ಮಳೆಯ ವಿಶೇಷ ಅನುಭವ : ಸಂಚಿಕೆ - 03
Thursday, August 13, 2026
Edit
ಮಳೆಯ ವಿಶೇಷ ಅನುಭವ : ಸಂಚಿಕೆ - 03
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ..
ಜಗಲಿಯ ಮಕ್ಕಳ ಅನುಭವ ಬರಹಗಳು
◾ ಅಕ್ಷಯ್ ಕೆ, 8ನೇತರಗತಿ
◾ ಮೊಹಮ್ಮದ್ ಶಯನ್, 3ನೇ ತರಗತಿ
◾ ಅಮೂಲ್ಯ ಜೆ ಪೂಜಾರಿ, 8ನೇ ತರಗತಿ
◾ ಹಂಸಿನಿ ಎಂ, 6ನೇ ತರಗತಿ
◾ ಸಿ. ಯು. ವೈಷ್ಣವ್, 6ನೇ ತರಗತಿ
◾ ವೈಷವಿ , 10ನೇ ತರಗತಿ
ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದು 3ನೇ ತಿಂಗಳಿಗೆ ಕಾಲಿಟ್ಟಿದ್ದೇವೆ. ಶಾಲೆಗೆ ಮಳೆ ರಜೆಯೂ ತುಂಬಾನೆ ಸಿಕ್ಕಿದೆ. ರಜೆ ಸಿಕ್ಕಾಗ ಒಂಥರ ಖುಷಿಯೂ ಆಗುತ್ತದೆ. ಆದರೆ ಪಾಠ ಆಗದೆ ಬಾಕಿ ಉಳಿಯುತ್ತದೆ. ಶನಿವಾರ ಇಡೀ ದಿನ ತರಗತಿ ನಡೆಯುತ್ತದೆ ಎಂದು ಯೋಚಿಸಿದಾಗ ಬೇಸರವಾಗುತ್ತದೆ. ರಜೆಯ ದಿನ ಮಳೆಗಿಂತ ಬಿಸಿಲು ಇರುತಿತ್ತು. ನಾನು ನನ್ನ ಚಿಕ್ಕಮ್ಮನ ಜೊತೆ ಸೇರಿ ಬಣ್ಣ ಬಣ್ಣದ ದಾಸವಾಳ , ಗುಲಾಬಿ , ನೇರಳೆ , ಸಂಪಿಗೆ, ಕಹಿಬೇವು, ಡ್ಯಾಗ್ರನ್ ಪ್ರೂಟ್, ರೋಸ್ಮೇರಿ ಗಿಡಗಳನ್ನು ನೆಡಲು ಹೋದಾಗ ಮಳೆಯು ಧೋ ಎಂದು ಸುರಿಯಲು ಶುರು.
ಮಳೆ ರಜೆಗೆ ಮನೆಯಲ್ಲಿದ್ದರೆ ಬಿಸಿಲು, ಶಾಲೆಗೆ ಹೋದರೆ ಮಳೆ. ಅದೂ ಕೂಡ ವಾಶ್ ರೂಮಿಗೆ ಬಿಡುವಾಗ, ಪಿ.ಟಿಗೆ ಆಡಲು ಬಿಡುವಾಗ, ಊಟಕ್ಕೆ ಬಿಡುವಾಗ, ಸಂಜೆ ಮನೆಗೆ ಬಿಡುವಾಗ ಮಳೆಯೋ ಮಳೆ. ಮಳೆಗೆ ಮಕ್ಕಳೆಂದರೆ ಪ್ರೀತಿ ಹಾಗಾಗಿ ಮಕ್ಕಳು ಮನೆಯಿಂದ ಹೊರಗೆ ಬಂದರೆ ಮಳೆ ಸುರಿಯುತ್ತದೆ ಎಂದು ನನ್ನ ಅಜ್ಜಿ ಹೇಳುತ್ತಾ ಇರುತ್ತಾರೆ. ಮಳೆ ರಜೆಗೆ ನಾನು ನನ್ನ ತಂಗಿ ಅಂಗಳದಲ್ಲಿ ವಾಲಿಬಾಲ್ ಆಡುತ್ತಾ ತುಳಸಿ ಕಟ್ಟೆಯ ತುಳಸಿಗಿಡದ ಗೆಲ್ಲು ತುಂಡಾಯಿತು. ಅದಕ್ಕಾಗಿ ಮನೆಯ ಹಿಂದಿನ ವರಾಂಡದಲ್ಲಿ ಆಡುತ್ತಾ ಇದ್ದೆವು. ನನ್ನ ಅಜ್ಜಿ ಅಲ್ಲಿಯೇ ಪಕ್ಕದಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಹೊಸ ರೊಟ್ಟಿಯ ಕಾವಲಿಯನ್ನು ಇಟ್ಟಿದ್ದರು. ನಮ್ಮ ಬಾಲ್ ಆ ಮಣ್ಣಿನ ಕವಾಲಿಗೆ ಬಿದ್ದು ಒಡೆದು ಹೋಯಿತು. ಅದನ್ನು ಅಲ್ಲಿಯೇ ಬಿಟ್ಟು ನಮ್ಮಷ್ಟಕ್ಕೆ ಇದ್ದೆವು. ಮರುದಿನ ಅಜ್ಜಿ ಮತ್ತು ಚಿಕ್ಕಮ್ಮನಿಗೆ ವಿಚಾರ ತಿಳಿದು ಕೋಪದಿಂದ ಬೈದು ನಿಮಗೆ ಒಮ್ಮೆ ಶಾಲೆ ಶುರುವಾಗಲಿ ಎಂದರು. ಇನ್ನು ಮುಂದೆ ಇಂಥ ತಪ್ಪು ಮಾಡಲ್ಲ ಅಜ್ಜಿ ಎಂದು ನಾವಿಬ್ಬರೂ ಹೇಳಿದೆವು.
ಬಸ್ ನಲ್ಲಿ ರಶ್ ಇರುವ ಕಾರಣ ನಾನು ನನ್ನ ಪಕ್ಕದ ಮನೆಯ ಅಕ್ಕನ ಜೊತೆ ಸ್ಕೂಟರ್ ನಲ್ಲಿ ಹೋಗುವುದು. ನನಗಾಗಿ ಹೊಸದಾದ ರೈನ್ ಕೋಟ್ ತಂದಿದ್ದರು. ಇನ್ನು ಇದನ್ನು ಹರಿದು ಹಾಕಬೇಡ ಎಂದಿದ್ದರು. ಮನೆಯಲ್ಲಿ ನನ್ನ ಗ್ರಹಚಾರ ರೈನ್ ಕೋಟ್ ತಂದು ಎರಡನೇ ದಿನಕ್ಕೆ ಜೋರು ಮಳೆಗೆ ಸ್ಕೂಟಿಯಿಂದ ಇಳಿಯುವಾಗ ರೈನ್ ಕೋಟ್ ಹರಿದು ಹೋಯಿತು. ಸಂಜೆ ಬಂದು ಮನೆಯಲ್ಲಿ ಹೇಳಿದಾಗ ನಿನಗೇನು ಆಗಿಲ್ಲ ಅಲ್ವಾ ಅಂಥ ಸಮಾಧಾನದಲ್ಲಿ ಹೇಳಿದಾಗ ತುಸು ಸಮಾದಾನ ನನಗೂ ಆಯಿತು. ದಿನಾಂಕ 3/08/26ನೇ ಸೋಮವಾರ ವಿಪರೀತ ಮಳೆಗೆ ರಜೆ ಇದ್ದ ಕಾರಣ ನಮ್ಮೂರಿನ ಉಮಾಮಹೇಶ್ವರ ದೇವಾಲಯಕ್ಕೆ ನಾನು ನನ್ನ ತಂಗಿ ಆರಾಧ್ಯ.ಕೆ ಹಾಗೂ ಚಿಕ್ಕಮ್ಮ ಸ್ಕೂಟಿಯಲ್ಲಿ ಹೋದೆವು. ರಸ್ತೆಯಿಡಿ ಗುಂಡಿ ಅದರಲ್ಲಿ ಕೆಸರು ಮಯ ಕೆಂಪು ಕೆಂಪು ನೀರು. ನಮಗೆ ರಸ್ತೆಯೆ ಕಾಣಿಸದೆ ಗುಂಡಿಗೆ ಬೀಳುವುದಕ್ಕೆ ಆದೆವು. ಆದರೆ ದೇವರ ದಯೆ ನಮ್ಮ ಮೇಲೆ ಇದ್ದ ಕಾರಣ ಬೀಳದೆ ಮುಂದೆ ಹೋದೆವು. ಅಲ್ಲಿ ದೇವರಲ್ಲಿ ಹಲವಾರು ಬೇಡಿಕೆಯನ್ನು ಬೇಡಿದೆ. ಅಲ್ಲಿ ಕೊಟ್ಟ ಅವಲಕ್ಕಿ ಪ್ರಸಾದ ತಿಂದು ಮನೆಗೆ ಬಂದೆವು. ಮಳೆ ಇನ್ನಷ್ಟು ಬರಲಿ ಆದರೆ ಯಾರಿಗೂ ತೊಂದರೆಯಾಗದಿರಲಿ ದೇವ.
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಈ ಮಳೆಗಾಲದಲ್ಲಿ ನಮ್ಮ ಕುಟುಂಬಕ್ಕೆ ತುಂಬಾ ದುಃಖದ ಘಟನೆ ನಡೆಯಿತು. ಒಂದು ರಾತ್ರಿ ಭಾರೀ ಮಳೆ ಮತ್ತು ಜೋರಾದ ಗಾಳಿ ಬೀಸಿತು. ಆ ಗಾಳಿಯ ರಭಸಕ್ಕೆ ನಮ್ಮ ಮನೆಯ ಹಂಚು ಹಾರಿ ಹೋಗಿತು. ಹಂಚು ಹಾರಿ ಹೋದ ಕಾರಣ ಮನೆಯೊಳಗೆ ಎಲ್ಲ ಕಡೆ ಮಳೆನೀರು ಬರುತ್ತಿತ್ತು. ಮನೆಯಲ್ಲಿದ್ದ ಸಾಮಾನುಗಳೂ ಒದ್ದೆಯಾದವು.
ನಮ್ಮ ಮನೆಯಲ್ಲಿ ಗಂಡಸರು ಯಾರೂ ಇರಲಿಲ್ಲ. ಆದ್ದರಿಂದ ಹಂಚನ್ನು ತಕ್ಷಣ ಸರಿಪಡಿಸಲು ಸಾಧ್ಯವಾಗಲಿಲ್ಲ. ಆ ದಿನಗಳಲ್ಲಿ ನಾವು ತುಂಬಾ ಕಷ್ಟ ಅನುಭವಿಸಿದೆವು. ರಾತ್ರಿ ಮಳೆ ಬಂದಾಗ ನಿದ್ದೆಯೂ ಬರುತ್ತಿರಲಿಲ್ಲ. ಮಳೆನೀರು ಮನೆಯೊಳಗೆ ಬರುತ್ತಿದ್ದ ಕಾರಣ ಇಡೀ ರಾತ್ರಿ ಎಚ್ಚರವಾಗಿಯೇ ಕಳೆಯಬೇಕಾಗುತ್ತಿತ್ತು. ಆ ದಿನಗಳು ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಾಗಿದ್ದವು.
ಕೆಲವು ದಿನಗಳ ನಂತರ ನಮ್ಮ ಊರಿನವರು ಬಂದು ನಮಗೆ ಸಹಾಯ ಮಾಡಿದರು. ಅವರ ಸಹಾಯದಿಂದ ನಮ್ಮ ಮನೆಯ ಹಂಚನ್ನು ಮತ್ತೆ ಸರಿಪಡಿಸಲಾಯಿತು. ಆಗ ನಮಗೆ ಬಹಳ ನೆಮ್ಮದಿ ಸಿಕ್ಕಿತು.
ಈ ಘಟನೆಯಿಂದ ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡುವುದು ಎಷ್ಟು ದೊಡ್ಡ ಮಾನವೀಯ ಗುಣ ಎಂಬುದನ್ನು ನಾನು ಕಲಿತೆ. ಈ ಮಳೆಗಾಲದ ಈ ಕಷ್ಟದ ಅನುಭವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
3ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ
ಮುಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಒಂದು ದಿನ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರಿ ಮಳೆ ಆರಂಭವಾಯಿತು. ಮೊದಲಿಗೆ ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿಯ ಮುಂದೆ ನಿಂತೆ. ಸ್ವಲ್ಪ ಸಮಯದ ನಂತರ ಸ್ನೇಹಿತರೊಂದಿಗೆ ಮಳೆಯಲ್ಲಿ ನೆನೆದು ಮನೆ ಕಡೆಗೆ ಬಂದೆ. ಒಂದು ದಿನ ಸಂಜೆ ನಾನು ಮನೆ ಹೊರಗೆ ಆಟವಾಡುತ್ತಿದ್ದೆ, ಅಷ್ಟರಲ್ಲಿ ಜೋರಾಗಿ ಮಳೆ ಸುರಿಯಲು ಪ್ರಾರಂಭವಾಯಿತು. ನಾನು ಕಿಟಕಿಯ ಬಳಿ ನಿಂತು ಮಳೆಯ ಸೌಂದರ್ಯವನ್ನು ಆಸ್ವಾದಿಸಿದೆ. ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಸಮಯ ಕಳೆಯುವುದು ತುಂಬಾ ಆನಂದ. ಮಳೆ ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ. ನೀರಿನ ಸಂರಕ್ಷಣೆ ಮಾಡಿ ಮಳೆ ಮಹತ್ವವನ್ನು ಅರಿತುಕೊಳ್ಳಬೇಕು.
8ನೇ ತರಗತಿ
ಆಂಗ್ಲಮಾಧ್ಯಮ ಪಿ ಎಂ ಶ್ರೀ ಸರಕಾರಿ
ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
******************************************
ಮಳೆ ಎಂದರೆ ಎಲ್ಲರಿಗೂ ಖುಷಿ. ಮಳೆ ರೈತರಿಗೂ ಬೇಕು. ಪ್ರಾಣಿಗಳಿಗೆ, ಮನುಷ್ಯರಿಗೆ, ಸಸ್ಯಗಳಿಗೂ ಮುಖ್ಯ. ಆದರೆ ಜಾಸ್ತಿಯಾದರೆ ದುಃಖವೂ ಇದೆ. ನದಿ ತುಂಬಿ ಹರಿಯಲು ಮಳೆಬೇಕು. ಕುಡಿಯಲು ನೀರು ಬೇಕು. ಮಳೆ ಬರುವಾಗ ಚಳಿಯಾಗುತ್ತದೆ. ಮಳೆಗೆ ಗಿಡ, ಮರಗಳು ಹಚ್ಚ ಹಸಿರಿನಿಂದ ಇರುತ್ತದೆ. ಮಳೆ ನೈಸರ್ಗಿಕವಾಗಿ ಬರುತ್ತದೆ. ಮಳೆ ದಿನದಲ್ಲಿ ತುಳುನಾಡಿನಲ್ಲಿ ಕೆಸರುಗದ್ದೆ ಮಾಡಲಾಗುತ್ತದೆ. ನಾನು ಕೂಡ ಹೋಗಿದ್ದೆ. ದೊಡ್ಡ ಗದ್ದೆಯಲ್ಲಿ ಪೂರ್ತಿಯಾಗಿ ಕೆಸರು ನೀರಿರುತ್ತದೆ. ಅದರಲ್ಲಿ ಕೆಲವು ಆಟೋಟ ಸ್ಪರ್ಧೆಗಳು ಇರುತ್ತದೆ. ಅದು ದೊಡ್ಡವರಿಗು ಮಕ್ಕಳಿಗೂ ಎಲ್ಲರಿಗೂ ಇರುತ್ತದೆ. ಎಲ್ಲರೂ ಆಟ ಆಡುತ್ತಾರೆ. ಗೆದ್ದವರಿಗೆ ಪ್ರಶಸ್ತಿ ಕೊಡುತ್ತಾರೆ. ಎಲ್ಲರೂ ಸಂತೋಷದಿಂದ ಆಡಿ- ನಲಿಯುತ್ತಾರೆ. ಮಳೆ ಬರುವಾಗ ಹೀಗೆ ಸಂತೋಷ. ಆದರೆ ಮಳೆಯು ಜೋರಾಗಿ ಬರುವಾಗ ಮನೆಗಳು ಕೊಚ್ಚಿ ಹೋಗುತ್ತದೆ, ಗುಡ್ಡಗಳು ಕುಸಿಯುತ್ತದೆ, ಮರಗಳು ಬೀಳುತ್ತದೆ, ಹೀಗೆ ದುರ್ಘಟನೆಗಳು ಆಗುತ್ತದೆ. ಆದರೆ ನೀರಿಲ್ಲದಿದ್ದರೆ ಕೂಡ ಕಷ್ಟ. ಹೀಗೆ ಮಳೆಯಲ್ಲಿ ಖುಷಿ- ದುಃಖ, ನೋವು- ನಲಿವು ಎಲ್ಲವೂ ಆಗುತ್ತದೆ.
6ನೇ ತರಗತಿ
ಮಾದರಿ ಪ್ರಾಥಮಿಕ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಳೆಯ ರಜೆಯ ದಿವಸ ನಾನು ಮನೆಯ ಪಕ್ಕದಲ್ಲಿರುವ ನದಿಯ ಬಳಿಗೆ ಅಪ್ಪನೊಂದಿಗೆ ಹೋಗಿದ್ದೆ. ಮನೆಯ ಹಿಂದಿರುವ ಆ ಎತ್ತರದ ಪ್ರದೇಶಕ್ಕೆ ಹೋಗಿ ದೂರದಿಂದ ಆ ನದಿಯನ್ನು ನೋಡಿ ತುಂಬಾ ಖುಷಿಪಟ್ಟೆವು. ಅದು ತುಂಬಿ ಹರಿಯುವ ದೃಶ್ಯವನ್ನು ನೋಡಲು ತುಂಬಾ ಸುಂದರವಾಗಿತ್ತು. ಹಾಗೆಯೇ ಮನೆಯ ಪಕ್ಕದಲ್ಲಿದ್ದ ಕೆಸುವಿನ ಎಲೆಯನ್ನು ಕೊಯ್ಯಲು ಅಪ್ಪ - ಅಮ್ಮನೊಂದಿಗೆ ನಾನು ಹಾಗೂ ತಂಗಿ ಹೋದೆವು. ಅದನ್ನು ತಂದು ಪತ್ರೊಡೆ ಮಾಡಲು ಅಮ್ಮನಿಗೆ ಸಹಕರಿಸಿ ತುಂಬಾ ರುಚಿಯಾದ ಪತ್ರೊಡೆಯನ್ನು ತಯಾರಿಸಿದೆವು. ರಜೆಯು ನನಗೆ ತುಂಬಾ ಖುಷಿ ಕೊಟ್ಟಿತು. ಕಾಗದದ ದೋಣಿ ತಯಾರಿಸಿ ಮನೆಯ ಅಂಗಳದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬಿಟ್ಟು ತುಂಬಾ ಖುಷಿ ಪಟ್ಟೆವು. ಹೀಗೆ ಮಳೆಯಲ್ಲಿ ರಜೆಯನ್ನು ಖುಷಿಯಿಂದ ಕಳೆದು ವಿಶೇಷ ಅನುಭವ
6ನೇ ತರಗತಿ
ಪಿ. ಎಂ. ಶ್ರೀ. ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಳೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನಾನು ಮತ್ತೆ ನನ್ನ ಗೆಳತಿ ದೋಣಿ ಮಾಡಿ ಆಟ ಆಡಿದೆವು. ನಂಗೆ ಮಳೆಯಲ್ಲಿ ಆಟ ಆಡುವುದೆಂದರೆ ತುಂಬಾ ಇಷ್ಟ. ಆದರೆ ಆಟವಾಡಿದ್ರೆ ಜ್ವರ ಬರುತ್ತೆ. ಮೊನ್ನೆ ನಾನು ಶಾಲೆಗೆ ಹೋಗುವಾಗ ತುಂಬಾ ಗಾಳಿ ಬಂತು ಗಾಳಿಯಲ್ಲಿ ನನ್ನ ಕೊಡೆ ಮುರಿದುಹೋಯಿತು. ಮತ್ತೆ ನಾನು ಮಳೆಯಲ್ಲಿ ಒದ್ದೆ ಆದೆ. ನಾನು ಮತ್ತೆ ನನ್ನ ಗೆಳತಿ ಶಾಲೆಗೆ ಹೋಗಿ ಬರುವಾಗ ದಾರಿಯಲ್ಲಿ ಸ್ವಲ್ಪ ಹೊಂಡ ವಾಗಿ ಅದರಲ್ಲಿ ಸ್ವಲ್ಪ ನೀರು ತುಂಬಿತ್ತು. ನಾನು ಸ್ವಲ್ಪ ಅವಳಿಗೆ ನೀರನ್ನು ಕಾಲಿನಿಂದ ಹಾಕಿದೆ. ಅದಕ್ಕೆ ಅವಳಿಗೆ ಸಿಟ್ಟು ಬಂದು ನನ್ನ ಮೇಲು ನೀರು ಹಾಕಿದಳು. ಹೀಗೆ ಆ ನೀರಿನಲ್ಲಿ ಆಡಿ ಮನೆಗೆ ಬಂದಾಗ ನನ್ನ ಅಮ್ಮ ಮಳೆಯಲ್ಲಿ ಒದ್ದೆ ಆಗಿದ್ದಕ್ಕೆ ಭೈದಳು. ಈ ಮಳೆ ಬರುವುದರಿಂದ ಒಂದು ಕಡೆ ಖುಷಿಯಾಗುತ್ತದೆ ಮತ್ತೊಂದು ಕಡೆ ಬೇಜಾರಾಗುತ್ತದೆ. ಏಕೆಂದರೆ ಶಾಲೆ ರಜೆ ಕೊಡುವುದರಿಂದ ಖುಷಿಯಾಗುತ್ತೆ. ಆದರೆ ಶನಿವಾರ ಮಧ್ಯಾಹ್ನ ಮತ್ತೆ ತರಗತಿ ಮಾಡ್ತಾರೆ ಅದು ಬೇಸರದ ಸಂಗತಿ. ತುಂಬಾ ಗಾಳಿ ಮಳೆ ಬರುವಾಗ ಶಾಲೆಗೆ ಹೋಗುವುದು ಕಷ್ಟ ಆಗುತ್ತೆ. ಕೊಡೆ ಎಲ್ಲಾ ಹಾರಿ ಹೋಗುತ್ತೆ. ಅದರಿಂದ ಮೈ ಎಲ್ಲಾ ಒದ್ದೆ ಆಗಿ ಜ್ವರ ಬರುತ್ತೆ. ಮಳೆ ಎಂದರೆ ನಂಗೆ ಹಬ್ಬದ ಹಾಗೆ. ಮಳೆ ಬಂದಾಗ ಸ್ವಲ್ಪ ಕಷ್ಟವು ಆಗುತ್ತೆ
10ನೇ ತರಗತಿ
ಪಿ. ಎಂ. ಶ್ರೀ ಸರಕಾರಿ ಸಂಯುಕ್ತ
ಪದವಿಪೂರ್ವ ಕಾಲೇಜು, ತೆಕ್ಕಟ್ಟೆ
ಕುಂದಾಪುರ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************