿ ರಸ್ತೆಯ ಬದಿ ಒಂದಿಷ್ಟು ನೀರು ನಿಂತ ಕೆಸರು ಜಾಗವಿದ್ದರೆ ನೋಡಿ. ಅಲ್ಲಿ ಇತರೆಡೆ ಕಾಣದ ಸಸ್ಯಗಳನ್ನು ಕಾಣಬಹುದು. ಆ ಕೆಸರು ನೀರಲ್ಲಿ ಕಾಲಿಟ್ಟರೆ ಜಾರುವಿರಿ. ಆದರೆ ಅದರಲ್ಲಿ ಸೈಪೆರಸ್ ಇರಿಯಾ (Cyperus iria) ಎಂಬ ವಾರ್ಷಿಕ ಮೂಲಿಕೆ ಅಥವಾ ಹುಲ್ಲು ಹುಲುಸಾಗಿ ಗುಂಪು ಗುಂಪಾಗಿ ಬೆಳೆದಿರುತ್ತದೆ. ಆಂಗ್ಲ ಭಾಷೆಯಲ್ಲಿ Rice Flat Sedge, Iria Flat Sedge ಎಂದೂ ಕನ್ನಡದಲ್ಲಿ ಜೇಕು, ಜೇಕು ಕಸ, ಜೇಕಿನ ಹುಲ್ಲು ಎಂದು ಕರೆಯಲ್ಪಡುತ್ತದೆ.
ಸೈಪರೇಸಿ (Cyperaceae) ಎಂಬ ಕುಟುಂಬದ ಸದಸ್ಯನಾದ ಜೇಕಿನ ಹುಲ್ಲು ಭತ್ತದ ಸಸಿಗಳ ನಡುವೆ ಕಳೆಯಾಗಿ ತನ್ನ ಸಾಮ್ರಾಜ್ಯ ಸ್ಥಾಪಿಸಿ ಕೃಷಿಗೆ ಮಾರಕವಾಗುವುದಿದೆ. ಹಾಗಾಗದಂತೆ ತಡೆಯಲು ರೈತ ಬಹಳ ಕಷ್ಟಪಡಬೇಕಾಗುತ್ತದೆ. ಭತ್ತ ಬೆಳೆಯುವ ಬಹುತೇಕ ಖಂಡಗಳಲ್ಲಿ ಹರಡಿರುವ ಜೀಕಿನ ಹುಲ್ಲು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಸ್ಥಳೀಯವಾಗಿದೆ. ಇದು ಹಿಮಾಲಯದಲ್ಲಿ 1800 ಮೀಟರ್ ಗಳಷ್ಟು ಎತ್ತರದಲ್ಲೂ ಕಾಣಿಸುತ್ತದೆಯಂತೆ!
ಒಂದೆರಡು ಅಡಿಗಳೆತ್ತರ ಬೆಳೆಯಬಲ್ಲ ಜೇಕು ಹುಲ್ಲಿನ ಕಾಂಡ ಹಸುರಾಗಿ ತ್ರಿಕೋನವಾಗಿರುತ್ತದೆ. ಕಾಂಡದ ತುದಿಯಲ್ಲಿ ಹುಲ್ಲಿನೆಸಳಿನಂತೆ ತೆಳ್ಳನೆಯ ಕೆಲವೇ ಕೆಲವು ಉದ್ದ ಎಲೆಗಳು. ಮಧ್ಯೆ ಛತ್ರಿಯಂತೆ ಕಾಣಿಸುವ ಸೂಕ್ಷ್ಮವಾದ ತಿಳಿ ಹಳದಿ, ಕಂದು ಬಣ್ಣದ ಸಂಯುಕ್ತ ಹೂ ಗೊಂಚಲುಗಳು ಅಡ್ಡಲಾಗಿ ಹರಡಿರುತ್ತವೆ ! ಒಂದು ಗಿಡದ ಮೂಲದಿಂದ ಹತ್ತಾರು ಪಿಳ್ಳೆಗಳು ಗುಂಪಾಗಿ ಸಹಸ್ರಾರು ಬೀಜೋತ್ಪಾದನೆ ಮಾಡುತ್ತಾ ಮಳೆಯ ನೀರಿನಲ್ಲಿ ಎಲ್ಲಿಂದೆಲ್ಲಿಗೋ ಪ್ರವಾಸ ಮಾಡುತ್ತವೆ. ಈ ನಿಷ್ಪಾಪಿ ಸಸ್ಯವು ಸಂಪೂರ್ಣ ಬೆಳೆದ ಬಳಿಕ ಪಶುಗಳಿಗೆ ಇಷ್ಟವಾಗದೆ ಇದ್ದರೂ ಅದರ ಬೀಜಗಳನ್ನು ಇರುವೆಗಳು ಸಾಧ್ಯವಾದಷ್ಡು ಶೇಖರಿಸಿಡುತ್ತವೆ.
ಜೇಕು ಹುಲ್ಲನ್ನು ಜಗತ್ತಿಗೆ ಮೊದಲು ಪರಿಚಯಿಸಿದವರು ಸ್ವೀಡಿಷ್ ಸಸ್ಯವಿಜ್ಞಾನಿ ಕಾರ್ಲ್ ಲಿನ್ನೇಯಸ್.1753 ರಲ್ಲಿ ಈ ಸಸ್ಯದ ಬಗ್ಗೆ ಅವರು ಅವರ ಪುಸ್ತಕದಲ್ಲಿ ಬರೆದು ಪ್ರಕಟಿಸಿದ್ದರು. 'ಸೈಪರಸ್ ' ಪ್ರಾಚೀನ ಗ್ರೀಕ್ ಪದವಾಗಿದ್ದರೆ 'ಇರಿಯಾ' ಎಂಬ ಪದ ವಿಶಿಷ್ಟ ಪ್ರಭೇದದ ಸೂಚನೆಯಾಗಿದೆ.
ಜೇಕು ಹುಲ್ಲಿನ ಪ್ರಯೋಜನಗಳ ಬಗ್ಗೆಯೂ ಬಹಳಷ್ಟು ಸಂಶೋಧನೆಗಳಾಗಿವೆ. ಮಾನವ ದೇಹದ ಜೀವಕೋಶಗಳಿಗೆ ಬೇಗನೆ ಮುಪ್ಪು ಬಾರದಂತೆ ತಡೆಯುವ ಶಕ್ತಿ ಈ ಹುಲ್ಲಿಗೆ ಇದೆಯೆಂದರೆ ಆಶ್ಚರ್ಯವಲ್ಲವೇ? ಈ ಸಸ್ಯದ ಜಲಸಾರ ಮಧುಮೇಹಕ್ಕೆ ಔಷಧವಾಗಬಲ್ಲದು. ಸಸ್ಯದ ಬೇರುಗಳ ಸಾರವು ಉರಿಯೂತ, ಬಾವು, ಸಂಧಿವಾತ ನೋವು ಕಡಿಮೆ ಮಾಡುವುದಲ್ಲದೆ ಇದರಲ್ಲಿರುವ ಪ್ರಮುಖ ರಾಸಾಯನಿಕ ಸಂಯುಕ್ತಗಳು ಮಾನವ ದೇಹದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆಯಂತೆ. ಮೂತ್ರವರ್ಧಕ, ಮುಟ್ಟು ನಿಯಂತ್ರಕ, ಜ್ವರ ನಿವಾರಕ, ಹೊಟ್ಟೆಗೆ ಟಾನಿಕ್ ಆಗಿಯೂ ಈ ಸಸ್ಯ ಉಪಕಾರಿಯಾಗಿದೆ.
ರಸ್ತೆ ಬದಿಗಳಲ್ಲಿ ಸಾಮಾನ್ಯ ಹುಲ್ಲಿನಂತೆ ಬೆಳೆದರೂ ತನ್ನ ವಿಶಿಷ್ಠವಾದ ರೂಪ ವಿನ್ಯಾಸದಿಂದ ಕಣ್ಸೆಳೆಯುವ ಜೀಕಿನ ಹುಲ್ಲು ಎಷ್ಟೊಂದು ಅದ್ಭುತವಲ್ಲವೇ? ನಾವು ಗಮನಿಸದೇ ಮುನ್ನಡೆಯುವುದೇ ಹೆಚ್ಚು. ಅರೆಕ್ಷಣ ನಿಂತು ಗಮನಿಸಿದರೆ ಹೊಸತೊಂದು ಸ್ನೇಹ.. ಬದುಕಿನ ಹೊಸತನಕ್ಕದು ಶಕ್ತಿಯಾಗಬಹುದು ಅಲ್ಲವೇ..?
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************