ಮಕ್ಕಳಿಗೆ ರಜೆಯ ಓದು : ಸಂಚಿಕೆ - 29
Thursday, August 13, 2026
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 29
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಅಕ್ಬರ್ ಬೀರಬಲ್ ಕಥೆಗಳು
ಹಿಂದಿನ ಸಂಚಿಕೆಯಲ್ಲಿ ತೆನಾಲಿ ರಾಮಕೃಷ್ಣ ಬಗ್ಗೆ ಇರುವ ಪುಸ್ತಕಗಳ ಮಾಹಿತಿ ನೀಡಿದ್ದೆ. ಈ ವಾರ ಅಕ್ಬರ್ ಮತ್ತು ಬೀರಬಲ್ ಎಂಬ ಚತುರತೆ ಮತ್ತು ಬುದ್ಧಿವಂತಿಕೆಯ ಜೋಡಿಯ ಕಥೆಗಳಿರುವ ಪುಸ್ತಕದ ಮಾಹಿತಿ ನೀಡಲಿರುವೆ. ಅಕ್ಬರ್-ಬೀರಬಲ್ಲನ ವಿನೋದ ಕಥೆಗಳು ಅಥವಾ ಹಾಸ್ಯ ಕಥೆಗಳು ಮಕ್ಕಳ ಮನ ಗೆಲ್ಲುವ ಸಾಮರ್ಥ್ಯವಿರುವ ಪುಸ್ತಕಗಳು.
ಮೊಘಲ್ ಸಾಮ್ರಾಜ್ಯದ ಇತಿಹಾಸದಲ್ಲಿ ಚಕ್ರವರ್ತಿ ಅಕ್ಬರ್ ಮತ್ತು ಅವನ ಆಸ್ಥಾನದ ವಿದೂಷಕ ಹಾಗೂ ಮಂತ್ರಿ ಬೀರಬಲ್ಲನ ಸ್ನೇಹ ಅತ್ಯಂತ ರೋಚಕ ಮತ್ತು ಜನಪ್ರಿಯವಾದುದು. ಇವರಿಬ್ಬರ ನಡುವೆ ನಡೆದ ಚತುರತೆಯ ಸಂಭಾಷಣೆಗಳು, ಹಾಸ್ಯ ಪ್ರಸಂಗಗಳು ಮತ್ತು ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು ಇಂದಿಗೂ ಭಾರತೀಯ ಲೋಕಪ್ರಜ್ಞೆಯಲ್ಲಿ ಅಮರವಾಗಿವೆ.
ಬೀರಬಲ್ಲನ ಮೂಲ ಹೆಸರು ಮಹೇಶ್ ದಾಸ್. ಅತ್ಯಂತ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವನು ತನ್ನ ಅಸಾಧಾರಣ ಬುದ್ಧಿಶಕ್ತಿ, ಕವಿತ್ವ ಮತ್ತು ಸಮಯಪ್ರಜ್ಞೆಯಿಂದ ಅಕ್ಬರನ ಆಸ್ಥಾನವನ್ನು ಸೇರಿದನು. ಅಕ್ಬರನು ಅವನ ಚತುರತೆಯನ್ನು ಮೆಚ್ಚಿ 'ಬೀರಬಲ್' (ಅಂದರೆ ಧೈರ್ಯಶಾಲಿ ಮನಸ್ಸಿನವನು) ಎಂಬ ಬಿರುದನ್ನು ನೀಡಿ, ತನ್ನ ಆಸ್ಥಾನದ ಒಂಬತ್ತು ರತ್ನಗಳಲ್ಲಿ (ನವರತ್ನಗಳು) ಒಬ್ಬನನ್ನಾಗಿ ಮಾಡಿದನು.
ಅಕ್ಬರ್ ಮತ್ತು ಬೀರಬಲ್ಲನ ಕಥೆಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ಕಥೆಯೂ ಒಂದು ಮಹತ್ವದ ಸಂದೇಶವನ್ನು ಸಾರುತ್ತದೆ. ಮಕ್ಕಳು ಈ ಕಥೆ ಪುಸ್ತಕವನ್ನು ಓದಿದರೆ ಅವರಿಗೆ ಕಷ್ಟಕರವಾದ ಸಮಸ್ಯೆಗಳನ್ನು ಬೀರಬಲ್ ತನ್ನ ತೀಕ್ಷ್ಣ ಬುದ್ಧಿಯಿಂದ ಅತ್ಯಂತ ಸರಳವಾಗಿ ಹೇಗೆ ಬಿಡಿಸುತ್ತಿದ್ದ ಎಂಬುದು ತಿಳಿಯುತ್ತದೆ. ಭವಿಷ್ಯದಲ್ಲಿ ಅವರಿಗೂ ಏನಾದರೂ ಸಮಸ್ಯೆಗಳು ಬಂದರೆ ಬುದ್ಧಿವಂತಿಕೆಯನ್ನು ಬಳಸಿ ಅದರಿಂದ ಪಾರಾಗಬಹುದು ಎಂದು ಅರಿವಾಗುತ್ತದೆ.
ಇದರ ಜೊತೆಗೆ ನ್ಯಾಯ ಮತ್ತು ಧರ್ಮದ ಪಾಠ ಈ ಕತೆಗಳು ನೀಡುತ್ತವೆ. ಅಕ್ಬರನಿಗೆ ಆಡಳಿತದಲ್ಲಿ ಎದುರಾಗುತ್ತಿದ್ದ ಗೊಂದಲಗಳಿಗೆ ಬೀರಬಲ್ ನ್ಯಾಯಯುತವಾದ ಮಾರ್ಗದರ್ಶನ ನೀಡುತ್ತಿದ್ದನು. ಹಾಸ್ಯ ಮತ್ತು ಚತುರತೆಯಿಂದ ರಾಜನ ಕೋಪವನ್ನು ತಣ್ಣಗಾಗಿಸಲು ಬೀರಬಲ್ ಬಳಸುತ್ತಿದ್ದ ಹಾಸ್ಯಪ್ರಜ್ಞೆ ಅನನ್ಯವಾದುದು.
ಅಕ್ಬರ್ ಮತ್ತು ಬೀರಬಲ್ಲನ ಕಥೆಗಳು ಕೇವಲ ಕಲ್ಪನೆಯಲ್ಲ, ಅವು ನೈತಿಕ ಮೌಲ್ಯಗಳು, ತಾಳ್ಮೆ ಮತ್ತು ಸಮಯಪ್ರಜ್ಞೆಯನ್ನು ಕಲಿಸುವ ಜ್ಞಾನದ ಭಂಡಾರಗಳಾಗಿವೆ. ಅದಕ್ಕಾಗಿಯೇ ತಲೆಮಾರುಗಳು ಕಳೆದರೂ ಇಂದಿಗೂ ಮಕ್ಕಳಿಗೆ ಮತ್ತು ದೊಡ್ಡವರಿಗೆ ಈ ಕಥೆಗಳು ಅಚ್ಚುಮೆಚ್ಚು. ಅಕ್ಬರ್ ಹಾಗೂ ಬೀರಬಲ್ಲರ ಕುರಿತಾದ ಹಲವು ಪುಸ್ತಕಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಕಾರ್ಟೂನ್ ಚಿತ್ರ, ಸಿನೆಮಾ, ಧಾರವಾಹಿಗಳೂ ವೀಕ್ಷಣೆಗೆ ಲಭ್ಯವಿದ್ದರೂ ಮಕ್ಕಳಿಗೆ ಪುಸ್ತಕದ ಓದಿನ ಅಭ್ಯಾಸ ಮಾಡಿಸಲು ಅಕ್ಬರ್ - ಬೀರಬಲ್ ನ ಕಥೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು.
(ಆಧಾರ)
ಚಿತ್ರ ಕೃಪೆ : ಅಂತರ್ಜಾಲ ತಾಣಗಳು
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************