ಸ್ಫೂರ್ತಿಯ ಮಾತುಗಳು : ಸಂಚಿಕೆ - 229
Tuesday, August 25, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 229
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ತುಳುವಿನಲ್ಲಿ ಪ್ರಮುಖವಾಗಿ ಮರ್ಯಾಲ ಮತ್ತು ಅರೆಗ್ಗಾಲ ಎಂದು ಎರಡು ಕಾಲಘಟ್ಟಗಳಿವೆ. ತುಳುವಿನಲ್ಲಿ ಚಳಿಗಾಲದ ಹೆಸರು ಉಲ್ಲೇಖಗೊಳ್ಳುವುದಿಲ್ಲ. ಆಟಿ ತಿಂಗಳು ಮರ್ಯಾಲದಲ್ಲಿ ಸೇರುತ್ತದೆ. ಪಗ್ಗು ಅರೆಗ್ಗಾಲದ ಕೊನೆಯ ತಿಂಗಳು. ಅದಕ್ಕಾಗಿಯೇ ರೈತರು ವಿಷುವಿನ ದಿನ ಬೇಸಾಯದ ಮುಹೂರ್ತ ಮಾಡುವರು. ಪಗ್ಗುವಿನ ನಂತರ ಯಾವ ದಿನ ಬೇಕಾದರೂ ಮಳೆ ಬರಬಹುದು ಎಂಬುದು ಅವರ ಅನಿಸಿಕೆ ಮತ್ತು ಕೆಲವೊಮ್ಮೆ ಅನುಭವ. ಆದರೆ ಪ್ರಕೃತಿಯ ನಾಶದಿಂದ ಮಳೆಯು ತನ್ನ ಆಗಮನವನ್ನು ಹಿಂದೂಡುವುದು ಮತ್ತು ಮುಂದೂಡುವುದನ್ನು ನಾವು ಅನುಭವಿಸುತ್ತಿದ್ದೇವೆ. ನಮ್ಮ ಹಿರಿಯರ ಕಾಲಮಾನದ ಲೆಕ್ಕಾಚಾರಗಳು ಬಹಳ ನಿಖರ. ಬೇಶ ಹತ್ತನೇ ದಿನವನ್ನು ಪತ್ತನಾಜೆ (ಹತ್ತನಾವಧಿ) ಎನ್ನುವರು. ಈ ದಿನದ ನಂತರ ಕೋಲ, ನೇಮ, ಉತ್ಸವ, ತಂಬಿಲಗಳು ಇರುವುದಿಲ್ಲ. ಯಕ್ಷಗಾನದ ಕುಣಿತ ಮಾಡುವುದಿಲ್ಲ. ಹತ್ತನಾವಧಿಗೆ ಕುಣಿತದ ಗೆಜ್ಜೆ ಕಳಚಿಡಬೇಕು ಎಂದು ನಿಯಮ ಮಾಡಿದ್ದಾರೆ. ಎಲ್ಲರೂ ಬೇಸಾಯದತ್ತ ಮುಖಮಾಡಬೇಕು ಎಂಬುದೇ ಇದರ ಪ್ರಧಾನ ಆಶಯ.
ಆಟಿ ತುಳುವರಿಗೆ ನಾಲ್ಕನೆಯ ತಿಂಗಳು. ಇಂದು ನಾವು ಆಟಿಯನ್ನು ನಾನಾ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತೇವೆ. ಆಟಿದ ಕೂಟ, ಆಟಿಡ್ ಕೆಸರ್ಡೋಂಜಿ ದಿನ, ಆಟಿದ ಅಟ್ಟಿಲ್, ಆಟಿದ ನೆಂಪು, ಆಟಿದ ವಣಸ್, ಆಟಿದ ಕಮ್ಮೆನ ಹೀಗೆ ಜನರ ಬೌದ್ಧಿಕ ಚಾತುರ್ಯದ ಆಧಾರದಲ್ಲಿ ಹೆಸರುಗಳಿದ್ದರೂ, ನಮ್ಮ ಹಿರಿಯರ ಕಾಲದ ಕಹಿ ವಾಸ್ತವವನ್ನು ನೆನಪಿಸುವ ನಮ್ಮ ಸಿಹಿ ದಿನವಿದು, ನಮ್ಮ ಹಿರಿಯರಿಗೆ ಆಟಿಯೆಂದರೆ ಭಯ. ಅವರಿಗೆ ಆಟಿ ಬಹಳ ಕಷ್ಟದ ತಿಂಗಳು. ಆಟಿ ಅವರಿಗೆ ಚಾಟಿ. ಎಲ್ಲ ಬವಣೆಗಳು ಕಳಚಿ ಯಾವಾಗ ಸೋಣ ತಿಂಗಳು ಬರಲಿಲ್ಲ ಎಂದು ಪರಿತಪಿಸುವ, ರೋಗ ರುಜಿನಗಳು ಹೆಚ್ಚು ಪೀಡಿಸುವ ದಿನಗಳವು. ಇದಕ್ಕೆ ಕಾರಣ ಮಳೆಯ ಪ್ರಧಾನ ನಕ್ಷತ್ರಗಳಾದ ಪುಷ್ಯ ಮತ್ತು ಪುನರ್ವಸು ಆಟಿಯಲ್ಲೇ ಬರುತ್ತವೆ. ಅದರಿಂದಾಗಿ ವಿಪರೀತ ಮಳೆ - ಗಾಳಿ, ಮಳೆ-ಯೆಂದರೂ ತಪ್ಪಲ್ಲ. ಆಟಿ ನಿಷಿದ್ಧ ತಿಂಗಳು, ಆಟಿ ಕೆಟ್ಟ ತಿಂಗಳು ಎಂದು ಕೆಲವರು ಹೇಳುವರು. ಆದರೆ ಯಾವುದೇ ನಿಷಿದ್ಧ ಅಥವಾ ಕೆಡುಕು ಎಂಬುದು ಯಾವುದೇ ಕಾಲಮಾನಕ್ಕಿಲ್ಲ. ಪ್ರಕೃತಿಯ ನಿಯಮವನ್ನು ಯಾವ ಕಾಲಮಾನವೂ ಮೀರುವಂತಿಲ್ಲ.
ಆಟಿಯಲ್ಲಿ ನಮ್ಮ ಹಿರಿಯರ ಬದುಕು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನಾವು ತಿಳಿದಿರಬೇಕು. ಕೊರೊನಾವನ್ನು ನಾವೊಮ್ಮೆ ನೆನಪಿಸಿದರೆ ಅದು ಘನಘೋರ. ಆದರೆ ಹಿರಿಯರಿಗೆ ಆಟಿಯು ಕೊರೊನಾಕ್ಕಿಂತ ಹೆಚ್ಚು ಘೋರ ಎಂದು ಹೇಳ ಬಹುದು. ನಮಗಾದರೋ ವರ್ಷದ ಮುನ್ನೂರ ಅರುವತ್ತೈದು ದಿನಗಳೂ ಸಮಾನ. ವಿಪರೀತ ಬಿಸಿಲು, ವಿಪರೀತ ಮಳೆ, ವಿಪರೀತ ಚಳಿಯಿದ್ದರೂ ನಮ್ಮ ಬದುಕಿನಲ್ಲಿ ವ್ಯತ್ಯಯಗಳು ಬಹಳ ಕಡಿಮೆ. ಯಾಕೆಂದರೆ ಇಂದು ಜನ ಜೀವನದ ಮೂಲಭೂತ ಅಗತ್ಯಗಳಾದ ರಸ್ತೆ, ವ್ಯಾಪಾರ ಕೇಂದ್ರ, ಶಾಲೆ, ಆಸ್ಪತ್ರೆ, ಸಂಪರ್ಕ ಮಾಧ್ಯಮಗಳು ಸುಲಭ ಲಭ್ಯವಿವೆ. ಕೆಲವೆಡೆ ಸುನಾಮಿ, ಭೂಕುಸಿತ, ಭೂಜಾರುವಿಕೆ, ಭೂ ಕೊರೆತ, ಜಲಪ್ರವಾಹ, ಬಿಸಿ ಗಾಳಿ, ಶೀತಗಾಳಿ, ಹಿಮ ಪಾತ, ಹಿಮ ಪ್ರವಾಹ, ಕಟ್ಟಡ ಪತನ ಮೊದಲಾದುವುಗಳಾಗುತ್ತವೆ. ಸಾರ್ವಜನಿಕರ ಮತ್ತು ಸರಕಾರಗಳ ನೆರವು ಅಲ್ಲಿಗೆ ಧಾವಿಸುವುದಿದೆ. ಆಟಿಯ ತಿಂಗಳಿನಲ್ಲಿ ಅನುಭವಿಸುವ ಕಷ್ಟಗಳನ್ನು ಹಂಚಲು ನಮ್ಮ ಹಿರಿಯರಿಗೆ ನೆರೆ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ. ಮಾಧ್ಯಮಗಳನ್ನು ತಲುಪಲಾಗದ ಕಾಲವದು. ದೂರವಾಣಿಯಿಲ್ಲ, ವಿದ್ಯುತ್ ಇಲ್ಲ, ರಸ್ತೆಯಿಲ್ಲ, ವಾಹನವಿಲ್ಲ, ವೈದ್ಯರಿಲ್ಲ, ಆಸ್ಪತ್ರೆಯಿಲ್ಲ ಹೀಗೆ ಅನೇಕ ಇಲ್ಲಗಳ ನಡುವಿನ ಅವರ ಬದುಕು ನಾನಾ ಬವಣೆಗಳ ರಾಶಿ.
ಆಟಿಯಲ್ಲಿ ಮಳೆ ವಿಪರೀತ. ಕೃಷಿ ಕಾಯಕಗಳಿರುವುದಿಲ್ಲ. ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿರುತ್ತಿದ್ದರು. ಇಂದಿನ ಸೆಂಟ್ರಿಂಗ್, ಪೈಂಟಿಂಗ್, ಬಡಗಿ ಕೆಲಸ ಇತ್ಯಾದಿ ಕೌಶಲ್ಯಾಧಾರಿತ ಕೆಲಸಗಳು ಬಹಳ ಕಡಿಮೆ. ಕಟ್ಟಡಗಳನ್ನು ಹೆಚ್ಚಾಗಿ ಸೋಗೆ, ಮುಳಿಹುಲ್ಲು ಬಳಸಿ ಮಾಡುತ್ತಿದ್ದರು. ಗೋಡೆ ಮಣ್ಣಿನದು. ಈ ಕೆಲಸಗಳನ್ನು ಮಳೆಗಾಲದಲ್ಲಿ ಮಾಡಲಾಗದು. ಆದುದರಿಂದ ಮಳೆಗಾಲದಲ್ಲಿ ಬಹುತೇಕ ಎಲ್ಲರೂ ಮನೆಯಲ್ಲೇ ಇರಬೇಕಾಗುತ್ತಿತ್ತು. ಹಣ ಸಂಪಾದನೆ ಕಡಿಮೆ. ಅಂದಿನದು ಅವಿಭಜಿತ ಕುಟುಂಬಗಳು ಎಂಬುದನ್ನು ನೆನಪಿಸಬೇಕು. ಜೊತೆಗೆ ಕುಟುಂಬ ಯೋಜನೆಯ ಕಾಳಜಿಯೂ ಇರಲಿಲ್ಲ. ಒಂದೊಂದು ಮನೆಯಲ್ಲಿ 20-30-40 ಹೀಗೆ ಜನರಿರುತ್ತಿರುವುದನ್ನೂ ಕಾಣಬಹುದಿತ್ತು. ಬೇಸಗೆಯಲ್ಲಿ ಮಿಗತೆಯಾದ ಯಾವುದೇ ಆಹಾರವಸ್ತುಗಳು ಹೆಚ್ಚು ಜನರಿದ್ದ ಕುಟುಂಬಗಳಿಗೆ ಸಾಲದೆ, ತಿಂಗಳ ಬಹುದಿನ ಆಹಾರಕ್ಕಾಗಿ ಪರದಾಡುತ್ತಿದ್ದರು. ವಾತಾವರಣ ಶೀತವಾಗಿ ಕೆಮ್ಮು ಜ್ವರ ಶೀತ ಬಾಧೆಗಳು ಸಾಮಾನ್ಯವಾಗಿದ್ದುವು. ಇಂದು ಕಾಣುವ ಮಹಾ ಕಾಯಿಲೆಗಳು ಅಂದೂ ದೊಡ್ಡ ಪ್ರಮಾಣದಲ್ಲಿದ್ದುವು. ಆದರೆ ಆಸ್ಪತ್ರೆಗೆ ಹೋಗಲು, ಹೆಚ್ಚೇಕೆ ಮನೆಯಿಂದ ಹೊರಗಡೆ ಹೋಗಲು ಆಗುತ್ತಿರಲಿಲ್ಲ. ಸಾಲವಾದರೂ ತರೋಣವೆಂದರೆ ಸಾಲ ಕೊಡುವವರೂ ಇರುತ್ತಿರಲಿಲ್ಲ. ಸಾಲ ವಹಿವಾಟು ಶ್ರೀಮಂತರಿಗೆ ಮೀಸಲು. ಹಸಿವಿನ ಬಾಧೆಯಿಂದ ಮಕ್ಕಳು ಕೂಗುವಾಗ ಹೆತ್ತವರಿಗೆ ಆಗುವ ನೋವನ್ನು ಯೋಚಿಸಿದರೆ ಮನಸ್ಸು ಕರಗದಿರದು.
ಆಟಿಯು ಸೃಷ್ಟಿಯ ತಿಂಗಳು ಎನ್ನುತ್ತೇವೆ. ಆಟಿಯಲ್ಲಿ ನಾನಾ ಗಿಡಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಸುವು, ಹರಿವೆ, ಚಾಗಟೆ, ಪುಂಡಿ ಕೇನೆ, ಒಂದೆಲಗ ಇತ್ಯಾದಿ. ಬಹುತೇಕ ಗಿಡ ಮರಗಳು ಹುಲುಸಾಗಿ ಚಿಗುರುತ್ತವೆ. ಬಾಳೆ, ಹಲಸು, ಮಾವು, ಅನಾನಸು, ದೀವಿ ಹಲಸು, ಪೇರಳೆ, ಕಾನ ಕಲ್ಲಟೆ, ನೋಕಟ್ಟೆ, ಇವೆಲ್ಲ ಆಟಿಯಲ್ಲೂ ಇರುತ್ತವೆ. ಎಲ್ಲರಿಗೂ ಇವು ಆಹಾರವಾಗಿ ಬಳಕೆಯಾಗುತ್ತಿತ್ತು. ಮಳೆಗಾಲಕ್ಕೆಂದು ಉಪ್ಪಿನಲ್ಲಿ ಹಾಕಿದ ಸೊಳೆ. ಹಲಸಿನ ಬೀಜ, ಗೆಣಸು, ಮರಗೆಣಸು, ಹಪ್ಪಳ, ಸೌತೆ, ಸಿಹಿ ಕುಂಬಳ, ಬೂದು ಕುಂಬಳ ಇವೇ ಆಹಾರ. ಕಡಿಮೆ ಅನ್ನ, ಹೆಚ್ಚು ಪಲ್ಯ ತಿಂದು ಜನ ಬದುಕುತ್ತಿದ್ದರು. ಅಕ್ಕಿಯೇ ಇಲ್ಲದ ದಿನಗಳೂ ಇರುತ್ತಿದ್ದುವು. ಯಾರಾದರೂ ಮನೆಯವರು ಅರ್ಧ ಸೇರು ಅಕ್ಕಿ ಕೊಟ್ಟರೆ ಅದನ್ನು ಬಟ್ಟೆಯಲ್ಲಿ ಕಟ್ಟಿ ಕುದಿಯುವ ನೀರಿನಲ್ಲಿ ಹತ್ತರಿಂದ ಹದಿನೈದು ನಿಮಿಷ ಇರಿಸಿ ಆ ಕುದಿದ ನೀರನ್ನು ತಣಿಸಿ ಕುಡಿದು, ಅಕ್ಕಿಯನ್ನು ಮುಂದಿನ ದಿನಗಳಿಗೆ ತೆಗೆದಿಡುತ್ತಿದ್ದರು, ಅಕ್ಕಿ ಕುದಿಸಿದ ತಿಳಿಯೆ ಅಂದಿನ ಗ್ಲುಕೋಸ್.
“ದಡ್ಡರಿ” ಎಂದು ಕೊಳಕೆ ಬೆಳೆಯಿಂದ ತೆಗೆದಿಡುತ್ತಿದ್ದರು. ನಿಜವಾಗಿಯೂ ಇದು ಊಟದ ಅಕ್ಕಿಯಲ್ಲ. ಸ್ವಲ್ಪ ಕಹಿಯಾದುದರಿಂದ ರುಚಿಸದು. ಆಟಿಯ ದಿನಗಳಲ್ಲಿ ಇದು ಕೂಡಾ ಗಂಜಿಗೆ ಬಳಕೆಯಾಗುತ್ತಿತ್ತು. ಅಂದು ಇಂದಿನಂತೆ ಉಚಿತ ರೇಷನ್ ಇರಲಿಲ್ಲ. ರೇಷನ್ ಅಂಗಡಿಯಿಂದ ಒಂದು ಕಿಲೋ ಗೋಧಿ ತಂದರೆ ಅದನ್ನು ಅರೆದು ಸ್ವಲ್ಲ ಗಂಜಿ ಬೇಯಿಸಿ ಅರೆದ ಗೋಧಿ ಮತ್ತು ಸ್ವಲ್ಪ ತೆಂಗಿಕಾಯಿ ತುರಿ ಹಾಕಿ ಉಪ್ಪು ಬೆರೆಸಿ ಕುಡಿಯುತ್ತಿದ್ದ ಕಷ್ಟದ ದಿನಗಳವು. ಮುಂದುವರಿಯುವುದು....
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************