-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 135

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 135

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 135
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಆಷಾಢ ಮುಗಿದು ಶ್ರಾವಣ ತಣ್ಣಗೆ ಕಾಲಿಡುತ್ತಿದೆ. ಹಾರುವ ಮೋಡಗಳು ಜಡಿಮಳೆ ಸುರಿಸಿ ಹಗುರಾಗಿ ನಿಮಗೆಲ್ಲ ರಜೆ ಕೊಟ್ಟು ಖುಷಿಪಡಿಸಿದ್ದಾವೆ. ಇಲ್ಲಿಯವರೆಗೆ ಮೋಡದ ಮರೆಯಲ್ಲಿ ಅಡಗಿದ್ದ ಸೂರ್ಯ ಒಂದಷ್ಟು ದಿನ ಮೋಡಗಳೊಂದಿಗೆ ಕಣ್ಣು ಮುಚ್ಚಾಲೆಯಾಡಿ ಶ್ರಾವಣ ಮುಗಿಯುವಾಗ ನಿರ್ಭಯವಾಗಿ ಮೆರೆಯಲು ಆರಂಭಿಸುತ್ತಾನೆ. ಶ್ರಾವಣ ಬರುತ್ತಿದ್ದಂತೆ ಹಬ್ಬಗಳ ಸರಣಿ. ಹಬ್ಬವೆಂದರೆ ತಿಂಡಿಗಳು ಹೊಸ ಬಟ್ಟೆಗಳು ಪೂಜೆ ಪುನಸ್ಕಾರ ಹೀಗೆ ಮನೆ ಮಂದಿಯೆಲ್ಲ ಬ್ಯುಸಿಯಾಗಿ ಬಿಡುತ್ತಾರೆ. ನಾಗರ ಪಂಚಮಿ ವರಮಹಾಲಕ್ಷ್ಮಿಯಿಂದ ಆರಂಭವಾಗುವ ಈ ಸಂಭ್ರಮಗಳ ಮೆರವಣಿಗೆ ದೀಪಾವಳಿಯ ನಂತರವೇ ಕೊಂಚ ವಿರಾಮ ನೀಡುವುದು. 

ಈಗ ಎಲ್ಲ ಕಿರಿ ಹಿರಿ ಹಳ್ಳ ಕೊಳ್ಳಗಳೂ ಮೈದುಂಬಿರುವುದರಿಂದ ಜಲಪಾತಗಳ ಸುಗ್ಗಿ. ನಿಮ್ಮ ಅಪ್ಪ ಅಮ್ಮ ಇಂತಹ ಕಿರು ಪ್ರವಾಸಗಳು ವಾರಾಂತ್ಯಕ್ಕೆ ಯೋಜಿಸಿ ಬಿಡಬಹುದು. ಹೀಗೆ ಸಂತಸಕ್ಕೆ ವಿರಾಮವಿಲ್ಲ. ಈಗ ತಮ್ಮದೇ ವಾಹನದಲ್ಲಿ ಪ್ರಯಾಣ ಹೊರಡುವವರೇ ಅಧಿಕ. ನೀವೂ ಹಾಗೆ ಪ್ರವಾಸ ಹೋಗುತ್ತೀರಿ. ಅಲ್ಲಿ ವಾಹನವನ್ನು ನಿಲ್ಲಿಸಿ. ಬೀಗ ಹಾಕಿ ನೋಡಬೇಕಾದ ದೃಶ್ಯವನ್ನು ನೋಡಿಕೊಂಡು ಹಿಂದಿರುಗಿ ಕಾರಿನಲ್ಲಿ ಕುಳಿತಾಗ ಅಬ್ಬಾ ಸೆಕೆ!! ಹೊರ ವಾತಾವರಣಕ್ಕಿಂತ 5°C ಗಿಂತ ಹೆಚ್ಚಿರುತ್ತದೆ. ಅದೇ ಬಿಸಿಲಿನ ಕೆಳಗಿರುವ ಮರದ ಕೆಳಗೆ ಉಷ್ಣತೆ ಮಾಮೂಲಿನಂತಿರುತ್ತದೆ. ಏಕೆ ಹೀಗೆ ಎಂದು ನೀವು ಕೇಳಿಕೊಂಡಿರಬಹುದು.

ಹೌದು ಇದನ್ನು ನಾವು ಹಸಿರುಮನೆಯ/ಗಾಜಿನ ಮನೆಯ ಪರಿಣಾಮ (green house/glass house effect) ಎನ್ನುವುದು. ಮಧ್ಯಾಹ್ನದ ಹೊತ್ತಿಗೆ ಬಾಗಿಲು ಹಾಕಿದ ಮನೆಯೊಳಗೆ ಪ್ರವೇಶಿಸಿದಾಗ ಬಿಸಿಯ ಅನುಭವವಾಗುವುದು ಕೂಡಾ ಹಸಿರು ಮನೆಯ ಪರಿಣಾಮವೇ. ವಿಪರೀತ ಸೆಕೆ ಎಕೆಂದರೆ ಮೋಡ ಮುಸುಕಿದ ವಾತಾವರಣ ಇದೆ ಎನ್ನುತ್ತಾರಲ್ಲ ನಿಮ್ಮ ಅಮ್ಮ ಅದು ಕೂಡಾ ಹಸಿರುಮನೆ ಪರಿಣಾಮವೇ. ಈ ಹಸಿರು ಮನೆಯ ಪರಿಣಾಮ ಎಂದರೇನು ಅದರ ಪರಿಣಾಮಗಳೇನು ನೋಡೋಣ. 

ನಮ್ಮ ಶಕ್ತಿಯ ಮೂಲ ಸೂರ್ಯ. ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುತ್ತದೆ. ಭೂಮಿಯ ಮೇಲಿರುವ ಎಲ್ಲ ವಸ್ತುಗಳು ಈ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಆಗ ಅವುಗಳಲ್ಲಿನ ಎಲೆಕ್ಟ್ರಾನ್ ಗಳು ಈ ಶಕ್ತಿಯನ್ನು ಹೀರಿಕೊಂಡು ಮೇಲಿನ ಶಕ್ತಿಯ ಹಂತಕ್ಕೆ ಜಿಗಿಯುತ್ತವೆ. ಆದರೆ ಇದು ಒಂದು ಅಸ್ಥಿರವಾದ ಸ್ಥಿತಿ. ಎಲೆಕ್ಟ್ರಾನ್ ಗಳು ತಮ್ಮ ಮೂಲ ಸ್ಥಿತಿಗೆ ಮರಳುತ್ತವೆ. ಆಗ ತಾವು ಹೀರಿಕೊಂಡ ಶಕ್ತಿಯನ್ನು ಉತ್ಸರ್ಜಿಸುತ್ತವೆ. ಆದರೆ ಈಗ ಶಕ್ತಿ ಬೆಳಕಿನ ರೂಪದಲ್ಲಿರುವುದಿಲ್ಲ ಬದಲಾಗಿ ಅಧಿಕ ತರಂಗಾಂತರದ ಶಾಖದ ರೂಪದಲ್ಲಿರುತ್ತವೆ ಅಂದರೆ ರಕ್ತಾತೀತ ಕಿರಣಗಳ ರೂಪದಲ್ಲಿರುತ್ತವೆ. ಅಂದರೆ ಬೆಳಕು ಬಿಸಿಲಾಗುವುದು ಹೀಗೆ. ಈ ಬಿಸಿ ಇಲ್ಲಿಯೇ ಉಳಿದುಕೊಂಡರೆ ಏನಾಗುತ್ತದೆ ಹೇಳಿ. ಈ ಭೂಗ್ರಹದ ಉಷ್ಣತೆ ಏರುತ್ತದೆ. ಆದರೆ ಪರಿಸ್ಥಿತಿ ಹಾಗಿಲ್ಲ ಬದಲಾಗಿ ಇದು ವಿಕಿರಣದ (radiation) ಮೂಲಕ ಹೊರಗಿನ ವಾತಾವರಣಕ್ಕೆ ತಪ್ಪಿಸಿಕೊಂಡು ಹೋಗುವ ಮೂಲಕ ಭೂ ಗ್ರಹದ ಉಷ್ಣತೆ ಬೆಳಗಿನ ಹೊತ್ತಿಗೆ ಮಾಮೂಲಿಯಾಗಿ ಬಿಡುತ್ತದೆ. ಆದ್ದರಿಂದಲೇ ದಿನದ ಕನಿಷ್ಠ ಉಷ್ಣತೆಯನ್ನು ಅಳೆಯುವುದು ಸೂರ್ಯೋದಯಕ್ಕೆ ಅರ್ಧ ಗಂಟೆ ಮೊದಲು.

ಬಿಸಿಯಾದ ವಸ್ತುವಿಗೆ ಒಂದು ಬ್ಲಾಂಕೆಟ್ ಹೊದೆಸಿದರೆ ಅ ಬಿಸಿ ಹಾಗೆಯೇ ಉಳಿಯುತ್ತದೆ ಅಲ್ಲವೇ? ನಿಜ. ಕಾರಿನ ಒಳ ಮೇಲ್ಮೈ ಮೇಲೆ ಬಿದ್ದ ಬೆಳಕು ಬಿಸಿಯ ವಿಕಿರಣಗಳಾಗುತ್ತವೆ. ಇವು ತಪ್ಪಿಸಿಕೊಂಡು ಹೋಗಲು ಕಿಟಕಿಯ ಗಾಜಿನ ಕಡೆಗೆ ಧಾವಿಸುತ್ತವೆ. ಈ ಗಾಜಿಗೆ ಒಂದು ವಿಶಿಷ್ಟ ಗುಣವಿದೆ ಅದು ಕಡಿಮೆ ತರಂಗಾಂತರದ ಬೆಳಕಿಗೆ ಪಾರದರ್ಶಕವಾಗಿರುತ್ತವೆ. ಆದರೆ ಹೆಚ್ಚಿನ ತರಂಗಾಂತರದ ಉಷ್ಣ ವಿಕಿರಣಗಳಿಗೆ ಅಪಾರದರ್ಶಕ. ಆದ್ದರಿಂದ ಈ ಬಿಸಿ ಹೊರ ಹೋಗಲಾರದೇ ಒಳಗೇ ಬಂಧಿಯಾಗಿ ಬಿಡುವುದರಿಂದ ಒಳಗಿನ ಗಾಳಿಯನ್ನು ಕಾಯಿಸುತ್ತದೆ. ಆದ್ದರಿಂದ ಕಾರಿನ ಒಳಗಿನ ಉಷ್ಣತೆ ಒಂದೇ ಸಮ ಏರುತ್ತದೆ. ಇದೇ ಹಸಿರು ಮನೆ ಪರಿಣಾಮ. ಇದಕ್ಕೆ ಕಾರಣ ಕಾರಿನ ಗಾಜು. 

ಹಾಗೆ ಇನ್ನೊಂದು ವಿಷಯ. ಬಿಸಿಲಿನಲ್ಲಿ ಕಾರನ್ನು ನಿಲ್ಲಿಸುವುದಾದರೆ ಕಾರಿನ ವೈಪರ್ ಅನ್ನು ಎತ್ತಿಡುವುದನ್ನು ಗಮನಿಸಿದ್ದೀರಾ? ಈ ಹಸಿರುಮನೆಯ ಪರಿಣಾಮದಿಂದ ಬಿಸಿಯಾಗುವ ನಿಮ್ಮ ಕಾರಿ ಗಾಜು ವೈಪರ್ ನ ರಬ್ಬರ್ ಅನ್ನು ಗಟ್ಟಿ ಮಾಡುತ್ತದೆ. ಅದೇ ವೈಪರ್ ಅನ್ನು ಎತ್ತಿ ಇಟ್ಟರೆ ಅದು ಕಾಯಿಸ್ಪಡುವುದಿಲ್ಲ.

ನಮ್ಮ ಭೂಮಿ ವಾತಾವರಣ ಎಂಬ ಒಂದು ಬ್ಲಾಂಕೆಟ್ ನಿಂದ ಆವರಿಸಲ್ಪಟ್ಟಿದೆ. ಇದರಲ್ಲಿ ಆಮ್ಲಜನಕ 21%, ಸಾರಜನಕ 72%, ಇಂಗಾಲದ ಡೈಆಕ್ಸೈಡ್ 0.03%, ನೀರಾವಿ ಮತ್ತು ಇತರ ಅನಿಲಗಳು 0.97% ದಷ್ಟಿವೆ. ಈ ಇಂಗಾಲದ ಡೈಆಕ್ಸೈಡ್ ಮತ್ತು ನೀರಾವಿ ಹಸಿರುಮನೆಯ ಪರಿಣಾಮವನ್ನುಂಟು ಮಾಡುತ್ತವೆ. ಈ ಇಂಗಾಲದ ಡೈಆಕ್ಸೈಡ್ ಮತ್ತು ನೀರಾವಿ ಈ ಪ್ರಮಾಣದಲ್ಲಿ ಇರುವುದು ಅತ್ಯಂತ ಅವಶ್ಯಕ. ಇವು ಉಂಟು ಮಾಡುವ ಹಸಿರು ಮನೆಯ ಪರಿಣಾಮ ಭೂ ಗ್ರಹದ ಉಷ್ಣತೆ 15°C (ಸರಾಸರಿ) ಇದೆ. ಇಲ್ಲವಾದಲ್ಲಿ ಇದು -18°C ಆಗುತ್ತಿತ್ತು. ಮತ್ತು ಭೂಮಿಯ ಮೇಲೆ ಬದುಕೇ ಸಾಧ್ಯವಾಗುತ್ತಿರಲಿಲ್ಲ. ನಮ್ಮ ನಿಸರ್ಗ ಎಂಬ ತಂತ್ರಜ್ಞ ನಿಗದಿಪಡಿಸಿದ ಪ್ರಮಾಣ ಇದು. ಕಡಿಮೆಯಾದರೂ ಕಷ್ಟವೇ.

ಸೂರ್ಯನ ಬೇರೆ ಬೇರೆ ಗ್ರಹಗಳಲ್ಲಿ ಉಷ್ಣತೆಯನ್ನೊಮ್ಮೆ ನೋಡಿ ಬಿಡೋಣ. ಬುಧ 167°C, ಶುಕ್ರ 464°C, ಭೂಮಿ 15°C, ಮಂಗಳ -65°C, ಗುರು -110°C. ಶುಕ್ರನನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಹಗಳು ಸೂರ್ಯನಿಂದ ದೂರ ಹೋಗುತ್ತಿದ್ದಂತೆ ತಂಪಾಗುತ್ತಾ ಹೋಗುತ್ತವೆ. ಆದರೆ ಶುಕ್ರ ಮಾತ್ರ ಇದಕ್ಕೆ ಅಪವಾದ ಏಕೆಂದರೆ ಶುಕ್ರನ ವಾತಾವರಣ ಇಂಗಾಲದ ಡೈಆಕ್ಸೈಡ್ ನಿಂದ ಆದದ್ದು. 

ಇತರ ವಿಷಯಗಳು ಮುಂದಿನ ವಾರ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article