-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 157

ನಿಷ್ಪಾಪಿ ಸಸ್ಯಗಳು : ಸಂಚಿಕೆ - 157

ನಿಷ್ಪಾಪಿ ಸಸ್ಯಗಳು : ಸಂಚಿಕೆ - 157
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ..? ಈ ಮಳೆಗಾಲ ನೀರಸವಾಗಿ ಆರಂಭಗೊಂಡರೂ ಆಷಾಢದಲ್ಲಿ ಕೊನೆಗೂ ಸ್ವಲ್ಪ ಮಳೆ ಸುರಿಯಿತು. ನೂರಾರು ಜಾತಿಯ ವಾರ್ಷಿಕ ಸಸ್ಯಗಳು ಇಳೆಯಲೆಲ್ಲ ಬೀಜ ಬಿತ್ತಿ ಮಳೆಗಾಗಿ ಕಾಯುತ್ತಿರುತ್ತವೆ. ಮಳೆ ತಡವಾದಷ್ಟು ತಮ್ಮ ಜೀವನಾವರ್ತದಲ್ಲಿ ಏರುಪೇರುಂಟಾಗಿ ಬದುಕಿನ ಗತಿ ವಿಷಮಿಸುತ್ತದೆ.

ವೈಲ್ಡ್ ಮರಕುಜಾ, ವೈಲ್ಡ್ ವಾಟರ್ ಲೆಮನ್, ಸ್ಟಿಂಕಿಂಗ್ ಫ್ಯಾಷನ್ ಫ್ಲವರ್, ಫಿಟ್ ವೀಡ್, ತುಂಬೈ ಬಳ್ಳಿ, ಕುರುಮುಳ್ಳು ಬಳ್ಳಿಯೇ ಮೊದಲಾದ ಹೆಸರುಗಳನ್ನಿಟ್ಟುಕೊಂಡು ವೈಜ್ಞಾನಿಕವಾಗಿ ಫ್ಯಾಸಿಪ್ಲೋರಾ ಫೋಟಿಡಾ (Passiflora foetida ) ಎಂಬ ಹೆಸರಿನ ಒಂದು ಬಳ್ಳಿ ನಿಮಗೆಲ್ಲರಿಗೂ ಮಳೆಗಾಲದಲ್ಲಿ ಕಾಣಸಿಗುತ್ತದೆ. ಇದು ಪ್ಯಾಸಿಪ್ಲೊರೇಸಿ ಕುಟುಂಬಕ್ಕೆ ಸೇರಿದೆ. ಮಳೆಗಾಲ ಕಾಣಿಸಿಕೊಂಡ ಒಂದೆರಡು ವಾರದಲ್ಲೇ ಮೊಳಕೆಯೊಡೆದು ಬೆಳೆಯುತ್ತಾ ಸುತ್ತಲಿನ ಜಾಗವನ್ನೆಲ್ಲ ಆಕ್ರಮಿಸಿಕೊಂಡಿರುತ್ತದೆ. ಈ ತೆವಳುವ ಬಳ್ಳಿಯನ್ನು ಹುಲ್ಲು, ಬೇಲಿ, ಪೊದರು ಮರಗಳ ಮೇಲೆ, ಖಾಲಿ ಜಾಗ ಇದ್ದಲ್ಲೆಲ್ಲ ಕಾಣಬಹುದು.

ಆದರೆ ಇದನ್ನು ಕಂಡರೆ ನೀವು ಮುಟ್ಟಲು ಸ್ವಲ್ಪ ಭಯಪಡುವಿರಿ. ಏಕೆಂದರೆ ಮೈತುಂಬಾ ಮುಳ್ಳಿದೆಯೇನೋ ಅನ್ನುವಂತೆ ಕೂದಲಿನಿಂದ ಆವೃತವಾಗಿವೆ. ಗಿಳಿ ಹಸಿರು ಬಣ್ಣದ ದುರ್ವಾಸನೆ ಬೀರುವ ಸಣಕಲು ಬಳ್ಳಿಯಲ್ಲಿ ತೊಂಡೆಕಾಯಿಯ ಎಲೆಯಂತೆ ಎಲೆಗಳು ಕಂಡರೂ ಮೂರು ಸಣ್ಣ ಪ್ರಮಾಣದ ಸೀಳನ್ನು ಹೊಂದಿದೆ. ಇದರ ಎಲೆ, ಕಾಂಡಗಳು ದೊರಗಾಗಿರುತ್ತವೆ. ನಿಮಗೆ ಈ ಬಳ್ಳಿಯನ್ನು ಕಾಣಲು ಕಣ್ಣುಗಳನ್ನು ನೀಡುವ ಭಾಗಗಳೆಂದರೆ ಇದರ ಹೂವು ಮತ್ತು ಕಾಯಿಗಳ ಚಮತ್ಕಾರದ ರೂಪ ಸೌಂದರ್ಯ!. ನೀವದನ್ನು ಗಮನಿಸದೆ ಹೋಗಲು ಸಾಧ್ಯವೇ ಇಲ್ಲ!. ಹೂವು ಬಿಳಿ ಮಸುಕಾದ ಕೆನೆಬಣ್ಣ, ಗುಲಾಬಿ ಬಣ್ಣದಿಂದ ಮಸುಕಾದ ನೇರಳೆ. ಬಟ್ಟಲಿನಂತೆ ಹರಡಿದ ಹೂವಿಗೆ ಜಾಲರಿಯ ರಕ್ಷಣೆ! ಈ ಜಾಲರಿ ಹೂವಿಗೋ ? ಮುಂದೆ ಸೃಷ್ಠಿಯಾಗುವ ಐದಾರು ಸೆಂ.ಮೀ ವ್ಯಾಸದ ಗೋಳಾಕಾರದ ಹಣ್ಣಿಗೋ...? ಅಥವಾ ಕೀಟಗಳನ್ನು ಬಲೆಗೆ ಬೀಳಿಸುವ ಹುನ್ನಾರವೋ! ಹೂವು ಜೀರ್ಣಕಾರಿ ಕಿಣ್ವಗಳನ್ನು ಒಳಗೊಂಡಿರುವ ಜಿಗುಟಾದ ವಸ್ತುವನ್ನು ಸ್ರವಿಸುವುದರಿಂದ ಅಗತ್ಯವಿದ್ದರೆ ಬೇಟೆಯಿಂದಲೂ ತನ್ನ ಪೋಷಣೆ ಪಡೆಯುತ್ತದೆ ಎಂಬ ಸಂದೇಹವಿದೆ. 
ಪರ್ಯಾಯ ಎಲೆಗಳ ಕವಲುಗಳಲ್ಲಿ ಹುಟ್ಟಿಕೊಳ್ಳುವ ಒಂಟಿ ಹೂಗಳು ಹುಲ್ಲು ಹಾಗೂ ಇತರ ಸಸ್ಯಗಳ ನಡುವೆ ತೆವಳಿದ ಬಳ್ಳಿಗೆ ದೃಷ್ಟಿ ನೀಡುತ್ತದೆ. ಇದು ಲಾರ್ವ ಆಶ್ರಯದಾತ ಹಾಗೂ ಮಕರಂದದ ಮೂಲವಾಗಿದೆ. ಎಳತಿನಲ್ಲಿ ಹಸಿರಾದ ಕಾಯಿಗಳು ಬಲಿತಂತೆ ಹಳದಿ, ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಎಳೆಯ ಚಿಗುರನ್ನು ಬೇಯಿಸಿ ತಿನ್ನಬಹುದು. ಹುಳಿ ರುಚಿಯಾದರೂ ಪಕ್ವವಾದ ಹಣ್ಣುಗಳನ್ನು ಕೂಡ ತಿನ್ನಬಹುದಂತೆ. ಆದರೆ ಎಲೆ ಮತ್ತು ಹಣ್ಣುಗಳಲ್ಲಿ ಸೈನೈಡ್ ಇದೆಯೆಂದೂ ಸಂಶೋಧನೆಗಳು ತಿಳಿಸುತ್ತವೆ! ಇದರ ಬೀಜಗಳು ಪಕ್ಷಿಗಳ ಮೂಲಕ, ಬಾವಲಿಗಳ ಮೂಲಕ ಹರಡುವುದಾದರೂ ಜನರಿಗೂ, ಜಾನುವಾರಿಗೂ ವಿಷಕಾರಿಯಾಗಿದೆ. ಫ್ಯಾಸಿಫ್ಲೋರಾ ಫೋಟಿಡಾ ಎಂಬ ಈ ನಿಷ್ಪಾಪಿ ಸಸ್ಯ ಮಾನವನಿಗೆ ಹೊಟ್ಟೆ ಹುಳು, ಅಸ್ತಮಾ, ಅತಿಸಾರ, ನಿದ್ರೆ ಬಾರದಿರುವಿಕೆ, ಚರ್ಮ ರೋಗ, ತುರಿಕೆ, ಉನ್ಮಾದ ಇತ್ಯಾದಿಗಳ ಉಪಶಮನಕ್ಕೆ ಸಹಕರಿಸುತ್ತದೆ.

ಮೆಕ್ಸಿಕೋ, ಕೆರಿಬಿಯನ್, ಮಧ್ಯ ಅಮೆರಿಕ, ದ.ಅಮೆರಿಕ ಗಳಿಗೆ ಸ್ಥಳೀಯವಾದ ಪ್ಯಾಸಿಫ್ಲೋರಾ ಫೋಟಿಡಾ ನಮ್ಮಲ್ಲಿ ಎಲ್ಲಾ ಕಡೆಗೂ ಹರಡಿದೆ. ಹಲವು ಕಡೆ ಇದು ಆಕ್ರಮಣಕಾರಿ ಸಸ್ಯವಾಗಿಯೂ ಪರಿಗಣಿಸಲ್ಪಟ್ಟಿದೆ. ನೀವೆಲ್ಲಾದರೂ ಈ ಬಳ್ಳಿಯನ್ನು ಕಂಡರೆ ಖಂಡಿತವಾಗಿಯೂ ಅದರ ಜೊತೆ ಮಾತನಾಡಿರಿ. ಎಲ್ಲೆಡೆಯೂ ಗುಡ್ಡಗಳನ್ನು ಸಮತಟ್ಟು ಮಾಡುತ್ತಾ ಮನೆಗಳನ್ನು, ತೋಟಗಳನ್ನು ನಿರ್ಮಿಸುತ್ತಿರುವಾಗ ಸಸ್ಯಗಳ ಮನಸ್ಸಲ್ಲೂ ದು:ಖ ಮಡುಗಟ್ಟಿರಬಹುದೇ ಯೋಚಿಸಿ....

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************



Ads on article

Advertise in articles 1

advertising articles 2

Advertise under the article