-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 134

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 134

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 134
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203



ಗ್ರೀಸ್ ಅರಸೊತ್ತಿಗೆಯ ಕೊಂಡಿಯಾದ ಬೈಜಾಂಟೈನ್ ಸಾಮ್ರಾಜ್ಯದ ರಾಜಧಾನಿ ನಗರವಾಗಿದ್ದ ಕಾನ್ಸ್ಟಿಂಟಿನೋಪಾಲ್ ಪಶ್ಚಿಮ ಮತ್ತು ಪೂರ್ವ ಜಗತ್ತಿನ ವ್ಯಾಪಾರದ ಕೊಂಡಿಯಾಗಿತ್ತು. ಅಂದರೆ ಏಷಿಯಾದ ಸಾಂಬಾರ ಪದಾರ್ಥಗಳು ಯೂರೋಪ್ ಅನ್ನು ತಲುಪುವುದಕ್ಕೆ ವ್ಯಾಪಾರದ ನಗರವಾಗಿದ್ದು ಇದೇ ನಗರ. 1943 ರಲ್ಲಿ ಅಟ್ಟೋವಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ಅನ್ನು ಗೆದ್ದುಕೊಂಡರು. ಇದು ಕಾನ್ಸ್ಟಾಂಟಿನೋಪಲ್ ಪತನ (Fall of Constantinople) ಎಂದು ದಾಖಲಾಗಿದೆ. ಇದರಿಂದ ಬೈಜಾಂಟೈನ್ ಸಾಮ್ರಾಜ್ಯ ಅಳಿದು ಅಟೋಮಾನ್ ಟರ್ಕರು ಟರ್ಕಿಯ ಹುಟ್ಟಿಗೆ ಕಾರಣವಾಯಿತು. 1100 ವರ್ಷದ ರೋಮನ್ ಸಾಮ್ರಾಜ್ಯ ಪತನವಾದುದು ಭಾರೀ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಕ್ಕೆ ಕಾರಣವಾಯಿತು. ಇದರಿಂದ ಪೂರ್ವದಿಂದ ಅದರಲ್ಲಿಯೂ ಭಾರತದಿಂದ ಯುರೋಪಿಗೆ ಹೋಗುತ್ತಿದ್ದ ಸಾಂಬಾರ ಪದಾರ್ಥಗಳ ಮೇಲೆ ಅತಿಯಾದ ತೆರಿಗೆ ಬಿತ್ತು. ಅದಕ್ಕಾಗಿ ಸ್ಪೇನ್ ಮತ್ತು ಪೋರ್ಚುಗೀಸ್ ನಾವಿಕರು ಭಾರತಕ್ಕೆ ಹೊಸ ದಾರಿ ಕಂಡುಹಿಡಿಯಲು ಗೊತ್ತು ಗುರಿಯಿಲ್ಲದ ಸಮುದ್ರಕ್ಕಿಳಿದರು. ಇಟಾಲಿಯನ್ ನಾವಿಕ ಕ್ರಿಸ್ಟೋಫರ್ ಕೊಲಂಬಸ್ ಸ್ಪೇನ್ ನಿಂದ ಸಮುದ್ರಕ್ಕಿಳಿದ ಪೂರ್ವಕ್ಕೆ ಹೊರಟ. ಅವನು ಭಾರತವನ್ನು ತಲುಪುವ ಬದಲು ಕೆರಿಬಿಯನ್ ದ್ವೀಪಗಳ ಸ್ಯಾನ್ ಸಾಲ್ವಡಾರ್ ಅನ್ನು ತಲುಪಿದ. ಇದು 1492 ರ ಕಥೆ. ಇನ್ನು ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮ ಪೂರ್ವಕ್ಕೆ ಹೋಗುವ ಬದಲಾಗಿ ದಕ್ಷಿಣದ ಕಡೆ ಹೊರಟ. ಆಫ್ರಿಕಾ ಖಂಡದ ಅಂಚು ಗುಡ್ ಹೋಪ್ ಭೂಶಿರದ ಮೂಲಕ ಉತ್ತರಕ್ಕೆ ತಿರುಗಿದ. ಮಡಗಾಸ್ಕರ್ ದ್ವೀಪದ ಅಂಚನ್ನು ಹಾದು ಕಲ್ಲಿಕೋಟೆಗೆ ಬಂದಿಳಿದ. ಹೀಗೆ ಸಾಂಬಾರ ಪದಾರ್ಥಗಳ ಕಣಜ ಅವನಿಗೆ ಸಿಕ್ಕಿತು. ಇದು 1498 ರಲ್ಲಿ. ಅಲ್ಲಿಂದ ಯುರೋಪಿನ ಹಡಗುಗಳು ಬಾರತ ಚೀನಾದ ಕಡೆಗೆ ಬರಲಾರಂಭಿಸಿದರು. ನಾವಿಕರಿಗೆ ಇದು ಸುದೀರ್ಘ ಪ್ರಯಾಣವಾಗಿತ್ತು. ಮಾರ್ಗ ಮಧ್ಯದಲ್ಲಿ ನಿಲ್ಲಿಸಿ ಮುಂದಿನ ಪ್ರಯಾಣಕ್ಕೆ ಬೇಕಾದ ಹಾಗೆ ವಸ್ತುಗಳನ್ನು ಸಂಗ್ರಹಿಸಬೇಕಾಗಿತ್ತು. ಅದಕ್ಕೆ ಅವರಿಗೆ ಪ್ರಶಸ್ತವಾಗಿ ಕಂಡದ್ದು ಮಾರಿಷಿಯಸ್ ಮತ್ತು ಮಡಗಾಸ್ಕರ್. ನೈಸರ್ಗಿಕ ಬಂದರುಗಳನ್ನು ಹೊಂದಿದ್ದ ದ್ವೀಪಗಳವು. 

ನಾವಿಕರು ಇಳಿದು ಮಾರಿಷಸ್‌ನ ತೀರದಲ್ಲಿ ಅಡ್ಡಾಡುವಾಗ 3 ಅಡಿಗಳಷ್ಟು ಎತ್ತರದ 17.5 kg ತೂಕದ ಹಾರಲಾರದ ಹಕ್ಕಿಗಳು ಅಲೆದಾಡುತ್ತಿದ್ದವು. ಹತ್ತಿರ ಹೋದರೂ ಅವು ಹೆದರಿ ಓಡುತ್ತಿರಲಿಲ್ಲ. ಅವುಗಳಷ್ಟಕ್ಕೆ ಅಲೆದಾಡಿಕೊಂಡಿದ್ದವು. ಅವುಗಳನ್ನು ಹೊಡೆಯಲು ಬಂದೂಕುಗಳು ಬೇಕಿರಲಿಲ್ಲ. ಕೈಯಲ್ಲಿರುವ ದೊಣ್ಣೆಯೇ ಸಾಕಿತ್ತು. ಅವುಗಳನ್ನು ದಡ್ಡ ಹಕ್ಕಿಗಳು ಎಂದು ಕರೆದದ್ದರಿಂದ. ಅವುಗಳ ಹೆಸರು ಡೋಡೋ (dodo) ಎಂದಾಯಿತು. ಹಾಗಾದರೆ ಇವುಗಳು ದಡ್ಡರಾದದ್ದು ಹೇಗೆ ಹೆಡ್ಡತನ ಹೇಗೆ ಬಂತು?

ಡೋಡೋಗಳು ಮಾರಿಷಸ್‌ ಗೆ ಸೀಮಿತವಾದ ಜೀವಿಗಳು (endemic species). ಮಾರಿಷಸ್ ನಲ್ಲಿ ಮಾಂಸಾಹಾರಿ ಪ್ರಾಣಿಗಳಿಲ್ಲ. ಆದ್ದರಿಂದ ಮೂಲ ನಿವಾಸಿಗಳಾದ ಈ ಡೋಡೋಗಳು ಆರಾಮವಾಗಿ ನೆಲದ ಮೇಲೆ ಓಡಾಡಿಕೊಂಡಿದ್ದವು. ಅವುಗಳಿಗೆ ಹಾರಿ ಮರವೇರಿ ಜೀವ ಉಳಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಆದ್ದರಿಂದ ಅವು ಸಾವಿರ ಸಾವಿರ ವರ್ಷಗಳ ಕಾಲ ರೆಕ್ಕೆಗಳನ್ನು ಬಳಸಬೇಕಾದ ಅಗತ್ಯವೇ ಬರಲಿಲ್ಲ. ಬಳಸಲೂ ಇಲ್ಲ. ಆದ್ದರಿಂದ ಜೀವ ವಿಕಾಸದ ದಾರಿಯಲ್ಲಿ ಲಮಾರ್ಕನ ಬಳಕೆ ಮತ್ತು ಅನುಪಯುಕ್ತತೆ ಸಿದ್ದಾಂತದ ಪ್ರಕಾರ (Theory of Use and Disuse) ನಾವು ಬಳಸುವ ಅಂಗಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಬಳಸದ ಅಂಗಗಳು ನಶಿಸಿ ಹೊಗುತ್ತವೆ. ಅಂದರೆ ಡೋಡೋಗಳು ಮಿಲಿಯಾಂತರ ವರ್ಷಗಳ ಕಾಲ ರೆಕ್ಕೆಗಳನ್ನು ಬಳಸದೇ ಹಾರಲಾರದ ಪಕ್ಷಿಗಳಾದವು.

ಮಾರಿಷಸ್ ಗೆ ಡೋಡೋಗಳು ಮಾತ್ರ ಸೀಮಿತ ಜೀವಿಗಳಲ್ಲ. ಅಲ್ಲಿ ಬೆಳೆಯುವ ಸಿಡಿರೊಕ್ಸಿಲಾನ್ ಗ್ರಾಂಡಿಫ್ಲೋರಂ (Sideroxylon grandiflorum) ಎಂಬ ಮರಗಳೂ ಎಂಡೆಮಿಕ್ ಮರಗಳು. ಇವುಗಳು ಬಿಡುವ ಹಣ್ಣುಗಳು ಕಠಿಣ ಚಿಪ್ಪಿನ ಬೀಜಗಳನ್ನು ಹೊಂದಿವೆ. ಇವುಗಳ ಕಠಿಣ ಚಿಪ್ಪಿನ ಕಾರಣದಿಂದ ಮೊಳಕೆಯೊಡೆಯುವುದಿಲ್ಲ. ಆದರೆ ಆ ಹಣ್ಣುಗಳನ್ನು ಡೋಡೋಗಳು ಬೀಜ ಸಮೇತ ತಿನ್ನುತ್ತವೆ. ಡೋಡೋಗಳ ಕರುಳಿನ ಮೂಲಕ‌ ಹಾದು ಹೋಗುವಾಗ ಮೆದುವಾಗುವುದರಿಂದ ಸುಲಭವಾಗಿ ಮೊಳಕೆಯೊಡೆಯುತ್ತವೆ. ಆದ್ದರಿಂದ ಡೋಡೋಗಳ ಸಹಾಯದಿಂದ ಮೊಳಕೆಯೊಡೆಯುವ ಈ ಮರಗಳನ್ನು ಡೋಡೋ ಮರಗಳು ಎಂದು ಕರೆಯುತ್ತಿದ್ದರು.

ಇಲ್ಲಿಯವರೆಗೆ ಇಲ್ಲದ ನೈಸರ್ಗಿಕ ವೈರಿಗಳು ಪೋರ್ಚುಗೀಸ್ ನಾವಿಕರ ರೂಪದಲ್ಲಿ ಅವತರಿಸಿದರು. ಈ ಡೋಡೋಗಳನ್ನು ವ್ಯಾಪಕವಾಗಿ ಬೇಟೆಯಾಡಲಾಯಿತು. ಎಲ್ಲೆಂದರಲ್ಲಿ ಅಡ್ಡಾಡಿಕೊಂಡಿದ್ದ ಡೋಡೋಗಳು ಅಪರೂಪವಾಗುತ್ತಾ ಹೋದವು. ಕೇವಲ ಬೇಟೆಯಿಂದ ಮಾತ್ರ ಡೋಡೋಗಳು ಕಣ್ಮರೆಯಾದದ್ದಲ್ಲ. ಹಡಗಿನಲ್ಲಿ ನಾವಿಕರು ಕರೆ ತಂದ ನಾಯಿ, ಬೆಕ್ಕು, ಹಂದಿಗಳು ಡೋಡೋಗಳ ಮೊಟ್ಟೆಗಳನ್ನು ಕದ್ದು ತಿಂದು ಮುಗಿಸಿದವು. ಒಂದು ಕಡೆ ವಯಸ್ಕ ಹಕ್ಕಿಗಳ ಸಾವು ಇನ್ನೊಂದೆಡೆ ವಶಾಂಭಿವೃದ್ಧಿಯ ನಿಲುಗಡೆ ಹಕ್ಕಿಗಳ ಒಂದು ಮಹಾನ್ ಸಾಮ್ರಾಜ್ಯವನ್ನೇ ಅಳಿಸಿ ಹಾಕಿತು. 

1100 ವರ್ಷಗಳ ರೋಮ್ ಸಾಮ್ರಾಜ್ಯ ಪತನವಾದಂತೆ ಮಿಲಿಯಾಂತರ ವರ್ಷಗಳಲ್ಲಿ ರೂಪುಗೊಂಡ ಒಂದು ಬೃಹತ್ ಪಕ್ಷಿ ಲೋಕ ಕಣ್ಮರೆಯಾಯಿತು. ಕೊನೆಯ ಬಾರಿಗೆ ಡಚ್ ನಾವಿಕನೊಬ್ಬ ಡೋಡೋವನ್ನು ಕಂಡೆ (sighting) ಎಂದು 1662 ವರದಿ ಮಾಡಿದ್ದು ಬಿಟ್ಟರೆ ಆ ನಂತರ ಡೋಡೋಗಳನ್ನು ಕಂಡವರಿಲ್ಲ. ಅಂದರೆ ಡೋಡೋಗಳು ಡೈನೋಸಾರ್ ಗಳ ಹಾಗೆ ಅಳಿದು ಹೋದವು (became extinct). ಡೈನೋಸಾರ್ ಗಳು ನೈಸರ್ಗಿಕ ಘಟನೆಯಿಂದ ಅಳಿದರೆ ಡೋಡೋಗಳು ಅಳಿದದ್ದು ಮಾನವನ ಅತಿರೇಕದಿಂದ. ಅಲ್ಲಿ ಅಳಿದು ಹೋದದ್ದು ಕೇವಲ ಡೋಡೋಗಳು ಮಾತ್ರವಲ್ಲ ಅವುಗಳ ಮೇಲೆ ಮೊಳೆಯುವಿಕೆಗೆ ಅವಲಂಭಿಸಿದ್ದ ಡೋಡೋ ಮರಗಳು ಕೂಡಾ. ಬಹಳ ವರ್ಷಗಳ ಕಾಲ ಹೊಸ ಡೋಡೋ ಮರಗಳು ಹುಟ್ಟಲೇ ಇಲ್ಲ. ಹೀಗೆ ಒಂದು ಅವಲಂಬನೆಯ ಚಕ್ರ ತುಂಡರಿಸಲ್ಪಟ್ಟಿತು. ಎಲ್ಲಿಯ ಕಾನ್ಸ್ಟಾಂಟಿನೋಪಲ್ ಎಲ್ಲಿಯ ಡೋಡೋ ಮರ. ಒಂದು ಯುದ್ದ ಎರಡು ಸಂತತಿಗಳನ್ನು ನಾಶಪಡಿಸಿತು ಎಂದರೆ ನಂಬುತ್ತೀರಾ?

ಆದರೆ ಪ್ರಕೃತಿ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಅದು ತನಗಾದ ನಷ್ಟವನ್ನು ತುಂಬಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತದೆ. ಒಂದು ಕಾಲದಲ್ಲಿ ಸಮುದ್ರದಲ್ಲಿ ಚೆಲ್ಲಿದ ಪೆಟ್ರೋಲಿಯಂ ಜೀವ ಸಂಕುಲಕ್ಕೆ ಅಪಾಯಕಾರಿಯಾಗಿ ಹಾಗೆಯೇ ಉಳಿದು ಬಿಡುತ್ತಿತ್ತು. ಆದರೆ ಈಗ ಪೆಟ್ರೋಲಿಯಂ ಅನ್ನು ವಿಘಟಿಸಬಲ್ಲ ಬ್ಯಾಕ್ಟೀರಿಯಾಗಳನ್ನು ಗುರುತಿಸಲಾಗಿದೆ. ಈಗ ಅಪಾಯಕಾರಿಯಾಗಿರುವ ಪ್ಲಾಸ್ಟಿಕ್ ಅನ್ನು ಜೀರ್ಣಿಸಬಲ್ಲ ಜೀವಿಗಳು ಹುಟ್ಟಿದರೂ ಅಚ್ಚರಿಯಿಲ್ಲ. ತಮ್ಮ ಪ್ರಜನನವನ್ನು ನಿಲ್ಲಿಸಿದ ಡೋಡೋ ಮರಗಳ ಹೊಸ ಸಸಿಗಳು ಮೊಳೆತಿವೆ. ಕಡಲಾಮೆಗಳು ಮತ್ತು ಟರ್ಕಿಗಳ ಜೀರ್ಣನಾಳದ ಮೂಲಕ ಹಾದುಹೋಗುವ ಬೀಜಗಳು ಮೊಳೆತಿವೆ.‌ ಹಾಗೆ ಭ್ರೂಣಕ್ಕೆ ತೊಂದರೆಯಾಗದಂತೆ ನೈಸರ್ಗಿಕವಾಗಿ ಬಿರುಕು ಬಿಟ್ಟ ಡೋಡೋ ಮರದ ಬೀಜಗಳೂ ಮೊಳಕೆಯೊಡೆಯಲು ಕಲಿತಿವೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article